ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುವ ಪ್ರಣಾಳಿಕೆ: ಚುನಾವಣಾ ಹಾಡಿನ ಜಾಡು...

Last Updated 15 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ರಾಜ ಮಹಾರಾಜರ ಕಾಲದಲ್ಲಿ ಹುಟ್ಟಿಕೊಂಡ ಲಾವಣಿಗಳು ಈಗಲೂ ಜನರ ನಾಲಗೆ ಮೇಲೆ ನಲಿದಾಡುತ್ತಿವೆ. ಸ್ವಾತಂತ್ರ್ಯ ಸಂಗ್ರಾಮದ ಜೊತೆಜೊತೆಗೆ ಬಂದ ಹೋರಾಟದ ಹಾಡುಗಳು ಇನ್ನೂ ಸಮರ ಸಾರುತ್ತಲೇ ಇವೆ. ಅನಾಮಿಕ ಜನಪದ ಗೀತೆಗಳು ಜನರ ಬಾಯಿಯಿಂದ ಬಾಯಿಗೆ ಹರಿಯುತ್ತಿವೆ. ವಚನ, ತತ್ವಪದ, ಕೀರ್ತನೆ, ದೇವರನಾಮ, ಗಮಕಗಳು ಎಲ್ಲಾ ಕಾಲಕ್ಕೂ ಸಮಾಜವನ್ನು ತಿದ್ದಿ ತೀಡುತ್ತಾ ಬಂದಿವೆ. ಸಿನಿಮಾ ಹಾಡುಗಳು ಕೂಡ ಜನರ ನೆನಪಿನಂಗಳದಲ್ಲಿ ಸಾರ್ವಕಾಲಿಕವಾಗಿ ಮನೆ ಮಾಡಿಕೊಂಡಿವೆ. ಆದರೆ, ಹುಟ್ಟುತ್ತಲೇ ಸಾಯುವ ಕೆಲ ಹಾಡುಗಳು ಕ್ಷಣಿಕವಾಗಿ ಜನರ ಗಮನ ಸೆಳೆಯುತ್ತವೆ, ತನ್ನಿಮಿತ್ತ ಹಾಡುಗಳಿವು. ಆಯಾ ಕಾಲದಲ್ಲಷ್ಟೇ ಅಬ್ಬರಿಸಿ, ಬೊಬ್ಬಿರಿದು ಮರೆಯಾಗುತ್ತವೆ. ಸಾರ್ವಕಾಲಿಕವಾಗಿ ಉಳಿಯುವ ಶಕ್ತಿ ಆ ಗೀತೆಗಳಿಗಿಲ್ಲ. ಅವೇ ಚುನಾವಣೆಯ ಹಾಡುಗಳು.

ಈಗ ಎಲ್ಲೆಲ್ಲೂ ಚುನಾವಣೆಯ ಹಾಡುಗಳೇ ಮೊಳಗುತ್ತಿವೆ. ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ವರ್ಣಿಸುವ ಗೀತೆಗಳು ಕಿವಿಗಡಚುತ್ತಿವೆ. ಹಾಡುಗಳ ಮೂಲಕ ಮತದಾರರ ಮನಮುಟ್ಟುವ ಪ್ರಯತ್ನ ಎಲ್ಲಾ ಪಕ್ಷಗಳಲ್ಲಿ ನಡೆಯುತ್ತಿದೆ.

ಶಾಸಕರ ಸಾಧನೆಗಳನ್ನು ಗೀತೆಗಳ ಮೂಲಕ ವರ್ಣಿಸಲಾಗುತ್ತಿದೆ. ಯುವ ಮುಖಂಡರು ತಮ್ಮ ಕನಸು, ಕನವರಿಕೆಗಳನ್ನು ಹಾಡುಗಳಲ್ಲಿ ಕಟ್ಟಿಕೊಡುತ್ತಿದ್ದಾರೆ. ಪ್ರಣಾಳಿಕೆಯೇ ಹಾಡುಗಳಾಗಿವೆ. ಬಂಡವರ ಬಂಧು, ಆಪತ್ಬಾಂಧವ, ಅಭಿವೃದ್ಧಿಯ ಹರಿಕಾರ, ಅನಾಥ ರಕ್ಷಕ, ಜನ ಸೇವಕ, ದಣಿವರಿಯದ ನಾಯಕ, ಸೋಲಿಲ್ಲದ ಸರದಾರ, ಆಧುನಿಕ ಭಗೀರಥ, ಜನಸೇವೆ ಜನಾರ್ದನ ಸೇವೆ, ಜನರೇ ದೇವರು, ಮತದಾರ ಪ್ರಭುಗಳು ಮುಂತಾದ ಚುನಾವಣಾ ಭಾಷಣದ ಗುಣವಿಶೇಷಣಗಳೇ ಈಗ ಹಾಡಾಗಿವೆ.

ಪ್ರತಿ ಹಾಡಿಗೂ ಹಿನ್ನೆಲೆ ಇರುತ್ತದೆ, ಸಾಹಿತ್ಯ–ಸಂಗೀತ–ಗಾಯನ ಹಾಡಿನ ಮೂಲ. ಆದರೆ ಚುನಾವಣೆ ಹಾಡುಗಳಿಗೆ ಅಪ್ಪ ಇಲ್ಲ, ಅಮ್ಮ ಇಲ್ಲ. ಸಾಹಿತ್ಯ ಯಾರದು, ಸಂಗೀತ ಸಂಯೋಜಿಸಿದವರು ಯಾರು, ಗಾಯಕರು ಯಾರು ಎಂಬುದನ್ನು ಕೇಳುವವರೇ ಇಲ್ಲ. ‘ಇದು ನನ್ನ ಹಾಡು’ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಸಾಹಿತಿ, ಸಂಗೀತ ಸಂಯೋಜಕ, ಗಾಯಕರೂ ವಿರಳಾತಿ ವಿರಳ. ಇದನ್ನು ಅನಾಮಿಕರ ಹಾಡೆಂದೂ ಕರೆಯಬಹುದು.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳು ಚುನಾವಣಾ ಹಾಡುಗಳ ಹಿಂದೆ ಬಿದ್ದಿವೆ. ರಾಜ್ಯ ಮಟ್ಟದ ಮುಖಂಡರು, ಮುಖ್ಯಮಂತ್ರಿ ಹುದ್ದೆಯ ಆಸೆ ಹೊತ್ತವರು ತಮ್ಮ ಕುರಿತಾದ ಹಾಡುಗಳನ್ನು ಪಕ್ಷದ ವತಿಯಿಂದಲೇ ಮಾಡಿಸಿದ್ದಾರೆ. ಆಯಾ ಪಕ್ಷಗಳ ಸಾಂಸ್ಕೃತಿಕ, ಮಾಧ್ಯಮ ವಿಭಾಗದ ಮುಖ್ಯಸ್ಥರು ಚುನಾವಣಾ ಹಾಡುಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹಾಡಿನ ಜೊತೆಗೆ ವಿಡಿಯೊ ಕೂಡ ಸೇರಿಸಿ ಆಕರ್ಷಕವಾಗಿಸಿದ್ದಾರೆ. ವೈಭವಯುತವಾಗಿ ಶೂಟಿಂಗ್‌ ಮಾಡಿಸಿ ಮತದಾರ ಪ್ರಭುಗಳ ಮನಸೂರೆಗೊಳ್ಳುತ್ತಿದ್ದಾರೆ.

ರಾಜ್ಯ ಮುಖಂಡರಿಗೆ ಖ್ಯಾತನಾಮ ಸಾಹಿತಿಗಳೇ ಹಾಡು ಬರೆದಿದ್ದಾರೆ, ಪ್ರಖ್ಯಾತ ಸಂಗೀತ ನಿರ್ದೇಶಕರೇ ಸ್ವರ ಸಂಯೋಜನೆ ಮಾಡಿದ್ದಾರೆ, ಪ್ರಸಿದ್ಧ ಗಾಯಕರೇ ಹಾಡಿದ್ದಾರೆ. ಆದರೆ, ಅವರು ತಮ್ಮ ಹೆಸರನ್ನು ಎಲ್ಲೂ ಬಳಸದಂತೆ ಷರತ್ತು ಹಾಕಿದ್ದಾರೆ. ಪ್ರತಿ ಪಕ್ಷಕ್ಕೂ ಪ್ರತ್ಯೇಕ ಡಿಜಿಟಲ್‌, ಸೋಷಿಯಲ್‌ ಮೀಡಿಯಾ, ಐಟಿ ವಿಭಾಗಗಳಿದ್ದು, ಅಲ್ಲಿಯ ತಂತ್ರಜ್ಞರು ಎಲ್ಲವನ್ನೂ ನಿರ್ವಹಣೆ ಮಾಡುತ್ತಿದ್ದಾರೆ.

‘ಈಗ ರಾಜ್ಯದ ಬಹುತೇಕ ಸ್ಟುಡಿಯೊಗಳಲ್ಲಿ ಚುನಾವಣೆ ಹಾಡುಗಳ ರೆಕಾರ್ಡಿಂಗ್‌ ಹೆಚ್ಚು ನಡೆಯುತ್ತಿದೆ. ಟ್ರ್ಯಾಕ್‌ ಸಿಂಗರ್‌ಗಳು, ರಂಗಭೂಮಿ ಕಲಾವಿದರು, ಸುಗಮ ಸಂಗೀತ ಗಾಯಕರು ಚುನಾವಣೆ ಹಾಡಿಗೆ ಧ್ವನಿಯಾಗುತ್ತಿದ್ದಾರೆ. ಸಾಮಾನ್ಯ ಹಾಡಿಗೆ ಪಡೆಯುವ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ದೊರೆಯುತ್ತಿದ್ದು, ಗಾಯಕರಿಗೆ ಇದು ಸುವರ್ಣ ಕಾಲವಾಗಿದೆ’ ಎಂದು 10ಕ್ಕೂ ಹೆಚ್ಚು ಚುನಾವಣೆ ಹಾಡು ಹಾಡಿರುವ ಯುವ ಗಾಯಕರೊಬ್ಬರು ಹೆಸರು ಬರೆಯಕೂಡದು ಎಂಬ ಷರತ್ತಿನೊಂದಿಗೆ ತಿಳಿಸಿದರು.

ರಾಜ್ಯಮಟ್ಟದ ಮುಖಂಡರ ಹಾಡುಗಳಿಗೆ ಮೂಲ ಸಾಹಿತ್ಯ, ಮೂಲ ಸಂಗೀತ ಸಂಯೋಜನೆ ಇದೆ. ಆದರೆ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಹರಿದಾಡುತ್ತಿರುವ ಬಹುತೇಕ ಹಾಡುಗಳೆಲ್ಲವೂ ಸಿನಿಮಾದಲ್ಲಿ ಪ್ರಸಿದ್ಧಿ ಪಡೆದ ಟ್ರ್ಯಾಕ್‌ಗಳೇ ಆಗಿವೆ. ಶಾಸಕರ, ಮುಖಂಡರ ಅಭಿಮಾನಿಗಳು, ಸ್ಥಳೀಯ ಕಲಾವಿದರು ಈ ಟ್ರ್ಯಾಕ್‌ಗಳಿಗೆ ಹೊಗಳಿಕೆಯ ಪದ ಪೋಣಿಸಿ ಜಾಲತಾಣಗಳಲ್ಲಿ ಹಂಚುತ್ತಿದ್ದಾರೆ. ಸ್ಟುಡಿಯೋ ರೆಕಾರ್ಡಿಂಗ್‌ ಮಾತ್ರವಲ್ಲದೆ ಆ್ಯಪ್‌ಗಳನ್ನು ಬಳಸಿ ಸ್ಥಳದಲ್ಲೇ ಮಿಕ್ಸಿಂಗ್‌ ಮಾಡಲಾಗುತ್ತಿದೆ.
ಮೈಸೂರಿನ ಸೀಮೆಯಲಿ
ಹುಟ್ಟಿ ಬಂದಾ ಗಂಡುಗಲಿ
ಜನಮೆಚ್ಚಿದ ಧೀಮಂತ
ಮೈಸೂರು ಹುಲಿಯ ಸಿದ್ದರಾಮಣ್ಣ...

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತಾದ ಹಾಡುಗಳು ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ವಿವಿಧ ಪಕ್ಷಗಳ ನಾಯಕರ ಹಾಡುಗಳನ್ನೂ ಹಿಂದಿಕ್ಕಿ ಸಿದ್ದರಾಮಯ್ಯ ಹಾಡುಗಳು ಓಡುತ್ತಿವೆ. ‘ಹೌದು ಹುಲಿಯಾ, ಟಗರು’ ಪದಗಳಿರುವ ನೂರಾರು ಹಾಡುಗಳಿವೆ. ಸಿನಿಮಾ ಟ್ರ್ಯಾಕ್‌ ಮಾತ್ರವಲ್ಲದೇ ಜನಪದ ಗೀತೆ, ಉತ್ತರ ಕರ್ನಾಟಕದ ಜನಪದ ಶೈಲಿ ಗೀತೆ, ರಂಗಗೀತೆ ಬಂದಿವೆ. ಅಷ್ಟೇ ಅಲ್ಲದೇ ಸಿದ್ಧಿ, ಬುಡಕಟ್ಟು ಹಾಡುಗಳೂ ಸಿದ್ದರಾಮಯ್ಯರನ್ನು ಹೊಗಳುತ್ತಿವೆ.

ಸಿದ್ದರಾಮಯ್ಯ ಜೀವನಾಧಾರಿತ ‘ಬಾರಯ್ಯ ಸಿದ್ದರಾಮಯ್ಯ’ ವಿಡಿಯೊ ಗೀತೆ ಜನರ ಮೆಚ್ಚುಗೆ ಗಳಿಸಿದ್ದು, ಇದನ್ನು ಅವರ ಅಭಿಮಾನಿ ಶ್ರೀಧರ್‌ ರಾವ್‌ ನಿರ್ಮಿಸಿದ್ದಾರೆ. ತೆಲುಗಿನಲ್ಲಿದು ‘ರಾವಯ್ಯ ಸಿದ್ದರಾಮಯ್ಯ’ ಆಗಿದ್ದು ಆಂಧ್ರ, ತೆಲಂಗಾಣ ಗಡಿಯ ಮತದಾರರನ್ನು ಸೆಳೆಯಲು ಬಳಸಲಾಗುತ್ತಿದೆ.

ಕೆಪಿಸಿಸಿ ಸಾಂಸ್ಕೃತಿಕ ಘಟಕದ ಜವಾಬ್ದಾರಿ ಹೊತ್ತಿರುವ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಕಾಂಗ್ರೆಸ್‌ನ ಬಹುತೇಕ ಹಾಡುಗಳನ್ನು ಸಂಯೋಜನೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಮೇಕೆದಾಟು ಪಾದಯಾತ್ರೆಯ ಗೀತೆಗಳು, ಪ್ರಜಾಧ್ವನಿ ಯಾತ್ರೆ, ರಾಹುಲ್‌ ಗಾಂಧಿ ಭಾರತ್‌ ಜೋಡೊ ಯಾತ್ರೆಯ ಗೀತೆ ರೂಪಿಸುವ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದಾರೆ.
ಈ ಕುರಿತು ಸಾಧುಕೋಕಿಲ ಅವರೊಂದಿಗೆ ಮಾತನಾಡಲು ಯತ್ನಿಸಿದಾಗ ಮಾಹಿತಿ ಕೊಡಲು ಅವರು ಮುಜುಗರಪಟ್ಟರು. ‘ಗಿಚ್ಚಿ ಗಿಲಿಗಿಲಿ ಶೂಟಿಂಗ್‌ನಲ್ಲಿ ಇದ್ದೇನೆ, ನಾನೇ ಕರೆ ಮಾಡಿ ಮಾತನಾಡುತ್ತೇನೆ’ ಎಂದರು. ಹಲವು ಬಾರಿ ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಜೈಜೈಜೈ ಕುಮಾರಣ್ಣ
ಬಡವರ ಬಂಧು ನಮ್ಮ ಕುಮಾರಣ್ಣ
ಮತ್ತೊಮ್ಮೆ ನೀನು ಮುಖ್ಯಮಂತ್ರಿ ಆಗಬೇಕಣ್ಣ...

ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕುರಿತಾದ ಹಾಡುಗಳಿಗೇನೂ ಕೊರತೆ ಇಲ್ಲ. ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕುಮಾರಸ್ವಾಮಿ ಕುರಿತಾದ ಹಾಡುಗಳು ಹೆಚ್ಚು ಹರಿದಾಡುತ್ತಿವೆ. ಎಚ್‌ಡಿಕೆ ಅಭಿಮಾನಿಗಳು ಸ್ಥಳೀಯವಾಗಿ ಸಿನಿಮಾ ಗೀತೆಗಳ ಟ್ರ್ಯಾಕ್‌ಗಳಿಗೆ ಹಾಡಿ, ಹಂಚಿಕೊಂಡಿದ್ದಾರೆ.
’ಪಂಚರತ್ನ‘ ಯಾತ್ರೆ ಕುರಿತಾದ 6 ವಿಶೇಷ ಹಾಡುಗಳನ್ನು ಜೆಡಿಎಸ್‌ ಪಕ್ಷದ ವತಿಯಿಂದಲೇ ನಿರ್ಮಾಣ ಮಾಡಿಸಲಾಗಿದೆ. ಸಾಹಿತಿ, ಚಿತ್ರ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಸಾಹಿತ್ಯ ಬರೆದು, ಸ್ವರ ಸಂಯೋಜನೆಯನ್ನೂ ಮಾಡಿದ್ದಾರೆ.
‘ನಾನು ಕುಮಾರಸ್ವಾಮಿ ಅವರೊಬ್ಬರಿಗೆ ಮಾತ್ರ ಹಾಡು ಮಾಡಿಲ್ಲ, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರಿಗೂ ಹಾಡು ಬರೆದು ಕೊಟ್ಟಿದ್ದೇನೆ. ಈಗ ಜನಾರ್ದನ ರೆಡ್ಡಿ ಅವರ ಬಗ್ಗೆ ಬರೆಯುತ್ತಿದ್ದೇನೆ. ನಾಯಕರ ಸಾಧನೆಗಳನ್ನು ಹಾಡಿನ ಮೂಲಕ ವರ್ಣಿಸುವುದು ತಪ್ಪೇನೂ ಅಲ್ಲ. ಸಂಗೀತ ಪ್ರಭಾವಿ ಮಾಧ್ಯಮವಾಗಿದ್ದು ಅದನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ’ ಎಂದು ನಾಗೇಂದ್ರ ಪ್ರಸಾದ್‌ ಹೇಳಿದರು.
ನಾಟ ನಾಟು ನಾಟು ನಾಟು
ಮೋದಿ ಮೋದಿ ಮೋದಿ ಮೋದಿ
ನಮೋ ಎಂಬ ದಿವ್ಯನಾಮ ಕರುನಾಡಿಗೆ ಒಂದು ವರ

ಶಿವಮೊಗ್ಗಕ್ಕೆ ಏರ್‌ ಪೋರ್ಟು‌, ಮೈಸೂರಿಗೆ ಹೊಸ ರೂಟು
ಅವರೇನೆ ಮೋದಿ, ಮಾಡ್ತಾರೆ ಮೋಡಿ, ಎಲ್ಲರೂ ಹೇಳಿ
ಮೋದಿ ಮೋದಿ ಮೋದಿ....
ಆಸ್ಕರ್‌ ಪ್ರಶಸ್ತಿ ಪಡೆದ ತೆಲುಗಿನ ಗೀತೆ ನಾಟು ನಾಟು ಗೀತೆ ಈಗ ‘ಮೋದಿ ಮೋದಿ’ಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿಯು ಉಳಿದೆಲ್ಲಾ ಪಕ್ಷಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಚುನಾವಣೆ ಗೀತೆಗಳನ್ನು ಬಳಸಿಕೊಂಡಿದೆ. ಪ್ರತಿ ಗೀತೆಗೆ ಮನಸೆಳೆಯುವ ಕತೆಗಳನ್ನೂ ಸೇರಿಸಲಾಗಿದೆ. ವಿಶೇಷವೆಂದರೆ ಹಾಡುಗಳಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೆಚ್ಚು ವೈಭವೀಕರಿಸಲಾಗಿದೆ.

’ನಾಟು ನಾಟು‘ ಹಾಡಿಗೆ ನೃತ್ಯವನ್ನೂ ಸಂಯೋಜಿಸಲಾಗಿದೆ. ಯುವ ಮತದಾರರನ್ನೇ ಗುರಿಯಾಗಿಸಿಕೊಂಡು ‘ಯುವ ಕರ್ನಾಟಕ’ ಅಡಿ ಸಂಗೀತ, ನೃತ್ಯ ಸಂಯೋಜಿಸಲಾಗಿದೆ. ಮೋದಿ ಅವರನ್ನು ಹೊಗಳುವ ರ್‍ಯಾಪ್‌, ರಾಕ್‌ ಗೀತೆಗಳೂ ಯುವಜನರ ಮನಸೂರೆಗೊಳ್ಳುತ್ತಿವೆ. ‘ಬಿಜೆಪಿ ಭರವಸೆ’ ಶೀರ್ಷಿಕೆ ಅಡಿ ಸಿನಿಮಾ, ಜನಪದ ಗೀತೆಗಳನ್ನು ಸಂಯೋಜಿಸಲಾಗಿದೆ.
ಬಿಜೆಪಿ ಗೀತೆ ಹಾಡಿರುವ ಗಾಯಕರನ್ನು ಅವರ ಧ್ವನಿಯ ಆಧಾರದ ಮೇಲೆ ಗುರುತಿಸಬಹುದು. ಆದರೆ ಸಾಹಿತ್ಯ, ಸಂಗೀತ ಸಂಯೋಜಿಸಿದವರ ಹೆಸರು ಗೋಪ್ಯವಾಗಿವೆ. ‘ಖಾಸಗಿ ಏಜೆನ್ಸಿಯೊಂದು ಗೀತೆಗಳನ್ನು ರೂಪಿಸುತ್ತಿದೆ. ನಾವು ಅವರಿಗೆ ವಿಷಯ ಕೊಡುತ್ತೇವೆ. ಎಲ್ಲವನ್ನೂ ಏಜೆನ್ಸಿಯವರೇ ಮಾಡಿಕೊಡುತ್ತಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ನಿತಿನ್‌ ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT