ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಳ್ಯದ ಬಳ್ಳಿಗೆ ಗರಿಯ ಆಸರೆ

Last Updated 9 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ಎಲೆಯಾಗ್ ಬರೋ ದುಡ್ಡು ಖರ್ಚಿಗಾಗ್ತದೆ, ಅಡಿಕೆದು ಹಂಗೆ ಉಳ್‌ಕಳ್ತದೆ’ ಎನ್ನುತ್ತಾ ತಮ್ಮ ವೀಳ್ಯದೆಲೆ ತೋಟಕ್ಕೆ ಕರೆದೊಯ್ದರು ವೆಂಕಟೇಶ್. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಕಡಬದ ವೆಂಕಟೇಶ್ ಒಂದೂಕಾಲು ಎಕರೆ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಎಲೆಬಳ್ಳಿ ಬೆಳೆದಿದ್ದಾರೆ.  ಹದಿನಾಲ್ಕು ವರ್ಷದ ಅಡಿಕೆ ಮರಗಳೊಂದಿಗೆ ಹತ್ತು ವರ್ಷದ ಎಲೆ ಬಳ್ಳಿಗಳಿವೆ. 

ವರ್ಷಕ್ಕೊಮ್ಮೆ ಎರಡು ಲಾರಿ ಲೋಡ್ ದನ, ಕುರಿ ಅಥವಾ ಕೋಳಿಯ ಗೊಬ್ಬರವನ್ನು ತೋಟಕ್ಕೆಲ್ಲಾ ಹಾಕುತ್ತಾರೆ.  ಅದರ ಮೇಲೆ ಐವತ್ತು ಟ್ರ್ಯಾಕ್ಟರ್ ಲೋಡ್ ಮಣ್ಣನ್ನು ತೆಳುವಾಗಿ ಹರಡುತ್ತಾರೆ.  ನೀರಿಗಾಗಿ ಕೊಳವೆಬಾವಿ ಆಶ್ರಯ.  ಬೇಸಿಗೆಯಲ್ಲಿ ನಾಲ್ಕೈದು ದಿನಕ್ಕೊಮ್ಮೆ ಮಡಿನೀರು ಹಾಯಿಸಿದರೆ ಮಳೆಗಾಲದಲ್ಲಿ ಹದವರಿತು ನೀರುಣಿಸುತ್ತಾರೆ. ಎಲೆಬಳ್ಳಿ ನಾಟಿ ಮಾಡಿದಂದಿನಿಂದ ತೋಟ ಉಳುಮೆ ಮಾಡಿಲ್ಲ.

ಗರಿಯ ರಕ್ಷೆ
ತೋಟದ ಇಕ್ಕೆಲಗಳಲ್ಲಿ ತೆಂಗಿನ ಗರಿಯ ಬೇಲಿ ಮಾಡಿದ್ದಾರೆ. ‘ಬಿಸಿಲ್ ಹೆಚ್ಚಿದ್ರೂ ತ್ವಾಟ ತಡ್ಕಳ್‌ತದೆ. ಗಾಳಿಗ್ ಮಾತ್ರ ತಡ್‌ಯಲ್ಲ. ಗಾಳಿಗ್ ಎಲೆಗಳ್ ಮಡ್ಚ್‌ಕಂಡ್ ಬಿಡ್ತವೆ’ ಎನ್ನುತ್ತಾ ಬೇಲಿಯ ಹಿನ್ನೆಲೆ ವಿವರಿಸಿದರು ಮಗ ಶ್ರೀನಿವಾಸ್.  ಸದ್ಯ ಇವರ ಬಳಿ ಏಳುನೂರು ಬಳ್ಳಿಗಳಿವೆ. 

ವೀಳ್ಯದೆಲೆಯನ್ನು ಬಾಧಿಸುವ ಮಚ್ಚೆರೋಗ ಅಷ್ಟಾಗಿ ಇವರನ್ನು ಕಾಡಿಲ್ಲ. ಆಷಾಢದ ಬಲವಾದ ಗಾಳಿಯಲ್ಲಿ ಕಾಣಿಸುವ ಮತ್ತಿರೋಗದ್ದೇ ಇವರಿಗೆ ಸಮಸ್ಯೆ. ಆಗ ಮಾತ್ರ ಕೀಟನಾಶಕ ಬಳಸುತ್ತಾರೆ. ಅದೂ ರೋಗ ಬಂದರಷ್ಟೆ.  ತೋಟ ಕಳೆಮುಕ್ತವಾಗಿರಲು ಆಗಾಗ ಕಳೆ ಕೀಳಿಸುತ್ತಾರೆ. ಬೇಸಿಗೆಯಲ್ಲಿ ತೋಟದ ಆರೈಕೆಯಲ್ಲಿ ಸ್ವಲ್ಪ ವ್ಯತ್ಯಯವಾದರೂ ನಡೆಯುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ಎಚ್ಚರದಿಂದಿರಬೇಕು. ಬಳ್ಳಿಯ ಬುಡದಲ್ಲಿ ಹೆಚ್ಚುವರಿ ನೀರು ಸಂಗ್ರಹವಾದರೆ ಬಳ್ಳಿಗಳಿಗೆ ಆಪತ್ತು. 

ಪ್ರತಿ ಜನವರಿ ತಿಂಗಳಲ್ಲಿ ಪುನರಾವರ್ತನೆಯಾಗುವ ಕೆಲಸವೇ ತೆಕ್ಕೆ ಮುಚ್ಚುವುದು. ಎರಡು ತಿಂಗಳಿಗೊಮ್ಮೆ ಕಟಾವಿನೊಂದಿಗೆ ಕೆಂಬಳ್ಳಿ ಕಿತ್ತೆಸೆಯುವ ಕಾರ್ಯವೂ ನಡೆಯುತ್ತದೆ. ಪ್ರತಿ ಕಟಾವಿನ ನಂತರ ಬಳ್ಳಿಯನ್ನು ಅಡಿಕೆ ಮರಗಳಿಗೆ ಭದ್ರಮಾಡಿ ಕಟ್ಟುತ್ತಾರೆ. ಇದಕ್ಕೆ ಬಾಳೆ ನಾರಿನೊಂದಿಗೆ ಪ್ಲಾಸ್ಟಿಕ್ ದಾರವನ್ನು ಬಳಸುತ್ತಾರೆ. ಮುಖ್ಯ ಬಳ್ಳಿಯ ಬುಡದಲ್ಲಿ ಚಿಗುರುವ ಮರಿ ಬಳ್ಳಿಗಳನ್ನು ಆಗಿಂದಾಗ್ಗೆ ಕೀಳುತ್ತಿರಬೇಕು.  ಹೀಗೆ ವೀಳ್ಯೆದೆಲೆ ಕೃಷಿಯಲ್ಲಿ ಎಲ್ಲವಕ್ಕೂ ಮಾನವ ಶ್ರಮ ಬೇಕು. 

ಪ್ರತಿ ಜನವರಿ ತಿಂಗಳಲ್ಲಿ ಅಡಿಕೆ ಮರದ ಮಗ್ಗುಲಲ್ಲಿ ಸಣ್ಣ ಕಾಲುವೆ ತೆಗೆಯುತ್ತಾರೆ. ಬಳ್ಳಿಯ ತುದಿಯನ್ನು ಒಬ್ಬರು ಹಿಡಿದಿದ್ದರೆ ಇನ್ನೊಬ್ಬರು ಮರಕ್ಕೆ ಕಟ್ಟಿರುವ ಕಟ್ಟುಗಳನ್ನು ಕತ್ತರಿಸುತ್ತಾರೆ. ನಂತರ ಬುಡದಿಂದ ಮೂರು ಅಡಿಗಳಷ್ಟು ಬಳ್ಳಿಯನ್ನು ಸಣ್ಣ ಕಾಲುವೆಯೊಳಗೆ ಸುತ್ತಿಟ್ಟು ಅದನ್ನು ಮಣ್ಣಿನಿಂದ ಮುಚ್ಚಿ ಮಿಕ್ಕ ಮೇಲ್ಭಾಗವನ್ನು ಪುನಃ ಮರಕ್ಕೆ ಕಟ್ಟುತ್ತಾರೆ. ಹೀಗೆ ಮಾಡುವುದರಿಂದ ಬಳ್ಳಿಯಲ್ಲಿ ಹೊಸ ಬೇರುಗಳೊಡೆದು ಉತ್ತಮ ಗುಣಮಟ್ಟದ ಎಲೆಗಳನ್ನು ಪಡೆಯಬಹುದು. ಬಳ್ಳಿಯ ಬೆಳವಣಿಗೆಗೂ ಇದು ಸಹಕಾರಿ.
ಎಲೆಗೆ ಉತ್ತಮ ಧಾರಣೆ ಇದ್ದಾಗ ಅಕ್ಕಪಕ್ಕದ ಊರಿನಿಂದ ಸಹಾಯಕರನ್ನು ಕರೆತಂದು ಕೊಯಿಲು ಮುಗಿಸುತ್ತಾರೆ.  ಇದ್ದಂತೆ ಮನೆ ಮಂದಿಯೇ ನಿರ್ವಹಿಸುತ್ತಾರೆ. ಅಪ್ಪ ಮಗ ಎಲೆ ಕೊಯ್ದರೆ ವೆಂಕಟೇಶ್ ಪತ್ನಿ ಜಯಮ್ಮ ಮತ್ತು ಸೊಸೆ ರೂಪ ಎಲೆಯನ್ನು ಕಟ್ಟು ಮಾಡಿ ಜೋಡಿಸಿ ಪೆಂಡಿ ಕಟ್ಟುತ್ತಾರೆ. ಬಳ್ಳಿಯೊಂದರ ಸರಾಸರಿ ಇಳುವರಿ ಐವತ್ತು ಕಟ್ಟುಗಳು. ಕಟ್ಟಿಗೆ ಐದು ರೂಪಾಯಿಯಿಂದ ಐವತ್ತು ರೂಪಾಯಿವರೆಗೆ ಮಾರುಕಟ್ಟೆಯ ಧಾರಣೆಯ ಅನ್ವಯ ಮಾರುತ್ತಾರೆ.

ಜಯಮ್ಮ ಪಕ್ಕದ ನಿಟ್ಟೂರು ಹಾಗೂ ಗುಬ್ಬಿಯ ಸಂತೆಯಲ್ಲಿ ವಾರಕ್ಕೆರಡು ದಿನ ನೇರ ವ್ಯಾಪಾರ ಮಾಡುತ್ತಾರೆ. ‘ನಮ್ ಕಟ್ಟಲ್ಲಿ ನೂರ್‌ಕಿಂತ ಹೆಚ್ಗೆ ಎಲೆ ಇರುತ್ತವೆ. ಹಂಗಾಗಿ ಹುಡುಕಂಡ್ ಬಂದ್ ತಗಂಡೋಗೋ ಜನ ಅವ್ರೆ’ ಎನ್ನುವ ಜಯಮ್ಮ ವಾರಕ್ಕೆರಡು ಪೆಂಡಿ ಎಲೆ ಮಾರುತ್ತಾರೆ. ಹೀಗೆ ನೇರ ಮಾರುವಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದ್ದರಿಂದ ತುಸು ಹೆಚ್ಚಿನ ಲಾಭ ಸಿಗುತ್ತದೆ.  ಇನ್ನುಳಿದ ಎಲೆಗಳನ್ನು ಗುಬ್ಬಿಯ ಮಾರುಕಟ್ಟೆಗೆ ಒಯ್ಯುತ್ತಾರೆ. 

ವೆಂಕಟೇಶ್ ಮುಖ್ಯ ಬೆಳೆಗೆ ನೀಡುವ ಆರೈಕೆಯಲ್ಲದೇ ಇನ್ಯಾವ ಹೆಚ್ಚುವರಿ ಪ್ರಾಮುಖ್ಯವನ್ನು ಉಪಬೆಳೆಗೆ ನೀಡಿಲ್ಲ.  ತೋಟದ ವಾರ್ಷಿಕ ಖರ್ಚು ಒಂದೂವರೆ ಲಕ್ಷ. ವರ್ಷವೊಂದಕ್ಕೆ ಹದಿನೈದು ಕ್ವಿಂಟಾಲ್ ಅಡಿಕೆಯೊಂದಿಗೆ ಎಲೆಯ ಆದಾಯ ಒಂದೂವರೆಯಿಂದ ಎರಡು ಲಕ್ಷಗಳವರೆಗಿದೆ. ಈ ಮೂಲಕ ಒಂದರ ಆದಾಯ ಖರ್ಚಿಗೆ ಜಮಾ ಆದರೆ ಇನ್ನೊಂದರದ್ದು ಉಳಿತಾಯದ ಲೆಕ್ಕ.  ಮನೆಯ ಹೆಣ್ಣು ಮಕ್ಕಳ ಸಹಭಾಗಿತ್ವವೂ ಇದಕ್ಕೆ ಕಾರಣ. ‘ಅನುಭವ ಇದ್ ಬೆಳ್‌ದ್ರೆ ಆಳಿಗ್ ತಕ್ ಲಾಭಾನೂ ಐತೆ’ಎನ್ನುವ ಶ್ರೀನಿವಾಸ್ ಸಂಪರ್ಕ ಸಂಖ್ಯೆ-9740109130.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT