ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗದಲ್ಲಿ ‘ಸೊಮಾಲಿಯಾ ಕಡಲ್ಗಳ್ಳರು’

Published : 18 ಡಿಸೆಂಬರ್ 2019, 19:40 IST
ಫಾಲೋ ಮಾಡಿ
Comments

ಮಹಿಳೆಯ ಸಮಸ್ಯೆಗಳಿಗೆ ನಾಟಕಗಳ ಮೂಲಕ ಕನ್ನಡಿ ಹಿಡಿಯಲು ಸದಾ ಹಾತೊರೆಯುವ ರಂಗಭೂಮಿ ಕಲಾವಿದೆ ನಯನ ಸೂಡಾ ಅವರು ಎರ್ಮಾ, ಮೌನಕೋಗಿಲೆ, ಹೇ ರಾಮ್‌, ಚಂದ್ರಗಿರಿತೀರದಲ್ಲಿ ನಾಟಕಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

ದೊಡ್ಡ ತಂಡ ಕಟ್ಟುವ ಹಂತಕ್ಕೆ ಬಂದು ತಲುಪಿರುವುದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದೇವೆ. ರಂಗ ಪ್ರದರ್ಶನ ಎಂಬ ಪರಿಕಲ್ಪನೆ ಎಂದೂ ನಮ್ಮ ತಲೆಯಲ್ಲಿ ಹೊಳೆಯಲಿಲ್ಲ. ಸದಾ ರಂಗಪ್ರಯೋಗದ ಬಗ್ಗೆಯೇ ಯೋಚಿಸುತ್ತಿದ್ದೆವು ಎಂದು ಹೇಳುವ ಅವರು, ಸ್ವಂತ ತಂಡ ಕಟ್ಟಿ ವಿನೂತನ ಪ್ರಯೋಗಗಳಿಂದ ಯಶಸ್ಸಿನ ಅಲೆಯಲ್ಲಿ ಸಾಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

ಚಿಕ್ಕಂದಿನಿಂದಲೇ ರಂಗಭೂಮಿಯ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು 3ನೇ ತರಗತಿಯಲ್ಲಿ ಇದ್ದಾಗಲೇ ಬಣ್ಣ ಹಚ್ಚಿದ್ದರು. ಈ ಯಶಸ್ಸಿನ ಹಂತಕ್ಕೆ ತಲುಪುವಲ್ಲಿ ಗುರು, ಸಿ. ಲಕ್ಷ್ಮಣ್ ಅವರ ಪಾತ್ರ ದೊಡ್ಡದು ಎಂದರು. ಅವರು ಕಟ್ಟಿದ್ದ ಮಕ್ಕಳ ರಂಗಭೂಮಿಯಿಂದಾಗಿ ನಾನು ಬಣ್ಣ ಹಚ್ಚಲು ಸಾಧ್ಯವಾಯಿತು ಎನ್ನು ಅವರು ಆ ಪ್ರೇರಣೆಯಲ್ಲೇ ‘ರಂಗಪಯಣ’ ಎಂಬ ಮಕ್ಕಳ ರಂಗಭೂಮಿ ತಂಡವನ್ನು 2009ರಲ್ಲಿ ಕಟ್ಟಿದರು.

ಮಕ್ಕಳಲ್ಲಿ ಸಾಂಸ್ಕೃತಿಕ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದಲೇ ಸ್ವಂತ ನಾಟಕ ತಂಡ ಕಟ್ಟಿ, ಓದಿದ ಶಾಲೆಯಲ್ಲೂ ಪ್ರತಿ ವರ್ಷ ನಾಟಕ ಪ್ರದರ್ಶಿಸಿದರು. ಸುಮಾರು ಮೂರು ವರ್ಷ ಮಕ್ಕಳಿಗೆ ಹಾಡು, ನೃತ್ಯ, ಅಭಿನಯ ತರಬೇತಿಗಳನ್ನು ಹೇಳಿಕೊಟ್ಟರು.

‘ತಂಡ ಕಟ್ಟಿದ ಮೇಲೆ ಮಕ್ಕಳನ್ನು ರಂಗಭೂಮಿಯ ಕಡೆಗೆ ಆಕರ್ಷಿಸಲು ಹಲವು ಪ್ರಯಾಸಗಳನ್ನು ಪಟ್ಟೆವು, ಮನೆ ಮನೆಗೆ ಹೋಗಿ ಪೋಷಕರ ಮನ ಒಲಿಸಿದೆವು, ಕರಪತ್ರಗಳನ್ನು ಹಂಚುವುದು, ಭಿತ್ತಿ ಪತ್ರಗಳನ್ನು ಅಂಟಿಸುವುದು ಹೀಗೆ ನೂರಾರು ಅಡೆತಡೆಗಳನ್ನು ಎದುರಿಸಿ ಸುಮಾರು ಐದು ವರ್ಷ ಶ್ರಮಿಸಿದ ಮೇಲೆ ಸುಭದ್ರವಾಗಿ ನೆಲೆಯೂರಲು ಸಾಧ್ಯವಾಯಿತು’ ಎಂದು ತಮ್ಮ ಪಯಣದ ಅನುಭವಗಳನ್ನು ಹಂಚಿಕೊಂಡರು.

ಶ್ರೀನಿವಾಸ್ ವೈದ್ಯ ರಚಿಸಿದ ‘ಶ್ರದ್ಧಾ’ ನಾಟಕವನ್ನು ರಂಗಭೂಮಿಯ ಮೇಲೆ ಅನಾವರಣಗೊಳಿಸಿದ ನಂತರ ಜೀವನಕ್ಕೆ ತಿರುವು ದೊರೆಯಿತು ಎನ್ನುವ ಅವರು ರಾಜಗುರು ಅವರ ಜೊತೆಗೂಡಿ ‘ಒಂದಾನೊಂದು ಕಾಲದಲ್ಲಿ, ಮಾದರಿ ಮಾದಯ್ಯ, ಭೂಮಿ, ಗುಲಾಬಿ ಗ್ಯಾಂಗ್... ಹೀಗೆ ಹಲವು ನಾಟಕಗಳನ್ನು ಪ್ರಸ್ತುತಪಡಿಸಿದ ಅವರ ‘ರಂಗಪಯಣ’ ಹತ್ತು ವರ್ಷ ಪೂರೈಸಿದೆ.

2014ರಲ್ಲಿ ಮಹಿಳಾ ಪ್ರಧಾನ ನಾಟಕಗಳನ್ನು ನೀಡಬೇಕು ಎಂದು ನಿರ್ಧರಿಸಿ, ನಿತ್ಯ ಜೀವನದಲ್ಲಿ ಹೆಣ್ಣು ನಿಭಾಯಿಸುವ ವಿವಿಧ ಜವಾಬ್ದಾರಿಗಳ ಕುರಿತು ಬೆಳಕು ಚೆಲ್ಲುವ ‘ಭೂಮಿ’ ನಾಟಕ ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು. ಮೊದಲ ಬಾರಿಗೆ ಆಧುನಿಕ ವಚನಗಳನ್ನು ಬಳಸಿಕೊಂಡು ಪ್ರಸ್ತುತ ಪಡಿಸಿದ ನಾಟಕ ಇದು ಎಂದು ಹೇಳುತ್ತಾರೆ. ಇದರ ನಂತರ ಲೇಖಕಿ ಸಾ.ರಾ.ಅಬುಬಕ್ಕರ್ ಅವರು ರಚಿಸಿದ ‘ಚಂದ್ರಗಿರಿ ತೀರದಲ್ಲಿ’ ನಾಟಕದ ಮೂಲಕವೂ ರಂಜಿಸಿದರು. ಉತ್ತರ ಪ್ರದೇಶದ ಸಂಪತ್ ಪಾಲ್ ದೇವಿ ಅವರನ್ನು ಭೇಟಿ ಮಾಡಿ ‘ಗುಲಾಬಿ ಗ್ಯಾಂಗ್‌’ ಎಂಬ ವಿನೂತನ ನಾಟಕವನ್ನೂ ಪ್ರಸ್ತುತಪಡಿಸಿದರು. ಈ ಹೊಸ ಪ್ರಯೋಗವನ್ನು ಪ್ರೇಕ್ಷಕರು ಆದರಿಸಿದ್ದರಿಂದ ಗುಲಾಬಿ ಗ್ಯಾಂಗ್‌–2 ಕೂಡ ಪ್ರದರ್ಶಿಸಿ ರಂಜಿಸಿದರು.

ನಟ, ನಿರ್ದೇಶಕ ಶಂಕರ್‌ನಾಗ್‌ ಅವರನ್ನು ಹೆಚ್ಚು ಸ್ಮರಿಸುವ ನಯನಾ, ಅವರ ನೆನಪಿಗಾಗಿ ಮೂರು ವರ್ಷಗಳಿಂದ ಶಂಕರ್‌ನಾಗ್ ನಾಟಕೋತ್ಸವವನ್ನೂಆಯೋಜಿಸುತ್ತಾ ಬರುತ್ತಿದ್ದಾರೆ. ಇಲ್ಲಿ, ಗಾಯನ, ಸಿನಿಮಾ, ಚರ್ಚೆ, ನಾಟಕ ಎಲ್ಲವೂ ಇರುವುದು ವಿಶೇಷ.

ಯೋಜನಾಬದ್ಧವಾಗಿ ನಾಟಕಗಳನ್ನು ಪ್ರಸ್ತುತಪಡಿಸುತ್ತಾ, ಎಲ್ಲವನ್ನೂ ಹೊಂದಿಸಿಕೊಂಡು, ಅಳೆದು, ತೂಗಿ ಮುನ್ನಡೆಯುತ್ತಿದ್ದೇವೆ. ಹೀಗಾಗಿ ನಮ್ಮ ಪಯಣಕ್ಕೆ ಯಾವುದೇ ಅಡೆತಡೆಗಳು ಎದುರಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿನೂತನ ಪ್ರಯೋಗಗಳನ್ನು ಮಾಡುವ ಉದ್ದೇಶವಿದೆ ಎನ್ನುವ ಅವರು ಪೂಲನ್‌ದೇವಿ ನಾಟಕವನ್ನು ಪ್ರದರ್ಶಿಸಲು ಯೋಜನೆ ರೂಪಿಸುತ್ತಿದ್ದಾರೆ.

25- ಸಾತ್ವಿಕ–ರಂಗಪಯಣದಲ್ಲಿ ಮೂಡಿಬಂದ ನಾಟಕಗಳು

12- ರಂಗಪಯಣದ ನಾಟಕಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT