ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಬೆಳೆಗೆ ಬೇಕಿದೆ ಹನಿ ನೀರು

Last Updated 18 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅಂತರ್ಜಲ ಮಟ್ಟ ಕುಸಿದ ದಿನಗಳಲ್ಲಿ ಕೋಲಾರ ಜಿಲ್ಲೆಯ ರೈತರಿಗಿಂತಲೂ ಹೆಚ್ಚಿನ ಕಷ್ಟನಷ್ಟಗಳನ್ನು ಕಂಡವರು ಪಕ್ಕದಲ್ಲೇ ಇರುವ ಆಂಧ್ರಪ್ರದೇಶದಕ್ಕೆ ಸೇರಿರುವ ಕುಪ್ಪಂ ಭಾಗದ ರೈತರು. ಆದರೆ ಅವರ ತೋಟದಲ್ಲೀಗ ಪಪ್ಪಾಯಿ ಹಣ್ಣುಗಳು ಮರದ ಮೈತುಂಬಿ ನಿಂತಿದ್ದರೆ, ಮಲ್ಬರಿ ತೋಟದಲ್ಲಿ ಹಣ್ಣುಗಳ ಸಾಲುಸಾಲು. ಬೀನ್ಸ್ ಹಾಗೂ ನವಿಲುಕೋಸು ಬೆಳೆಗಳೂ ದಷ್ಟಪುಷ್ಟವಾಗಿ ಬೆಳೆದು ನಿಂತಿವೆ. ಇವುಗಳ ಜೊತೆಯಲ್ಲಿ ಜೋಳದ ಬೆಳೆ ತೊನೆಯಾಡುತ್ತಿದ್ದರೆ, ಸಿಹಿ ಕಬ್ಬಿನ ಜೊಲ್ಲೆ ಒಮ್ಮೆ ಬಂದು ಸಿಹಿ ನೋಡಿ ಹೋಗು ಎಂದು ಕರೆಯುವಂತಿದೆ.

ಇದಕ್ಕೆಲ್ಲ ಕಾರಣ ಹತ್ತು ವರ್ಷಗಳಿಂದ ಇಲ್ಲಿನ ರೈತರು ಕಂಡುಕೊಂಡ ಸತ್ಯ. ಅದು ಕೃಷಿಯಲ್ಲಿ ಇಸ್ರೇಲ್‌ ತಂತ್ರಜ್ಞಾನದ ಹನಿನೀರಾವರಿ ಪದ್ಧತಿ. ಈ ಬೇಸಾಯ ಪದ್ಧತಿ ಅಲ್ಲಿನ ರೈತಾಪಿಗಳ ಬದುಕಿನ ದೆಸೆಯನ್ನೀಗ ಸಂಪೂರ್ಣ ಬದಲಾಯಿಸಿದೆ. ಇದನ್ನೇ ಆದರ್ಶವಾಗಿಟ್ಟುಕೊಂಡಿರುವ ಕೋಲಾರ ಜಿಲ್ಲೆಯ ರೈತರು, ಕುಪ್ಪಂ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಹನಿನೀರಾವರಿಯತ್ತ ಅವರು ಗಮನ  ಹರಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಪ್ರೋತ್ಸಾಹಧನ ದೊರಕುತ್ತಿರುವುದು ಈ ಭಾಗದ ರೈತರಿಗೆ ವರದಾನವಾಗಿದೆ. ಇದರಿಂದಾಗಿ ತೋಟ, ಹೊಲ- ಗದ್ದೆಗಳಲ್ಲೀಗ ಹನಿನೀರಾವರಿಯದ್ದೇ ಕಾರುಬಾರು.

ವಾಣಿಜ್ಯ ಬೆಳೆಗಳತ್ತ ಒಲವು
ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ಭತ್ತ ಬಿಟ್ಟು ವಾಣಿಜ್ಯ ಬೆಳೆಗಳಾದ ಪರಂಗಿ, ಬೀನ್ಸ್, ನವಿಲುಕೋಸು, ಕಬ್ಬು ಇತರೆ ತರಕಾರಿಗಳ ಬೆಳೆಗಳತ್ತ ಕೋಲಾರ ಜಿಲ್ಲೆಯ ರೈತರು ವಾಲಿದ್ದಾರೆ. ಹನಿ ನೀರಾವರಿ ಪದ್ಧತಿಯನ್ನು ಇಲ್ಲಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಈ ಮೂಲಕ ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಆದರೆ ಹನಿನೀರಾವರಿಯನ್ನು ಒಪ್ಪಿಕೊಳ್ಳಲು ಕೆಲವು ರೈತರು ಮುಂದೆ ಬರುತ್ತಿಲ್ಲ. ಈ ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಅವರಲ್ಲಿ ಆತಂಕವಿದೆ. ಹನಿನೀರಾವರಿಗೆ ಉಪಯೋಗಿಸುವ ಪೈಪ್ ಗಳ ಹಾಗೂ ಅವುಗಳಲ್ಲಿ ನೀರು ಹರಿಸುವುದರ ಕುರಿತು ಅವರಲ್ಲಿ ಹಲವು ಪ್ರಶ್ನೆ, ಸಂದೇಹಗಳಿವೆ.

‘ಹನಿನೀರಾವರಿ ಪೈಪ್ ಗಳಿಗೆ ನೀರು ಹರಿಸುವುದೇ ಒಂದು ದೊಡ್ಡ ಶ್ರಮದ ಕೆಲಸ. ಆಗಾಗ ನೀರು ಪೈಪ್ ಮಧ್ಯೆ ಬ್ಲಾಕ್ ಆಗುತ್ತದೆ’ ಎಂಬ ಮಾತು ಸೊನ್ನವಾಡಿ ಗ್ರಾಮದ ನಾರಾಯಣಪ್ಪ ಅವರದ್ದು. ಆದರೆ ಇದರಲ್ಲಿ ಯಾವುದೇ ಹುರುಳು ಇಲ್ಲ ಎನ್ನುವುದು ಅನುಭವಿ ರೈತರ ಮಾತು. ‘ಆಂಧ್ರಪ್ರದೇಶದ ಯಾವೊಬ್ಬ ರೈತರಿಗೂ ಇಂತಹ ಸಮಸ್ಯೆ ಎದುರಾಗಿಲ್ಲ. ಅಲ್ಲಿರದ ಸಮಸ್ಯೆ ಬಗ್ಗೆ ಇಲ್ಲಿರುವ ರೈತರು ತಲೆಕೆಡಿಸಿಕೊಳ್ಳುವಲ್ಲಿ ಅರ್ಥವಿಲ್ಲ’ ಎನ್ನುತ್ತಾರೆ ಇದನ್ನು ಈಗಾಗಲೇ ಅಳವಡಿಸಿಕೊಂಡು ಯಶಸ್ವಿಯಾಗಿರುವ ರೈತರು. ಒಟ್ಟಾರೆ ಅಲ್ಲಿನ ತಂತಜ್ಞಾನದ ಕೃಷಿ ನಮ್ಮವರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸಿಕೊಂಡು ಕೃಷಿಯಲ್ಲಿ ಸ್ವಾವಲಂಬಿಗಳಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT