ನಾಲ್ಕು ದಶಕ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಕಲಾವಿದ ಎಂ.ಆರ್. ಬಾಳಿಕಾಯಿ ಅವರು ಧಾರವಾಡದಲ್ಲಿ ಹೊಸತಲೆಮಾರುಗಳಿಗೆ ಚಿತ್ರಕಲೆಯ ಬೇರು ಹಬ್ಬಿಸಿದವರು. ಅವರ ಜೀವಮಾನ ಸಾಧನೆಗೆ ‘ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್’ ಈಚೆಗೆ ‘ಕುಂಚ ಕಲಾ ತಪಸ್ವಿ’ ಪ್ರಶಸ್ತಿ ನೀಡಿ ಗೌರವಿಸಿದೆ.
‘ರೀ ನಿಮಗ ಮುಖದ್ ಚಿತ್ರ ಬಿಡ್ಸಕ್ಕೇ ಬರವಲ್ದು’ ಎಂದು ತಮ್ಮ ಗುರು ನೇರವಾಗಿ ಹೇಳಿದಾಗ ಆ ಹಠವಾದಿ ಶಿಷ್ಯನಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಒತ್ತಾಯ ಮಾಡಿ ಆ ಗುರುವನ್ನೇ ಎದುರಿನಲ್ಲಿ ಕೂರಿಸಿ ಅವರ ಚಿತ್ರ ಬರೆದುಕೊಟ್ಟರು! ಮುಂದೆ ಮುಖಭಾವಗಳ ಸೃಜನಶೀಲ ಅಭಿವ್ಯಕ್ತಿಗಳೇ ಅವರ ಚಿತ್ರಗಳ ಕೇಂದ್ರವಸ್ತುಗಳಾದವು. ‘ಮುಖ ವಿಕಾರ’ಗಳನ್ನು ವಿಶಿಷ್ಟ, ಅಮೂರ್ತ ರೂಪಗಳಲ್ಲಿ ರಚಿಸಿ ಬೆರಗುಗೊಳಿಸಿದರು. ಅವರ ಜೀವಮಾನ ಸಾಧನೆಗಾಗಿ ಅದೇ ಗುರುಗಳ ಹೆಸರಿನ ಟ್ರಸ್ಟ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಧಾರವಾಡದ ಡಿ.ವಿ ಹಾಲಭಾವಿ ಸ್ಮಾರಕ ಟ್ರಸ್ಟ್‌ನ ‘ಕುಂಚ ಕಲಾ ತಪಸ್ವಿ’ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಕಲಾವಿದ ಮಹಾವೀರ ರಾಯಪ್ಪ ಬಾಳಿಕಾಯಿ ಅವರ ಕಲಾಶ್ರದ್ಧೆಗೆ ಪುಟ್ಟ ನಿದರ್ಶನವಿದು.
ತಮ್ಮ ಗುರು ಡಿ.ವಿ ಹಾಲಭಾವಿ ಹೆಸರಿನ ಟ್ರಸ್ಟ್‌ನಿಂದಲೇ ಪ್ರಶಸ್ತಿ ಸಿಕ್ಕಿರುವುದು ಅವರಿಗೆ ಹೆಮ್ಮೆ ಮೂಡಿಸಿದೆ.
ಎಂ.ಆರ್. ಬಾಳಿಕಾಯಿ ಎಂದೇ ಪ್ರಸಿದ್ಧರಾದ ಅವರು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳದವರು. ಚಿತ್ರಕಲಾ ಪದವಿ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದವರು ಪ್ರಸ್ತುತ ಸಾಧನಕೇರಿಯಲ್ಲಿ ದ.ರಾ ಬೇಂದ್ರೆ ಅವರ ಮನೆಯ ಸಮೀಪದಲ್ಲೇ ಮನೆ ಮಾಡಿಕೊಂಡಿದ್ದಾರೆ.
83ರ ಇಳಿವಯಸ್ಸಿನಲ್ಲೂ ನಿರರ್ಗಳ ಮಾತು, ಓಡಾಟ, ಲವಲವಿಕೆ. ಪ್ರತಿದಿನ ಕನಿಷ್ಠ ಒಂದು ಚಿತ್ರವನ್ನಾದರೂ ಮಾಡಲೇಬೇಕೆಂಬ ಹಠ ಈಗಲೂ ಇದೆ.
ಬದುಕಿನ 40 ವರ್ಷಗಳನ್ನು ಚಿತ್ರಕಲಾ ಶಿಕ್ಷಕರಾಗಿಯೇ ಕಳೆದ ಅವರು, ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ತಮ್ಮ ವಿದ್ಯಾರ್ಥಿಗಳ ಸಾಧನೆ ಕಂಡು ರೋಮಾಂಚಿತರಾಗುತ್ತಾರೆ. ಧಾರವಾಡದ ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ 27 ವರ್ಷ ಕೆಲಸ ಮಾಡಿ 1999ರಲ್ಲಿ ನಿವೃತ್ತರಾದ ಅವರು, ನಾಲ್ಕು ವರ್ಷ ಬಾದಾಮಿಯ ಶಿಲ್ಪ ಮತ್ತು ಚಿತ್ರಕಲಾ ಶಾಲೆಯಲ್ಲಿ ಗೌರವ ಉಪನ್ಯಾಸಕರಾಗಿ ದುಡಿದವರು.
ಹೊಸ ಸಾಧ್ಯತೆಗಳನ್ನು ಶೋಧಿಸುತ್ತ, ಕಲೆಯ ಬಲೆ ಹೆಣೆಯುವುದು ಅವರ ವಿಶೇಷತೆ. ಅವರಿಗೆ ಚಿತ್ರ ಬರೆಯಲು ಇಂಥದ್ದೇ ಪೇಪರ್ ಬೇಕೆಂಬ ನಿಯಮವಿಲ್ಲ. ಅವರ ಭಾವಾಭಿವ್ಯಕ್ತಿಗೆ ಕಂಡದ್ದೆಲ್ಲ ಕ್ಯಾನ್ವಾಸೇ. ತೆಂಗಿನ ಮರದ ನಾರಿನಲ್ಲಿ ಬರೆದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಚಿತ್ರ, ಬಾಳಿಕಾಯಿ ಅವರ ಪ್ರಯೋಗಶೀಲ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ. ‘ಈ ಜಗತ್ತಿನಲ್ಲಿ ಯಾವುದೂ ವ್ಯರ್ಥವಲ್ಲ. ನಿಸರ್ಗವನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಜನರು ಕಲಿಯಬೇಕು. ಭಾವನೆಗಳನ್ನು ವ್ಯಕ್ತಪಡಿಸುವುದು ನನ್ನ ಉದ್ದೇಶವಷ್ಟೆ. ಬಸ್ ಟಿಕೆಟ್‌ಗಳ ಮೇಲೆಯೇ 60 ಚಿತ್ರಗಳನ್ನು ಬರೆದಿದ್ದೇನೆ’ ಎಂದು ನಗುತ್ತಾರೆ ಅವರು.
ತೈಲವರ್ಣ, ಜಲವರ್ಣ, ಕ್ರೆಯೋನ್, ಅಕ್ರಿಲಿಕ್, ಜೆಲ್ ಪೆನ್... ಹೀಗೆ ಚಿತ್ರಕಲೆಗೆ ದಕ್ಕುವುದನ್ನೆಲ್ಲ ಅವರು ಬಳಸಿದ್ದಾರೆ. ಪತ್ರಿಕೆ, ಎಲೆಗಳ ಚೂರು ಬಳಸಿ ಕೊಲಾಜ್ ರೂಪದಲ್ಲಿ ಕೆಲವು ವಸ್ತು ಚಿತ್ರಣಗಳನ್ನು ರಚಿಸಿದ್ದು ಕಣ್ಸೆಳೆಯುವಂತಿದೆ.
ಒಮ್ಮೆ ಕವಿ ಚನ್ನವೀರ ಕಣವಿ ಅವರು ತಮ್ಮ ಕೃತಿಗೆ ಐದು ಚಿತ್ರಗಳನ್ನು ಬರೆಯುವಂತೆ ತಿಳಿಸಿದರು. ತಮ್ಮ ಮನೆಗೆ ಕರೆದು ಬಾಳಿಕಾಯಿ ಅವರಿಗೆ ಚಿತ್ರಕ್ಕೆ ಬೇಕಾದ ಐದು ವಿಷಯಗಳನ್ನು ವಿವರಿಸಿದರು. ಸಾಹಿತ್ಯದ ಧಾಟಿಯಲ್ಲಿದ್ದ ಅವು ಯಾವುವೂ ಅವರಿಗೆ ಅರ್ಥವೇ ಆಗಲಿಲ್ಲ. ಆದರೂ ಚಿತ್ರ ಬರೆಯಲು ಒಪ್ಪಿ ಒಂದೆರಡು ಬಾರಿ ಬರೆದುಕೊಟ್ಟಾಗ ಕಣವಿ ಅವರಿಗೆ ಹಿಡಿಸಲಿಲ್ಲ. ಮೂರನೇ ಬಾರಿ ಬರೆದಾಗಲೂ ಇಷ್ಟವಾಗದೆ, ‘ಬಿಟ್ಟುಬಿಡ್ರಿ, ಸುಮ್ನ ತ್ರಾಸ್ ತಗೋಬ್ಯಾಡ್ರಿ’ ಎಂದರು. ‘ಇಲ್ಲ ಕಣವಿಯವರೇ ನಾನು ನಿಮಗೆ ಚಿತ್ರ ಬರೆದೇ ತೀರುವೆ. ಹತ್ತು ವರ್ಷವಾದ್ರೂ ಪರವಾಗಿಲ್ಲ. ನಾನು ನಿಲ್ಲಿಸಲಾರೆ’ ಎಂದುಬಿಟ್ಟರು ಬಾಳಿಕಾಯಿ. ಅವರ ಹಠ ನೋಡಿದ ಕಣವಿಯವರು, ‘ಒಂದು ಕೆಲ್ಸಾ ಮಾಡ್ರಿ, ನೀವು ಇಲ್ಲಿವರೆಗೆ ಬಿಡಿಸಿದ ಚಿತ್ರ ತಗೋಬರ್ರಿ. ಅದ್ರಾಗ ಬೇಕಾದ್ದ ನಾ ತಗೋತೀನಿ’ ಎಂದಾಗ ಚಿತ್ರಗಳ ಚೀಲ ಹೊತ್ತು ತಂದು ಅವರ ಮುಂದಿಟ್ಟರು. ಅವುಗಳಿಂದ ಐದು ಸೂಕ್ತ ಚಿತ್ರಗಳನ್ನು ಆಯ್ದ ಕಣವಿ, ‘ನಿಮಗ ಸುಮ್ನ ತ್ರಾಸ್ ಕೊಟ್ಟಂಗಾತಲ್ಲ, ನನಗ ಬೇಕಾಗಿದ್ದ್ ನೀವು ಮೊದಲೇ ಮಾಡಿಟ್ಟೀರಿ. ನನಗಿಂತ ಅಡ್ವಾನ್ಸ್ ಅದೀರಿ ನೀವು’ ಎಂದರು.
ತಮ್ಮ ಮನೆಯ ಮೇಲಿ ನಿರ್ಮಿಸಿರುವ ‘ಚಿತ್ರಮನೆ’ ಗ್ಯಾಲರಿ ಅವರ ಕಾಯಕ ಕೇಂದ್ರ. ವಿಕಾಸ ನಗರದಲ್ಲಿರುವ ‘ಎಂ.ಆರ್. ಬಾಳಿಕಾಯಿ ಆರ್ಟ್ ಗ್ಯಾಲರಿ’ಯಲ್ಲಿ ಅವರ ಹಲವಾರು ಚಿತ್ರಗಳನ್ನು ಜೋಡಿಸಿಡಲಾಗಿದೆ.
‘ವೈವಿಧ್ಯಮಯ ರೇಖಾಚಿತ್ರಗಳು’ ಅವರ ಪುಸ್ತಕ. ಕಳೆದ ಜನವರಿಯಲ್ಲಿ ನಡೆದ ಹುಕ್ಕೇರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದು ಅವರ ಪಾಲಿಗೆ ಅವಿಸ್ಮರಣೀಯ. ‘ಒಬ್ಬ ಚಿತ್ರಕಲಾವಿದನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಸಣ್ಣ ವಿಚಾರವಲ್ಲ. ಅದಕ್ಕಿಂತ ದೊಡ್ಡ ಗೌರವ ಇನ್ನೇನಿದೆ’ ಎಂದು ಹರ್ಷಗೊಳ್ಳುತ್ತಾರೆ ಅವರು.
ಹೊರೆ, ಸಂಕಟ, ಯಾತನೆಗಳನ್ನು ವ್ಯಕ್ತಗೊಳಿಸುವ ಮುಖಗಳು, ವಿಕಾರ ಮುಖಗಳು, ಇಲಸ್ಟ್ರೇಶನ್ ಮಾದರಿಯಲ್ಲಿ ಮೂಡಿದ ಮುಖಗಳು, ರೇಖಾಚಿತ್ರಗಳು ಥಟ್ಟನೆ ನೋಡುಗರನ್ನು ಸೆಳೆಯುತ್ತವೆ. ಜೊತೆಗೆ ನೀರಿನ ಅಲೆಗಳು ಉಕ್ಕಿ ಬರುವ ದೃಶ್ಯಗಳನ್ನು ಜಲವರ್ಣ ಹಾಗೂ ಅಕ್ರಿಲಿಕ್ ಬಳಸಿ ರಚಿಸಿದ್ದಾರೆ.
ಪುತ್ರ, ಕಲಾವಿದ ರಮೇಶ ಬಾಳಿಕಾಯಿ ಅವರು ತಂದೆಯ ಕಲಾ ಪ್ರೀತಿಗೆ ಸಹಕಾರ ನೀಡುತ್ತ, ಅವರ ಚೈತನ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಇಳಿವಯಸ್ಸಿನಲ್ಲಿಯೂ ಕಲೆಯ ಧ್ಯಾನದಲ್ಲಿರುವ ಎಂ.ಆರ್.ಬಾಳಿಕಾಯಿ ಅವರಿಗೆ ತಮ್ಮ ಬಾಳೇ ಕಲೆಯ ಸಾಗರದಂತೆ ತೋರಿದೆ ಎನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.