ಬೆಲೆ ಏರಿಕೆಯಲ್ಲೂ ಕುಗ್ಗದ ಉತ್ಸಾಹ

ಚಾಮರಾಜನಗರ: ಗೌರಿ–ಗಣೇಶ ಹಬ್ಬಕ್ಕೆ ಹೂವು ಸೇರಿದಂತೆ ಕೆಲವು ವಸ್ತುಗಳ ಬೆಲೆ ಹೆಚ್ಚಳವಾದರೂ ಜನರಲ್ಲಿ ಖರೀದಿ ಉತ್ಸಾಹ ಕುಗ್ಗಲಿಲ್ಲ.

ಪಟ್ಟಣದ ಪ್ರಮುಖ ಬೀದಿಗಳಾದ ದೊಡ್ಡ ಅಂಗಡಿ, ಚಿಕ್ಕ ಅಂಗಡಿ, ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಅಕ್ಕ ಪಕ್ಕ ಇರುವಂತಹ ಬಟ್ಟೆ ಅಂಗಡಿ, ಬ್ಯಾಂಗಲ್‌ ಸ್ಟೋರ್‌ ಹಾಗೂ ಇತರೆ ಮಳಿಗೆಗಳಲ್ಲಿ ಬುಧವಾರ ಜನ ಸಂದಣಿ ಹೆಚ್ಚಿತ್ತು.

ಮಹಿಳೆಯರು ಬಳೆಗಳ ಖರೀದಿಯಲ್ಲಿ ತೊಡಗಿದ್ದರೆ, ಹುಡುಗರು ತಾವು ಪ್ರತಿಷ್ಠಾಪಿಸುವ ಗಣೇಶನಿಗೆ ಅಲಂಕಾರ ಮಾಡಲು ಲೈಟಿಂಗ್ಸ್‌ ಸರ, ವಿವಿಧ ಬಣ್ಣಗಳ ಕಾಗದಗಳು ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವ ದೃಶ್ಯ ಕಂಡುಬಂತು.

ಬಗೆ ಬಗೆಯ ಗಣಪ: ಗಣಪತಿ ಮೂರ್ತಿಯನ್ನು ಇನ್ನಷ್ಟು ಆಕರ್ಷಕವನ್ನಾಗಿಸಲು ತಯಾರಕರು ಅವುಗಳಿಗೆ ವಿವಿಧ ರೂಪಗಳನ್ನು ನೀಡಿದ್ದಾರೆ. ಭಿನ್ನ ಭಿನ್ನ ವಾಹನಗಳಲ್ಲಿ ಗಣಪನನ್ನು ಕುಳ್ಳಿರಿಸಿದ್ದಾರೆ. ಸಿಂಹ, ಬಸವ, ತಾವರೆ ಹೂವಿನ ಮೇಲೆ, ಗೌರಿಯೊಂದಿಗೆ, ಪರಮೇಶ್ವರನೊಂದಿಗೆ ಹಾಗೂ ಲಿಂಗದೊಂದಿಗೆ ಆನೆ ಮೇಲೆ ಕುಳಿತಿರುವ ಗಣಪನ ಮೂರ್ತಿಗಳು ಜನರನ್ನು ಮಳಿಗೆಯತ್ತ ಸೆಳೆಯುತ್ತಿವೆ.

₹50ರಿಂದ ₹5000ದವರೆಗೆ: ಅರ್ಧ ಅಡಿ ಉದ್ದದ ಚಿಕ್ಕ ಗಣಪತಿ ಮೂರ್ತಿಗೆ ₹50 ದರ ಇದೆ. ಸುಮಾರು 5 ಅಡಿ ಮೂರ್ತಿಗೆ ₹4,000ರಿಂದ ₹5,000 ವರೆಗೆ ಬೆಲೆ ಇದೆ.

ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ: ಈ ಬಾರಿ ಪರಿಸರ ಸ್ನೇಹಿ ಗಣೇಶನ ಮೂರ್ತಿಗೆ ಹೆಚ್ಚು ಬೇಡಿಕೆ ಕಂಡು ಬಂದಿದೆ.

‘ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಕಾರಾಗೃಹ ಕಟ್ಟಡದ ಹಿಂಭಾಗ ಮೂರ್ತಿಗಳನ್ನು ತಯಾರಿಸಿ ಪಟ್ಟಣದ ಹೃದಯ ಭಾಗದಲ್ಲಿ ಮಾರಾಟ ಮಾಡುತ್ತೇವೆ. ಹಬ್ಬದ ಎರಡು ದಿನ ಮಾತ್ರವೇ ವ್ಯಾಪಾರ ನಡೆಯುತ್ತದೆ. ಮಾರಾಟ ಮಾಡಿ ಉಳಿದ ಮೂರ್ತಿಗಳನ್ನು ವಾಪಸ್‌ ತೆಗೆದುಕೊಂಡು ಹೋಗುತ್ತೇವೆ. ನಮ್ಮದು ಜೇಡಿಮಣ್ಣಿನಿಂದ ಮಾಡಿದ ಪರಿಸರಸ್ನೇಹಿ ಮೂರ್ತಿಗಳು’ ಎಂದು ಗಣೇಶ ಮೂರ್ತಿ ತಯಾರಕ ಹಾಗೂ ಮಾರಾಟಗಾರ ಸಿದ್ದಪ್ಪಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹೂವು, ಮಡಕೆಗಳಿಗೆ ಬೇಡಿಕೆ: ಗಣಪತಿ ಮೂರ್ತಿಗೆ ಹೂವಿನಿಂದ ಅಲಂಕಾರ ಮಾಡುವುದರಿಂದ ಹೂವಿಗೆ ಹೆಚ್ಚು ಬೇಡಿಕೆ ಇದೆ. ಇದರಿಂದ ದರ ದುಪ್ಪಟ್ಟು ಹೆಚ್ಚಾಗಿದೆ. ಕನಕಾಂಬರ (ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ) ₹ 1,000, ಸುಗಂಧ ರಾಜ ಹಾಗೂ ಮೊಳ್ಳೆ ಹೂವು ₹500, ಸೇವಂತಿಗೆ ₹100ರಿಂದ 200, ಮಲ್ಲಿಗೆ ₹800, ಚೆಂಡು ಹೂವು ₹60, ಸೇವಂತಿ ₹300 ಧಾರಣೆ ಇದ್ದರೆ, ಸುಗಂಧ ರಾಜ ಹಾರಕ್ಕೆ ₹ 120, ಗುಲಾಬಿ ಹಾರ ₹300ರಿಂದ ₹500, ಚಿಕ್ಕ ಹಾರಗಳಿಗೆ ₹50 ದರ ಇದೆ.

ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬಳಕೆ ಮಾಡುವ ಮಡಕೆಗಳಿಗೆ ಹೆಚ್ಚು ಬೇಡಿಕೆ ಇತ್ತು. ಗೌರಿ ಹಬ್ಬದ ದಿನ ಹೊಸ ಮಡಕೆಯಲ್ಲಿ ಅಡುಗೆ ಮಾಡುವ ಸಂಪ್ರದಾಯ ಇದೆ. ಚಿಕ್ಕ ಮಡಕೆಗಳು ₹30ರಿಂದ ಆರಂಭವಾಗಿ ದೊಡ್ಡ ಮಡಕೆಗೆ ₹50 ಬೆಲೆ ಇದೆ. ಉಳಿದಂತೆ ದೀಪ, ದೂಪದ ಆರತಿ ಬಟ್ಟಲುಗಳು ₹5ರಿಂದ ₹30ರವರೆಗೆ ಮಾರಾಟವಾಗುತ್ತಿದ್ದವು.

ರಸ್ತೆ ಬದಿ ವ್ಯಾಪಾರ ಜೋರು

ಹಬ್ಬದ ದಿನಗಳಲ್ಲಿ ರಸ್ತೆ ಬದಿಯಲ್ಲೇ ವ್ಯಾಪಾರ ಹೆಚ್ಚು ನಡೆಯುತ್ತದೆ. ಹಬ್ಬದ ಸಂದರ್ಭಕ್ಕೆ ಮಾತ್ರ ಅಗತ್ಯವಿರುವ ವಸ್ತುಗಳನ್ನು ತಳ್ಳುಗಾಡಿ ಹಾಗೂ ರಸ್ತೆ ಬದಿಯಲ್ಲಿ ವ್ಯಾಪಾರಸ್ಥರು ಮಾರಾಟ ಮಾಡುವುದರಿಂದ ಅವರ ಬಳಿ ಹೆಚ್ಚು ಜನರು ಹೋಗುತ್ತಾರೆ. ಇಲ್ಲಿ ಚೌಕಾಸಿಯೂ ಹೆಚ್ಚಿರುತ್ತದೆ. 

‘ಎರಡು ದಿನ ವ್ಯಾಪಾರ ಮಾಡಿ ಹೋಗುತ್ತೇವೆ. ಹೀಗಾಗಿ, ಸ್ವಲ್ಪ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ. ಕೆಲ ವಸ್ತುಗಳಲ್ಲಿ ಲಾಭವಾದರೆ ಇನ್ನು ಕೆಲವು ವಸ್ತುಗಳಲ್ಲಿ ನಷ್ಟ ಆಗುತ್ತದೆ’ ಎಂದು ತಳ್ಳುಗಾಡಿಯಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸೋಮಪ್ಪ ಹೇಳಿದರು.

 

ಪ್ರಮುಖ ಸುದ್ದಿಗಳು