ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿ: ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ಜಿಲ್ಲೆಯು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅವಶ್ಯಕವಾದ ಕೆಲಸಗಳು ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ಹೇಳಿದರು.

ಪಟ್ಟಣದ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ಕೌಟ್ಸ್‌ ಅಂಡ್‌ ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೃಷಿ, ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜುಗಳು ಆರಂಭಗೊಂಡಿವೆ. ಪಾಲಿಟೆಕ್ನಿಕ್‌ ಕಾಲೇಜು, ಕೇಂದ್ರೀಯ ವಿದ್ಯಾಲಯ, ಆದರ್ಶ ಶಾಲೆಗಳೂ ಇವೆ. ಮುಂದಿನ ದಿನಗಳಲ್ಲಿ ಕಾನೂನು ಕಾಲೇಜು ಆರಂಭವಾಗಲಿದೆ. ಜಿಲ್ಲೆಯು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂಬುದಕ್ಕೆ ಇದು ಸೂಚನೆ ಎಂದರು.

2014–15ನೇ ಸಾಲಿನಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡಾಗ 33 ವಿದ್ಯಾರ್ಥಿನಿಯರು ಮಾತ್ರ ಇದ್ದರು. ಈಗ ಈ ಸಂಖ್ಯೆ 11 ಪಟ್ಟು ಹೆಚ್ಚಳವಾಗಿದೆ. ಹೆಣ್ಣು ಮಕ್ಕಳಿಗೆ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಮಹಿಳಾ ಕಾಲೇಜು ಆರಂಭವಾದಾಗ ಮೂಲಸೌಕರ್ಯದ ಕೊರತೆ ಇತ್ತು. ಬಳಿಕ, ಶಾಸಕರ ಅನುದಾನದಡಿ ಈ ಕೊರತೆಯನ್ನು ನೀಗಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜಿಲ್ಲೆಗೆ ಎರಡು ಮೊರಾರ್ಜಿ ಶಾಲೆಗಳು ಮಂಜೂರಾಗಿವೆ. ಶಿಕ್ಷಣಕ್ಕಾಗಿ ಹೆಚ್ಚಿನ ಕಾರ್ಯಕ್ರಮಗಳಿಗೆ ಒತ್ತು ನೀಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೇಶ್, ಸದಸ್ಯೆ ಶಶಿಕಲಾ, ದೇವನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಬಾಲಸುಬ್ರಮಣ್ಯಂ, ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಂ.ಆರ್.ಸುಮತಿ, ರೇಷ್ಮೆ ಕೃಷಿ ಉಪನಿರ್ದೇಶಕ ಕೆ.ಬಿ.ವೃಷಬೇಂದ್ರ ಕುಮಾರ್ ಇದ್ದರು.

ಪ್ರಮುಖ ಸುದ್ದಿಗಳು