ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೇನುನೊಣಗಳ ರಕ್ಷಕ ವೆಂಕಟೇಶ್‌..

Published 22 ಜೂನ್ 2024, 23:24 IST
Last Updated 22 ಜೂನ್ 2024, 23:24 IST
ಅಕ್ಷರ ಗಾತ್ರ

ಜೇನುನೊಣಗಳಿಂದಾಗಿಯೇ ಜೀವನದ ಬಂಡಿ ದೂಡುತ್ತಿರುವ ಬೆಂಗಳೂರಿನ ವೆಂಕಟೇಶ್ ಅವರ ಕಥನವಿದು‌. ಭದ್ರಾ ಡ್ಯಾಂನಲ್ಲಿ ಕೆಲಸ ಮಾಡುತ್ತಿದ್ದ ಸಂಬಂಧಿಕರೊಬ್ಬರು, ಅಲ್ಲಿದ್ದ ನೂರಾರು ಜೇನುಗೂಡುಗಳನ್ನು ತೆರವು ಮಾಡಲು ಮೂವತ್ತು ವರ್ಷದ ಹಿಂದೆ ವೆಂಕಟೇಶ್ ಅವರನ್ನು ಆಂಧ್ರ ಪ್ರದೇಶದ ಕುಪ್ಪದಿಂದ ಕರೆಸಿಕೊಂಡಿದ್ದರು. ಬಾಲ್ಯದಲ್ಲಿ ವೆಂಕಟೇಶ್, ಎತ್ತರದ ಮರ ಏರುವುದು, ಸಲೀಸಾಗಿ ಗೋಡೆ ಏರುವುದನ್ನು ಕಂಡಿದ್ದ ಅವರು, ಅಣೆಕಟ್ಟೆಯ ಸಂಕೀರ್ಣ ಸ್ಥಳಗಳಲ್ಲಿ ಸಂಸಾರ ಹೂಡಿ, ನೂರಾರು ಗೂಡುಗಳನ್ನು ಕಟ್ಟಿದ್ದ ಹೆಜ್ಜೇನುಗಳನ್ನು ತೆರವುಗೊಳಿಸಲು ಈತನೇ ಸರಿಯಾದ ವ್ಯಕ್ತಿ ಎಂದು ನಿಶ್ಚಯಿಸಿ ಕರೆತಂದಿದ್ದರು. ಮೂರು ದಿನಗಳಲ್ಲಿ‌ 200ಕ್ಕೂ ಅಧಿಕ ಗೂಡುಗಳನ್ನು  ಹೊಗೆ ಹಾಕಿ, ಬೆಂಕಿ‌ ಇಟ್ಟು ನಿರ್ನಾಮ ಮಾಡಿದ್ದರು‌‌.

ಅಂದು ಹೊಟ್ಟೆಪಾಡಿನ ಅನಿವಾರ್ಯಕ್ಕೆ ಜೇನುಗೂಡುಗಳನ್ನು ನಾಶ ಮಾಡಿದ್ದ ವೆಂಕಟೇಶ್, ಇಂದು ಅವುಗಳನ್ನು ರಕ್ಷಣೆ ಮಾಡಿ ಅವುಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ತಾವು ಬದುಕು ಕಟ್ಟಿಕೊಂಡಿದ್ದಾರೆ.

ಬೆಂಗಳೂರಿನ ಜನವಸತಿ ಪ್ರದೇಶಗಳಲ್ಲಿ ಇರುವ ಜೇನುಗೂಡುಗಳನ್ನು ಸ್ಥಳಾಂತರಿಸುವ ಕೆಲಸವನ್ನು ವೆಂಕಟೇಶ್‌ ಕಳೆದ ಹತ್ತು ವರ್ಷಗಳಿಂದ ಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್, ಪಾರ್ಕ್‌, ಮನೆ, ಬಸ್‌ ನಿಲ್ದಾಣ, ಸರ್ಕಾರಿ ಕಚೇರಿಗಳ ಕಟ್ಟಡಗಳಲ್ಲಿ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವ ಜೇನುಗೂಡುಗಳನ್ನು ಇವರು ತೆರವುಗೊಳಿಸುತ್ತಾರೆ. ಜೇನಿನ ಸಂಸಾರಕ್ಕೆ ಹಾನಿ ಮಾಡದೆ, ನಾಜೂಕಿನಿಂದ ಅವುಗಳನ್ನು ಚೀಲವೊಂದರಲ್ಲಿ ತುಂಬಿಸಿಕೊಂಡು ಹೊರವಯಲದ ಕಾಡುಗಳಲ್ಲೋ, ನಿರ್ಜನ ಪ್ರದೇಶದಲ್ಲೋ ಬಿಟ್ಟು ಬರುತ್ತಾರೆ.

ಜೇನುಗೂಡು ತೆರವಿಗೂ ಮುನ್ನ ದೇಹಪೂರ್ತಿ ಬಟ್ಟೆ ಧರಿಸಿಕೊಳ್ಳುತ್ತಾರೆ. ಕೈಗವಸು, ಉದ್ದದ ಶೂ, ಟೋಪಿ, ಮುಖಕ್ಕೆ ತಾವೇ ವಿಶೇಷವಾಗಿ ವಿನ್ಯಾಸ ಮಾಡಿಕೊಂಡ ಮಂಕಿ ಕ್ಯಾಪ್ ಹಾಕಿಕೊಂಡು ಕಾರ್ಯಾಚರಣೆಗೆ ಇಳಿಯುತ್ತಾರೆ. ಎತ್ತರದ ಕಟ್ಟಡಗಳಾದರೆ,ಕೊನೆಯ ಮಹಡಿಯಿಂದ ಹಗ್ಗ ಇಳಿಬಿಟ್ಟು ಜೇನುಗೂಡುಗಳಿರುವಲ್ಲಿ ತಲುಪುತ್ತಾರೆ. ಅದಕ್ಕೆ ಬೇಕಾದ ಮುಂಜಾಗ್ರತೆಗಳನ್ನೂ ತೆಗೆದುಕೊಳ್ಳುತ್ತಾರೆ. ಗೂಡಿನಲ್ಲಿ ಜೇನುತುಪ್ಪ ಇದ್ದರೆ ಅದನ್ನು ಸಂಗ್ರಹಿಸಲು ಬಕೀಟು, ನೊಣಗಳನ್ನು ತುಂಬಿಸಿಕೊಳ್ಳಲು ಚೀಲವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹೋಗುತ್ತಾರೆ. ಗೂಡನ್ನು ಅರ್ಧಕ್ಕೆ ಕೊಯ್ದು, ಹಾರಿಹೋದ ಜೇನುನೊಣಗಳು ಕೆಲ ಹೊತ್ತಲ್ಲಿ ಅಲ್ಲಿಯೇ ಬಂದು ಕುಳಿತುಕೊಳ್ಳುವವರೆಗೆ ಕಾದು ಅವುಗಳನ್ನು ಚೀಲದಲ್ಲಿ ತುಂಬಿಸಿಕೊಳ್ಳುತ್ತಾರೆ. ಅವುಗಳಿಗೆ ಬೇರೊಂದು ಜಾಗದಲ್ಲಿ ‘ಪುನರ್ವಸತಿ’ ಮಾಡಿಕೊಳ್ಳುವ ವ್ಯವಸ್ಥೆ ಮಾಡುತ್ತಾರೆ.

‘ದಿನಕ್ಕೆ ಹತ್ತು ಕರೆಗಳಾದರೂ ಬರುತ್ತವೆ. ಮೂರ್ನಾಲ್ಕು ಕಡೆಗಳಲ್ಲಿ ಕೆಲಸ ನಿಕ್ಕಿ. ಫೆಬ್ರುವರಿಯಿಂದ ಜೂನ್ ತಿಂಗಳಲ್ಲಿ ದಿನಕ್ಕೆ ಏನಿಲ್ಲವೆಂದರೂ 50–60 ಕರೆಗಳು ಬಂದಿವೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಹೋಗಿ ದಿನಕ್ಕೆ ಹತ್ತು ಕಡೆ ಗೂಡು ತೆಗೆದರೆ ಹೆಚ್ಚು’ ಎನ್ನುತ್ತಾರೆ ವೆಂಕಟೇಶ್.

39 ನೇ ಮಹಡಿಯಲ್ಲಿ ಸಾಹಸ

ಹೆಜ್ಜೇನು ಎತ್ತರದ ಸ್ಥಳ ಆರಿಸಿಕೊಂಡು ಗೂಡು ಕಟ್ಟುತ್ತದೆ. ಹೀಗಾಗಿ ಬಹುಮಹಡಿ ಕಟ್ಟಡಗಳ ಸಂಕೀರ್ಣವಾದ ಮೂಲೆಯಲ್ಲಿ ವಾಸ ಹೂಡುತ್ತವೆ. ನಗರದ ಪ್ರಮುಖ ಅಪಾರ್ಟ್‌ಮೆಂಟ್, ಮಾಲ್‌, ಹೋಟೆಲ್‌, ಸೇನಾ ಕ್ಯಾಂಪಸ್‌, ಹಳೆ ವಿಮಾನ ನಿಲ್ದಾಣ, ಗಾಲ್ಫ್ ಕ್ಲಬ್ ಮುಂತಾದ ಕಡೆಗಳಲ್ಲಿ ಇದ್ದ ಜೇನುಗೂಡುಗಳನ್ನು ಇವರು ಸ್ಥಳಾಂತರಿಸಿದ್ದಾರೆ. ಸಂಖ್ಯೆ ಎಷ್ಟಾಗಿದೆ ಎಂದು ಕೇಳಿದರೆ ಲೆಕ್ಕ ಇಟ್ಟಿಲ್ಲ ಎನ್ನುತ್ತಾರೆ. ‘ಎರಡು ವರ್ಷದ ಹಿಂದೆ ಕೆ.ಆರ್ ಪುರದ ಅಪಾರ್ಟ್‌ಮೆಂಟ್ ಒಂದರ 39ನೇ ಮಹಡಿಯಲ್ಲಿ ಜೇನು ತೆಗೆದಿದ್ದು, ಈವರೆಗೂ ನಾನು ಕಾರ್ಯಾಚರಣೆ ನಡೆಸಿದ ಎತ್ತರದ ಸ್ಥಳ. ಹಗ್ಗದ ಮೂಲಕ ಇಳಿದು ಅಲ್ಲಿದ್ದ ಮೂರು ಹೆಜ್ಜೇನು ಗೂಡುಗಳನ್ನು ತೆರವುಗೊಳಿಸಿದ್ದೆ. ಅದೊಂದು ಮರೆಯಲಾಗದ ಅನುಭವ. ಅಷ್ಟು ಎತ್ತರದಿಂದ ಇಡೀ ಬೆಂಗಳೂರು ನೋಡಿದ ಹಾಗಾಗಿತ್ತು. ಆ ಸಾಹಸ ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ’ ಎಂದರು ವೆಂಕಟೇಶ್.

ಬಾಲ್ಯದಲ್ಲೇ ಜೊತೆಯಾಗಿದ್ದ ಸಾಹಸ ಪ್ರವೃತ್ತಿಯಿಂದಾಗಿ ಇವರಿಗೆ ಈ ಕೆಲಸ ಕಷ್ಟವೆನಿಸಿಲ್ಲ. ಕಟ್ಟಡ ಎಷ್ಟೇ ಎತ್ತರವಾಗಿದ್ದರೂ, ಯಾವುದೇ ಮೂಲೆಯಲ್ಲಿ ಜೇನಿನಗೂಡು ಇದ್ದರೂ, ಅಲ್ಲಿಗೆ ಸುಲಭವಾಗಿ ತಲುಪುತ್ತಾರೆ. ಜೇನಿನ ಸ್ವಭಾವದ ಬಗ್ಗೆ, ಅವುಗಳ ನಿರ್ವಹಣೆ ಬಗ್ಗೆ ಜೇನು ಕೃಷಿಕರಾದ ಅಪೂರ್ವ ಹಾಗೂ ಗುರುಪ್ರಸಾದ್ ಅವರಿಂದ ತಿಳಿದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಜೇನುಗಳ ರಕ್ಷಣೆ ಹಾಗೂ ಗೂಡು ತೆಗೆಯಬೇಕಾದಾಗ ಪಾಲಿಸಬೇಕಾದ ಕ್ರಮಗಳು, ಮುಂಜಾಗ್ರತೆಯ ಬಗೆಗೆ ಅವರಿಂದ ಕಲಿತುಕೊಂಡಿದ್ದಾರೆ. ಹಗ್ಗದ ಮೂಲಕ ಏರಿಳಿಯುವ ಕುರಿತು ಕಂಪನಿಯೊಂದು ತರಬೇತಿ ನೀಡಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಯೂಟ್ಯೂಬ್ ನೋಡಿಕೊಂಡು ಕರಗತ ಮಾಡಿಕೊಂಡಿದ್ದಾರೆ ವೆಂಕಟೇಶ್‌.

ಒಂದು ಜೇನುಗೂಡು ತೆರವು ಮಾಡಲು ₹1500–₹3000ದವರೆಗೂ ಪಡೆಯುತ್ತಾರೆ. ಕಟ್ಟಡದ ಎತ್ತರದ ಮೇಲೆ ಪಡೆಯುವ ಹಣದಲ್ಲಿ ವ್ಯತ್ಯಾಸವಾಗುತ್ತದೆ. ಇಷ್ಟು ವರ್ಷದಲ್ಲಿ ಹಲವು ಬಾರಿ ಅಪಾಯಕ್ಕೆ ಸಿಲುಕಿದ್ದು ಇವೆ. ವರ್ಷದ ಹಿಂದೆ ಅಪಾರ್ಟ್‌ಮೆಂಟ್ ಒಂದರಲ್ಲಿ ಜೇನುಗೂಡು ತೆರವುಗೊಳಿಸುತ್ತಿರುವಾಗ ಆಯತಪ್ಪಿ ಬಿದ್ದು ಬೆನ್ನಿಗೆ ಏಟಾಗಿ ಆರು ತಿಂಗಳು ಹಾಸಿಗೆ ಹಿಡಿದಿದ್ದರು. ಗೆಲುವಾದ ಬಳಿಕ ಈಗ ತುತ್ತಿನಚೀಲ ತುಂಬಿಸುವ ಸಾಹಸ ಶುರುಮಾಡಿದ್ದಾರೆ. ‘ಬಿಬಿಎಂಪಿ ಸಹಿತ ಸರ್ಕಾರಿ ಸಂಸ್ಥೆಗಳು ನನ್ನನ್ನು ಅಗತ್ಯ ಇದ್ದಾಗ ಮಾತ್ರ ನೆನಪಿಸಿಕೊಳ್ಳುತ್ತವೆ ಅಷ್ಟೇ. ನಮ್ಮ ಜೀವನಕ್ಕೆ ಭದ್ರತೆಯೇ ಇಲ್ಲ’ ಎನ್ನುವ ವೆಂಕಟೇಶ್ ಮಾತಿನಲ್ಲಿ ನೋವಿತ್ತು.

ಜೇನುನೊಣಗಳನ್ನು ಈ ರೀತಿ ಸ್ಥಳಾಂತರಿಸುವುದು ವೈಜ್ಞಾನಿಕವಾಗಿ ಸರಿಯಾದ ಕ್ರಮ ಅಲ್ಲದಿದ್ದರೂ, ಕೀಟನಾಶಕ ಸಿಂಪಡಿಸಿ ಅವುಗಳನ್ನು ನಾಶ ಮಾಡಿ, ಪ್ರಕೃತಿಯಲ್ಲಿ ಏರುಪೇರು ಉಂಟು ಮಾಡುವುದಕ್ಕಿಂತಲೂ ಉತ್ತಮ ಎನ್ನುವುದು ಕೀಟತಜ್ಞರ ಅಭಿಪ್ರಾಯ. 

ಜೇನಿನ ಜೊತೆ ಸಹಬಾಳ್ವೆ

ಜನಜೀವನಕ್ಕೆ ಸಮಸ್ಯೆ ಆಗದೇ ಇರುವ ಸ್ಥಳಗಳಲ್ಲಿ ಜೇನುಗೂಡು ಕಟ್ಟಿದ್ದರೆ, ಅವುಗಳನ್ನು ಸ್ಥಳಾಂತರಿಸದೇ ಇರುವುದು ಉತ್ತಮ ಎನ್ನುವುದು ಜೇನು ರಕ್ಷಣೆಗೆ ಇರುವ ‘ದಿ ಹೈವ್ ಟ್ರಸ್ಟ್‌’ನ ಅಪೂರ್ವ ಬಿ.ವಿ ಅವರ ಮಾತು.

ಫೆಬ್ರುವರಿಯಿಂದ ಜೂನ್‌ ಹಾಗೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗೂಡುಗಳು ಕಾಣಿಸಿಕೊಳ್ಳುತ್ತವೆ. ತೀರಾ ಅಪಾಯಕಾರಿ ಎನಿಸಿದರೆ ಮಾತ್ರ ಗೂಡುಗಳನ್ನು ತೆರವುಗೊಳಿಸಿ ಎನ್ನುವುದು ಅವರ ಕಳಕಳಿ. ಅವು ಇರುವ ಕಡೆ ಸಾವಧಾನವಾಗಿ ಓಡಾಡಬೇಕು. ಗಾಢ ವಾಸನೆ ಮತ್ತು ಪ್ರಖರ ಬಣ್ಣಗಳು ಅವುಗಳನ್ನು ಕೆರಳಿಸುತ್ತವೆ. ಗೂಡಿನ ಸಮೀಪ ಕಪ್ಪುಬಟ್ಟೆ ಕಟ್ಟಿದರೆ ಸಾಕು, ಅವುಗಳು ತೊಂದರೆ ಕೊಡವು. ‌‌ಹಾಗೆ ಬಿಟ್ಟು ಬಿಟ್ಟರೆ 3–4 ತಿಂಗಳಲ್ಲಿ ವಲಸೆ ಹೋಗುತ್ತವೆ. ನಾಲ್ಕು ತಿಂಗಳು ಅವುಗಳ ಜೊತೆ ಸಹಬಾಳ್ವೆ ಮಾಡುವ ತಾಳ್ಮೆ ಇದ್ದರೆ ನಮ್ಮ ಅನ್ನದ ಬಟ್ಟಲೇ ಸಮೃದ್ಧವಾಗುತ್ತದೆ ಎಂದು ಆಹಾರಕ್ಕೂ ಜೇನುಗಳ ಪರಾಗ ಕ್ರಿಯೆಗೂ ಇರುವ ಸಂಬಂಧ ಕುರಿತು ತಿಳಿಸಿದರು.

ಶುರುವಿನಲ್ಲಿ ಜೇನುಗಳನ್ನು ಸುಟ್ಟುಹಾಕಿದ ಕೈಗಳೇ ಈಗ ಅವುಗಳ ರಕ್ಷಣೆಗೆ ನಿಂತಿರುವುದು ಕಾಕತಾಳೀಯವಾದರೂ ಸಮಾಧಾನದ ತರುವ ಸಂಗತಿ.

ಹೆಜ್ಜೇನಿನ ಗೂಡನ್ನು ಸ್ಥಳಾಂತರಗೊಳಿಸುತ್ತಿರುವ ವೆಂಕಟೇಶ್‌ 
ಹೆಜ್ಜೇನಿನ ಗೂಡನ್ನು ಸ್ಥಳಾಂತರಗೊಳಿಸುತ್ತಿರುವ ವೆಂಕಟೇಶ್‌ 

ಜೇನುನೊಣ ಕಚ್ಚಿದರೆ ಹೀಗೆ ಮಾಡಿ...

ಗೂಡಿಗೆ ತೊಂದರೆಯಾಗುತ್ತದೆ ಎಂದಾದರೆ ಮಾತ್ರ ಜೇನುನೊಣಗಳು ದಾಳಿ ಮಾಡುತ್ತವೆ. ಜೇನುನೊಣ ಕಚ್ಚಿದ ಬಳಿಕ ಚರ್ಮದೊಳಗೆ ಉಳಿದಿರುವ ಅದರ ಮುಳ್ಳುಗಳನ್ನು ತೆಗೆದು ನೀರಿನಿಂದ ತೊಳೆದು ಈರುಳ್ಳಿ ರಸ ಹಚ್ಚಬೇಕು. ಅಲರ್ಜಿ ಇರುವವರಿಗೆ ದದ್ದುಗಳು ಬೀಳುತ್ತವೆ. ಹೀಗಾದರೆ ವೈದ್ಯರನ್ನು ಕಾಣಬೇಕು. ನೊಣಗಳು ಸ್ಪುರಿಸುವ ವಿಷದಿಂದಾಗಿ ದೇಹಪ್ರಕೃತಿಗೆ ಅನುಗುಣವಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 2–3 ದಿನ ಉರಿ ದದ್ದುಗಳು ಇದ್ದು ಬಳಿಕ ಗುಣಮುಖವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT