‘ಹಬ್ಬ ಮಾಡಲು ಬಿಡಿ, ಕಾನೂನು ಬಿಗಿ ಮಾಡಬೇಡಿ’

ಬೆಂಗಳೂರು: ‘ಧರ್ಮ ಯಾವುದೇ ಇರಲಿ. ಅವರವರ ಹಬ್ಬ ಆಚರಿಸಲು ಮುಕ್ತ ವಾತಾವರಣ ನಿರ್ಮಿಸಿ. ಅದನ್ನು ಬಿಟ್ಟು ಕಾನೂನು ಹೆಸರಿನಲ್ಲಿ ಹಬ್ಬಗಳನ್ನು ಮತ್ತಷ್ಟು ಬಿಗಿ ಮಾಡಬೇಡಿ’.

ಇದು, ಗಣೇಶ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ನಗರ ಪೊಲೀಸ್ ಕಮಿಷನರೇಟ್‌ ವತಿಯಿಂದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಕೇಳಿಬಂದ ಸಾರ್ವಜನಿಕರ ಒತ್ತಾಯ.

‘ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಒಟ್ಟಾಗಿ ಹಬ್ಬ ಆಚರಿಸುತ್ತಿದ್ದೇವೆ. ಕಾನೂನಿನ ನೆಪಹೇಳಿ ನಮ್ಮ ಹಬ್ಬಗಳಿಗೆ ನಿರ್ಬಂಧ ವಿಧಿಸುವುದು ಯಾವ ನ್ಯಾಯ? ಅದು ನಮ್ಮ ಸಡಗರವನ್ನು ಕಸಿದುಕೊಳ್ಳುತ್ತದೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು’ ಎಂದು ಇಕ್ಬಾಲ್ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್, ‘ಪ್ರತಿಯೊಬ್ಬರು ಶಾಂತಿಯುತ ಹಾಗೂ ಸಡಗರದಿಂದ ಹಬ್ಬ ಆಚರಿಸಬೇಕು. ಯಾರೊಬ್ಬರಿಗೂ ತೊಂದರೆ ಆಗಬಾರದೆಂಬ ಕಾರಣಕ್ಕೆ ಕಾನೂನು ರೂಪಿಸಲಾಗಿದೆ. ಮತ್ತೊಬ್ಬರಿಗೆ ತೊಂದರೆ ಮಾಡದಂತೆ ಹಬ್ಬ ಆಚರಿಸಿದರೆ ಯಾರೊಬ್ಬರೂ ಭಯಪಡಬೇಕಿಲ್ಲ’ ಎಂದರು.

ಬೆಸ್ಕಾಂ ವಿರುದ್ಧ ಆಕ್ರೋಶ: ‘ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಕಾಯಿಸಿಯಾದರೂ ಪರವಾನಗಿ ನೀಡುತ್ತಿದ್ದಾರೆ. ಆದರೆ, ಬೆಸ್ಕಾಂನವರು ಕಾಯಿಸುತ್ತಲೇ ಇದ್ದಾರೆ. ಮೂರ್ತಿ ಪ್ರತಿಷ್ಠಾಪನೆಗೆ ಎರಡು ದಿನ ಬಾಕಿ ಇದ್ದು, ಇದುವರೆಗೂ ಪರವಾನಗಿ ಸಿಕ್ಕಿಲ್ಲ’ ಎಂದು ಬಹುಪಾಲು ಸಾರ್ವಜನಿಕರು, ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಪಾರ್ಕ್ ನಿವಾಸಿ ವೆಂಕಟೇಶ್, ‘ಪೆಂಡಾಲ್‌ಗೆ ವಿದ್ಯುತ್‌ ಸಂಪರ್ಕ ಪಡೆಯುವುದಕ್ಕಾಗಿ ಬೆಸ್ಕಾಂ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಇದೇ ರೀತಿಯಾದರೆ ನಾವು ಯಾವಾಗ ಪೆಂಡಾಲ್ ಕಟ್ಟಬೇಕು’ ಎಂದು ಪ್ರಶ್ನಿಸಿದರು.

ಪಿಒಪಿ ಮೂರ್ತಿ ತಯಾರಕರನ್ನು ಬಂಧಿಸಿ: ‘ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಅವುಗಳನ್ನು ತಯಾರಿಸುವವರನ್ನೇ ಬಂಧಿಸಿ, ಕಠಿಣ ಸಂದೇಶ ರವಾನಿಸಿ’ ಎಂದು ದೇವರಾಜ್‌ ಎಂಬುವರು ಹೇಳಿದರು.

‘ಪಿಒಪಿ ಮೂರ್ತಿ ಪ್ರತಿಷ್ಠಾಪಿಸಿದರೆ ದೇವರು ಕೋಪ ಮಾಡಿಕೊಂಡು ನಿಮಗೆ ಶಾಪ ಕೊಡುತ್ತಾನೆ’ ಎಂಬ ಸಂದೇಶವನ್ನು ಮೊಬೈಲ್‌ನಲ್ಲಿ ಹರಿಬಿಟ್ಟಿದ್ದೇವೆ. ಅದಕ್ಕೂ ಜನ ಭಯಪಡುತ್ತಿಲ್ಲ. ಪಿಒಪಿ ಮೂರ್ತಿಗಳನ್ನೇ ಖರೀದಿಸುತ್ತಿದ್ದಾರೆ’ ಎಂದರು.

ಸುನೀಲ್‌ಕುಮಾರ್, ‘ಪಿಒಪಿ ಮೂರ್ತಿ ಬಳಸುವುದಿಲ್ಲವೆಂದು ಜನರೇ ಅಚಲ ನಿರ್ಧಾರ ಕೈಗೊಳ್ಳಬೇಕು. ಅವಾಗಲೇ ತಯಾರಕರು, ತಮಗೆ ಲಾಭವಾಗುವುದಿಲ್ಲವೆಂದು ಮೂರ್ತಿ ತಯಾರಿಸುವುದನ್ನೇ ಬಿಡುತ್ತಾರೆ’ ಎಂದು ಹೇಳಿದರು.

ಆಯುಕ್ತ ಮಂಜುನಾಥ್‌ ಪ್ರಸಾದ್, ‘ಪಿಒಪಿ ಮೂರ್ತಿ ವಿಷಯದಲ್ಲಿ ಧರ್ಮ ಸಂಕಟ ಅನುಭವಿಸುತ್ತಿದ್ದೇವೆ. ಮುಂದಿನ ವರ್ಷ ಅವುಗಳ ಬಳಕೆ ಸಂಪೂರ್ಣ ಬಂದ್‌ ಆಗುವ ವಿಶ್ವಾಸವಿದೆ’ ಎಂದರು.

ರಸ್ತೆಯಲ್ಲೇ ಮೂರ್ತಿಗಳು: ‘ಹಲಸೂರಿನಲ್ಲಿ ಒಂದೇ ಕಲ್ಯಾಣಿ ಇದೆ. ರಾತ್ರಿ 10ಕ್ಕೆ ಬಂದ್ ಮಾಡಲಾಗುತ್ತದೆ. ಅದಾದ ನಂತರ, ಜನರೆಲ್ಲ ಮೂರ್ತಿಗಳನ್ನು ರಸ್ತೆಯಲ್ಲೇ ಇಟ್ಟು ಹೋಗುತ್ತಾರೆ. ದೇವರಿಗೆ ಅವಮಾನ ಆಗುತ್ತಿದೆ’ ಎಂದು ಭಾರತಿನಗರದ ಜಯರಾಮ್ ಹೇಳಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ‘ಕಲ್ಯಾಣಿ ಸ್ವಚ್ಛ ಮಾಡಲು ಕಾಲಾವಕಾಶ ಬೇಕು. ಹೀಗಾಗಿ, 10ಕ್ಕೆ ಬಂದ್‌ ಮಾಡುತ್ತೇವೆ. ಜನರು ನಿಗದಿತ ಸಮಯಕ್ಕೆ ಬಂದು ವಿಸರ್ಜನೆ ಮಾಡಿದರೆ ಅನುಕೂಲ’ ಎಂದರು. 

ಆನ್‌ಲೈನ್‌ ಮೂಲಕ ಪರವಾನಗಿ

‘ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಾದ ಪರವಾನಗಿಯನ್ನು ಮುಂದಿನ ವರ್ಷದಿಂದ ಆನ್‌ಲೈನ್‌ ಮೂಲಕ ನೀಡಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

‘ಪರವಾನಗಿ ನೀಡಲು ಸದ್ಯ ಏಕಗವಾಕ್ಷಿ ವ್ಯವಸ್ಥೆ ಇದೆ. 63 ಉಪವಿಭಾಗದ ಕಚೇರಿಗಳಲ್ಲಿ ಬಿಬಿಎಂಪಿ, ಬೆಸ್ಕಾಂ, ಅಗ್ನಿಶಾಮಕ ದಳ, ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಪೊಲೀಸರು ಒಟ್ಟಿಗೆ ಪರವಾನಗಿ ನೀಡುತ್ತಿದ್ದಾರೆ’ ಎಂದರು.

‘ಈ ಬಾರಿ 400 ಕಡೆ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಅದರ ಜೊತೆಗೆ ವಾರ್ಡಿಗೊಂದು ಟ್ಯಾಂಕರ್‌ ಇರಲಿದೆ. ಮೊಹರಂ ಹಬ್ಬದಂದು ಪ್ರಾಣಿಗಳ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವಾಹನಗಳನ್ನು ಬಳಸಲಾಗುತ್ತಿದೆ’ ಎಂದು ಹೇಳಿದರು.

₹5 ಸಾವಿರ ಠೇವಣಿ ಬೇಕಿಲ್ಲ

ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ನೀಡಲು ಅಗ್ನಿಶಾಮಕ ದಳದ ಅಧಿಕಾರಿಗಳು ಪಡೆಯುತ್ತಿದ್ದ ₹5 ಸಾವಿರ ಠೇವಣಿಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ, ಠೇವಣಿಯನ್ನು ರದ್ದು ಮಾಡಲಾಗಿದೆ.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಾರ್ವಜನಿಕರು, ‘ಕೈಯಿಂದ ದುಡ್ಡು ಹಾಕಿ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದೇವೆ. ಅಗ್ನಿಶಾಮಕ ದಳದವರು ₹5 ಸಾವಿರ ಠೇವಣಿ ಪಡೆಯುತ್ತಿದ್ದಾರೆ. ನಾವು ಸಂಗ್ರಹಿಸಿದ ಹಣ, ಹಬ್ಬಕ್ಕೇ ಸಾಲುವುದಿಲ್ಲ. ಠೇವಣಿ ಎಲ್ಲಿಂದ ಕೊಡುವುದು’ ಎಂದು ಪ್ರಶ್ನಿಸಿದರು. 

‘ಠೇವಣಿ ರದ್ದು ಮಾಡುವಂತೆ ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್.ರೆಡ್ಡಿ ಅವರನ್ನು ಕೋರಿದ್ದೇವೆ’ ಎಂದು ಆಯುಕ್ತರು ಹೇಳಿದರು.

ಠೇವಣಿ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅಗ್ನಿಶಾಮಕ ದಳದ ಎಡಿಜಿಪಿ ಸುನೀಲ್ ಅಗರವಾಲ್, ‘ಅಗ್ನಿನಂದಕ ವಾಹನ ಬೇಕು ಎನ್ನುವವರು ಮಾತ್ರ ಠೇವಣಿ ಇಡಬೇಕು. ಉಳಿದಂತೆ, ಸಣ್ಣ ಪೆಂಡಾಲ್‌ನವರು ಠೇವಣಿ ಕೊಡಬೇಕಿಲ್ಲ. ಈ ಸಂಬಂಧ ಡಿಜಿಪಿ ಎಂ.ಎನ್.ರೆಡ್ಡಿ ಆದೇಶ ಹೊರಡಿಸಿದ್ದಾರೆ ಎಂದರು.

ಬಿಜೆಪಿ, ಜಾಗರಣಾ ವೇದಿಕೆ ಆಕ್ಷೇಪ

‘ಗಣೇಶ ಚತುರ್ಥಿಯ ಮೇಲಷ್ಟೇ ಸರ್ಕಾರ ನಿರ್ಬಂಧ ವಿಧಿಸುವುದು ಏಕೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

‘ಹಿಂದೂಗಳ ದೊಡ್ಡ ಹಬ್ಬಕ್ಕೆ ಸರ್ಕಾರ ಯಾವುದೇ ತಡೆ ಒಡ್ಡಬಾರದು. ತೊಂದರೆ ಕೊಟ್ಟರೆ ಬಿಜೆಪಿ ಹೋರಾಟ ಮಾಡಲಿದೆ’ ಎಂದು ಶಾಸಕ ಆರ್‌. ಅಶೋಕ ಎಚ್ಚರಿಸಿದ್ದಾರೆ.

‘ನೂರಾರು ವರ್ಷಗಳಿಂದ ಗಣೇಶೋತ್ಸವವು ನಿರಾತಂಕ ನಡೆದುಕೊಂಡು ಬರುತ್ತಿದೆ. ಈ ಧಾರ್ಮಿಕ ಉತ್ಸವವನ್ನು ರಾಷ್ಟ್ರೀಯ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದ್ದು, ಇದರ ಮೂಲ ಉದ್ದೇಶ ಅರ್ಥ ಮಾಡಿಕೊಳ್ಳ
ದವರು ಹಿಂದೂ ವಿರೋಧಿ ಅಧಿಕಾರಶಾಹಿಗಳು’ ಎಂದು ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಹೊನ್ನವಳ್ಳಿ ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಧ್ವನಿವರ್ಧಕ ಅಳವಡಿಸಬಾರದು, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು, ಪಟಾಕಿಗೆ ಅವಕಾಶ ನೀಡಬಾರದು. ಮೆರವಣಿಗೆ ನಿಷೇಧಿಸೇಬೇಕು ಎಂಬುದನ್ನು ಕೂಡಲೇ ಹಿಂಪಡೆಯಬೇಕು’ ಎಂದರು.

ಪ್ರಮುಖ ಸುದ್ದಿಗಳು