ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿದೇಶದಿಂದ ಬಂದು ಮತ ಚಲಾಯಿಸಿದರು; ಮಾದರಿಯಾದ ಸೆಲೆಬ್ರಿಟಿಗಳು

Published 26 ಏಪ್ರಿಲ್ 2024, 7:27 IST
Last Updated 26 ಏಪ್ರಿಲ್ 2024, 7:27 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಭಾಗಶಃ ಇನ್ನೆರಡು ಲೋಕಸಭಾ ಕ್ಷೇತ್ರಗಳು ವ್ಯಾಪಿಸುವ ಬೆಂಗಳೂರು ಮಹಾನಗರದಲ್ಲಿ ಶುಕ್ರವಾರ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು.

ಬೆಳಿಗ್ಗೆ 7 ಗಂಟೆಯಿಂದಲೇ ಮತಗಟ್ಟೆ ಬಳಿ ಜನರು ಸಾಲುಗಟ್ಟಿ ನಿಂತಿದ್ದರು. ಬಹುತೇಕ ಕಡೆ ಹೆಚ್ಚಾಗಿ ಹಿರಿಯ ನಾಗರಿಕರು ಮೊದಲು ಬಂದು ಮತ ಹಾಕುವುದಕ್ಕೆ ಸರತಿಯಲ್ಲಿ ನಿಂತಿದ್ದರು. ಬಿಸಿಲು ಏರುವ ಕಾರಣಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ... ಒಟ್ಟಾರೆ ನಗರದಾದ್ಯಂತ ಬೆಳಗಿನಿಂದ ಜನರು ಉತ್ಸಾಹದಿಂದಲೇ ಮತ ಚಲಾಯಿಸಲು ಆಗಮಿಸಿದರು.

ಬೆಳಿಗ್ಗೆ 8 ರಿಂದ 9 ಗಂಟೆ ಒಳಗೆ ಹೆಚ್ಚು ಹಿರಿಯ ನಾಗರಿಕರು ಮತ ಚಲಾಯಿಸಿದ್ದರು. ಕೆಲವರು ಕೋಲು ಊರಿಕೊಂಡು, ಇನ್ನೂ ಕೆಲವರು ಕುಟುಂಬದವರ ಆಸರೆಯೊಂದಿಗೆ ಹಾಗೂ ಗಾಲಿ ಕುರ್ಚಿಯಲ್ಲಿ ಕುಳಿತು ಮತಗಟ್ಟೆ ಬಂದು, ಮತ ಚಲಾಯಿಸಿದರು.

ಬ್ಯಾಟರಾಯನಪುರದ ಮೈಕೋಲೇಔಟ್‌ನಲ್ಲಿ ಅನಾರೋಗ್ಯಪೀಡಿತ ಮತದಾರರೊಬ್ಬರು ಆಮ್ಲಜನಕದ ನೆರವಿನೊಂದಿಗೆ ಕಾರಿನಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಇಂಥ ಮತದಾರರಿಗೆ ಮತಗಟ್ಟೆ ಅಧಿಕಾರಿಗಳು ಆದ್ಯತೆ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಮಾದರಿಯಾದ ಸೆಲೆಬ್ರಿಟಿಗಳು

ಗಣ್ಯರು, ಚಲನಚಿತ್ರ ನಟ ನಟಿಯರು, ಕ್ರೀಡಾಪಟುಗಳು, ಉದ್ಯಮಿಗಳು, ಸಾಹಿತಿಗಳು ಬೆಳಿಗ್ಗೆಯೇ ಮತಚಲಾಯಿಸಿದರು. ಶಿಕ್ಷಣ ತಜ್ಞ ಪ್ರೊ. ಎಂ.ಕೆ.ಶ್ರೀಧರ್, ಇನ್ಫೊಸಿಸ್‌ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣಮೂರ್ತಿ – ಸುಧಾ ಮೂರ್ತಿ ದಂಪತಿ, ನಟ ಗಣೇಶ್, ದುನಿಯಾ ವಿಜಯ್, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಯುವ, ವಿನಯ್ ರಾಜಕುಮಾರ್, ಮುರಳಿ, ರವಿಚಂದ್ರನ್‌, ದೊಡ್ಡಣ್ಣ, ಅಮೂಲ್ಯ, ಸಪ್ತಮಿ ಗೌಡ, ರಾಗಿಣಿ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ನಟ–ರಾಜಕಾರಣಿ ಜಗ್ಗೇಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು, ಕುಟುಂಬ ಸಹಿತ ಮತಗಟ್ಟೆಗೆ ಬಂದು ಮತಚಲಾಯಿಸಿದರು. ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ‘ಎಲ್ಲ ಮತದಾರರು ಮತಗಟ್ಟೆಗೆ ಬಂದು ಮತಚಲಾಯಿಸುವಂತೆ’ ಮನವಿ ಮಾಡಿದರು.

‘ಹಿಂದೆ ಕೂತು ಮಾತನಾಡುವ ಬದಲು, ಮತಗಟ್ಟೆಗೆ ಬಂದು ಮತಚಲಾಯಿಸಿ ಮಾತನಾಡಿ. ಯುವಕರು ಹಿರಿಯರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಿ. ನಂತರ ನೀವು ಮತದಾನ ಮಾಡಿ’ ಎಂದು ಸುಧಾಮೂರ್ತಿ ಮನವಿ ಮಾಡಿದರು.

‘ನಾವು ಮೊದಲು ಓಟ್ ಮಾಡಿದರೆ, ನಮ್ಮನ್ನು ಅನುಸರಿಸುವವರು, ಅಭಿಮಾನಿಗಳು ಇದರಿಂದ ಉತ್ತೇಜನಗೊಂಡು ಮತ ಚಲಾಯಿಸುತ್ತಾರೆ. ಅದಕ್ಕಾಗಿ ಬೆಳಿಗ್ಗೆಯೇ ಬಂದು ಮತಚಲಾಯಿಸಿದ್ದೇವೆ. ಬೆಳಿಗ್ಗೆ ಮತದಾನ ಮಾಡಲು ಸರತಿಯಲ್ಲಿ ನಿಂತಿರುವ ಜನರನ್ನು ನೋಡಿ ಖುಷಿಯಾಯಿತು’ ಎಂದು ನಟ ಗಣೇಶ್ ಪ್ರತಿಕ್ರಿಯಿಸಿದರು.

ರಾಜಕಾರಣಿಗಳಿಂದ ಮತದಾನ

ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಪದ್ಮನಾಭನಗರದಲ್ಲಿ ಮತ ಚಲಾಯಿಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಬನಶಂಕರಿ ಎರಡನೇ ಹಂತದ ಬಿಎನ್ಎಸ್‌ ಕಾಲೇಜಿನಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿಸಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ, ಸಾರಕ್ಕಿ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ, ಸಚಿವ ಮತ್ತು ತಂದೆ ರಾಮಲಿಂಗಾರೆಡ್ಡಿ ಮತ್ತು ತಾಯಿಯೊಂದಿಗೆ ಮೇರಿ ಇಮ್ಮಾಕ್ಯುಲೇಟ್ ಶಾಲೆಯಲ್ಲಿ ಮತದಾನ ಮಾಡಿದರು. ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಜಯನಗರದ ಎನ್ಎಂಕೆಆರ್‌ವಿ ಕಾಲೇಜಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಮೊದಲ ಬಾರಿಗೆ ಮತ ಚಲಾಯಿಸಿದ ಯುವಕ ಯುವತಿಯರ ಮುಖದಲ್ಲಿ ಸಂಭ್ರಮ ಕಾಣುತ್ತಿತ್ತು. ಮತ ಚಲಾಯಿಸಿದ ನಂತರ ಶಾಯಿ ಹಚ್ಚಿದ ತೋರುಬೆರಳುಗಳನ್ನು ಪ್ರದರ್ಶಿಸುತ್ತಾ, ಮೊದಲ ಮತದಾನದ ಖುಷಿಯನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರಲ್ಲದೆ, ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೊಂಡು ಸಂಭ್ರಮಿಸಿದರು.

ಬಿಸಿಲಿಗೆ ಜಗ್ಗದ ಮತದಾರರು

ಬಿಸಿಲು ಏರುತ್ತಿರುವಂತೆ ಮತದಾನದ ಪ್ರಮಾಣದಲ್ಲೂ ಏರಿಕೆಯಾಗಿತ್ತು. ಮತಗಟ್ಟೆ ಬಳಿ ನೆರಳು, ನೀರಿನ ವ್ಯವಸ್ಥೆ ಮಾಡಿದ್ದರೂ, ಸರದಿಯಲ್ಲಿ ನಿಂತವರು ಸೆಕೆ ತಾಳಲಾರದೇ, ವೋಟರ್ ಐಡಿಯನ್ನೇ ಬೀಸಣಿಗೆಯಾಗಿ ಮಾಡಿಕೊಂಡಿರು. ಮಹಿಳೆಯರು ನೆರಳಿಗಾಗಿ ದುಪಟ್ಟಾ ಆಶ್ರಯ ಪಡೆದಿದ್ದರು.

ಮತಗಟ್ಟೆ ಒಳಗೆ ಮೊಬೈಲ್ ನಿಷೇಧವಿದ್ದ ಕಾರಣ, ಕೆಲವು ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ಹೊರಗಡೆ ಮೊಬೈಲ್ ಇಟ್ಟು ಹೋಗಲು ವ್ಯವಸ್ಥೆ ಮಾಡಿದ್ದರು.

ಬೆಳಿಗ್ಗೆ 9 ಗಂಟೆ ವೇಳೆಗೆ ನಗರದಲ್ಲಿ ಶೇ 9ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 11ರ ವೇಳೆಗೆ ಬೆಂಗಳೂರು ಉತ್ತರದಲ್ಲಿ ಶೇ 19.78, ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶೇ 19.21 ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಶೇ 19.81ರಷ್ಟು ಮತದಾನವಾಗಿತ್ತು.

ವಿದೇಶದಿಂದಲೂ ಬಂದರು

ಆಸ್ಟ್ರೇಲಿಯಾದಲ್ಲಿ ಮಕ್ಕಳೊಂದಿಗೆ ನೆಲೆಸಿದ್ದ ವಿದ್ಯಾರಣ್ಯಪುರ ತಿಂಡ್ಲುವಿನ ಸುಧೀಂದ್ರ ಕುಲಕರ್ಣಿ– ವಿಜಯ ಮಾಲಾ ದಂಪತಿ, ಮತದಾನಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಮೂಲತಃ ತಿಂಡ್ಲುವಿನ ಎಪಿಸಿ ಲೇಔಟ್‌ ನಿವಾಸಿಗಳಾದ ಅವರು, ಇಂದು ಮತಚಲಾಯಿಸಿದ್ದಾರೆ.

ಪ್ರಾಣ ಉಳಿಸಿದ ವೈದ್ಯರು

ಜೆಪಿ ನಗರ 8ನೇ ಹಂತದ ಜಂಬೂಸವಾರಿ ದಿನ್ನೆಯಲ್ಲಿ ಮತದಾನ ಮಾಡಲು ಬಂದಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕುಸಿದರು. ತಕ್ಷಣ ಅಲ್ಲೇ ಇದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ್ ಪ್ರಸಾದ್, ಕುಸಿದ ಮಹಿಳೆಗೆ ಸಿಪಿಆರ್ ಮಾಡಿ, ಅವರ ಜೀವ ಉಳಿಸಿದ್ದಾರೆ. ನಂತರ ಆ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT