'ಹಾಡು ಹರಡಬೇಕು, ಮಾತು ಮರೀಬೇಕು' ಅನ್ನುತ್ತಿದ್ದರು ಹೆಸರಾಂತ ಗಾಯಕರಾದ ಬಾಳಪ್ಪ ಹುಕ್ಕೇರಿ. ಅದು ಸರಿ ಎನ್ನುವಂತೆ ಹಾಡನ್ನು ಹರಡಲು, ಅದೂ ಅತ್ಯಂತ ಭಿನ್ನವಾಗಿ ಕೇಳುಗರ ಮುಂದಿಡಲು, ವಾಹ್! ಎಂದು ಆಸ್ವಾದಿಸಲು ಅವಕಾಶ ಮಾಡಿಕೊಟ್ಟದ್ದು ಖ್ಯಾತ ನಟ ಶ್ರೀನಿವಾಸ ಪ್ರಭು ಹಾಗೂ ಕವಯತ್ರಿ ರಂಜನಿ ಪ್ರಭು ದಂಪತಿಗಳು.

ಅದು ಗಜಲ್ ಹಾಗೂ ಹಾಡಿನ ನಡುವಿನ ಜುಗಲಬಂದಿ. ಅಥವಾ ಪ್ರೇಮಿಗಳಿಬ್ಬರ ವಿರಹ ವೇದನೆ, ಅಥವಾ ದಂಪತಿಗಳ ಸಲ್ಲಾಪ, ವೇದಿಕೆಯ ಮೇಲಿದ್ದವರು ಹಾಗೂ ಸಭಾಂಗಣದಲ್ಲಿದ್ದವರ ನಡುವಿನ ಮೌನ ಸಂಭಾಷಣೆ-. ಅಲಯನ್ಸ್ ಫ್ರಾಂಚೈಸ್ ನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಈ ಎಲ್ಲವೂ ಆಗಿತ್ತು.

ಕಾರ್ಯಕ್ರಮ ಆಗಿದ್ದೇ ಮಾತುಗಳು ಇರಿಯುತ್ತಿರುವ ಕಾಲವನ್ನು ಪ್ರಸ್ತಾಪ ಮಾಡುವ ಮೂಲಕ. ಕತ್ತಿಯ ಅಲಗಿಗೆ ಇರುವ ಇರಿವ ಶಕ್ತಿ ಈಗ ಮಾತುಗಳಿಗೂ ಬಂದಿದೆ ಎಂದು ಆತಂಕಪಡುತ್ತಾ ಅದರ ನಡುವೆಯೇ ಹಾಡು ಹೇಗೆ ಎಲ್ಲರನ್ನೂ ಬೆಸೆಯಬಹುದು ಎನ್ನುವುದನ್ನು ತೋರಿಸಿಕೊಟ್ಟ ಕಾರ್ಯಕ್ರಮವಾಗಿತ್ತು ಅದು.

ಶ್ರೀನಿವಾಸ ಪ್ರಭು ರಾಷ್ಟ್ರೀಯ ನಾಟಕ ಶಾಲೆಯ ಹಿನ್ನೆಲೆಯಿಂದ ಬಂದವರು. ಅಸಂಖ್ಯಾತ ನಾಟಕಗಳಲ್ಲಿ ನಟಿಸಿದವರು, ನಿರ್ದೇಶಿಸಿದವರು. ಚಲನಚಿತ್ರಗಳಲ್ಲಿ ಇವರ ನಟನೆಯಷ್ಟೇ ಇವರ ದನಿಗೂ ಹೆಸರಿತ್ತು. ರಂಜನಿ ಪ್ರಭು ಕಾಲೇಜು ಉಪನ್ಯಾಸಕಿ. ಕವಿತೆ ಬರೆದು ಹೆಸರಾದವರು. ಇವರ 'ಜೋಗಿ ಕಾಡತಾನ..' ಎನ್ನುವ ಹಾಡು ಯುವ ಪ್ರೇಮಿಗಳ ಮಧುರ ಯಾತನೆಯ ಸಂಕೇತ.

ಇವರಿಬ್ಬರಿಗೂ ಗಜಲನ್ನು ಗುನುಗುನಿಸುವ ಆಸಕ್ತಿ. ಹಾರ್ಮೋನಿಯಂ ನುಡಿಸುತ್ತಾ ಆಗೀಗ ಹೆಂಡತಿಗೆ ಆ ಗಜಲ್ ನ ಅರ್ಥ, ಒಳಾರ್ಥ, ಅದು ಹೊಂದಿರುವ ಪದರುಗಳು, ಪರದೆಗಳು ಎಲ್ಲವನ್ನೂ ಪ್ರಭು ವಿವರಿಸುತ್ತಿದ್ದರು. ಹೇಳಿ ಕೇಳಿ ಅವು ಗಜಲ್ ಗಳು. ಇಡೀ ದಿನ ಹೊತ್ತಿ ಉರಿಸಿಬಿಡುವಂತಹದ್ದು. ಹಾಗಾಗಿಯೇ ರಂಜನಿ ಅವರು ಪ್ರಭು ಹೇಳಿದ ಎಲ್ಲಾ ಗಜಲ್ ಗಳಿಗೆ ಕವಿತೆಯ ಮೂಲಕ ಉತ್ತರ ನೀಡುತ್ತಾ ಹೋದರು. ಒಂದು ರೀತಿಯಲ್ಲಿ ಮುದ್ದಣ ಮನೋರಮೆಯ ಸಲ್ಲಾಪದಂತೆಯೇ

ಈ ಎಲ್ಲಾ ಆದಮೇಲೆ ಗಜಲ್ ನ ಪ್ರಶ್ನೆಗೆ ಕವಿತೆ ಉತ್ತರವನ್ನೂ, ಕವಿತೆಯ ಕೆಣಕುವಿಕೆಗೆ ಗಜಲ್ ನ ಮುನಿಸನ್ನೂ ಹೀಗೆ ಸುಮಾರು 40 ಗಜಲ್ ಕವಿತೆಗಳನ್ನು ಜೋಡಿ ಮಾಡಿಬಿಟ್ಟರು. ಗಜಲ್ ಬರೀ ವಾಚಿಸಸಿದರೆ ಆದೀತೇ? ಶ್ರೀನಿವಾಸ ಪ್ರಭು ಅದಕ್ಕೆ ರಾಗ ಜೋಡಿಸಿ ಹಾರ್ಮೋನಿಯಂ ಸಾಥ್ ನಲ್ಲಿ ಹಾಡಲೂ ಆರಂಭಿಸಿದರು. ಇಬ್ಬರೂ ವೇದಿಕೆ ಹತ್ತಿ ಗೊತ್ತಿದ್ದವರೇ ಆದ್ದರಿಂದ ಇದನ್ನು ರಂಗವೇರಿಸುವ ನಿರ್ಧಾರ ಮಾಡಿಯೇ ಬಿಟ್ಟರು. ಇದೇ ಸಮಯಕ್ಕೆ ಕಲಬುರ್ಗಿಯಲ್ಲಿ ಕನ್ನಡ ಗಜಲ್ ಗಳ ಪ್ರಥಮ ಸಮ್ಮೇಳನ ನಡೆಯುತ್ತಿತ್ತು. ರೋಗಿ ಬಯಸಿದ್ದೂ ಗಜಲ್, ವೈದ್ಯ ಹೇಳಿದ್ದೂ ಗಜಲ್ ಎನ್ನುವಂತೆ ಆಗಿಹೋಯಿತು. ಒಂದು ತಾಸು ಗಜಲ್-ಕವಿತೆ ಜುಗಲಬಂದಿ ನಡೆಯಿತು. ಹೇಳಿ ಕೇಳಿ ಸೂಫಿ ಸಂತರ ನೆಲ ಅದು. ವಾಹ್! ವಾಹ್! ಖೂಬ ಸೂರತ್ ಎಂದು ಉದ್ಘರಿಸಿದರು.

ಇದರ ಮುಂದುವರಿದ ಬೆಂಗಳೂರು ಆವೃತ್ತಿಯೇ ಅಲಯನ್ಸ್ ಫ್ರಾಂಚೈಸ್ ನಲ್ಲಿ ನಡೆದ ಗಜಲ್ ಹಾಗೂ ಹಾಡಿನ ಕಾರ್ಯಕ್ರಮ. ಅಚ್ಚುಕಟ್ಟಾದ ಧ್ವನಿ ವ್ಯವಸ್ಥೆ, ಸೂಕ್ತ ಬೆಳಕು ವಿನ್ಯಾಸದಲ್ಲಿ ಈ ಕಾರ್ಯಕ್ರಮ ಒಂದು ರಂಗಪ್ರಸ್ತುತಿಯಂತೆಯೇ ಭಾಸವಾಯಿತು. ಶ್ರೀನಿವಾಸ ಪ್ರಭು ಅವರ ಕಂಠದಲ್ಲಿ ಗಜಲ್ ರಾಗಗಳು ಇಡೀ ಸಭಾಂಗಣದಲ್ಲಿ ವಿಷಾದವನ್ನು ನೆಡುತ್ತಾ ಹೋದರೆ, ರಂಜನಿಯ ಕವಿತೆಗಳು ಆ ವಿಷಾದದ ಹಣೆಯನ್ನು ನೇವರಿಸಿದ ಪ್ರೀತಿ ಸ್ಪರ್ಶದಂತೆ ಇತ್ತು.

ಭಣಗುಡುವ ನನ್ನ ಮನೆಗೆ ನೀ
ಚಣಮಾತ್ರ ಬಂದು ಹೋದೆ
ಹೊಸಿಲಲ್ಲಿ ದೀಪ ಹಚ್ಚಿಡುವುದೀಗ
ರೂಢಿಯಾಗಿ ಹೋಗಿದೆ ಎಂದು ಗಜಲ್ ಭಿಕ್ಕಿದರೆ

ಪ್ರೀತಿಯೆಂದರೆ ಕಡಲತಡಿಯಲ್ಲಿ
ಮಗು ಗೂಡು ಕಟ್ಟಿದಂತೆ
ಪ್ರೇಮ ಎಂದರೆ ಬೇಸಗೆಯ ಬಾನಲ್ಲಿ
ಅರಸುವ ಇಂದ್ರಚಾಪದಂತೆ ಎಂದು ಕವಿತೆ ಮರುನುಡಿಯಿತು.

ಕಾರ್ಯಕ್ರಮ ಮುಗಿದು ಎಲ್ಲರೂ ಎದ್ದು ಹೋದ ಮೇಲೂ ಆ ಸಭಾಂಗಣದಲ್ಲಿ ಒಂದು ಗಾಢ ವಿಷಾದದ ತುಣುಕು ಬಿದ್ದಿತ್ತೇನೋ ಎಂದು ಅನಿಸಿಬಿಡುವಂತೆ ಸುಮಾರು ಒಂದೂವರೆ ಗಂಟೆಯ ಈ ಜುಗಲಬಂದಿ ಕಾಡಿಬಿಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.