ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ಬೇಗೆಗೆ ಲ..ಲ.. ಲಸ್ಸಿ...

Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ
ಬೇಸಿಗೆಯ ಬೇಗೆಗೆ ಹಾಲ್ನೊರೆಯ ನಡುವೆ ಖೊವಾದ ಮಂದ ರಚಿಯುಳ್ಳ ತಣ್ಣನೆಯ ಲಸ್ಸಿ ಹೊಟ್ಟೆಗಿಳಿಯುತ್ತಿದ್ದರೆ ಬೆಳದಿಂಗಳಂತಹ ಅನುಭವ...

‘ಆಹಹಹಾ...’ ಆ ಗಾಜಿನ ಗ್ಲಾಸು ತುಟಿಗಿರಿಸಿ, ಮೊದಲ ಗುಟುಕು ಗುಟುಕರಿಸಿದ ನಂತರದ ಉದ್ಗಾರವಿದು... ಹಾಲ್ನೊರೆಯ ನಡುವೆ, ಖೊವಾದ ಮಂದ ರುಚಿ, ಮೊಸರಿನ ರುಚಿಯೊಂದಿಗೆ ಕರಗದ ಸಕ್ಕರೆಯ ಕಣ. ಗಂಟಲಿನಿಂದ ಹೊಟ್ಟೆಗಿಳಿಯುವವರೆಗೂ ಈ ಹಾಲ್ಮೊಸರಿನ ರುಚಿ ತಂಪನ್ನೀಯುತ್ತ ಹೋಗುತ್ತದೆ. ಒಂದು ಲೋಟ ಹೊಟ್ಟೆಗಿಳಿಯುವಲ್ಲಿ, ಹೊರಗಿನ ತಾಪವನ್ನೆಲ್ಲ ಈ ಬೆಳದಿಂಗಳಂತಹ ಪೇಯ, ತನ್ನೊಳಗೆಳೆದುಕೊಳ್ಳುತ್ತದೆ. 

ಇದು ಲಸ್ಸಿ. ಇದೇ ಲಸ್ಸಿ. ಹಾಲ್ನೊರೆಯೊಳಗೆ, ಬೆಳ್ಮುಗಿಲಿನಂಥ ಮೊಸರಿನ ಕಣಗಳು ಒಂದಾಗುತ್ತ ಹೋಗುತ್ತವೆ. ಸಕ್ಕರೆ ಕಣವೂ ಕರಗುವಾಗಲೇ ಗರಗರನೆ ತಿರುಗಿದ ಸುಳಿಯೊಳಗೆ ಒಂದೆರಡು ಐಸ್‌ ಕ್ಯೂಬ್‌ ಹಾಕಿ, ಲೋಟಕ್ಕೆ ಸುರಿದು, ಚಮಚದಿಂದ ಕೆಳಗಿಳಿಯಲಾರೆ ಎಂದು ಹಟ ಹಿಡಿದ ಖೊವಾವನ್ನು ಗ್ಲಾಸಿನ ಅಂಚಿಗೆ ಇಳಿಸಿ ಕೊಡುತ್ತಾರೆ. ಮೂವತ್ತು ರೂಪಾಯಿಯ ಈ ಲಸ್ಸಿ, ಹಸಿದವರ, ಶ್ರಮಿಕರಿಗೆ ಆಸರೆ. ಸಂತೆಗೆಂದು ಮಧ್ಯಾಹ್ನ ಬಜಾರ್‌ಗೆ ತಲುಪುವ ಹಳ್ಳಿ ಜನ, ಒಂದು ಲಸ್ಸಿ ಕುಡಿದು, ದಿನವಿಡೀ ದುಡಿದು ಮನೆಗೆ ಮರಳುತ್ತಾರೆ.

ನಲ್ವತ್ತು ವರ್ಷಗಳ ಹಿಂದೆ ಬೀದರಿನಲ್ಲಿ ಲಸ್ಸಿ ಮಾರಾಟದಲ್ಲಿ ತೊಡಗಿರುವ ಕುಟುಂಬ ಮೊಹಮ್ಮದ್‌ ಮೊಯಿಸ್‌ ಅವರದ್ದು. ಅವರ ಸಹೋದರ ಮೊಹಮ್ಮದ್‌ ವಾಜೀದ್ ಈಗ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹಿಂದೆಲ್ಲ ಬೇಸಿಗೆಯಲ್ಲಿ ಮಾತ್ರ ಲಸ್ಸಿ ಮಳಿಗೆ ಹಾಕುತ್ತಿದ್ದರು. ಇದೀಗ ವರ್ಷಪೂರ್ತಿ ನಡೆಸಿಕೊಂಡು ಬರುತ್ತಿದ್ದಾರೆ. 

ಬಂಗಾರ ತೊಲಕ್ಕೆ (ಹತ್ತು ಗ್ರಾಂ) ಎರಡೂವರೆ ಸಾವಿರ ರೂಪಾಯಿ ಇದ್ದ ಕಾಲದಲ್ಲಿ ಲಸ್ಸಿ ಬೆಲೆ ಒಂದು ರೂಪಾಯಿ ಇತ್ತು. ಇದೀಗ ಎರಡೂ ಹೆಚ್ಚಾಗಿವೆ ಎನ್ನುವುದು ಗಾಂಧಿಗಂಜ್‌ನಲ್ಲಿರುವ ಬೆಲ್ಲದ ಬಾಬು ಅವರ ಮಾತು. ಬಂಗಾರದಲ್ಲಿ ಹೇಗೆ ಹೆಚ್ಚು ಮಿಶ್ರಣ ಮಾಡಲಾಗುವುದಿಲ್ಲವೋ ಲಸ್ಸಿಯಲ್ಲಿಯೂ ಏನನ್ನೂ ಬೆರೆಸಬಾರದು ಎನ್ನುವುದೂ ಅವರ ಅಭಿಪ್ರಾಯ.

ಬೇಸಿಗೆಯ ಬೇಗೆ ತಣಿಸುವ ಬಗೆ 
ಬೇಸಿಗೆಯ ಬೇಗೆ ತಣಿಸುವ ಬಗೆ 

ಲಸ್ಸಿ ಅಂದ ತಕ್ಷಣ ನೆನಪಾಗುವುದು ಕಂಚಿನ ಲೋಟ, ಪಂಜಾಬಿನ ಸರದಾರ್‌ಜಿಗಳು. ಅವರ ಲಸ್ಸಿ ಬೀದರ್‌ವರೆಗೂ ಪಯಣ ಮಾಡಿದ್ದು, ರೂಪಾಂತರವಾಗಿದ್ದು ಒಂದು ಹೊಸ ಕಥೆ. ಹೊಟ್ಟೆಗೆ ತಂಪೆರೆಯುವ ಪಿತ್ತನಾಶಕ ಲಸ್ಸಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಡಕೆಯಲ್ಲಿ ಹೆಪ್ಪಿಟ್ಟ ಹಾಲು ಹಾಕಿ, ಗಟ್ಟಿ ಮೊಸರಿಗೆ ಇನ್ನಷ್ಟು ಹಾಲು ಸೇರಿಸಿ, ಚೇತೋಹಾರಿ ಪೇಯ ಸಿಂಧೂ ನಾಗರಿಕತೆಯ ದಿನಗಳಿಂದಲೂ ಬಳಕೆಯಲ್ಲಿದೆ. ಮೊದಲು ಇದಕ್ಕೆ ಕೆಂಪು ಸಕ್ಕರೆ ಬೆರೆಸುತ್ತಿದ್ದರಂತೆ.

ಬೀದರ್‌ನ ಉಸ್ಮಾನ್‌ ಗಂಜ್‌ನಲ್ಲಿರುವ ಈ ಲಸ್ಸಿ ಮಳಿಗೆ ಕಳೆದ ಮೂರು ದಶಕಗಳಿಂದಲೂ ಸಿರಿಮಂಡಲ ಗ್ರಾಮದಿಂದ ಒಂದೂವರೆ ಕ್ವಿಂಟಲ್‌ನಷ್ಟು ಹಾಲು ಖರೀದಿಸುತ್ತದೆ. ಒಂದು ಭಾಗ ಹಾಲನ್ನು ಹಿತೋಷ್ಣದಲ್ಲಿ ಕಾಯಿಸಿ, ಕೆನೆತೆಗೆದು, ಇನ್ನೊಂದು ಭಾಗ ಹಾಲಿಗೆ ಹೆಪ್ಪು ಹಾಕಿ, ಬೆಳ್ಮೊಸರು ತಯಾರಿಸುತ್ತಾರೆ. ಮತ್ತೊಂದು ಭಾಗ ಹಾಲನ್ನು ಕಾಯಿಸುತ್ತ, ಕಾಯಿಸುತ್ತ, ಕೈ ಆಡಿಸುತ್ತ ಖೊವಾ ತಯಾರಿಸುತ್ತಾರೆ. ಇಂದಿಗೂ ಸಾಂಪ್ರದಾಯಿಕ ಭಟ್ಟಿ ಒಲೆಗಳಲ್ಲಿಯೇ ಹಾಲು ಕಾಯಿಸುವ ಕೆಲಸ ಸಾಗುತ್ತಿದೆ.

ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಕಾಯಿಸಲು ಸೌದೆ ಒಲೆಗಳಂಥ ಭಟ್ಟಿಗಳೇ ಬೇಕು. ಇಲ್ಲದಿದ್ದಲ್ಲಿ ತಳದಲ್ಲಿ ಚೂರೆ ಚೂರು ಹಾಲು ಹೊತ್ತಿದರೂ ಇಡೀ ಲಸ್ಸಿಯ ಸ್ವಾದದಲ್ಲಿ ಸುಟ್ಟ ವಾಸನೆ ಬರುತ್ತದೆ. ಮೊಸರು ಹುಳಿಯಾಗುತ್ತದೆ. ಖೊವಾ ಸಹ ಕಡುಕಂದು ಬಣ್ಣದೊಂದಿಗೆ ಸುಟ್ಟ ಅಡ್ಡ ವಾಸನೆ ಬರುತ್ತದೆ. ಆ ಕಾರಣಕ್ಕೆ ಇವರು ಹಾಲು ಕಾಯಿಸುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ರಾಜಿ  ಮಾಡಿಕೊಳ್ಳುವುದಿಲ್ಲ.

 75 ವರ್ಷಗಳಿಂದಲೂ ಹಸನ್‌ಪಾಶಾ ಲಸ್ಸಿ ಮಳಿಗೆ ಬೇಸಿಗೆಯಲ್ಲಿ ಜನರ ದಾಹಕಳೆಯಲೆಂದೇ ಕಾರ್ಯನಿರ್ವಹಿಸುತ್ತಿದೆ. ಲಸ್ಸಿ ಬೇಕೆಂದರೆ ಉಸ್ಮಾನ್‌ ಗಂಜ್‌ಗೆ ಜನ ಬರುತ್ತಿದ್ದರು. ಇದೀಗ ಅಲ್ಲಲ್ಲಿ ಇಂಥ ಕೇಂದ್ರಗಳು ಆಗಿವೆ. ಲಸ್ಸಿಗೆ ಒಂದಿನಿತು ಏಲಕ್ಕಿ ಪುಡಿ ಹಾಕುವುದು ಕೆಲವು ಕಡೆ ರೂಢಿಯಲ್ಲಿದೆ. ಇನ್ನೂ ಕೆಲವೆಡೆ ಸೂಪರ್‌ ಡಿಲಕ್ಸ್‌ ಹೆಸರಿನಲ್ಲಿ ಗೋಡಂಬಿ ಮತ್ತು ಬಾದಾಮಿಯ ಚೂರುಗಳನ್ನು ಬೆರೆಸಿ ಕೊಡುತ್ತಾರೆ.

ಹಾಲ್ಮೊಸರಿನ ಮಿಶ್ರಣ ನೊರೆಬರುವಂತೆ ಕಟೆದು ಕೊಡುವ ಲಸ್ಸಿ
ಹಾಲ್ಮೊಸರಿನ ಮಿಶ್ರಣ ನೊರೆಬರುವಂತೆ ಕಟೆದು ಕೊಡುವ ಲಸ್ಸಿ

ಬೀದರ್‌, ಕಲಬುರಗಿ ಮತ್ತು ರಾಯಚೂರಿನ ಕೆಲವು ಕಡೆಯಲ್ಲಿ ಹಾಲಿಗೆ ಪನ್ನೀರನ್ನೂ (ರೋಸ್‌ ವಾಟರ್‌) ಬೆರೆಸುತ್ತಾರೆ. ಈ ಸಾಂಪ್ರದಾಯಿಕ ರುಚಿಗೆ ಆಹ್ಲಾದಕರ ಅನುಭವ ಬರಲಿ ಎಂದೇ ರೂಹ್‌ ಅಫ್ಜಾದಂತಹ ಪಾನೀಯಗಳನ್ನೂ ಬೆರೆಸುತ್ತಾರೆ.

ಆದರೆ, ಬೇಸಿಗೆಯಲ್ಲಿ ಬಾಯಾರದಂಥ, ಬೇಗ ಹಸಿವಾಗದಂಥ, ಹೊಟ್ಟೆಯನ್ನೂ, ತಲೆಯನ್ನೂ ತಂಪಾಗಿಸುವಂಥ ಪಾನೀಯವಾಗಿರುವ ಸಾಂಪ್ರದಾಯಿಕ ಲಸ್ಸಿಗೆ ಈಗಲೂ ಬೇಡಿಕೆ ಕುಂದದೇ ಇರುವುದು, ಅದರ ಗುಣಗಳಿಂದಾಗಿಯೇ. ಸುಲಭವಾಗಿ ಜೀರ್ಣವಾಗುತ್ತದೆ. ಪಿತ್ತವಾಗುವುದಿಲ್ಲ. ಕಣ್ಣುರಿಬರುವುದಿಲ್ಲ. ಅದೇ ಕಾರಣಕ್ಕೆ ಮಧ್ಯಾಹ್ನ ಒಂದು ಲಸ್ಸಿ ಕುಡಿದು ಹೋಗುವುದು, ಮನೆಗೂ ತೆಗೆದುಕೊಂಡು ಹೋಗುವುದು ಈ ಕಡೆ ಸಹಜ ಅಭ್ಯಾಸ.

ಬಿಸಿಲಿನ ತಾಪ ಲಸ್ಸಿ ನೀಗಿಸಿದಂತೆಯೇ ಬದುಕಿನ ತಾಪವನ್ನೂ ಕಷ್ಟಗಳನ್ನೂ ಗುಟುಕರಿಸಿ ನಗಬೇಕು. ಲಸ್ಸಿ ಈಗಲೂ ರುಚಿಕರವಾಗಿ ಬದುಕು ಸವೆಯುವಂತೆ, ಸವಿಯುವಂತೆ ಮಾಡುವುದು ಇದೇ ಗುಣದಿಂದ.

ಲಸ್ಸಿ ಪಂಜಾಬಿಗಳಿಗೇಕೆ ಇಷ್ಟ...

ಗೋದಿ ಮತ್ತು ಸಾಸಿವೆಯನ್ನೇ ಹೆಚ್ಚು ಬೆಳೆಯುವ ಪಂಜಾಬ್‌ನಲ್ಲಿ ಉಳುಮೆ ಮಾಡುವ ಮೊದಲು ಜಮೀನನ್ನು ಹುಲ್ಲುಗಾವಲಾಗಿ ಬಿಡುತ್ತಿದ್ದರಂತೆ. ಆ ಹುಲ್ಲನ್ನು ಮೇವಿಗೆ ಬಳಸಲಾರಂಭಿಸಿದರು. ಮೇವು ಹೆಚ್ಚಿರುವಾಗ ಹೈನು ಸಮೃದ್ಧವಾಗುತ್ತದೆ. ಹೀಗೆ ಸಮೃದ್ಧವಾದ ಹಾಲು ಮೊಸರಿನಿಂದ ಖಾದ್ಯಗಳನ್ನು ತಯಾರಿಸತೊಡಗಿದರು. ಮಡಕೆಯಲ್ಲಿ ಹಾಲು ಹೆಪ್ಪು ಹಾಕಿಟ್ಟರೆ ಗಟ್ಟಿ ಮೊಸರು ಸಿಗುತ್ತದೆ. ತಿನ್ನಲು ರುಚಿಯಾಗಿರುತ್ತದೆ. ಹಾಲಿನೊಂದಿಗೆ ಬೆರೆಸಿ ಕುಡಿದರೆ ಚೈತನ್ಯಪೂರ್ಣವಾಗಿರುತ್ತದೆ ಎಂಬುದು, ಹಳೆಯ ತಲೆಮಾರುಗಳು ಕಂಡುಕೊಂಡ ಸತ್ಯ. ಅದು ತಲೆಮಾರುಗಳಿಂದಾಚೆ ವರ್ಗವಾಗುತ್ತಲೇ ಬಂದು ಈ ಸಾಂಪ್ರದಾಯಿಕ ಜ್ಞಾನ ಈಗ ಪಂಜಾಬಿಗಳು ನೆಲೆಸಿದೆಡೆಯೆಲ್ಲ ಜನಪ್ರಿಯವಾಗಿವೆ. ಆಯಾ ನೆಲದ ಸಂಸ್ಕೃತಿಯೊಂದಿಗೆ ಬೆರೆತು ಹೊಸ ರೂಪವನ್ನೂ ಪಡೆಯುತ್ತಿದೆ.

ಬೇಸಿಗೆಯ ಬೇಗೆ ತಣಿಸುವ ಬಗೆ 
ಬೇಸಿಗೆಯ ಬೇಗೆ ತಣಿಸುವ ಬಗೆ 

ಕಾಲಕ್ಕೆ ತಕ್ಕಂತೆ ಬದಲು...

ಮಕ್ಕಳನ್ನು ಲಸ್ಸಿ ರುಚಿಗೆ ಸೆಳೆಯಲು ಇದೀಗ ಲಸ್ಸಿಗೆ ವೆನಿಲಾ ಐಸ್‌ಕ್ರೀಂ ಬೆರೆಸಿ, ಚಾಕ್ಲೆಟ್‌ ಸಿರಪ್‌ ಸುರಿದು ನೀಡಲಾಗುತ್ತದೆ. ಜಿಮ್‌ಗೆ ಹೋಗಿ ಬರುವ ಯುವಜನಾಂಗ ಬಾದಾಮಿ ಹೇರಳವಾಗಿರಬೇಕು ಎಂದು ಬಯಸುತ್ತಾರೆ. ಒಣಹಣ್ಣುಗಳಿರುವ ಪ್ರೀಮಿಯಂ ಲಸ್ಸಿ, ಐಸ್‌ಕ್ರೀಂ ಇರುವ ಲಸ್ಸಿಗಳೆಲ್ಲ ಮೂವತ್ತರಿಂದ ಎಂಬತ್ತು ರೂಪಾಯಿಗಳವರೆಗೂ ಸಿಗುತ್ತವೆ. 

ಆದರೆ ಈಗಲೂ ಲಸ್ಸಿ ಪ್ರಿಯರು ಲಸ್ಸಿ ಅಂದ ತಕ್ಷಣ, ಉಸ್ಮಾನ್‌ ಗಂಜಿನತ್ತಲೇ ಪಯಣ ಬೆಳೆಸುವುದು, ಸಿರಿಮಂಡಲದ ಸಿರಿಯಂತಿರುವ ಹಾಲಿನ ಲಸ್ಸಿಗೆ.

ಹಾಲು ಮೊಸರಿನ ನೊರೆಯೊಂದಿಗೆ ಖೊವಾ ರುಚಿ
ಹಾಲು ಮೊಸರಿನ ನೊರೆಯೊಂದಿಗೆ ಖೊವಾ ರುಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT