ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ‘ಮೋದಿ ಗ್ಯಾರಂಟಿ’: ಅಮಿತ್‌ ಶಾ

ಈ ದೇಶದ ಆಡಳಿತ ಷರಿಯಾ ಕಾನೂನಿನಂತೆ ನಡೆಯಬೇಕೇ: ಗೃಹ ಸಚಿವ ಪ್ರಶ್ನೆ
Published 26 ಏಪ್ರಿಲ್ 2024, 13:17 IST
Last Updated 26 ಏಪ್ರಿಲ್ 2024, 13:17 IST
ಅಕ್ಷರ ಗಾತ್ರ

ಗುನಾ (ಮಧ್ಯಪ್ರದೇಶ): ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯು ದೇಶದಲ್ಲಿ ಧರ್ಮಾಧಾರಿತ ವೈಯಕ್ತಿಕ ಕಾನೂನನ್ನು ಉಳಿಸಿಕೊಳ್ಳುವ ಭರವಸೆ ನೀಡಿದರೆ, ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವುದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ‘ಗ್ಯಾರಂಟಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ದೇಶದ ಸಂಪನ್ಮೂಲಗಳಿಗೆ ಮುಸ್ಲಿಮರು ಮೊದಲ ಹಕ್ಕುದಾರರು ಎಂದು ಕಾಂಗ್ರೆಸ್‌ ಹೇಳುತ್ತದೆ. ಆದರೆ ಬಿಜೆಪಿ ಹೇಳುವಂತೆ ಸಂಪನ್ಮೂಲದ ಹಕ್ಕು ಇರುವುದು ಬಡವರು, ದಲಿತರು, ಇತರೆ ಹಿಂದುಳಿದ ವರ್ಗದವರು ಮತ್ತು ಬುಡಕಟ್ಟು ಜನರಿಗೆ’ ಎಂದು ಪ್ರತಿಪಾದಿಸಿದರು. 

‘ಕಾಂಗ್ರೆಸ್ ಪ್ರಣಾಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿರಿ. ವೈಯಕ್ತಿಕ ಕಾನೂನು, ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ತ್ರಿವಳಿ ತಲಾಖ್ ಮತ್ತೆ ಜಾರಿಮಾಡುವುದಾಗಿ ಹೇಳುತ್ತಿದೆ. ಈ ದೇಶವು ಷರಿಯಾ ಕಾನೂನಿನಂತೆ (ಇಸ್ಲಾಮಿಕ್‌ ಕಾನೂನು) ನಡೆಯಬೇಕೇ’ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, ‘ರಾಹುಲ್ ಅವರೇ, ತುಷ್ಟೀಕರಣಕ್ಕಾಗಿ ನಿಮಗೆ ಅನಿಸಿದ್ದೆಲ್ಲವನ್ನೂ ಮಾಡಿ. ಬಿಜೆಪಿ ಇರುವವರೆಗೂ ನಿಮಗೆ ಯಾವುದೇ ವೈಯಕ್ತಿಕ ಕಾನೂನು ಜಾರಿಗೆ ತರಲು ಸಾಧ್ಯವಿಲ್ಲ. ಈ ದೇಶವು ಯುಸಿಸಿ ಮತ್ತು ಸಂವಿಧಾನದ ಪ್ರಕಾರ ನಡೆಯುತ್ತದೆ. ಇದು ನಮ್ಮ ಸಂವಿಧಾನದ ಸ್ಫೂರ್ತಿಯೂ ಹೌದು. ಉತ್ತರಾಖಂಡದಲ್ಲಿ ಯುಸಿಸಿಯನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಅದನ್ನು ಇಡೀ ದೇಶದಲ್ಲಿ ಜಾರಿಗೊಳಿಸುವುದು ಬಿಜೆಪಿ ಮತ್ತು ಮೋದಿ ಅವರ ಭರವಸೆ’ ಎಂದರು.

‘ವೋಟ್‌ ಬ್ಯಾಂಕ್‌ಗಾಗಿ ರಾಮಮಂದಿರ ಕಡೆಗಣನೆ’

‘ರಾಹುಲ್‌ ಗಾಂಧಿ ಮತ್ತು ದಿಗ್ವಿಜಯ ಸಿಂಗ್ ಅವರು ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳದೇ ಇರುವುದಕ್ಕೆ ವೋಟ್‌ಬ್ಯಾಂಕ್‌ ರಾಜಕಾರಣ ಕಾರಣ. ಆದ್ದರಿಂದ ಅವರನ್ನು ಎಂದಿಗೂ ಕ್ಷಮಿಸಬಾರದು’ ಎಂದು ರಾಜಗಢದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಶಾ ಹೇಳಿದರು. ಕಾಂಗ್ರೆಸ್‌ ಪಕ್ಷವು ರಾಮಮಂದಿರ ನಿರ್ಮಾಣವನ್ನು 70 ವರ್ಷಗಳ ಕಾಲ ಕಡೆಗಣಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣ ಸಾಕಾರಗೊಳಿಸಿದರು ಎಂದರು.

ಮೀಸಲಾತಿ ಕಿತ್ತುಕೊಳ್ಳಲು ಬಿಡಲ್ಲ: ಮೋದಿ

ಮುಂಗೆರ್‌ (ಬಿಹಾರ) (ಪಿಟಿಐ): ‘ಎಸ್‌ಸಿ ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯನ್ನು ಕಸಿಯಲು ಬಿಜೆಪಿ ಅವಕಾಶ ನೀಡುವುದಿಲ್ಲ. ಇದು ಮೋದಿ ಅವರ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. ‘ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷವು ಒಬಿಸಿ ಮೀಸಲಾತಿ ಕಡಿತಗೊಳಿಸಿ ಅದರ ಲಾಭವನ್ನು ಮುಸ್ಲಿಮರಿಗೆ ವರ್ಗಾಯಿಸಿದೆ. ಅದೇ ‘ಪಿತೂರಿ’ಯನ್ನು ದೇಶದಾದ್ಯಂತ ನಡೆಸಲು ಬಯಸಿದೆ’ ಎಂಬ ಆರೋಪವನ್ನು ಪುನರುಚ್ಚರಿಸಿದರು.  ‘ಹಿಂದುಳಿದ ವರ್ಗದವರು ಎದುರಿಸುತ್ತಿರುವ ಕಷ್ಟ ಏನೆಂಬುದು ಒಬ್ಬ ಒಬಿಸಿಯಾಗಿರುವ ನನಗೆ ಗೊತ್ತು. ಭವಿಷ್ಯದಲ್ಲಿ ಅವರು ಎಸ್‌ಸಿ ಮತ್ತು ಎಸ್‌ಟಿಗಳ ಮೀಸಲಾತಿಯನ್ನೂ ಕಸಿಯಲು ಮುಂದಾಗುವರು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT