ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

Published 19 ಮೇ 2024, 0:30 IST
Last Updated 19 ಮೇ 2024, 0:30 IST
ಅಕ್ಷರ ಗಾತ್ರ

25 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಭದ್ರಾ ಅರಣ್ಯದಿಂದ ಸ್ಥಳಾಂತರಗೊಂಡ 16 ಹಳ್ಳಿಗಳ ಜನರ ಬದುಕು ಈಗ ಏನಾಗಿದೆ? ಅವರು ಕಾಡನ್ನು ತೊರೆದ ಬಳಿಕ ಕಾಡು ಪುನಶ್ಚೇತನಗೊಂಡಿದೆಯೇ? ಕಾಡಿನೊಳಗಿದ್ದ ಆ ಹಳ್ಳಿ, ಮನೆ ಮತ್ತು ಹೊಲಗದ್ದೆಗಳ ಚಿತ್ರಣ ಇಲ್ಲಿದೆ...

‘ನಿಮ್ಮ ಹೆಸರು?’
‘ರಂಗಮ್ಮ’
‘ವಯಸ್ಸು...?’
‘ನೀವೇ ಹೇಳ್ಬೇಕು’
‘ಒಂದು ಎಪ್ಪತ್ತೈದು...?’
‘ಇಲ್ಲ, ಜಾಸ್ತಿಯಾಗಿದೆ...’

‘ನಾನು ಮದ್ವೆಯಾಗಿ ಬಂದಾಗ ಇನ್ನೂ ಸಣ್ಣವಳು. ಆಗ ಕಲ್ಲಿದ್ದಲು ಸುಡಕ್ಕೆ ಬಂದಿದ್ದು. ಮರಗಳನ್ನು ಕಡಿದು ಸುಟ್ಟು ಕಲ್ಲಿದ್ದಲು ಮಾಡ್ತಿದ್ವಿ. ಆಗ ಇಲ್ಲಿಗೆ ರೈಲ್ ಬರೋದು. ನಾವು ಸುಟ್ಟಿದ್ದ ಕಲ್ಲಿದ್ದಲು ತುಂಬ್ಕೊಂಡು ಹೋಗೋದು.

ಇದು ಕೊಂಪೆ ತರ ಇತ್ತು. ಬದಕಕ್ಕೆ ಬಹಳ ಕಷ್ಟ ಇತ್ತು. ಎಲ್ ನೋಡೂದ್ರೂ ಕಾಡು. ಲೆಕ್ಕವಿಲ್ಲದಷ್ಟು ಕಡವೆಗಳು, ಕಾಡೆಮ್ಮೆಗಳು... ಮುಸ್ಸಂಜೆ ಆಗ್ತಿದಂಗೆ ಓಡಾಡಕ್ಕೆ ಆಗ್ತಿರಲಿಲ್ಲ.

ಆಗ ಇಲ್ಲಿ ಆನೆಗಳೇ ಇರಲಿಲ್ಲ. ಅವು ಇಲ್ಲಿಗೆ ಬಂದಿದ್ ಆಮೇಲೆ. ಮೊದಲು ನಮ್ಮ ಗದ್ದೆಗೆ ಬಂದು ಹೋಗಿದ್ದಾಗ ಬಹಳ ಆನಂದಪಟ್ವಿ, ಗದ್ದೆ ಮಣ್ಣಿನಲ್ಲಿತ್ತಲ್ಲ... ಅದರ ಹೆಜ್ಜೆ ಗುರುತನ್ನ ಅಚ್ಚು ಮಾಡ್‌ಕೊಂಡು ಮನೇಲ್ಲಿಟ್ಕಂಡು ಪೂಜೆ ಮಾಡಿದ್ವೀ. ದೇವರು ಊರಿಗೆ ಬಂದವ್ನೆ, ಎಲ್ಲರಿಗೂ ಒಳ್ಳೆಯದಾಗತ್ತೇ ಅಂತ ಖುಷಿಪಟ್ವಿ. ಆದ್ರೆ ಬರ‍್ತಾ ಬರ‍್ತಾ ಆನೆಗಳು ಮನುಷ್ಯರನ್ನು ಕೊಲೆ ಮಾಡೋಕೆ ಶುರು ಮಾಡ್ಬಿಟ್ವು...’ ರಂಗಮ್ಮನ ಕಥೆ ಹೀಗೆ ಸಾಗಿತ್ತು.

ರಂಗಮ್ಮನನ್ನು ಭೇಟಿಯಾಗಿದ್ದ ಕಾರಣವಿಷ್ಟೇ. 1999ರ ಇಸವಿ. ಆಗಷ್ಟೇ ಭದ್ರಾ ಅರಣ್ಯದೊಳಗೆ ನೆಲೆಸಿದ್ದ ಹಳ್ಳಿಗಳ ಸ್ಥಳಾಂತರ ಯೋಜನೆ ಆರಂಭಗೊಂಡಿತ್ತು. 1976 ರಲ್ಲಿ ರೂಪುಗೊಂಡಿದ್ದ ಈ ಯೋಜನೆ ಬಹಳ ಕಾಲ ಫೈಲ್‌ಗಳಲ್ಲಿ ನಿದ್ರಿಸಿಬಿಟ್ಟಿತ್ತು. ಮೂಲಸೌಕರ್ಯಗಳಿಲ್ಲದ ಹಳ್ಳಿಗರು ಸೌಲಭ್ಯ ಕೊಡಿ ಇಲ್ಲವೇ ಸ್ಥಳಾಂತರಿಸಿ ಎಂದು ಬೇಡಿಕೆ ಇಟ್ಟು ಹೋರಾಟ ನಡೆಸಿದ್ದರು. ಕಾಡಿಗೆ ಬೆಂಕಿ ಇಟ್ಟು ಗಮನ ಸೆಳೆಯಲು ಯತ್ನಿಸಿದ್ದರು. ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಯಾವುದೂ ಉಪಯೋಗಕ್ಕೆ ಬರಲಿಲ್ಲ. ಕ್ರಮೇಣ ಜನ ಭರವಸೆ ಕಳೆದುಕೊಂಡು ರೋಸಿಹೋಗಿದ್ದರು.

1999 ರಲ್ಲಿ ಯತೀಶ್ ಕುಮಾರ್ ಎಂಬ ಯುವ ಅಧಿಕಾರಿಯೊಬ್ಬರು ಭದ್ರಾ ಅರಣ್ಯದ ನಿರ್ದೇಶಕರಾಗಿ ಬಂದರು. ನೊಂದಿದ್ದ ಜನ ಮತ್ತೆ ಹೊಸದಾಗಿ ಅರ್ಜಿಗಳನ್ನು ನೀಡಿದರು. ಧೂಳಿನಲ್ಲಿ ಅಡಗಿದ್ದ ಫೈಲ್‌ಗಳನ್ನು ಈ ಅಧಿಕಾರಿ ಪರಿಶೀಲಿಸಿ, ಜನರ ಬೇಡಿಕೆ ನ್ಯಾಯಸಮ್ಮತವೆಂದು ಮನವರಿಕೆಯಾದ ನಂತರ ಯೋಜನೆಗೆ ಹೊಸ ರೂಪುರೇಷೆ ನೀಡಿದರು. ಆಗಿನ ಜಿಲ್ಲಾಧಿಕಾರಿ ಗೋಪಾಲಕೃಷ್ಣೇಗೌಡ ಇವರ ಬೆನ್ನಿಗೆ ನಿಂತರು. ಯೋಜನೆ ಮರುಜೀವ ಪಡೆಯಿತು.

ಒಟ್ಟಾರೆ ಸ್ಥಳಾಂತರ ಅಥವಾ ಪುನರ್ವಸತಿ ಯೋಜನೆಗಳ ಬಗೆಗೆ ನಮಗೆ ಆತಂಕವಿತ್ತು. ಏಕೆಂದರೆ, ಇವುಗಳನ್ನು ಅನುಷ್ಠಾನಗೊಳಿಸುವವರಲ್ಲಿ ಬದ್ಧತೆ, ಪ್ರಾಮಾಣಿಕತೆ ಮತ್ತು ಮಾನವೀಯತೆ ಇಲ್ಲದಿದ್ದಾಗ ಅವು ಹೇಗೆ ಅಂತ್ಯಗೊಳ್ಳುತ್ತವೆ ಎಂಬುದಕ್ಕೆ ನಮ್ಮ ಮುಂದೆ ಬಹಳ ಉದಾಹರಣೆಗಳಿದ್ದವು.

ಕಾಮಳ್ಳಿ

ಕಾಮಳ್ಳಿ

1960 ರ ಅವಧಿಯಲ್ಲಿ ಜರುಗಿದ ಶರಾವತಿ ವಿದ್ಯುತ್ ಯೋಜನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಣೆಕಟ್ಟಿನಿಂದ ಮುಳುಗಡೆಯಾಗಲಿದ್ದ ಹಳ್ಳಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ನೂರಾರು ವರ್ಷಗಳ ಮಣ್ಣಿನ ನೆನಪುಗಳನ್ನು ತ್ಯಜಿಸಿ, ಜನ ಹೊರಬರಬೇಕಾಯಿತು. ಕಳೆದುಕೊಂಡ ಆಸ್ತಿಗೆ ತಕ್ಕ ಪರಿಹಾರ ದೊರಕಲಿಲ್ಲ. ಪರ್ಯಾಯವಾಗಿ ನೀಡಿದ್ದ ಭೂಮಿಗೆ ದಾಖಲಾತಿ ಇರಲಿಲ್ಲ. ಎಲ್ಲವೂ ಗೋಜಲು. ತಲುಪಿದ ಸಣ್ಣಪುಟ್ಟ ಹಣವೆಲ್ಲ ಅರ್ಜಿ ಬರೆಯುವುದಕ್ಕೆ, ಮಂತ್ರಿಗಳಿಗೆ ಅಹವಾಲು ನೀಡಲು, ಕೋರ್ಟುಗಳ ಮೊರೆ ಹೋಗಲು ಖರ್ಚಾಗಿ ಹೋಯಿತು. ಕಳೆದ ತಿಂಗಳು ಶಿವಮೊಗ್ಗೆಗೆ ಹೋಗಿದ್ದಾಗ ಕೂಡ ಹತ್ತಾರು ರೈತರು ಅದೇ ಸಂಕಷ್ಟಗಳ ಬಗೆಗೆ ಮಾತನಾಡುತ್ತಿದ್ದರು. ನಾವೇ ಆಯ್ಕೆ ಮಾಡುವ ಸರ್ಕಾರಗಳು ಮಾನವೀಯತೆ ಕಳೆದುಕೊಂಡು ವೈರಿಗಳಾಗಿ ಎದುರು ನಿಂತಾಗ ನ್ಯಾಯಕ್ಕಾಗಿ ಯಾರ ಮೊರೆ ಹೋಗಬೇಕು?

ಜೊತೆಗೆ ಇಂತಹ ಹೆಚ್ಚಿನ ಯೋಜನೆಗಳ ಮೂಲ ಉದ್ದೇಶಗಳೇ ಸಂಶಯಾಸ್ಪದವಾಗಿರುತ್ತವೆ. ಛತ್ತೀಸ್‌ಗಢದ ಇಂದ್ರಾವತಿ ಅರಣ್ಯದಲ್ಲಿ ಐದು ವರ್ಷಗಳ ಹಿಂದೆ ಜರುಗಿದ ಬುಡಕಟ್ಟು ಜನಾಂಗದ ಸ್ಥಳಾಂತರದ ಒಳಸಂಚನ್ನೇ ನೋಡಿ. ಕಾಡು ಸಂರಕ್ಷಣೆಯ ನೆಪದಲ್ಲಿ ಕೇಂದ್ರ ಸರ್ಕಾರ ಜನರನ್ನು ಎತ್ತಂಗಡಿ ಮಾಡಿತ್ತು. ಬಳಿಕ ಕೆಲವೇ ಸಮಯದಲ್ಲಿ ಆ ಅಡವಿಯನ್ನು ಗಣಿಗಾರಿಕೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿತ್ತು. ಇತ್ತ ಕಾಡೂ ಉಳಿಯಲಿಲ್ಲ, ಅತ್ತ ಬುಡಕಟ್ಟು ಜನರು ಬೀದಿ ಪಾಲಾದರು.

ಭದ್ರಾ ಯೋಜನೆ ಹೀಗಾಗಬಹುದು ಎಂದು ನಮಗೆ ಭಯ ಮಿಶ್ರಿತ ಕುತೂಹಲವಿತ್ತು. ಹಾಗಾಗಿ ಮುಂದಿನ ಹಲವು ವರ್ಷಗಳು ಅಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನಿರಂತರವಾಗಿ ಗಮನಿಸುತ್ತಲೇ ಇದ್ದೆವು. ಯೋಜನೆ ಮುಗಿದ ಕೆಲವೇ ವರ್ಷಗಳಲ್ಲಿ ಆದ ಬದಲಾವಣೆಗಳು ನಮ್ಮ ಊಹೆಗೂ ನಿಲುಕಲಿಲ್ಲ. ಹಳ್ಳಿ ತೊರೆದ ಹೆಚ್ಚಿನ ಮಂದಿ ಪರ್ಯಾಯ ನೆಲದಲ್ಲಿ ಏಳಿಗೆ ಕಂಡಿದ್ದರು. ಜಮೀನಿನ ಮಾಲೀಕರಾಗಿದ್ದರು, ಕಾಫಿ, ಅಡಿಕೆ ತೋಟಗಳ ಒಡೆಯರಾಗಿದ್ದರು. ಅವರ ಮಕ್ಕಳು ಒಳ್ಳೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಮಗೆ ಇದೆಲ್ಲಾ ವಿಸ್ಮಯದಂತೆ ಕಂಡಿತು.

ಅತ್ತ ಇಪ್ಪತ್ತೈದು ವರ್ಷಗಳ ಬಳಿಕ ಜನ ಬಿಟ್ಟು ಹೋದ ಹಳ್ಳಿಗಳ ಕಥೆ ಏನು? ಭತ್ತ ಬೆಳೆಯುತ್ತಿದ್ದ ಗದ್ದೆಗಳೇನಾಗಿವೆ? ಮಾನವ ಹಸ್ತಕ್ಷೇಪದಿಂದ ಮುಕ್ತಗೊಂಡ ಆ ಪ್ರದೇಶದ ಕಾಡುಗಳ ಪರಿಸ್ಥಿತಿ ಏನಾಗಿರಬಹುದು? ಹಾಗೆಯೇ ಜೀವಸಂಕುಲಗಳ ಸ್ಥಿತಿಗತಿಗಳನ್ನರಿಯಲು ಮತ್ತೆ ಭದ್ರೆಯ ಅಡವಿಗೆ ಹೋದೆವು. ಜನ ನೆಲೆಸಿದ್ದ ಹಳ್ಳಿಗಳಲ್ಲಿ ಸುತ್ತಾಡಿದೆವು. ಜನರಿಲ್ಲದ, ಜಾನುವಾರುಗಳಿಲ್ಲದ ಕಾಡು ಹಕ್ಕಿಗಳ ಕಲರವಗಳಿಂದ, ಓಡುವ ಝರಿಗಳ ನಿನಾದದಲ್ಲಿ ಧ್ಯಾನಿಸುತ್ತಿತ್ತು. ಹಳ್ಳಿಗಳ ನಡುವಿನಲ್ಲಿದ್ದ ಹಲಸಿನಮರದಲ್ಲಿ ತುಂಬಿಕೊಂಡಿದ್ದ ಹಣ್ಣುಗಳನ್ನು ಕೆಂದಳಿಲುಗಳು, ಕೋತಿಗಳು ತಿನ್ನುತ್ತಿದ್ದವು. ಕೈ, ಬಾಯಿಗಳಿಗೆ ಮೆತ್ತಿಕೊಂಡಿದ್ದ ಹಾಲಿನ ಅಂಟನ್ನು ರೆಂಬೆ ಕೊಂಬೆಗಳಿಗೆ ಉಜ್ಜುತ್ತಿದ್ದವು.

ಕಾಡೆಮ್ಮೆ

ಕಾಡೆಮ್ಮೆ

ಅಲ್ಲಿದ್ದ ಮನೆಗಳು ಈಗ ಇರಲಿಲ್ಲ. ಕೆಲವು ಮನೆಗಳ ಅಡಿಪಾಯಗಳಷ್ಟೇ ಉಳಿದಿದ್ದವು. ರಂಗಮ್ಮನ ಮಣ್ಣಿನ ಮನೆಯ ಅಡಿಪಾಯ ಇನ್ನೂ ಉಳಿದಿತ್ತು. ಅಡಿಪಾಯದ ನಡುಭಾಗದಲ್ಲಿ 50 ಅಡಿ ಎತ್ತರಕ್ಕೆ ನಾಲ್ಕಾರು ಮರಗಳು ಚಿಮ್ಮಿದ್ದವು. ರಂಗಮ್ಮ ತೀರಿಕೊಂಡು ಹಲವು ವರ್ಷಗಳೇ ಕಳೆದಿತ್ತು.

ಕಾಡಿನ ನಡುವೆ ಹಾದು ಹೋಗಿದ್ದ ರೈಲು ಹಳಿಗಳು ಹಾಗೇ ಇದ್ದವು. ರಂಗಮ್ಮನನ್ನು ಅಲ್ಲಿಗೆ ಕರೆತಂದಿದ್ದ ರೈಲು ಹಳಿಗಳು. ಆದರೆ ಮರಗಳನ್ನು ಸುಟ್ಟು ಮಾಡುತ್ತಿದ್ದ ಕಲ್ಲಿದ್ದಲನ್ನು ಒಯ್ಯುತ್ತಿದ್ದ ರೈಲು ಬಂಡಿಗಳಿರಲಿಲ್ಲ. ಮಲಗಿದ್ದ ಹಳಿಗಳನ್ನು ಆಲದಮರದ ಬೇರುಗಳು ಕುಸ್ತಿಪಟುಗಳು ಪಟ್ಟು ಹಾಕಿದಂತೆ ಬಿಗಿಯಾಗಿ ಹಿಡಿದಿದ್ದವು, ರೈಲು ಬಂಡಿಗಳು ಮತ್ತೆ ಅಲ್ಲಿಗೆ ಬಾರದಂತೆ. ಬಗೆ ಬಗೆಯ ಬಳ್ಳಿಗಳು ಉಳಿದಿದ್ದ ರೈಲು ಹಳಿಗಳ ಅವಶೇಷಗಳು ಕಾಣದಂತೆ ಆವರಿಸಿಕೊಂಡಿದ್ದವು. ಪೈರುಗಳಿಲ್ಲದ ಭತ್ತದ ಗದ್ದೆಗಳಲ್ಲಿ ಗೀಜುಗಗಳ ಸದ್ದಿರಲಿಲ್ಲ. ಗಾಳಿಯಲ್ಲಿ ಬಣ್ಣ ಚೆಲ್ಲಿ ಮಾಯವಾಗುವ ಮುನಿಯ ಹಕ್ಕಿಗಳೂ ಇರಲಿಲ್ಲ. ಗದ್ದೆಗಳಲ್ಲಿ ದಟ್ಟವಾಗಿ ಬೆಳೆದ ಹುಲ್ಲು ಆಳ್ವಿಕೆ ನಡೆಸುತ್ತಿತ್ತು. ಹುಲ್ಲಿನೊಳಗಿನಿಂದ ಲಾರ್ಕ್‌ ಹಕ್ಕಿಗಳು ಮುಗಿಲಿಗೆ ಜಿಗಿದು ಮತ್ತೆ ಹುಲ್ಲಿನಲ್ಲಿ ಅಂತರ್ಧಾನವಾಗುತ್ತಿದ್ದವು. ನಡುನಡುವೆ ಅಲ್ಲೊಂದು, ಇಲ್ಲೊಂದು ನೇರಳೆ ಮರಗಳು, ಈಚಲು ಗಿಡಗಳು ತಲೆಎತ್ತಿದ್ದವು. ಬಹುಶಃ ಅವು ಪುನಗುಬೆಕ್ಕು ಅಥವಾ ಕಾಮಳ್ಳಿ ಇಲ್ಲವೆ ಹಾರನ್‌ಬಿಲ್ ಹಕ್ಕಿಗಳು ಬಿತ್ತಿದ ಬೀಜಗಳಿರಬಹುದು.

ಹುಲ್ಲುಗಾವಲಾದ ಗದ್ದೆಗಳ ಅಂಚಿನಲ್ಲಿ ನೂರಾರು ಸಾಂಬಾರ್ ಜಿಂಕೆಗಳು ನಿರಾತಂಕವಾಗಿದ್ದವು. ಭಯವಿಲ್ಲದೆ ಕಾಟಿಗಳು ನಮ್ಮ ಹಾದಿಗೆ ಅಡ್ಡ ನಿಂತವು. ಕದಲಲು ನಿರಾಕರಿಸಿದವು.

ಬೇಸಿಗೆಯ ತಾಪಕ್ಕೆ ಇಡೀ ನಾಡೇ ನಲುಗಿ ಕುಡಿಯುವ ನೀರಿಗೆ ಹಾತೊರೆಯುತ್ತಿದ್ದ ಬಿರುಬೇಸಿಗೆಯಲ್ಲಿ ಭದ್ರೆಯ ಸೋಮವಾಹಿನಿ ನದಿ ತನ್ನ ಝರಿ ಪರಿವಾರಗಳೊಂದಿಗೆ ಮುಕ್ತವಾಗಿ ಹರಿಯುತ್ತಿದ್ದಳು. ಊರುಕೇರಿಗಳನ್ನೆಲ್ಲ ಹಿಂಡಿದ್ದ ಬಿಸಿಲಿನ ತಾಪ ಆ ಕಾಡಿಗೆ ನುಸುಳಲು ಅಂಜಿದಂತೆ ಕಂಡಿತ್ತು.

ಭದ್ರಾ ಅಡವಿಯೊಳಗಿದ್ದ ಹದಿನಾರು ಹಳ್ಳಿಗಳ ಸ್ಥಳಾಂತರ ಯೋಜನೆಗೆ ಈಗ ಇಪ್ಪತ್ತೈದು ವರ್ಷ. ಮೊದಲೇ ಹೇಳಿದಂತೆ ನಮಗೆ ಸರ್ಕಾರಗಳು ನಿರ್ವಹಿಸುವ ಇಂತಹ ಯೋಜನೆಗಳಲ್ಲಿ ಸ್ವಲ್ಪವೂ ಭರವಸೆ ಇರಲಿಲ್ಲ. ಏಕೆಂದರೆ ವಿಶ್ವದೆಲ್ಲೆಡೆ ಇಂತಹ ಯೋಜನೆಗಳು ದಯನೀಯವಾಗಿ ಸೋತಿವೆ. ಗಂಭೀರ ಅನಾಹುತಗಳನ್ನು ಸೃಷ್ಟಿಸಿವೆ. ಕೆಲವೆಡೆ ಜನರು ಬೀದಿ ಪಾಲಾಗಿದ್ದಾರೆ. ಭಿಕ್ಷೆಯನ್ನು ವೃತ್ತಿ ಮಾಡಿಕೊಂಡಿದ್ದಾರೆ. ನೋವು ಮರೆಯಲು ಮದ್ಯಕ್ಕೆ ಶರಣಾಗಿ ಸಮಾಜಕ್ಕೆ ಹೊರೆಯಾದ ಉದಾಹರಣೆಗಳು ಎಲ್ಲೆಡೆ ಸಿಗುತ್ತವೆ. ಕೆಲವೆಡೆ ಸ್ಥಳಾಂತರದಿಂದ ತೆರವಾದ ಕಾಡು ಕಾರ್ಪೋರೇಟ್‌ ಮಾಲೀಕರ ಪಾಲಾದ ನಿದರ್ಶನಗಳಿಗೇನು ಕೊರತೆ ಇಲ್ಲ. ಇವು ನಮ್ಮ ದೇಶದಲ್ಲೂ ಜರುಗಿವೆ. 

ಆದರೆ ಭದ್ರೆಯ ವಿಷಯದಲ್ಲಿ ಹಾಗಾಗಲಿಲ್ಲ. ಊರು ತೊರೆದ ಜನರ ಬದುಕು ಭರವಸೆ ಕಂಡಿದೆ. ಸೊರಗಿದ ಕಾಡು ಚಿಗುರಿದೆ. ಹಕ್ಕಿಗಳು ಹಾಡಿವೆ. ಝರಿಗಳು ತೊರೆಗಳಾಗಿ ಹರಿದಿವೆ.

ಕೆಂದಳಿಲು
ಕೆಂದಳಿಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT