ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಆರಂಭ

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: `ವೈಚಾರಿಕ ಕ್ರಾಂತಿಯನ್ನೇ ಸೃಷ್ಟಿಸಿದ್ದ ಸಾಹಿತಿ ಬಸವರಾಜ ಕಟ್ಟೀಮನಿ ಅವರ ಬದುಕು ಹೊಸ ಪೀಳಿಗೆಯವರಿಗೆ ದಾರಿ ದೀಪವಾಗಬೇಕು~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ. ಮನು ಬಳಿಗಾರ ಹೇಳಿದರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಸಮಾಜದಲ್ಲಿ ಭ್ರಷ್ಟಾಚಾರ, ಕೋಮುವಾದ ಹೆಚ್ಚುತ್ತಿರುವುದಕ್ಕೆ ಸಾಹಿತಿಗಳು ಹೇಗೆ ಕಡಿವಾಣ ಹಾಕಬೇಕು ಎಂಬುದನ್ನು ಕಟ್ಟೀಮನಿ ಲೇಖನಿ ಶಕ್ತಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ತಮ್ಮ ಬರವಣಿಗೆಯ ಉದ್ದಕ್ಕೂ ಮನುಕುಲದ ಏಳ್ಗೆಗಾಗಿ ಹೋರಾಟ ನಡೆಸಿದ್ದಾರೆ. ಇಂಥ ಧೀಮಂತ ಸಾಹಿತಿಯ ಸ್ಮರಣಾರ್ಥ ಪ್ರತಿಷ್ಠಾನವನ್ನು ಬೆಳಗಾವಿಯಲ್ಲಿ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ” ಎಂದರು.

`ಕಟ್ಟೀಮನಿಯವರು ತಮ್ಮ ಜೀವನದ ಅನುಭವಗಳನ್ನು ಸೃಜನಾತ್ಮಕವಾಗಿ ಕಥೆ- ಕಾದಂಬರಿಗಳಲ್ಲಿ ತರುತ್ತಿದ್ದರು. ಬಂಡಾಯ ಮನೋಭಾವದ ಕಟ್ಟೀಮನಿಯವರು ಹಳ್ಳಿ ಜನರ ಬದುಕಿನ ಬವಣೆಗಳನ್ನು ಅದ್ಭುತವಾಗಿ ಚಿತ್ರಿಸುತ್ತಿದ್ದರು” ಎಂದು `ಕಾದಂಬರಿಕಾರನ ಕಥೆ~ ಮರು ಮುದ್ರಣ ಕೃತಿ ಬಿಡುಗಡೆ ಮಾಡಿದ ಹಿರಿಯ ಕವಿ ಡಾ. ಚನ್ನವೀರ ಕಣವಿ ಸ್ಮರಿಸಿದರು.

`ಸ್ವಾಭಿಮಾನ, ಪಾರದರ್ಶಕತೆ, ಕೆಚ್ಚೆದೆಯಂತಹ ಗುಣಗಳನ್ನು ಹೊಂದಿದ್ದ ಕಟ್ಟೀಮನಿಯವರನ್ನು ಕಳೆದ ಮೂವತ್ತು ವರ್ಷಗಳಿಂದ ಜಿಲ್ಲೆಯವರು ಮರೆತಿರುವುದು ವಿಷಾದಕರ ಸಂಗತಿ. ಸರ್ಕಾರವು ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಪುನಃ ಕಟ್ಟೀಮನಿಯವರನ್ನು ನಮ್ಮ ಮುಂದೆ ತಂದು ನಿಲ್ಲಿಸಿರುವುದು ಶ್ಲಾಘನೀಯ” ಎಂದು `ಮಾಡಿ ಮಡಿದವರು~ ಕೃತಿಯ ಅನುವಾದ `ಡೂ ಆರ್ ಡೈ~ ಬಿಡುಗಡೆ ಮಾಡಿದ ಕವಿ ಜಿನದತ್ತ ದೇಸಾಯಿ ಹೇಳಿದರು. ಸಾಹಿತಿ ಡಾ. ನಾ.ಡಿಸೋಜಾ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ, “ಜನಪರ ಕಾದಂಬರಿಕಾರರಾಗಿದ್ದ ಬಸವರಾಜ ಕಟ್ಟೀಮನಿ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಇನ್ನೂ ಮೂರು ವರ್ಷಗಳ ಅವಧಿಯೊಳಗೆ ಪ್ರಕಟಿಸಲಾಗುವುದು. ಪ್ರತಿಷ್ಠಾನಕ್ಕೆ ಬೆಳಗಾವಿಯಲ್ಲಿ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಯತ್ನಿಸಲಾಗುವುದು ಎಂದರು.

ಪ್ರತಿಷ್ಠಾನದ ಸದಸ್ಯ ಡಾ. ಬಸವರಾಜ ಸಾದರ ಕಾರ್ಯಕ್ರಮ ನಿರೂಪಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT