ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಿಯ ಯುವಕರ ಬಿ–ಬಾಯಿಂಗ್ ಕನಸಿಗೆ ಒಲಿಂಪಿಕ್ಸ್ ರೆಕ್ಕೆ

Published 2 ಸೆಪ್ಟೆಂಬರ್ 2023, 23:30 IST
Last Updated 2 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಬಿ–ಬಾಯಿಂಗ್ ಸ್ಪರ್ಧೆ ಸೇರ್ಪಡೆಯಾಗಲಿದೆ. ಇದೊಂದು ಬೆಳ್ಳಿಗೆರೆಯನ್ನೇ ನೆಚ್ಚಿಕೊಂಡು ಧಾರಾವಿಯ ಯುವಮನ ಅದಾಗಲೇ ಅರಳತೊಡಗಿದೆ.

ಯುವಕನ ಹೆಸರು ಅಕ್ಕು ಅಲಿಯಾಸ್ ಆಕಾಶ್ ಢಂಗರ್. ಧಾರಾವಿಯಲ್ಲಿ ವಾಸವಿರುವ ಅಕ್ಕು ಕಳೆದೊಂದು ತಿಂಗಳಿನಿಂದ ಜಗತ್ತನ್ನೆ ಗೆದ್ದಷ್ಟು ಖುಷಿಯಲ್ಲಿದ್ದಾನೆ. ಅದಕ್ಕೆ ಕಾರಣ ಅಕ್ಕುವಿಗೆ ತಾನು ಚಿಕ್ಕಂದಿನಲ್ಲಿ ಕಲಿತ ಬ್ರೇಕ್ ಡ್ಯಾನ್ಸ್‌ಗೆ ಅಂತರರಾಷ್ಟ್ರೀಯ ಆಟದ ಮಾನ್ಯತೆ ಸಿಕ್ಕಿರುವುದು. ಇದರಿಂದಾಗಿ ಧಾರಾವಿಯ ಗಣೇಶ ವಿದ್ಯಾಮಂದಿರ ಮತ್ತೆ ಸುದ್ದಿಯಲ್ಲಿದೆ. ಶಾಲೆಯ ಬಣ್ಣ ಮಾಸಿದ ಗೋಡೆಗಳು ಹೊಸ ನಾದ ಹೊಮ್ಮಿಸುತ್ತಿವೆ. ವಾರದ ನಾಲ್ಕು ಸಾಯಂಕಾಲಗಳಲ್ಲಿ ನೂರಾರು ಬಿ-ಬಾಯಿಂಗ್ ಅಂದರೆ ಬ್ರೇಕ್‌ಡ್ಯಾನ್ಸ್ ಕಲಿತಿರುವ ಯುವಕರ ದಂಡೇ ಅಲ್ಲಿ ನೆರೆಯುತ್ತದೆ. ಬ್ಯಾಗಿ ಪ್ಯಾಂಟು, ತಲೆಯಿಂದ ಮೊಳಕಾಲವರೆಗೆ ಇಳಿಬೀಳುವ ಪುಲ್‌ಓವರ್‌ಗಳು, ತಾಳಬದ್ಧ ಕುಣಿತಕ್ಕೆ ಹುಮ್ಮಸ್ಸು ನೀಡುವ ಬಣ್ಣದ ಬೂಟುಗಳು, ಕೈ–ಕೊರಳಿನಲ್ಲಿ ರಾರಾಜಿಸುವ ಮಣಿಸರ, ಮೈಕೆಲ್ ಜಾಕ್ಸನ್‌ ಪದಕಗಳೆಲ್ಲ ಧಾರಾವಿಯ ಸಂಜೆಯ ಬೆಳಕಿನ ರಂಗನ್ನೇ ಬದಲಾಯಿಸಿವೆ. ಅಕ್ಕು ತನ್ನ ಗೆಳೆಯರಾದ ರಂಜಿತ್, ಕೇಶವ್, ನಂದು, ರೇವಂತ್ ಜೊತೆ ಸೇರಿ ಪ್ರಾರಂಭಿಸಿರುವ ‘ಪಾಠಶಾಲಾ’ಗೀಗ ಭರಪೂರ ಅಡ್ಮಿಷನ್. ಸ್ಲಂ ಹುಡುಗರ ಡ್ಯಾನ್ಸ್ ಎಂದೇ ಖ್ಯಾತವಾಗಿದ್ದ ಬಿ-ಬಾಯಿಂಗ್‌ಗೆ 2018ರವರೆಗೆ ಯೂಥ್ ಒಲಿಂಪಿಕ್ಸ್‌ನಲ್ಲಿ ಮಾತ್ರ ಜಾಗವಿತ್ತು. ಈಗ ಬಿ-ಬಾಯಿಂಗ್ 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಯಾಗಿ ಪರಿಗಣಿತವಾಗಲಿದೆ. ಈ ಸುದ್ದಿ ತಿಳಿದ ದಿನ ಜನತಾಬಜಾರಿಗೆ ಓಡಿದ ಅಕ್ಕು ನೆಲ ಒರೆಸುತ್ತಿದ್ದ ತಾಯಿಯ ಕೈ ತಡೆದು, ‘ಆಯೀ ಅಮ್ಹೀ ಜೀಂಕ್ಲೋ’(ನಾವು ಗೆದ್ದುಬಿಟ್ವಿ) ಎಂದು ಕೂಗಿ ಹೇಳಿದ್ದ.

ಒಲಿಂಪಿಕ್ಸ್ ಸಮಿತಿಯು ಇತ್ತೀಚೆಗಷ್ಟೇ ಸಭೆ ಸೇರಿ ಬ್ರೇಕ್‌ಡ್ಯಾನ್ಸ್ ನೃತ್ಯಮಾದರಿಯನ್ನು ಸ್ಪರ್ಧೆಯೆಂದು ಪರಿಗಣಿಸಿ ಗೆದ್ದವರಿಗೆ ಮೆಡಲ್ ನೀಡುವುದೆಂದು ತೀರ್ಮಾನಿಸಿದೆ. ಇದೇ ಪ್ರಪ್ರಥಮ ಬಾರಿಗೆ ಬೀದಿ ಹುಡುಗರ ನೃತ್ಯವೊಂದು ಅಂತರರಾಷ್ಟ್ರೀಯ ಸ್ಪರ್ಧೆಯ ಮಾನ್ಯತೆ ಪಡೆದಿದೆ. ಚಿಕ್ಕಂದಿನಿಂದಲೂ ಹಿಪ್ ಹಾಪ್ ನೃತ್ಯ ಮಾಡುತ್ತ ಬಂದಿರುವ ಜೋಗೇಶ್ವರಿಯ ಬ್ರೇಕ್‌ಡ್ಯಾನ್ಸರ್ ಆರಿಫ್ ಚೌಧರಿ ಪ್ಯಾರಿಸ್‌ಗೆ ಹೋಗಲಿದ್ದಾನೆ ಎಂಬ ಸುದ್ದಿ ಅಕ್ಕುವಿನ ಗುಂಪಿಗೆ ಭಾರಿ ಹುರುಪು ಮೂಡಿಸಿದೆ. ವಿನಾಯಕ ಚತುರ್ಥಿಯ ದಿನಗಳಲ್ಲಿ ‘ಗಣಪತಿ ಬಪ್ಪಾ ಮೋರಿಯ’ ಎಂಬ ಘೋಷಣೆ ಗಣೇಶ ವಿದ್ಯಾಮಂದಿರದ ಎಲ್ಲ ಅಂಗಳಗಳಲ್ಲೂ ಮೊರೆಯುತ್ತಿತ್ತು. ಈಗ ವಾರಕ್ಕೆ ನಾಲ್ಕು ಬಾರಿ ಹಿಪ್-ಹಾಪ್ ಸಂಗೀತ ಮತ್ತು ನೃತ್ಯದ ಘಮಲು ಏರುತ್ತದೆ.

‘ಸ್ಲಂ ಡಾಗ್ ಅಲ್ಲ ಸ್ಲಂ ಗಾಡ್’

ಇದೆಲ್ಲ ಶುರುವಾದದ್ದು 2008ರಲ್ಲಿ. ಆಗ ತಾನೆ ಡ್ಯಾನಿ ಬಾಯ್ಲ್‌ನ ‘ಸ್ಲಂಡಾಗ್ ಮಿಲಿಯನೇರ್’ ಸಿನಿಮಾ ವಿಶ್ವದಾದ್ಯಂತ ಸದ್ದುಮಾಡಿತ್ತು. ಮುಂಬೈ ಎಂದರೆ ಕೊಳೆಗೇರಿ, ಹೊಲಸಿನ ಗುಂಡಿ ಎಂಬ ಭಾವ ಬರುವಂತೆ ಇಡೀ ಸಿನಿಮಾ ಚಿತ್ರಿತವಾಗಿತ್ತು. ಅಲ್ಲಿನ ಹುಡುಗನೊಬ್ಬ ಕೋಟಿ ಗೆದ್ದರೂ ಅದು ತ್ಯಾಜ್ಯದಲ್ಲಿ ಅರಳಿದ ಹೂವು ಎಂದೇ ಬಿಂಬಿಸಿದ್ದು ಮುಂಬೈನ ಜೋಪಡಪಟ್ಟಿಯಲ್ಲಿ ವಾಸಿಸುವ ಅನೇಕರಿಗೆ ಸಿಟ್ಟು ತರಿಸಿತ್ತು. ಯುವಕರಂತೂ ‘ಸಿನಿಮಾ ನಮ್ಮನ್ನು ಅವಮಾನಿಸಿದೆ’ ಎಂದು ಬಹಿರಂಗವಾಗಿಯೇ ರೇಡಿಯೊ ಚಾನೆಲ್‌ಗಳಲ್ಲಿ ಕಿಡಿ ಕಾರಿದ್ದರು. ‘‘ನಾವೇಕೆ ‘ಸ್ಲಂಡಾಗ್’ಗಳಾಗುತ್ತೇವೆ? ನಾವೇನೆಂದು ಜಗತ್ತಿಗೆ ತೋರಿಸುತ್ತೇವೆ’’ ಎಂದು ತಮ್ಮ ನೃತ್ಯ ತಂಡಕ್ಕೆ ‘ಸ್ಲಂ ಗಾಡ್’ ಎಂದು ನಾಮಕರಣ ಮಾಡಿಕೊಂಡ ಅಕ್ಕುವಿನ ದೋಸ್ತರು ಹಿಪ್ ಹಾಪ್‌ನಿಂದ ಆಗಸವನ್ನೇ ಚಿಂದಿ ಮಾಡುವುದಾಗಿ ಎಂದು ಪಣತೊಟ್ಟರು. ಲೋಕಲ್ ಟ್ರೇನು, ಸಂತೆ ಬೀದಿ, ಟ್ಯಾಕ್ಸಿ ಸ್ಟ್ಯಾಂಡ್, ದೇವಸ್ಥಾನ ಎಲ್ಲೆಲ್ಲಿಯೂ ನಿಕೃಷ್ಟ ನೋಟ ಎದುರಿಸಿ ಸಾಕಾಗಿಹೋಗಿದ್ದ ಆಕಾಶ್ ಡಂಗರ್‌ಗೆ ಸಂಜೀವಿನಿಯಂತೆ ಸಿಕ್ಕವನು ಅಮೆರಿಕದಲ್ಲಿ ಓದಿ ಮುಂಬೈನ ಕೊಳೆಗೇರಿಗಳ ಫೋಟೊ ತೆಗೆಯಲು ವಾರ್ಷಿಕ ಪ್ರವಾಸಕ್ಕಾಗಿ ಬಂದಿದ್ದ ‘ನೇತ್ರಪಾಲ್ ಹೀರಾ ಸಿಂಗ್’. ಅಕ್ಕು ಹೋಗುತ್ತಿದ್ದ ಕಂಪ್ಯೂಟರ್ ಕ್ಲಾಸಿಗೆ ಅಚಾನಕ್ಕಾಗಿ ಕಾಲಿಟ್ಟ ಹೀರಾ, ಧಾರಾವಿಯ ಗಣೇಶ್ ವಿದ್ಯಾ ಮಂದಿರದ ಗೆಳೆಯರ ಪಾಲಿಗೆ ಬೆಲೆ ಕಟ್ಟಲಾಗದ ‘ಹೀರಾ’ನೇ ಆಗಿ ಹೋದ. ಗಣೇಶ ಪೆಂಡಾಲಿನಲ್ಲಿ ಮನಬಂದಂತೆ ಕುಣಿಯುತ್ತಿದ್ದ ಅಕ್ಕುವಿನ ತಂಡಕ್ಕೆ ಅಮೆರಿಕ–ಆಫ್ರಿಕ ಮೂಲದ ಹಿಪ್-ಹಾಪ್ ಸಂಸ್ಕೃತಿಯ ಬಿ-ಬಾಯಿಂಗ್ ನೃತ್ಯ ಪರಿಚಯ ಮಾಡಿಕೊಟ್ಟ.

ಮೊರ್ಛಾಂಗ್ ಮತ್ತು ಡಿಡ್‌ಗೆರಿಡೂ

ಅಕ್ಕುವಿಗೀಗ ಮೂವತ್ತೊಂದರ ಹರೆಯ. ಅರ್ಧದಲ್ಲೇ ಶಾಲೆಯಿಂದ ಹೊರಬಿದ್ದು, ಅಲ್ಪಸ್ವಲ್ಪ ಕಂಪ್ಯೂಟರ್ ಕಲಿತು, ಹಿಪ್-ಹಾಪ್ ತೆಕ್ಕೆಯಲ್ಲಿ ಮಿಂದೆದ್ದು ಈಗ ಮುಂಬೈನ ಎಲ್ಲ ಜಾಗಗಳಿಗೂ ಟ್ಯಾಕ್ಸಿ ಓಡಿಸುತ್ತ ಉಪನಗರಗಳಲ್ಲೆಲ್ಲಾ ಓಡಾಡಿ ನೂರಾರು ಮಕ್ಕಳನ್ನು ಹಿಪ್-ಹಾಪ್ ನೃತ್ಯಕ್ಕೆ ಸಜ್ಜುಗೊಳಿಸಿದ್ದಾನೆ. ಹದಿನೈದು ವರ್ಷದ ಹಿಂದಿನ ‘ಸ್ಲಂಗಾಡ್’ ತಂಡದವರ ಜೊತೆ ಸೇರಿ ಆರು ತಿಂಗಳು ತರಗತಿ ನಡೆಸುತ್ತಿದ್ದಾನೆ. ಹಿಪ್-ಹಾಪ್‌ನ ನಾಲ್ಕು ವಿಭಾಗಗಳಾದ ರ‍್ಯಾಪಿಂಗ್, ಬೀಟ್ ಬಾಕ್ಸಿಂಗ್, ಬಿ-ಬಾಯಿಂಗ್ ಮತ್ತು ಗ್ರಾಫಿಟ್ಟಿ ಬಗ್ಗೆ ಮಂಗಳವಾರದಿಂದ ಶನಿವಾರದವರೆಗೆ ಸಂಜೆ 6ರಿಂದ ರಾತ್ರಿ 9ರ ವರೆಗೆ ತಪ್ಪದೇ ತರಗತಿಗಳು ನಡೆಯುತ್ತವೆ. ನೃತ್ಯಪ್ರಕಾರ ಹೊರದೇಶಗಳ ನೆಲದ್ದೇ ಆಗಿದ್ದರೂ ರಾಜಸ್ಥಾನದ ಮೊರ್ಛಾಂಗ್ ಮತ್ತು ಆಸ್ಟ್ರೇಲಿಯಾದ ಡಿಡ್‌ಗೆರಿಡೂ ವಾದ್ಯಗಳ ಮೂಲಕ ಮರಾಠಿ, ತಮಿಳು ಮತ್ತು ಹಿಂದಿ ಪ್ರಾಸಗೀತೆಗಳಿಗೆ ಜೀವ ತುಂಬುವ ರ‍್ಯಾಪರ್‌ಗಳು ಬರೀ ಮನರಂಜನೆಯಷ್ಟೇ ಅಲ್ಲ, ಅದನ್ನೇ ವೃತ್ತಿಯನ್ನಾಗಿಸಿಕೊಳ್ಳಬಹುದು ಎಂದು ಮುಂದುವರೆಯುತ್ತಿದ್ದಾರೆ. ‘ಧಾರಾವಿಯ ಮಕ್ಕಳು ಪುಂಡತನ, ಕಳ್ಳತನ ಮತ್ತು ಮಾದಕವಸ್ತು ಸೇವನೆಯ ಚಟಗಳಿಂದ ದೂರವಿರುವಂತೆ ಮಾಡಲು ನಮ್ಮ ಪಾಠಶಾಲಾ ಸದಾ ಸಿದ್ಧ’ ಎನ್ನುವ ಅಕ್ಕುವಿನ ಗೆಳೆಯರು ಈಗ ತಮ್ಮ ಕಣ್ಣ ಮುಂದಿರುವ ಗುರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಷ್ಟೆ ಎನ್ನುವಾಗ ಪದಕ ಗೆದ್ದ ಖುಷಿಯೇ ಕಾಣಿಸುತ್ತದೆ.

ಗುರುತ್ವಕ್ಕೆ ಸಡ್ಡು ಹೊಡೆಯುವ ಡ್ಯಾನ್ಸ್

ಎದೆ, ತಲೆ, ಹೆಗಲು, ಹೊಟ್ಟೆ, ಪೃಷ್ಠ, ಕಾಲು, ಕೈ ಹೀಗೆ ದೇಹದ ಎಲ್ಲಾ ಭಾಗಗಳನ್ನು ನಿರಂತರವಾಗಿ ಬಳುಕಿಸುತ್ತ, ತಿರುಗಿಸುತ್ತಾ, ಮಗುಚಿಹಾಕುತ್ತ ಮಾಡುವ ವೇಗದ ನೃತ್ಯವನ್ನೇ ಹಿಪ್-ಹಾಪ್ ಅಥವಾ ಬಿ-ಬಾಯಿಂಗ್ ಎನ್ನುತ್ತಾರೆ. ಕುಣಿಯುವವರನ್ನು ನೋಡಿದಾಗ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿಗೆ ಅವರ ಮೇಲೆ ಯಾವ ಹಿಡಿತವೂ ಇಲ್ಲ ಎನ್ನಿಸುತ್ತದೆ. ಕೈ-ತಲೆ-ಹೆಗಲುಗಳೇ ಕಾಲುಗಳಾಗಿ ಕುಣಿಯುತ್ತವೆ. ಇಡೀ ದೇಹ ಸ್ಪ್ರಿಂಗಿನಂತೆ ಬಾಗಿ ಬುಗುರಿಯಂತೆ ತಿರುಗುತ್ತದೆ. ಉನ್ಮಾದವೆಬ್ಬಿಸುವ ಬೀಟ್‌ಬಾಕ್ಸ್ ಸಂಗೀತ ನೋಡುಗರನ್ನು ಹೊಸ ಸೆಳೆತಕ್ಕೆ ಸಿಕ್ಕಿಸುತ್ತದೆ. ತಾಳಬದ್ಧವಾಗಿ ಕುಣಿಯುವ 5ರಿಂದ 15 ವಯೋಮಾನದ ಹುಡುಗರು ಕಲಿಕೆಯ ಭಾಗವಾಗಿ ಭಿತ್ತಿಚಿತ್ರ ಬರೆದು ಶಾಲೆಯ ಮಾಸಲು ಗೋಡೆಗಳನ್ನು ನೃತ್ಯ, ಸಂಗೀತ, ತಾಳಗಳಿಗೆ ಸಂಬಂಧಿಸಿದ ಅಮೂರ್ತ ಚಿತ್ರಗಳ ಕ್ಯಾನವಾಸುಗಳನ್ನಾಗಿಸುತ್ತಾರೆ.

ಜಗವೇ ರಂಗಸ್ಥಳ

ಶಾಲೆ ಕೊಠಡಿಗಳಲ್ಲಿ ಕಲಿತ ನೃತ್ಯವೀಗ ಮುಂಬೈನ ಜನಸಂದಣಿಯ ಸಾವಂತ್ ಪಾರ್ಕ್, ಶಾಹುನಗರದ ಇಮಾಮ್ ಸರ್ಕಲ್, ಬೀದಿಬದಿಯ ಖಾಲಿ ಜಾಗ, ಸಿಯನ್ ಫೋರ್ಟ್, ಗಣೇಶ ಪೆಂಡಾಲ್, ತೆರೆಯದ ಅಂಗಡಿಗಳ ಮುಂಭಾಗದ ಜಾಗಗಳಲ್ಲೆಲ್ಲ ನೋಡಲು ಸಿಗುತ್ತಿದೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಕುಣಿಯುವ ಹಿಪ್-ಹಾಪ್ ನೃತ್ಯಪಟುಗಳು ಪುಕ್ಕಟೆ ಮನರಂಜನೆಯ ಮುಖಾಂತರ ಅನ್ಯ ನೆಲದ ನೃತ್ಯಕ್ಕೆ ಇಲ್ಲಿ ನೆಲೆ ಒದಗಿಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಮೊಬೈಲ್ ಸ್ಟ್ಯಾಂಡ್‌ಗೆ ತೂಗುಬಿಟ್ಟ ಫ್ಲೆಕ್ಸ್‌ನಲ್ಲಿ ‘Will do this in Olympics’ ಎಂಬ ಬರಹ ನೋಡುಗರಲ್ಲಿ ಅಶ್ಚರ್ಯದ ಜೊತೆಗೆ ಹುಡುಗರ ನೃತ್ಯದ ಬಗ್ಗೆ ಅಭಿಮಾನವನ್ನೂ ಉಕ್ಕಿಸುತ್ತಿದೆ. ನೃತ್ಯದ ವಿಡಿಯೊ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಹೋಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ.

ಒಲಿಂಪಿಕ್ಸ್ ಹಾದಿಯ ಹೂವು

ಅಕ್ಕುವಿನಂತೆಯೇ ಮುಂಬೈನ ಜೋಗೇಶ್ವರಿಯಲ್ಲಿ ಹಿಪ್-ಹಾಪ್‌ಗೆ ಸಮರ್ಪಿಸಿಕೊಂಡ ಆರಿಫ್ ಚೌಧರಿ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ‘ಬ್ರೇಕ್ ಡ್ಯಾನ್ಸ್’ ಅನ್ನು ಸ್ಪರ್ಧೆಯೆಂದು ಪರಿಗಣಿಸಿರುವುದು ತನ್ನ ನೃತ್ಯ ಪ್ರಕಾರಕ್ಕೆ ಸಿಕ್ಕ ಅತಿ ದೊಡ್ಡ ಗೌರವವೇ ಸರಿ. ಅಲ್ಲಿಗೆ ತೆರಳಿ ಪ್ರತಿಭೆ ಪ್ರದರ್ಶಿಸುವುದಾಗಿ ಹೇಳುತ್ತಾನೆ. ಗುರುವಿಲ್ಲದೇ ಕಲಿತ ವಿದ್ಯೆಯನ್ನು ಜಗತ್ತಿನೆದುರು ಪ್ರದರ್ಶಿಸಬೇಕೆನ್ನುವ ಆರಿಫ್, ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ. ನಂತರ ಆಸ್ಟ್ರಿಯಾ, ನೆದರ್‌ಲ್ಯಾಂಡ್ಸ್, ಸ್ಲೊವಾಕಿಯ, ಚೀನಾ, ಜಪಾನ್, ತೈವಾನ್‌ಗಳಲ್ಲೂ ಪ್ರದರ್ಶನ ನೀಡಿರುವ ಆರಿಫ್, ಬ್ರೇಕ್ ಡ್ಯಾನ್ಸ್ ಎನ್ನುವುದು ಆಟ ಮತ್ತು ಕಲೆಯ ಮಿಶ್ರಣ ಎನ್ನುತ್ತಾನೆ.

1970ರ ದಶಕದಲ್ಲಿ ನ್ಯೂಯಾರ್ಕ್‌ನಲ್ಲಿ ಶುರುವಾದ ಬ್ರೇಕ್‌ಡ್ಯಾನ್ಸ್ ಅಥವಾ ಬಿ-ಬಾಯಿಂಗ್ ಜಿಮ್ನಾಸ್ಟಿಕ್ಸ್, ಜಾಝ್‌ನಿಂದ ಸ್ಫೂರ್ತಿ ಪಡೆದಿದೆ. ಹದಿನಾರು ಗಂಡು ಮತ್ತು ಹದಿನಾರು ಹೆಣ್ಣು ಒಟ್ಟು 32 ಜನರಿಗೆ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ. ಹುಡುಗರನ್ನು ಬಿ-ಬಾಯ್ಸ್‌ ಎನ್ನುತ್ತಾರೆ. ಹುಡುಗಿಯರಿಗೆ ಬಿ-ಗರ್ಲ್ಸ್ ಎಂಬ ಹೆಸರಿದೆ. ಒಬ್ಬರಿಗೆ ಎದುರಾಗಿ ಇನ್ನೊಬ್ಬರು ನೃತ್ಯ ಮಾಡಬೇಕು. ಇದನ್ನು ‘ಬ್ಯಾಟಲ್ಸ್’ ಎನ್ನುತ್ತಾರೆ. 2004ರಿಂದ ನೃತ್ಯ ಸ್ಪರ್ಧೆ ನಡೆಸುತ್ತಿರುವ ಆಲ್ ಇಂಡಿಯ ಡ್ಯಾನ್ಸ್ ಸ್ಪೋರ್ಟ್ಸ್ ಫೆಡರೇಶನ್ ಇನ್ನು ಮುಂದೆ ಒಲಿಂಪಿಕ್ಸ್‌ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ನೃತ್ಯ ಸ್ಪರ್ಧೆ ನಡೆಸಬೇಕು ಎನ್ನುವುದು ಆರಿಫ್ ಆಗ್ರಹ. ಐಪಿಲ್, ಪ್ರೊ ಕಬಡ್ಡಿಯಂತೆ ಬಿ-ಬಾಯಿಂಗ್‌ಗಾಗಿ ‘ಬ್ರೇಕ್ ಡ್ಯಾನ್ಸ್ ಸೂಪರ್ ಲೀಗ್’ನಡೆಸಲು ಕಾರ್ಪೊರೇಟ್ ಕಂಪನಿಗಳು ಆಸಕ್ತಿ ತೋರಿಸಬೇಕು. ಹಾಗಾದಲ್ಲಿ ಬೆಂಗಳೂರು, ದೆಹಲಿ, ಚೆನ್ನೈ, ಚಂಡೀಗಢ, ಕೇರಳದಲ್ಲೂ ಶುರುವಾಗಿರುವ ಬಿ-ಬಾಯಿಂಗ್ ಇನ್ನು ಕೆಲವೇ ದಿನಗಳಲ್ಲಿ ಉಳಿದ ರಾಜ್ಯಗಳ ಪ್ರಮುಖ ನಗರಗಳ ಯುವಕರೂ ತಲೆಗಳನ್ನು ಗಿರಗಿರ ತಿರುಗಿಸಲು ಪ್ರೇರಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT