ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಕ್ಕೆ ರಫ್ತಾಯ್ತು ಗಜಬರ ಬೆಲ್ಲ

Last Updated 2 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕು ಕಬ್ಬಿಗೆ ಹೆಸರುವಾಸಿ. ತಾಲ್ಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಇದ್ದರೂ ಸಹ ರೈತರ ಪರದಾಟ ಮಾತ್ರ ತಪ್ಪಿಲ್ಲ. ಕಬ್ಬು ಸಕಾಲಕ್ಕೆ ಕಾರ್ಖಾನೆಗೆ ಹೋಗುತ್ತಿಲ್ಲ.

ಹೀಗಾಗಿ ಈ ಕಾರ್ಖಾನೆಗಳ ಸಹವಾಸವೇ ಸಾಕು ಎಂದು ಹಾರೂಗೇರಿಯ ರೈತ ಗಜಬರ ಹುಸೇನಸಾಬ ಜಮಾದಾರ  ತಮ್ಮ ಆರು ಎಕರೆ ಜಮೀನಿನ ಕಬ್ಬನ್ನು ಬೆಲ್ಲ ಮಾಡಲು ಮುಂದಾದರು. ಆದರೆ ಇತರ ರೈತರಂತೆ ಅವರು ಸಾಂಪ್ರದಾಯಿಕ ವಿಧಾನಕ್ಕೆ ಜೋತು ಬೀಳಲಿಲ್ಲ. ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಯಶಸ್ವಿಯೂ ಆಗಿದ್ದಾರೆ.

ಸಾಮಾನ್ಯವಾಗಿ ಬೆಲ್ಲಕ್ಕೆ ಬಂಗಾರದ ಬಣ್ಣ ಬರಲು ರಾಸಾಯನಿಕ ಉಪಯೋಗಿಸುವುದು ವಾಡಿಕೆ. ಆದರೆ ಅದಿಲ್ಲದೆಯೂ ಒಳ್ಳೆಯ ಬೆಲ್ಲ ಮಾಡಬಹುದು ಎಂಬುದನ್ನು ತಾಮತ್ರಿಕ ಸಲಹೆಗಾರ ಮನೋಜ ಎಂಬುವವರು ತೋರಿಸಿಕೊಟ್ಟರು. ಅಲ್ಲದೆ ಬೆಲ್ಲವನ್ನು ಮಾರುಕಟ್ಟೆಗೆ ಕಳಿಸುವ ವಿಧಾನ ಹೇಳಿಕೊಟ್ಟಿದ್ದಲ್ಲದೆ ರಷ್ಯದ ರಾಜಧಾನಿ ಮಾಸ್ಕೊಗೆ ರಫ್ತು ಮಾಡಲು ನೆರವಾದರು.

ಇದರ ಫಲವಾಗಿ ಮಾಸ್ಕೊದಿಂದ ಅಲೆಕ್ಸಾಂಡರ್ ಎಂಬ ಆಹಾರ ತಜ್ಞ ಹಾರೂಗೇರಿಗೆ ಬಂದು ಗಜಬರ ಸಾಹೇಬರು ತಯಾರಿಸಿದ ಬೆಲ್ಲ ಪರೀಕ್ಷಿಸಿದರು. ಇದು ರಾಸಾಯನಿಕ ಮುಕ್ತ ಎಂದು ದೃಢೀಕರಿಸಿದರು.

ರಾಸಾಯನಿಕ ಬಳಸದೇ ತಯಾರಿಸಿದ ಈ ಬೆಲ್ಲವನ್ನು ಐದು ವರ್ಷ ಕೆಡದಂತೆ ಇಡಬಹುದಂತೆ. ಅಲ್ಲದೆ ರಾಸಾಯನಿಕದ ಬಾಬ್ತು 60 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ. ತಾಲ್ಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು  ಆಲೆಮನೆಗಳಿದ್ದು ರಾಸಾಯನಿಕ ಬಳಕೆ ವ್ಯಾಪಕವಾಗಿದೆ. ಅಲ್ಲಿ ಟನ್ ಕಬ್ಬಿಗೆ 80-85 ಕಿಲೊ ಬೆಲ್ಲ ತಯಾರಾಗುತ್ತದೆ.
 
ಆದರೆ ತಮ್ಮಲ್ಲಿ ರಾಸಾಯನಿಕಗಳ ಬಳಕೆ ಇಲ್ಲದಿರುವದರಿಂದ ಮಳ್ಳಿ ಹಾಗೂ ಹೊಲಸು ಹೆಚ್ಚಿಗೆ ಹೋಗುವುದಿಲ್ಲ. ಹೀಗಾಗಿ ಟನ್‌ಗೆ 135-140 ಕಿಲೊವರೆಗೂ ಬೆಲ್ಲ ಬರುತ್ತದೆ ಎಂದು ಗಜಬರ ತಮ್ಮ ಅನುಭವ ವಿವರಿಸುತ್ತಾರೆ. ಕಬ್ಬನ್ನು ಬೆಳಗಿನ ಜಾವ 4 ಗಂಟೆಗೆ ಕಟಾವು ಮಾಡಿ ಬಿಸಿ ನೀರಲ್ಲಿ ತೊಳೆದು ಸ್ವಚ್ಛಗೊಳಿಸಿ ಅರೆದರೆ ಪ್ರತಿ ಟನ್‌ಗೆ ಇನ್ನೂ 10 ಕಿಲೊ ಇಳುವರಿ ಹೆಚ್ಚಿಗೆ ಬರುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ. 

ಇವರಲ್ಲಿ ತಯಾರಾದ ಬೆಲ್ಲವನ್ನು ಹೈದರಾಬಾದ್‌ನ ದೊಡ್ಡ ಕಂಪೆನಿಯೊಂದು ಖರೀದಿಸುತ್ತಿದೆ. ಹೀಗಾಗಿ ಇವರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ. ಆಲೆಮನೆ ನಿರ್ಮಾಣದಲ್ಲೂ ಗಜಬರ ಅವರು ಆಧುನಿಕ ತಂತ್ರಜ್ಞಾನ ಅಳವಡಿಸಿದ್ದಾರೆ.

ತಮ್ಮಲ್ಲಿರುವ ಬೆಲ್ಲ ಮಾಡುವ ಡೋಣಿ ಇಡೀ ಕರ್ನಾಟಕದಲ್ಲಿ ಪ್ರಥಮವಾಗಿದೆ. ಬೆಲ್ಲ ತಯಾರಿಸುವಾಗ ಕುದಿಯುವ ಕಬ್ಬಿನ ರಸ ಸಂಪೂರ್ಣ ಸೋಸಿ ಆಗಿ ಬರುತ್ತದೆ.

ಇದನ್ನು ಈ ವರೆಗೆ ಯಾರೂ ಅಳವಡಿಸಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಇವರ ಆಲೆಮನೆಯಲ್ಲಿ 15 ಕುಟುಂಬಗಳು ಕೆಲಸ ಮಾಡುತ್ತಿವೆ. ನಿತ್ಯ 10 ಟನ್ ಕಬ್ಬು ಅರೆದು ಬೆಲ್ಲ ತಯಾರಿಸುತ್ತಾರೆ. ಮಾಹಿತಿಗೆ ಅವರ ಮೊಬೈಲ್ 94493 09121.                    
      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT