ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿಗೆ ಮಿಡಿದ ಕಾವ್ಯದೊಡೆಯ

Last Updated 14 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬದುಕಿನಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಅಕ್ಕಿತ್ತಂ ಸಿದ್ಧಾಂತಗಳ ವಿಷಯದಲ್ಲೂ ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸಿದ ದಾರ್ಶನಿಕ. ಮಲಯಾಳದ ಈ ಕವಿಗೆ ಈಗ ಜ್ಞಾನಪೀಠ ಪ್ರಶಸ್ತಿ ಪಡೆದ ಸಂಭ್ರಮ..

ಆರಂಭದಲ್ಲಿ ಎಲ್ಲವೂ ಅಪೂರ್ಣ. ಶಾಲೆಯ ಮೆಟ್ಟಿಲೇರಿ ಇನ್ನೇನು ಇಂಟರ್ ಮೀಡಿಯಟ್ ಮಾಡುವ ವಯಸ್ಸಾಗುತ್ತಿದ್ದಂತೆ ಅನಾರೋಗ್ಯ ಕಾಡಿತು. ಅಲ್ಲಿಗೆ ಶಿಕ್ಷಣ ಮೊಟಕುಗೊಂಡಿತು. ಬಣ್ಣ ಬಳಿದು ರಂಗಭೂಮಿಯಲ್ಲಿ ಪಾತ್ರಗಳಿಗೆ ಜೀವ ನೀಡಿದರೂ ಕೊನೆಗೊಂದು ದಿನ ಅದೂ ಬೇಡ ಎನಿಸಿತು. ಜ್ಯೋತಿಷದತ್ತ ಆಸಕ್ತಿ ಹೊರಳಿತು. ಅದರಲ್ಲೂ ನಿರಾಸಕ್ತಿ ಮೂಡಿತು. ಇದ್ದಿಲು ತುಂಡು ಬಳಸಿ ಗೋಡೆಗಳಲ್ಲಿ ಚಿತ್ರಗಳನ್ನು ಬರೆದ ಬಾಲಕ ಇನ್ನೇನು ಕಲಾಸಾಗರಕ್ಕೆ ಇಳಿದೇ ಬಿಟ್ಟ ಎನ್ನುವಷ್ಟರಲ್ಲಿ ‘ಕರಿ ಕಲೆ’ಗೂ ವಿದಾಯ. ಕೊನೆಗೆ ಹೊಳೆದದ್ದು ಕಾವ್ಯದ ಹಾದಿ. ಈ ದಾರಿಯಲ್ಲಿ ಎಡವದೇ ಪೂರ್ಣತ್ವ ಸಾಧಿಸಿದ ಕವಿಯ ಹೆಸರೇ ಅಕ್ಕಿತ್ತಂ ಅರ್ಥಾತ್, ಅಕ್ಕಿತ್ತಂ ಅಚ್ಯುತನ್ ನಂಬೂದಿರಿ.

ಬದುಕಿನಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಅಕ್ಕಿತ್ತಂ ಸಿದ್ಧಾಂತಗಳ ವಿಷಯದಲ್ಲೂ ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸಿದದಾರ್ಶನಿಕ. ಬರಹದಲ್ಲಿ ಅವರದು ಕವಿಹೃದಯ. ಈಗ ಜ್ಞಾನಪೀಠದ ಒಡೆಯ. ಪತ್ರಕರ್ತ, ಸಂಪಾದಕ, ಸಾಮಾಜಿಕ ನಾಯಕ… ಹೀಗೆ ನಾನಾ ರೂಪದಲ್ಲಿ ಕೆಲಸ ಮಾಡಿದ ಅಕ್ಕಿತ್ತಂ ಇವೆಲ್ಲದರ ನಡುವೆಯೂ ನಿರಂತರವಾಗಿ ಮಾಡಿದ್ದು ಕಾವ್ಯ ಕೃಷಿ.

ಅಕ್ಕಿತ್ತಂ ಜನಿಸಿದ್ದು ಪಾಲಕ್ಕಾಡ್ ಜಿಲ್ಲೆಯ ಕುಮಾರನಲ್ಲೂರಿನಲ್ಲಿ. ತಂದೆ ವಾಸುದೇವನ್ ನಂಬೂದಿರಿ. ತಾಯಿ ಪಾರ್ವತಿ ಅಂತರ್ಜನಂ. ವೇದ, ಇಂಗ್ಲಿಷ್ ಮತ್ತು ಗಣಿತದಲ್ಲಿ ಪ್ರೌಢಿಮೆ ಇದ್ದ ಅವರು ತಮಿಳು ಭಾಷೆಯಲ್ಲೂ ಪ್ರಾವೀಣ್ಯ ಗಳಿಸಿದ್ದರು. ಇಂಟರ್ ಮೀಡಿಯಟ್‌ಗೆ ಹೋಗುವ ಮೊದಲೇ ಶಿಕ್ಷಣ ಮುಗಿಸಿದರೂ ಸಮ್ಮೋಹಕ ಭಾಷೆ ಆಗಲೇ ಮನದಲ್ಲಿ ಲಾಸ್ಯವಾಡುತ್ತಿತ್ತು. ಹಾಗೆ ಎಂಟನೇ ವಯಸ್ಸಿನಲ್ಲೇ ಮೊದಲ ಕವಿತೆ ಹುಟ್ಟಿತು. ಭಾಷೆಯ ಮೇಲಿನ ಪ್ರಾವೀಣ್ಯವಿದ್ದ ಕಾರಣ ನಿಯತಕಾಲಿಕೆಯಲ್ಲಿ ಕೆಲಸ ಸಿಕ್ಕಿತು. ನಂತರ ಆಕಾಶವಾಣಿಯಲ್ಲಿ ‘ಸಂಪಾದಕ’ ಹುದ್ದೆಯೂ ದೊರೆಯಿತು.

ಸಾಹಿತ್ಯದಲ್ಲಿ ರಾಜಕೀಯ-ತತ್ವ ಸಿದ್ಧಾಂತಗಳನ್ನು ಬದಿಗಿಟ್ಟು ಕಾವ್ಯಶುದ್ಧಿಗೆ ಮಾತ್ರ ಆದ್ಯತೆ ನೀಡಿದವರು ಅಕ್ಕಿತ್ತಂ. ಒಂದು ಕಾಲದಲ್ಲಿ ಕ್ರಾಂತಿಕಾರಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದುದು ನಿಜ. ಆದರೆ, ಅದಕ್ಕೇ ಅಂಟಿಕೊಂಡವರಲ್ಲ. ಪ್ರಸಿದ್ಧವಾದ ‘ಇರುಪದಾಂ ನೂಟ್ಟಾಂಡಿಂಡೆ ಇದಿಹಾಸಂ’ ಕವಿತೆಯಲ್ಲಿ ಅವರ ಈ ನಿಲುವು ಸ್ಪಷ್ಟವಾಯಿತು. ಈ ಕವಿತೆ ಹೊರಬಿದ್ದಾಗ ಅವರ ಓರಗೆಯವರೇ ಹುಬ್ಬೇರಿಸಿದರು. ಶ್ರೀಮಹಾಭಾಗವತಂ ಗ್ರಂಥವನ್ನು ಅನುವಾದ ಮಾಡಿದಾಗಒಂದು ವರ್ಗದವರು ‘ನಮ್ಮವರು’ ಎಂದುಕೊಂಡರು. ಆದರೆ, ‘ಭಾಗವತ ಭಕ್ತಿಕಾವ್ಯವಲ್ಲ; ಲೌಕಿಕ ಮತ್ತು ಅಧ್ಯಾತ್ಮ ಮೇಳೈಸಿರುವ ಕೃತಿ’ ಎಂದು ಹೇಳಿ ಆ ವರ್ಗವನ್ನೂ ನಿರಾಸೆಗೊಳಿಸಿದರು.

‘ನನ್ನ ಕವಿತೆಗಳನ್ನು ಗದ್ಯಕ್ಕೆ ರೂಪಾಂತರಗೊಳಿಸಿದರೆ ಅದು ನನ್ನ ಬದುಕನ್ನು ಪ್ರತಿಫಲಿಸಲಿದೆ’ ಎಂದು ಹೇಳುವ ಮೂಲಕ ಜೀವನಾನುಭವ ಮತ್ತು ಇತರರ ನೋವೇ ಕಾವ್ಯದ ಜೀವಾಳ ಎಂಬುದನ್ನು ಪ್ರತಿಪಾದಿಸಿದ ಅನುಭಾವಿ ಅವರು.

ಬೇರೊಬ್ಬರಿಗಾಗಿ ನನ್ನ ಕಣ್ಣಿಂದ ಹನಿಯೊಂದು ಜಿನುಗಿದಾಗ ಅಂತರಾಳದಲ್ಲಿ ಪ್ರಜ್ವಲಿಸಿತು ಸೌರಮಂಡಲ

ಮತ್ತೊಬ್ಬರಿಗಾಗಿ ನಸುನಗುವೊಂದನ್ನು ಸೂಸಿದಾಗ ಹೃದಯಾಂತರಾಳದಲ್ಲಿ ಮೂಡಿತು ಬೆಳದಿಂಗಳು

ಈ ದಿವ್ಯ ಪುಳಕವನ್ನು ಅರಿಯದಾದೆ ಇಷ್ಟು ಕಾಲ;ಆ ನಷ್ಟವ ನೆನೆ ನೆನೆದು ಬಿಕ್ಕಳಿಸುತ್ತಿರುವೆ ನಿತ್ಯವೂ

ಎಂಬ ಸಾಲುಗಳು ಮಹಾತ್ಮರಿಂದಲ್ಲದೆ ಬೇರೆ ಯಾರಿಂದ ಬರಲು ಸಾಧ್ಯ?

ಇವು ಇರುಪದಾಂ ನೂಟ್ಟಾಂಡಿಂಡೆ ಇದಿಹಾಸಂ ಕವಿತೆಯ ಸಾಲುಗಳು. ಬಾಲ್ಯದ ಆಟ–ಹುಡುಗಾಟದ ವರ್ಣನೆಯೊಂದಿಗೆ ಸಂಭ್ರಮದಿಂದ ಆರಂಭವಾಗುವ ಈ ಕವಿತೆಗೆ ನಿಧಾನವಾಗಿ ವಿಷಾದದ ಛಾಯೆ ಆವರಿಸುತ್ತದೆ. ಬದಲಾವಣೆಯ ಗಾಳಿಗೆ ಸಿಕ್ಕು ಜೀವನದ ಸಹಜ ಸಂತಸ ಮಾಯವಾದದ್ದೇ ಕವಿಯ ಬೇಸರಕ್ಕೆ ಕಾರಣ.ಇದೇಕವಿತೆಯಲ್ಲಿರುವ ಪ್ರಸಿದ್ಧವಾದ ‘ಏ ಪುಟ್ಟಾ…ಬೆಳಕೇ ದುಃಖಕರ; ಇರುಳಲ್ಲವೇ ಸುಖಮಯ..’ ಎಂಬ ಸಾಲು ಕೇರಳದ ರಾಜಕೀಯ, ಸಾಮಾಜಿಕ ಚಿಂತಕರಲ್ಲಿ ಉಂಟು ಮಾಡಿದ ತಲ್ಲಣ ಕಡಿಮೆಯೇನಲ್ಲ. ಆರೂವರೆ ದಶಕದ ಹಿಂದೆ ಬರೆದ ಈ ಸಾಲು ಬಾಯಿಪಾಠ ಇಲ್ಲದ ಮಲಯಾಳಿ ಈಗಲೂ ಇಲ್ಲವೆಂದೇ ಹೇಳಬೇಕು.ಈ ಕವಿತೆಯ ಸ್ವರ್ಗಂ ಎಂಬ ಭಾಗದಲ್ಲಿ ‘ಅಮ್ಮನ ವಾತ್ಸಲ್ಯದ ಮಧುರ ಪಸೆ ಇಂದಿಗೂ ಇದೆ, ತಂಬಾಕು ಅಂಟಿದ ತುಟಿಯಲ್ಲಿ’ ಎಂದು ಹೇಳಿ ಪುಳಕಗೊಂಡ ಕವಿ ‘ಪಾರತಂತ್ರ್ಯದುಃಖಕ್ಕೆ ಕಾರಣ; ಜನನ ಮರಣದಿಂದ ಮುಕ್ತಿ ಇಲ್ಲ ಯಾವ ಮಹಾತ್ಮನಿಗೂ’ ಎಂದು ‘ನರಕ’ ಭಾಗದಲ್ಲಿ ಪ್ರತಿಪಾದಿಸಿ ಅಧ್ಯಾತ್ಮದ ಅಮೃತ ಕುಡಿಸಿದ್ದಾರೆ.

‘ಆರ್ಭಟವಿಲ್ಲದ, ಅತಿರೇಕವಿಲ್ಲದ ಸಾಮಾಜಿಕ ಕ್ರಾಂತಿಗೆ ಪೂರಕ ಕವಿತೆಗಳನ್ನು ಬರೆದು ಕಾವ್ಯಲೋಕ ಪ್ರವೇಶಿಸಿದ ಅಕ್ಕಿತ್ತಂ ಕಾಲಚಕ್ರ ಉರುಳಿದಂತೆ ಕಾವ್ಯದ ಮಗ್ಗುಲನ್ನೂ ಬದಲಿಸಿದರು’ ಎಂದು ಲೇಖಕ ಪಿ.ಎಂ.ನಾರಾಯಣನ್ ಅವರು ಅಕ್ಕಿತ್ತಂ ಅವರ ಕಾವ್ಯದರ್ಶನ ಎಂಬ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.‘ಅಕ್ಕಿತ್ತಂ ಅವರ ಕವಿತೆಯ ನಿಜವಾದ ಲಾವಣ್ಯ ಇರುವುದು ವಸ್ತುವಿನಲ್ಲಿ ತೆರೆದುಕೊಳ್ಳುವ ಸೌಂದರ್ಯದಲ್ಲಲ್ಲ; ಅದು ಸಹೃದಯನಲ್ಲಿ ಉಂಟು ಮಾಡುವ ಮಾನವೀಯತೆಯ ಬೆಳಕಿನಲ್ಲಿ’ ಎಂದು ಬರೆದಿರುವ ಕೂಮುಳ್ಳಿ ಶಿವರಾಮನ್ ಮಾತಿನಲ್ಲಿ ಅಕ್ಕಿತ್ತಂ ಕವಿತೆಗಳ ಜೀವನದರ್ಶನ ಪರಿಚಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT