ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು–ಶಿಷ್ಯರ ಸಮಾಗಮ

Last Updated 3 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಓದು ಮತ್ತು ಬರೆಯುವುದನ್ನು ಕಲಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಹಾದಿ ತೋರಿದ ಗುರುಗಳನ್ನು ಆಗಾಗ ಸ್ಮರಿಸುವವರು ಹಲವರಿದ್ದಾರೆ. ಗುರುಗಳು ಸಿಕ್ಕಾಗ ನಮಿಸುವ ಹಾಗೂ ಅವರೊಂದಿಗೆ ಹಳೆಯ ದಿನಗಳ ಮೆಲಕು ಹಾಕುವವರೂ ಇದ್ದಾರೆ. ಆದರೆ ಇಲ್ಲೊಬ್ಬರು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದು (ಸೆ. 5) ಗುರುಗಳ ಮನೆಗಳಿಗೆ ಹೋಗಿ, ಅವರಿಗೆ ಹಣ್ಣು– ಹಂಪಲು ನೀಡಿ, ಆಶೀರ್ವಾದ ಪಡೆದು ಬರುವುದನ್ನು ರೂಢಿಸಿಕೊಂಡಿದ್ದಾರೆ.

ಎಂಟು ವರ್ಷಗಳಿಂದ ಈ ಕಾರ್ಯ ಮಾಡುತ್ತಿರುವವರು ಬಿಎಂಟಿಸಿಯ ಚಾಲಕ ಕೆ. ಧನಪಾಲ್‌. ‘ಬೆಂಗಳೂರು ರೌಂಡ್ಸ್’ ಬಸ್‌ನ ಚಾಲಕರೂ ಆಗಿರುವ ಅವರು, ಪ್ರಯಾಣಿಕರಿಗೆ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳನ್ನು ತೋರಿಸಿ ಮಾರ್ಗದರ್ಶನ ನೀಡುವ ಕಾಯಕದಲ್ಲಿ ನಿರತರಾಗಿರುವ ಅವರು ಪ್ರತಿ ವರ್ಷ ಸೆ. 5ರಂದು ರಜೆ ತೆಗೆದುಕೊಂಡು, ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಹುಡುಕಿಕೊಂಡು ಹೋಗುತ್ತಾರೆ.

ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಕಲಿಯುವಾಗ ಇದ್ದ ಶಿಕ್ಷಕರ ಮನೆಗಳಿಗೆ ಹೋಗುವ ಅವರು ಎಲ್ಲ ಶಿಕ್ಷಕರ ಕುಶಲೋಪರಿ ವಿಚಾರಿಸಿ, ಕೆಲ ಹೊತ್ತು ಅವರೊಡನೆ ಕಾಲ ಕಳೆಯುತ್ತಾರೆ. ಗುರುಗಳೊಂದಿಗೆ ಫೋಟೊ ತೆಗೆಸಿಕೊಂಡು, ಆಶೀರ್ವಾದ ಪಡೆದು ವಾಪಸು ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿರುತ್ತದೆ. ಈ ಕಾರ್ಯವನ್ನು ಅವರು 2010– 11ರಿಂದ ಸತತವಾಗಿ ಮಾಡಿಕೊಂಡು ಬಂದಿದ್ದಾರೆ. ಗುರುಗಳ ಅಂದಿನ (ಸೇವೆಯಲ್ಲಿದ್ದಾಗಿನ) ಮತ್ತು ಈಗಿನ ಫೋಟೊಗಳನ್ನು ಸಂಗ್ರಹಿಸುವ ಅಭ್ಯಾಸವೂ ಅವರಿಗಿದೆ.

ಗೌರಿಬಿದನೂರಿನ ಮಂಚೇನಹಳ್ಳಿಯವರಾದ ಕೆ. ಧನಪಾಲ್‌ ಓದಿರುವುದು 10ನೇ ತರಗತಿವರೆಗೆ. 1987ರಿಂದ ಬಿಎಂಟಿಸಿಯಲ್ಲಿ ಚಾಲಕರಾಗಿರುವ ಅವರು ಯಲಹಂಕದ ನಿವಾಸಿ.

ಗುರುಗಳ ಭೇಟಿಯಾಗುವುದೇ ಸಂಭ್ರಮ:

‘ ನನ್ನ ಬೆಳವಣಿಗೆಗೆ ಕಾರಣಕರ್ತರಾದ ಶಿಕ್ಷಕರನ್ನು ನೋಡುವುದು, ಅವರೊಡನೆ ಮಾತನಾಡುತ್ತಾ ಕಾಲ ಕಳೆಯುವುದು, ಅವರ ಆಶೀರ್ವಾದ ಪಡೆಯುವುದೆಂದರೆ ನನಗೆ ಖುಷಿ. ಯಾವಾಗಲಾದರೂ ಊರಿಗೆ ಹೋದಾಗ ಒಂದಿಬ್ಬರು ಶಿಕ್ಷಕರಷ್ಟೇ ಸಿಗುತ್ತಿದ್ದರು. ಉಳಿದವರು ಬೆಂಗಳೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿದಂತೆ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರಿಂದ ಸಿಗುತ್ತಿರಲಿಲ್ಲ. ಎಲ್ಲ ಶಿಕ್ಷಕರನ್ನು ನೋಡಬೇಕು ಎಂಬ ತುಡಿತದಿಂದ ಗೆಳೆಯ ಸಿ. ಜಗನ್ನಾಥ ಜತೆಗೂಡಿ 2009ರಲ್ಲಿ ಕಾರ್ಯಕ್ರಮವೊಂದನ್ನು ರೂಪಿಸಿದೆವು’ ಎಂದು ಸ್ಮರಿಸುತ್ತಾರೆ ಧನಪಾಲ್‌.

‘ಮಂಚೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 1969ರಿಂದ 1979ರವರೆಗೆ ಓದಿರುವ ನಾವು, ಈ ಅವಧಿಯಲ್ಲಿನ ನಮ್ಮ ಸಹಪಾಠಿಗನ್ನು ಸಂಪರ್ಕಿಸಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿದೆವು. ಅದಕ್ಕೆ ‘ಪಿನಾಕಿನ ಹಳೆ ವಿದ್ಯಾರ್ಥಿಗಳ ಸಂಘ’ ಎಂದು ಹೆಸರಿಟ್ಟೆವು. ಹಣ ಹೊಂದಿಸಿ ಶಾಲೆಯಲ್ಲಿ 2010ರಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿದೆವು. ಅದಕ್ಕೆ ಈ 10 ವರ್ಷಗಳಲ್ಲಿ ಗುರುಗಳಾಗಿದ್ದವರನ್ನೆಲ್ಲ ಸಂಪರ್ಕಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. ಅಂದು ಬಹುತೇಕ ಎಲ್ಲ ಶಿಕ್ಷಕರ ಮತ್ತು ಹಳೆ ವಿದ್ಯಾರ್ಥಿಗಳ ಸಮಾಗಮವಾಗಿತ್ತು. ಆಗ ಎಲ್ಲರ ಮನೆ ವಿಳಾಸ, ಸಂಪರ್ಕ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಂಡೆ’ ಎಂದು ಅವರು ಸ್ಮರಿಸುತ್ತಾರೆ.

‘ನಂತರ ಸಮಯವಿದ್ದಾಗ ಶಿಕ್ಷಕರೊಂದಿಗೆ ಮೊಬೈಲ್‌ ಮೂಲಕ ಮಾತನಾಡುತ್ತಿದ್ದೆ. ವರ್ಷಕ್ಕೊಮ್ಮೆಯಾದರೂ ಅವರೆಲ್ಲರನ್ನೂ ಭೇಟಿ ಮಾಡಬೇಕು ಎಂದುಕೊಂಡು, ಪ್ರತಿ ವರ್ಷ ಸೆ. 5 ರಂದು ಕೆಲಸಕ್ಕೆ ರಜೆ ಹಾಕಿ, ಗುರುಗಳನ್ನು ಖುದ್ದು ಭೇಟಿಯಾಗಲು ಅವರ ಮನೆಗಳಿಗೆ ಹೋಗುವ ಹವ್ಯಾಸ ಬೆಳೆಸಿಕೊಂಡೆ. ನನ್ನ ಆತ್ಮತೃಪ್ತಿಗಾಗಿ ಹೀಗೆ ಗುರುಗಳನ್ನು ನೋಡಲು ಹೋಗುತ್ತೇನೆ. ಮೊದ ಮೊದಲು 15ಕ್ಕೂ ಹೆಚ್ಚು ಶಿಕ್ಷಕರನ್ನು ಭೇಟಿ ಮಾಡುತ್ತಿದ್ದೆ. ಅವರಲ್ಲಿ ಕೆಲವರು ತೀರಿಕೊಂಡಿದ್ದಾರೆ’ ಎಂದು ಹೇಳುವ ಅವರು, ‘ನನ್ನ ಗುರುಗಳು ಸಹ ಸೆ. 5 ಬಂದರೆ ಶಿಷ್ಯನ ಆಗಮನವನ್ನು ಎದುರು ನೋಡುತ್ತಿರುತ್ತಾರೆ’ ಎಂದು ವಿವರಿಸುತ್ತಾರೆ.

ಶಾಲಾ ವಿದ್ಯಾರ್ಥಿಗಳಿಗೆ ನೆರವು

‘ನಾವು ಶಾಲೆಗೆ ಹೋಗುವಾಗ ತುಂಬಾ ಕಷ್ಟವಿತ್ತು. ಬಡತನದ ಕಾರಣ ಶಾಲಾ ಶುಲ್ಕ ಕಟ್ಟಲೂ ಆಗುತ್ತಿರಲಿಲ್ಲ. ಈ ಸಮಸ್ಯೆ ಈಗಿನ ಮಕ್ಕಳಿಗೆ ಆಗಬಾರದು ಎಂದು, ಪಿನಾಕಿನಿ ಹಳೆ ವಿದ್ಯಾರ್ಥಿಗಳ ಸಂಘವು ಪ್ರತಿ ವರ್ಷ ಶಾಲೆಯಲ್ಲಿ 25 ವಿದ್ಯಾರ್ಥಿಗಳಿಗೆ ಶುಲ್ಕ, ಪುಸ್ತಕ, ಸಮವಸ್ತ್ರವನ್ನು ಕೊಡುತ್ತಿದ್ದೇವೆ’ ಎನ್ನುತ್ತಾರೆ ಧನಪಾಲ್‌.

ಶಿಕ್ಷಕರ ನೆನಪು

ನೀವು ನಿಮ್ಮ ಗುರುಗಳನ್ನು ಶಿಕ್ಷಕರ ದಿನದಂದು ಅಭಿನಂದಿಸುತ್ತಿದ್ದರೆ, ನೆಚ್ಚಿನ ಗುರುಗಳೊಂದಿಗೆ ನಿಮ್ಮ ಚಿತ್ರವಿದ್ದರೆ ನಮಗೆ ಕಳುಹಿಸಿಕೊಡಿ. ಶಿಕ್ಷಕರ ದಿನದಂದು ಆಯ್ದ ಕೆಲವು ಚಿತ್ರಗಳನ್ನು ಪ್ರಕಟಿಸಲಾಗುವುದು. ಚಿತ್ರದೊಂದಿಗೆ ನಿಮ್ಮ ಹೆಸರು, ಶಿಕ್ಷಕರ ಹೆಸರು, ನಿಮ್ಮ ವಿಳಾಸ, ಮೊಬೈಲ್‌ ಫೋನ್‌ನಂಬರ್‌ ಕಡ್ಡಾಯವಾಗಿ ನಮೂದಿಸಬೇಕು. ಪೂರ್ಣ ಮಾಹಿತಿ ಇಲ್ಲದ ಚಿತ್ರಗಳನ್ನು ತಿರಸ್ಕರಿಸಲಾಗುವುದು. ಚಿತ್ರ ಕಳುಹಿಸಬೇಕಾದ ವಿಳಾಸ contest@prajavani.co.in. ಸೆ. 5ರ ಮಧ್ಯಾಹ್ನ 3ರನಂತರ ಬಂದ ಚಿತ್ರಗಳನ್ನು ಪರಿಗಣಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT