ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೇಖನ: ವನ್ಯಜೀವಿಗಳ ಮರಣಮೃದಂಗ..

Published : 18 ನವೆಂಬರ್ 2023, 23:26 IST
Last Updated : 18 ನವೆಂಬರ್ 2023, 23:26 IST
ಫಾಲೋ ಮಾಡಿ
Comments

ಮೂರು ವರ್ಷಗಳ ಹಿಂದೆ 2020ರ ಜೂನ್‌ನಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಹಾರ ಅರಸಿ ಕೃಷಿ ಭೂಮಿಗೆ ಬಂದಿದ್ದ, ಗರ್ಭ ಧರಿಸಿದ್ದ ಹೆಣ್ಣಾನೆಯೊಂದು ಕಾಡು ಹಂದಿಗಳಿಗಾಗಿ ಇರಿಸಿದ್ದ ಸ್ಫೋಟಕ ತುಂಬಿದ್ದ ಅನಾನಸ್ ಹಣ್ಣನ್ನು ತಿನ್ನಲುಹೋಯಿತು. ಅದರ ಬಾಯಿಯು ಸ್ಫೋಟದಿಂದ ಛಿದ್ರಗೊಂಡಿತು. ನೋವನ್ನು ತಾಳಲಾರದ ಆ ಮೂಕಪ್ರಾಣಿಯು ಸಮೀಪದ ನದಿಯೊಂದರಲ್ಲಿ ನಾಲ್ಕು ದಿನಗಳ ಕಾಲ ಹಗಲು–ರಾತ್ರಿ ನಿಂತು, ಕೊನೆಗೆ ಪ್ರಾಣಬಿಟ್ಟಿತು. ಆ ದಾರುಣ ಸಾವು ಈ ನೆಲದ ಪ್ರತಿಯೊಬ್ಬ ಪ್ರಜ್ಞಾವಂತನನ್ನು ಕ್ಷಣ ಮಾತ್ರವಲ್ಲದೆ ಹಲವು ದಿನಗಳ ಕಾಲ ಕಾಡಿದ್ದು ನಿಜ. ವನ್ಯಜೀವಿಗಳನ್ನು ನಾಡಿನಿಂದ ಕಾಡಿಗೆ ಓಡಿಸಲು ಈ ನಾಗರಿಕ ಸಮಾಜ ಅನುಸರಿಸುತ್ತಿರುವ ‘ಅನಾಗರಿಕ ಮತ್ತು ಕ್ರೂರ ಮಾರ್ಗಗಳ’ ನಡವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು ಇದೀಗ ಸುಪ್ರೀಂ ಕೋರ್ಟ್ ತಲುಪಿದೆ. 2019ರಲ್ಲಿ ತಮಿಳುನಾಡಿನ ನೀಲಗಿರಿಯ ಬಳಿ ಚಹಾ ತೋಟವೊಂದರಲ್ಲಿ ನಾಲ್ಕು ವರ್ಷದ ಗಂಡಾನೆಯೊಂದನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.

ಆಧುನಿಕ ಭಾರತದಲ್ಲಿ ವನ್ಯಜೀವಿ ಮತ್ತು ಮನುಷ್ಯರ ನಡುವಿನ ಸಂಘರ್ಷವು ದಿನನಿತ್ಯದ ಕ್ರಿಯೆ ಎಂಬಂತಾಗಿದೆ. ಋತುಮಾನಗಳಿಗೆ ಅನುಸಾರವಾಗಿ ನೀರು ಮತ್ತು ಆಹಾರ ಅರಸಿಕೊಂಡು ಕಾಡಿನಿಂದ ಕಾಡಿಗೆ ಅಥವಾ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದ ಹುಲಿ, ಚಿರತೆ ಮತ್ತು ಆನೆಗಳು ಇತ್ತೀಚೆಗೆ ನಾಡಿನತ್ತ ಮುಖಮಾಡಿವೆ. ನಾಡಿನಲ್ಲಿ ಇರಬೇಕಾದ ಮನುಷ್ಯ ಕಾಡಿಗೆ ಲಗ್ಗೆ ಇಟ್ಟಿದ್ದಾನೆ. ರೆಸಾರ್ಟ್, ಸಫಾರಿ, ಅರಣ್ಯ ವೀಕ್ಷಣೆ ಮುಂತಾದವುಗಳ ನೆಪದಲ್ಲಿ ಅವುಗಳ ಆವಾಸಸ್ಥಾನದಲ್ಲಿ ಬೀಡುಬಿಟ್ಟು ವನ್ಯಜೀವಿಗಳ ಸಹಜ ಬದುಕಿಗೆ ಧಕ್ಕೆ ತಂದಿದ್ದಾನೆ. ಇಪ್ಪತ್ತೊಂದನೆಯ ಶತಮಾನದ ಆಧುನಿಕ ಜಗತ್ತು ಮತ್ತು ತಂತ್ರಜ್ಞಾನದ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ಮನುಷ್ಯನ ಶ್ರೇಯೋಭಿವೃದ್ಧಿಗೆ ಇರುವ ಏಕೈಕ ಸೂತ್ರ ಎಂಬ ಸ್ವಾರ್ಥದ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ.

ರಸ್ತೆ ಕಾಮಗಾರಿಯಿಂದ ಸಾವಿನ ಕೂಪ

ಇಂದು ದೇಶದಾದ್ಯಂತ ವಿಸ್ತರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳು ವನ್ಯಜೀವಿಗಳ ಪಾಲಿಗೆ ಸಾವಿನ ಕೂಪಗಳಾಗಿ ಪರಿಣಮಿಸಿವೆ. ಅವುಗಳ ಸಹಜ ಕಿರುದಾರಿ ಎಂದು ಕರೆಯುವ ‘ಕಾರಿಡಾರ್‌’ಗಳು ಹೆದ್ದಾರಿಯಿಂದ ಮುಚ್ಚಿಹೋಗುತ್ತಿದೆ. ಇತ್ತೀಚೆಗೆ ಮೈಸೂರು ಮತ್ತು ಬೆಂಗಳೂರು ನಡುವೆ ನಿರ್ಮಿಸಲಾದ ಹೊಸ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರದ ಬಳಿ ಗುಡ್ಡಗಳಲ್ಲಿ ವಾಸಿಸುತ್ತಿದ್ದ ಕರಡಿ, ನರಿ, ಮೊಲ, ಮುಂತಾದ ಪ್ರಾಣಿಗಳು ಆಹಾರಕ್ಕಾಗಿ ರಸ್ತೆ ದಾಟಲಾಗದೆ ಹಸಿವು ಮತ್ತು ನೀರಡಿಕೆಯಿಂದ ಅಸುನೀಗುತ್ತಿವೆ. ಹುಬ್ಬಳ್ಳಿ ಮತ್ತು ಗೋವಾ ನಡುವಿನ ರೈಲ್ವೆ ಮಾರ್ಗದಲ್ಲಿ ದಾಂಡೇಲಿ ಅಭಯಾರಣ್ಯದ ಕಾಡುಕೋಣಗಳ ಸ್ಥಿತಿ ಕೂಡ ಇದೇ ಆಗಿದೆ. ಕನಿಷ್ಠ ತಿಂಗಳಿಗೆ ಒಂದು ಅಥವಾ ಎರಡು ಪ್ರಾಣಿಗಳು ರೈಲಿಗೆ ಸಿಲುಕಿ ಸಾಯುತ್ತಿವೆ.

ಹುಲಿಗಳ ಜೀವಶಾಸ್ತ್ರಜ್ಞರಾದ ಉಲ್ಲಾಸ್ ಕಾರಂತರು ವನ್ಯ ಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷವನ್ನು ಕುರಿತು 2019ರ ಜನವರಿಯ ‘ದ ಜರ್ನಲ್ ಆಫ್ ಗವರ್ನೆನ್ಸ್’ ಪತ್ರಿಕೆಯಲ್ಲಿ ಹೀಗೆ ದಾಖಲಿಸಿದ್ದರು: ‘ಇಲ್ಲಿಯವರೆಗಿನ ಅರಣ್ಯ ಇಲಾಖೆಯ ಕ್ರಮಗಳು ಬಹುಮಟ್ಟಿಗೆ ಪ್ರತಿಕ್ರಿಯಾತ್ಮಕವಾಗಿವೆ. ಆದರೆ, ವನ್ಯಜೀವಿ ಸಂರಕ್ಷಣೆ ಮತ್ತು ಸಂಘರ್ಷ ತಡೆಗಟ್ಟುವಲ್ಲಿ ಮತ್ತು ಸ್ಪಷ್ಟವಾದ ಗುರಿ ಸಾಧಿಸುವಲ್ಲಿ ಅವುಗಳು ನಿಖರವಾದ ಯೋಜನೆಗಳನ್ನು ಹೊಂದಿಲ್ಲ. ಇದರ ಪರಿಣಾಮವಾಗಿ ಘರ್ಷಣೆಗಳು ಸಹಿಷ್ಣುತೆಯ ಮಟ್ಟವನ್ನು ಮೀರಿ ಉಲ್ಬಣಗೊಳ್ಳುತ್ತಿವೆ. ಈವರೆಗೆ ವನ್ಯಜೀವಿ-ಮಾನವ ಸಂಘರ್ಷಗಳನ್ನು ಎದುರಿಸಲು ನಿರ್ವಹಣಾ ಆಯ್ಕೆಗಳ ಮಾದರಿಯನ್ನು ತರ್ಕಬದ್ಧವಾಗಿ ಚರ್ಚಿಸಲಾಗಿಲ್ಲ. ಪ್ರಾಣಿಗಳ ಜೀವಶಾಸ್ತ್ರದ ಬಗ್ಗೆ ವಿಜ್ಞಾನವು ನಮಗೆ ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿ, ನಿಯಮಿತವಾಗಿ ಸಂಘರ್ಷಗಳನ್ನು ಎದುರಿಸಬೇಕಾದ ವನ್ಯಜೀವಿ ವ್ಯವಸ್ಥಾಪಕರ ಅಗತ್ಯಗಳು ಮತ್ತು ಮಧ್ಯಸ್ಥಗಾರರ ಅಭಿಪ್ರಾಯಗಳನ್ನು (ಸಾಮಾನ್ಯವಾಗಿ ರೈತರು, ಬುಡಕಟ್ಟು ಜನರು ಮತ್ತು ಇತರ ಗ್ರಾಮೀಣ ಜನರು) ಸಂಗ್ರಹಿಸುವ ಅಗತ್ಯವಿದೆ. ಜೊತೆಗೆ ಪ್ರತಿಯೊಂದು ವನ್ಯಜೀವಿ ಪ್ರಭೇದದ ರಕ್ಷಣೆಯು ಸಾಂಸ್ಕೃತಿಕ ಮಹತ್ವ ಪಡೆಯಬೇಕಿದೆ. ಹೆಚ್ಚು ಸಂವೇದನಾಶೀಲವಾದ ಆನೆಯಂತಹ ಜೀವಿಗಳಿಗೆ ಹಾನಿಯನ್ನುಂಟುಮಾಡುವ ಸ್ಫೋಟಕ ತುಂಬಿದ ತೆಂಗಿನಕಾಯಿ ಅಥವಾ ಅನಾನಸ್ ಮತ್ತು ಹಲಸಿನ ಹಣ್ಣುಗಳ ಬಳಕೆಗೆ ರೈತರು ಮೊರೆಹೋಗುವ ಅಗತ್ಯ ಇರುತ್ತಿರಲಿಲ್ಲ. ಒಂದು ಸಮಸ್ಯೆಯನ್ನು ವಿವಿಧ ಆಯಾಮಗಳಲ್ಲಿ ಗುರುತಿಸುವ ಹಾಗೂ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’.

ರೈಲು ಕಂಬಿಯ ‘ಬೇಲಿ’

ಇತ್ತೀಚಿನ ದಿನಗಳಲ್ಲಿ ರೈಲು ಕಂಬಿಗಳನ್ನು ಅರಣ್ಯದ ಸುತ್ತ ಹಾಕುವುದರ ಮೂಲಕ ಆನೆಗಳನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಹುಲಿ ಮತ್ತು ಆನೆಗಳ ಸಂತತಿ ವೃದ್ಧಿಸಿದೆ. ಕೇವಲ ಅಂಕಿಅಂಶವನ್ನು ಪ್ರಕಟಿಸಿ ಹೆಮ್ಮೆ ಪಟ್ಟುಕೊಳ್ಳುವುದಕ್ಕಿಂತ ಅವುಗಳಿಗೆ ಬದಲಾದ ಹವಾಮಾನದಲ್ಲಿ ಅರಣ್ಯದಲ್ಲಿ ಯಥೇಚ್ಛವಾದ ಆಹಾರ ಮತ್ತು ನೀರು ಇದೆಯಾ? ಎಂದು ಅರಣ್ಯಾಧಿಕಾರಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.

ಬಿಳಿಗಿರಿರಂಗನ ಬೆಟ್ಟ, ಮಹಾದೇಶ್ವರಬೆಟ್ಟ ಮತ್ತು ಬಂಡಿಪುರ ಅಭಯಾರಣ್ಯಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಲಂಟಾನ ಗಿಡದಿಂದಾಗಿ ಅರಣ್ಯದಲ್ಲಿ ಇತರೆ ಗಿಡಮರಗಳು ಇರಲಿ, ಹಸಿರು ಹುಲ್ಲು ಕೂಡ ಬೆಳೆಯುತ್ತಿಲ್ಲ. ಪ್ರತಿ ಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯ ಸಂಗತಿಯಾಗಿದೆ.

ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿರುವ ಅರಣ್ಯ ಸಂಶೋಧನಾ ಕೇಂದ್ರದ ಇ.ಎ. ಜಯ್ಸನ್ ಎಂಬುವರು 2018ರಲ್ಲಿ ಮಲ್ಲಪುರಂ ಜಿಲ್ಲೆಯಲ್ಲಿ ನಡೆಸಿದ ಸಂಶೋಧನೆಯ ಫಲವಾಗಿ ವಾರ್ಷಿಕವಾಗಿ ರೈತರು ಪ್ರತಿ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹದಿನೈದು ಸಾವಿರ ಮೌಲ್ಯದ ಫಸಲನ್ನು ವನ್ಯ ಜೀವಿಗಳ ಹಾವಳಿಯಿಂದ ಕಳೆದುಕೊಳ್ಳುತ್ತಿದ್ದಾರೆ ಎಂಬುದು ದೃಢಪಟ್ಟಿದೆ. ಕರ್ನಾಟಕದ ಚಿಕ್ಕಮಗಳೂರು, ಸಕಲೇಶಪುರ ಮತ್ತು ಆಲ್ದೂರು, ಕೊಡಗಿನ ವಿರಾಜಪೇಟೆ ಮತ್ತು ನಾಗರಹೊಳೆಯ ಸುತ್ತಮುತ್ತಲಿನ ಗ್ರಾಮಗಳ ರೈತರು ಕಾಫಿ, ಬಾಳೆ ಹಾಗೂ ವಿವಿಧ ತರಕಾರಿಗಳ ನಷ್ಟವನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ತಂತಿ ಬೇಲಿಗೆ ವಿದ್ಯುತ್ ಹಾಯಿಸುವುದರ ಮೂಲಕ, ಆನೆ, ಚಿರತೆ, ಮಂಗ, ಜಿಂಕೆಗಳ ಸಾವಿಗೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.

ಕಳೆದ ಅಕ್ಟೋಬರ್ 12ರಂದು ಕರ್ನಾಟಕ ಸರ್ಕಾರದ ಅರಣ್ಯ ಸಚಿವರು ‘ಅಭಯಾರಣ್ಯಗಳ ವ್ಯಾಪ್ತಿ ಪ್ರದೇಶದ ಒಂದು ಕಿಲೋಮೀಟರ್ ದೂರದಲ್ಲಿ ರೆಸಾರ್ಟ್, ಫಾರ್ಮ್‌ಹೌಸ್, ಹಾಗೂ ಕ್ಲಬ್‌ಗಳಿಗೆ ಅನುಮತಿ ನೀಡಲಾಗುವುದು ಹಾಗೂ ನಾಗರಹೊಳೆಯ ಆರು ವಲಯಗಳ ವ್ಯಾಪ್ತಿಯಲ್ಲಿ ನೀಡುವ ಕುರಿತು ಪರಿಶೀಲಿಸಲಾಗುವುದು’ ಎಂದು ಹೇಳಿರುವ ಮಾತು ವನ್ಯಜೀವಿಗಳ ಮಾರಣಹೋಮಕ್ಕೆ ಬರೆಯಲಾದ ಮುನ್ನುಡಿ ಎಂಬಂತಿದೆ. ಅರಣ್ಯ ರಕ್ಷಣೆ ಎಂದರೆ ವಿದೇಶಿ ತಳಿಗಳ ಕೃತಕ ಮರಗಳನ್ನು ಬೆಳೆಸಿ ಹಸಿರನ್ನು ಪ್ರತಿಬಿಂಬಿಸುವ ಕ್ರಿಯೆಯಲ್ಲ; ಅರಣ್ಯವೆಂಬುದು ಇರುವೆಯಿಂದ ಹಿಡಿದು, ಅಳಿಲು, ಮಂಗಗಳು, ಸರೀಸೃಪಗಳು, ಪಕ್ಷಿ ಸಂಕುಲ ಸೇರಿದಂತೆ ನೂರಾರು ಜೀವಿಗಳ ಆವಾಸಸ್ಥಾನ. ಅವುಗಳಿಗೆ ಬೇಕಾದ ಹಣ್ಣಿನ ಮರಗಳು, ಆನೆಗಳ ಮುಖ್ಯ ಆಹಾರವಾದ ಬಿದಿರು ಬೆಳೆಸುವುದರ ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹೊಂಡಗಳ ನಿರ್ಮಾಣ ಇವೆಲ್ಲವೂ ತುರ್ತಾಗಿ ಆಗಬೇಕಿದೆ.

2 ವರ್ಷಗಳಲ್ಲಿ 63 ಸಾವಿರ ಪ್ರಾಣಿಗಳ ಸಾವು

ಇಂದು ನಮ್ಮ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಆನೆ, ಹುಲಿ ಮತ್ತು ಚಿರತೆಗಳ ದಾಳಿಯಿಂದ ವರ್ಷವೊಂದಕ್ಕೆ ಕನಿಷ್ಠ ಐನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಪ್ರತಿವರ್ಷ ಅಸ್ವಾಭಾವಿಕವಾಗಿ ಐವತ್ತರಿಂದ ಅರವತ್ತು ಆನೆಗಳು ಅಸುನೀಗಿದರೆ, 2017-18 ಮತ್ತು 2020-21ರ ನಡುವೆ ನಾಲ್ಕು ಸಿಂಹ ಹಾಗೂ ಎಪ್ಪತ್ಮೂರು ಆನೆಗಳು ಸೇರಿ ಒಟ್ಟು 63,345 ವನ್ಯಜೀವಿಗಳ ಸಾವಿನ ಪ್ರಕರಣಗಳು ಸಂಭವಿಸಿವೆ ಎಂದು ‘ಕಂಟ್ರೋಲರ್ ಆಫ್ ಆಡಿಟರ್ ಜನರಲ್’ ಸಂಸ್ಥೆ (ಸಿಎಜಿ) ತನ್ನ ವರದಿಯಲ್ಲಿ ದಾಖಲಿಸಿದೆ.

ಮೈಸೂರು–ವಿರಾಜಪೇಟೆ ರಸ್ತೆಯಲ್ಲಿ ಅತಿವೇಗವಾಗಿ ಸಾಗಿದ ಬಸ್‌ ಗುದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ರಂಗ ಎಂಬ ಆನೆ 2018ರಲ್ಲಿ ಮೃತಪಟ್ಟಿತ್ತು.

ಮೈಸೂರು–ವಿರಾಜಪೇಟೆ ರಸ್ತೆಯಲ್ಲಿ ಅತಿವೇಗವಾಗಿ ಸಾಗಿದ ಬಸ್‌ ಗುದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ರಂಗ ಎಂಬ ಆನೆ 2018ರಲ್ಲಿ ಮೃತಪಟ್ಟಿತ್ತು.

–ಪ್ರಜಾವಾಣಿ ಚಿತ್ರ

2 ವರ್ಷಗಳಲ್ಲಿ 63 ಸಾವಿರ ಪ್ರಾಣಿಗಳ ಸಾವು

ಇಂದು ನಮ್ಮ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಆನೆ ಹುಲಿ ಮತ್ತು ಚಿರತೆಗಳ ದಾಳಿಯಿಂದ ವರ್ಷವೊಂದಕ್ಕೆ ಕನಿಷ್ಠ ಐನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಪ್ರತಿವರ್ಷ ಅಸ್ವಾಭಾವಿಕವಾಗಿ ಐವತ್ತರಿಂದ ಅರವತ್ತು ಆನೆಗಳು ಅಸುನೀಗಿದರೆ 2017-18 ಮತ್ತು 2020-21ರ ನಡುವೆ ನಾಲ್ಕು ಸಿಂಹ ಹಾಗೂ ಎಪ್ಪತ್ಮೂರು ಆನೆಗಳು ಸೇರಿ ಒಟ್ಟು 63345 ವನ್ಯಜೀವಿಗಳ ಸಾವಿನ ಪ್ರಕರಣಗಳು ಸಂಭವಿಸಿವೆ ಎಂದು ‘ಕಂಟ್ರೋಲರ್ ಆಫ್ ಆಡಿಟರ್ ಜನರಲ್’ ಸಂಸ್ಥೆ (ಸಿಎಜಿ) ತನ್ನ ವರದಿಯಲ್ಲಿ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT