ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕಣದಲ್ಲಿ ಕಾಣದ ಒಂದೇ ಹೆಸರಿನ ಇತರ ಅಭ್ಯರ್ಥಿಗಳು

ಅಬ್ಬರಿಸಿದ ಡಾ.ಸಿ.ಎನ್. ಮಂಜುನಾಥ್, ಡಿ.ಕೆ. ಸುರೇಶ್; ತಟಸ್ಥವಾದ ಆನೆ
Published 26 ಏಪ್ರಿಲ್ 2024, 7:47 IST
Last Updated 26 ಏಪ್ರಿಲ್ 2024, 7:47 IST
ಅಕ್ಷರ ಗಾತ್ರ

ರಾಮನಗರ: ಹೈ ವೋಲ್ಟೇಜ್ ಕ್ಷೇತ್ರವೆಂದೇ ಈ ಸಲ ಪರಿಗಣನೆಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿಂದು ಮತದಾನ. ನಾಮಪತ್ರ ಸಲ್ಲಿಕೆ ಶುರುವಾದಾದಾಗ ಚುನಾವಣೆಯ ಕಾವು ಹೆಚ್ಚಳಕ್ಕೆ ಹುಬ್ಬೇರಿಸುವಂತಹ ಕೆಲ ವಿದ್ಯಮಾನಕ್ಕೆ ಕ್ಷೇತ್ರ ಸಾಕ್ಷಿಯಾಗಿತ್ತು. ಅದರಲ್ಲಿ ಕಣದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್‌ನ ಮುಖ್ಯ ಅಭ್ಯರ್ಥಿಗಳ ಹೆಸರನ್ನೇ ಹೋಲುವ ಅಭ್ಯರ್ಥಿಗಳು.

ಹೌದು. ಕಣದಲ್ಲಿರುವ ಪ್ರಮುಖ ಹುರಿಯಾಳುಗಳಾದ ಬಿಜೆಪಿಯ ಡಾ. ಸಿ.ಎನ್. ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಅವರ ಹೆಸರನ್ನೇ ಹೋಲುವವರು ಸಹ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದರು. ಆದರೆ, ಪ್ರಚಾರದ ಭರಾಟೆ ಶುರುವಾದಾಗ ಸುರೇಶ್ ಹೆಸರಿನ ಒಬ್ಬ ಅಭ್ಯರ್ಥಿ ಹಾಗೂ ಮಂಜುನಾಥ್ ಹೆಸರಿನ ಇಬ್ಬರು ಅಭ್ಯರ್ಥಿಗಳು ನಾಪತ್ತೆಯಾಗಿದ್ದರು.

ತಮ್ಮ ಹೆಸರಿನ ಕಾರಣಕ್ಕೆ ಗಮನ ಸೆಳೆದಿದ್ದ ಈ ಮೂವರು ಪ್ರಚಾರ ಸಭೆ, ರೋಡ್ ಶೋ, ಮತಯಾಚನೆ ಮಾಡುವುದಿರಲಿ, ಕಡೇ ಪಕ್ಷ ಒಂದು ಕರಪತ್ರ ಕೂಡ ಹಂಚಲಿಲ್ಲ. ಕಡೆಗೆ, ‘ಮುಖ್ಯ ಅಭ್ಯರ್ಥಿಗಳ ಹೆಸರಿನ ಕುರಿತು ಮತದಾರರಿಗೆ ಗೊಂದಲ ಸೃಷ್ಟಿಸಲು ಇವರು ನಾಮಪತ್ರ ಸಲ್ಲಿಸಿದ್ದಾರೆ’ ಎಂಬ ಆರೋಪ ಪುಷ್ಟೀಕರಿಸುವಂತೆ ನಾಮಪತ್ರಕ್ಕೆ ಸೀಮಿತರಾದರು. 

ನಾಮಪತ್ರ ಸಲ್ಲಿಕೆ ಶುರುವಾದಾಗ ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ, ಮಂಜುನಾಥ್ ಹೆಸರಿನ ಐವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ಕೊನೆಯ ದಿನ ಐವರು ಮಂಜುನಾಥರ ಪೈಕಿ, ಮೂವರು ನಾಮಪತ್ರ ಹಿಂಪಡೆದರು. ಸದ್ಯ ಇಬ್ಬರು ಮಂಜುನಾಥರು ಕಣದಲ್ಲಿದ್ದಾರೆ. ಡಿ.ಕೆ. ಸುರೇಶ್ ಒಳಗೊಂಡಂತೆ ಸುರೇಶ ಹೆಸರಿನ ಮೂವರು ಉಮೇದುವಾರಿಕೆ ಸಲ್ಲಿಸಿದ್ದರು. ಕಣದಲ್ಲೀಗ ಮೂವರೂ ಇದ್ದಾರೆ.

ಸದ್ದು ಮಾಡಿ ತಟಸ್ಥವಾದ ‘ಆನೆ’: ಕ್ಷೇತ್ರದಲ್ಲಿ ಈ ಸಲ ಆಶ್ಚರ್ಯಕರ ರಾಜಕೀಯ ಬೆಳವಣಿಗೆಗೆ ಬಿಎಸ್‌ಪಿ ಕಾರಣವಾಯಿತು. ನಾಮಪತ್ರ ಸಲ್ಲಿಕೆಗೆ ಕೃತಕ ಆನೆ ಮೇಲೆ ಬಂದು ಅಬ್ಬರಿಸಿದ್ದ ಪಕ್ಷದ ಅಭ್ಯರ್ಥಿ ಡಾ. ಚಿನ್ನಪ್ಪ ಚಿಕ್ಕಹಾಗಡೆ ನಾಮಪತ್ರ ಹಿಂಪಡೆಯುವ ದಿನದಂದು, ತಮ್ಮ ಪಕ್ಷದ ನಾಯಕರಿಗೆ ಚಳ್ಳೆಹಣ್ಣು ತಿನ್ನಿಸಿ ಯಾರಿಗೂ ಗೊತ್ತಾಗದಂತೆ ನಾಮಪತ್ರ ಹಿಂಪಡೆದಿದ್ದರು.

ಕಳೆದ ಚುನಾವಣೆಯಲ್ಲಿ 19,972 ಸಾವಿರ ಮತಗಳನ್ನು ಪಡೆದಿದ್ದ ಚಿನ್ನಪ್ಪ ಗೊತ್ತಾಗದಂತೆ ನಾಮಪತ್ರ ಹಿಂಪಡೆದು ನಾಪತ್ತೆಯಾಗಿದ್ದಾರೆ. ಇದಕ್ಕೆ ಒತ್ತಡ ಕಾರಣ ಎಂದು ಪಕ್ಷದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದ್ದರು. ಕಣದಲ್ಲಿ ಅಭ್ಯರ್ಥಿ ಇಲ್ಲದಿರುವುದರಿಂದ ಮುಂದೇನು ಮಾಡಬೇಕೆಂಬುದರ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ತಿಳಿಸಲಾಗುವುದು ಎಂದಿದ್ದರು. ಆದರೆ, ಮತದಾನದ ದಿನವರೆಗೂ ಆ ಬಗ್ಗೆ ಮಾಹಿತಿ ಇಲ್ಲ.

‘ಕಾಂಗ್ರೆಸ್‌ ಗೆಲುವಿಗೆ ಬಿಎಸ್‌ಪಿ ಪಡೆಯುವ ಮತ ಅಡ್ಡಗಾಲಾಗುತ್ತವೆ ಎಂಬ ಆತಂಕದಿಂದ ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ. ಆ ವಿದ್ಯಮಾನದ ಬಳಿಕ ಪಕ್ಷ ಯಾರನ್ನೂ ಬೆಂಬಲಿಸದೆ ತಟಸ್ಥವಾಗಿ ಉಳಿದಿದೆ. ಆದರೂ, ಪಕ್ಷದ ಬಹುತೇಕ ಮತಗಳು ಕಾಂಗ್ರೆಸ್ ಪಾಲಾಗುತ್ತವೆ. ಇದೂ ಸಹ ಒಂದು ರೀತಿಯಲ್ಲಿ ಚುನಾವಣಾ ತಂತ್ರವೇ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ರಾಜಕಾರಣಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT