ಅಮೆರಿಕಕ್ಕೆ ಮೂವರ ಅಕ್ರಮ ಸಾಗಾಣಿಕೆ: ಮಾಜಿ ಶಾಸಕ ಬಂಧನ

ಹೈದರಾಬಾದ್‌: ನಕಲಿ ದಾಖಲೆಗಳ ಮೂಲಕ ಪಾಸ್‌ಪೋರ್ಟ್‌ ಪಡೆದು ಮೂವರನ್ನು ಅಕ್ರಮವಾಗಿ ಅಮೆರಿಕಕ್ಕೆ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಜಯಪ್ರಕಾಶ್‌ ರೆಡ್ಡಿ ಅಲಿಯಾಸ್‌ ಜಗ್ಗಾ ರೆಡ್ಡಿ ಅವರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. 2004ರಲ್ಲಿ ಸಂಗಾರೆಡ್ಡಿ ಕ್ಷೇತ್ರದ ಶಾಸಕರಾಗಿದ್ದಾಗ ಜಯಪ್ರಕಾಶ್‌ ರೆಡ್ಡಿ ಈ ಕೃತ್ಯವೆಸಗಿದ್ದರು ಎಂದು ಆರೋಪಿಸಲಾಗಿದೆ.

ತಮ್ಮ ಪತ್ನಿ, ಮಗಳು ಮತ್ತು ಪುತ್ರನ ಹೆಸರಿನಲ್ಲಿ ಮೂವರು ಅನಾಮಧೇಯ ವ್ಯಕ್ತಿಗಳಿಗೆ ಸಿಕಂದರಾಬಾದ್‌ನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಿಂದ ಪಾಸ್‌ಪೋರ್ಟ್‌ಗಳನ್ನು ಜಯಪ್ರಕಾಶ್‌ ಪಡೆದುಕೊಂಡಿದ್ದರು. ಪಾಸ್‌ಪೋರ್ಟ್‌ ಮತ್ತು ವೀಸಾ ದೊರೆತ ಬಳಿಕ ಈ ಮೂವರ ಜತೆ ನ್ಯೂಯಾರ್ಕ್‌ಗೆ ತೆರಳಿದ್ದ ಅವರು, ಏಜೆಂಟ್‌ನಿಂದ ಈ ಕೆಲಸಕ್ಕಾಗಿ ₹15 ಲಕ್ಷ ಪಡೆದುಕೊಂಡಿದ್ದರು ಎಂದು ಸಿಕಂದರಾಬಾದ್‌ ಡಿಸಿಪಿ ಬಿ. ಸುಮತಿ ತಿಳಿಸಿದ್ದಾರೆ.

ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಮತ್ತು ಅಮೆರಿಕ ಕನ್ಸಲೇಟ್‌ ಕಚೇರಿ ಅಧಿಕಾರಿಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಜಯಪ್ರಕಾಶ್‌ ರೆಡ್ಡಿ ವಂಚನೆ ಮಾಡಿದ್ದಾರೆ. ಜತೆಗೆ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಜಯಪ್ರಕಾಶ್‌ ರೆಡ್ಡಿ ವಿರುದ್ಧ ಪಾಸ್‌ಪೋರ್ಟ್‌ ಕಾಯ್ದೆ ಮತ್ತು ವಲಸೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ

ಪ್ರಮುಖ ಸುದ್ದಿಗಳು