ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರಿನ ನಳ ಮಹಾರಾಜರು

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ದಾವಣಗೆರೆ ಜಿಲ್ಲೆಯ ಕಿತ್ತೂರು ಗ್ರಾಮದಲ್ಲಿ ಮುಕ್ಕಾಲು ಭಾಗದಷ್ಟು ಜನರು ಬಾಣಸಿಗರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕಾಮತ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯಿಂದಾಗಿ ಮೂರು ದಶಕಗಳಲ್ಲಿ ಇಲ್ಲಿ ಅಡುಗೆ ಕೆಲಸ ಈ ಮಟ್ಟಿಗೆ ವ್ಯಾಪಕವಾಗಿದೆ.

***

ದಾವಣಗೆರೆ ತಾಲ್ಲೂಕಿನ ಕಿತ್ತೂರು ಅಂದಾಜು 2,500 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ.‌ ‘ಬರಪೀಡಿತ’ ಎಂಬ ಹಣೆಪಟ್ಟಿ ಅಂಟಿಸಿಕೊಂಡೇ ಇರುವ ಜಗಳೂರು ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಜಿಲ್ಲೆಯ ಇತರೆಡೆ ಇರುವಂತೆ ನೀರಾವರಿ ಸೌಲಭ್ಯವಿಲ್ಲ. ಅಡಿಕೆ, ಭತ್ತದ ಬೆಳೆಯ ನೆರವಿಲ್ಲ. 10 ವರ್ಷಗಳಲ್ಲಿ ಸರಾಸರಿ ನಾಲ್ಕು ವರ್ಷ ಇಲ್ಲಿ ಬರ. ಮಳೆ ಸುರಿದರೆ ಮೆಕ್ಕೆಜೋಳ, ರಾಗಿ, ಜೋಳ ಬೆಳೆಯುವ ಗ್ರಾಮದ ಕೆಲವೇ ಕೆಲವು ಹಿಡುವಳಿದಾರರು, ಊರಿನ ನೂರಾರು ದುಡಿಯುವ ಕೈಗಳಲ್ಲಿ ಯಾವ ಕೈಗೆ ಕೆಲಸ ಕೊಡುವುದು? ಎಂದು ಆಲೋಚಿಸಿದ್ದುಂಟು.

ದಶಕಗಳ ಹಿಂದೆ ಈ ಊರು ನಿರುದ್ಯೋಗದ ಸಮಸ್ಯೆಯಿಂದ ಬಳಲಿದ್ದಕ್ಕೆ ಇದು ನಿದರ್ಶನ.

ಇಂತಿಪ್ಪ ಈ ಊರಿನ ನಿರುದ್ಯೋಗದ ಸಮಸ್ಯೆ ಬಗೆಹರಿದಿದ್ದು ದಾವಣಗೆರೆಯ ಕಾಮತ್ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಮುದೆಪ್ಳರ ನಾಗರಾಜ ಅವರಿಂದ.

ಹತ್ತಾರು ವರ್ಷ ಕಾಮತ್ ಹೋಟೆಲ್‌ನಲ್ಲಿ ಎಲ್ಲ ಬಗೆಯ ಕೆಲಸಗಳನ್ನೂ ಮಾಡಿ ಪಳಗಿದ್ದ ನಾಗರಾಜ, ಊರಿನ ಕೆಲವರಿಗೆ ತಾವು ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿಯೂ, ಬೇರೆಡೆಯೂ ಕೆಲಸ ಕೊಡಿಸಿದ್ದರು. ನಂತರದ ದಿನಗಳಲ್ಲಿ ಸ್ವಂತ ಹೋಟೆಲ್ ತೆರೆದಿದ್ದರು. ಬರಬರುತ್ತಾ ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುತ್ತಲೇ ಊರಿನ ಹತ್ತಾರು ಜನರೊಂದಿಗೆ ಊರೂರು ಸುತ್ತಲಾರಂಭಿಸಿದ ಅವರು, ಆಸಕ್ತರಿಗೆ ಅಡುಗೆ ಕೆಲಸದ ರುಚಿ ಹತ್ತಿಸಿದರು. ಜೀವನದ ಸಂಧ್ಯಾಕಾಲದಲ್ಲಿರುವ ಇವರನ್ನು ಊರವರು ಇಂದಿಗೂ ಗುರುತಿಸುವುದು, ಕರೆಯುವುದು ‘ಕಾಮತ್‌’ ನಾಗರಾಜ ಎಂಬ ಹೆಸರಿನಲ್ಲೇ.

ಭಾರಿ ಬಂಡವಾಳ ಬಯಸದ ಈ ಕೆಲಸ ಈ ಊರಿನ ಅದೆಷ್ಟೋ ಯುವಕರಿಗೆ ‘ಬಯಸದೇ ಬಂದ ಭಾಗ್ಯ’ವಾಗಿ ಕಂಡಿತು. ನಿಶ್ಚಿತಾರ್ಥ, ಮದುವೆ, ಮುಂಜಿ, ಸೀಮಂತ, ನಾಮಕರಣ, ಜನ್ಮದಿನ,‌ ರಾಜಕೀಯ ಸಮಾವೇಶಗಳು, ಜಾತ್ರೆ, ಉತ್ಸವ, ಶ್ರಾದ್ಧ... ಹೀಗೆ ಏನೇ ಕಾರ್ಯಕ್ರಮಗಳಿರಲಿ, ಅಲ್ಲೆಲ್ಲ ಇಷ್ಟದ ಅಡುಗೆ ಮಾಡಿ ಬಡಿಸುವ ಕಾಯಕಕ್ಕೆ ಅಂಟಿಕೊಂಡರು.

ಒಬ್ಬರಿಂದ ಇನ್ನೊಬ್ಬರಿಗೆ, ಇನ್ನೊಬ್ಬರಿಂದ ಮತ್ತೊಬ್ಬರಿಗೆ, ಮತ್ತೊಬ್ಬರಿಂದ ಮಗದೊಬ್ಬರಿಗೆ ಈ ಅಡುಗೆ ಕೆಲಸದ ಹುಚ್ಚು ಹಬ್ಬುತ್ತಾಹೋಯಿತು. ಅದರ ಫಲವೇ ಈಗ ಊರಲ್ಲಿ 500ಕ್ಕೂ ಹೆಚ್ಚು ಬಾಣಸಿಗರಿದ್ದಾರೆ. ತರಕಾರಿ ಹೆಚ್ಚುವುದರಿಂದ ಹಿಡಿದು, ರೊಟ್ಟಿ, ಅನ್ನ, ಭಾತ್, ಹುಗ್ಗಿ, ಹೋಳಿಗೆ, ಚಪಾತಿ, ಪಲ್ಯ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಸಿದ್ಧಪಡಿಸುವುದೂ ಇವರಿಗೆ ಗೊತ್ತು. ಮಾಡಿದ ಖಾದ್ಯಗಳನ್ನೆಲ್ಲ ಅತಿಥಿಗಳ ತಟ್ಟೆಗೆ ಬಡಿಸುವವರೂ ಇವರೇ. ಅಗತ್ಯ ಬಿದ್ದರೆ ಪಾತ್ರೆ-ಪಡಗ ತೊಳೆಯುವ ಕೆಲಸಕ್ಕೂ ಬೆನ್ನುಮಾಡುವುದಿಲ್ಲ.

‘ಹಸಿದು ಬಂದವರಿಗೆ ಊಟಕ್ಕೆ ನೀಡುವುದು ಪುಣ್ಯದ ಕೆಲಸ. ಅದರಲ್ಲೂ ಅಡುಗೆ ಮಾಡಿ ಬಡಿಸುವ ಕೆಲಸವಂತೂ ಮತ್ತಷ್ಟು ಖುಷಿ ಕೊಡುವಂಥದ್ದು’ ಎಂದೇ ನಂಬಿರುವ ಕಿತ್ತೂರಿನ ಈ ಉತ್ಸಾಹಿಗಳು ಅಡುಗೆ ಕಾಂಟ್ರಾಕ್ಟ್ ಕೆಲಸದಲ್ಲಿ ತೊಡಗಿ ಲಾಭ ಕಂಡುಕೊಂಡಿದ್ದಾರೆ. ಒಬ್ಬೊಬ್ಬರೂ ಹತ್ತಾರು ಜನರಿಗೆ ಉದ್ಯೋಗ ಕೊಡಿಸಿ ಇತರರಿಗೂ ಮಾದರಿಯಾಗಿದ್ದಾರೆ.

ಇವರು ಅಡುಗೆ ಕೆಲಸಕ್ಕೆ ಹೋದರೆ ತರಕಾರಿ ಹೆಚ್ಚುವವರು, ರೊಟ್ಟಿ ಬಡಿಯುವವರು, ಚಪಾತಿ ಉದ್ದುವವರು, ಅನ್ನ ಬಸಿಯುವವರು, ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ, ಸಾಂಬಾರು, ಚಟ್ನಿ, ಮಂಡಕ್ಕಿ, ಮೆಣಸಿನಕಾಯಿ ತಯಾರಿಸುವವರು, ಬಡಿಸುವವರು, ಪಾತ್ರೆ ತೊಳೆಯುವವರು, ಶಾಮಿಯಾನ ಸಿದ್ಧಪಡಿಸುವವರು, ಕುರ್ಚಿ–ಟೇಬಲ್ ಹಾಕುವವರು, ಓಲಗದವರು, ನೀರು ಸರಬರಾಜು ಮಾಡುವವರು, ಹೂವು, ಹೂವಿನ ಮಾಲೆ, ತಳಿರು-ತೋರಣ ಪೂರೈಸುವವರು, ವೇದಿಕೆ ಅಲಂಕರಿಸುವವರು.... ಹೀಗೆ ಅನೇಕರಿಗೆ ಉದ್ಯೋಗ ದೊರೆಯುತ್ತದೆ. ಅದೆಲ್ಲ ಇವರ ಪರಿಚಯಸ್ಥರಿಗೇ ಸಿಗುವಂತೆ ಆಗಿರುವುದೂ ವಿಶೇಷ. ತಾವು ಮಾತ್ರ ಸ್ವಯಂ ಉದ್ಯೋಗ ಕಂಡುಕೊಂಡಿದ್ದಲ್ಲದೆ, ತಮ್ಮವರಿಗೂ ಕೆಲಸ ಕೊಡಿಸಿರುವುದೂ ಇವರ ಹೆಚ್ಚುಗಾರಿಕೆ.

‘ಕಾಮತ್’ ನಾಗರಾಜ ಅವರಿಂದ ಆರಂಭವಾದ ಈ ಕೆಲಸದಲ್ಲಿ ಈಗ ಊರಿನ ಶೇ 75ರಷ್ಟು ಜನ ತೊಡಗಿಕೊಂಡಿದ್ದಾರೆ‌. ಕರ್ನಾಟಕದ ಮೂಲೆಮೂಲೆಗೆ ಹೋಗಿ ಅಡುಗೆ ಮಾಡುತ್ತಾರೆ. ಅಷ್ಟೇ ಅಲ್ಲ ದೂರದ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದಲ್ಲಿ ನಡೆಯುವ ಕೆಲವು ವಿಶೇಷ ಸಮಾರಂಭಗಳಲ್ಲೂ ಇವರ ಅಡುಗೆಯ ರುಚಿ ಉಂಡವರಿದ್ದಾರೆ. ಅಡುಗೆಯ ಕೆಲಸ ಹೀಗೆ ವ್ಯಾಪಿಸಿರುವುದರಿಂದಲೇ ಈ ಊರಿನ ಹೆಣ್ಣುಮಕ್ಕಳಿಗೂ ಕೈತುಂಬ ಕೆಲಸ ದೊರೆಯುತ್ತಿದೆ. ಮನೆ ಖರ್ಚು, ಮಕ್ಕಳ ಓದು–ಬರಹಕ್ಕೂ ಇದು ಅನುಕೂಲ ಕಲ್ಪಿಸಿದೆ.

ಊರಿನ ಬಹುತೇಕರು ಈ ಕೆಲಸ‌ದಿಂದ ಬದುಕು ಕಟ್ಟಿಕೊಂಡಿದ್ದರೆ, ಇತರ ಅನೇಕರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೂ ದಾರಿ ತೋರಿದ್ದಾರೆ. ಮದುವೆ, ಶುಭ ಸಮಾರಂಭದ ಸೀಸನ್‌ಗಳಲ್ಲಿ ಊರೂರಿಗೆ ತೆರಳಿ ಅಡುಗೆ ಕಾಯಕದಲ್ಲಿ ತೊಡಗುವ ಈ ಊರಿನ ಜನ ಒಂದರ್ಥದಲ್ಲಿ ಅಲೆಮಾರಿಗಳು. ಕೆಲವರು ದಕ್ಷಿಣ ಭಾರತ, ಉತ್ತರ ಭಾರತದ ಪ್ಯಾಕೇಜ್‌ ಪ್ರವಾಸಕ್ಕೆ ಬಸ್, ರೈಲುಗಳಲ್ಲಿ ತೆರಳುವ ಪ್ರವಾಸಿಗರ ಹೊಟ್ಟೆ-ನೆತ್ತಿಯ ಹೊಣೆಗಾರಿಕೆ ವಹಿಸಿಕೊಳ್ಳುವ ಸಂಚಾರಿ ಅಡುಗೆಯವರಾಗುತ್ತಾರೆ. ಈ ಊರಲ್ಲಿ ಯಾರನ್ನೇ ಮಾತಾಡಿಸಿದರೂ ಅವರಲ್ಲೊಬ್ಬ ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸುವ ನಳ ಮಹಾರಾಜನೋ, ಭೀಮಸೇನನೋ ಇರುವುದು ಕಂಡುಬರುತ್ತದೆ.

ಕಿತ್ತೂರಿನ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷ ಎಲ್‌.ಕರಿಯಪ್ಪ, ಎರಡು ತಿಂಗಳ ಹಿಂದೆ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಕೆ.ಜಿ. ನಾಗರಾಜ ಇಬ್ಬರೂ ಅಡುಗೆ ಕೆಲಸದ ಸಾರಥ್ಯ ವಹಿಸುವವರೇ. ಇವರೊಂದಿಗೆ ಪಂಚಾಯಿತಿಯ ಅನೇಕ ಸದಸ್ಯರೂ ಅಡುಗೆ ಕಂಟ‌್ಟಾಕ್ಟರ್‌ಗಳೇ.

‘‘ನಮ್ಮೂರಲ್ಲಿ ಬಹುತೇಕರು ಚಿಕ್ಕ ಹಿಡುವಳಿದಾರರು. ನೀರಾವರಿ ಸೌಲಭ್ಯವೂ ಇಲ್ಲ. ಒಣ ಬೇಸಾಯ ಪದ್ಧತಿಯಲ್ಲಿ ಬೆಳೆಯುವವರು ಕೃಷಿಯನ್ನೇ ನೆಚ್ಚಿಕೊಂಡು ಇರಲು ಆಗದು. ಈಗ್ಗೆ 25–30 ವರ್ಷಗಳಿಂದ ಇಲ್ಲಿನವರೆಲ್ಲ ಅಡುಗೆ ಕೆಲಸದತ್ತ ವಾಲಿದ್ದರಿಂದ ನಮ್ಮೂರು ‘ಅಡುಗೆ ಕಂಟ್ರಾಕ್ಟರ್‌ಗಳ ಕಿತ್ತೂರು’ ಎಂದೇ ಹೆಸರಾಗಿದೆ’ ಎಂದು ಹೇಳಿದವರು ಅಡುಗೆ ಕೆಲಸದಲ್ಲಿ ತೊಡಗಿಕೊಂಡಿರುವ ಕೆ.ಆರ್‌. ಸಿದ್ದಲಿಂಗಪ್ಪ, ಡಿ.ವಿ. ಮಲ್ಲಿಕಾರ್ಜುನ, ಎಂ.ಮಹಾಂತೇಶ, ಬಿ.ಕೆ. ಅಜ್ಜಯ್ಯ, ಕರಿಬಸಪ್ಪ, ಚಿತ್ರಶೇಖರ, ಎಚ್‌.ಓಬಳೇಶ.

ಅಕ್ಷರಸ್ಥರಿಗೂ ಇದೇ ಸ್ವ–ಉದ್ಯೋಗ

ಬಡತನದ ಹಿನ್ನೆಲೆಯ ಕೆಲವು ಯುವಕರು ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಯುತ್ತಿದ್ದಂತೆಯೇ ಸೌಟು ಹಿಡಿದು ಅಡುಗೆ ಕೆಲಸ ಅರಸಿ ಹೋಗುವುದು ಇಲ್ಲಿ ಸಹಜ ಎನ್ನುವಂತಾಗಿದೆ. ಇನ್ನು ಕೆಲವು ಪದವೀಧರರೂ ಬೇರೆ ಕೆಲಸದ ಉಸಾಬರಿಗೆ ಜೋತುಬೀಳದೇ ಇದೇ ಕೆಲಸದತ್ತ ಆಕರ್ಷಿತರಾಗಿದ್ದುಂಟು. ಅಂಥವರ ಪೈಕಿ ದಾವಣಗೆರೆಯ ಮಾಗನೂರು ಸರ್ವಮಂಗಳಮ್ಮ ಬಸಪ್ಪ ಪದವಿ ಕಾಲೇಜಲ್ಲಿ ಬಿ.ಎ. ಪದವಿ ಪಡೆದಿರುವ ವಿ.ಪುನೀತ್‌ಕುಮಾರ್‌ ಪ್ರಮುಖರು. ಇವರೀಗ ಎಂ.ಎ. ಪ್ರವೇಶ ಕೋರಿ ದಾವಣಗೆರೆ ವಿ.ವಿ.ಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೆಲವು ವರ್ಷಗಳಿಂದ ಅಡುಗೆ ಕಂಟ್ರಾಕ್ಟರ್‌ ಕೆಲಸ ಮಾಡುತ್ತಿರುವ ಈ ಯುವಕನಿಗೆ ಇನ್ನೂ 22ರ ಪ್ರಾಯ. ಪಿಯುನಿಂದಲೇ ತಮ್ಮ ಅನೇಕ ಸಹಪಾಠಿಗಳಿಗೆ ವಾರಕ್ಕೆರಡೋ ಮೂರೋ ದಿನ ಉದ್ಯೋಗ ನೀಡುತ್ತ ಅವರ ಕಲಿಕೆಯ ಖರ್ಚಿಗೆ ಆಸರೆಯಾಗಿದ್ದ ಇವರು, ದುಡಿದು ಚಿಕ್ಕ ವಯಸ್ಸಿನಲ್ಲೇ ವಾಸಕ್ಕೆ ಹೊಸ ಆರ್‌ಸಿಸಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಆರು ತಿಂಗಳಲ್ಲಿ ಗೃಹಪ್ರವೇಶ ನಿಗದಿಯಾಗಿದೆ. ಆ ಸಮಾರಂಭಕ್ಕೆ ಊರಿನ ಅನೇಕ ಬಾಣಸಿಗರು ಉಚಿತವಾಗಿ ಅಡುಗೆ ಮಾಡುವವರಿದ್ದಾರೆ.

ಊರಿನ ಎ.ಸಿ. ರೇವಣಸಿದ್ದಪ್ಪ, ಕೆ.ಎಂ. ಮಂಜುನಾಥ, ಎಂ.ಎಸ್‌. ಸೋಮಶೇಖರ ಅವರೂ ಪದವಿವರೆಗೆ ಓದಿದ್ದರೂ ಅಡುಗೆ ಕೆಲಸ ಮಾಡುತ್ತ ಜೀವನ ರೂಪಿಸಿಕೊಂಡಿದ್ದಾರೆ. ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಮಕ್ಕಳ ಮದುವೆ ಮಾಡಿದ್ದಾರೆ. ಇದೇ ಕೆಲಸ ಮಾಡುತ್ತಿರುವ ಇನ್ನು ಕೆಲವರು ತಮ್ಮ ಮಕ್ಕಳಿಗೆ ಎಂಜಿನಿಯರಿಂಗ್‌ ಶಿಕ್ಷಣ ಕೊಡಿಸುವಷ್ಟು ಶಕ್ತರಾಗಿದ್ದಾರೆ.

ಶಾಮಿಯಾನದ ಹೊಣೆ: ಬಿ.ಎ. ಪದವೀಧರರಾದ ಪಿ.ಎ. ನಾಗರಾಜ ಅಡುಗೆ ಕೆಲಸಕ್ಕೆ ಹೋಗುವುದಷ್ಟೇ ಅಲ್ಲದೆ ಶಾಮಿಯಾನ ಗುತ್ತಿಗೆದಾರರೂ ಆಗಿದ್ದಾರೆ. ಓದುತ್ತಲೇ ಸಂಪಾದಿಸಬೇಕೆಂಬ ಅನಿವಾರ್ಯಕ್ಕೆ ಒಳಗಾಗಿರುವ ತನ್ನ ಸಹಪಾಠಿಗಳೂ ಒಳಗೊಂಡಂತೆ ಹತ್ತಿಪ್ಪತ್ತು ಯುವಕರಿಗೆ ನಿಯಮಿತವಾಗಿ ಕೆಲಸ ಕೊಡುತ್ತಾರೆ.

ಅಡುಗೆ ಕೆಲಸಕ್ಕೆ ಬಿಡುವು ಇದ್ದಾಗ ಜೀವನ ಸರಾಗವಾಗಿ ನಡೆಯಲಿ ಎಂದುಕೊಂಡೇ ಈ ಗ್ರಾಮದ ಅನೇಕರು ಆಕಳು–ಎಮ್ಮೆ ಸಾಕಿಕೊಂಡಿದ್ದು, ಈ ಗ್ರಾಮದ ಹಾಲಿನ ಡೇರಿಗೆ ನಿತ್ಯ 600ರಿಂದ 650 ಲೀಟರ್‌ ಹಾಲು ಮಾರಾಟ ಮಾಡುತ್ತಾರೆ. ಈ ಊರಿನ ಕೆಲವು ಬಡವರ ಮಕ್ಕಳು ಅಡುಗೆ ಕೆಲಸ ಮಾಡುತ್ತಲೇ ಉನ್ನತ ಶಿಕ್ಷಣ ಪಡೆದು ಸರ್ಕಾರಿ, ಖಾಸಗಿ ಉದ್ಯೋಗವನ್ನೂ ಪಡೆದಿದ್ದಾರೆ. ಅಧಿಕಾರಿಗಳೂ ಆಗಿದ್ದಾರೆ.

ಹೆಣ್ಣು ಮಕ್ಕಳಿಗೂ ಆದಾಯ: ಅಡುಗೆ ಕೆಲಸ ಎಂದ ಕೂಡಲೇ ಹೆಣ್ಣುಮಕ್ಕಳೇ ನೆನಪಾಗುತ್ತಾರೆ. ಮನೆಗಳಲ್ಲಿ ನಿತ್ಯವೂ ಕುಟುಂಬದ ನಾಲ್ಕಾರು ಜನರ ಹೊಟ್ಟೆ ತುಂಬಿಸಲು ಒಲೆ ಹೊತ್ತಿಸುವವರು ಮಹಿಳೆಯರೇ. ಆದರೂ ದೊಡ್ಡ ದೊಡ್ಡ ಸಮಾರಂಭಗಳ ಅಡುಗೆ ಜವಾಬ್ದಾರಿ ಮೊದಲಿನಿಂದಲೂ ಪುರುಷರದ್ದೇ. ಕಿತ್ತೂರಿನ ಅನೇಕ ಪುರುಷರು ಒಬ್ಬರಿಂದ ಒಬ್ಬರು ಅಡುಗೆ ಕೆಲಸ ಕಲಿತು ಕಂಟ್ರಾಕ್ಟರ್‌ಗಳಾಗಿ, ತಮ್ಮೂರಿನ ಕೆಲವು ಹೆಣ್ಣು ಮಕ್ಕಳನ್ನು ಅಡುಗೆ ಸಹಾಯಕರನ್ನಾಗಿ ಕರೆದುಕೊಂಡು ಹೋಗಿ ಅವರಿಗೂ ಆದಾಯ ಬರುವಂತೆ ನೋಡಿಕೊಂಡಿದ್ದಾರೆ.

‘ಹೊಲ–ಮನೆ ಕೆಲಸ ಇದ್ದರೆ ನಮ್ಮೂರ ಹೆಣ್ಣುಮಕ್ಕಳು ಬರುವುದಿಲ್ಲ. ಹಾಗಾಗಿ ದಾವಣಗೆರೆ, ಹರಿಹರ ನಗರ ಅಥವಾ  ಜಗಳೂರು ಮತ್ತಿತರ ಪಟ್ಟಣಗಳಲ್ಲಿ ಇರುವ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತೇವೆ. ಸಹಾಯಕರಾಗಿ ಕೆಲಸ ಮಾಡುವವರಿಗೂ ದಿನವೊಂದಕ್ಕೆ ಊಟ–ತಿಂಡಿ ಕೊಟ್ಟು ಕನಿಷ್ಠ ₹ 1,000 ಸಂಬಳ ಕೊಡುತ್ತೇವೆ. ಕಾಲೇಜು ಕಲಿಯುವ ಯುವಕರಿಗಂತೂ ಈ ಮೊತ್ತ ದೊಡ್ಡದೇ ಆಗಿದ್ದು, ಸಾಕಷ್ಟು ಸಹಾಯಕ್ಕೆ ಬರುತ್ತದೆ’ ಎಂದು ಹೇಳಿದವರು ಕೆ.ಜಿ. ನಾಗರಾಜ್‌.

‘ತರಕಾರಿ ಹೆಚ್ಚುವುದು, ರೊಟ್ಟಿ, ಚಪಾತಿ ಮಾಡುವುದು, ಪಾತ್ರೆ–ಪಡಗ ಸ್ವಚ್ಛಗೊಳಿಸುವುದು, ಊಟ ಬಡಿಸುವ ಕೆಲಸ ಮಾಡುತ್ತೇವೆ’ ಎಂದು ಅಡುಗೆ ಸಹಾಯಕರಾಗಿ ಕೆಲಸ ಮಾಡುವ ದಾವಣಗೆರೆಯ ಮಹಾದೇವಿ ಹೆಮ್ಮೆಯಿಂದ ಹೇಳಿದರು.

ಅಡುಗೆ ಕೆಲಸ ಎಂದ ಕೂಡಲೇ ಹೆಣ್ಣುಮಕ್ಕಳೇ ನೆನಪಾಗುತ್ತಾರೆ. ಮನೆಗಳಲ್ಲಿ ನಿತ್ಯವೂ ಕುಟುಂಬದ ನಾಲ್ಕಾರು ಜನರ ಹೊಟ್ಟೆ ತುಂಬಿಸಲು ಒಲೆ ಹೊತ್ತಿಸುವವರು ಮಹಿಳೆಯರೇ. ಆದರೂ ದೊಡ್ಡ ದೊಡ್ಡ ಸಮಾರಂಭಗಳ ಅಡುಗೆ ಜವಾಬ್ದಾರಿ ಮೊದಲಿನಿಂದಲೂ ಪುರುಷರದ್ದೇ. ಕಿತ್ತೂರಿನ ಅನೇಕ ಪುರುಷರು ಒಬ್ಬರಿಂದ ಒಬ್ಬರು ಅಡುಗೆ ಕೆಲಸ ಕಲಿತು ಕಂಟ್ರಾಕ್ಟರ್‌ಗಳಾಗಿ ತಮ್ಮೂರಿನ ಕೆಲವು ಹೆಣ್ಣು ಮಕ್ಕಳನ್ನು ಅಡುಗೆ ಸಹಾಯಕರನ್ನಾಗಿ ಕರೆದುಕೊಂಡು ಹೋಗಿ ಅವರಿಗೂ ಆದಾಯ ಬರುವಂತೆ ನೋಡಿಕೊಂಡಿದ್ದಾರೆ. ‘ಹೊಲ–ಮನೆ ಕೆಲಸ ಇದ್ದರೆ ನಮ್ಮೂರ ಹೆಣ್ಣುಮಕ್ಕಳು ಬರುವುದಿಲ್ಲ. ಹಾಗಾಗಿ ದಾವಣಗೆರೆ ಹರಿಹರ ನಗರ ಅಥವಾ  ಜಗಳೂರು ಮತ್ತಿತರ ಪಟ್ಟಣಗಳಲ್ಲಿ ಇರುವ ಹೆಣ್ಣುಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತೇವೆ. ಸಹಾಯಕರಾಗಿ ಕೆಲಸ ಮಾಡುವವರಿಗೂ ದಿನವೊಂದಕ್ಕೆ ಊಟ–ತಿಂಡಿ ಕೊಟ್ಟು ಕನಿಷ್ಠ ₹ 1000 ಸಂಬಳ ಕೊಡುತ್ತೇವೆ. ಕಾಲೇಜು ಕಲಿಯುವ ಯುವಕರಿಗಂತೂ ಈ ಮೊತ್ತ ದೊಡ್ಡದೇ ಆಗಿದ್ದು ಸಾಕಷ್ಟು ಸಹಾಯಕ್ಕೆ ಬರುತ್ತದೆ’ ಎಂದು ಹೇಳಿದವರು ಕೆ.ಜಿ. ನಾಗರಾಜ್‌.

‘ತರಕಾರಿ ಹೆಚ್ಚುವುದು ರೊಟ್ಟಿ ಚಪಾತಿ ಮಾಡುವುದು ಪಾತ್ರೆ–ಪಡಗ ಸ್ವಚ್ಛಗೊಳಿಸುವುದು ಊಟ ಬಡಿಸುವುದು ಹಾಗೂ ಅಗತ್ಯ ಬಿದ್ದರೆ ಅನ್ನವನ್ನೂ ಬಸಿಯುವ ಕೆಲಸವನ್ನು ನಾವು ನಿರ್ವಹಿಸುತ್ತೇವೆ’ ಎಂದು ಅಡುಗೆ ಸಹಾಯಕರಾಗಿ ಕೆಲಸ ಮಾಡುವ ದಾವಣಗೆರೆಯ ಮಹಾದೇವಿ ಹೆಮ್ಮೆಯಿಂದ ಹೇಳಿದರು.

ನಮ್ಮ ಸ್ನೇಹಿತರಿಗೆ ಮದುವೆ ವೇದಿಕೆ ಅಲಂಕಾರ ಮತ್ತು ಊಟ ಬಡಿಸುವ ಕೆಲಸ ಕೊಡುತ್ತೇನೆ. ಅವರೆಲ್ಲ ಪದವಿ ಓದುತ್ತಿದ್ದು ವಾರಾಂತ್ಯಕ್ಕೆ ದೊರೆಯುವ ಕೆಲಸದಿಂದ ಖರ್ಚು– ವೆಚ್ಚ ನೀಗಿಸಿಕೊಂಡು ಪಾಲಕರಿಗೆ ಹೊರೆಯಾಗದಂತಿದ್ದಾರೆ.
-ಪಿ.ಎ. ನಾಗರಾಜ ಶಾಮಿಯಾನ ಗುತ್ತಿಗೆದಾರ
ಹೈನುಗಾರಿಕೆಯಲ್ಲೂ ತೊಡಗಿರುವ ಚಿತ್ರಶೇಖರ
ಹೈನುಗಾರಿಕೆಯಲ್ಲೂ ತೊಡಗಿರುವ ಚಿತ್ರಶೇಖರ
ಕಿತ್ತೂರು ಗ್ರಾಮದ ಪಾಕ ಪ್ರವೀಣರು ಹೆಮ್ಮನ ಬೇತೂರು ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅಡುಗೆ ಕಾಯಕದಲ್ಲಿ ನಿರತರಾಗಿರುವುದು
ಕಿತ್ತೂರು ಗ್ರಾಮದ ಪಾಕ ಪ್ರವೀಣರು ಹೆಮ್ಮನ ಬೇತೂರು ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅಡುಗೆ ಕಾಯಕದಲ್ಲಿ ನಿರತರಾಗಿರುವುದು
ಕಿತ್ತೂರು ಗ್ರಾಮದ ಬಾಣಸಿಗರು ಸೌಟುಗಳೊಂದಿಗೆ ತಮ್ಮೂರಿನ ಗಣೇಶನ ದೇವಸ್ಥಾನದೆದುರು ಕುಳಿತಿರುವುದು
ಕಿತ್ತೂರು ಗ್ರಾಮದ ಬಾಣಸಿಗರು ಸೌಟುಗಳೊಂದಿಗೆ ತಮ್ಮೂರಿನ ಗಣೇಶನ ದೇವಸ್ಥಾನದೆದುರು ಕುಳಿತಿರುವುದು
ಕಿತ್ತೂರು ಗ್ರಾಮದ ಪಾಕ ಪ್ರವೀಣರು ಹೆಮ್ಮನ ಬೇತೂರು ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅಡುಗೆ ಕಾಯಕದಲ್ಲಿ ನಿರತರಾಗಿರುವುದು
ಕಿತ್ತೂರು ಗ್ರಾಮದ ಪಾಕ ಪ್ರವೀಣರು ಹೆಮ್ಮನ ಬೇತೂರು ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಅಡುಗೆ ಕಾಯಕದಲ್ಲಿ ನಿರತರಾಗಿರುವುದು
ಪಿ.ಎ. ನಾಗರಾಜ
ಪಿ.ಎ. ನಾಗರಾಜ
ಕೆ.ಜಿ. ನಾಗರಾಜ
ಕೆ.ಜಿ. ನಾಗರಾಜ
ಚಿಕ್ಕ ವಯಸ್ಸಿನಲ್ಲೇ ಅಡುಗೆ ಕೆಲಸದಲ್ಲಿ ತೊಡಗಿ ಸಂಪಾದನೆ ಮಾಡಿರುವ ಕಿತ್ತೂರು ಗ್ರಾಮದ ವಿ.ಪುನೀತ್‌ಕುಮಾರ್‌ ಸ್ವಂತ ಮನೆ ಕಟ್ಟಿಸುತ್ತಿರುವುದು
ಚಿಕ್ಕ ವಯಸ್ಸಿನಲ್ಲೇ ಅಡುಗೆ ಕೆಲಸದಲ್ಲಿ ತೊಡಗಿ ಸಂಪಾದನೆ ಮಾಡಿರುವ ಕಿತ್ತೂರು ಗ್ರಾಮದ ವಿ.ಪುನೀತ್‌ಕುಮಾರ್‌ ಸ್ವಂತ ಮನೆ ಕಟ್ಟಿಸುತ್ತಿರುವುದು
ಕಿತ್ತೂರು ಗ್ರಾಮದ ಪಾಕ ಪ್ರವೀಣರು ತಮ್ಮ ಊರಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಅನ್ನದಾಸೋಹದ ಪ್ರಯುಕ್ತ ಅಡುಗೆ ಕಾಯಕದಲ್ಲಿ ನಿರತರಾಗಿರುವುದು
ಕಿತ್ತೂರು ಗ್ರಾಮದ ಪಾಕ ಪ್ರವೀಣರು ತಮ್ಮ ಊರಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಅನ್ನದಾಸೋಹದ ಪ್ರಯುಕ್ತ ಅಡುಗೆ ಕಾಯಕದಲ್ಲಿ ನಿರತರಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT