ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿ ಸೋಲಿಗ ಜ್ಞಾನ ಹಂಚುವ ಹಾದಿ.. ವಿ. ಸೂರ್ಯನಾರಾಯಣ ಅವರ ಲೇಖನ

ಈ ಮಕ್ಕಳು ನಗರ ಪ್ರದೇಶದವರು ಎಂದುಕೊಳ್ಳಬೇಡಿ. ಇವರು ಸ್ಥಳೀಯ ಸೋಲಿಗರ ಮಕ್ಕಳು, ಅಂದರೆ ‘ಕಾಡಿನ ಮಕ್ಕಳು’!
Published 12 ಮೇ 2024, 0:36 IST
Last Updated 12 ಮೇ 2024, 0:36 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಕಾಡಿನಹಾದಿಯಲ್ಲಿ ಹತ್ತು ಹದಿನೈದು ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ಗಿಡ ಮರಗಳನ್ನು ಗುರುತಿಸುವ, ಅರಣ್ಯದ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಕ್ಕಳು ನಗರ ಪ್ರದೇಶದವರು ಎಂದುಕೊಳ್ಳಬೇಡಿ. ಇವರು ಸ್ಥಳೀಯ ಸೋಲಿಗರ ಮಕ್ಕಳು, ಅಂದರೆ ‘ಕಾಡಿನ ಮಕ್ಕಳು’!

ಆಧುನಿಕತೆ, ಶಿಕ್ಷಣ, ಅರಣ್ಯ ಸಂರಕ್ಷಣೆ ಕಾನೂನು ಸೋಲಿಗರ ಹೊಸ ತಲೆಮಾರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದರೂ, ಸಮುದಾಯದ ಜ್ಞಾನ, ಸಂಸ್ಕೃತಿ, ಪರಂಪರೆ, ಭಾಷೆಯನ್ನು ಮರೆಯುವಂತೆ ಮಾಡಿದೆ. ಹಳೆಯ ಮತ್ತು ಹೊಸಪೀಳಿಗೆಯ ನಡುವೆ ಕಾಡಿನೊಳಗೆ ಒಡನಾಟ ಕಡಿಮೆಯಾಗಿ ಜ್ಞಾನದ ಕೊಂಡಿಗಳು ಒಂದೊಂದೇ ಕಳಚಿಕೊಳ್ಳುತ್ತಿವೆ. ಈ ಕೊಂಡಿಗಳನ್ನು ಮರುಜೋಡಣೆ ಮಾಡುವ ಪ್ರಯತ್ನ ಬಿಳಿಗಿರಿರಂಗನಬೆಟ್ಟದಲ್ಲಿ ‘ಆದಿ’ ಯೋಜನೆ ಅಡಿಯಲ್ಲಿ ನಡೆಯುತ್ತಿದೆ.

‘ಆದಿ’ ಎಂದರೆ ಮೂಲ. ಸೋಲಿಗರ ಭಾಷೆಯಲ್ಲಿ ಹಾದಿ ಅಥವಾ ದಾರಿ ಎಂದರ್ಥ. ಕಾಡಿನ ಹಾದಿಯಲ್ಲಿ ಕಳೆದು ಹೋದ ಜ್ಞಾನವನ್ನು ಆದಿವಾಸಿ ಯುವ ಜನರಿಗೆ ಮತ್ತೆ ತಿಳಿಸುವ ಮೂಲಕ ಯುವಪೀಳಿಗೆಯನ್ನು ಕಾಡಿನ ಜ್ಞಾನಿಗಳನ್ನಾಗಿ ಮಾಡುವ ಮತ್ತು ಅಪರೂಪದ ಗಿರಿಜನರ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಇದಾಗಿದೆ.

ವಿಶಿಷ್ಟ ಸಂಸ್ಕೃತಿ ಭಾಷೆ

ಸೋಲಿಗರು ಎಂದರೆ ಪಶ್ಚಿಮಘಟ್ಟ ಮತ್ತು ಪೂರ್ವಘಟ್ಟಗಳನ್ನು ಬೆಸೆಯುವ ನೀಲಗಿರಿ ಜೈವಿಕ ಮಂಡಲ ವ್ಯಾಪ್ತಿಯಲ್ಲಿ ನೆಲೆಸಿರುವ ವಿಶಿಷ್ಟ ಆದಿವಾಸಿ ಸಮುದಾಯ (ಸೋಲೆಗ ಎಂದೂ ಕರೆಯುತ್ತಾರೆ). ತಮಿಳುನಾಡಿನ ನೀಲಗಿರಿ, ಈರೋಡ್‌
ಜಿಲ್ಲೆಗಳು, ರಾಜ್ಯದ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿರುವ ಸಂರಕ್ಷಿತ ಅರಣ್ಯ ಪ್ರದೇಶಗಳು, ಮಂಡ್ಯ ಮತ್ತು ಕೊಡಗು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲೂ ಇವರ ಆವಾಸ ಹರಡಿದೆ. 

ಚಾಮರಾಜನಗರ ಜಿಲ್ಲೆಯಲ್ಲೇ 35 ಸಾವಿರದಷ್ಟು ಸೋಲಿಗರಿದ್ದಾರೆ. ಅದರಲ್ಲೂ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಆರುಕುಲ ಸೋಲಿಗರ ಭಾಷೆ, ಆಚಾರ, ವಿಚಾರ ಬೇರೆಯವರಿಗಿಂತ ಭಿನ್ನ. ಉಳಿದೆಲ್ಲ ಪ್ರದೇಶಗಳ ಸೋಲಿಗರು ಕನ್ನಡ ಭಾಷೆಯನ್ನೇ ಮಾತನಾಡಿದರೆ, ಇಲ್ಲಿರುವ 15 ಸಾವಿರದಷ್ಟು ಸೋಲಿಗರು ಕನ್ನಡ, ತಮಿಳು, ಸಂಸ್ಕೃತ ಮಿಶ್ರಿತ ಭಾಷೆ ಮಾತನಾಡುತ್ತಾರೆ.

ಕಳೆದು ಹೋದ ಜ್ಞಾನದ ಹಾದಿ

ಆಧುನಿಕತೆಯತ್ತ ಮುಖ ಮಾಡಿರುವ ಸಮುದಾಯದ ಯುವಜನರು ತಮ್ಮ ವಿಶಿಷ್ಟ ಸಂಸ್ಕೃತಿ, ಭಾಷೆಯಿಂದ ದೂರವಾಗುತ್ತಿದ್ದಾರೆ. ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಯಾದ ನಂತರ ಅರಣ್ಯದ ಜೊತೆ ಸೋಲಿಗರ ನಂಟು ಕಡಿಮೆಯಾಗಿದೆ. ಇದರಿಂದಾಗಿ ಅರಣ್ಯದ ಬಗ್ಗೆ ಯುವಪೀಳಿಗೆಗೆ ಹೆಚ್ಚಿನ ಮಾಹಿತಿ ಇಲ್ಲ. ಅದನ್ನು ಕಲಿಯುವ ಆಸಕ್ತಿಯನ್ನೂ ತೋರಿಸುತ್ತಿಲ್ಲ. 

ತಮ್ಮ ವೈವಿಧ್ಯಮಯ ಸಂಸ್ಕೃತಿ, ಭಾಷೆಯನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಮನಗಂಡಿರುವ ಸ್ಥಳೀಯ ವಿದ್ಯಾವಂತ ಸೋಲಿಗರು, ಹತ್ತು ಮಂದಿಯ ತಂಡ ಕಟ್ಟಿಕೊಂಡು ಸ್ವಯಂ ಸೇವಾ ಸಂಸ್ಥೆಗಳು, ಭಾಷಾ ವಿಜ್ಞಾನಿಗಳ ನೆರವಿನೊಂದಿಗೆ ‘ಆದಿ’ ಎಂಬ ಕಾರ್ಯಕ್ರಮ ರೂಪಿಸಿದ್ದಾರೆ. ಸೋಲಿಗರ ಜ್ಞಾನವನ್ನು ಪಸರಿಸಲು ಹೊಸ ಹಾದಿ ಹುಡುಕುವ ಈ ಯತ್ನಕ್ಕೆ ಸ್ವಯಂ ಸೇವಾ ಸಂಸ್ಥೆಗಳಾದ ಪುನರ್ಚಿತ್‌ ಮತ್ತು ರೈನ್‌ಮ್ಯಾಟರ್‌ ಫೌಂಡೇಷನ್‌ ಸಹಯೋಗ ನೀಡಿವೆ. ಸ್ಥಳೀಯ ಸೋಲಿಗ ಸಂಘಟನೆಗಳು ಇದಕ್ಕೆ ಕೈಜೋಡಿಸಿವೆ. 

‘ಮೊದಲೆಲ್ಲ ಸೋಲಿಗರ ಜ್ಞಾನವು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕಾಡಿನ ಹಾದಿಗಳಲ್ಲಿ ಹಸ್ತಾಂತರವಾಗುತ್ತಿತ್ತು. ಹಿರಿಯರು ಮಕ್ಕಳನ್ನು ಕರೆದುಕೊಂಡು ಅರಣ್ಯದಲ್ಲಿ ಸುತ್ತಾಡುವಾಗ ಮೌಖಿಕವಾಗಿಯೇ ತಮ್ಮಲ್ಲಿರುವ ಎಲ್ಲ ಜ್ಞಾನಗಳನ್ನು ಧಾರೆ ಎರೆಯುತ್ತಿದ್ದರು. ಈಗ ಕಾಡಿನೊಳಗೆ ಆದಿವಾಸಿಗಳು ಸುತ್ತಾಡುವುದು ಕಡಿಮೆಯಾಗಿದೆ. ಆಧುನಿಕ ಜಗತ್ತಿಗೆ ತೆರೆದುಕೊಂಡಿರುವ ಯುವ ಜನಾಂಗ, ಹಿರಿಯರೊಂದಿಗೆ ಮೊದಲಿನಷ್ಟು ಒಡನಾಡುತ್ತಿಲ್ಲ. ಹೀಗಾಗಿ, ಹಿರಿಯರ ಜ್ಞಾನ ಹೊಸ ಪೀಳಿಗೆಗೆ ತಲುಪುತ್ತಿಲ್ಲ’ ಎಂದು ಹೇಳುತ್ತಾರೆ ಭಾಷಾ ವಿಜ್ಞಾನಿ ಹಾಗೂ ಸೋಲಿಗರ ಭಾಷೆ, ಸಂಸ್ಕೃತಿ ಕುರಿತಾಗಿ ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿರುವ ಸಮಿರಾ ಅಗ್ನಿಹೋತ್ರಿ. 

‘ಈಗ ಸೋಲಿಗರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಓದಿದವರಿಗೆ ಕೆಲಸ ಸಿಗುತ್ತಿಲ್ಲ. ಕೆಲಸದ ಸ್ಥಳಗಳಲ್ಲಿ ಅವರ ಭಿನ್ನ ಭಾಷಾ ಶೈಲಿ ಹಾಗೂ ಇನ್ನಿತರ ಕಾರಣಗಳಿಗೆ ತಾರತಮ್ಯಕ್ಕೂ ಒಳಗಾಗುತ್ತಿದ್ದಾರೆ. ಅತ್ತ ಕೆಲಸವೂ ಸಿಗದೆ, ಇತ್ತ ಹಾಡಿಗಳಲ್ಲಿ ಇರಲೂ ಆಗದೆ ತೊಂದರೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಸವಾಲುಗಳ ನಡುವೆಯೇ ಕಾಡಿನ ಜ್ಞಾನವನ್ನು ಪುನರುತ್ಥಾನಗೊಳಿಸಲು ಸಮುದಾಯದವರೇ ಮುಂದಾಗಿದ್ದಾರೆ. ಅವರಿಗೆ ನಾವು ಸಹಾಯ ಮಾಡುತ್ತಿದ್ದೇವೆ’ ಎಂದು ‘ಆದಿ’ ಕಾರ್ಯಕ್ರಮದ ಸಂಚಾಲಕರೂ ಆಗಿರುವ ಸಮಿರಾ ಹೇಳುತ್ತಾರೆ.   ಈ ಕಾರ್ಯಕ್ರಮದ ಅಡಿಯಲ್ಲಿ ಸೋಲಿಗ ಭಾಷೆ, ಆಚಾರ–ವಿಚಾರ ವೈವಿಧ್ಯ ಉಳಿಸುವ ಹಲವು ಪ್ರಯತ್ನಗಳು ನಡೆಯುತ್ತಿವೆ.

ಅಕ್ಷರಮಾಲೆ ಕೋಷ್ಟಕ

ಕನ್ನಡ ಅಕ್ಷರಮಾಲೆಯಂತೆ, ಸೋಲಿಗ ಭಾಷೆಯನ್ನು ಕೇಂದ್ರೀಕರಿಸಿ ಅಕ್ಷರ ಮಾಲೆಯ ಕೋಷ್ಟಕವನ್ನು (ಚಾರ್ಟ್‌) ‘ಆದಿ’ ತಂಡ ಸಿದ್ಧಪಡಿಸಿದೆ. ಸೋಲಿಗ ಭಾಷೆಗೆ ಲಿಪಿ ಇಲ್ಲದಿರುವುದರಿಂದ ಕನ್ನಡದಲ್ಲೇ ಸ್ವರ, ವ್ಯಂಜನ ಅಕ್ಷರಗಳನ್ನು ಬರೆದು, ಅದಕ್ಕೆ ಸೋಲಿಗ ಭಾಷೆಯಲ್ಲಿ ಬಳಕೆಯಲ್ಲಿರುವ ಪದಗಳನ್ನು ಉದಾಹರಣೆಯಾಗಿ ನೀಡಲಾಗಿದೆ
(ಉದಾ: ಅ–ಅಳ್ಳುಗ, ಆ–ಆಲು‌‌ಪ್ಪೆ ಮರ ಇತ್ಯಾದಿ).

ಈ ಅಕ್ಷರಮಾಲೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಿಸುವ ಬುಡಕಟ್ಟು ಆಶ್ರಮ ಶಾಲೆಗಳಿಗೆ ನೀಡಲಾಗಿದೆ. ಅಲ್ಲಿ ಗಿರಿಜನರ ಮಕ್ಕಳಿಗೆ ಓದಿಸುವ ಪ್ರಯತ್ನ ನಡೆಯುತ್ತಿದೆ. ಇದು ಮಾತ್ರವಲ್ಲದೇ ‘ಆದಿ’ ಕಾರ್ಯಕರ್ತರು ವಾರದಲ್ಲಿ ಒಂದು ದಿನ, ರಜಾ ದಿನಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಅವರಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. 

‘ಚಿಕ್ಕ ವಯಸ್ಸಿನ ಮಕ್ಕಳಿಗೆ ಅಕ್ಷರಮಾಲೆ ಮಾದರಿಯಲ್ಲಿ ಸೋಲಿಗ ಪದಗಳನ್ನು ಹೇಳಿಕೊಡಲಾಗುತ್ತಿದೆ. ಪದಗಳನ್ನು ಚಿತ್ರಗಳ, ಪ್ರಾತ್ಯಕ್ಷಿಕೆ, ಸೋಲಿಗ ಹಾಡುಗಳು, ಕಥೆಗಳ ಮೂಲಕ ವಿವರಿಸಲಾಗುತ್ತದೆ. ಕಾಡಿನ ನಡಿಗೆ, ಪ್ರಶ್ನೋತ್ತರ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ತಿಳಿಸಿಕೊಡಲಾಗುತ್ತಿದೆ’ ಎಂದು ಹೇಳುತ್ತಾರೆ ಕಾರ್ಯಕ್ರಮದ ಕ್ಷೇತ್ರ ಸಂಚಾಲಕಿ, ಸಮುದಾಯದವರೇ ಆದ ಲಕ್ಷ್ಮಿ. 

ಸಮುದಾಯ ಸಹಭಾಗಿತ್ವ

‘ಈಗ ಅರಣ್ಯದಲ್ಲಿ ಜೀವ ವೈವಿಧ್ಯ (ಬಯೊ ಡೈವರ್ಸಿಟಿ) ರಕ್ಷಿಸುವುದು ಮಾತ್ರವಲ್ಲ, ಜೀವ ಸಾಂಸ್ಕೃತಿಕ ವೈವಿಧ್ಯವನ್ನೂ (ಬಯೋ ಕಲ್ಚರಲ್‌ ಡೈವರ್ಸಿಟಿ) ರಕ್ಷಿಸಬೇಕಾಗಿದೆ. ಸಮುದಾಯದ ಸಹಭಾಗಿತ್ವ ಇಲ್ಲದೆ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಹೀಗಾಗಿ, ಎಲ್ಲ ಪೋಡುಗಳ ಸೋಲಿಗರನ್ನು ತೊಡಗಿಸಿಕೊಳ್ಳಲು ಸದಾ ಪ್ರಯತ್ನಿಸುತ್ತೇವೆ. ಒಂದು ಆದಿವಾಸಿ ಸಮುದಾಯದವರನ್ನು ಮತ್ತೊಂದು ಆದಿವಾಸಿ ಸಮುದಾಯದವರೊಂದಿಗೆ ಭೇಟಿ ಮಾಡಿಸುವುದು, ವಿವಿಧ ಹಾಡಿಗಳಿಗೆ ಕರೆದೊಯ್ಯುವುದು, ಅವರ ಸಂಸ್ಕೃತಿಯ ಪರಿಚಯ ಮಾಡಿಸಲಾಗುತ್ತಿದೆ’ ಎಂದು ಸಮಿರಾ ಅಗ್ನಿಹೋತ್ರಿ ವಿವರಿಸಿದರು.

‌ಯುವಜನರ ವಿನಿಮಯ

ಆದಿವಾಸಿ ಯುವಜನರ ವಿನಿಮಯ ಎಂಬ ವಿಶಿಷ್ಟ ಕಾರ್ಯಕ್ರಮವೂ ಭಾಷಾ ಪುನರುಜ್ಜೀವನ ಪ್ರಯತ್ನದ ಭಾಗವಾಗಿದೆ. ಇಲ್ಲಿನ ಯುವಜನರನ್ನು ನೀಲಗಿರಿಯ ಆದಿವಾಸಿಗಳ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಪರಿಚಯಿಸುವ ಪ್ರಯತ್ನವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗುತ್ತಿದೆ.  

ಪ್ರಯತ್ನ ನಿರಂತರ

‘ಎರಡು ವರ್ಷಗಳಿಂದ ನಮ್ಮ ಪ್ರಯತ್ನ ನಡೆಯುತ್ತಿದೆ. ಈಗ ಆರಂಭಿಕ ಹಂತದಲ್ಲಿದೆ. ಗಡುವು ಹಾಕಿಕೊಂಡು ಅನುಷ್ಠಾನಕ್ಕೆ ತರುವ ಯೋಜನೆ ಇದಲ್ಲ. ಇದು ನಿರಂತರವಾಗಿ ನಡೆಯಲಿದೆ’ ಎಂದು ಹೇಳುತ್ತಾರೆ ಸಮಿರಾ.

‘ಯುವ ಜನರನ್ನು ನಮ್ಮೊಂದಿಗೆ ಕರೆದೊಯ್ಯಲು ಯತ್ನಿಸುತ್ತಿದ್ದೇವೆ. ಆದರೆ, ಅವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹಾಗಾಗಿ, ಶಾಲೆಗೆ ಹೋಗುವಂತಹ ಚಿಕ್ಕ ಮಕ್ಕಳನ್ನು ಕೇಂದ್ರೀಕರಿಸಿ ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಮಕ್ಕಳು ಆಸಕ್ತಿಯಿಂದ ಕೇಳುತ್ತಿದ್ದಾರೆ. ಕಲಿಯುತ್ತಿದ್ದಾರೆ. ಸತತವಾಗಿ ಈ ಕೆಲಸ ನಡೆದರೆ ಸಮುದಾಯದ ಹೊಸ ತಲೆಮಾರು ಕೂಡ ಕಾಡಿನ ಜ್ಞಾನದಲ್ಲಿ ಶ್ರೀಮಂತರಾಗುವುದರಲ್ಲಿ ಸಂಶಯವಿಲ್ಲ’ ಎಂಬುದು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿರುವ ಲಕ್ಷ್ಮಿಯವರ ಅನಿಸಿಕೆ. 

ಸೋಲಿಗ–ಇಂಗ್ಲಿಷ್‌ ನಿಘಂಟು

ಸೋಲಿಗರು, ಅವರ ಭಾಷೆಯ ಮೇಲೆ ಅಧ್ಯಯನ ನಡೆಸಿರುವ ಮ್ಯಾನ್ಮಾರ್‌ನ ಭಾಷಾ ಸಂಶೋಧಕ ಆಂಗ್‌ ಸಿ ಅವರು ಸೋಲಿಗ–ಇಂಗ್ಲಿಷ್‌ ನಿಘಂಟನ್ನು ಸಿದ್ಧಪಡಿಸಿದ್ದಾರೆ. 455 ಪುಟಗಳ ಈ ನಿಘಂಟಿನಲ್ಲಿ ಬಿಳಿಗಿರಿರಂಗನಬೆಟ್ಟದ ಸೋಲಿಗರು ಬಳಸುವ 1,500ಕ್ಕೂ ಹೆಚ್ಚು ಪದಗಳಿವೆ.

ಆಸ್ಟ್ರೇಲಿಯಾದಲ್ಲಿದ್ದುಕೊಂಡು ಸಂಶೋಧನೆ ಮಾಡುವ ಆಂಗ್‌ ಸಿ ಅವರು ಹಲವು ವರ್ಷಗಳಿಂದ ಬಿಳಿಗಿರಿರಂಗನಬೆಟ್ಟದ ವ್ಯಾಪ್ತಿಯಲ್ಲಿರುವ ಸೋಲಿಗರೊಂದಿಗೆ ನಂಟು ಹೊಂದಿದ್ದಾರೆ. ಸದ್ಯ, ಸೋಲಿಗ–ಕನ್ನಡ ನಿಘಂಟು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 

‘ಆದಿ’ ಕಾರ್ಯಕ್ರಮದ ಸಲಹೆಗಾರರೂ ಆಗಿರುವ ಆಂಗ್‌ ಸಿ ಹೇಳುವುದಿಷ್ಟು: ‘ಸೋಲಿಗ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕಾರ್ಯಕ್ರಮ. ಇದನ್ನು ಹೊರಗಡೆಯವರು ಮಾಡುತ್ತಿಲ್ಲ. ಸ್ವತಃ ಸಮುದಾಯವೇ ಮಾಡುತ್ತಿರುವುದು ಗಮನಾರ್ಹ ಸಂಗತಿ’.

ಯೂಟ್ಯೂಬ್‌ ಚಾನೆಲ್‌

ಸೋಲಿಗರ ಜ್ಞಾನ, ಆಚರಣೆ, ಆಹಾರ ಸಂಸ್ಕೃತಿ ದಾಖಲಿಸಿ, ಯುವಜನರಿಗೆ ತಿಳಿಸಲು  ‘ಸೋಲಿಗ ಕಾಡಿನ ಗೇನ–soliga traditional knowledge’ ಎಂಬ ಯೂಟ್ಯೂಬ್‌ ಚಾನೆಲ್‌ ಅನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದಾರೆ.

ಕಾಡಿನ ಆಹಾರಗಳು, ಕಾಡಿನಗೆಣಸುಗಳು, ಸೋಲಿಗರ ಪೂಜನೀಯ ಸ್ಥಳಗಳು, ಜನಾಂಗದವರ ಜಾನಪದ ಹಾಡುಗಳು, ಆಟಗಳು, ವಿವಿಧ ಗಿಡ ಮರಗಳ ಉಪಯೋಗಗಳು.. ಹೀಗೆ ಆದಿವಾಸಿ ಜನರ ದೈನಂದಿನ ಬದುಕಿನ ಭಾಗವಾಗಿರುವ ವಿಷಯಗಳನ್ನು ಪುಟ್ಟ ಪುಟ್ಟ ವಿಡಿಯೊ ತುಣುಕುಗಳಲ್ಲಿ ದಾಖಲೀಕರಣ ಮಾಡಿ ಯೂಟ್ಯೂಬ್‌ನಲ್ಲಿ ಹಾಕಲಾಗುತ್ತಿದೆ. ಸದ್ಯ 26 ವಿಡಿಯೊಗಳು ಚಾನೆಲ್‌ನಲ್ಲಿ ಲಭ್ಯವಿವೆ.

ಇದು ನಮ್ಮದೇ ಕಾಡಲ್ವಾ?
ಇದು ನಮ್ಮದೇ ಕಾಡಲ್ವಾ?
ಸೋಲಿಗ ಅಕ್ಷರ ಮಾಲೆ ಕೋಷ್ಟಕ
ಸೋಲಿಗ ಅಕ್ಷರ ಮಾಲೆ ಕೋಷ್ಟಕ
ಸಿದ್ಧಪಡಿಸಿದ ಸೋಲಿಗ ಅಕ್ಷರ ಮಾಲೆ ಕೋಷ್ಠಕದೊಂದಿಗೆ ‘ಆದಿ’ ತಂಡ
ಸಿದ್ಧಪಡಿಸಿದ ಸೋಲಿಗ ಅಕ್ಷರ ಮಾಲೆ ಕೋಷ್ಠಕದೊಂದಿಗೆ ‘ಆದಿ’ ತಂಡ
ಕಾಡಿನ ನಡಿಗೆಯ ಮೂಲಕ ಸಸ್ಯ ಜಗತ್ತಿನ ಪರಿಚಯವನ್ನು ಸೋಲಿಗ ಮಕ್ಕಳಿಗೆ ಮಾಡಲಾಗುತ್ತಿದೆ
ಕಾಡಿನ ನಡಿಗೆಯ ಮೂಲಕ ಸಸ್ಯ ಜಗತ್ತಿನ ಪರಿಚಯವನ್ನು ಸೋಲಿಗ ಮಕ್ಕಳಿಗೆ ಮಾಡಲಾಗುತ್ತಿದೆ
ಸೋಲಿಗರ ಅಕ್ಷರ ಮಾಲೆ ಕೋಷ್ಟಕದ ಬಗ್ಗೆ ತಂಡದ ಸದಸ್ಯರಿಗೆ ವಿವರಣೆ ನೀಡುತ್ತಿರುವುದು
ಸೋಲಿಗರ ಅಕ್ಷರ ಮಾಲೆ ಕೋಷ್ಟಕದ ಬಗ್ಗೆ ತಂಡದ ಸದಸ್ಯರಿಗೆ ವಿವರಣೆ ನೀಡುತ್ತಿರುವುದು
ಸೋಲಿಗ ಅಕ್ಷರ ಮಾಲೆಯ ಕೋಷ್ಟಕ
ಸೋಲಿಗ ಅಕ್ಷರ ಮಾಲೆಯ ಕೋಷ್ಟಕ
ಸೋಲಿಗ ಅಕ್ಷರ ಮಾಲೆಯ ಕೋಷ್ಟಕ
ಸೋಲಿಗ ಅಕ್ಷರ ಮಾಲೆಯ ಕೋಷ್ಟಕ
ಸೋಲಿಗ–ಇಂಗ್ಲಿಷ್‌ ನಿಘಂಟಿನ ಮುಖಪುಟ
ಸೋಲಿಗ–ಇಂಗ್ಲಿಷ್‌ ನಿಘಂಟಿನ ಮುಖಪುಟ
ನಿಘಂಟಿನ ಒಳಪುಟ
ನಿಘಂಟಿನ ಒಳಪುಟ

ನಮ್ಮ ಭಾಷೆ ಸಂಸ್ಕೃತಿ ಉಳಿಸುವ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದ್ದೇವೆ. ಇದನ್ನು ಪರಿಣಾಮಕಾರಿಯಾಗಿ ಮಾಡುವ ಅವಶ್ಯಕತೆ ಇದೆ. ನಮ್ಮ ಮಕ್ಕಳಿಗೆ ಶಿಕ್ಷಣದ ರೂಪದಲ್ಲಿ ಈ ಮಾಹಿತಿಯನ್ನು ತಿಳಿಸುವ ಕೆಲಸವಾಗಬೇಕು. ಸರ್ಕಾರ ಮುಂದಾದರೆ ಸೋಲಿಗ ಭಾಷೆ ಸಂಸ್ಕೃತಿ ಉಳಿಸುವ ಪ್ರಯತ್ನಕ್ಕೆ ದೊಡ್ಡ ಶಕ್ತಿ ಬರುತ್ತದೆ‌

–ಸಿ.ಮಾದೇಗೌಡ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಗಿರಿಜನ ಬುಡಕಟ್ಟು ಅಭಿವೃದ್ಧಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT