ಇನ್ನೆರಡು ದಿನಕ್ಕೆ ರಂಜ಼ಾನ್. ರಂಜ಼ಾನ್ ಕಳೆದ ಮೇಲೂ ಈ ರಗಳೆ ಮುಗಿಯಬಹುದೆನ್ನುವ ನಂಬಿಕೆ ಭಾಸ್ಕರನಿಗೆ ಇರಲಿಲ್ಲ. ಜುನೇದನ ನಂಬಿಕೆಗಳನ್ನಾಗಲೀ ಶ್ರೀಶನ ತರ್ಕಗಳನ್ನಾಗಲೀ ಪರಿಶೀಲಿಸುವಷ್ಟು ವ್ಯವಧಾನ ಅವನಿಗಿರಲಿಲ್ಲ. ಈ ಕೆಲಸಕ್ಕೆ ಸೇರಿದ ಮೇಲೆ ಅವನು ತನ್ನ ಸಂಸಾರದ ತಿಂಗಳ ಖರ್ಚಿನ ಲೆಕ್ಕವನ್ನು ಸಹ ಯಾವತ್ತೂ ಇಡದವನು, ಲ್ಯಾಪ್ಟಾಪು ಪರದೆಯ ಉದ್ದಗಳ ಅಲೆದಾಡುತ್ತ ಪ್ರಾಜೆಕ್ಟಿನ ಖರ್ಚು-ವೆಚ್ಚವನ್ನೆಲ್ಲ ಲೆಕ್ಕ ಹಾಕುತ್ತಿದ್ದ.

ಪ್ರಾಜೆಕ್ಟಿನಲ್ಲಿ ಎಷ್ಟು ಜನರಿದ್ದಾರೆ? ಒಂದೊಂದು ತಲೆಗು ಗ್ರಾಹಕರಿಂದ ಎಷ್ಟು ಹಣವನ್ನು ಪೀಕಲಾಗುತ್ತಿದೆ? ಒಬ್ಬೊಬ್ಬರ ಸಂಬಳದ ವೆಚ್ಚ ಎಷ್ಟು? ಅದಲ್ಲದೆ ಪ್ರಾಜೆಕ್ಟಿಗೆ ತಗುಲುವ ಒಟ್ಟಾರೆ ವೆಚ್ಚ ಎಷ್ಟು ಅನ್ನುವ ಮಾಹಿತಿಯನ್ನೆಲ್ಲ ಒಂದು ಸ್ಪ್ರೆಡ್ ಶೀಟಿನಲ್ಲಿ ತುಂಬಿಸಿ, ಅದರ ಮೇಲೊಂದು ಫಾರ್ಮುಲಾ ಜಡಿದು, ಅದು ನೀಡುವ ಲಾಭಾಂಶದ ಅಂಕೆಯನ್ನು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದ. ಏನು ಮಾಡಿದರೂ ಗ್ರಾಹಕರು ನಿಗದಿಪಡಿಸಿದ ಮೊತ್ತಕ್ಕೆ ಸರಿಯಾಗಿ ತನ್ನ ಪ್ರಾಜೆಕ್ಟಿನ ವೆಚ್ಚವನ್ನು ಹೊಂದಿಸಿ ಕಂಪೆನಿಯವರು ನಿಗದಿ ಪಡಿಸಿರುವ ಲಾಭವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಕಂಪೆನಿಯ ಖರ್ಚುಗಳನ್ನು ಕಡಿಮೆಗೊಳಿಸುವ ಪರಿಣಾಮವಾಗಿ ರಾತ್ರಿ ಒಂಬತ್ತರ ನಂತರ ಏಸಿಯನ್ನೂ ಬಂದ್ ಮಾಡಿದ್ದರಿಂದ ಅವನ ಅಂಗಿಯ ಕಾಲರಿನ ಸುತ್ತ ಬೆವರು ಅಂಟಿತ್ತು. ಕರ್ಚೀಫಿನಲ್ಲಿ ಕತ್ತಿನ ಸುತ್ತ ಒರೆಸಿಕೊಂಡಾಗ- ಬೆವರು ಸುರಿಸಿ ದುಡಿಯುವುದು ಎಂದರೇನು - ಅನ್ನುವುದು ಮೊದಲ ಬಾರಿಗೆ ಅನುಭವಕ್ಕೆ ಬಂದವನ ಹಾಗೆ ‘ಓಹ್ ಶಕ್ಸ್..’ ಎಂದು ಮತ್ತೆ ಲಾಭಾಂಶವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸನ್ನದ್ಧನಾದ.

ಏನು ಪಲ್ಟಿ ಹೊಡೆದರೂ ಫಾರ್ಮುಲಾದ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅಂಕಿ-ಅಂಶಗಳು ಕೂಡಿಬರಲಿಲ್ಲ. ಕೊನೆಗೆ ಅಮೆರಿಕದ ಮ್ಯಾನೇಜರಿಗೆ ಫೋನು ಮಾಡಿ ಚರ್ಚಿಸಿದ ಮೇಲೆ ಒಂದೇ ಕ್ಲಿಕ್ಕಿನಲ್ಲಿ ಎಲ್ಲಾ ಪರದೆಗಳನ್ನು ಮುಚ್ಚಿಬಿಡಬಹುದು ಅನ್ನುವುದು ಹೊಳೆದು, ಪ್ರಾಜೆಕ್ಟು, ಶ್ರೀಶ, ಮತ್ತು ಜುನೇದನ ಸಮಸ್ಯೆಗಳಿಗೆ ಒಟ್ಟಿಗೇ ಪರಿಹಾರ ಸಿಕ್ಕಂತಾಗಿ ಸಮಾಧಾನವಾಯಿತು. ಅಮೆರಿಕದಿಂದ ಬಂದ ಮೇಲೆ ಕೊಂಡುಕೊಂಡ ಗೇರಿಲ್ಲದ ಹೋಂಡಾ ಸಿಟಿಯನ್ನು ಡ್ರೈವ್ ಮಾಡುತ್ತ ಮನೆಗೆ ಹೋಗುವಾಗ, ಸಾಮಾನ್ಯವಾಗಿ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಬಾರದ ಈ ವಿಚಾರವನ್ನು ಶ್ರೀಶನಿಗೆ ನಾಜೂಕಿನಲ್ಲಿ ತಿಳಿಸುವುದು ಹೇಗೆ ಅಂತ ಯೋಚಿಸತೊಡಗಿದ.

ನಯ-ನಾಜೂಕು ಭಾಸ್ಕರನಿಗೆ ಅಭ್ಯಾಸವಾಗಿ ಹೋಗಿತ್ತು. ಸೀಡಿಯನ್ನು ಜೋಪಾನವಾಗಿ ಪ್ಲೇಯರ್ರಿನ ಒಳಗೆ ತೂರುವಂತೆ ಅವನ ಮಾತಿನ ಸಲೀಸು. ಊರು-ಕೇರಿ, ಶೇರು, ಕ್ರಿಕೆಟ್ಟು, ಹಬ್ಬ, ಹಾಲಿವುಡ್ಡು ಅಂತ ಸಲುಗೆಯಿಂದ ಮಾತು ಶುರು ಹಚ್ಚಿ ಕೊನೆಯಲ್ಲಿ ಕೆಲಸ ತಗುಲಿಸಿ ಬರುತ್ತಿದ್ದ. ಐದೂವರೆ ಅಡಿ ಎತ್ತರದ ಅವನ ಕಣ್ಣುಗಳಲ್ಲಿ ಕಾಠಿಣ್ಯ ಎನ್ನುವುದು ಕಿಲಾಡಿತನದ ಛಶ್ಮ ತೊಟ್ಟಿತ್ತು. ಅವನ ಮೆಲುದನಿಯ ಸಲುಗೆಯಲ್ಲು ಒಂದು ನಿರ್ದಿಷ್ಟ ಬಿಗುವಿತ್ತು. ಅವನ ಸಲುಗೆಯನ್ನು ದುರುಪಯೋಗಪಡಿಸಿಕೊಳ್ಳುವ ಧೈರ್ಯ ಯಾರಲ್ಲೂ ಇರಲಿಲ್ಲ.

ಆದರೆ ಶ್ರೀಶ ಭಂಡನೂ ಬುದ್ಧಿವಂತನೂ ಆಗಿದ್ದ. ತನ್ನ ಗ್ರೂಪಿನ ಲೀಡ್ ಆಗಿರುವ ಭಾಸ್ಕರನೊಂದಿಗೆ ನೇರವಾಗಿ, ‘ನೀವು ಈ ಕತೆಯೆಲ್ಲ ನನ್ನ ಹತ್ತಿರ ಹೇಳಬೇಡಿ. ಹೊಸ ಹುಡುಗರನ್ನು ಮಂಗ ಮಾಡಿದಂತೆ ನನ್ನನ್ನು ಮಾಡಬೇಡಿ’ ಅಂತ ನಗುತ್ತಲೇ ಒಳ್ಳೆಯ ರೇಟಿಂಗು ಗಿಟ್ಟಿಸಿಕೊಳ್ಳುತ್ತಿದ್ದ. ಆಫೀಸಿನ ಫೋನನ್ನು ಎಗ್ಗಿಲ್ಲದೆ ಬಳಸಿ ಗಂಟೆಗಟ್ಟಲೆ ಸ್ನೇಹಿತರೊಂದಿಗೆ ಹರಟುತ್ತಿದ್ದ. ಆಫೀಸಿನಲ್ಲಿ ಉಚಿತವಾಗಿ ಕೊಡುವ ಪೆನ್ನು, ನೋಟ್ ಬುಕ್ಕುಗಳನ್ನು ಮುಲಾಜಿಲ್ಲದೆ ಬಾಚಿಕೊಂಡು ಮನೆಗೆ ಒಯ್ಯುತ್ತಿದ್ದ. ಯಾವತ್ತೂ ಅದರ ಬಗ್ಗೆ ಅಳುಕಿರಲಿಲ್ಲ. ಶುಕ್ರವಾರ ಬಂತೆಂದರೆ ಕೆಲಸ ಮಾಡುವ ಮೂಡೇ ಇಲ್ಲವೆಂದು ದಿನವಿಡೀ ಕಾಫಿ ಬ್ರೇಕು, ಲಂಚ್ ಬ್ರೇಕುಗಳಲ್ಲೇ ಸಮಯ ಕಳೆಯುತ್ತಿದ್ದ. ಇನ್ನು ಟ್ರೀಟುಗಳು ಇದ್ದರಂತೂ ನಾಲ್ಕು ಗಂಟೆಯವರೆಗೆ ಹೋಟೆಲ್ಲಿನಲ್ಲೇ ಕಳೆದು ಅಲ್ಲಿಂದ ನೇರ ಮನೆಗೆ ಹೊರಡುತ್ತಿದ್ದ.

ಹೀಗೆ ಮಜವಾಗಿ ಕಾಲ ಕಳೆದುಕೊಂಡಿದ್ದ ಶ್ರೀಶನಿಗೆ ಅಚಾನಕ್ಕಾಗಿ ಆಫೀಸಿನ ವಾತಾವರಣ ಅಸಹನೀಯ ಅನಿಸತೊಡಗಿದ್ದು ಜುನೇದ್ ಆಫೀಸಿನ ಒಂದು ಮೂಲೆಯಲ್ಲಿ ಕುಳಿತು ನಮಾಜ್ ಮಾಡುತ್ತಿರುವುದನ್ನು ನೋಡಿದ ಮೇಲೆ. ಪ್ರತಿ ಶುಕ್ರವಾರ ಆಫೀಸಿನ ಸಮಯದ ನಡುವೆ ಮಸೀದಿಗೆ ಹೋಗಿ ನಮಾಜ್ ಮುಗಿಸಿಕೊಂಡು ಬರುವ ಜುನೇದ್ ಮಸೀದಿಯನ್ನೇ ಆಫೀಸಿನ ಒಳಕ್ಕೆ ತಂದಂತೆ ಅನ್ನಿಸಿ ಶ್ರೀಶನಿಗೆ ಕಿರಿಕಿರಿಯಾಯಿತು. ತನ್ನ ಪ್ರಾಜೆಕ್ಟಿನ ಉಳಿದಿಬ್ಬರೊಂದಿಗೆ ‘ಇವನದ್ದೊಂದು ಶೋ ಆಫ್....ತಾನೊಬ್ಬ ಮಹಾ ಧಾರ್ಮಿಕ ಮನುಷ್ಯ ಅಂತ ತೋಇಸಿಕೊಳ್ಳೋದಕ್ಕೆ...’ ಅಂತ ಕಟಕಿಯಾಡಿದ. ಅದು ಅವನಿಗೆ ಪಾಕಿಸ್ತಾನದ ಕ್ರಿಕೆಟ್ ಟೀಮು ಭಾರತದ ಮೇಲೆ ಟೆಸ್ಟ್ ಮ್ಯಾಚು ಗೆದ್ದು ಕೊಲ್ಕತ್ತಾದ ಮೈದಾನದಲ್ಲಿ ರಾಜಾರೋಷವಾಗಿ ನಮಾಜು ಮಾಡಿದಷ್ಟು ಘೋರವಾಗಿ ಕಂಡಿತ್ತು. ಅದು ಅವನಿಗೆ ಸಾನಿಯಾ ಮಿರ್ಜಾ, ರೀನಾ ರಾಯ್ಗಳು ಪಾಕಿಸ್ತಾನಿಯನ್ನು ಮದುವೆ ಆದದ್ದಕ್ಕಿಂತ ಘೋರವಾಗಿ ಕಂಡಿತ್ತು.

ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ, ನಟಿ ವೀಣಾ ಮಲ್ಲಿಕ್ಗಳ ಸೌಂದರ್ಯವನ್ನು ಚಪ್ಪರಿಸಿ ಮಾತನಾಡಿದ್ದ ಅವನೇ ಈಗ ಅವರುಗಳನ್ನು ಮೂದಲಿಸಲು ಶುರು ಮಾಡಿದ. ಗೋಪಿ ಚಂದನ ಎದ್ದು ಕಾಣುವಂತೆ ಹಚ್ಚಿಕೊಂಡು ಆಫೀಸಿಗೆ ಬರತೊಡಗಿದ. ಜುನೇದ್ ಒಮ್ಮೆ ಟಾಯ್ಲೆಟ್ಟಿನಲ್ಲಿ ಟಿಶ್ಶು ಹಿಡಿದು ಮೂತ್ರಕ್ಕೆ ನಿಂತದ್ದು ನೋಡಿ, ತಾನೂ ಮೂತ್ರಕ್ಕೆ ನಿಲ್ಲುವಾಗ ಕಿವಿಯಲ್ಲಿ ಜನಿವಾರ ಏರಿಸಿಕೊಳ್ಳತೊಡಗಿದ. ಥಟ್ಟನೆ ನೋಡಿ ತಿರುಗಿದವರು ಇದೇನು ಉಚ್ಚೆ ಹೊಯ್ಯುವಾಗಲೂ ಇಯರ್ ಫೋನ್ ಹಾಕಿಕೊಂಡಿದ್ದಾನಲ್ಲ ಅಂದುಕೊಳ್ಳುತ್ತಿದ್ದರು.

ಅಷ್ಟಲ್ಲದೆ ಏಕಾದಶಿಯಂದು ಉಪವಾಸ ಮಾಡಲು ಆರಂಭಿಸಿದ. ಟೀಮಿನವರು ಊಟಕ್ಕೆ ಕರೆದಾಗ, ‘ಈವತ್ತು ಏಕಾದಶಿ. ನಾನು ಏನನ್ನೂ ತಿನ್ನೋದಿಲ್ಲ’ ಅಂತ ಹೇಳಿ ಬೀಗಿದ. ಏಕಾದಶಿ ಅಂದರೇನು ಅಂತ ಕೇಳಿದವರಿಗೆ- ಯಾರ್ಯಾರು ಯಾವ್ಯಾವ ರೀತಿ ಉಪವಾಸ ಮಾಡುತ್ತಾರೆ. ಯಾವ ಸಂದರ್ಭದಲ್ಲಿ ಯಾವ ರಿಯಾಯಿತಿ ಇದೆ. ತಾನು ಮೊದಲು ಫಲಹಾರ ಮಾಡುತ್ತಿದ್ದೆ. ಆದರೆ ಈಗ ಏನನ್ನೂ ತಿನ್ನುವುದಿಲ್ಲ. ತನ್ನದೇನೂ ಅಲ್ಲ; ತನ್ನ ಕುಟುಂಬದ ಕೆಲವರು ಆ ಇಡೀ ದಿನ ಏನನ್ನೂ ತಿನ್ನದೆ ರಾತ್ರಿ ಇಡೀ ಜಾಗರಣೆ ಮಾಡಿ ಮಾರನೆಯ ದಿನ ಬೆಳಗ್ಗೆ ಬೇಗನೆ ಸ್ನಾನ-ಪೂಜೆಗಳನ್ನೆಲ್ಲ ಮುಗಿಸಿ ಊಟ ಮಾಡುತ್ತಾರೆ ಅಂತ ಮಹಿಮಾತೀತವಾಗಿ ವರ್ಣಿಸುತ್ತಿದ್ದ.

‘ಇನ್ನೂ ಮದುವೆ ಮಕ್ಕಳು ಎಲ್ಲ ಆಗಬೇಕಯ್ಯಾ. ನೀನು ಈಗಲೇ ಉಪವಾಸ-ವನವಾಸ ಅಂತ ಕೂತರೆ ಹೇಗೆ? ಆಮೇಲೆ ಕಷ್ಟ. ನಿನಗಲ್ಲ; ನಿನ್ನ ಹೆಂಡತಿಗೆ ಕಷ್ಟ’ ಅಂತ ಭಾಸ್ಕರನೇ ಒಮ್ಮೆ ಗೇಲಿ ಮಾಡಿದಾಗ ನಕ್ಕು ಸುಮ್ಮನಾಗಿದ್ದ. ಏಕಾದಶಿಯ ದಿನ ‘ಫಾಸ್ಟಿಂಗ್ ಮಾಡಿದ್ದು, ಸುಸ್ತಾಗಿದೆ’ ಅನ್ನುವುದು ಎಲ್ಲರಿಗೂ ಗೊತ್ತು ಮಾಡುವಂತೆ ನಟಿಸಿ ಸಂಜೆ ನಾಲ್ಕು ಗಂಟೆಗೇ ಮನೆಗೆ ಹೊರಡುತ್ತಿದ್ದ.
ಏನೇ ಮಾಡಿದರೂ ಜುನೇದನ ನಮಾಜಿಗೆ ಸರಿಸಮನಾಗಿ ತನ್ನದ್ಯಾವುದೂ ತೂಗುತ್ತಿಲ್ಲ ಅನ್ನಿಸತೊಡಗಿತು. ಒಂದು ದಿನ ಭಾಸ್ಕರನ ಕ್ಯಾಬಿನ್ನಿನಲ್ಲಿ ಕುಳಿತು ತನ್ನ ಪ್ರಾಜೆಕ್ಟಿನ ಸ್ಥಿತಿ-ಗತಿಗಳ ಬಗ್ಗೆ ವಿವರ ಒಪ್ಪಿಸಿ ಹೊರಡುವಾಗ, ಅನೌಪಚಾರಿಕವಾಗಿ, ‘ಜುನೇದ್ ಏನು ಈಗ ದಿನಾ ಆಫೀಸಿನಲ್ಲೇ ನಮಾಜಿಗೆ ಕೂರುತ್ತಾನಲ್ಲ?’ ಅಂತ ಕೇಳಿ ನಕ್ಕ.

‘ಹೌದಾ? ನಾನು ಗಮನಿಸಲಿಲ್ಲ. ರಂಜ಼ಾನ್ ಅಲ್ವಾ....ಉಪವಾಸ, ಪ್ರಾರ್ಥನೆ ಎಲ್ಲ ಇರುತ್ತಲ್ಲ...’ ಎಂದು ಭಾಸ್ಕರ್ ಮಾತು ಮುಗಿಸಿ ಮತ್ತೊಂದು ಕೆಲಸಕ್ಕೆ ಜಿಗಿಯುವ ಸನ್ನಾಹದಲ್ಲಿದ್ದ. ‘ಹಾಗಾದರೆ, ನನಗೂ ಮೂರು ಹೊತ್ತು ಸಂಧ್ಯಾವಂದನೆ ಮಾಡಬೇಕು. ಆಫೀಸಿನಲ್ಲಿ ಕೂತುಕೊಂಡು ಮಾಡ್ಲಾ? ಇಟ್ ಈಸ್ ಸೋ ಅನ್ಪ್ರೊಫೆಶನಲ್! ಪೂಜೆ-ಪ್ರಾರ್ಥನೆಯನ್ನೆಲ್ಲ ಅವರವರ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೇಳಬೇಕು. ಇದರಿಂದ ಸುಮ್ಮನೆ ಆಫೀಸಿನ ವಾತಾವರಣದಲ್ಲಿ ಕಿರಿಕಿರಿ. ಇಟ್ ಈಸ್ ಜಸ್ಟ್ ನಾಟ್ ಗುಡ್!’ ಅಂತ ಶ್ರೀಶ ಅರ್ಧ ರೇಗುವ ದನಿಯಲ್ಲಿ ಹೇಳಿದಾಗಲೂ ಭಾಸ್ಕರನಿಗೆ ಇದು ಅಂಥ ದೊಡ್ಡ ಸಮಸ್ಯೆ ಅಂತೇನೂ ಅನ್ನಿಸಲಿಲ್ಲ. ‘ಸರಿ ಬಿಡು, ನಾನೇ ಅವನಿಗೆ ಸೂಚ್ಯವಾಗಿ ಹೇಳ್ತೀನಿ’ ಎಂದು ಆ ವಿಚಾರವನ್ನು ಅಲ್ಲೇ ತೇಲಿಸಿ ಮುಗಿಸಲು ನೋಡಿದ. ಆಮೇಲೂ ಅವನೇನು ಜುನೇದನನ್ನು ಕರೆಸಿ ಮಾತಾಡಲಿಲ್ಲ.

ಅವನ ಆದ್ಯತೆಯ ಕೆಲಸಗಳನ್ನೇ ಮಾಡಿ ಮುಗಿಸಲು ಆಗದೆ ದಿನದ ಹನ್ನೆರಡು-ಹದಿನಾಲ್ಕು ಗಂಟೆ ಆಫೀಸಿನ ಕೆಲಸದಲ್ಲಿ ಮುಳುಗಿರುತ್ತಿದ್ದ.
ಒಮ್ಮೆ ಜುನೇದ್ ನಮಾಜ್ ಮಾಡುವ ಸಮಯಕ್ಕೆ ಅದೇ ದಾರಿಯಲ್ಲಿ ಹೋಗುತ್ತಿದ್ದವನು, ತಾನು ಇದನ್ನು ಗಮನಿಸಿದೆ ಅನ್ನುವುದು ಜುನೇದನಿಗೆ ತಿಳಿಯುವಂತೆ ಕೆಲಹೊತ್ತು ಅಲ್ಲೇ ನಿಂತು ಹೊರಟು, ಸ್ವಲ್ಪ ಸಮಯದ ನಂತರ ಜುನೇದನ ಡೆಸ್ಕ್ ಬಳಿ ಬಂದು ಅನೌಪಚಾರಿಕವಾಗಿ ಮಾತಾಡುತ್ತ, ‘ಹೇ...ನಾನು ಆಗಲೇ ಗಮನಿಸಿದೆ...ನೀನು ಏನೋ ನಮಾಜ್ ಮಾಡುತ್ತಿದ್ದ ಹಾಗಿತ್ತು...’ ಅಂತ ಏನನ್ನೋ ತಿಳಿಯುವ ಕುತೂಹಲದಲ್ಲಿ ಕೇಳಿದ.

‘ಹೌದು. ರಂಜ಼ಾನ್ ಆದ್ದರಿಂದ...ಮಸೀದಿಗೆ ಹೋಗಿ ಬರಬೇಕು ಅಂದರೆ ಒಂದೂವರೆ ಗಂಟೆ ಬೇಕು. ಮೀಟಿಂಗ್ಸ್ ಇರುತ್ತೆ. ಅದಕ್ಕೇ ಈ ಕ್ಯಾಬಿನ್ ಖಾಲಿ ಇತ್ತಲ್ಲ, ಇಲ್ಲೇ ಮುಗಿಸಿಕೊಳ್ಳೋಣ ಅಂತ...’ ಅಂದ. ಗರಿಹಗುರ ಕನ್ನಡಕದ ಅವನ ಕಣ್ಣುಗಳಲ್ಲಿ ಒಂದು ತೆರನಾದ ನಿಷ್ಪಾಪಿ ಭಾವವಿತ್ತು. ನೀಟಾಗಿ ಶೇವ್ ಮಾಡಿದ ಮುಖದಲ್ಲಿ ಸೌಮ್ಯ ಹೊಳಪಿತ್ತು. ವಯಸ್ಸಿನಿಂದಷ್ಟೇ ಭಾಸ್ಕರನನ್ನು ಅವನೆದುರಿನಲ್ಲಿ ಮ್ಯಾನೇಜರ್ ಅಂತ ಒಪ್ಪಬಹುದಾಗಿತ್ತು - ಅಷ್ಟು ಗರಿಗರಿಯಾಗಿದ್ದ.

‘ಹೋ...ಯಾಹ್! ಯಾಹ್!!....ರಂಜ಼ಾನ್ ಅಲ್ವಾ.....ನಿಜ...ಓಕೆ ಓಕೆ...’ ಅಂತ ದನಿಯ ಏರಿಳಿತದಲ್ಲಿ ಮಾತನ್ನು ನಟಿಸಿ ಅಲ್ಲಿಂದ ಹೊರಟ ಭಾಸ್ಕರ್ ಆ ವಿಚಾರವನ್ನು ಅಲ್ಲಿಗೇ ಮರೆತಿದ್ದ. ಆದರೆ ಶ್ರೀಶ ಮತ್ತೆ ಅವನಲ್ಲಿ ಬಂದು ದೂರಿದ. ಇನ್ನೂ ಹಲವರು ಇದೇ ಅಭಿಪ್ರಾಯ ಸೂಚಿಸಿದ್ದಾರೆ. ಇದರ ಬಗ್ಗೆ ಏನಾದರು ಆಕ್ಷನ್ ತೆಗೆದುಕೊಳ್ಳಬೇಕು ಅಂತ ಒತ್ತಾಯಿಸಿದ. ಬೇಕಿದ್ದರೆ ನಾವು ಹೆಚ್.ಆರ್ಗೆ ಒಂದು ಇ ಮೇಲ್ ಕಳಿಸುತ್ತೇವೆ ಅಂದ. ಭಾಸ್ಕರನಿಗೆ ಇದ್ಯಾಕೋ ಅತಿರೇಕಕ್ಕೆ ಹೋಗುತ್ತಿದೆ ಅನ್ನಿಸಿ, ಇ ಮೇಲ್ ಕಳಿಸಬೇಡ ನಾನೇ ಹೆಚ್.ಆರ್. ಹತ್ರ ಮಾತಾಡ್ತೀನಿ ಅಂತ ಹೇಳಿ ಅವನನ್ನು ಸಾಗಹಾಕಿದ್ದ.

ಜುನೇದನಿಗೆ ಇದ್ಯಾವುದೂ ಬೇಡವಾಗಿತ್ತು. ಶಿವಾಜಿನಗರದ ಗಲ್ಲಿಗಳಲ್ಲಿ ಬಾಡಿಗೆ ಸೈಕಲ್ ಓಡಿಸಿಕೊಂಡಿರುವುದು, ಮಧ್ಯಾಹ್ನ ಊಟವಾಗಿ ಎಲ್ಲರೂ ಮಲಗಿರುವಾಗ ಗೋಲಿ ಆಟದಲ್ಲಿ ಗೆದ್ದು ಜೇಬಿನ ತುಂಬ ಗೋಲಿ ತುಂಬಿಸಿಕೊಂಡು ಓಡಾಡುವುದು, ಬಿಸಿಲು ಮಹಡಿಯಲ್ಲಿ ಮಾಂಜಾ ನೂಲನ್ನು ಕಂಬಿಗಳಿಗೆ ಸುತ್ತಿ, ಅದಕ್ಕೆ ಬಣ್ಣ, ಮೊಟ್ಟೆ, ಗೋಂದು, ಗಾಜುಪುಡಿಗಳ ಮಿಶ್ರಣವನ್ನು ಬಟ್ಟೆಯಲ್ಲಿ ಹಿಡಿದು ಸವರಿ, ಅದು ಒಣಗುವುದನ್ನೇ ಕಾದು ಮಾಂಜಾ ನೂಲನ್ನು ಸುತ್ತಿಕೊಳ್ಳುವುದು, ಸಂಜೆ ಆಯಿತೆಂದರೆ ಗಾಳಿಪಟ ಹಾರಿಸುತ್ತ ಕಾಲ ಕಳೆವುದು, ಅಬ್ಬಾ ಮುಂಜಾವಿನಲ್ಲೆದ್ದು ಆಟೋ ಹತ್ತಿಕೊಂಡು ಬಸ್ಸ್ಟ್ಯಾಂಡಿಗೆ ಬಾಡಿಗೆ ಓಡಿಸಲು ಹೊರಡುತ್ತಿದ್ದಂತೆ, ತನಗಿಂತ ಹತ್ತು-ಹನ್ನೆರಡು ವರ್ಷ ಕಿರಿಯವರಾದ ತಮ್ಮಂದಿರನ್ನು ಬೆಳ್ಳಂಬೆಳಗ್ಗೆ ಸೈಕಲ್ ಮೇಲೆ ಕೂರಿಸಿಕೊಂಡು ಕುರಾನ್ ಪಾಠಕ್ಕೆ ಬಿಟ್ಟು ಬರುವುದು, ಭಾನುವಾರದಂದು ಮೈದಾನದಲ್ಲಿ ಕ್ರಿಕೆಟ್ ಆಡುವುದು, ಮೊಣಕಾಲ ಕೆಳಗೆ ಜೋಲುವ ಜುಬ್ಬಾ ತೊಟ್ಟು ಸ್ನೇಹಿತರೊಂದಿಗೆ ಸಿಗರೇಟು ಸೇದುತ್ತ ದಿನ ಕಳೆದು ಬಿಡುವುದು...ಇಷ್ಟಾದರೆ ಸಾಕು....

ಬದುಕು ಆರ್.ಟಿ ನಗರದ ಅಪಾರ್ಟ್ಮೆಂಟಿಗೆ ವರ್ಗಾಯಿಸಿದ ಮೇಲೆ ಸಲ್ಲದ ಬದಲಾವಣೆಗಳೆಲ್ಲ ತಾನಾಗಿಯೇ ಸೇರಿಕೊಂಡವು. ದಿನ ಕಳೆದಂತೆ ವೃತ್ತಿಪರತೆಯೂ ಔಪಚಾರಿಕತೆಯೂ ರೂಢಿಯಾಯಿತು. ಕೆಲಸವೇ ದೇವರಾಯಿತು. ದೇವರು ಕೆಲಸ ಮಾಡಿಸಿಕೊಡುವ ಏಜೆಂಟ್ ಆದ. ತಮ್ಮಂದಿರ ಓದು ಮುಗಿದು, ಮದುವೆ-ಮಕ್ಕಳು ಅಂತೆಲ್ಲ ಆಗಿ, ಒಂದಿಷ್ಟು ಹಣ ಸಂಪಾದನೆಯಾದ ಮೇಲೆ ನಿವೃತ್ತ ಜೀವನದಲ್ಲಿ ಏನು ಮಾಡೋಣವೆಂದು ಒಮ್ಮೊಮ್ಮೆ ಯೋಚಿಸಿದರೆ, ಗಾಳಿಪಟ ಹಾರಿಸುತ್ತ ಕಾಲ ಕಳೆಯುವುದು ಅಂತ ಕನಸು ಕಾಣುತ್ತಾನೆ. ಅಪಾರ್ಟ್ಮೆಂಟಿನ ಟೆರೇಸಿನಲ್ಲಿ ನಿಂತರೆ ಸುತ್ತಲೂ ಅಪಾರ್ಟ್ಮೆಂಟುಗಳೇ. ಗಾಳಿಪಟ ಹಾರುವುದಕ್ಕೆ ಆಕಾಶವೇ ಉಳಿದಿರಲಿಲ್ಲ. ಆಕಾಶವೆಲ್ಲ ಖಾಲಿ! ಏನು ಮಾಡೋಣವೆಂದು ಕೆಳಗಿಳಿದರೆ ನದಿಯಷ್ಟು ಅಗಲ ರಸ್ತೆಗಳು. ಓಡಿ ದಾಟಲು ಸಾಧ್ಯವೇ ಇಲ್ಲ.

ಯಮವೇಗದಲ್ಲಿ ಎಲ್ಲ ವಾಹನಗಳು ದಾಪಿಡುತ್ತಿವೆ. ಎಲ್ಲರಿಗೂ ಅವಸರ, ಎಲ್ಲರಿಗೂ ತಾವೇ ಮೊದಲು ಹೋಗಬೇಕು, ಯಾರಿಗೂ ಸಮಯವಿಲ್ಲ....ಅಲ್ಲೇ ರಸ್ತೆಯ ಬದಿಯಲ್ಲಿ ಅಬ್ಬಾನ ಆಟೋ ಈ ಆರ್ಭಟಕ್ಕೆ ಬೆದರಿದಂತೆ ನಿಧಾನಕ್ಕೆ ಚಲಿಸುತ್ತಿದೆ. ಅಲ್ಲೇ ಭರ್ರನೆ ಹೊರಟ ಯಾವುದೋ ಬಸ್ಸಿಗೆ ದಾರಿ ಬಿಡಲು ಪಕ್ಕ ಸರಿದಾಗ ಆಟೋ ಆಯ ತಪ್ಪಿದೆ....ವಾಲಿದೆ...ಮಗುಚಿ ಬಿದ್ದಿದೆ....ಅಬ್ಬಾ ಜಾನ್ ಅಂತ ಕೂಗಬೇಕು; ದನಿಯೇ ಹೊರಡುತ್ತಿಲ್ಲ....ಕೂಗಿದರೂ ಅದು ಯಾರಿಗೂ ಕೇಳಿಸುತ್ತಿಲ್ಲ. ಅಲ್ಲಿಂದ ಹೆದರಿ ಓಡುತ್ತಾನೆ. ಓಡಿ ಓಡಿ ಆಟದ ಮೈದಾನ ಸೇರುತ್ತಾನೆ. ಮೈದಾನವೆಲ್ಲ ಒಪ್ಪವಾಗಿ ಹಸಿರು ಹಾಸಿದ ಪಾರ್ಕ್ ಆಗಿದೆ. ಜನರು ಶಾರ್ಟ್ಸ್ ಟಿ-ಶರ್ಟಿನಲ್ಲಿ ಜಾಗ್ ಮಾಡುತ್ತಿದ್ದಾರೆ.

ಶ್ರೀಮಂತ ಮುದುಕರು ವಾಕ್ ಮಾಡುವುದೂ ಒಂದು ಪ್ರತಿಷ್ಠೆ ಎಂಬಂತೆ ಬಿರುಸಾಗಿ ಹೆಜ್ಜೆ ಹಾಕುತ್ತಿದ್ದಾರೆ. ಹೆಂಗಸರ ಗುಂಪು ಎರಡೂ ಕೈಯೆತ್ತಿ ಹೋಹೋಹೋ ಎಂದು ವಿಕಾರವಾಗಿ ನಗುತ್ತಿದೆ.... ಅಲ್ಲಿಂದ ಓಡಿ ಶಿವಾಜಿನಗರದ ರಸ್ತೆಯ ಅದಿಬದಿಯಲ್ಲಿ ನಿಂತ ಗಾಡಿಗಳ ತುಂಬ ಬಳೆ, ನೆತ್ತಿ ಚಿಟ್ಟು, ಕಿವಿಯೋಲೆ, ಕ್ಲಿಪ್ಪುಗಳ ಮಿನುಗು, ಅಂಗಡಿಗಳಲ್ಲಿ ನೇತಾಡುವ ಹೊಸ ಹೊಸ ಮಿರುಗುವ ಬಟ್ಟೆಗಳನ್ನೆಲ್ಲ ನೋಡುತ್ತ ಮಸೀದಿಯ ಬಳಿ ಬಂದರೆ, ಮುಲ್ಲಾ ಗಡ್ಡ ನೀವುತ್ತಾ ನಕ್ಕು ಮಾಯವಾಗುತ್ತಾನೆ. ವಜ಼ೂ ಖನದ ಸುತ್ತ ಜನರು ನಿಂತು ಮೊಣಕೈವರೆಗು ನೀರು ಎರಚಿಕೊಳ್ಳುತ್ತಿದ್ದಾರೆ. ಮುಖ ತೊಳೆಯೋಣವೆಂದು ಆ ಕೊಳದ ಹತ್ತಿರ ಬಂದು ಬೊಗಸೆಯಲ್ಲಿ ನೀರು ತುಂಬಿಕೊಂಡರೆ...ಎಲ್ಲಿ - ಎಲ್ಲವೂ ಕೆಸರು. ಕೊಳವೆಲ್ಲ ರಾಡಿ ರಾಡಿ. ಕೊಳದ ನೀರು ಉಕ್ಕುಕ್ಕಿ ಬರುತ್ತಿದೆ. ಅದರ ಒಳಗಿಂದಲೇ ಒಂದು ಪ್ರವಾಹ ಹುಟ್ಟುತ್ತಿದೆ. ಅದು ಒಮ್ಮೆಲೇ ಚಿಮ್ಮಿದ ರಭಸಕ್ಕೆ ಎಲ್ಲರೂ ಕೊಚ್ಚಿ ಹೋಗಿದ್ದಾರೆ....ರೋಜ಼ಾ ಮುಗಿಯದ ಮಕ್ಕಳು, ಹೊರಗೆ ಆರ್ತರಾಗಿ ಬೇಡುತ್ತಿರುವ ಭಿಕ್ಷುಕರೂ ಅದರಲ್ಲಿ ಒಂದಾಗಿ ಸೇರಿದ್ದಾರೆ.

ಇದ್ದಕ್ಕಿದ್ದಂತೆ ರಾತ್ರಿಯಾಗಿ ಕೊಚ್ಚಿಕೊಂಡು ಹೋಗುತ್ತಿದ್ದವರೆಲ್ಲ ಸ್ಪ್ರಿಂಗಿನಂತೆ ಎದ್ದು ತಟಸ್ಥರಾಗಿ ಚಂದ್ರನಿಗಾಗಿ ಆಕಾಶ ನೋಡುತ್ತ ಕಾದು ನಿಂತಿದ್ದಾರೆ. ಅವರದಿನ್ನೂ ರೋಜ಼ಾ ಮುಗಿದಿಲ್ಲ. ಓಹ್! ತನ್ನದಿನ್ನು ನಮಾಜು ಮುಗಿದಿಲ್ಲ. ಎಲ್ಲಿ ನೋಡಿದರೂ ಜನ ಜನ ಜನ. ಎಲ್ಲರೂ ತಲೆಯೆತ್ತಿ ಚಂದ್ರನಿಗೆ ಕಾಯುತ್ತ ತಟಸ್ಥ ನಿಂತಿದ್ದಾರೆ. ನೂಲು ಹರಿದು ತೇಲುತ್ತ ದೂರ ಸಾಗುತ್ತಿರುವ ಗಾಳಿಪಟದಂತೆ ಚಂದ್ರ ಹಾಯುವ ಮೋಡಗಳ ಹಿಂದೆ ದೂರ ಸರಿದಂತೆ ಕಾಣುತ್ತಿದ್ದಾನೆ. ನೆಲದ ಮೇಲೆ ಎಲ್ಲಿಯೂ ನಮಾಜು ಮಾಡುವುದಕ್ಕೆ ಎರಡು ಅಡಿ ಜಾಗವಿಲ್ಲ. ಅಲ್ಲಿಂದ ಓಡುತ್ತಾನೆ. ಎಲ್ಲರನ್ನು ತಳ್ಳುತ್ತ ಓಡುತ್ತಾನೆ. ಓಡಿ ಓಡಿ ಏದುಸಿರು ಬಿಡುತ್ತ ಲಿಫ್ಟಿನ ಹತ್ತಿರ ಬರುವುದಕ್ಕೆ ಸರಿಯಾಗಿ ಅದು ಬಾಗಿಲು ಮುಚ್ಚಿಕೊಂಡು ಹೊರಟು ಬಿಡುತ್ತದೆ. ಇವನು ಆರ್ತನಾಗಿ ಕೂಗಿಕೊಂಡರೂ ಅದರೊಳಗೆ ಯಾರೂ ಇಲ್ಲದಿದ್ದರೂ ಅದು ತಾನಾಗಿಯೇ ಯಾವುದೋ ಅಂತರಿಕ್ಷಕ್ಕೆ ಹಾರಿಬಿಡುತ್ತದೆ. ದಡದಡನೆ ಮಹಡಿ ಹತ್ತುತ್ತಾನೆ. ಕೊನೆಗೊಂದು ಸಣ್ಣ ಜಾಗ ಕಂಡು ಅಲ್ಲೇ ಮಂಡಿಯೂರಿ ಕುಳಿತು ನಮಾಜಿಗೆ ತೊಡಗಬೇಕು...ಸುತ್ತ ನೋಡಿ ದಿಗ್ಭ್ರಾಂತನಾಗುತ್ತಾನೆ. ಅದೇ ಅದೇ...ತನ್ನ ಆಫೀಸಿನ ಜಾಗ!

ಕಣ್ಣು ತೆರೆದಾಗ ಬೆಳಕು ಭಯಾನಕ ಹಗಲಾಗಿ ಹರಡಿತ್ತು. ಜುನೇದ್ ಅಂದು ಸ್ನಾನ ಮಾಡದೆಯೇ ಆಫೀಸಿಗೆ ಹೊರಟಿದ್ದ.
ಆ ದಿನ ಮೀಟಿಂಗ್ ರೂಮಿನಲ್ಲಿ ಭಾಸ್ಕರ್, ಉದ್ಯೋಗಿಗಳ ಸಮಸ್ಯೆಗಳನ್ನು ನಿರ್ವಹಿಸಲು ಹೆಚ್.ಆರ್್ ಆಗಿರುವ ಸ್ನೇಹ ಮತ್ತು ಜುನೇದ್ ಸೇರಿದ್ದರು. ಅದೇನಾಗಿತ್ತೆಂದರೆ ಜುನೇದ್ ನಮಾಜು ಮಾಡುತ್ತಿದ್ದ ಜಾಗದಲ್ಲಿ ಈಗ ಸ್ನೇಹ ಕೂತು ಕೆಲಸ ಮಾಡುತ್ತಿದ್ದಳು. ಅವಳನ್ನು ಅಲ್ಲಿ ಕೂತು ಕೆಲಸ ಮಾಡುವಂತೆ ಸೂಚಿಸಿದ್ದು ಭಾಸ್ಕರನೇ. ಅಲ್ಲಿಗೆ ಇದು ಮುಗಿಯುತ್ತೆ ಅಂದುಕೊಂಡಿದ್ದ. ಆದರೆ ಜುನೇದ್ ಮೀಟಿಂಗ್ ರೂಮು ಖಾಲಿ ಇರುವುದನ್ನು ನೋಡಿ ಅಲ್ಲೇ ನಮಾಜಿಗೆ ಕೂರುತಿದ್ದ. ಕೆಲವರು ಅಚಾನಕ್ಕಾಗಿ ಮೀಟಿಂಗು ಏರ್ಪಡಿಸಿ ರೂಮಿಗಾಗಿ ಅಲೆದಾಡುತ್ತಿದ್ದವರು ಇವನು ನಮಾಜು ಮಾಡಲು ಕೂತಿರುವುದನ್ನು ಕಂಡು ಅದು ಮುಗಿಯುವವರೆಗೆ ಹೊರಗೆ ಕಾದು ಅವನು ಹೊರಬಂದ ಮೇಲೆ ಒಳಹೋಗುತ್ತಿದ್ದರು.

ಶ್ರೀಶನಿಗೂ ಒಮ್ಮೆ ಮೀಟಿಂಗ್ ರೂಮಿನ ಅವಶ್ಯಕತೆ ಬಂದು ಅಲ್ಲಿ ಜುನೇದನನ್ನು ನೋಡಿದವನೇ ನೇರ ಸ್ನೇಹಳ ಹತ್ತಿರ ಹೋಗಿ ಕಂಪ್ಲೈಂಟ್ ಮಾಡಿದ. ಅವಳು ಯಾರೂ ಮೀಟಿಂಗ್ ರೂಮುಗಳನ್ನು ಯಾವುದೇ ಖಾಸಗೀ ಸಂಗತಿಗಳಿಗೆ ಬಳಸಿಕೊಳ್ಳಬಾರದು ಅಂತ ವಿನಂತಿಸುತ್ತ ಎಲ್ಲರಿಗೂ ಒಂದು ಅಫೀಶಿಯಲ್ ಇ ಮೇಲ್ ಕಳಿಸಿದಳು. ಆದರೂ ಜುನೇದ್ ರೂಮು ಖಾಲಿ ಇರುವುದನ್ನು ನೋಡಿ ಬಳಸಿಕೊಳ್ಳುತ್ತಿದ್ದ. ಕೊನೆಗೆ ಅವನಲ್ಲಿ ಖುದ್ದಾಗಿ ಮಾತನಾಡುವುದಕ್ಕೆ ಈ ಮೀಟಿಂಗು ಕರೆದು, ‘ಹೀಗೆ ಮೀಟಿಂಗ್ ರೂಮನ್ನು ಬಳಸಿಕೊಳ್ಳುವ ಹಾಗಿಲ್ಲ. ಅದು ಅನ್ಪ್ರೊಫೆಶೆನಲ್’ ಅಂತ ಸ್ನೇಹ ನೇರವಾಗಿ ಹೇಳಿದಳು. ‘ಇಲ್ಲ. ಯಾರೂ ರೂಮು ಬುಕ್ ಮಾಡಿಲ್ಲ ಅನ್ನುವುದನ್ನು ಖಚಿತ ಪಡಿಸಿಕೊಂಡೇ ಒಂದು ಹತ್ತು ನಿಮಿಷ ಉಪಯೋಗಿಸುತ್ತೇನೆ’ ಅಂತ ಜುನೇದ್ ಸಮರ್ಥಿಸಿಕೊಂಡ.

‘ಕ್ಲೈಂಟ್ಸ್ ಜೊತೆ ಅರ್ಜೆಂಟ್ ಕಾಲ್ ಇರುತ್ತೆ. ಸಡನ್ನಾಗಿ ಮೀಟಿಂಗ್ ಫಿಕ್ಸ್ ಆಗುತ್ತೆ. ಆಗ ಜನ ಯಾವ ರೂಮು ಖಾಲಿ ಇರುತ್ತೋ ಅಲ್ಲಿ ನುಗ್ಗುತ್ತಾರೆ’ ಅನ್ನುತ್ತಿದ್ದವಳ ಮಾತಿನ ಮಧ್ಯೆ ಭಾಸ್ಕರ್ ನಯವಾಗಿ, ‘ನಿನಗೇ ಗೊತ್ತಲ್ಲ. ಮೊದಲೇ ಮೀಟಿಂಗ್ ರೂಮುಗಳು ಕಮ್ಮಿ ಇವೆ. ನಿನಗೇ ಅರ್ಥ ಆಗುತ್ತಲ್ವಾ. ಇದನ್ನ ಅನವಶ್ಯಕವಾಗಿ ದೊಡ್ಡ ಇಶ್ಶು ಮಾಡೋದು ನನಗೂ ಬೇಕಿಲ್ಲ. ಒಂದು ಪ್ರತ್ಯೇಕ ಪ್ರೇಯರ್ ರೂಮು ಮಾಡೋಣ ಅಂತ ಅಂದ್ಕೋತಾ ಇದ್ದೀವಿ. ನೀನು ಸದ್ಯಕ್ಕೆ ಬೇಕಿದ್ದರೆ ಮಸೀದಿಗೇ ಹೋಗಿ ನಮಾಜು ಮುಗಿಸಿಕೊಂಡು ಬಾ. ನಮ್ಮದೇನೂ ಅಭ್ಯಂತರ ಇಲ್ಲ’ ಅಂದ.

‘ಸಂಜೆ ಕ್ಲೈಂಟ್ಸ್ ಮೀಟಿಂಗ್ ಇರೋದು ನಿನಗೇ ಗೊತ್ತಲ್ಲ ಭಾಸ್ಕರ್. ಹೊರಗೆ ಹೋದರೆ ಬರೋದು ತಡ ಆಗುತ್ತೆ’, ತಾನೂ ಈ ಸಮಸ್ಯೆಗೆ ಪರಿಹಾರ ಹುಡುಕುವ ಕಾಳಜಿ ಇರುವವನ ಹಾಗೆ ಜುನೇದ್ ಹೇಳಿದ. ‘ಹೋ ಹೌದಲ್ವಾ...ಅದೇ...ಏನೂ ಮಾಡೋಕ್ಕಾಗೊಲ್ಲ. ಅದೇನು ರಂಜ಼ಾನ್ ಮುಗಿಯುವವರೆಗೆ ಮಾತ್ರವಾ?’ ಅಂತ ತಿಳಿದುಕೊಳ್ಳುವ ಕುತೂಹಲದಲ್ಲಿ ಭಾಸ್ಕರ್ ಕೇಳಿದಾಗ, ‘ಅಕ್ಚುಯಲಿ ಪ್ರತಿದಿನ ಮಾಡಬೇಕು. ರಂಜ಼ಾನ್ ಸಮಯದಲ್ಲಿ ಕಡ್ಡಾಯವಾಗಿ ಮಾಡಬೇಕು’ ಅಂದ.

‘ಸರಿ ಸದ್ಯಕ್ಕೆ ಸ್ನೇಹಾ ಬೇರೆಲ್ಲಾದರು ಕೂರುತ್ತಾಳೆ. ನೀನು ರಂಜ಼ಾನ್ ಮುಗಿಯುವವರೆಗೆ ಇದೇ ಜಾಗ ಉಪಯೋಗಿಸಿಕೋ. ಮೀಟಿಂಗ್ ರೂಮ್ಸ್ ಮಾತ್ರ...ಪ್ಲೀಸ್...’ ಎಂದು ವಿನಂತಿಯ ದನಿಯಲ್ಲಿ ಹೇಳಿದ. ‘ಆಯ್ತು. ಸಾರಿ ನಿಮಗೆ ಏನಾದ್ರು ತೊಂದರೆ ಆಗಿದ್ರೆ...’ ಅಂತ ಜುನೇದ್ ಮಾತು ಮುಂದುವರೆಸುವ ಮೊದಲೇ, ‘ಹೇ...ನೋ ನೋ...ಮೀಟಿಂಗ್ ರೂಮ್ಗಳದ್ದೇ ಸಮಸ್ಯೆ. ನಿಂಗೇ ಗೊತ್ತಲ್ಲ. ಅದರ್ ವೈಸ್ ನೋ ಪ್ರಾಬ್ಲಮ್’ ಎಂದು ಭಾಸ್ಕರ್ ಆ ಮೀಟಿಂಗ್ ಮುಗಿಸಿದ್ದ.

ಆದರೆ ಶ್ರೀಶನಿಗೆ ಮಾತ್ರ ಇದನ್ನು ಸ್ವೀಕರಿಸಲು ಸಾಧ್ಯವೇ ಆಗಲಿಲ್ಲ. ಎಲ್ಲರೂ ತಮ್ಮ ತಮ್ಮ ಇಷ್ಟಕ್ಕೆ ನಡೆದುಕೊಂಡರೆ ಹೇಗೆ? ಇಲ್ಲೊಂದು ಸಮಾನ ನೀತಿ ನಿಯಮಗಳು ಇಲ್ಲವೇನು? ಅಂತ ಕಂಪನಿಯ ಹೆಚ್.ಆರ್. ಗ್ರೂಪಿಗೆ ಇ ಮೇಲ್ ಬರೆದು ಅದನ್ನು ಉನ್ನತ ಅಧಿಕಾರಿಗಳಿಗೂ ತಲುಪಿಸಿದ್ದ. ‘ಒಂದು ಸಮಸ್ಯೆಯನ್ನ ಅಲ್ಲೇ ಮಟ್ಟ ಹಾಕೋದು ಬಿಟ್ಟು, ಇಲ್ಲಿವರೆಗೆ ಬರೋದಕ್ಕೆ ಅನುವು ಮಾಡಿಕೊಟ್ಟಿದ್ದೀಯಲ್ಲ. ಇದು ಇಲ್ಲಿಗೇ ಮುಗಿಯುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಿನ್ನದು’ ಅಂತ ಭಾಸ್ಕರನ ಬಾಸ್ ಅವನಿಗೆ ತಾಕೀತು ಮಾಡಿದ್ದ.

ಈಗ ತನಗೆ ಹೊಳೆದಿರುವ ಈ ಪರಿಹಾರವನ್ನು ಶ್ರೀಶನಿಗೆ ಹೇಳಿ ಒಪ್ಪಿಸುವುದು ಹೇಗೆ ಅನ್ನುವುದನ್ನು ಯೋಚಿಸುತ್ತ ಭಾಸ್ಕರ್ ಮನೆ ತಲುಪುವಾಗ ರಾತ್ರಿ ಹನ್ನೊಂದಾಗಿತ್ತು. ನಿದ್ದೆಯ ಸವಿಗನಸಿನಂತಿದ್ದ ಮಗಳ ಮುಖವನ್ನೊಮ್ಮೆ ನೋಡಿದಾಗ ಅವಳು ಹುಟ್ಟಿದ ಸಮಯವೇ ಅವನಿಗೆ ನೆನಪಾಯಿತು. ಆಗಿನ್ನೂ ಅವನು ಮ್ಯಾನೇಜರ್ ಆಗಿರಲಿಲ್ಲ. ಇದೇ ಕಂಪೆನಿಯ ವತಿಯಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿ ಮೈಸೂರಿನಲ್ಲಿದ್ದಳು. ಡಾಕ್ಟರು ಹೇಳಿದ ಡೇಟಿಗೆ ಎರಡು ವಾರಕ್ಕೆ ಮುಂಚಿತವಾಗಿಯೇ ಹಡೆದಿದ್ದಳು.

ಸ್ಕೈಪಿನಲ್ಲಿ ಮಗುವಿನ ಮುಖ ನೋಡಿ ಖುಷಿಪಟ್ಟಿದ್ದ. ಅದೇನು ಮುಖವೆಲ್ಲ ಅರಿಶಿಣ ಆಗಿದೆ. ಅದೇನು ಹಣೆಯ ಮೇಲೆ ಗುರುತು ಅಂತ ಅತೀವ ಕಾಳಜಿ ತೋರಿದ್ದ. ಬೆಂಗಳೂರಿನ ಏರ್ಪೋರ್ಟಿನಲ್ಲಿ ಇಳಿದವನೇ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಟ್ಯಾಕ್ಸಿ ಮಾಡಿಕೊಂಡು ಮೈಸೂರಿಗೆ ಹೊರಟಿದ್ದ. ಬೆಂಗಳೂರಿನಿಂದ ಮೈಸೂರಿಗೆ ಬರುವವರೆಗು ಆಕಾಶ, ಚುಕ್ಕಿ, ಚಂದ್ರ, ಹಿಂದೋಡುವ ಮರಗಳು, ಅಲ್ಲಲ್ಲಿ ಎದುರಾಗುವ ಬಯಲು, ಎಲ್ಲವನ್ನೂ ಕಣ್ಣು ಬಿಟ್ಟುಕೊಂಡು ನೋಡುತ್ತ ಕೂತಿದ್ದ. ಮನೆಯ ಸಾಲ, ಹೆಂಡತಿ-ಮಗುವಿನ ವೀಸಾ ಉಸಾಬರಿ, ಅಪ್ಪನ ಹದಗೆಡುತ್ತಿರುವ ಆರೋಗ್ಯ, ಎಲ್ಲವನ್ನೂ ಮೀರಿ ಮಗುವಿನ ಮುಖ ನೋಡುವ ಕಾತರದಲ್ಲಿ ಮನೆಗೆ ಬಂದಿಳಿದಿದ್ದ. ಮಗುವಿನ ಮುಖ ನೋಡಿದವನ ಕಣ್ಣಂಚು ಒದ್ದೆಯಾಗಿತ್ತು.

ಬಹುಶಃ ಅದೇ ಕೊನೆಯ ಸಲವಿರಬೇಕು ತಾನು ಚಂದ್ರನನ್ನು ಸರಿಯಾಗಿ ಗಮನಿಸಿ ನೋಡಿದ್ದು ಅಂತ ನೆನಪಿಸಿಕೊಂಡ. ಇಲ್ಲ ಏನು ಮಾಡಿದರೂ ಅದಾದ ಮೇಲೆ ತಾನು ಚಂದ್ರನನ್ನು ಗಮನಿಸಿ ನೋಡಿದ್ದು ಯಾವಾಗ ಅನ್ನುವುದು ನೆನಪಿಗೆ ಬರಲಿಲ್ಲ. ಆ ಅಪಾರ್ಟ್ಮೆಂಟಿನ ಬಾಲ್ಕನಿಯ ಉದ್ದ ತಿರುಗಾಡುತ್ತ ಯಾವ ದಿಕ್ಕಿಗೆ ನೋಡಿದರೂ ಅವನಿಗೆ ಚಂದ್ರ ಕಾಣಿಸಲಿಲ್ಲ... ಯಾವ ಕಡೆ ನೋಡಿದರೂ ಚಂದ್ರ ಕಾಣುತ್ತಿಲ್ಲ. ಕಾರಿನ ವೇಗಸೂಚಿ ನೂರು ಮೈಲಿಯಿಂದ ಇನ್ನೂರು ಮೈಲಿಗೆ ಏರುತ್ತಿದೆ. ಸೂಟು-ಟೈ ಕಟ್ಟಿಕೊಂಡ ತನ್ನ ಬಾಸು ‘ಪ್ರೋಗ್ರೆಸ್! ಪ್ರೋಗ್ರೆಸ್!!!...’ ಅಂತ ಅರಚುತ್ತಿರುವುದು ಕ್ಷೀಣವಾಗಿ ಕೇಳುತ್ತಿದೆ.

ಬಾಸಿನ ಮುಖವು ನೀರಿನಲ್ಲಿ ಕರಗಿದಂತೆ ಕರಗುತ್ತಿದೆ. ಎದುರಿನಲ್ಲಿ ಶ್ರೀಶ ಕೂತಿದ್ದಾನೆ. ಇಲ್ಲಿ ಗ್ರಾಹಕನೇ ದೇವರು, ಸಮಯವೇ ಧರ್ಮ ಅನ್ನುವುದು ಸ್ಪಷ್ಟವಾಗುವಂತೆ ಏರುತ್ತಿರುವ ಲಾಭದ ರೇಖೆಗಳನ್ನು ಅವನಿಗೆ ವಿವರಿಸುತ್ತಿದ್ದಾನೆ. ಶ್ರೀಶ ಎಗರಾಡುತ್ತಾನೆ, ಹಲ್ಲು ಮಸೆಯುತ್ತಾನೆ. ‘ರಿಸೆಶನ್! ರಿಸೆಶನ್!!...ಇರುವ ಮೂರು ಜನರ ಟೀಮಿಗೆ ಲೀಡ್ ಯಾಕೆ ಬೇಕು?’ ಅಂತ ಹತ್ತಾರು ಜನ ಸೂಟುಧಾರಿಗಳು ಒಟ್ಟಿಗೇ ಒಬ್ಬರ ಮೇಲೊಬ್ಬರು ಕೇಳಿದ್ದು ನೋಡಿ ತನಗೇ ಒಮ್ಮೆ ಗಾಬರಿಯಾಗುತ್ತದೆ. ಯಾರ ಮುಖವೂ ಪರಿಚಿತವಲ್ಲ. ಶ್ರೀಶ ಅಳುವುದಕ್ಕೆ ಶುರುಮಾಡುತ್ತಾನೆ. ಅಳಬೇಡ ಶ್ರೀಶ ಜುನೇದನ ಪ್ರಾಜೆಕ್ಟಿನಲ್ಲಿ ನಾಲ್ಕು ತಲೆಗಳು ಕಡಿಮೆಯಾಗಬೇಕು, ನಿನಗೆ ತಕ್ಕ ಕೆಲಸಕ್ಕೆ ಅಲ್ಲಿ ಒಂದು ತಲೆಯ ಅವಶ್ಯಕತೆಯಿದೆ. ನಿನ್ನನ್ನೇ ಅಲ್ಲಿಗೆ ಸೇರಿಸುತ್ತೇನೆ ಅಂದಾಗ ಶ್ರೀಶ ತೆಪ್ಪಗಾಗುತ್ತಾನೆ.

ಶೇರುಗಳ ಸೂಚ್ಯಂಕ ಏರುತ್ತಲೇ ಇದೆ. ಅದರ ತುದಿಯಿಂದ ಸಣ್ಣ ಬಿಂದುವೊಂದು ಹಿರಿದಾಗುತ್ತ ಹಿರಿದಾಗುತ್ತ ಕಂಪ್ಯೂಟರಿನಿಂದ ಆಚೆ ನೆಗೆದು ಆಕಾಶಕ್ಕೆ ಹಾರಿ ಚಂದ್ರನ ರೂಪ ಪಡೆದಿದೆ. ಅದು ಚಂದ್ರನೇ. ಎಳೆ ಚಂದ್ರ, ಅರ್ಧ ಚಂದ್ರ, ಪೂರ್ಣ ಚಂದ್ರ... ಶ್ರೀಶ ಕೂತಿದ್ದ ಜಾಗದಲ್ಲಿ ಈಗ ಜುನೇದ್ ಕುಳಿತಿದ್ದಾನೆ! ಆ ಚಂದ್ರ ಮತ್ತೂ ಹಿಗ್ಗುತ್ತಿದೆ. ‘ನೋಡು ಜುನೇದ್ ಈ ಚಂದ್ರನಿಗೆ ಕ್ಷಯವೇ ಇಲ್ಲ. ನಾವಿದನ್ನು ಕ್ಷಯಿಸದಂತೆ ಕಾಯಬೇಕು. ಸುಮ್ಮನೆ ಪ್ರಾರ್ಥನೆಗೆ ಕೂತರೆ ಅರ್ಥವಿಲ್ಲ’ ಅಂತ ವಿವರಿಸುತ್ತಿದ್ದರೂ ಜುನೇದ್ ಇನ್ನಷ್ಟು ಮತ್ತಷ್ಟು ಗಾಢವಾಗಿ ಮಂತ್ರ ಪಠಿಸುತ್ತಿದ್ದಾನೆ. ಚಂದ್ರ ಬೆಳೆಯುತ್ತಲೇ ಇದೆ. ಬೆಳೆಯುತ್ತ ಬೆಳೆಯುತ್ತ ಭೂಮಿಗಿಂತ ಹಿರಿದಾಗಿದೆ. ಆಕಾಶವನ್ನೆಲ್ಲ ಆವರಿಸಿದೆ. ರಾತ್ರಿ ಕಾಣೆಯಾಗಿದೆ. ಈ ಚಂದ್ರನ ಆಸೆ ಭೂಮಿಯನ್ನೇ ಕಬಳಿಸಿದೆ....

ಹಗಲು ಹೊತ್ತು ತಾನೇಕೆ ಮಲಗಿದ್ದೇನೆ ಅಂದುಕೊಳ್ಳುತ್ತ ಭಾಸ್ಕರ ಕಣ್ಣು ತೆರೆದಾಗ ರಾತ್ರಿ ಮಲಗಿದ್ದೇ ನೆನಪಿಲ್ಲದ ಹಾಗೆ ಹಗಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.