ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಒಳಗೂ ಹೊರಗೂ...

Last Updated 2 ನವೆಂಬರ್ 2018, 19:30 IST
ಅಕ್ಷರ ಗಾತ್ರ

ದೀಪಾವಳಿ ಬಂದಿದೆ. ಮತ್ತೊಮ್ಮೆ ಬಂದಿದೆ. ಇನ್ನೂ ಹೋದವರ್ಷದ ಬೆಳಕಿನ ಬಿಸಿ ಆರಿಲ್ಲ, ಮಣ್ಣಿನ ಹಣತೆಯ ಎಣ್ಣೆಯ ಕಲೆ ಮಾಸಿಲ್ಲ, ಸಂಭ್ರಮದ ಪಟಾಕಿಯ ಶಬ್ದವಿನ್ನೂ ಕಿವಿಯಲ್ಲಿ ಗುಯ್ಗುಡುತ್ತಿರುವಾಗಲೇ ಮತ್ತೊಂದು ದೀಪಾವಳಿ ಬಂದಿದೆ. ಕಾಲಕ್ಕೇನಿಷ್ಟು ಧಾವಂತ? ಅಥವಾ ಈ ದೀಪಾವಳಿಯೆನ್ನುವುದು ಬೇರೆ ಬೇರೆ ರೂಪದಲ್ಲಿ ಘಟಿಸುವ ನಿರಂತರ ಪ್ರಕ್ರಿಯೆಯೇ?

ಗಡಿಬಿಡಿಯ ಈ ನಗರದಲ್ಲಿ ಪ್ರತಿ ಸಂಜೆಯೂ ದೀಪಾವಳಿಯೇ. ರಾತ್ರಿಯ ಹೊತ್ತಿಗೆ ರಸ್ತೆಯಲ್ಲಿ ವಾಹನಗಳ ಹಳದಿ, ಕೆಂಪುದೀಪಗಳ ನದಿಯೇ ಹರಿಯುತ್ತಿದ್ದಂತೆ ಭಾಸವಾಗುತ್ತದೆ. ಉದ್ದ ಮಲಗಿದ ಹಾವಿನಂಥ ಫ್ಲೈ ಓವರಿನ ಹೊಟ್ಟೆಯಡಿ ಕಲೆತ ಟ್ರಾಫಿಕ್ಕಿನ ನೂರಾರು ದೀಪಸಾಲು ಕಣ್ಣುಹಾಯಿಸಿದಷ್ಟೂ ದೂರ ಝಗಮಗಿಸುವಾಗ ಮನಸ್ಸು ದೀಪಾವಳಿಯ ಉಪಮೆಗೇ ಆತುಕೊಳ್ಳುತ್ತದೆ. ಸಿಗ್ನಲ್ಲಿನಲ್ಲಿ ಪೆನ್ನು ಮಾರುವ ಪುಟ್ಟ ಹುಡುಗಿಯ ಹತ್ತಿರ 20 ರೂಪಾಯಿಗೆ ಯಾರೋ ಪುಣ್ಯಾತ್ಮರು ಪೆನ್ನು ಕೊಂಡರೆ ಆ ಹುಡುಗಿಯ ಕಣ್ಣಲ್ಲಿ ಬೆಳಗಿ ಮರೆಯಾಗುವುದು ದೀಪಾವಳಿಯೇ.

ಕಾರಿನಲ್ಲಿ ಈಗಷ್ಟೇ ಹೊಸದಾಗಿ ಜಗಳವೊಂದನ್ನು ಮುಗಿಸಿ ಮುಖ ತಿರುಗಿಸಿ ಕೂತ ಗಂಡ ಹೆಂಡಿರ ಮಧ್ಯೆ ಮಂಕಾಗಿ ಕೂತ ಮಗುವಿನ ಕಣ್ಣಲ್ಲಿ ಹೊರಗೆ ಬೆಳಕಿನ ಅಂಚುಳ್ಳ ಬಲೂನಿನ ನೆಪದಲ್ಲಿ ಬೆಳಗಲು ಯತ್ನಿಸುತ್ತಿರುವುದು ದೀಪಾವಳಿಯೇ. ಹೊರಗೆ ಎಳೆಯ ಹುಡುಗಿಯೊಂದು ಸೊಂಟದಲ್ಲಿ ಮಗುವನ್ನು ಎತ್ತಿಕೊಂಡು ಬೇಡುತ್ತಿದ್ದರೂ ಒಂದು ರೂಪಾಯಿ ಕೊಡಲು ಹಿಂಜರಿದರೂ, ದೊಡ್ಡ ದೊಡ್ಡ ಹೋಟೆಲುಗಳ ಒಳಗೆ ನೂರಾರು ರೂಪಾಯಿ ತೆತ್ತು ತಿನ್ನಬಾರದ್ದನ್ನಲ್ಲ ತಮ್ಮ ಪಾಡಿಗೆ ತಾವು ಮುಕ್ಕುವವರ ಕಣ್ಣಲ್ಲಿ ಇರದೇ ಹೋದುದೂ ದೀಪಾವಳಿಯೇ.

ದೀಪಾವಳಿ ಎಲ್ಲರಿಗೂ ಬೇಕು. ಇರುವವರಿಗೂ ಬೇಕು, ಇಲ್ಲದವರಿಗೂ ಬೇಕು. ಬೇಡುವವರ ಕೊಡುವವರ ನಡುವೆ ಬೇಕು. ಬೆಳಕಿದ್ದಲ್ಲಿಗಿಂತ ಹೆಚ್ಚಾಗಿ ಕತ್ತಲೆಯದ್ದಲ್ಲಿ ಬೇಕು. ಗೌಜು ಗದ್ದಲದ, ಜೋರು ಜರ್ಬಿನ, ಬರಿಯ ಸಂಪತ್ತಿನ ಪ್ರದರ್ಶನ - ದಹನಕ್ಕೆಂದೇ ಮೀಸಲಾದ ದೀಪಾವಳಿಯಲ್ಲ, ತಮ್ಮ ಸಂತಸದಲ್ಲಿ ಮತ್ತೊಬ್ಬರನ್ನೊಳಗೊಂಡು, ಕಣ್ಣಿಂದ ಕಣ್ಣಿಗೆ ಜ್ಯೋತಿ ಹೊತ್ತಿಕೊಳ್ಳುವ ದೀಪಾವಳಿ.

ಚಿಕ್ಕಂದಿನಲ್ಲಿ ಕಂಡು ಅನುಭವಿಸಿದ ದೀಪಾವಳಿ ಬೇರೆಯದೇ ಕಾಲ-ದೇಶಕ್ಕೆ ಸೇರಿದ್ದೇನೋ. ಅದು ಬಾಯಲ್ಲಿ ನುಲಿಯುವ ‘ದಿವಾಲಿ’ಯಲ್ಲ, ಮಟ್ಟಸವಾಗಿ ಕೇಳುವ ಸುಸಂಸ್ಕೃತ ‘ದೀಪಾವಳಿ’ಯೂ ಅಲ್ಲ. ಅದು ಹಣತೆಯ ಮಣ್ಣಿನ ಜೊತೆ ಕಲೆತ ಎಣ್ಣೆಯ ಕಂಪುಳ್ಳ ‘ದೊಡ್ಡಹಬ್ಬ.’ ಆಪ್ತ, ಅಪ್ಯಾಯಮಾನ. ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ನೋಡಲು ಪಾತಾಳಲೋಕದಿಂದ ಬರುವ ‘ಬಲಿವೇಂದ್ರ’ನನ್ನು ಉಪಚರಿಸಿ, ಕಳುಹಿಸಿಕೊಡುವ ಹಬ್ಬ. ಆ ಹಬ್ಬದ ಬಣ್ಣ, ಸ್ಪರ್ಶ ವಾಸನೆಗಳ ನೆನಪೆಲ್ಲವೂ ಬಲು ತೀಕ್ಷ್ಣ. ಥೇಟ್ ಮರದ ಕಪಾಟಿನಲ್ಲಿ ಮಡಚಿಟ್ಟ, ಹೊಟ್ಟೆಯೊಳಗೆ ಬಚ್ಚಿಟ್ಟುಕೊಂಡ ಲಾವಂಚದ ಬೇರಿನ ಗುಟ್ಟನ್ನು ಪರಿಮಳದಿಂದಲೇ ಲೋಕಕ್ಕೆಲ್ಲ ಸಾರುವ ಅಮ್ಮಮ್ಮನ ಮೆತ್ತಗಿನ ಸೀರೆಯಂತೆಯೇ.

ದೊಡ್ಡ ಹಬ್ಬವೆಂದರೆ ಗೋಪೂಜೆ. ಕೊಟ್ಟಿಗೆಯ ಮರದ ಬಾಗಿಲಿನಂಚಿಗೆ ಶೇಡಿಯಲ್ಲಿ ಮೂಡಿದ ದನದ ಹೆಜ್ಜೆಗುರುತು. ದೊಡ್ಡಹಬ್ಬವೆಂದರೆ ‘ಬಿಂಗಿಪದ’. ಅಪರಾತ್ರಿಯಲ್ಲಿ, ನಿದ್ದೆಗಣ್ಣಲ್ಲಿ ಕೇಳಿಬರುವ ‘ಬಲ್ಲಾಳ ಬಲಿವೇಂದ್ರನ’ ಹಾಡು. ಒಂದೆರಡು ಗರ್ನಾಲು, ಪೆಟ್ಲಂಡೆಯ ಗೌಜು. ಅಮ್ಮಂದಿರ ಗಡಿಬಿಡಿ, ಮಕ್ಕಳ ಚಿಲಿಪಿಲಿ. ದೊಡ್ಡಹಬ್ಬದ ಅಚ್ಚೊತ್ತಿರುವ ಚಿತ್ರವೆಂದರೆ ಮನೆಯೊಳಗೆ ಉಧ್ಭವವಾಗಿ, ಮನೆಯ ಹೊರಗೆ ಹರಿದು ಬಂದ, ಅಂಗಳದ ಬೇಲಿಗುಟ್ಟದ ಮೇಲೆಲ್ಲ ಕೂತು ಚಳಿಗಾಳಿಗೆ ನವಿರಾಗಿ ನಡುಗುವ ದೀಪಸಾಲುಗಳು.

ದಾರಿಯುದ್ದಕ್ಕೂ ಬಲಿವೇಂದ್ರನಿಗೆ ತಿರುಗಿ ಹೋಗಲು ದಾರಿ ತೋರಿಸುವ, ದಾರಿ ಬದಿಯ ಬೇಲಿಗೆ ಅಲ್ಲಲ್ಲಿ ಕಟ್ಟಿದ ಚಟಪಟ ಉರಿಯುವ ಪಂಜಿನ ಸಾಲು. ಅದರಾಚೆಗೆ ಹಬ್ಬಿದ ಕಪ್ಪು ಕಾನನದ ಕತ್ತಲೆ, ಗವ್ವೆನ್ನುವ ಮೌನ, ಅದರ ಮೇಲೆ ಕಣ್ಣುಹಾಯಿಸಿದರೆ ನಕ್ಷತ್ರ ಚಿಮುಕಿಸಿದ ಅಗಾಧವಾದ ನಿಗೂಢ ಆಕಾಶ. ಪಕ್ಕಾ ದೀಪಾವಳಿಯೊಂದು ಅನಂತತೆಯಲ್ಲಿ ಘನೀಭವಿಸಿ ಹೋದಂಥ ಆಕಾಶ. ಕತ್ತಲೆಯ ಸಾಗರದಲ್ಲಿ ಬೆಳಕುಟ್ಟು ಕೂತ ದ್ವೀಪದಂಥ ಒಂಟಿ ಅಜ್ಜನ ಮನೆಯ ಹೊರಗೆ ಕೆಲಸವೆಲ್ಲ ಮುಗಿಸಿ ಮಾತಿಲ್ಲದೆ ಸುಮ್ಮನೆ ಕೂತ ಮನೆಮಂದಿ. ಸಮಾಧಾನವನ್ನೇ ಬೆಚ್ಚಗೆ ಹೊದ್ದು ಪ್ರತಿಮೆಗಳಂತೆ ಕೂತ ಪ್ರತಿಯೊಬ್ಬರ ಕಣ್ಣಲ್ಲು ಮಿನುಗುತ್ತಿದ್ದ ದೀಪಜ್ಯೋತಿ.

ಕಳೆದುಹೋದ ಆ ದೀಪಾವಳಿಯ ಸಮಾಧಾನವನ್ನು ಇಲ್ಲೆಲ್ಲಿಯೂ ಹುಡುಕಲು ಸಾಧ್ಯವಿಲ್ಲ. ಇಲ್ಲಿ ಆಡುವುದು ಬೇರೆಯದೇ ಭಾಷೆ, ಇರುವುದು ಬೇರೆಯದೇ ಲೋಕ. ಇಲ್ಲಿ ನಿಯಾನ್ ದೀಪಗಳಿವೆ, ಸೋಡಿಯಮ್ ದೀಪಗಳಿವೆ, ಮೊಬೈಲಿನ ಬೆಳಕಿಗೆ ಪರವಶವಾಗಿ, ಸುತ್ತಮುತ್ತಲಿನ ಜಗತ್ತನ್ನು ಮರೆತು ಹೊಳೆಯುವ ಮುಖಗಳಿವೆ. ಚಿನ್ನ ವಜ್ರ ವೈಡೂರ್ಯಗಳ ಹೊಳಪಿದೆ, ದಾರಿ ಬದಿಯಲ್ಲಿ ದೊಡ್ಡದಾಗಿ ಹೊತ್ತಿಸಿಟ್ಟ ಆಸೆಗಳಂಥ ಫಳಫಳ ಜಾಹೀರಾತುಗಳಿವೆ.

ಮೇಲ್ಮೆಯಲ್ಲಿ ಎಲ್ಲ ಬಹಳ ಸುಂದರವಾಗಿಯೂ ಆಕರ್ಷಕವಾಗಿಯೂ ಇದೆ . ಆದರೆ ಒಳಗೆ ಬೆಳಕೆಲ್ಲಿದೆ? ದೀಪಾವಳಿ ಎಲ್ಲಿದೆ? ಇದೆ, ಕೆಲವರಿಗಿದೆ, ಆದರೆ ಬಹಳಷ್ಟು ಜನರಿಗಿಲ್ಲ. ಇದ್ದವರಿಗೆ ಜಾಣಕುರುಡು ಚೆನ್ನಾಗಿಯೇ ಸಿದ್ಧಿಸಿದೆ. ಇಲ್ಲದವರಿಗೆ ಕತ್ತಲೆ ಅಭ್ಯಾಸವಾಗಿ ಹೋಗಿದೆ. ಹೊಟ್ಟೆ ಬೆನ್ನಿಗಂಟಿದವರನ್ನು ನೋಡುತ್ತಲೇ, ಅವರಿಗೆ ತೋರಿಸುತ್ತಲೇ ತುಂಬಿದ ಹೊಟ್ಟೆಗೆ ಇನ್ನೂ ತುರುಕುವವರ ದಂಡೇ ಇಲ್ಲಿದೆ. ದೀಪಾವಳಿ ಎಂದರೆ ಕೇವಲ ಒಂದು ಉರಿವ ದೀಪವಲ್ಲವಲ್ಲ. ದೀಪಾವಳಿಯೆಂದರೆ ಒಡಲ ಜ್ಯೋತಿಯನ್ನು ಹಂಚಿಕೊಂಡು, ಒಂದಿದ್ದು ಎರಡಾಗುವ, ಸಹಸ್ರವಾಗಿ ಬೆಳಕಾಗುವ ಉರಿವ ದೀಪಗಳ ಸಾಲು, ಕೈಹಿಡಿದು ನಿಂತ ದೀಪಸಾಲುಗಳು ಒಳಗಿನ ಕತ್ತಲೆಗೆ ಬೆಳಕಿನ ಪಾಠ ಕಲಿಸುವ, ಬೆಳಕಿಗೆ ಒಳಗಿನ ದಾರಿ ತೋರಿಸುವ ಪ್ರಕ್ರಿಯೆ.

ದೂರದಲ್ಲೆಲ್ಲೋ ಮದ್ದು ಮೆತ್ತಿದ ಮುದ್ದು ಕೈಗಳು ಹೊಸೆವ ಪಟಾಕಿಗಳ ಶಬ್ದದಿಂದಲೇ ದೀಪಾವಳಿಯಾಗಬೇಕೆಂದಿಲ್ಲ. ನಮ್ಮ ಹಣತೆಗೆ ಹಸಿದ ಕಣ್ಣುಗಳ ಜ್ಯೋತಿಯೇ ಆಗಬೇಕಿಲ್ಲ. ದುಬಾರಿ ಬಟ್ಟೆ ತೊಟ್ಟು, ಮುಖಕಟ್ಟುವ ಊಟ ಪೂರ್ತ ತಿನ್ನದೇ, ಕನಿಷ್ಠ ಪಕ್ಷ ನಾಯಿಗೂ ಕೊಡದೆ ಬೀದಿಯಲ್ಲಿ ಚೆಲ್ಲಿ, ವಿಷದ ಹೊಗೆ ಕುಡಿದು ಕೆಮ್ಮುವುದೇ ದೀಪಾವಳಿಯೆಂದು ಮಕ್ಕಳಿಗೆ ಕಲಿಸಿಕೊಡಬೇಕಿಲ್ಲ. ಹಾಗೆ ಕಲಿಸುತ್ತಿದ್ದಲ್ಲಿ ಅವರಂಥ ನತದೃಷ್ಟರು ಬೇರಿಲ್ಲ.

ದೀಪಾವಳಿ ನಮಗಷ್ಟೇ ಸಾಕೆ? ನಮ್ಮೊಡನೆ ಪ್ರಾಣಿಪಕ್ಷಿಗಳೂ, ಗಿಡಮರಗಳೂ ಇವೆ; ಅವುಗಳನ್ನೂ ಒಳಗೊಳ್ಳಬಲ್ಲ ದೀಪಾವಳಿ ನಮಗೆ ಬೇಕು. ನಮ್ಮೊಳಗಿನ ಕತ್ತಲೊಳಗೇ ಕಳೆದುಹೋಗಿರುವ ನಮಗೆ ನಿಜವಾಗಿ ಬೇಕಾಗಿರುವುದು ಮನೆಯ ಕಡೆಗೆ ತಿರುಗಿ ಹೋಗುವ ದಾರಿ. ನಮಗೆ ಬೇಕಿರುವುದು ಆ ದಾರಿ ತಿರುಗಿ ತಪ್ಪದಂತೆ ಕಾಪಾಡುವ ಎಚ್ಚರದ ಸಾಲುದೀಪ. ತಾನೆಷ್ಟು ಸಣ್ಣದಿದ್ದರೂ ಕತ್ತಲೆಯ ಅಗಾಧತೆಯನ್ನು ಬರಿಯ ತನ್ನ ಇರವಿನಿಂದ ಭೇದಿಸಬಲ್ಲ ಮಿಣುಕು ದೀಪದ ಧೈರ್ಯ. ನಮ್ಮ ದೀಪದ ಜ್ಯೋತಿಯನ್ನು ಮತ್ತೊಬ್ಬರಿಗೆ ದಾಟಿಸಬಲ್ಲ ಔದಾರ್ಯ.

ಮತ್ತೊಬ್ಬರ ಮನೆಯ ಬೆಳಕಿನಲ್ಲಿ ನಮ್ಮ ಬದುಕಿನ ಅರ್ಥ ಕಾಣಬಲ್ಲ ನಿಸ್ಪಹತೆ. ಸಾವಿರಾರು ಜನ ಸಾವಿರಾರು ರೀತಿಯಲ್ಲಿ ಬದುಕು ಕಂಡುಕೊಳ್ಳುತ್ತಿರುವ ಮಹಾನಗರಕ್ಕೆ ಖಂಡಿತ ಬರಿಯ ಒಂದು ದಿನದ ದೀಪಾವಳಿ ಸಾಲದು. ಇದನ್ನು ಬೆಳಗಲು ಸಹಸ್ರ ದೀಪಾವಳಿಗಳು ಬೇಕು. ಪುಟ್ಟ ಬಾಲ್ಕನಿಯಲ್ಲಿ ಗುಟ್ಟಾಗಿ ಹೊತ್ತುವ ಹಣತೆಗಳಿಗಿಂತ ಮಿಗಿಲಾಗಿ ಎದೆಯೊಳಗೆ ಹೊತ್ತಿ ಕಣ್ಣಲ್ಲಿ ಬೆಳಗುವ ನಿಜವಾಗಿ ದೀಪಾವಳಿ ಬೇಕು. ಅದು ನಮ್ಮೊಳಗನ್ನೂ ಹೊರಗನ್ನೂ ಒಟ್ಟಿಗೇ ಬೆಳಗುತ್ತಿರುವಾಗ, ಆ ಬೆಳಕಲ್ಲಿ ನಮ್ಮನ್ನೇ ನಾವು ಕಂಡುಕೊಳ್ಳುವಂತಿರಬೇಕು. ಅಂಥ ದೀಪಾವಳಿ ನಮಗೆ ಬೇಕು.

**

ನೋಮು, ಬಾಳೆಎಲೆ ಊಟದ ಹಬ್ಬ

ದೀಪಾವಳಿ ಎಂದರೆ ನನಗೆ ದೊಡ್ಡ ಹಬ್ಬ. ಚಿಕ್ಕವರಿದ್ದಾಗ ನಮಗೆ ಮೂರು ದಿನ ರಜೆ ಸಿಗುತ್ತಿತ್ತು. ಆ ಮೂರು ದಿನಕ್ಕೆ ಮೊದಲೇ ಪಟಾಕಿ ಹೊಡೆಯಲು ಶುರುವಿಟ್ಟುಕೊಳ್ಳುತ್ತಿದ್ದೆವು. ನಮ್ಮ ಮನೆಯವರಿಗೆ, ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಎಲ್ಲರಿಗೂ ಹೊಸ ಬಟ್ಟೆ ಹೊಲಿಸುತ್ತಿದ್ದರು. ನಾವು ‘ನೋಮು’ ಎಂಬ ಸಂಪ್ರದಾಯವನ್ನು ಆಚರಿಸುತ್ತೇವೆ.

ದೀಪಾವಳಿ ದಿನ ಹೊಸ ನೋಮುದಾರಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿ, ಅದನ್ನು ಮನೆದೇವರಿಗೆ ಹಾಗೂ ಮನೆಯಲ್ಲಿರುವವರಿಗೆ ಕಟ್ಟುವುದು ಪದ್ಧತಿ. ಜೊತೆಗೆ ಮನೆಯಲ್ಲಿಯೇ ಕಜ್ಜಾಯ ತಯಾರಿಸಿ ದೇವರಿಗೆ ಅದನ್ನು ನೋಮಿಕೊಂಡು ಬಂದು ಮನೆಯಲ್ಲಿ ಹಬ್ಬದ ಅಡುಗೆ ಮಾಡಿ ಬಾಳೆಎಲೆ ಊಟ ಮಾಡುವುದು ಚಿಕ್ಕ ಮಕ್ಕಳಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿ. ಆದರೆ ಈಗಿನ ಬದಲಾವಣೆ ಎಂದರೆ ಈಗ ಪಟಾಕಿ ಹೊಡೆಯುವುದಿಲ್ಲ.

ಕಳೆದ ನಾಲ್ಕು ವರ್ಷಗಳಿಂದ ಪಟಾಕಿ ಹೊಡೆಯುವ ದುಡ್ಡನ್ನು ಬೇರೆಯವರಿಗೆ ಸಹಾಯವಾಗುವ ಕೆಲಸವನ್ನು ಮಾಡುತ್ತಿದ್ದೇನೆ. ಆದರೆ ಹೊಸ ಬಟ್ಟೆ, ನೋಮು, ಪೂಜೆ, ಸಂಪ್ರದಾಯ ಯಾವುದೂ ಬದಲಾಗಿಲ್ಲ. ಸಂಪ್ರದಾಯ ಆಚರಣೆಗಳನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಈ ಬಾರಿ ತುಂಬಾ ವಿಶೇಷವಾಗಿ ಆಚರಿಸುತ್ತೇನೆ. ಕಾರಣ ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಉತ್ತಮ ಚಿತ್ರಗಳು ಹಾಗೂ ಯಶಸ್ಸು ಸಿಕ್ಕಿದೆ. ಈ ಖುಷಿಗೆ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸುವ ಯೋಚನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT