ಮಂಗಳವಾರ, ಮಾರ್ಚ್ 28, 2023
31 °C

ಪರಿಮಳ ಪಸರಿಸುವ ‘ಸುಗಂಧದ ಮನೆ‘

ಬಿ.ಎಸ್.ಹರೀಶ್ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಮಹಾಲಕ್ಷ್ಮಿಪುರದಲ್ಲಿರುವ ‘ಸುಗಂಧ ಮನೆ‘ಯ ತುಂಬಾ ನೈಸರ್ಗಿಕ ಸುಂಗಧ ಸಸ್ಯಗಳ ತೈಲಗಳಿವೆ. ಶರ್ಮಿಳಾ ಜೋಷಿ ಸುಗಂಧ ದ್ರವ್ಯಗಳಿಂದ ಆರೊಮಾ ಥೆರಪಿ ನೀಡುತ್ತಿದ್ದಾರೆ.

‘ಮುಂಜಾವಿನಿಂದ ಮುಸ್ಸಂಜೆಯವರೆಗೆ, ಆನಂತರ ನಡುರಾತ್ರಿಯವರೆಗೆ; ತಡ ರಾತ್ರಿಯಿಂದ ಜಾವದವರೆಗೂ; ಅಡುಗೆ ಕೋಣೆಯಿಂದ ಮಲಗುವ ಕೋಣೆವರೆಗೂ; ತೊಟ್ಟಿಲಿನಿಂದ ಸ್ಮಶಾಣದವರೆಗೂ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಪರಿಮಳಗಳಿಂದ ಸುತ್ತವರೆದಿರುತ್ತೇವೆ‘

– ಎಡ್ವರ್ಡ್ ಸಗಾರಿನನ್ನ ಈ ಮಾತುಗಳು ಅದೇಕೋ ನನ್ನ ಮನಸಿನ ಮೇಲಿನ ಸ್ತರಕ್ಕೆ ಬಂದು ನಿಂತವು. ಆಗ ನಾವು (ಸುಗಂಧದ್ರವ್ಯ ಬೆಳೆಗಳ ಕೋರ್ಸಿಗೆ ನೋಂದಾಯಿಸಿದ್ದ ವಿದ್ಯಾರ್ಥಿಗಳು) ಬಂದು ನಿಂತದ್ದು ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ಆ ‘ಸುಗಂಧದ ಮನೆ’ಯ ಬಾಗಿಲಿನ ಮುಂದೆ. ಈ ಮನೆಯ ಆಸುಪಾಸಿನಲ್ಲಿ ಓಡಾಡುವ ಯಾರಿಗಾದರೂ, ಆ ಮನೆಯೊಳಗೆ ಹೋಗಿ ಬರಬೇಕು ಎನ್ನಿಸದೇ ಇರದು;  ಕಾರಣ ಆ ಘಮಲಿನ ಮನೆ ದಿನ-ರಾತ್ರಿ ಆ ಪರಿಸರದ ತುಂಬ ಪಸರಿಸುವ ಬಗೆಬಗೆಯ ಪರಿಮಳ.

ಈ ಘಮಲಿನ ಮನೆಯ ಒಡತಿ ಶರ್ಮಿಳಾ ಜೋಷಿ. ಅವರಿಗೀಗ ಎಪ್ಪತ್ತಾರೇ ವರ್ಷ. ಅದೆಂತಹ ಚೈತನ್ಯ, ಉತ್ಸಾಹ. ಇದೆಲ್ಲ ಹೇಗೆ? ಅಂತ  ಕಾರಣ ಕೇಳಿದ್ದಕ್ಕೆ ಅವರು ಕೈತೋರಿಸಿದ್ದು ಅಲ್ಲೇ ಮೇಜಿನ ಮೇಲೆ ಒಪ್ಪ-ಓರಣವಾಗಿ ಜೋಡಿಸಿಟ್ಟ ಸುಗಂಧದ್ರವ್ಯಗಳ ಕಡೆಗೆ. ‘ಅವುಗಳು ಹೊರಸೂಸುವ ಸುಮಧುರ ಘಮಲೇ ನನ್ನ ಜೀವನೋತ್ಸಾಹದ ಗುಟ್ಟು‘ ಎಂದರು.

ಇಷ್ಟಕ್ಕೂ, ನಮ್ಮನ್ನು ರಸ್ತೆಯಿಂದಲೇ ಸ್ವಾಗತಿಸಿದ್ದು ಜೋಷಿಯವರಲ್ಲ, ಅವರ ಮನೆಯಾಚೆಗೂ ಹೊರಹೊಮ್ಮುತ್ತಿದ್ದ ನಿಂಬೆಹುಲ್ಲಿನ ಸುಗಂಧದ ಎಣ್ಣೆಯ ಘಮ. ಮನೆಯೊಳಗೆ ಹೋದಾಗ ಮಾತಿಗೆ ಮೊದಲು ತಾವೇ ಭಟ್ಟಿ ಇಳಿಸಿದ್ದ ತಣ್ಣನೆಯ ‘ಗುಲಾಬ್ ಜಲ್’ ಕೈಗಿತ್ತು, ಮುಖಕ್ಕೆ ಸವರಿಕೊಳ್ಳಿ ಬಿಸಿಲಿನಲಿ ಬಂದಿದ್ದೀರಿ ಎಂದರು. ಗುಲಾಬ್‌ ಜಲ್‌ ಮುಖಕ್ಕೆ ಸವರಿಕೊಳ್ಳುತ್ತಾ,  ಜೋಷಿಯವರ ‘ಸುಗಂಧಗಳ ಲೋಕ’ವನ್ನು ಪ್ರವೇಶಿಸಿದರು.

ಮನೆ ತುಂಬಾ ಪರಿಮಳ.. 

ಶರ್ಮಿಳಾ ಅವರ ಮನೆಗೆ ಹೋಗುವುದೆಂದರೆ ನನಗೆ ಯಾವಾಗಲೂ ಖುಷಿ. ಅಂದು ನಾವು ಮನೆಗೆ ಅಡಿಯಿಡುತ್ತಿದ್ದಂತೆ.. ‘ಇದು ನೋಡಿ, ಅಲ್ಲ ಆಘ್ರಾಣಿಸಿ, ಲಾವಂಚದೆಣ್ಣೆ; ಮತ್ತಿದು ಶ್ರೀಗಂಧದ್ದು; ಮಗದೊಂದು ತನ್ನೆಡೆಗೆ ಸೆಳೆಯುವ ಮಲ್ಲಿಗೆಯದ್ದು; ಇನ್ನೊಂದು ನಿಮ್ಮನ್ನೇ ಮರೆಸಿಬಿಡುವ ಪಚೋಲಿಯದ್ದು; ಪರಿಮಳಗಳಿಂದ ಪರಮಾನಂದ, ಹಾಗೇ ತುಸು ಹೊತ್ತು ಅನುಭವಿಸಿ‘ ಎನ್ನುತ್ತಾ, ಒಂದೊಂದೇ ಸುಗಂಧದೆಣ್ಣೆ ತೋರಿಸುತ್ತಾ, ಸೂಕ್ತ ವಿವರಣೆ ನೀಡತೊಡಗಿದರು ಶರ್ಮಿಳಾ  ಮೇಡಂ. ನೈಸರ್ಗಿಕ ಪರಿಮಳಗಳೆಡಗಿನ ಅವರ ಆಸಕ್ತಿ ನಮಗೆ ಬೆರಗು ಮೂಡಿಸಿದ್ದು ಸುಳ್ಳಲ್ಲ. ಅವರು ನಡೆಸುತ್ತಿರುವ ‘ಸ್ವಾತಿ ಅರೋಮಾಸ್’ ನಲ್ಲಿ ಏನೆಲ್ಲ ಇದೆ ನೋಡಿ; ಸುಗಂಧದೆಣ್ಣೆಗಳು, ಘಮ್ಮೆನುವ ಅಂಟು, ಬಗೆ ಬಗೆಯ ಪರಿಮಳ ಸೂಸುವ ಸಾಬೂನು, ಗಂಧದಕಡ್ಡಿ, ಅತ್ತರ್‌.... ಹೀಗೆ ಹತ್ತು ಹಲವು. ಇದರ ಬಗೆಗೆ ಎಷ್ಟು ಹೇಳಿದರೂ ಸಾಲದು; ಒಮ್ಮೆ ಹೋಗಿ ಆ ಲೋಕವನು ಹೊಕ್ಕು ಅನುಭವಿಸಬೇಕು.

ಸಂಗೀತಕ್ಕಷ್ಟೇ ಸ್ವರಗಳಿರುವುದು ಎಂದುಕೊಂಡಿದ್ದೆ; ಘಮ ಗ್ರಹಿಕೆಗೂ ಸ್ತರಗಳಿರುವುದು ಗೊತ್ತಾಗಿದ್ದು ಇವರಿಂದ. ‘ಯಾವುದೇ ಸುಗಂಧ ದ್ರವ್ಯವನ್ನು ಆಮೂಲಾಗ್ರವಾಗಿ ಗ್ರಹಿಸಬೇಕೆಂದರೆ, ಸ್ವಲ್ಪ ಸಮಯದ ಅಂತರ ನೀಡಿ ಮೂರು ಹಂತಗಳಲ್ಲಿ ಅದನ್ನು ಆಘ್ರಾಣಿಸಬೇಕು‘ ಎನ್ನುತ್ತಾರೆ ಜೋಷಿಯವರು. ‘ನೋಡಿ ನೀವು ಸೆಂಟು ಖರೀದಿಸುವಾಗ, ಅದರ ಕೊಂಚ ಮಾದರಿಯನ್ನು ಹಸ್ತದ ಹಿಂಬದಿಯ ಮೇಲೆ ಸಿಂಪಡಿಸಿ, ಬೇರೆ ಬೇರೆ ಸಮಯದಲ್ಲಿ ಮೂರು ಸಲ ಪರಿಮಳ ಗ್ರಹಿಸಿ. ಕೊನೆ ಬಾರಿಗೆ ಆಘ್ರಾಣಿಸಿದ ನಂತರವೂ ಆ ಘಮಲು ಹಾಗೇಯೇ ಇದ್ದರೆ, ಅದನ್ನು ಖರೀದಿಸಿ‘ ಎಂಬ ಕಿವಿಮಾತನ್ನು ಹೇಳಲು ಮರೆಯಲಿಲ್ಲ.

ಆರೋಮಾ ಥೆರಪಿ..

ಯಾವುದೇ ಸುಗಂಧದ ಎಣ್ಣೆಯ ಮೇಲುಸ್ತರ, ಮಧ್ಯಮ ಸ್ತರ ಹಾಗೂ ಕೆಳ ಸ್ತರದ ಘಮ ಒಂದೇ ಆಗಿರುವುದಿಲ್ಲ. ಮೇಲಿನ ಸ್ತರದ ಸುವಾಸನೆ ಕ್ಷಣಿಕ. ಮಧ್ಯಮ ಸ್ತರದ್ದು ತುಸು ಹೆಚ್ಚು ಕಾಲ ಇರುತ್ತದೆ. ಕೆಳ ಸ್ತರದ್ದು ದೀರ್ಘಕಾಲ ಅಥವಾ ಹೆಚ್ಚು ಹೊತ್ತು ಇರುತ್ತದೆ ಎಂಬುದು ಅವರ ವಿವರಣೆ.

ಈ ನೈಸರ್ಗಿಕ ಸುಗಂಧದ್ರವ್ಯಗಳನ್ನು ಜೋಷಿಯವರು ದಶಕಗಳಿಂದ ‘ಆರೋಮಾ ಥೆರಪಿ’ ಯಲ್ಲಿ ಬಳಸುತ್ತಿದ್ದಾರೆ. ಅದೊಂದು ಪರ್ಯಾಯ ಚಿಕಿತ್ಸಾ ವ್ಯವಸ್ಥೆ. ಅಷ್ಟೇ ಅಲ್ಲ, ಪೂರಕ ಚಿಕಿತ್ಸೆಯೂ ಹೌದು; ಸಾಂಪ್ರದಾಯಿಕ ಚಿಕಿತ್ಸೆಯೊಂದಿಗೆ ಚೆನ್ನಾಗಿ ಹೊಂದುತ್ತದೆ. ಇವರ ಘಮಲಿನ ಮನೆಗೆ ಬರುವ ಬಹುತೇಕ ರೋಗಿಗಳು ಆ ಸುಗಂಧಗಳ ವಿವಿಧ ಸ್ತರಗಳಲ್ಲಿ ಮುಳುಗಿ ತೇಲುವುದು ಅಷ್ಟೇ ನಿಜ. ‘ನೋಡಿ, ಈ ಲ್ಯಾವೆಂಡರ್ ಸಣ್ಣ-ಪುಟ್ಟ ಗಾಯಗಳಿಗೆ ಅದೆಷ್ಟು ಹಿತ; ಚಕ್ಕೆ ಎಣ್ಣೆ ನಿಮ್ಮ ಆಲಸ್ಯವನ್ನು ದೂರ ಮಾಡುತ್ತದೆ; ಜಪಾನೀ ಪುದಿನಾದ ತೈಲ ತಲೆನೋವಿಗೆ ದಿವ್ಯೌಷಧಿ; ಖಿನ್ನತೆಗೆ ರೋಸ್ ಮೇರಿ ಸುಗಂಧದೆಣ್ಣೆ ರಾಮಬಾಣ; ಹೆಂಗಸರ ಕೆಲ ಸಮಸ್ಯೆಗಳಿಗೆ ಪನ್ನೀರುಪತ್ರೆಯ ತೈಲ; ಗಂಡಸರಿಗೆ ಪುನುಗಿನೆಣ್ಣೆ‘ ಹೀಗೆ ಹತ್ತು ಹಲವು ಸ್ವಾನುಭವದ ಉದಾಹರಣೆಗಳನ್ನು ಹೇಳುತ್ತಲೇ ಹೋಗುತ್ತಾರೆ.

ಬಳಸುವಾಗ ಎಚ್ಚರವಿರಲಿ..

‘ಮೇಡಂ ಈ ಸುಗಂಧ ತೈಲಗಳನ್ನು ಬಳಸುವ ಬಗೆ ಹೇಗೆ?‘ ಪಿಎಚ್‍ಡಿ ವಿದ್ಯಾರ್ಥಿ ಪ್ರಸನ್ನರ ಪ್ರಶ್ನೆ. ಇತರೇ ಮಾತ್ರೆಗಳನ್ನೋ ಟಾನಿಕ್‍ಗಳನ್ನೋ ತೆಗೆದುಕೊಂಡಂತೆ ಇವುಗಳನ್ನು ತೆಗೆದುಕೊಳ್ಳುವಂತಿಲ್ಲ. ಇವುಗಳ ಸುವಾಸನೆಗೆ ನಿಮ್ಮನ್ನು ತಜ್ಞರ ಸಲಹೆಯಂತೆ ಇಂತಿಷ್ಟು ಸಮಯ ಒಡ್ಡಿಕೊಳ್ಳಬೇಕು; ಅಥವಾ ಮಂಡಿ/ತಲೆ/ಮೊಣಕೈ ನೋವಾಗಿದ್ದಲ್ಲಿ ಸೂಚಿಸಿದ ಸುಗಂಧ ತೈಲವನ್ನು ಎಳ್ಳು/ಹರಳು/ಕೊಬ್ಬರಿ ಎಣ್ಣೆಯೊಡನೆ ಮಿಶ್ರಮಾಡಿ ಲೇಪಿಸಿಕೊಳ್ಳಬೇಕು; ಕೆಲವನ್ನು ಬಿಸಿನೀರಿಗೆ ಬೆರೆಸಿ ಸ್ನಾನ ಮಾಡಿಕೊಳ್ಳಬೇಕು; ಹಲವನ್ನು ಹಬೆಯ ರೀತಿ ತೆಗೆದುಕೊಳ್ಳಬೇಕು.....ಹೀಗೆ ಇವುಗಳ ಬಳಕೆಯೇ ಒಂದು ರೋಚಕ ಮತ್ತು ಅನನ್ಯ ಅನುಭವ. ಬಳಕೆಯ ಜ್ಞಾನವಿಲ್ಲದೆ, ತಜ್ಞರ ಸಲಹೆಯಿಲ್ಲದೆ ರೋಗ ನಿವಾರಣೆಗೆ ಇವುಗಳನ್ನು ಬಳಸುವುದು ಬೇಡ ಹಾಗೂ ಕಲೆವೊಮ್ಮೆ ಅಪಾಯಕಾರಿ ಕೂಡ. ಈ ತೆರನಾದ ಚಿಕಿತ್ಸೆಯಲ್ಲಿ ಕೃತಕವಾಗಿ ತಯಾರಿಸಿದ ಅಥವಾ ಕಲಬೆರೆಸಿದ ಸುಗಂಧದೆಣ್ಣೆಗಳ ಬಳಕೆ ಮಾಡುವಂತಿಲ್ಲ. ಹಾಗಾಗಿ ಜೋಷಿಯವರು ತಮಗೆ ಬೇಕಾದ ತೈಲಗಳನ್ನು ಸ್ವಯಂ ಭಟ್ಟಿ ಇಳಿಸಿಕೊಳ್ಳುತ್ತಾರೆ ಅಥವಾ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ತೆಗೆದುಕೊಳ್ಳುತ್ತಾರೆ.

ಪರಿಮಳ ತೈಲಗಳ ಇತಿಹಾಸ

ಸುಗಂಧ ಲೋಕದ ಇತಿಹಾಸ ಅವುಗಳಷ್ಟೇ ಅದ್ಭುತ ಹಾಗೂ ಆಶ್ಚರ್ಯಕರ. ನೂರ್ ಜಹಾನಳು ಸ್ನಾನದೊಡನೆ ಗುಲಾಬಿದಳ ಬಳಸದಿದ್ದರೆ, ಪ್ರಪಂಚಕ್ಕೆ ‘ಗುಲಾಬ್ ಜಲ್’ ಅಥವಾ ‘ಗುಲಾಬ್ ತೇಲ್’ ದಕ್ಕುತ್ತಿರಲಿಲ್ಲವೇನೋ? ಈಜಿಪ್ಟ್ ನವರು ‘ಮಮ್ಮಿ’ಗಳ ದೀರ್ಘ ಸಂರಕ್ಷಣೆಗೆ ಬಳಸಿದ್ದು ‘ಫ್ರಾಂಕಿನ್ಸೆನ್ಸ್’ ಮತ್ತು ಬಹುತೇಕ ಸುಗಂಧ ಸಾಮಗ್ರಿಗಳು; ಎರಡನೇ ಮಹಾಯುದ್ಧದಲ್ಲಿ ಸೈನಿಕರು ಗುಂಡೇಟಿನ ಗಾಯಕ್ಕೆ ಔಷಧ ಸಿಗದೆ ಲ್ಯಾವೆಂಡರಿನ ತೈಲ ಸವರಿಕೊಳ್ಳದಿದ್ದರೆ, ವಿಶ್ವಕ್ಕೆ ಆ ದಿವ್ಯೌಷಧ ಸಿಗುತ್ತಿರಲಿಲ್ಲವೇನೋ?

ತುಟ್ಟಿಯಾಗಿದ್ದರಿಂದ ಸಾವಿರಾರು ವರ್ಷಗಳು ಇವು ಅರಮನೆಗಳ ಅಥವಾ ಶ್ರೀಮಂತಿಕೆಯ ಸಂಕೇತ ಅಥವಾ ಬಲ್ಲಿದರ ಸ್ವತ್ತಾಗಿದ್ದವು; ಆದರೆ ಇವು ಸಾಮಾನ್ಯ ಮನುಷ್ಯರ ಬಳಕೆಗೂ ಎಟುಕುವಂತಾಗಬೇಕೆಂಬುದು ಜೋಷಿಯವರ ಆಶಯ. ಅಷ್ಟೇ ಅಲ್ಲ, ಅವರಿಗೆ ತಲುಪಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಹಾದಿ ಉಲ್ಲೇಖನೀಯ. ಪರಿಶುದ್ಧ ಪರಿಮಳಗಳ ಉತ್ಪನ್ನ ಹಾಗೂ ಬಗೆಬಗೆಯ ಸುಗಂಧತೈಲಗಳನ್ನು ಅವರು ಕನಿಷ್ಟ ಲಾಭವಿಟ್ಟು ಸಾಮಾನ್ಯರಿಗೂ ತಲುಪಿಸುತ್ತಿರುವ ಬಗೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

‘ಮೇಡಂ ಈ ತೈಲಗಳನ್ನು ಕುಡಿಯಬಹುದೇ?‘ ವಿದ್ಯಾರ್ಥಿಯೊಬ್ಬರ ಸಹಜದ ಪ್ರಶ್ನೆ. ‘ಹಾಗೆ ಮಾಡಲೇಕೂಡದು; ಇವುಗಳ ಸುವಾಸನೆ ಆಸ್ವಾದನೆ, ಹೆಚ್ಚೆಂದರೆ ಚರ್ಮ ಲೇಪನ ಅಥವಾ ಸ್ನಾನದ ನೀರಿಗೆ ಒಂದೆರಡೇ ಹನಿ ಹಾಕಿ ಬಳಸಿದರೆ ಸಾಕು, ಇವುಗಳನ್ನು ಬಳಸಿ ಮಾಡಿದ ಗಂಧದಕಡ್ಡಿಯ ಬಳಕೆಯೂ ಆದೀತು‘ ಎಚ್ಚರಿಸಿದರು ಶರ್ಮಿಳಾ ಮೇಡಂ.

ಬಹುವಿಧದ ಉತ್ಪನ್ನಗಳು

ಸಹಜ ಸುಗಂಧಗಳ ಅವರ ಅರಿವು ಅಪರಿಮಿತ ಹಾಗೂ ಅಪರೂಪ. ಇವರಲ್ಲಿ ಸಿಗುವ ಘಮಘಮಿಸುವ ಉತ್ಪನ್ನಗಳು ಅನೇಕ. ಪರಿಶುದ್ಧ ಸುಗಂಧ ತೈಲಗಳು, ಘಮ್ಮೆನುವ ಬಗೆಬಗೆಯ ಸಾಬೂನುಗಳು, ಪರಿಮಳ ಆಘ್ರಾಣಿಸಲೆಂದೇ ಸಿದ್ಧಪಡಿಸಿರುವ ಸಲಕರಣೆಗಳು, ಬಹುವಿಧದ ಗಂಧದ ಕಡ್ಡಿ, ಸುವಾಸನಾಯುಕ್ತ ನೀರು, ವಿವಧ ಮುಲಾಮುಗಳು, ನೋವುನಿವಾರಕ ಹಾಗೂ ಮೌಲ್ಯವರ್ಧಿತ ತೈಲಗಳು, ಅಂಗಮರ್ಧನಾ ತೈಲ, ನೈಸರ್ಗಿಕ ಲಿಪ್ಸ್ಟಿಕ್, ಕಣ್ಣುಗಳ ಆರೋಗ್ಯದಲ್ಲಿ ಬಳಸುವ ಹನಿಗಳು ಹೀಗೆ ಪಟ್ಟಿ ಬೆಳೆಯುತ್ತದೆ.

ಒಮ್ಮೆ ಕೆಲಸದಲ್ಲಿ ಮಗ್ನರಾಗಿದ್ದಾಗ, ಗಾಜಿನ ದೊಡ್ಡ ವೆಸೆಲ್ ಇವರ ಕೈಮೇಲೆ ಬಿದ್ದು ಬೆರಳೊಂದು ಕತ್ತರಿಸಿದಾಗ, ಲ್ಯಾವೆಂಡರ್ ತೈಲ ತುಂಬಿದ್ದ ಬಾಟಲಿನೊಳಕ್ಕೆ ಕತ್ತರಿಸಿದ ಬೆರಳನ್ನು ಎರಡು ನಿಮಿಷ ಇಟ್ಟು ತೆಗೆದ ನಂತರ ರಕ್ತಸ್ರಾವ ತತ್ಕ್ಷಣಕ್ಕೇ ನಿಂತದ್ದನ್ನು ಸ್ಮರಿಸಿಕೊಂಡರು.

‘ನೈಸರ್ಗಿಕ ಸುಗಂಧ ತೈಲ/ದ್ರವ್ಯಗಳು ನಮ್ಮ ಜೀವನ ಶೈಲಿಯಾಗಬೇಕು; ನಮ್ಮ ದಿನದ ಆರಂಭವನ್ನು ಲ್ಯಾವೆಂಡರಿನಂತಹ ತೈಲದಿಂದ ಆರಂಭಿಸಬೇಕು; ಖಿನ್ನತೆ ಕಾಡಿದರೆ ರೋಸ್ಮೆರಿಯ ಸುಗಂಧಕ್ಕೆ ಮೂಗು ಕೊಡಬೇಕು, ಕೆಲಸದ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಲಾವಂಚದೆಣ್ಣೆಯನು ಕೊಂಚ ಘಮಿಸಬೇಕು; ದಣಿದಾಗ ‘ಗುಲಾಬ್ ಜಲ್’ನ ಕೆಲವೇ ಹನಿಗಳಿಂದ ಮುಖವ ಸವರಿ ನೋಡಿ, ದಣಿವು ಹಾರಿಹೋಗದಿದ್ದರೆ ಕೇಳಿ?‘ ಎಷ್ಟೊಂದು ಅನುಭವ ಮಾತುಗಳು, ಅದೂ ಉಚಿತ ನಮಗಾಗಿ.

ಅದಮ್ಯ ಉತ್ಸಾಹದ ಹಿರಿಯ ಜೀವ ನಮ್ಮನು ಸುಗಂಧಲೋಕದಲ್ಲಿ ತೇಲುವಂತೆ ಮಾಡಿ, ಅನಿವರ್ಚನೀಯ ಆನಂದವನ್ನುಂಟು ಮಾಡಿದ್ದು ನಮ್ಮ ಪುಣ್ಯ. ಅವರ ಜ್ಞಾನಾನುಭವಗಳನ್ನು ನಾವು ಮುಂದಕ್ಕೆ ಒಯ್ಯಬೇಕೆನ್ನುವುದು ಅವರ ಆಶಯ.

ಮೇಡಂ, ಎಪ್ಪತ್ತಾರರಲ್ಲೂ ಇಪ್ಪತಾರರ ನಿಮ್ಮ ಜೋಷ್‍ನ ಗುಟ್ಟು ಬಿಟ್ಟುಕೊಡಿ ಎಂದಾಗ, ನಕ್ಕು ಕೆಲ ಸುಗಂಧತೈಲಗಳನ್ನು ನಮ್ಮ ಕೈಯಲ್ಲಿಟ್ಟು ಬೀಳ್ಕೊಟ್ಟರು ಶರ್ಮಿಳಾ ಜೋಷಿಯವರು. ಹೆಚ್ಚಿನ ಮಾಹಿತಿಗೆ ಅವರ ಸಂಪರ್ಕ 98458 43420; ಸುಗಂಧ ಸಸ್ಯಗಳ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ 9480557634.

ಸುಗಂಧದ್ರವ್ಯ ಸಸ್ಯಗಳನ್ನು ನೋಡಬಯಸುವವರು ಅಥವಾ ಅವುಗಳ ಬೀಜ/ಸಸಿ/ತೈಲ ಬೇಕೆನ್ನುವವರು ಬೆಂಗಳೂರಿನ ಜಿಕೆವಿಕೆಯಲ್ಲಿರುವ ತೋಟಗಾರಿಕೆ ಕಾಲೇಜು ಅಥವಾ ವಿಭಾಗಕ್ಕೆ ಭೇಟಿ ನೀಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು