ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಪ್ರಕಾಶ್ ರೈ ಅವರ ನಿರ್ದಿಗಂತ ಎಂಬ ಕಾವು ಗೂಡು!

Published 18 ಜೂನ್ 2023, 0:19 IST
Last Updated 18 ಜೂನ್ 2023, 0:19 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣದ ಬಳಿಯ ಲೋಕಪಾವನಿ ನದಿತಟದಲ್ಲಿ ನಟ ಪ್ರಕಾಶ್ ರೈ ‘ನಿರ್ದಿಗಂತ’ ಎನ್ನುವ ಹೊಸ ರಂಗದ ಗೂಡು ಕಟ್ಟಿದ್ದಾರೆ. ರಂಗಕರ್ಮಿಗಳಿಗೆ ಘನತೆ ದಕ್ಕಿಸಿಕೊಡುವ ಉಮೇದು ಅವರದ್ದು.

ನಿರ್ದಿಗಂತ ಎಂದ ಕೂಡಲೇ ನೆನಪಾಗುವವರು ನಮ್ಮ ಕುವೆಂಪು. ‘ವಿಶ್ವಮಾನವ’ ಕವಿತೆಯಲ್ಲಿ, ನಿರ್ದಿಗಂತವಾಗಿ ಏರುತ್ತಾ ಅನಿಕೇತನವಾಗುವ ಚೇತನದ ಸಾಧ್ಯತೆಯ ಕಡೆಗೆ ವಿಶಿಷ್ಟವಾಗಿ ಗಮನ ಸೆಳೆದವರು. ಆ ಮಹಾಕವಿಯನ್ನು ಎದೆಯಾಳಕ್ಕಿಳಿಸಿಕೊಂಡು ನಟ ಪ್ರಕಾಶ್‌ರೈ ರಂಗಭೂಮಿಗೆ ವಾಪಸು ಬಂದಿದ್ದಾರೆ. ಆದರೆ, ನಟರಾಗಿ ಮತ್ತೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅಲ್ಲ, ರಂಗಭೂಮಿಯ ಹೊಸ ಪೀಳಿಗೆಯ ದಿಗಂತಗಳನ್ನು ವಿಸ್ತರಿಸಲು. ಅವರೇ ಹೇಳಿಕೊಳ್ಳುವಂತೆ ಇದು ‘ರಂಗಭೂಮಿ ಕ್ಷೇತ್ರದಲ್ಲಿರುವ ಅಪನಂಬಿಕೆ ಮತ್ತು ಬಡತನವನ್ನು ಕೈಲಾದ ಮಟ್ಟಿಗೆ ನಿವಾರಿಸುವ ಪ್ರಯತ್ನ’. ‘ಹತ್ತು ಹಕ್ಕಿಗಳು ಸೇರಿದರೆ ರಂಗನ ತಿಟ್ಟು. ನಿರ್ದಿಗಂತ ಅದೇ ರೀತಿ ರಂಗದ ತಿಟ್ಟು ಆಗಬೇಕು’ ಎಂಬುದು ಅವರ ಆಶಯ.

ಅದಕ್ಕಾಗಿ ಅವರು ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿಯ ಲೋಕಪಾವನಿ ನದಿಯಂಚಿನಲ್ಲಿ ತೋಟ ಮಾಡಿ, ‘ನಿರ್ದಿಗಂತ’ ಎಂಬ ‘ಇನ್‌ಕ್ಯುಬೇಟರ್‌ ಥಿಯೇಟರ್‌’ ಅಥವಾ ರಂಗಭೂಮಿಯ ಕಾವುಗೂಡನ್ನು ಕಟ್ಟುತ್ತಿದ್ದಾರೆ. ಅಲ್ಲಿ ಕನಿಷ್ಠ ಮೂವತ್ತು ಜನ ನೆಲೆಸಿ ರಂಗ ತಾಲೀಮು ನಡೆಸಲು ಬೇಕಾದ ಎಲ್ಲ ಸೌಕರ್ಯಗಳೂ ಇವೆ.

ರಾಜ್ಯದಲ್ಲಿ ನಾಟಕ ಪ್ರದರ್ಶನಕ್ಕೆ ಹಲವು ರಂಗಮಂದಿರಗಳಿದ್ದರೂ ತಾಲೀಮಿಗೆ ಬೇಕಾದ ಉತ್ತಮ ಜಾಗಗಳಿಲ್ಲವೆಂಬ ಕೊರತೆಯನ್ನು ನೀಗಿಸುವ ರೀತಿಯಲ್ಲಿ ಅದನ್ನು ರೂಪಿಸಿರುವುದು ವಿಶೇಷ. ಅಲ್ಲಿ ಏಕಾಂತವಿದೆ. ಪ್ರಶಾಂತತೆ ಇದೆ. ಸೋಲುವುದಕ್ಕೆ ಭಯ ಪಡಬೇಕಾಗಿಲ್ಲ ಎಂಬ ಧೈರ್ಯವಿದೆ. ತೀರ್ಪು ಕೊಡುವವರಿಲ್ಲ. ಆತಂಕ, ಆಶಯ, ಗ್ರಹಿಕೆಗಳನ್ನು ಗೂಡಿನಲ್ಲಿ ಕುಳಿತವರೇ ಕಟ್ಟಬೇಕು. ನಂತರ ಅವರೇ ಹಾರಬೇಕು. ಹೀಗಾಗಿಯೇ, ನಿರ್ದಿಗಂತದ ರಂಗವೇದಿಕೆಯ ಹೊರಗೆ, ಹಾರಲು ಸಜ್ಜಾದ ಬೀಜದ ಪ್ರತಿಮೆಯನ್ನು ಕಡೆದಿರಿಸಲಾಗಿದೆ.

ಸಿನಿಮಾ, ನಟನೆ, ನಿರ್ದೇಶನ, ಬರವಣಿಗೆ, ಸಮಾಜ ಸೇವೆ, ವ್ಯವಸಾಯ ಎಲ್ಲದ್ದರಲ್ಲೂ ತೊಡಗಿಸಿಕೊಳ್ಳುತ್ತಲೇ ರಂಗಭೂಮಿ ಕ್ಷೇತ್ರಕ್ಕೆ ಏನು ಮಾಡಬಹುದು ಎಂದು ಆಲೋಚಿಸಿದಾಗ ಹೊಳೆದಿದ್ದು ಅದು. ಅದಕ್ಕೆ, ‘ಪ್ರಕಾಶ್‌ರಾಜ್‌ ಫೌಂಡೇಶನ್‌, ಚಾರಿಟಿ ಏನೂ ಬೇಕಾಗಿಲ್ಲ’ ಎಂಬುದು ಅವರ ಪ್ರತಿಪಾದನೆ. ಹೀಗಾಗಿ ಅವರು ಕಾವುಗೂಡಿಗೆ ತಮ್ಮ ಸ್ವಂತ ಸಂಪಾದನೆಯ ಹಣವನ್ನೇ ಮುಡುಪಿಟ್ಟಿದ್ದಾರೆ.

ನಿರ್ದಿಗಂತದ ಮೊದಲ ನಾಟಕದ ರಚನೆ, ನಿರ್ದೇಶನದ ನೇತೃತ್ವ ವಹಿಸಿರುವ ಶ್ರೀಪಾದ ಭಟ್ಟರು ಹೇಳುವಂತೆ, ‘ಇಲ್ಲಿ ಸದ್ಯ ಎರಡು ವಾರದಿಂದ ಪ್ರದರ್ಶನಾಧಾರಿತ ರಂಗ ತರಬೇತಿ ಶುರುವಾಗಿದೆ. ರಂಗಶಾಲೆಗಳ ಮುಂದುವರಿದ ಭಾಗವಾಗಿ, ರಂಗಭೂಮಿಯ ಕಲಿಕೆ ಹಾಗೂ ಸಮಾಜ–ಸಮುದಾಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಸಂಘಟಿಸುವ ಪ್ರಯತ್ನ ಅದು. ಇದು ಶಾಲೆಯಲ್ಲ, ಇಲ್ಲಿ ನಿರ್ದಿಷ್ಟ ಪಠ್ಯಕ್ರಮವಿಲ್ಲ. ಕಲಿಯುವುದು ಮತ್ತು ಕಲಿತಿದ್ದನ್ನು ಮರೆಯುವುದು. ಮತ್ತು ಅದರ ‍ಪುನರಾವರ್ತನೆ ಅಷ್ಟೇ.

ನಾಟಕಕ್ಕಾಗಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ 15 ಯುವ ಪ್ರತಿಭಾವಂತರು ಒಟ್ಟಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಜನ ರಂಗ ತರಬೇತಿ ಪಡೆದು, ರೆಪರ್ಟರಿಗಳನ್ನು ನಡೆಸುತ್ತಿರುವವರು. ಉಳಿದವರು ಈಗ ತಾನೆ ರಂಗಶಾಲೆಗಳಿಂದ ಹೊರ ಬಂದವರು. ಅವರಿಬ್ಬರನ್ನೂ ಸೇರಿಸಿ ರಂಗದ ಚಹರೆಯನ್ನು ಹುಡುಕುವ ಪ್ರಯತ್ನ ನಡೆದಿದೆ. ಈ ಕಾವುಗೂಡಿನ ಹಕ್ಕಿಮರಿಗಳಿಗೆ 45 ದಿನದ ಸನಿವಾಸ, ಗೌರವಧನ ಸಮೇತ ರಂಗ ತರಬೇತಿ ಸಿಗುತ್ತಿದೆ. ಅವರೊಂದಿಗೆ ಇಂಟರ್ನಿಗಳೂ ಇದ್ದಾರೆ.

ಸಿದ್ಧನಾಟಕವನ್ನು ಪ್ರದರ್ಶಿಸುವ ಹಳೇ ಮಾದರಿ ಇಲ್ಲಿಲ್ಲ. ಬದಲಿಗೆ ಹೊಸ ಪಠ್ಯಗಳನ್ನು ಪ್ರಯೋಗಿಸುವ ಪ್ರಯತ್ನ. ಯುದ್ಧ ಮತ್ತು ಕೋಮು ಭಾವಗಳಿಂದ ಪೂರಿತವಾದ ಜಾಗತಿಕ ಸಂದರ್ಭವನ್ನು ಕುರಿತು ಯುವಜನಾಂಗ– ನಟವರ್ಗ ಚಿಂತಿಸಬೇಕು. ಅದಕ್ಕೆ ಬೇಕಾದ ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕು ಎಂಬ ಆಶಯದಿಂದಲೇ ನಮ್ಮ ಕನ್ನಡದಿಂದ ಜಾಗತಿಕ ಮಟ್ಟದವರೆಗಿ ಪ್ರಮುಖ ಪಠ್ಯಗಳ ಓದು ನಡೆದಿದೆ. ನಂತರವಷ್ಟೇ ನಾಟಕದ ಮಾತು.

ಸಾದತ್‌ ಹಸನ್‌ ಮಾಂಟೋ ಅವರ ಕತೆ, ಕುವೆಂಪು ಅವರ ನಾಟಕ ‘ಸ್ಮಶಾನ ಕುರುಕ್ಷೇತ್ರಂ’ನ ದೃಶ್ಯ, ಕೃಷ್ಣಮೂರ್ತಿ ಹನೂರು ಅವರ ‘ಅಜ್ಞಾತನ ಆತ್ಮಚರಿತ್ರೆ’ಯ ಕೆಲವು ಪುಟಗಳು, ರವೀಂದ್ರನಾಥ ಟ್ಯಾಗೋರರ ‘ಡಿಸ್ಟ್ರಕ್ಷನ್‌’ ಕತೆ ಮತ್ತು ಪಿರಾಂಡೆಲೊ ಅವರ ‘ವಾರ್’ ಕತೆ, ಕನ್ನಡದ ಮತ್ತು ಕನ್ನಡಕ್ಕೆ ಅನುವಾದಗೊಂಡ ಕವಿತೆಗಳನ್ನಿಟ್ಟುಕೊಂಡ, ಯುದ್ಧ ಮತ್ತು ಶಾಂತಿಯ ಕುರಿತ ರಂಗಪಯಣ ಇದು. ಕೊನೆಗೆ ಒಂದು ರಂಗ ಪ್ರಯೋಗ ಸಿದ್ಧಗೊಂಡು, ಅದನ್ನು ರಾಜ್ಯದಾದ್ಯಂತ ನಿರ್ದಿಗಂತ ಕೊಂಡೊಯ್ಯುತ್ತದೆ. ಜುಲೈ ಕೊನೇವಾರದಲ್ಲಿ ಈ ಪಯಣ ಶುರುವಾಗಲಿದೆ.

‘ಹಾಗಾದರೆ ನಿರ್ದಿಗಂತವೆಂಬುದು ನಾಟಕ ಪ್ರೋಡಕ್ಷನ್‌ ಹೌಸ್‌ ಹೌದೆ?’ ಎಂದರೆ ಪ್ರಕಾಶ್‌ರೈ ಸುಲಭಕ್ಕೆ ಒಪ್ಪುವುದಿಲ್ಲ. ‘ಅದಷ್ಟೇ ಅಲ್ಲ’ ಎನ್ನುತ್ತಾರೆ.

‘ನಾಟಕ ಮಾಡ್ಕೊಂಡು ಓಡಾಡ್ತಿದಿಯೇನೋ, ಊಟಕ್ಕೇನು ಮಾಡ್ಕೊಂಡಿದೀಯ ಅಂತ ಕೇಳ್ತಾರೆ. ಅಂದ್ರೆ ನಾಟಕಕ್ಕೆ ಮತ್ತು ನಟನಿಗೆ ಬೇಕಾದ ಘನತೆ ಇಲ್ಲ. ನಾಟಕ ಮಾಡಬಲ್ಲೆ, ಅದರಲ್ಲೇ ಸ್ವಲ್ಪ ದುಡಿಯಬಲ್ಲೆ, ಸಾಮಾಜಿಕ ಕಳಕಳಿಯಿಂದ ಬದುಕಿಗೆ ಒಂದು ಅರ್ಥ ಕಂಡುಕೊಳ್ಳಬಲ್ಲೆ ಎಂಬುದಕ್ಕೆ ನಂಬಿಕೆ ಕೊಡಬೇಕಲ್ಲವೇ. ಅದಕ್ಕಾಗಿ ನಮ್ಮಂಥವರ ಪ್ರಯತ್ನವೇ ನಿರ್ದಿಗಂತ’ ಎನ್ನುತ್ತಾರೆ ಅವರು. ಆ ಪ್ರಯತ್ನದ ಜೊತೆಗೇ ಕನ್ನಡ ಸಾಹಿತ್ಯ–ರಂಗಭೂಮಿಗೆ ಇಪ್ಪತ್ತು ಹೊಸ ಬಗೆಯ ನಾಟಕಗಳನ್ನು ಕೊಡುವ ಪ್ರಯತ್ನವೂ ನಡೆದಿದೆ. ಇದು ನಿರ್ದಿಗಂತದ ಶುರುವಷ್ಟೇ.

ಕರ್ನಾಟಕದಲ್ಲಿರುವ ರಂಗತಂಡಗಳು, ನಟರ ಅಂಕಿ–ಅಂಶವನ್ನು ‘ನಿರ್ದಿಗಂತ’ ಸಂಗ್ರಹಿಸಿದೆ. ಹಣಕಾಸಿನ ತೊಂದರೆ ಇರುವವರಿಗೆ ನಿರ್ದಿಗಂತವೇ ನಾಟಕವನ್ನು ಒದಗಿಸುತ್ತದೆ. ಇಷ್ಟವಾದರೆ ಅವರು ಇಲ್ಲಿಗೇ ಬಂದು ರಿಹರ್ಸಲ್‌ ಮಾಡಬಹುದು. ಅಂಥ ಐದಾರು ನಾಟಕಗಳ ನಂತರ ನಿರ್ದಿಗಂತ ನಾಟಕೋತ್ಸವವನ್ನೂ ಮಾಡಬಹುದು. ನಂತರ ಅವರು ನಾಟಕವನ್ನು ರಾಜ್ಯದ ಬೇರೆ ಕಡೆಗೆ ತೆಗೆದುಕೊಂಡು ಹೋಗಬಹುದು.

‘ರಂಗಭೂಮಿಯಲ್ಲಿರುವವರಿಗೆ ಹೀಗೆ ಘನತೆಯನ್ನು, ಬದುಕಿಗೆ ಒಂದು ಸಾಧ್ಯತೆಯನ್ನು ತಂದುಕೊಡುವ ಪ್ರಯತ್ನ ಇದು. ಅಲ್ಲಿವರೆಗೂ ರಂಗಭೂಮಿಯಲ್ಲಿ ನಟಿಸಬಾರದು’ ಎಂಬ ಪ್ರತಿಜ್ಞೆ ಮಾಡಿದ್ದಾರೆ ರೈ.

ನಿರ್ದಿಗಂತದಲ್ಲಿ ಈಗ ನಾಟಕ ಮೊದಲಾಗಿದೆ. ಮಹಿಳೆಯರೇ ಸೇರಿ ನಾಟಕ ಮಾಡಲು ಸಿದ್ಧತೆ ನಡೆದಿದೆ. ಹೆಸರಾಂತ ಕವಿಯೊಬ್ಬರಿಗೆ ನಾಟಕ ಬರೆದುಕೊಡುವಂತೆ ಕೇಳಲಾಗಿದೆ. ನಂತರ ಯಾವುದು ಬೇಕಾದರೂ ಆಗಬಹುದು. ಕವಿಗಳು ಬಂದು ಕವಿತೆ ಓದಬಹುದು. ಚಿತ್ರ ಕಲಾವಿದರು, ಹಲವು ಮಾಧ್ಯಮಗಳ ತಂತ್ರಜ್ಞರೂ ಬರಬಹುದು. ಆಡಿಯೋ ಬುಕ್‌ಗಳ ನಿರ್ಮಾಣದ ಆಶಯವೂ ಇದೆ. ಇದು ಹೀಗಾಗಿ ಬಹುಮಾಧ್ಯಮ, ಬಹುನೆಲೆಯ ಅಭಿವ್ಯಕ್ತಿ ಸ್ಥಳ. ಯಾವ ಗಡಿಯೂ ಇಲ್ಲ. ಎಲ್ಲದಕ್ಕೂ ಆಗಬಹುದಾದ ಒಂದು ಜಾಗ. ಇಲ್ಲಿಗೆ ಬಂದವರು ದಿಗಂತದ ಕಡೆಗೆ ನೋಡಲೇಬೇಕೆಂದೇನಿಲ್ಲ. ಹೊಸ ದಾರಿ, ಹೊಸ ಪಯಣದ ಅಚ್ಚರಿಗಳಿಗೆ ಖುಷಿ ಪಟ್ಟರೆ ಸಾಕು. ಅದೇ ನಿರ್ದಿಗಂತದೆಡೆಗೆ ಕರೆದೊಯ್ಯುತ್ತದೆ. ಕಾವುಗೂಡಿನಂತೆ ಬೆಚ್ಚಗಿರಿಸುತ್ತದೆ.

ರಂಗ ತಾಲೀಮು ನಡೆಸುತ್ತಿರುವ ಶಿಬಿರಾರ್ಥಿಗಳು
ರಂಗ ತಾಲೀಮು ನಡೆಸುತ್ತಿರುವ ಶಿಬಿರಾರ್ಥಿಗಳು
ಪ್ರಕಾಶ್‌ ರೈ
ಪ್ರಕಾಶ್‌ ರೈ
‘ನಿರ್ದಿಗಂತ’ದ ಆವರಣ
‘ನಿರ್ದಿಗಂತ’ದ ಆವರಣ
ರಂಗಪಠ್ಯದ ಚರ್ಚೆಯಲ್ಲಿ ಶಿಬಿರಾರ್ಥಿಗಳು
ರಂಗಪಠ್ಯದ ಚರ್ಚೆಯಲ್ಲಿ ಶಿಬಿರಾರ್ಥಿಗಳು
ರಂಗತಾಲೀಮಿನ ವೇದಿಕೆಯಲ್ಲಿ ಪ್ರಕಾಶ್‌ ರೈ
ರಂಗತಾಲೀಮಿನ ವೇದಿಕೆಯಲ್ಲಿ ಪ್ರಕಾಶ್‌ ರೈ
ನಿರ್ದಿಗಂತ ರಂಗ ವೇದಿಕೆಯಲ್ಲಿ ತಾಲೀಮು ನಡೆಸುತ್ತಿರುವ ಶಿಬಿರಾರ್ಥಿಗಳು
ನಿರ್ದಿಗಂತ ರಂಗ ವೇದಿಕೆಯಲ್ಲಿ ತಾಲೀಮು ನಡೆಸುತ್ತಿರುವ ಶಿಬಿರಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT