ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳ್ಳಾನುಚ್ಚು

Last Updated 5 ಜನವರಿ 2019, 19:31 IST
ಅಕ್ಷರ ಗಾತ್ರ

ವಿಜಯಪುರ ಎಂಬ ಜಿಲ್ಲೆಯಲ್ಲಿ, ಸಿಂದಗಿಯೆಂಬೋ ತಾಲ್ಲೂಕಿನಲ್ಲಿ, ಹಳೆಯ ಬಜಾರಿನ ರಸ್ತೆಯಲ್ಲಿರೋ ಕುದುರೆ ಮುಖವಿರುವ ತೊಲೆಬಾಗಿಲ ಮನೆಯೊಳಗೆ ಹುಟ್ಟಿದ ನಾನು, ಬಾಲ್ಯದ ಅನೇಕ ಅನುಭವ ಮತ್ತು ನೆನಪುಗಳನ್ನು ನನ್ನ ಬರವಣಿಗೆಗೆ ಬಟ್ಟಿ ಇಳಿಸಿಕೊಂಡಿರುವೆ. ಹೀಗಾಗಿ, ನನ್ನೂರಿನ ಹತ್ತಾರು ಸಂಗತಿಗಳು ನನಗೆ ಹೊತ್ತಿಗೊದಗಿಬಂದಿವೆ. ಅವುಗಳಲ್ಲಿ ಈಗ ನಾನು ಹೇಳಹೊರಟ ಹುಳ್ಳಾನುಚ್ಚು ಕೂಡ ಒಂದು.

ಅಪರಂಪಾರ ಆಹಾರ ಸಂಸ್ಕೃತಿ ಹೊಂದಿರುವ ನಮ್ಮೂರಿನ ನನ್ನ ಮನೆಯಲ್ಲಿ ಅವ್ವಳ ಕೈಗುಣದಲ್ಲಿ ತಯಾರಾಗುತ್ತಿದ್ದ ಹುಳ್ಳಾನುಚ್ಚು ವಾರಗಟ್ಟಲೆ ಕೃಷಿ ಕುಟುಂಬದ ಕಾಯಕ ಜೀವಿಗಳಿಗೆ ಈಡಾಗುತ್ತಿತ್ತು. ಹೊಲದಲ್ಲಿ ಕೆಲಸ ಮಾಡುವವರ ಊಟದ ಹೊಡತ ಜಾಸ್ತಿ. ದಿನಾಲು ಹೊಲಕ್ಕೆ ಬುತ್ತಿ ಕಟ್ಟುವುದೇ ಒಂದು ಸಾಹಸ. ನನ್ನ ಮನೆಯಲ್ಲಂತೂ ಕೃಷಿಯೇ ಒಂದು ಸಂಸ್ಕೃತಿ. ಹೀಗಾಗಿ ಮನೆಯ ತುಂಬಾ ಎಲ್ಲೆಂದರಲ್ಲಿ ಕೃಷಿ ಪರಿಕರಗಳೇ ತುಂಬಿರುತ್ತಿದ್ದವು. ಎತ್ತಿನ ಹಗ್ಗ, ಮಗಡ, ದಿಂಡು, ಕುಡಾ, ನೇಗಿಲು, ನೊಗ, ಬಾರುಕೋಲು, ಚಿಕ್ಕಾ, ಲೊಗ್ಗಾಣಿ ಬೆಡಗ, ಸಲಿಕೆ, ಗುದ್ದಲಿ ಹೀಗೆ ನಮ್ಮದು ಪಕ್ಕಾ ಕೃಷಿ ಜೀವನ ವಿಧಾನ ಎನ್ನಲಿಕ್ಕೆ ನಮ್ಮ ಮನೆಯಲ್ಲಿದ್ದ ಸಾಮಾನು, ಸರಂಜಾಮುಗಳೇ ಸಾಕ್ಷಿಯಾಗಿದ್ದವು.

ನಾವೆಲ್ಲಾ ನೇರವಾಗಿ ಕೃಷಿಯಲ್ಲೇ ತೊಡಗಿಸಿಕೊಂಡವರು. ಅವ್ವಳಂತೂ ಥೇಟ್ ಲಂಕೇಶರ ಅವ್ವಳೇ. ಲಾಭವೋ, ನಷ್ಟವೋ ಸದಾ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವವಳು. ಹೊಲದಲ್ಲಿ ಬೆಳೆ ಇಲ್ಲದಿರುವಾಗಲೂ ಬಟ್ಟೆ ತೊಳೆಯುವ ನೆಪದಲ್ಲಿ ದಿನಾಲೂ ಹೊಲಕ್ಕೆ ತೆರಳುವವಳೇ. ಕೈಲಾದಷ್ಟು ಕಸ ಕೆತ್ತುವವಳೇ. ನೋಡಲು ಒಂಟೆಲುವಿನವಳಾದರೂ ಇಡೀ ಹೊಲದ ಕಸವನ್ನು ಒಬ್ಬಳೇ ಕೆತ್ತಿದ ಖ್ಯಾತಿ ಅವಳದು. ಇಂಥಾ ಅವ್ವ ನಸುಕಿನಲ್ಲಿ ಎದ್ದವಳೇ ಮನಿ ಮಂದಿಗಾಗುವಷ್ಟು ರೊಟ್ಟಿ ಬಡಿದು, ಒಂದು ತರದ ವಣಿಗೆ ಮಾಡಿ, ಕಾರಬ್ಯಾಳಿ ತಯಾರಿಸಿ ಕಿಟ್ಲಿಗೆ ಸುರಿದು ಇಡುವವಳು. ಬೆಳಿಗ್ಗೆ ಏಳು ಗಂಟೆ ಹೊಡೆಯುತ್ತಿರುವಂತೆ ನ್ಯಾರಿ ಬುತ್ತಿ ಕಟ್ಟಿ ಕಳಿಸಿದ ಮೇಲೆಯೇ ತುಸು ಹಗುರಾಗುತ್ತಿದ್ದಳು.

ನನ್ನೂರಿನ ಬಿಸಿಲು ಅಂತಿಂಥಾ ಬಿಸಿಲಲ್ಲ. ಸೂರ್ಯ ನೆತ್ತಿಯ ಮೇಲೆ ಬರುವ ಮೊದಲೇ ಥಕಥಕ ಅಂಥ ಬಿಸಿಲುಕುದುರೆ ಕುಣಿಸೋ ಬಿಸಿಲು. ಝಳ ಅಂದ್ರ ಝಳ. ಮುಖಕ್ಕೆ ಒತ್ತರಿಸಿ ಹೊಡಿಯುವಂತಿರುತ್ತಿತ್ತು. ಯಾವ ನೆರಳಿಗೂ ಖರೆ ಖರೆ ತಂಪು ನೀಡುವ ತಾಕತ್ತಿರುತ್ತಿರಲಿಲ್ಲ. ನಮ್ಮೂರಲ್ಲಾಗ ಕಲ್ಲು ಮತ್ತು ಗಚ್ಚಿನ ಮನೆಗಳೇ ಜಾಸ್ತಿ. ಕಟ್ಟಿಗೆಯ ತೊಲೆಯ ಜಂತಿ ಇರುವ ಮನೆಗಳೇ ಹೆಚ್ಚಿದ್ದವು.

ಆ ತರಹದ ಮನೆಗಳು ಬೇಸಿಗೆಯಲ್ಲಿ ಹವಾ ಮಹಲ್ ಥರಾ, ನಮ್ಮ ಮನೆಯೂ ಹಾಗೆಯೇ ಇತ್ತು. ಹಾಗಿರುವಾಗಲೂ ಸಮಾಧಾನವಾಗುತ್ತಿರಲಿಲ್ಲ. ಬಿಸಿಲು ಧಗೆಯೊಂದಿಗೆ ದೋಸ್ತಿ ಮಾಡಿಕೊಂಡಂತಿರುವ ತಿಗಣೆಗಳದ್ದು ಒಂದು ಕಾಟ. ಆಗ ಈಗಿರುವ ಸೊಳ್ಳೆಗಳಿರಲಿಲ್ಲ. ಇದ್ದದ್ದು ನೊಣ ಮತ್ತು ತಿಗಣೆ. ನೊಣಕ್ಕಿಂತಲೂ ತಿಗಣೆಯದೇ ದೊಡ್ದ ಕಿರಿಕಿರಿ. ಆಗಿನ್ನೂ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಇದ್ದದ್ದು ಒಂದು ಕಂದೀಲು. ಕತ್ತಲಾಗುವುದನ್ನೇ ಕಾಯುತ್ತಿದ್ದ ಈ ತಿಗಣೆಗಳು ಕಂಬಗಳ ಸಂದಿಯಿಂದ ಬುಳು ಬುಳು ಹರಿದು ಹಾಸಿಗೆ ಸೇರಿದರೆ ಮುಗೀತು. ನಿಮ್ಮ ನಿದ್ದೆಯನ್ನು ಮಣ್ಣು ಕೊಟ್ಟಂತೆಯೇ.

ರಾತ್ರಿಯಿಡೀ ಪರಪರ ಕೆರೆಯುತ್ತ, ಮಗ್ಗಲು ಹೊರಳಿಸುವಲ್ಲಿಯೇ ಸುಸ್ತಾಗಬೇಕಿತ್ತು. ಅಪ್ಪ ಸಿಡಿಮಿಡಿಗೊಂಡು ಲೊಚಗುಟ್ಟಿದರೆ, ಅವ್ವ ಎದ್ದು ಕುಳಿತು ತಲೆ ಹತ್ತಿರವಿರುವ ಕಡ್ದಿಪೆಟ್ಟಿಗೆ ಮೂಲಕ ಚಿಮಣಿಗೆ ಬೆಳಕು ತುಂಬಿ, ಕಂಬಗಳ ಸಂದಿಯಲ್ಲಿ ರಕ್ತ ಕುಡಿಯಲು ಪಹಳಿ ಹಚ್ಚಿರುವವರಂತೆ ಸಾಲಾಗಿ ನಿಂತ ತಿಗಣೆಗಳನ್ನು ಚಿಮಣಿ ದೀಪದ ತುದಿಯಲ್ಲಿ ಕಾಯಿಸಿದ ಸೂಜಿಯ ಮೊನೆಯಿಂದ ಚಟ್ ಪಟ್ ಎಂದು ಒಂದಷ್ಟು ತಿಗಣೆಗಳನ್ನು ಹುರಿದ ನಂತರವೇ ಮಲಗುವವಳು. ಇದು ಒಂದು ದಿನದ ಕತೆಯಲ್ಲ. ಮತ್ತೆ ಮತ್ತೆ ಹೀಗೆ ಎದ್ದು ಕುಳಿತು ತಿಗಣೆಗಳ ಕಾಟಕ್ಕೆ ಅವ್ವ ಮನೆ ಔಷಧಿಯಾಗುತ್ತಿದ್ದಳು.

ಬೇಸಿಗೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುವುದೇ ದೊಡ್ಡ ಸುಖ ಎನ್ನುವಂತಿರುತ್ತಿತ್ತು. ಹಾಗಾಗಿ, ಮನೆಯೊಳಗಡೆ ಮಲಗುವವರು ಕೇವಲ ಗರ್ಭಿಣಿಯರು, ಬಾಣಂತಿಯರು ಬಿಟ್ಟರೆ ಹೊಸದಾಗಿ ಮದುವೆಯಾದವರು. ಮಿಕ್ಕವರೆಲ್ಲಾ ಬಹುತೇಕವಾಗಿ ಮಾಳಿಗೆಯ ಮೇಲೆ, ಅಂಗಳದಲ್ಲಿ ಇಲ್ಲವೇ ಮನೆಯ ಹೊರಗಿನ ಕಟ್ಟೆ ಹೀಗೆ ಬಯಲುಗಳಲ್ಲಿ ಮಲಗುವವರೇ ಹೆಚ್ಚು. ಹಾಗೆ ಮಲಗುವ ಜಾಗವನ್ನು ಪ್ರತಿನಿತ್ಯ ನೀರು ಸಿಂಪಡಿಸಿ ತಣ್ಣಗಾಗುವಂತೆ ಮಾಡಿ ಹಾಸಿದ ಮೇಲೂ ಕಾದ ಆ ನೆಲ ಮಧ್ಯರಾತ್ರಿಯವರೆಗೂ ಬಿಸಿ ತೇಗು ಬಿದುತ್ತಿತ್ತು.

ಇನ್ನು ಮಾವಿನ ಹಣ್ಣಿನ ಸೀಕರಣೆ ಮತ್ತು ಚಪಾತಿ ಉಂಡವರ ಗೋಳಂತೂ ಕೇಳುವುದೇ ಬೇಡ. ಕುಡಿಯಲು ಸಾಕಷ್ಟು ನೀರಿಲ್ಲದಿರುವ ನಡುವೆ, ಆ ಊಟದ ಹೊಡೆತಕ್ಕೆ ಮತ್ತೆ ಮತ್ತೆ ಬಾಯಾರುವ, ದಣಿವಾಗುವ ಫಜೀತಿಯ ನಡುವೆಯೂ ಎರಡೆರಡು ಗಂಗಾಳ ಸೀಕರಣೆ ಮತ್ತು ಐದಾರು ಚಪಾತಿ ತಿಂದು ಅಬ್... ಅನ್ನುವವರ ಕೊರತೆಯಿರಲಿಲ್ಲ.

ಮಾವಿನ ಹಣ್ಣಿನ ಸುಗ್ಗಿಯಲ್ಲಿ ಹೊಟ್ಟೆ ಹೈರಾಣಾದರೂ ಲೆಕ್ಕಿಸದೇ ಕಟಿಯುವವರೇ ಆಗ ಹೆಚ್ಚಿದ್ದರು. ಅವ್ವ ಸ್ವಾದಿಷ್ಟ ಅಡುಗೆ ಮಾಡುವಲ್ಲಿ ಫೇಮಸ್ಸು. ಮನೆಯಲ್ಲಿ ಬಡತನದ ಬೆಳುವ ಹೊಕ್ಕಾಗಲೂ ಆಕೆ ಮಾಡುವ ಖಾರದ ಚಟ್ನಿಯೇ ಅದೆಷ್ಟು ಸ್ವಾದಿಷ್ಟವಾಗಿರುತ್ತಿತ್ತು! ತೀರಾ ಸಂಕಷ್ಟದ ದಿನಗಳಲ್ಲಿ ಅವ್ವ ಮುಗುಚುವ ಪುಂಡೀಪಲ್ಲೆ, ನುಚ್ಚು, ಮಜ್ಜಿಗೆ ಸಾಂಬಾರು (ಮೀಸಲು ಹಿಡಿದವರು ಕೊಡುವ ಮಜ್ಜಿಗೆ), ಹುಳ್ಳಾ ನುಚ್ಚು, ಸಜ್ಜಿ ಕಡಬು ಇಂಥವುಗಳನ್ನೇ ಮಾಡುತ್ತಿದ್ದಳು. ಇವುಗಳಲ್ಲಿ ಪುಂಡೀಪಲ್ಲೆ ಮತ್ತು ಹುಳ್ಳಾನುಚ್ಚು ವಾರಗಟ್ಟಲೆ ಈಡಾಗುತ್ತಿತ್ತು.

ಹದವಾಗಿ ಮುಗುಚಿದ ಹುಳ್ಳಾನುಚ್ಚು ಬೇಸಿಗೆಗೆ ಹೇಳಿ ಮಾಡಿಸಿದ ಆಹಾರ. ಈ ಹುಳ್ಳಾ ನುಚ್ಚಿನಂತೆಯೇ ಹುಳಬಾನ ಎನ್ನುವುದೊಂದಿದೆ. ಹುಳಬಾನ ಎನ್ನುವುದು ನಮ್ಮ ಬದಿ ಮೂರು ತಿಂಗಳಲ್ಲಿ ಮಾಡುವ ಸೀಮಂತ (ಕಳ್ಳ ಕುಪ್ಪಸ)ದ ವೇಳೆಯಲ್ಲಿ ಪರಿಚಯದವರಿಗೆ, ನೆರೆಹೊರೆಯವರಿಗೆ ಸಜ್ಜಿರೊಟ್ಟಿ, ಅಗಸೀ ಚಟ್ನಿ, ಶೇಂಗಾ ಚಟ್ನಿ, ಕರ್ಚೀಕಾಯಿ ಮತ್ತು ಹುಳಬಾನ ಇಟ್ಟು ಬುತ್ತಿರೊಟ್ಟಿ ಕೊಡುವ ವಾಡಿಕೆ. ಬಾನ ಎನ್ನುವುದು ಅಕ್ಕಿಯಿಂದ ಮಾಡುವಂಥದು. ಅನ್ನ ಮಾಡಿದ ಮೇಲೆ ಅದನ್ನು ಒಂದು ತಟ್ಟೆಯಲ್ಲಿ ಇಲ್ಲವೇ ಪರಾತಲ್ಲಿ ಹಾಕಿ ಮೊಸರು ಬಳ್ಳೊಳ್ಳಿ, ಜೀರಿಗೆಯೊಂದಿಗೆ ಹದವಾಗಿ ಕಲಿಸಿದಾಗ ಈ ಹುಳಬಾನ ರೆಡಿಯಾಗುತ್ತದೆ.

ಅನ್ನ ಊಟ ಮಾಡುವವರೇ ಶ್ರೀಮಂತರು ಎನ್ನುವಂತಿದ್ದ ಕಾಲಮಾನದಲ್ಲಿ ಹುಳಬಾನ ಸಾಮಾನ್ಯ ಹುಲಮಾನವರ ಸ್ವತ್ತಲ್ಲ. ಅದೇ ರೀತಿಯಲ್ಲಿ ಹುಳ್ಳಾನುಚ್ಚು ಎನ್ನುವುದು ಉಳ್ಳವರ ಪಾಲಿನದಂತೂ ಅಲ್ಲ. ಬಾಯಿ ಕೆಟ್ಟಾಗ ಉಳ್ಳವರು ಪುಂಡಿಪಲ್ಲೆ ಬಯಸುವಂತೆ ಈ ಹುಳ್ಳಾನುಚ್ಚನ್ನೂ ಬಯಸುತ್ತಾರೆ. ಬೇಸಿಗೆಯಲ್ಲಿ ಹೊಟ್ಟೆಗೆ ತಂಪು ನೀಡುವ ಈ ಹುಳ್ಳಾನುಚ್ಚು ಬರಗಾಲದಲ್ಲಿಯೂ ಇದು ಕೈ ಹಿಡಿಯುತ್ತದೆ. ಹುಳ್ಳಾನುಚ್ಚನ್ನು ನಂಬಿ ಕೆಟ್ಟವರಿಲ್ಲ ಎನ್ನುವಂತೆ ಅವ್ವ ಬೇಸಿಗೆಯಲ್ಲಿ ತಿಂಗಳಲ್ಲಿ ಎರಡು ಬಾರಿ ಈ ಹುಳ್ಳಾನುಚ್ಚನ್ನು ಮುಗಚುವವಳು.

ಜೋಳವನ್ನು ತೋಯಿಸಿ ಬಿಸಿಲಿಗೆ ಹಾಕಿ, ಮರುದಿನ ಮಡಿಕೆಯೊಂದರಲ್ಲಿ ಈ ಜೋಳವನ್ನು ಕುದಿಸಲಾಗುತ್ತದೆ. ಹದವಾಗಿ ಕುದಿಸಿದ ಮೇಲೆ ಅದಕ್ಕೊಂದಿಷ್ಟು ಹುಳುಚಾದ ಮಜ್ಜಿಗೆಯನ್ನು ಸುರಿದು, ಹುಳಿ ಬರಿಸಿ ಹುಟ್ಟಿನಿಂದ ಮುಗುಚುವುದು ಒಂದು ಕ್ರಮವಾದರೆ, ಇನ್ನೊಂದು ನುಚ್ಚನ್ನು ಕುದಿಸಿಯಾದ ಮೇಲೆ ಅದರಲ್ಲಿ ಸ್ವಲ್ಪ ಸ್ವಲ್ಪ ಭಾಗವನ್ನು ಹೊರತೆಗೆದು ಅದರೊಂದಿಗೆ ಮಜ್ಜಿಗೆ ಇಲ್ಲವೇ ಮೊಸರನ್ನು ಕಲಿಸಿ ತಿನ್ನಲಾಗುತ್ತದೆ.

ಈ ಹುಳ್ಳಾನುಚ್ಚನ್ನು ಹೀಗೇ ಬರೀ ಬಾಯಿಂದ ತಿನ್ನುವ ಬದಲಾಗಿ ಸಜ್ಜಿ ಇಲ್ಲವೇ ಜೋಳದ ಕಡಕ್ ರೊಟ್ಟಿಯ ಜೊತೆಗೆ ಅಗಸೀ ಹಿಂಡಿ ಹಾಗೂ ಶೇಂಗಾ ಹಿಂಡಿಯ ಜೊತೆಗೆ ತಿನ್ನುವ ಮಜವೇ ಬೇರೆ. ಅವ್ವ ಹುಳ್ಳಾನುಚ್ಚಿಗೆಂದೇ ಒಂದೆರಡು ಮಡಿಕೆಗಳನ್ನು ರಿಸರ್ವ್‌ ಇಟ್ಟಿರುತ್ತಿದ್ದಳು. ಹುಳ್ಳಾನುಚ್ಚಿನ ಮಡಿಕೆಯ ಬುಡದ ಸುತ್ತಲೂ ಅವ್ವ ಬೂದಿಯಿಂದ ಒಂದು ಗೆರೆ ಹೊಡೆದು, ಅದರ ಕಂಠದ ಸುತ್ತಲೂ ಇನ್ನೊಂದು ಗೆರೆ ಹೊಡೆದು ಸಿಂಗರಿಸುವ ಕ್ರಮವೇ ವಿಶಿಷ್ಟವಾಗಿರುತ್ತಿತ್ತು.

ಹುಳ್ಳಾನುಚ್ಚು ಮಾಡುವ ಕ್ರಮದಲ್ಲಿಯೇ ಕಿಚಡಿಯನ್ನೂ ತಯಾರಿಸಲಾಗುತ್ತದೆ. ಕಿಚಡಿಗೆ ಹುಳಿ ಹೊಯ್ಯುವದಿಲ್ಲ. ಅದರಲ್ಲಿ ಹಾಲು ಬೆಲ್ಲ ಹಾಕಿಯೂ ಸವಿಯಬಹುದು. ಅವ್ವ ಹುಳ್ಳಾನುಚ್ಚು ಮುಗಚಿದ್ದು ಓಣಿ ತುಂಬಾ ಸುದ್ದಿಯಾಗುತ್ತಿತ್ತು. ನೆರೆಹೊರೆಯಲ್ಲಿ ಆಗ ಕೊಡು ತೆಗೆದುಕೊಳ್ಳುವ ಸಂಬಂಧಗಳು ಬಹಳಷ್ಟು ಗಟ್ಟಿಯಾಗಿದ್ದವು. ಹೀಗೆ ಮಾಡಲಾದ ಅಡುಗೆಯನ್ನು ಒಬ್ಬರಿಗೊಬ್ಬರು ಕೊಟ್ಟು, ಪಡೆದು ರುಚಿ ಹಂಚಿಕೊಳ್ಳುತ್ತಿದ್ದರು. ಈ ಹುಳ್ಳಾನುಚ್ಚು ಅಪೂಟ ಬಿಳಿಜೋಳದಿಂದ ಮಾಡಲಾಗುತ್ತದೆ. ಇನ್ನೊಂದಿದೆ ಅದು ಬರೀ ನುಚ್ಚು. ಇದನ್ನು ಜೋಳವನ್ನು ಒಡೆಯಿಸಿ ಮಾಡಲಾಗುತ್ತದೆ. ಅಪ್ಪ ಇಮ್ಮನ ಜೋಳ ತಂದು ಮನೆಯಲ್ಲಿ ಕೊಡುವಾಗ ಎರಡು ದಿನಕ್ಕೊಮ್ಮ ನುಚ್ಚು ಮಾಡು ಅಂದರ ಈಡಾಗತೈತಿ ಅಂತಿದ್ದ.

ಒಂದು ವಾರದವರೆಗೂ ಒಲೆಯ ಮೇಲೆ ಈ ಹುಳ್ಳಾನುಚ್ಚಿನ ಮಡಿಕೆಯಿರುತ್ತಿತ್ತು. ಒಂದು ವಾರದ ಹೊಟ್ಟೆಯ ಅನಾಜಾಗಿ ಅದು ಕೆಲಸ ಮಾಡುತ್ತಿತ್ತು. ಮೂರು ದಿನಗಳಾದ ಮೇಲೆ ಮಡಿಕೆಯ ಒಳಗಡೆ ಬ್ರೂಸು ಬಂದು ಬಿಡುತ್ತಿತ್ತು. ಅವ್ವ ಅದನ್ನು ಮೆಲ್ಲಗೆ ತೆಗೆಯುತ್ತ ಈ ಹುಳ್ಳಾನುಚ್ಚಿಗೆ ಏನೂ ಆಗುವುದಿಲ್ಲ. ಒಂದು ವಾರದಮಟ ಉಳದೇ ಉಳಿಯುತ್ತದೆ ಎನ್ನುತಿದ್ದಳು. ನಮ್ಮ ಆಗಿನ ತಾಯಂದಿರ ಜಾಣ್ಮೆಯನ್ನು ನಾವು ಮೆಚ್ಚಲೇಬೇಕು. ಮನೆಯಲ್ಲಿ ಕಡುಬಡತನವಿರುವಾಗಲೂ ನುಚ್ಚೋ.. ಅಂಬಲಿಯೋ.. ಗಂಜಿಯೋ ಮಾಡಿ ಹಾಕಿ ಹೊಟ್ಟೆಹೊರೆಯುತ್ತಿದ್ದರು. ಹುಳ್ಳಾನುಚ್ಚು ಇಂಥಾ ತಾಯಂದಿರ ಸಂಶೋಧನೆಯೇ. ಅದಿದ್ದರೆ ಸಾಕು ಮತ್ತೆ ಬಾಜಿ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ.

ನಮ್ಮ ಶಾಲಾ ರಜಾ ದಿನಗಳಲ್ಲಿ ಎಮ್ಮೆ ಮೇಯಿಸಲು ಹೋಗುವಾಗ ನಮ್ಮ ಜೊತೆಗಿದ್ದದ್ದು ಈ ಹುಳ್ಳಾನುಚ್ಚು. ಅಪ್ಪ ದನಗಳ ಸಂತೆಗೆ ಹೋಗುವಾಗ್ಲೂ ಬುತ್ತಿಯೊಳಗಿತ್ತು ಈ ಹುಳ್ಳಾನುಚ್ಚು. ಬೇಸಿಗೆಯಲ್ಲಿ ಮಾಳಿಗೆ ಮೇಲೆ ಕುಳಿತು ಊಟ ಮಾಡುವಾಗ ಸರಪಂತಿಯಲ್ಲಿತ್ತು ಈ ಹುಳ್ಳಾನುಚ್ಚು.

ಬೀಗರೂರಿಗೆ ಹೋಗುವಾಗ ಅವ್ವ ಕಟ್ಟಿದ ಬುತ್ತಿಯಲ್ಲಿತ್ತು ಹುಳ್ಳಾನುಚ್ಚು. ಹೀಗೆ ಬೇಸಿಗೆಯಲ್ಲಿ ಬಡವರ ಮನೆಯ ಅಡುಗೆಮನೆಯಲ್ಲಿ ಭರವಸೆಯಾಗಿರುತ್ತಿತ್ತು ಹುಳ್ಳಾನುಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT