ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ 8 ಶತಕೋಟಿಪತಿಗಳು: ಚೆವೆಳ್ಳ ಕ್ಷೇತ್ರದಲ್ಲೇ ಮೂವರು ಅತಿ ಸಿರಿವಂತರು!

Published 26 ಏಪ್ರಿಲ್ 2024, 8:28 IST
Last Updated 26 ಏಪ್ರಿಲ್ 2024, 8:28 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣದಲ್ಲಿ ಕಣಕ್ಕಿಳಿದಿರುವ ಲೋಕಸಭಾ ಚುನಾವಣೆ 2024 ಅಭ್ಯರ್ಥಿಗಳಲ್ಲಿ ಕನಿಷ್ಠ 8 ಮಂದಿ ನೂರು ಕೋಟಿ ರೂಪಾಯಿಗೂ ಮಿಕ್ಕ ಚರ, ಸ್ಥಿರ, ಕೌಟುಂಬಿಕ ಆಸ್ತಿಯನ್ನು ಹೊಂದಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವವರು ಬಿಜೆಪಿಯ ಚೆವೆಳ್ಳ ಕ್ಷೇತ್ರದ ಅಭ್ಯರ್ಥಿ ಕೆ.ವಿಶ್ವೇಶ್ವರ ರೆಡ್ಡಿ. ಅವರ ಘೋಷಿತ ಆಸ್ತಿಯ ಮೌಲ್ಯ ₹4,568 ಕೋಟಿ.

ವಿಶೇಷವೆಂದರೆ, ಚೆವೆಳ್ಳ ಲೋಕಸಭಾ ಕ್ಷೇತ್ರದಲ್ಲಿ ಸ್ಫರ್ಧಿಸುತ್ತಿರುವ ಮೂವರು ಅತ್ಯಂತ ಶ್ರೀಮಂತ ಅಭ್ಯರ್ಥಿಗಳು. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಂಜಿತ್ ರೆಡ್ಡಿ ಇದ್ದು, ಅವರ ಘೋಷಿತ ಕೌಟುಂಬಿಕ ಆಸ್ತಿ ₹435.33 ಕೋಟಿ. ಚರಾಸ್ತಿ ₹294.33 ಕೋಟಿ ಆಗಿದ್ದರೆ, ಸ್ಥಿರಾಸ್ತಿ ಮೌಲ್ಯ ₹141 ಕೋಟಿ. ಇವರಿಗೆ ₹23 ಕೋಟಿ ಸಾಲ ಇದೆ. ಇಲ್ಲಿ ಮೂರನೇ ಸ್ಥಾನದಲ್ಲಿರುವವರು ಬಿಆರ್‌ಎಸ್ ಅಭ್ಯರ್ಥಿ ಕಸನಿ ಗ್ಯಾನೇಶ್ವರ್. ಅವರ ಕುಟುಂಬದ ಸ್ಥಿರ-ಚರಾಸ್ತಿಗಳ ಒಟ್ಟು ಮೌಲ್ಯ ₹228.46 ಕೋಟಿ.

ಹೈದರಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ಅವರ ಘೋಷಿತ ಕೌಟುಂಬಿಕ ಆಸ್ತಿ ಮೌಲ್ಯ ₹218.38 ಕೋಟಿ. ಅವರ ಕುಟುಂಬಕ್ಕಿರುವ ಒಟ್ಟು ಸಾಲದ ಪ್ರಮಾಣ ₹27 ಕೋಟಿ. ಮಾಧವಿ ಲತಾ ಅವರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಕಾಂಗ್ರೆಸ್‌ನ ಸಮೀರ್ ವಲಿಯುಲ್ಲಾ ಅವರನ್ನು ಚುನಾವಣೆಯಲ್ಲಿ ಎದುರಿಸುತ್ತಿದ್ದಾರೆ.

ಖಮ್ಮಾಮ್ ಕ್ಷೇತ್ರದ ಬಿಎರ್‌ಎಸ್ ಅಭ್ಯರ್ಥಿ ನಮಾ ನಾಗೇಶ್ವರ ರಾವ್ ₹155.89 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದರೆ, ಜಹೀರಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಬಿ.ಪಾಟೀಲ್ ₹151.68 ಕೋಟಿಯ ಆಸ್ತಿ ಘೋಷಿಸಿಕೊಂಡಿದ್ದಾರೆ. ಜಹೀರಾದಾಬ್‌ನಲ್ಲಿ ಬಿಆರ್‌ಎಸ್ ಟಿಕೆಟ್‌ನಿಂದ ಸ್ಫರ್ಧಿಸುತ್ತಿರುವ ಕಮಿ ಮಹೇಶ್ ಅವರ ಕೌಟುಂಬಿಕ ಆಸ್ತಿಯ ಮೌಲ್ಯ ₹145.33 ಕೋಟಿ. ನಿಜಾಮಬಾದ್ ಹಾಲಿ ಬಿಜೆಪಿ ಸಂಸದ ಡಿ.ಅರವಿಂದ್ ಅವರು ₹109.89 ಕೋಟಿ ಆಸ್ತಿ ಘೋಷಿಸಿದ್ದಾರೆ.

ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದವಿತ್ ಪ್ರಕಾರ, 30ಕ್ಕೂ ಹೆಚ್ಚು ಸ್ಫರ್ಧಿಗಳ ಆಸ್ತಿ ₹10 ಕೋಟಿಗೂ ಹೆಚ್ಚಿದೆ.

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗಾಗಿ ಮೇ 13ರಂದು ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಏಪ್ರಿಲ್ 29ರವರೆಗೆ ಸಮಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT