ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುರ ಧ್ವನಿ ಮನ್ನಾ ಡೇ

Last Updated 25 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಹಿಂದಿ ಚಿತ್ರರಂಗದ ಜನಪ್ರಿಯ ಗಾಯಕರಾಗಿದ್ದ ಮನ್ನಾ ಡೇ, ಕನ್ನಡ ಸಿನಿಮಾಗಳಲ್ಲೂ ಒಟ್ಟು ಆರು ಹಾಡುಗಳನ್ನು ಹಾಡಿದವರು. 1964ರಲ್ಲಿ ತೆರೆಗೆ ಬಂದ ‘ಕಲಾವತಿ’ ಚಿತ್ರದಲ್ಲಿ ಅವರ ಮೊದಲ ಕನ್ನಡ ಹಾಡು ‘ಕುಹು ಕುಹೂ... ಕುಹು ಕುಹೂ’ ಎಂದು ಆರಂಭವಾಗಿ ‘ಕಿನ್ನರ ಕಂಠದ ಕೋಗಿಲೆಯೇ..’ ಎಂದು ಮುಂದುವರಿಯುತ್ತದೆ. 1966ರಲ್ಲಿ ‘ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ‘ಜಗವಿದು ಸೋಜಿಗ...’ ಮತ್ತು ‘ನೀರೆ ನೀನು.. ಬಾರೆ ಬೇಗ...’ ಹಾಡುಗಳು; 1968ರಲ್ಲಿ ‘ಮಾರ್ಗದರ್ಶಿ’ ಚಿತ್ರದಲ್ಲಿ ‘ಹಿಡೀ ಮಣ್ಣಿನಲ್ಲಿ ಕಾಯ...’ ಮತ್ತು ‘ಕಣ್ಣಿಲ್ಲದೇನು.. ನಿಜ ಕಾಣದೇನು...’; 1969ರಲ್ಲಿ ‘ಕಲ್ಪವೃಕ್ಷ’ ಚಿತ್ರದಲ್ಲಿ ‘ಜಯತೆ ಜಯತೆ ಸತ್ಯಮೇವ ಜಯತೇ...’ ಹಾಡುಗಳು ಅವರ ಮಧುರ ಕಂಠದಲ್ಲಿ ಕನ್ನಡಿಗರನ್ನು ರಂಜಿಸಿದವು. ಈ ಹಾಡುಗಳಲ್ಲಿ ‘ಕುಹು ಕುಹೂ...’ ಮತ್ತು ‘ಜಯತೇ ಜಯತೇ’ ಹಾಡುಗಳು ತುಂಬ ಜನಪ್ರಿಯವಾಗಿದ್ದವು.

ಮನ್ನಾ ಡೇ ಅವರ ನಿಜ ನಾಮಧೇಯ ಪ್ರಭೋದ ಚಂದ್ರ ಡೇ. ತಂದೆ ಪೂರ್ಣಚಂದ್ರ ಡೇ, ತಾಯಿ ಮಹಾಮಾಯಾ ಚಂದ್ರ ಡೇ. ಕಾರ್ಮಿಕರ ದಿನ ಎಂದು ವಿಶ್ವವಿಡೀ ಆಚರಿಸುವ ಮೇ 1ರಂದೇ ಅವರು ಹುಟ್ಟಿದ್ದು. ಇವರ ಚಿಕ್ಕಪ್ಪ ಕೆ.ಸಿ.ಡೇ ಗಾಯಕ ಹಾಗೂ ಸಂಗೀತ ನಿರ್ದೇಶಕರಾಗಿದ್ದರು.

ಅವರು ಬಾಲ್ಯದಲ್ಲೇ ಚಿಕ್ಕಪ್ಪನಿಂದ ಹಿಂದುಸ್ತಾನಿ ಸಂಗೀತ ಕಲಿತು, 10ನೇ ವಯಸ್ಸಿಗೇ ಮೊದಲ ಕಛೇರಿಯನ್ನೂ ನೀಡಿದವರು. ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಉಸ್ತಾದ್‌ ದಬೀರ್‌ ಖಾನ್‌ ಅವರಲ್ಲಿ ಸಂಗೀತ ಮತ್ತು ಹಾರ್ಮೋನಿಯಂ ಅಭ್ಯಾಸ ಮಾಡಿದರು. ಕೋಲ್ಕತ್ತದ ವಿದ್ಯಾಸಾಗರ್‌ ಕಾಲೇಜಿನಲ್ಲಿದ್ದಾಗ ಕುಸ್ತಿ ಮತ್ತು ಬಾಕ್ಸಿಂಗ್‌ ಪಟುವೂ ಆಗಿದ್ದರು.

1940ರ ಸುಮಾರಿಗೆ ಕೆ.ಸಿ.ಡೇ ಅವರು ಮುಂಬೈಗೆ ಬಂದು ಹಿಂದಿ ಚಿತ್ರಗಳಿಗೆ ಸಂಗೀತ ನೀಡಲು ಆರಂಭಿಸಿದರು. ಮನ್ನಾ ಡೇ ಸಹಾಯಕರಾದರು. ಎರಡು ವರ್ಷಗಳ ಬಳಿಕ ಕೆ.ಸಿ.ಡೇ ಸಂಗೀತ ನೀಡಿದ ‘ತಮನ್ನಾ’ ಚಿತ್ರದಲ್ಲಿ ಮನ್ನಾ ಡೇಗೆ ಹಾಡಲು ಅವಕಾಶ ಸಿಕ್ಕಿತು. ‘ಜಾಗೋ ಆಯೀ ಉಷಾ.. ಪಂಚೀ ಬೋಲೇ ಜಾಗೊ’ ಎಂಬ ಹಾಡಿಗೆ ಮನ್ನಾ ಡೇ ಜೊತೆಗೆ ಧ್ವನಿಗೂಡಿಸಿದ್ದು, ಆಗಿನ ಜನಪ್ರಿಯ ನಾಯಕಿ, ಗಾಯಕಿ ಸುರೈಯಾ!

1943ರಲ್ಲಿ ‘ರಾಮರಾಜ್ಯ’ ಎನ್ನುವ ಸಿನಿಮಾ ತಯಾರಿಯಲ್ಲಿದ್ದಾಗ ಅದರ ನಿರ್ಮಾಪಕ ವಿಜಯ ಭಟ್‌ ಮತ್ತು ಸಂಗೀತ ನಿರ್ದೇಶಕ ಶಂಕರ್‌ರಾವ್ ವ್ಯಾಸ್‌ ಕೆ.ಸಿ.ರೇ ಅವರ ಬಳಿಗೆ ತಮ್ಮ ಚಿತ್ರಕ್ಕೆ ಹಾಡಬೇಕು ಎಂದು ಕೇಳಿದರು. ಆದರೆ, ಕೆ.ಸಿ.ರೇ, ‘ಬೇರೆ ಸಂಗೀತ ನಿರ್ದೇಶಕರ ಚಿತ್ರದಲ್ಲಿ ನಾನು ಹಾಡುವುದಿಲ್ಲ’ ಎಂದು ನಿರಾಕರಿಸಿದರು.

ಅಲ್ಲೇ ಮೂಲೆಯಲ್ಲಿ ಕುಳಿತು ಹಾಡು ಗುನುಗುತ್ತಿದ್ದ ಮನ್ನಾ ಡೇ ಅವರ ಕಣ್ಣಿಗೆ ಬಿದ್ದರು. ಹಾಗೆ ‘ರಾಮರಾಜ್ಯ’ಕ್ಕೆ ಮನ್ನಾ ಡೇ ಹಾಡಿದ ‘ಗಯೀ ತೊ ಗಯೀ ಸೀತಾಪತಿ’ ಎನ್ನುವ ಹಾಡು ಜನಪ್ರಿಯವಾಯಿತು.

1944ರಲ್ಲಿ ‘ಓ ಪ್ರೇಮ್‌ ದೀವಾನೇ.. ಸಂಭಾಲ್‌ ಕೆ ಚಲೋ...’ (ಚಿತ್ರ: ಕಾದಂಬರಿ, ಸಂಗೀತ: ಅನಿಲ್‌ ಬಿಶ್ವಾಸ್‌), 1946ರಲ್ಲಿ ಗಾಯಕಿ ಅಮೀರ್‌ಬಾಯಿ ಕರ್ನಾಟಕಿ ಜೊತೆಗೆ ಹಾಡಿದ ‘ಏ ದುನಿಮಾ ಜರಾ ಸುನೇ...’ (ಚಿತ್ರ: ಕಮಲಾ) ಅದೇ ವರ್ಷ ಮೀನಾ ಕಪೂರ್‌ ಜೊತೆ ಹಾಡಿದ ‘ಆಜ್‌ ಬೋರ್‌ ಆಯೀ’ (ಚಿತ್ರ: ಚಲ್ತೇ ಚಲ್ತೇ, ಸಂಗೀತ: ಖೇಮ್‌ಚಂದ್ ಪ್ರಕಾಶ್‌) ಹಾಡುಗಳು ಜನಪ್ರಿಯತೆಯನ್ನು ಹೆಚ್ಚಿಸಿದವು. 1950ರಲ್ಲಿ ‘ಮಶಾಲ್‌’ ಚಿತ್ರದಲ್ಲಿ ಎಸ್‌.ಡಿ. ಬರ್ಮನ್‌ ಸಂಗೀತ ನಿರ್ದೇಶನದಲ್ಲಿ ‘ಊಪರ್‌ ಗಗನ್ ವಿಶಾಲ್‌’ ಹಾಡಿದ ಬಳಿಕ ಬರ್ಮನ್‌ ಅವರಿಗೆ ಸಹಾಯಕರಾಗಿಯೂ ಕೆಲಸ ಮಾಡಿದರು.

ಮನ್ನಾ ಡೇ ‘ಚಮ್‌ಕೀ’, ‘ಶಿವಕನ್ಯಾ’, ‘ನೈನಾ’, ‘ಶುಕರಂಭಾ’ ಮುಂತಾದ ಹಲವು ಚಿತ್ರಗಳಿಗೆ ಸಂಗೀತವನ್ನೂ ನಿರ್ದೇಶಿಸಿದರು. ಆಗ ಸಮೂಹ ಗಾಯಕಿಯರಲ್ಲಿ ಒಬ್ಬರಾಗಿದ್ದ ಕೇರಳದ ಸುಲೋಚನಾ ಕುಮಾರನ್‌ ಅವರನ್ನು ಮದುವೆಯೂ ಆದರು. ಈ ಮಧ್ಯೆ ಉಸ್ತಾದ್‌ ಅಮನ್‌ ಅಲಿ ಖಾನ್‌ ಮತ್ತು ಉಸ್ತಾದ್‌ ಅಬ್ದುಲ್‌ ರಹಮಾನ್‌ ಖಾನ್‌ ಅವರಿಂದ ಸಿತಾರ್‌ ಮತ್ತು ಗಝಲ್‌ ಗಾಯನವನ್ನೂ ಕಲಿತರು.

ಲತಾ ಮಂಗೇಶ್ಕರ್‌ ಜೊತೆ 1949ರಲ್ಲಿ ಮೊದಲ ಬಾರಿಗೆ ‘ನರಸಿಂಗ್‌ ಅವತಾರ್‌’ ಚಿತ್ರಕ್ಕೆ ಹಾಡಿದ ಬಳಿಕ, ಕಿಶೋರ್‌ ಕುಮಾರ್‌ (ಆಂದೋಲನ್‌), ಗೀತಾದತ್‌ (ರಾಮ್ ವಿವಾಹ್‌), ಆಶಾ ಬೋಂಸ್ಲೆ (ಬೂಟ್‌ ಪಾಲಿಶ್‌) ಜೊತೆಗೂ ಹಾಡಿದರು. ಕುಸ್ತಿಪಟುವಾಗಿದ್ದ ಅವರು, ಬಾಂದ್ರಾದ ಮಾರುತಿ ವ್ಯಾಯಾಮ ಶಾಲೆಗೆ ಹೋಗುತ್ತಿದ್ದಾಗ ಶಂಕರ್‌–ಜೈಕಿಶನ್‌ ಜೋಡಿಯ ಶಂಕರ್‌ ಪರಿಚಯವಾಯಿತು.

ಮನ್ನಾ ಡೇ ಅವರ ವಿಶೇಷವೆಂದರೆ ಯಾವ ಶೈಲಿಯ ಹಾಡನ್ನೂ ಹಾಡಲು ರೆಡಿ ಇರುತ್ತಿದ್ದರು. ‘ಔಲಾದ್‌’ ಚಿತ್ರದ ‘ಜೋಡಿ ಹಮಾರೀ’ ರಾಕ್‌ ಅಂಡ್‌ ರೋಲ್‌ ಶೈಲಿಯಲ್ಲಿದ್ದರೆ, ಆರ್‌.ಡಿ. ಬರ್ಮನ್‌ರ ‘ಭೂತ್‌ ಬಂಗ್ಲಾ’ದ ‘ಆವೊ ಟ್ವಿಸ್ಟ್‌ ಕರೇ’ ಪಾಶ್ಚಿಮಾತ್ಯ ಶೈಲಿಯದು. ‘ತೀಸ್ರೀ ಕಸಮ್‌’ ಚಿತ್ರದ ‘ಚಲತ್ ಮುಸಾಫುರ್‌...’ ಪಕ್ಕಾ ಜಾನಪದ ಶೈಲಿ. ‘ಜನಕ್‌ ಜನಕ್‌ ತೊರೆ ಬಾಜೇ ಪಾಯಲಿಯಾ’ (ಮೇರೆ ಹುಜೂರ್‌) ಶಾಸ್ತ್ರೀಯ ರಚನೆಯಾಗಿತ್ತು. ‘ಕಾಬೂಲಿವಾಲಾ’ದ ‘ಏ ಮೇರೆ ಪ್ಯಾರೇ ವತನ್‌’ ಮತ್ತು ‘ಉಪ್‌ಕಾರ್‌’ ಚಿತ್ರದ ‘ಕಸ್ಮೇ ವಾದೇ...’ ಹಾಡುಗಳನ್ನು ಅಷ್ಟೇ ಭಾವಪೂರ್ಣವಾಗಿ ಹಾಡಿದರು.

1970ರಲ್ಲಿ ‘ಮೇರಾ ನಾಮ್ ಜೋಕರ್‌’ ಚಿತ್ರದಲ್ಲಿ ಹಾಡಿದ ‘ಏ ಭಾಯ್‌.. ಜರಾ ದೇಖ್‌ ಕೆ ಚಲೋ’ ಈಗಲೂ ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಡು. ಈ ಗಾಯನಕ್ಕೆ ಫಿಲಂಫೇರ್‌ ಪ್ರಶಸ್ತಿಯೂ ಬಂತು. ‘ಶ್ರೀ 420’ಯ ‘ಪ್ಯಾರ್‌ ಹುವಾ ಇಕ್‌ರಾರ್‌ ಹುವಾ’, ‘ಚೋರಿ ಚೋರಿ’ಯ ‘ಏ ರಾತ್‌ ಭೀಗೀ ಭೀಗೀ’, ‘ಜಂಝೀರ್‌’ ಚಿತ್ರದ ‘ಯಾರೀ ಹೈ ಈಮಾನ್ ಮೇರಾ’ ಹಾಡುಗಳನ್ನು ಇವತ್ತಿಗೂ ಚಿತ್ರರಸಿಕರು ಮನದಣಿಯೆ ಆಸ್ವಾದಿಸುತ್ತಾರೆ. ಮಲಯಾಳದ ಸೂಪರ್‌ಹಿಟ್‌ ಚಿತ್ರ ‘ಚೆಮ್ಮೀನ್‌’ನ ‘ಮಾನಸ ಮೈನವರು ಮಧುರಂ’ ಹಾಡನ್ನೂ ಅವರೇ ಹಾಡಿದ್ದು.

ಅವರ ಪ್ರತಿಭೆಗೆ ಸಂದ ಮನ್ನಣೆಗಳು ಒಂದೆರಡಲ್ಲ. 1971ರಲ್ಲಿ ‘ಪದ್ಮಶ್ರೀ’, 2005ರಲ್ಲಿ ‘ಪದ್ಮಭೂಷಣ’ ಮತ್ತು 2007ರಲ್ಲಿ ‘ದಾದಾಸಾಹೇಬ್‌ ಫಾಲ್ಕೆ’ ಪ್ರಶಸ್ತಿ ಅವರನ್ನು ಅರಸಿಬಂದವು. 1993ರ ನಂತರ ಮನ್ನಾ ಡೇ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. 2012ರಲ್ಲಿ ಅವರು ಪತ್ನಿಯನ್ನು ಕಳೆದುಕೊಂಡ ಬಳಿಕ ಮಾನಸಿಕವಾಗಿ ಕುಗ್ಗಿದ್ದರು. ಮರುವರ್ಷವೇ 94ರ ಇಳಿವಯಸ್ಸಿನಲ್ಲಿ ಅವರೂ ನಿಧನರಾದರು. ಭಾರತೀಯ ಸಿನಿಮಾ ಸಂಗೀತದಲ್ಲಿ ವೈವಿಧ್ಯಮಯ ಹಾಡುಗಳನ್ನು ಹಾಡಿದ ಕೀರ್ತಿ ಅವರದ್ದು.

(ಲೇಖಕರು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ, ಚಿತ್ರಸಾಹಿತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT