ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊಟ್ರೇನಲ್ಲಿ ಅರಿಸಿನ ಸಸಿ ಉತ್ಪಾದನೆ

Last Updated 20 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಅರಿಸಿನ ಗೆಡ್ಡೆಗಳಿಂದ ಸಾಂಪ್ರದಾಯಿಕವ ವಿಧಾನದಲ್ಲಿ ಸಸಿ ಉತ್ಪಾದಿಸುವುದು ಶ್ರಮದಾಯಕ ಕೆಲಸ ಮತ್ತು ಹೆಚ್ಚು ಗೆಡ್ಡೆಗಳು ಬೇಕಾಗುತ್ತವೆ. ಇದನ್ನು ಮನಗಂಡ ಮೈಸೂರಿನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರೊಟ್ರೇ ವಿಧಾನದಲ್ಲಿ ಸಸಿಗಳನ್ನು ಬೆಳೆಸಲು ಉತ್ತೇಜನ ನೀಡುತ್ತಿದೆ. ಕಳೆದ ವರ್ಷ ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆ ಬಿಡುಗಡೆಯಾಗಿರುವ ‘ಪ್ರತಿಭಾ’ ಅರಿಸಿನ ತಳಿಯನ್ನು ಪ್ರೊಟ್ರೇ ವಿಧಾನದಲ್ಲಿ ಬೆಳೆಸುವಂತೆ ಸಲಹೆ ನೀಡಿದೆ.

‘ಸಾಂಪ್ರದಾಯಿಕ ಪದ್ಧತಿಯಲ್ಲಿ ಅರಿಸಿನ ಸಸಿ ನಾಟಿ ಮಾಡಲು ಎಕರೆಗೆ 8 ರಿಂದ 10 ಕ್ವಿಂಟಲ್ ನಷ್ಟು ಗೆಡ್ಡೆಗಳು ಬೇಕಾಗುತ್ತವೆ. ಆದರೆ ಪ್ರೊಟ್ರೇನಲ್ಲಿ ಸಸಿ ಬೆಳೆಸುವುದಾದರೆ 150 ಕೆಜಿ ಮಾತ್ರ ಸಾಕು’ ಎನ್ನುತ್ತಾರೆ ತೋಟಗಾರಿಕಾ ಮಹಾವಿದ್ಯಾಲಯದ ವಿಸ್ತರಣಾ ಘಟಕದ ವಿಜ್ಞಾನಿ ಬಿ.ಎಸ್.ಹರೀಶ್. ಈ ವಿಧಾನದಲ್ಲಿ ಅರಿಸಿನ ಸಸಿ ಬೆಳೆಸುವುದರಿಂದ ಬಿತ್ತನೆಯಲ್ಲಿ ಶೇ 60 ರಿಂದ 70 ರಷ್ಟು ಉಳಿತಾಯವಾಗುತ್ತದೆ. ಬಿತ್ತನೆಗೆ ಬೇಕಾದ ಅರಿಸಿನದ ಬೆರಳುಗಳ (ಗೆಡ್ಡೆಗಳು) ಸಂಖ್ಯೆಯೂ ಕಡಿಮೆಯಾಗುತ್ತದೆ. ಉತ್ಪಾದನಾ ವೆಚ್ಚ ತಗ್ಗುತ್ತದೆ. ಪ್ರೊಟ್ರೇಗಳಲ್ಲಿ ಸಸಿ ಬೆಳೆಯಲು ಎರಡು ತಿಂಗಳು ಬೇಕು. ಹೀಗಾಗಿ ಸಸಿ ನಾಟಿ ಮಾಡುವ ಭೂಮಿ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಇದೇ ವೇಳೆ ನಾಟಿ ಮಾಡುವ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ಬೆಳೆದು ಮಣ್ಣಿಗೆ ಸೇರಿಸಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬಹುದು.

ಟ್ರೇಗಳಲ್ಲಿ ಸಸಿ ಬೆಳೆಸುವುದರಿಂದ ಮಳೆ ತಡವಾದರೂ ನಾಟಿ ಮಾಡಲು ಅವಕಾಶವಿರುತ್ತದೆ. ಸಸಿಗಳೆಲ್ಲವೂ ಒಂದೇ ಸಮನಾಗಿ ಬರುವುದರಿಂದ ನಿರೀಕ್ಷಿತ ಇಳುವರಿ ತೆಗೆಯಬಹುದು. ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆಸಿದ ಸಸಿ 5 ತಿಂಗಳಿನಿಂದ ಬೆಳವಣಿಗೆ ಆರಂಭಿಸುತ್ತದೆ. ಪ್ರೊಟ್ರೇ ವಿಧಾನದಲ್ಲಿ ಬೆಳೆಸಿದ ಸಸಿ ಮೂರು ತಿಂಗಳಿನಿಂದಲೇ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಹರೀಶ್.

‘ಈ ಪದ್ಧತಿಯಿಂದ ನೀರು, ಗೊಬ್ಬರ, ಸಮಯದ ಜತೆಗೆ, ಹಣ ಮತ್ತು ಶ್ರಮವೂ ಉಳಿತಾಯವಾಗುತ್ತದೆ. ಸಸಿಗಳು ಒಂದೇ ಸಮನಾಗಿ ಬೆಳೆಯುತ್ತವೆ. ಹೆಚ್ಚಿನ ಇಳುವರಿಯೂ ಬರುತ್ತದೆ’ ಎಂಬುದು ನಂಜನಗೂಡು ತಾಲ್ಲೂಕಿನ ಹಂಚೀಪುರದ ಯುವ ರೈತ ಪ್ರಸಾದ್ ಅಭಿಪ್ರಾಯ. ಇವರು ಪ್ರೊಟ್ರೇ ವಿಧಾನದಲ್ಲಿ ಅರಿಸಿನ ಬೆಳೆದು ಯಶಸ್ಸು ಕಂಡಿದ್ದಾರೆ.

ಪ್ರಸಾದ್‌ಗೆ ಚಾಮರಾಜನಗರ ಸಮೀಪದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದವರು ಕಳೆದ ವರ್ಷ 150 ಕೆಜಿ ‘ಪ್ರತಿಭಾ’ ತಳಿಯ ಅರಿಸಿನದ ಬಿತ್ತನೆ ಗೆಡ್ಡೆಗಳನ್ನು ಕೊಟ್ಟಿದ್ದರು. ಅದನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ನಾಟಿ ಮಾಡಲು ಗೆಡ್ಡೆಗಳು ಸಾಕಾಗಲಿಲ್ಲ. ಹೀಗಾಗಿ ಲಭ್ಯವಾದ 150 ಕೆಜಿ ಗೆಡ್ಡೆಗಳನ್ನೇ ಪ್ರೊಟ್ರೇಗಳಲ್ಲಿ ನಾಟಿ ಮಾಡಿ ಸಸಿ ಬೆಳೆಸಿದರು.

‘50 ಗುಣಿಗಳಿರುವ ಒಂದು ಪ್ರೊಟ್ರೇಗೆ ₹13ರಂತೆ ಒಟ್ಟು 600 ಟ್ರೇಗಳನ್ನು ಖರೀದಿಸಿದೆ. 600 ಕೆಜಿ ಎರೆಗೊಬ್ಬರ, 600 ಕೆಜಿ ಕೋಕೋಪೀಟ್ ಜೊತೆಗೆ ತಲಾ ಎರಡು ಕೆಜಿ ಟ್ರೈಕೋಡರ್ಮ, ಸುಡೋಮಾನಸ್ ಮಿಶ್ರಣಮಾಡಿ ಅದರಲ್ಲಿ ತುಂಬಿದೆ. ಒಟ್ಟು 30 ಸಾವಿರ ಗುಣಿಗಳಲ್ಲಿ ಗೆಡ್ಡೆಗಳನ್ನು ಬಿತ್ತನೆಮಾಡಿದೆ. ಶೇ 70 ರಷ್ಟು ಸಸಿಗಳು ಚೆನ್ನಾಗಿ ಮೊಳಕೆ ಬಂದವು. ನಾಟಿಗೆ ಸಿದ್ದವಾದವು’ ಎನ್ನುತ್ತಾ ನರ್ಸರಿ ಬೆಳೆಸಿದ ವಿಧಾನವನ್ನು ವಿವರಿಸಿದರು ಪ್ರಸಾದ್.

ಒಂದು ಎಕರೆಯಲ್ಲಿ 18 ಸಾವಿರ ಸಸಿಗಳನ್ನು ನಾಟಿಮಾಡಿದರು. ಇದರಿಂದ ಪೈರುಗಳೆಲ್ಲ ಒಂದೇ ಸಮನಾಗಿ ಬಂದವು. ಒಟ್ಟು 112 ಕ್ವಿಂಟಲ್ ನಷ್ಟು ಇಳುವರಿ ಬಂತು. ಅದನ್ನು ಪ್ರತಿ ಕ್ವಿಂಟಲ್ ಗೆ ₹ 3 ಸಾವಿರದಂತೆ ಬಿತ್ತನೆ ಗೆಡ್ಡೆಯಾಗಿ ಮಾರಾಟ ಮಾಡಿದೆ’ ಎಂದು ಹೇಳುತ್ತಾರೆ ಪ್ರಸಾದ್. ಹೆಚ್ಚಿನ ಮಾಹಿತಿಗಾಗಿ: ಬಿ. ಎಸ್‌. ಹರೀಶ್‌ 9480557634 ಅವರನ್ನು ಸಂಪರ್ಕಿಸಬಹುದು.
**
ಸುಧಾರಿತ ತಂತ್ರಜ್ಞಾನ
‘ಪ್ರೊಟ್ರೇ ವಿಧಾನದಲ್ಲಿ ಗುಣಮಟ್ಟದ ಸಸಿ ಉತ್ಪಾದನೆ – ಇದು ತಮಿಳುನಾಡಿನ ಕೃಷಿಕರೊಬ್ಬರು ಅಭಿವೃದ್ಧಿಪಡಿಸಿದ ತಂತ್ರಜ್ಞಾನ. ಕೇರಳದ ಕ್ಯಾಲಿಕಟ್‌ನಲ್ಲಿರುವ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಹಾಗೂ ಮೈಸೂರಿನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ವಿಸ್ತರಣಾ ಘಟಕದ ವಿದ್ಯಾರ್ಥಿಗಳು ಈ ವಿಧಾನವನ್ನು ಸುಧಾರಿಸಿ, ಕೃಷಿಕರಿಗೆ ಅಳವಡಿಸಿಕೊಳ್ಳಲು ದಾರಿಮಾಡಿಕೊಟ್ಟಿದ್ದಾರೆ. ಈಗಾಗಲೇ ಈ ವಿಧಾನದಲ್ಲಿ ನೂರಾರು ರೈತರು ಅರಿಸಿನ ಬೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT