ಮಾರ್ಚ್ 23 ಎಂದರೆ ನಮಗೆ ಲೋಹಿಯಾ ಪ್ರಕಾಶನದ ಪುಸ್ತಕಗಳದ್ದೇ ಗುಂಗು. ಒಂದು ಸಂಕ್ರಾಂತಿ, ಒಂದು ಯುಗಾದಿ, ಒಂದು ದೀಪಾವಳಿಯ ಬರವಿಗೆ ನಾವು ಹೇಗೆಲ್ಲಾ ಕಾತರದಿಂದ ಕಾಯುತ್ತಿದ್ದೆವೋ ಅದಕ್ಕೆ ಇನ್ನೂ ಒಂದು ದಿನವನ್ನು ಜೋಡಿಸಿಬಿಟ್ಟವರು ಸಿ.ಚನ್ನಬಸವಣ್ಣ. ಬ್ಯಾಂಕ್ ಉದ್ಯೋಗಿಯಾಗಿದ್ದ ಚನ್ನಬಸವಣ್ಣನವರು ನೆಲದ ಮರೆಯ ನಿಧಾನದಂತೆ ಕನ್ನಡದ ಹೋರಾಟ, ಪರ್ಯಾಯ ರಾಜಕಾರಣದ ಅವಶ್ಯಕತೆ, ಪರಿಸರದ ಉಳಿವಿನ ಕಾಳಜಿಯನ್ನು ದಾಟಿ ಪುಸ್ತಕ ಪ್ರಕಾಶನ ಲೋಕದಲ್ಲಿ ನೆಲೆ ನಿಂತರು. ಲೋಹಿಯಾರವರನ್ನು ಇನ್ನಿಲ್ಲದಂತೆ ಮನಸ್ಸಿಗೆ ಹಚ್ಚಿಕೊಂಡಿದ್ದ ಅವರು ಲೋಹಿಯಾ ಹೆಸರನ್ನೇ ತಮ್ಮ ಪ್ರಕಾಶನಕ್ಕೂ ಇಟ್ಟರು. ಕನ್ನಡ ಪ್ರಕಾಶನ ರಂಗದಲ್ಲಿ ಅದು ಮಹತ್ವದ ಮೈಲುಗಲ್ಲಾಯಿತು.

ಕನ್ನಡ ಪುಸ್ತಕ ಲೋಕ ಇಂದಿಗೂ ನೆನಪಿಸಿಕೊಳ್ಳುವ ಎರಡು ಪ್ರಕಾಶನ ಸಂಸ್ಥೆಗಳೆಂದರೆ ಅದು ‘ನೆಲಮನೆ ಪ್ರಕಾಶನ ’ ಹಾಗೂ ‘ಲೋಹಿಯಾ ಪ್ರಕಾಶನ’. ಈ ಎರಡೂ ಪ್ರಕಾಶನಗಳು ಹೊರತಂದ ಪುಸ್ತಕಗಳು ಕನ್ನಡ ನಾಡಿನ ಪ್ರಜ್ಞೆಯನ್ನು ವಿಸ್ತರಿಸಿವೆ.

ಕೇವಲ 12 ಕಥೆಗಳನ್ನು ಬರೆದರೂ ಕೂಡ ಪ್ರಮುಖ ಕಥೆಗಾರರಾಗಿ ಹೆಸರು ಮಾಡಿದ ರಾಜಶೇಖರ ನೀರಮಾನ್ವಿ ಅವರ ಎರಡನೆಯ ಕಥಾ ಸಂಕಲನವನ್ನು ತರಲು ಯಾವ ಪ್ರಕಾಶಕರೂ ಮುಂದಾಗಲಿಲ್ಲ. ಈ ಅಸಮಾಧಾನವೇ ಲೋಹಿಯಾ ಪ್ರಕಾಶನದ ಹುಟ್ಟಿಗೆ ಕಾರಣವಾಯಿತು. ಬ್ಯಾಂಕ್, ಬ್ಯಾಂಕ್ ಯೂನಿಯನ್ ಜೊತೆಗೆ ಇನ್ನೊಂದು ಜವಾಬ್ದಾರಿ ಚನ್ನಬಸವಣ್ಣನವರಿಗೆ ಜೊತೆಯಾಯಿತು.

“ಪ್ರಕಾಶನ ಕ್ಷೇತ್ರದ ಬಗ್ಗೆ ನಮಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಆದರೆ ಅಣ್ಣ, ನೀರಮಾನ್ವಿಯವರ ಕಥೆಗಳ ಮೇಲಿದ್ದ ಪ್ರೀತಿ ಹಾಗೂ ಅವರು ಹೊರಹಾಕಿದ ಸಿಟ್ಟು ಎರಡೂ ನನಗೆ ಆ ಕ್ಷಣಕ್ಕೆ ಅವರ ಪುಸ್ತಕ ಪ್ರಕಟಣೆ ಮಾಡಲೇಬೇಕು ಎನ್ನುವ ನಿರ್ಧಾರ ಕೈಗೊಳ್ಳುವಂತೆ ಮಾಡಿತು. ಅವರಿಂದ ಆ ಆರು ಕಥೆಗಳ ಕಟ್ಟನ್ನು ತೆಗೆದುಕೊಂಡವನೇ ನೇರ ಬೆಂಗಳೂರಿನ ಬಸ್ ಹಿಡಿದೆ. ಎಷ್ಟು ಖರ್ಚು ಬಿತ್ತೋ ಅಷ್ಟನ್ನು ಮಾತ್ರವೇ ಪುಸ್ತಕದ ಬೆಲೆಯಾಗಿ ನಿಗದಿ ಮಾಡಿದೆವು. ಪುಸ್ತಕದ ಬೆಲೆ ಹೇಗೆ ನಿರ್ಧರಿಸಬೇಕು ಎನ್ನುವುದು ತಾನೇ ನಮಗೆಲ್ಲಿ ಗೊತ್ತಿತ್ತು?” ಎಂದು ಚನ್ನಬಸವಣ್ಣ ಮುಗುಳ್ನಕ್ಕರು.

ಮುಧೋಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಪ್ರಧಾನ ಭಾಷಣ ಕೇಳಿದ ಚನ್ನಬಸವಣ್ಣನವರು ಗುರುತು ಪರಿಚಯವಿಲ್ಲದ ನನ್ನ ಬೆನ್ನು ಹತ್ತಿದ್ದರು. ಚಂಪಾ, ರವಿ ಬೆಳಗೆರೆ.. ಹೀಗೆ ಹಲವರನ್ನು ಸಂಪರ್ಕಿಸಿ ನನ್ನ ಫೋನ್ ನಂಬರ್ ಹಾಗೂ ವಿವರ ಪಡೆದಿದ್ದರು. ನಾನು ಕ್ಯೂಬಾಗೆ ಹೋಗಿ ಬಂದಿದ್ದೆ. ಅದರ ಪ್ರವಾಸ ಕಥನ ಬರೆದು ಕೊಡುತ್ತೇನೆ ಎಂದೂ ಹೇಳಿದ್ದೆ. ಆದರೆ ಆ ವೇಳೆಗೆ ಕಲಬುರ್ಗಿಯಲ್ಲಿ ತಾಜಾ ಕಥೆ, ಕವಿತೆಗಳು ಅರಳುತ್ತಿದ್ದವು. ವಿಕ್ರಮ ವಿಸಾಜಿ ನನ್ನ ಮನೆಯಲ್ಲಿ ನಡೆದ ಮಿನಿ ಗೋಷ್ಠಿಯಲ್ಲಿ ‘ತಮಾಷಾ’ ಕವಿತೆ ಓದಿದ್ದೇ ತಡ ಇದನ್ನು ಕಲಬುರ್ಗಿಯ ಗಡಿ ದಾಟಿಸಲೇಬೇಕು ಎಂದು ನಿರ್ಧರಿಸಿದೆ. ಅದೇ ವೇಳೆಗೆ ರಾಜಶೇಖರ ಹತಗುಂದಿ, ಚಿತ್ರಶೇಖರ ಕಂಠಿ, ಕಲಿಗಣನಾಥ ಗುಡದೂರ ತಮ್ಮೊಳಗಿನ ಬೇಗುದಿಯನ್ನೆಲ್ಲ ಬಸಿದು ಕಥೆಗಳನ್ನು ಬರೆದಿದ್ದರು. ನಾನು ಅವರ ಮುಂದೆ ಹಸ್ತಪ್ರತಿ ಪೇರಿಸುತ್ತಾ ಹೋದಂತೆಲ್ಲಾ ಅದನ್ನು ಇನ್ನಿಲ್ಲದ ಕಾಳಜಿಯಿಂದ ಪ್ರಕಟಿಸುತ್ತಾ ಹೋದರು.

ಮಾರಾಟ ಮಾಡಿಕೊಡುವಂತೆ ಕೋರಿ ಯುಗಾದಿಗೆ ಬೇಕಾದ ಮಾವಿನ ಎಲೆಗಳಂತೆ ಚನ್ನಬಸವಣ್ಣನವರು ಪುಸ್ತಕದ ಕಟ್ಟು ಕಳುಹಿಸುತ್ತಿದ್ದರು. ನಾವೂ ಆ ಪುಸ್ತಕಗಳನ್ನು ಮಾರುವುದನ್ನು ಯುಗಾದಿಯಂತೆಯೇ ಸಂಭ್ರಮಿಸುತ್ತಿದ್ದೆವು. ಅವರ ಯಶಸ್ಸು ಇರುವುದು ಇಲ್ಲೂ ಕೂಡಾ. ಅವರಿಗೆ ಪುಸ್ತಕದ ಮಾರಾಟ ಅಂಗಡಿಗಳು ಬೇಕೇ ಇರಲಿಲ್ಲ, ಪುಸ್ತಕ ಅಂಗಡಿಗಳು ನಮ್ಮ ಪುಸ್ತಕಗಳ ಮೂರು ಮತ್ತೊಂದು ಪ್ರತಿ ಮಾತ್ರ ಕೊಳ್ಳುತ್ತಾರೆ ಎಂದು ದೂರುತ್ತಲೂ ಇರಲಿಲ್ಲ. ರಾಜ್ಯದ ಎಲ್ಲೆಡೆ ನನ್ನಂತಹ ನೂರಾರು ಅನಧಿಕೃತ ಮಾರಾಟಗಾರರು ಇದ್ದೆವು. ನಮ್ಮ ವಿಳಾಸವೇ ಒಂದು ರೀತಿಯಲ್ಲಿ ಲೋಹಿಯಾ ಪ್ರಕಾಶನದ ಬ್ರಾಂಚ್ ಆಫೀಸ್ಗಳಾಗಿರುತ್ತಿತ್ತು.

ಅವರು ಒಂದು ರೀತಿಯಲ್ಲಿ ಪುಸ್ತಕೋದ್ಯಮದ ಅಭಿರುಚಿಯನ್ನೇ ತಿದ್ದಿದರು ಎಂದರೆ ಅತಿಶಯೋಕ್ತಿಯಲ್ಲ. ಪುಸ್ತಕಗಳ ಗುಣ, ಅದನ್ನು ಹೊರತರುತ್ತಿದ್ದ ರೀತಿಯಲ್ಲಿನ ಗುಣಮಟ್ಟ, ಸಂಭಾವನೆ ನೀಡುವುದರಲ್ಲಿ ಇದ್ದ ಪ್ರೀತಿ, ಬಿಡುಗಡೆ ಮಾಡುವಲ್ಲಿ ತೋರಿಸುತ್ತಿದ್ದ ಉತ್ಸಾಹ, ಮಾರಾಟ ಮಾಡುವಲ್ಲಿ ಇದ್ದ ಜಾಣತನ ಇವು ಪುಸ್ತಕ ಎಂದರೆ ಅದೂ ಇನ್ನೊಂದು ‘ಪಾಕಂಪಪ್ಪು’ ಎಂದುಕೊಂಡವರಿಗೆ ಪರೋಕ್ಷ ನೀತಿ ಪಾಠವಾಗಿತ್ತು. ಅಷ್ಟೇ ಅಲ್ಲ, ಅವರು ಬರಹಗಾರರ ಅಭಿರುಚಿಯನ್ನೂ ತಿದ್ದುತ್ತಿದ್ದರು. ಅವರು ಪ್ರಕಟಿಸಿದ ಹಲವು ಪುಸ್ತಕಗಳಿಗೆ ಅವರೊಡನೆ ಜೊತೆ ಜೊತೆಯಾಗಿ ಓಡಾಡಿದ ನಾನು ಪ್ರತೀ ಬಾರಿ ‘ಇಷ್ಟು ಹಚ್ಚನೆ ಹಸಿರು ಗಿಡದಿಂ ಎಂತು ಮೂಡಿತು ಬೆಳ್ಳಗೆ’ ಎಂದು ಅಚ್ಚರಿಗೊಳ್ಳುತ್ತಿದ್ದೆ. ಚನ್ನಬಸವಣ್ಣ ಒಂದು ಅರ್ಥದಲ್ಲಿ ‘ಲೇಖಕರ ಪ್ರಕಾಶಕ’. ಲೇಖಕರ ಬೆನ್ನತ್ತಿ ಬರೆಸುವುದರಿಂದ ಆರಂಭಿಸಿ ಪ್ರತಿಯೊಂದು ಪುಸ್ತಕವನ್ನೂ ಲೇಖಕ ಕಂಡ ಕನಸಿನಂತೆ ರೂಪಿಸುವುದೂ, ಅವಕಾಶವಿದ್ದಾಗಲೆಲ್ಲಾ ಲೇಖಕರ ಕನಸನ್ನೇ ಇನ್ನೂ ಶ್ರೀಮಂತಗೊಳಿಸುವುದು ಅವರ ಅತಿ ಇಷ್ಟದ ಸಂಗತಿಯಾಗಿತ್ತು.

ಮಾರ್ಚ್ 23, ಲೋಹಿಯಾ ಅವರ ಹುಟ್ಟುಹಬ್ಬವನ್ನು ಲೋಹಿಯಾ ಪ್ರಕಾಶನ ನಾಡಿನ ಎಲ್ಲಾ ಸಾಹಿತಿಗಳ, ಓದುಗರ ಹಬ್ಬವಾಗಿಸಿಬಿಡುತ್ತಿತ್ತು. ಮೊದಲು ಬಳ್ಳಾರಿಯಲ್ಲಿ ಮಾತ್ರ ಆಗುತ್ತಿದ್ದ ಪುಸ್ತಕ ಬಿಡುಗಡೆ ನಂತರ ಒಂದೇ ದಿನದಂದು ಹತ್ತಾರು ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುವಂತೆ ಹಬ್ಬಿಬಿಟ್ಟಿತ್ತು. ಕನ್ನಡದ ಖ್ಯಾತ ಸಾಹಿತಿಗಳನ್ನು ತಮ್ಮ ಊರುಗಳ ಗಡಿ ದಾಟಿಸಿ ಬೇರೆ ಊರುಗಳಲ್ಲಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಾಡಿದ, ಆ ಮೂಲಕ ಅಲ್ಲಿನ ಊರುಗಳವರಿಗೆ ಕನ್ನಡದ ಸಾಹಿತಿಗಳ ಜೊತೆ ಒಡನಾಡುವಂತೆ ಮಾಡಿದ ಹೆಮ್ಮೆ ಅವರದ್ದು. ಇದರ ಹಿಂದೆ ಇದ್ದದ್ದು ಅವರ ವಿನಾಕಾರಣ ಪ್ರೀತಿ. ಬಳ್ಳಾರಿಯ ಅವರ ಮನೆ ‘ಕ್ಷಿತಿಜ’ಕ್ಕೆ ಚನ್ನಬಸವಣ್ಣನವರದ್ದೇ ಗುಣ. ಅಥವಾ ಚನ್ನಬಸವಣ್ಣನವರಿಗೆ ಕ್ಷಿತಿಜದಂತಹ ವಿಸ್ತಾರ ಗುಣ.

(ಲೋಹಿಯಾ ಪ್ರಕಾಶನದ ಮೂಲಕ ಪುಸ್ತಕ ಲೋಕದ ಸಂಭ್ರಮವನ್ನು ಹೆಚ್ಚಿಸಿದವರು ಬಳ್ಳಾರಿಯ ಸಿ.ಚನ್ನಬಸವಣ್ಣ. ಲೋಹಿಯಾ ಜನ್ಮದಿನವಾದ ಮಾರ್ಚ್ 23 ರಂದು ಅವರಿಗೆ ಬೆಂಗಳೂರಿನಲ್ಲಿ ‘ಚುಂಬಕ ಗಾಳಿ’ ಗ್ರಂಥವನ್ನು ಅರ್ಪಿಸಿ ಸನ್ಮಾನಿಸಲಾಗುತ್ತದೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.