ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ಗೋತ್ರಸ್ಕಂಧ

Published 31 ಮಾರ್ಚ್ 2024, 4:43 IST
Last Updated 31 ಮಾರ್ಚ್ 2024, 4:43 IST
ಅಕ್ಷರ ಗಾತ್ರ

ಗೋತ್ರಸ್ಕಂಧ

ಗೋತ್ರಸ್ಕಂಧ (ನಾ). ಬೆಟ್ಟದ ತುದಿ

(ಗೋತ್ರ + ಸ್ಕಂಧ)

ಭರತನು ಚಿತ್ರಕೂಟಕ್ಕೆ ತಾಯಿಯರು ಹಾಗೂ ಪರಿವಾರದೊಡನೆ ಬಂದು ರಾಮಚಂದ್ರನ ಪಾದುಕೆಗಳನ್ನು ಪಡೆಯುವನು. ಅವನು ಅವರೆಲ್ಲರೊಡನೆ ಅಯೋಧ್ಯಾ ನಗರಾಭಿಮುಖವಾಗಿ ಹಿಂದಿರುಗುವನು. ಆಗ ಅವರನ್ನು ರಾಮ ಸೀತೆ ಲಕ್ಷ್ಮಣರು ಮುನಿಸಂಕುಲದೊಡನೆ ಬೆಟ್ಟದ ತುದಿಯಲ್ಲಿ ನಿಂತು ಕಣ್ಣಿನ ದೃಷ್ಟಿ ಮುಟ್ಟುವವರೆಗೂ ನೋಡುವರು. ಅವರು ನಿಂತ ಬೆಟ್ಟದ ತುದಿಯನ್ನು ಕುವೆಂಪು ಅವರು ‘ಗೋತ್ರ ಸ್ಕಂಧ’ ಎನ್ನುವ ಹೊಸ ಪದದಿಂದ ಚಿತ್ರಿಸಿದ್ದಾರೆ.

ಗೋತ್ರಸ್ಕಂಧಮಂ ಮೆಟ್ಟಿ, ಕಣ್ದಿಟ್ಟಿ

ಮುಟ್ಟುವನ್ನೆಗಮಟ್ಟಿ ನೋಡುತಿರೆ ಸೌಮಿತ್ರಿ ಮೇಣ್

ರಾಮಸೀತೆಯರೊಡನೆ ನಿಂದ ಮುನಿಸಂಕುಲಂ;

ಭರತವಾಹಿನಿ ದಾಂಟಿದತ್ತು ಮಂದಾಕಿನಿಯ

ವಾಹಮಂ.

ಚೆಂದೊಂಗಲ್ಚೆಂ

ದೊಂಗಲ್ (ನಾ). ಕೆಂಪಾದ ಗೊಂಚಲು, ಚಿಗುರಿನ ಗೊಂಚಲು (ಚೆಂ + ತೊಂಗಲ್)

ಸೀತಾ ಫಲದ ಬಯಕೆಯಿಂದ ರಘುಕುಲ ಸೂರ್ಯನಾದ ರಾಮಚಂದ್ರನು ತನ್ನ ಬಿಳಿಯಾನೆ ಸೊಂಡಿಲಿನಂತಹ ನೀಳ ತೋಳಿನಿಂದ ಕಲ್ಪವೃಕ್ಷ ಸಮನಾದ ಶಿವಧನುಸ್ಸನ್ನು ಹಿಡಿದು ಅಲುಗಾಡಿಸಿದ ಎಂದು ಕವಿ ವರ್ಣಿಸಿದ್ದಾರೆ. ಅದಕ್ಕೂ ಮೊದಲು ಅವರು ಆ ತೋಳುಗಳನ್ನು ಇಂದ್ರನ ಐರಾವತದ ಸೊಂಡಿಲಿನಂತೆ ಬಲಯುತವಾಗಿತ್ತು ಎಂದು ಹೇಳಲು ಐರಾವತದ ಚಿತ್ರಣ ನೀಡಿದ್ದಾರೆ.

ಆ ಐರಾವತಕ್ಕೆ ಅಗ್ನಿಯು ತನ್ನ ಅಂಗಳದ ಮಾಂದಳಿರ ‘ಚೆಂದೊಂಗಲ’ನ್ನು ನೀಡಿದ ಎಂದು ಬಣ್ಣಿಸಿದ್ದಾರೆ. ಅಗ್ನಿಯ ಕೆಂಪು, ಮಾವಿನ ಚಿಗುರ ಕೆಂಪು ‘ಚೆಂದೊಂಗಲ್’ ಪದದಲ್ಲಿ ಪ್ರತಿಫಲಿಸಿದೆ!

ಅಗ್ನಿ ನೀಡಿದನಲ್ತೆ

ತನ್ನಂಗಳದ ಮರದ ಮಾಂದಳಿರ ಚೆಂದೊಂಗಲಂ?

ಛಾಯಾಶರೀರ

ಛಾಯಾಶರೀರ (ನಾ). 1. ದೇಹದ ನೆಳಲು. 2. (ಆಲಂ) ನೆರಳಿನಂತೆ ಯಾವಾಗಲೂ ಅನುಸರಿಸುವವನು.

[ಸಂ. (ಛಾಯಾ + ಶರೀರ)]

ಕುವೆಂಪು ಅವರು ಭರತ ಮತ್ತು ಶತ್ರುಘ್ನರ ಸಹೋದರತ್ವವನ್ನು ಚಿತ್ರಿಸುವಾಗ ‘ಛಾಯಾಶರೀರ’ ಎಂಬ ಪದ ಬಳಸಿದ್ದಾರೆ. ಭರತನನ್ನು ಶತ್ರುಘ್ನನು ನೆರಳಿನಂತೆ ಅನುಸರಿಸುತ್ತಿದ್ದನು ಎಂದು ಆ ಪದವನ್ನು ಆಲಂಕಾರಿಕವಾಗಿ ಪ್ರಯೋಗಿಸಿದ್ದಾರೆ

ಬಾಲಋಷಿ ಭರತನಿಗೆ ಮತ್ತು ರಾಜ್ಯಕ್ಕೆ ರಕ್ಷಣೆಯಾಗಿದ್ದವನು ಶತ್ರುಘ್ನ. ಕವಿ ‘ನಾಮ ಲಕ್ಷ್ಯಕ್ಕೆ ಲಕ್ಷಣಂ ತಾನೆನಲ್’ ಎಂದು ಅವನ ಹೆಸರಿನ ವಿಶಿಷ್ಟ ಗುಣವನ್ನು ತಿಳಿಸಿದ್ದಾರೆ.

ಭರತಂಗೆ

ಛಾಯಾ ಶರೀರವೆನೆ ಶತ್ರುಘ್ನನಿರ್ದನು ತನ್ನ

ನಾಮ ಲಕ್ಷ್ಯಕ್ಕೆ ಲಕ್ಷಣಂ ತಾನೆನಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT