ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿನಮನ | ಸಿರಿಕಂಠದ ಸೊರ ಅಡಗಿದ ಪಾಡ್ದನ ಕವಿ ರಾಮಕ್ಕ

Published 27 ಏಪ್ರಿಲ್ 2024, 23:33 IST
Last Updated 27 ಏಪ್ರಿಲ್ 2024, 23:33 IST
ಅಕ್ಷರ ಗಾತ್ರ

ಈಚೆಗೆ ನಿಧನರಾದ ಪಾಡ್ದನಕವಿ ಗಿಡಿಕೆರೆ ರಾಮಕ್ಕ ಮುಗ್ಗೇರ್ತಿ ಶತಮಾನ ಕಂಡ ಕರ್ನಾಟಕದ ಒಂದು ಅದ್ಭುತ ಕಾವ್ಯಪ್ರತಿಭೆ. ತುಳುನಾಡಿನ ಹೆಸರಾಂತ ಪಾಡ್ದನಕವಿ; ಪಾಡ್ದನಗಳ ದೊಡ್ಡ ಕಣಜ. ಅವರ ಕಣಜದಲ್ಲಿ ಪಾಡ್ದನ ಕಟ್ಟುವ ಸೃಜನ ಪ್ರತಿಭೆ ಅಷ್ಟೇ ಅಲ್ಲ, ಪಾಡ್ದನ ಹುಟ್ಟುವ, ಕಟ್ಟುವ ಬಗೆ, ಸಂದರ್ಭ ಮನೋಪಠ್ಯಲೋಕ, ಸೂತ್ರಾತ್ಮಕತೆಗಳಿಂದ ರೂಪುಗೊಳ್ಳುವ ಪಠ್ಯದ ಸೃಷ್ಟಿ-ಮರುಸೃಷ್ಟಿಯ ಸ್ವರೂಪಗಳ ಕುರಿತು ಮೌಖಿಕ ಕಾವ್ಯ ಮೀಮಾಂಸೆ ಕಟ್ಟಬಲ್ಲ ವಿಶಿಷ್ಟ ಪಾಂಡಿತ್ಯವಿತ್ತು.

ರಾಮಕ್ಕ ಮುಗ್ಗೇರ್ತಿ ಹುಟ್ಟಿದ್ದು, ಬೆಳೆದಿದ್ದು ಮಂಗಳೂರು ಬಳಿಯ ವಾಮಂಜೂರಿನಲ್ಲಿ. ಹದಿನೈದು ವರ್ಷಕ್ಕೆ ಮದುವೆಯಾಗಿ ಬದುಕು ಮಾಡಿದ್ದು ಕಟೀಲು ಗ್ರಾಮದ ಗಿಡಿಕೆರೆಯಲ್ಲಿ. ಬದುಕಿನ ಬಹುಕಾಲ ಕೃಷಿಕಾರ್ಮಿಕರಾಗಿ, ನಾಟಿಗದ್ದೆಯ ನಿರಂತರ ದುಡಿತದಲ್ಲಿ ಪಾಡ್ದನಗಳೊಂದಿಗಿನ ಅವರ ಸಂಬಂಧ ದಿನಬೆಳಗಿನದು. ಅಲ್ಲಿಯೇ ಅವರ ಪಾಡ್ದನಕಾವ್ಯ ಹುಟ್ಟು ಮರುಹುಟ್ಟಿನಲ್ಲಿ ಮೈತಳೆದದ್ದು. ಅಂದರೆ ನಾಟಿಗದ್ದೆಯೇ ರಾಮಕ್ಕ ಮುಗ್ಗೇರ್ತಿಯವರ ಕಾವ್ಯಾವತರಣದ ಮುಖ್ಯ ಪ್ರದರ್ಶನ ಕಳ. ಸಹವಂದಿಗ ಮಹಿಳಾ ಸಮೂಹವೇ ಪ್ರೇಕ್ಷಕಕೂಟ. ನಾಟಿಗದ್ದೆಯ ಈ ‘ಸಹಜಸಂದರ್ಭ’ದ ಅವರ ಪಾಡ್ದನಪಠ್ಯಕ್ಕೆ ಅಧ್ಯಯನದ ನೆಲೆಯಲ್ಲಿ ಬಹಳ ಮಹತ್ವವಿದೆ. ಹಾಗೆ ನೋಡಿದರೆ ಒಂದು ಪ್ರದರ್ಶನ ಪಠ್ಯ ರೂಪುಗೊಳ್ಳುವುದು, ಗರಿಮೆಯನ್ನು ಪಡೆಯುವುದು ಕವಿ-ಪ್ರೇಕ್ಷಕರ ಸಂಬಂಧ, ಪ್ರೇಕ್ಷಕರ ಪಾಲ್ಗೊಳ್ಳುವಿಕೆ, ಬಂಧುತ್ವ ವ್ಯವಸ್ಥೆ, ಪ್ರದರ್ಶನದ ಆವರಣ ಅತ್ಯಂತ ಪರಿಣಾಮಕಾರಿಯಾದುದು. ಇತ್ಯಾತ್ಮಕವಾದ ಇಂತಹ ಸಂದರ್ಭ, ಪರಿಸರವೇ ರಾಮಕ್ಕ ಮುಗ್ಗೇರ್ತಿಯವರ ಕಾವ್ಯಸೃಷ್ಟಿಯ ಪ್ರಧಾನಶಕ್ತಿ. ರಾಮಕ್ಕನ ಕಾವ್ಯಪ್ರತಿಭೆ 30ಕ್ಕೂ ಮಿಕ್ಕು ಸುದೀರ್ಘ ಪಾಡ್ದನಗಳನ್ನೂ, 15ಕ್ಕೂ ಹೆಚ್ಚು ಕಬಿತಗಳನ್ನೂ, ಮಾನಸಿಕಪಠ್ಯದ ರೂಪದಲ್ಲಿ ತನ್ನೊಳಗೆ ಹುದುಗಿಸಿಕೊಂಡಿದೆ.

ಅದು 1997. ದೇಸೀ ಕನಸಿನ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹೊತ್ತು. ಕರ್ನಾಟಕದ ಮೌಖಿಕ ಮಹಾಕಾವ್ಯ ಯೋಜನೆಯನ್ನು ಜಾನಪದ ವಿದ್ವಾಂಸ ಪ್ರೊ. ಹಿ. ಚಿ. ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಕನ್ನಡದ ನಾಲ್ಕು ಮಹಾಕಾವ್ಯಗಳು ಒಂದು ತುಳು ಮಹಾಕಾವ್ಯವನ್ನು ಈ ಯೋಜನೆಯಡಿ ಪ್ರಕಟಿಸಲು ಉದ್ದೇಶಿಸಿದೆವು. ಆಗ ನಾನು ತುಳು ಸಿರಿಪಾಡ್ದನ ಕಾವ್ಯವನ್ನು ಆಯ್ದುಕೊಂಡೆ. ಈ ಹಿನ್ನೆಲೆಯಲ್ಲಿ ನಾನು ರಾಮಕ್ಕ ಮುಗ್ಗೇರ್ತಿಯವರ ಮುಳಿಹುಲ್ಲಿನ ಮನೆಯ ಜಗಲಿಯಲ್ಲಿ ಅವರ ಬಂಧುಗಳ, ನೆರೆಕರೆಯವರ ಎದುರು ಹಾಡಿಸಿ ಸಂಗ್ರಹಿಸಿದೆ. ಆರುಕೂರುಗಳಲ್ಲಿ-ಒಂದೊಂದು ಬಾರಿ ನಾಲ್ಕು ದಿನಗಳು. ಈ ಕಾಲಾವಧಿಯಲ್ಲಿ ದಾಖಲೀಕರಣ ನಡೆಸಿದೆ. ನನ್ನ ಒಂಟಿ ಪ್ರಯತ್ನವಾಗಿ ಗಿಡಿಕೆರೆ ರಾಮಕ್ಕ ಮುಗ್ಗೇರ್ತಿಯವರ ಸುದೀರ್ಘ ಸಿರಿಪಾಡ್ದನವನ್ನು ಸಂಗ್ರಹಿಸಿ, ಸಂಕಲಿಸಿ, ಪ್ರಕಟಿಸಿದ್ದು (1999).

ಒಮ್ಮೆ ರಾಮಕ್ಕ ಮುಗ್ಗೇರ್ತಿ ಅವರಲ್ಲಿ ‘ನೀವು ಇಷ್ಟು ಸುದೀರ್ಘವಾದ ಪಾಡ್ದನವನ್ನು ಹೇಗೆ ನಿರರ್ಗಳವಾಗಿ ಹಾಡುತ್ತೀರಿ?’ ಎಂಬ ಪ್ರಶ್ನೆ ಇಟ್ಟಾಗ ಅವರು ಹೇಳಿದ್ದು ಹೀಗೆ - ‘ನಮ್ಮದು ಮಾತೃಮೂಲೀಯ ಕುಟುಂಬ. ನನ್ನ ಅಜ್ಜಿ ಪಾಡ್ದನಗಳ ಮರ. ನಾನು ಆಗ ಐದು ವರ್ಷದ ಬಾಲೆ. ನನಗೆ ಆಗಲೇ ಪಾಡ್ದನ ಕೇಳುವುದೆಂದರೆ ಅಷ್ಟು ಇಷ್ಟ. ರಾತ್ರಿ ಊಟವಾದ ಬಳಿಕ ಅಜ್ಜಿ ಹೇಳುತ್ತಿದ್ದ ಪಾಡ್ದನಗಳನ್ನು ಕುತೂಹಲದಿಂದ ಕಿವಿಗೊಟ್ಟು ಕೇಳುತ್ತಿದ್ದೆ. ಆಗ ನನಗೆ ಪಾಡ್ದನಗಳ ಕತೆ ತಿಳಿಯಿತು. ಕತೆಯ ವಸ್ತು ಆಪ್ತವಾಯಿತು. ಅಜ್ಜಿ ನಾಟಿಗದ್ದೆಯಲ್ಲಿ ಪಾಡ್ದನ ಹಾಡುವಾಗ ನಾನು ಗದ್ದೆಯಂಚಿನಲ್ಲಿ ಕುಳಿತು ಅದನ್ನು ಕೇಳಿಸಿಕೊಳ್ಳುತ್ತಿದ್ದೆ. ಮುಖ್ಯ ಪಾಡ್ದನಕಾರ್ತಿಯಾಗಿದ್ದ ನನ್ನ ಅಜ್ಜಿ ಮೊದಲಸಾಲು ಹಾಡಿದಾಗ ಅವರ ಜೊತೆಗಿನ ಹೆಂಗಸರು ಅದನ್ನು ಪುನರಾವರ್ತಿಸುತ್ತಿದ್ದರು. ಆಗ ನಾನು ಅದಕ್ಕೆ ದನಿಗೂಡಿಸುತ್ತಿದ್ದೆ. ನಾನು ಒಬ್ಬಳೇ ಇದ್ದಾಗ ಆ ಪಾಡ್ದನವನ್ನು ಗುನುಗುನಿಸುತ್ತಿದ್ದೆ. ಒಬ್ಬಳೇ ಇದ್ದಾಗ ಆ ಪಾಡ್ದನಗಳ ಒಂದೊಂದು ಸಾಲನ್ನು ಕಟ್ಟಿ ಹೊಸೆಯತೊಡಗಿದೆ. ಮುಂದೆ ಅಜ್ಜಿಯೊಂದಿಗೆ ನಾನು ನಾಟಿಗದ್ದೆಯ ಕೆಲಸಕ್ಕೆ ಹೋಗತೊಡಗಿದೆ. ಅಲ್ಲಿ ಕೆಲವೊಮ್ಮೆ ಅಜ್ಜಿ ‘ಮಗಾ ರಾಮಕ್ಕ, ನನಗೆ ದಣಿವಾಗುತ್ತಿದೆ. ನಾನು ತೊಡಗಿದ ಪಾಡ್ದನವನ್ನು ಮುಂದುವರಿಸು’ ಎನ್ನುತ್ತಿದ್ದರು.

ಆಗ ನಾನು ಅನಿವಾರ್ಯವಾಗಿ ಮುಖ್ಯ ಪಾಡ್ದನಕಾರ್ತಿಯಾಗಿ ಹಾಡತೊಡಗಿದೆ. ಇಂದಿಗೂ ಇಡಿಯ ಪಾಡ್ದನ ನನಗೆ ಬಾಯಿಪಾಠ ಬಂದಂತಿಲ್ಲ. ಆಯಾ ಹೊತ್ತಿನ ತುರ್ತಿಗೆ ಅನುಸರಿಸಿ ನನ್ನ ಅನುಭವದ ಬೆಳಕಿನಲ್ಲಿ ಪಾಡ್ದನ ಕಟ್ಟುತ್ತಾ ಬಂದೆ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಒಂದು ಪಾಡ್ದನ ಹಿಗ್ಗುತ್ತದೆ, ಕುಗ್ಗುತ್ತದೆ, ಅಲಂಕರಣಗೊಳ್ಳುತ್ತದೆ. ಯಾವುದೂ ಬಾಯಿಪಾಠವಲ್ಲ.’ - ಎನ್ನುವಲ್ಲಿ ರಾಮಕ್ಕ ಒಬ್ಬ ಸಮರ್ಥ ಮೌಖಿಕ ಕಾವ್ಯಮೀಮಾಂಸಕಾರರಾಗಿ ನಿಲ್ಲುತ್ತಾರೆ. ಇದಕ್ಕೆ ಸಾಕ್ಷ್ಯವಾಗಿ ಸಿರಿಪಾಡ್ದನ ದಾಖಲೀಕರಣದ ಒಂದು ಅನುಭವವನ್ನು ಹೇಳಬಯಸುತ್ತೇನೆ. ಒಂದು ಕೂರಿನಲ್ಲಿ ಧ್ವನಿಮುದ್ರಣ ಮಾಡಿಕೊಂಡ ಅರ್ಧ ಕ್ಯಾಸೆಟ್ ಭಾಗ ಇನ್ನೊಂದು ಕೂರಿನಲ್ಲಿ ಹಾಡಿಸಿದಾಗ ಅದು ಒಂದೂವರೆ ಕ್ಯಾಸೆಟ್‌ನಷ್ಟು ವಿಸ್ತಾರಕ್ಕೆ ಬೆಳೆಯಿತು.ಅಕ್ಷರ ಜಗತ್ತಿನಲ್ಲಿ ಒಂದು ಅಪಕಲ್ಪನೆಯಿದೆ. ಅದು ಮೌಖಿಕಕಾವ್ಯ-ಪಾಡ್ದನಗಳು ಪರಂಪರೆಯಿಂದ ಬಂದಿದ್ದು ಬಾಯಿಪಾಠದ ಮೂಲಕ ಅದೇ ಪಠ್ಯ ಮತ್ತೆ ಮತ್ತೆ ಬಿತ್ತರಗೊಳ್ಳುತ್ತದೆ ಎಂಬ ನಿಲುಮೆ. ಹಾಗಾಗಿಯೇ ನಾವು ಅಕ್ಷರದ ಮಂದಿ ಅವರನ್ನು ಗಾಯಕರೆಂದೋ, ನಿರೂಪಕರೆಂದೋ, ವಕ್ತೃ ಗಳೆಂದೋ ಕಾಣುವುದು.

ಈ ತೀರ್ಮಾನ ಎಷ್ಟು ಅವೈಜ್ಞಾನಿಕವೆಂದರೆ ಕಾವ್ಯ, ಕಥೆ, ಕವಿತೆಯೊಂದು ಲಿಖಿತದಲ್ಲಿ ಮೂಡಿದರೆ ಅವರು ಕವಿ/ಕಥೆಗಾರರಾಗುತ್ತಾರೆ. ಮೌಖಿಕದಲ್ಲಿ ಹಾಡಿದರೆ, ಹೇಳಿದರೆ ಅವರು ಗಾಯಕ, ನಿರೂಪಕರಾಗುತ್ತಾರೆ. ಇಲ್ಲಿ ನನ್ನನ್ನು ಕಾಡುವ ಪ್ರಶ್ನೆ ಮೌಖಿಕ ಸೃಜನಶೀಲ ಪ್ರತಿಭೆಯೊಂದು ಏಕೆ ಕವಿ, ಕತೆಗಾರರಲ್ಲ? ಈ ಪ್ರಶ್ನೆಯ ಹಾದಿಯ ನಡೆಯಲ್ಲಿ ನಾನು ರಾಮಕ್ಕರಿಂದ ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿದ ಸಿರಿಪಾಡ್ದನ ಸಂಪುಟಕ್ಕೆ ‘ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ’ ಎಂಬ ಹೆಸರಿಟ್ಟು ಅವರನ್ನು ಕವಿಯಾಗಿ ಕಂಡು ಗೌರವಿಸಿದೆ.

ಹಲವು ಪುರಸ್ಕಾರಗಳು

ರಾಮಕ್ಕ ಮುಗ್ಗೇರ್ತಿಯವರನ್ನು ನಾಡು ಬಹುಬಗೆಯಲ್ಲಿ ಗೌರವಿಸಿದೆ. ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಸದಸ್ಯತ್ವ (2001-2004) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2014) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2000) ವೀರರಾಣಿ ಅಬ್ಬಕ್ಕ ಪ್ರಶಸ್ತಿ (2009) ಕಟೀಲು ದೇಗುಲದಿಂದ ‘ಪಾಡ್ದನ ಕೋಗಿಲೆ’ ಬಿರುದು ಅವರ ಪ್ರತಿಭೆಗೆ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT