ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pandith Rajeev Taranath: ಪರ್ವತದಾಚೆಯ ಬಯಲು

Published 4 ನವೆಂಬರ್ 2023, 23:30 IST
Last Updated 4 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಕಳೆದ ವರ್ಷ ಪಂಡಿತ್ ರಾಜೀವ ತಾರಾನಾಥರಿಗೆ 90 ವರ್ಷ ತುಂಬಿದಾಗ ಮಾಧ್ಯಮಮಿತ್ರರೊಬ್ಬರು ಕೇಳಿದ ಪ್ರಶ್ನೆ: ‘90ರ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡುವಾಗ ನಿಮಗೆ ಏನನಿಸುತ್ತಿದೆ?’   ಉತ್ತರ: ‘ಹಿಂದಿರುಗಿ ನೋಡುವ ಜಾಯಮಾನದವನಲ್ಲ ನಾನು. ಮುಂದೆ ನೋಡುವವನು. ನಾಳೆ ಬೆಳಿಗ್ಗೆ ಏನು ರಿಯಾಜ್ ಮಾಡಬೇಕೆಂದು ಯೋಚಿಸುವವನು. ನನ್ನ ಗುರು ಉಸ್ತಾದ್ ಅಲಿ ಅಕ್ಬರ್‌ಖಾನ್‌ ಕಲಿಸಿರುವ ಮೇರುಸಂಗೀತದ ಅಭ್ಯಾಸಕ್ಕೆ ಸಮಯವೇ ಸಾಲದಾಗಿದೆ’.‌

ತಾರಾನಾಥರ ಮಾತು ಅವರ ಗುರುಭಕ್ತಿಗೆ, ಸಂಗೀತ ಬದ್ಧತೆಗೆ, ಜೀವನಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಇದಾಗಿ ವರ್ಷ ಕಳೆದಿದೆ. ಅವರ ಸಂಗೀತ-ತಲ್ಲೀನತೆ, ಒಳನೋಟಗಳು ಇನ್ನೂ ಹರಿತಗೊಂಡಿವೆ, ಮುಳುಗುವಿಕೆ ಆಳವಾಗಿದೆ. ಅವರು ಪದೇಪದೇ ಧ್ಯಾನಿಸುವ ‘ಔತ್ತಮ್ಯದ ಸಾರ’ವನ್ನು ಕ್ಷಣಕ್ಷಣವೂ ಬದುಕಿನಲ್ಲಿ ಬಸಿದುಕೊಳ್ಳುವ ತಹತಹಿಕೆಯೊಂದಿಗೆ, ತಮ್ಮ ಸಂಗೀತಲೋಕದಲ್ಲಿ ಪಾಲ್ಗೊಳ್ಳುವ ಜನರ ಪ್ರೀತಿಗಾಗಿ ಸದಾ ಹಂಬಲಿಸುವ ಪಕ್ವಮನಸ್ಕರು ರಾಜೀವರು. ಮೇಲು–ಕೀಳು, ಜಾತಿ, ಜನಾಂಗ ಇಂಥ ಸಂಕುಚಿತ ತಾರತಮ್ಯಗಳನ್ನು ಲೆಕ್ಕಿಸದ, ಸುತ್ತಮುತ್ತಲ ಸಮಾಜೋ–ರಾಜಕೀಯ ಆಗುಹೋಗುಗಳಿಗೆ ಸ್ಪಂದಿಸುವ, ಸ್ವಸ್ಥ ಆಲೋಚನೆಯ ಕಲಾವಿದರೊಬ್ಬರ ಸಾಮೀಪ್ಯದ ಸೌಭಾಗ್ಯವೇ ನಮ್ಮ ಜೀವನದ ಮೌಲ್ಯವನ್ನು, ಸೊಗಸನ್ನು ಹೆಚ್ಚಿಸಿದೆ.

ಸಂಗೀತಕೋಣೆಯಲ್ಲಿ ತಂದೆ ಪಂಡಿತ ತಾರಾನಾಥ್, ಕಿರಾನಾ ಘರಾಣಾದ ಮೇರುಶಿಖರ ಉಸ್ತಾದ್ ಅಬ್ದುಲ್ ಕರೀಂಖಾನ್, ಗುರು ಅಲಿ ಅಕ್ಬರ್‌ಖಾನ್‌ ಭಾವಚಿತ್ರಗಳ ಶಾಂತ ಇರವಿನಲ್ಲಿ ಕೂತು ನುಡಿಸುವ ರಾಜೀವರು ಈಗಲೂ ಮಗುವಿನಂತೆ ಭಾಸವಾಗುತ್ತಾರೆ. ಇವರೆಲ್ಲರ ನೆರಳಿಗಿಂತ ಬದುಕಿಗಿನ್ನಾವ ರಕ್ಷೆ ಬೇಕು? ತಾರಾನಾಥರು ಸುಯೋಗಿ. ಖಾನ್‌ ಸಾಹೇಬರು ತಾಯಿಯ ಮಮತೆ ತೋರಿದರೆ, ಪಂಡಿತ್ ರವಿಶಂಕರ್ ತಂದೆಯ ಹಾಗೆ ಜಬರಿಸಿ ಪ್ರಶ್ನಿಸುವ ಆತ್ಮೀಯತೆಯಿಂದಲೇ, ಕೆಲಸ ಬಿಡುವಂತೆ ಸಕಾಲದಲ್ಲಿ ಬುದ್ಧಿಮಾತು ಹೇಳಿದರು. ತಾರಾನಾಥರು ಒಂದೇ ಮಾತಿನಲ್ಲಿ ‘ದೇವಿ ಎಂದು ಬಣ್ಣಿಸುವ ದಂತಕಥೆ ಅನ್ನಪೂರ್ಣಾದೇವಿ ಅಕ್ಕರೆ ತೋರಿ, ಸಂಗೀತವನ್ನೂ ಕಲಿಸಿದರು. ಇಷ್ಟು ಮಂದಿಯ ಕೂಡುನೆರಳು ಯಾರಿಗೆ ಲಭಿಸೀತು? ಈ ದಿಗ್ಗಜರೆಲ್ಲ ನಮ್ಮ ಭಾವಲೋಕಕ್ಕೆ ಹತ್ತಿರವಾಗಿದ್ದು ರಾಜೀವರ ಖುದ್ದು ಚಿತ್ರಣ-ಬಣ್ಣನೆಗಳ ಮೂಲಕವೇ, ಸಂಗೀತದ ಆಳ-ಅಗಲವನ್ನು ಭಾಷೆಯಲ್ಲಿ ಕಟ್ಟಿಹಾಕುತ್ತ, ಮಾತಿಗೆ ಸಂಗೀತಗುಣವನ್ನೂ ತರಬಲ್ಲ ನೈಪುಣ್ಯದಿಂದಲೇ.

ಸರೋದ್ ಸಂಗೀತದ ಬಗ್ಗೆ ಮಾತನಾಡುವಾಗ ಸಿತಾರಿನ ಬಗ್ಗೆ ಹೇಳಲೇಬೇಕು. ಮೈಹರ್ ಘರಾನಾದಲ್ಲಂತೂ ಅವೆರಡೂ ತಂತುವಾದ್ಯಗಳು ಅವಳಿ ಮಕ್ಕಳಂತೆ. ನಾದಶಾರದೆ ಅನ್ನಪೂರ್ಣಾದೇವಿ, ಸಿತಾರ್‌ನ ಎವರೆಸ್ಟ್ ಶಿಖರ ನಿಖಿಲ್ ಬ್ಯಾನರ್ಜಿ, ವಿಶ್ವಕ್ಕೆಲ್ಲ ಸಿತಾರ್ ಪರಿಚಯಿಸಿದ ರವಿಶಂಕರ್, ಸರೋದ್‌ ವಾದ್ಯನಾದ ಸಾಧ್ಯತೆಗಳನ್ನೆಲ್ಲ ಜಾಲಾಡಿದ, ರಾಗವೊಂದರ ವಿಶಿಷ್ಟ ದರ್ಶನಶಕ್ತಿ ಹೊಂದಿದ್ದ ‘ಶತಮಾನದ ಸಂಗೀತ ಪ್ರತಿಭೆ ಖಾನ್‌ ಸಾಹೇಬರು ಎಲ್ಲ ಒಂದೇ ಕುಟುಂಬದವರು. ಇವರಲ್ಲದೆ ವಯೋಲಿನ್, ಕೊಳಲು ಮುಂತಾದ ಕಲಾವಿದರಿದ್ದರು. ಹತ್ತು ಹಲವು ವಾದ್ಯಗಳಲ್ಲಿ ಪರಿಣತಿಯಿದ್ದ ‘ಬಾಬಾ’ ಅಲ್ಲಾವುದ್ದೀನ್‌ ಖಾನರು ತೆರೆದ ಮನಸ್ಸಿನಿಂದ ತಮ್ಮ ಮಕ್ಕಳೊಂದಿಗೆ ಈ ಎಲ್ಲ ಕಲಾತಪಸ್ವಿಗಳನ್ನು ಸಲಹಿದರು. ಇತರ ಕದಮುಚ್ಚಿದ ಘರಾಣಾಗಳಂತೆ ಸಂಗೀತವಿದ್ಯೆಯನ್ನು ಕುಟುಂಬಕ್ಕಾಗಿ ಬಚ್ಚಿಡಲಿಲ್ಲ. ಸಿತಾರ್-ಸರೋದ್ ಕುರಿತಂತೆ ಅಪ್ರತಿಮ ಪ್ರತಿಮೆಯೊಂದನ್ನು ರಾಜೀವರು ಒಮ್ಮೆ ಹಂಚಿಕೊಂಡರು. ಮನೆಗಳ ವಿಂಗಡನೆಯಿರುವ ಸಿತಾರ್‌ ಪಯಣ ಎಂದರೆ ಸಣ್ಣಸಣ್ಣ ಗುಡ್ಡಗಳನ್ನು ದಾಟಿ ಮುಂದುವರೆದಂತೆ. ಆದರೆ ಮನೆಗಳ ಹಂಗಿಲ್ಲದ ಸರೋದ್‌ಯಾನ ದೊಡ್ಡ ಪರ್ವತವನ್ನು ಹತ್ತಿ ಇಳಿದಂತೆ. ಅದರಾಚೆ ಎಲ್ಲ ಬಯಲು. ವಾಹ್!
ಝಲ್ಲೆನಿಸಿದ ಕ್ಷಣವದು. ವಚನಕಾರರ ಬಯಲು ದಕ್ಕಿಬಿಟ್ಟರೆ ಸಂಗೀತಗಾರನಿಗೆ ಪರಮ ಸೌಭಾಗ್ಯವಲ್ಲವೇ? ತಾರಾನಾಥರ ನೆಚ್ಚಿನ ಗೋಪಾಲಕೃಷ್ಣ ಅಡಿಗರ ಸಾಲು ‘ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ’, ತಬಲ ಬೋಲಿನಂತೆ ಜೊತೆಜೊತೆಯಲ್ಲೇ ಮನಸ್ಸನ್ನು ತಟ್ಟಿತು.‌

ತಾರಾನಾಥರು ನುಡಿಸಿದ ಮೊದಲರಾಗ ಕೀರವಾಣಿ (ಇದರರ್ಥ ಗಿಣಿಯ ದನಿ). ಹಿಂದೂಸ್ತಾನಿ ಪದ್ಧತಿಗೆ ಕರ್ನಾಟಕ ಸಂಗೀತದಿಂದ ಆಮದಾಗಿರುವ ಸಂಪೂರ್ಣರಾಗ. ಚಂಚಲ ಪ್ರಕೃತಿಯ ಕೀರವಾಣಿ ವಾದ್ಯಸಂಗೀತಕ್ಕೆ ಹೆಚ್ಚು ಸೂಕ್ತವೆನಿಸಿದೆ. ಗಾಢವಾದ ಕಿರು ಆಲಾಪ್, ನಂತರ ಮಧ್ಯಲಯದ, ಹತ್ತು ಮಾತ್ರೆಗಳ ಝಪ್ತಾಲ್‌ನ ಗತ್. ಅದರ ಚೌಕಟ್ಟಿನಲ್ಲೇ ಜೋಡ್, ಝಾಲಾಗಳನ್ನು ನುಡಿಸುತ್ತ, ಅದು ಹೊಮ್ಮಿಸುವ ನಾದವೈವಿಧ್ಯವನ್ನು ವಿಸ್ತರಿಸಿದರು. ಅದರಾಚೆ ವೇಗವಾಗಿ ಮತ್ತು ಅತಿವೇಗ ಗತಿಯಲ್ಲಿ ಬಂದ ಧೃತ್‌ಗಳು, 16 ಮಾತ್ರೆಗಳ ನಡೆಯಲ್ಲಿ ಕೀರವಾಣಿರಾಗದ ಚುರುಕು ಆಯಾಮವನ್ನು ತೋರಿದವು. ಭಾವತೀವ್ರತೆ ಸೂಸುವ ಘನವಾದ ಶುದ್ಧ ಭೈರವಿಯೊಂದಿಗೆ ತಾರಾನಾಥರು ತುಂಬುಸಭೆಗೆ ಪ್ರೀತಿಯಿಂದ ವಿದಾಯ ಹೇಳಿದರು. ಮಧ್ಯಲಯದ ಅದ್ಧಾತೀನ್‌ ತಾಲ್, ದೃತ್ತೀನ್‌ ತಾಲ್‌ಗತ್‌ಳೊಂದಿಗೆ ಮುಕ್ತಾಯಗೊಳಿಸಿದರು. ತಾರಾನಾಥರ ಬಲಗೈನ ರಭಸವಾದ ಬೋಲ್ಕಾರಿ, ಲಯಕಾರಿಯ ಚುರುಕುತನ,
ಕ್ಷಣಕ್ಷಣದ ಆಲೋಚನೆಯ ಓಟ, ಆಲಾಪದ ಮಾರ್ದವತೆ ತರುವ ತಾರುಣ್ಯ ಗುಣ... ಇವು ಯಾವುದಕ್ಕೂ ಮುಪ್ಪೆಂಬುದೇ ಇಲ್ಲ.

ಕಾರ್ಯಕ್ರಮದ ಇನ್ನೊಂದು ವಿಶೇಷ, ಜೋಡಿ ತಬಲಾ. ತಂದೆ ಪಂಡಿತ್ ಉದಯರಾಜ್ ಕರ್ಪೂರ್ ಜೊತೆಗೆ ತಬಲಾ ನುಡಿಸಿದ್ದು ಬಾಲತಪಸ್ವಿ ಪ್ರದ್ಯುಮ್ನ ಕರ್ಪೂರ್. ನಿಖರ ಬೋಲ್‌ಗಳು, ಸ್ಪಷ್ಟ ನಡೆ, ಜೊತೆಗೆ ಎಷ್ಟೋ ಘಟ್ಟಗಳಲ್ಲಿ, ಒಟ್ಟು ಪರಿಣಾಮ ಒಂದೇ ತಬಲಾನಾದದಂತೆ ಕೇಳಿಸುತ್ತಿತ್ತು ಎಂದರೆ, ಅದು ಬಾಲಪ್ರತಿಭೆಯ ಲಯಶುದ್ಧಿಗೆ ಹಿಡಿದ ಕನ್ನಡಿ. ತಾರಾನಾಥ್-ಉದಯರಾಜ್ ತಬಲಾ ಸಾಥ್, ಹಲವು ದಶಕಗಳಿಂದ ನಡೆದಿರುವ ಲಯವಿಚಾರ, ಲಯಕಾರಿಯ ಮಂಥನ. ಅಷ್ಟು ಮಾತ್ರವಲ್ಲ, ಸಾಥ್‌ ಸಂಗತ್ ಮೀರಿದ ನಾದಲಯ ಸಂಗಾತ. ರಾಜೀವರ ಲಯಕಾರಿ ಗುರುಗಳ ಹಾದಿಯನ್ನೇ ಅನುಸರಿಸುತ್ತದೆ. ಉದಯರಾಜ್ ಹೇಳುವಂತೆ, ‘ಅಲ್ಲಲ್ಲಿಯೇ ವಿನ್ಯಾಸಗಳನ್ನು ಸೃಷ್ಟಿಸುತ್ತ, ಆ ವಿನ್ಯಾಸಗಳಲ್ಲೇ ಮುಂದುವರಿದು, ಲೆಕ್ಕಾಚಾರ ಮಾಡುತ್ತ, ಮೂರು ಬಾರಿ ಮರುಕಳಿಸುವ ತಿಹಾಯಿಗಳನ್ನೂ ಸ್ಥಳದಲ್ಲೇ ಹುಟ್ಟುಹಾಕುತ್ತದೆ. ತಾರಾನಾಥರಲ್ಲಿ ಪೂರ್ವನಿಯೋಜಿತ ಲೆಕ್ಕಾಚಾರ ತೀರ ಕಡಿಮೆ. ಯಾವಾಗಲೂ ಹಾಗೆಯೇ. ಈ ಕಾರ್ಯಕ್ರಮದಲ್ಲಿ ತಾರಾನಾಥರ ನುಡಿಸುವಿಕೆಯ ವಿಶೇಷವೆಂದರೆ, ಉಪಜ್ ಅಂಗದ ಸಂಚಾರ. ಗತ್ಕಾರಿ (ಸಂಗೀತ ರಚನೆಯನ್ನು ಬಗೆಬಗೆಯಲ್ಲಿ ಚೆಂದಗೊಳಿಸುವುದು),
ಅನಾಗತ್ ಚಲನೆ (ಎಂದರೆ ನಿರ್ಧರಿತ ಸ್ಥಾನದಿಂದ ಆಚೀಚೆ ಉದ್ದೇಶಪೂರ್ವಕವಾಗಿ ಜರುಗಿ, ಲೆಕ್ಕದಲ್ಲಿ ಆಟವಾಡಿ ಮತ್ತೆ ಹಿಂದಿರುಗುವ ವೈಖರಿ), ಚೊಕ್ಕ ಸರಳ ಮುಕ್ತಾಯ, ತ್ರಿಶ್ರದಿಂದ ಚತುರಶ್ರಗತಿಗೆ ನಡೆ ಮತ್ತು ಅದರ ಪ್ರತಿಕ್ರಮ ಚಲನೆ. ಇವೆಲ್ಲ ಯಶಸ್ವಿಯಾಗಿ ನಿಭಾಯಿಸಿದ ರೀತಿ ಅಮೋಘವಾಗಿತ್ತು. ಕೆಳಗೆ ಕುಳಿತು ನುಡಿಸಿದ್ದು ಕೂಡ ಗ್ರೇಟ್’.

ಖಾನ್‌ ಸಾಹೇಬರು-ತಾರಾನಾಥರು ಜೋಡಿಯಾಗಿ ಎಷ್ಟೆಷ್ಟು ನಾದಲೋಕದಲ್ಲಿ ವಿಹರಿಸಿದ್ದಾರೋ, ಅವರೇ ಬಲ್ಲರು. ರಾಜೀವರು ತಮ್ಮ ಕೈಬೆರಳುಗಳಲ್ಲಿ ಗುರುಗಳನ್ನು ಆವಾಹಿಸಿಕೊಂಡು
ನಾದಲಹರಿಯನ್ನು ದಾಟಿಸುವ ಹೊತ್ತಿನಲ್ಲಿ, ಜೀವಂತಗೊಳ್ಳವುದು ಆ ವಿಹಾರದ ತುಣುಕುಗಳೇ.

ಸರೋದ್‌ನಲ್ಲಿ ಶಿಷ್ಯರಾದ ಸಚಿನ್ ಹಂಪೆ, ಅನುಪಮ್ ಜೋಷಿ ಮತ್ತು ಸಿತಾರ್‌ನಲ್ಲಿ ಅರಣ್ಯಕುಮಾರ್ ಗುರುಗಳೊಂದಿಗೆ ಜತೆಗೂಡಿದ್ದರು.

ಪಂಡಿತ್‌ ತಾರಾನಾಥ ಚಿತ್ರಗಳು: ಸಗ್ಗೆರೆ ರಾಧಾಕೃಷ್ಣ
ಪಂಡಿತ್‌ ತಾರಾನಾಥ ಚಿತ್ರಗಳು: ಸಗ್ಗೆರೆ ರಾಧಾಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT