ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾರಸ್ವತ ಲೋಕದ ಮಹನೀಯ ಗೋವಿಂದ ಪೈ

Last Updated 13 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ರಾಷ್ಟ್ರಕವಿ ಗೋವಿಂದ ಪೈಯವರು ಬದುಕಿದ್ದಾಗ ಬೆಳೆಸಿಕೊಂಡಂತಹ ಆಕರ್ಷಕ ಸ್ವಭಾವಗಳಲ್ಲಿ ಒಂದು ಅತಿಥಿ ಸತ್ಕಾರ. ಯಾರೇ ಮನೆ ಬಾಗಿಲಿಗೆ ಬಂದರೂ ಅವರನ್ನು ಕೂರಿಸಿ, ಮಾತನಾಡಿಸಿ ಉಟೋಪಚಾರ ಮಾಡದೇ ಬಿಡುವವರಲ್ಲ. ಹಾಗೇ ಮನೆ ಹತ್ತಿರವಿದ್ದ ಕಡಲನ್ನು ತೋರಿಸುತ್ತಾ ಗಂಟೆಗಟ್ಟಲೆ ಮಾತುಕತೆ ನಡೆಸುತ್ತಿದ್ದರು.

**

ಪ್ರಸಿದ್ಧ ಸಾಹಿತಿಗಳ ತವರು ಈ ತುಳುನಾಡು. ಅದೆಷ್ಟೋ ಕವನ, ಕಥೆ, ಕಾದಂಬರಿ, ನಾಟಕಗಳಂತಹ ಸಮೃದ್ಧ ಸಾಹಿತ್ಯಗಳಿಂದ ತುಂಬಿದೆ ಕರುನಾಡು. ಕನ್ನಡ ಸಾರಸ್ವತ ಲೋಕದಲ್ಲಿ ಸಾಧನೆ ಮೆರೆದ ಹಲವಾರು ಮಹನೀಯರಲ್ಲಿ ರಾಷ್ಟ್ರಕವಿ ಎಂ. ಗೋವಿಂದ ಪೈ ಕೂಡ ಒಬ್ಬರು.

ಇವರ ಸಾಧನೆಗಳು ಅಪಾರ. ಇವರ ಪ್ರತಿಯೊಂದು ಕೃತಿಯು ಓದುಗರ ಮನದಲ್ಲಿ ಅಜರಾಮರವಾಗಿರುವಂತಹದು. ಇವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೂಲದವರು. ತಂದೆ ತಿಮ್ಮ ಪೈ ಮತ್ತು ತಾಯಿ ದೇವಕಿ. ಮಾರ್ಚ್ 23, 1883ರಲ್ಲಿ ಇವರ ಜನನ. ಇವರ ಅರ್ಧಾಂಗಿಯಾಗಿದ್ದ (1901ರಲ್ಲಿ ಮದುವೆ) ಲಕ್ಷ್ಮೀ ಬಾಯಿಯವರು ಲೇಖಕರ ಸಾಹಿತ್ಯಕ ಜೀವನಕ್ಕೆ ಹೆಗಲಾಗಿ ನಿಂತಿದ್ದರು. ಪತ್ನಿ ಲಕ್ಷ್ಮೀ ಅವರು ಮರಾಠಿ ಭಾಷೆಯಲ್ಲಿ ಉತ್ತೀರ್ಣರಾಗಿದ್ದರು.

ಇನ್ನು ಪೈ ಅವರ ಸಾಧನೆಗಳನ್ನು ಮೆಲುಕು ಹಾಕುವುದಾದರೆ ಇವರು ಸುಮಾರು 17ನೇ ವಯಸ್ಸಿನಲ್ಲೇ ಕವಿತೆ ರಚನೆಯ ಜಾಡು ಹಿಡಿದವರು. ಪೈಯವರ ಆ ವಯಸ್ಸಿನ ಆಸಕ್ತಿ ಅವರನ್ನು ಅತಿ ಎತ್ತರದ ಮಟ್ಟಿಗೆ ಜನಪ್ರಿಯಗೊಳಿಸಿದೆ.

ಎಂಬತ್ತು ವರ್ಷಗಳ ಕಾಲ ಸಾಧನೆಯ ಕೃಷಿ ಮಾಡಿದ ಪೈಯವರ ಕವಿತೆ, ಕಥೆ, ಕಾದಂಬರಿ, ನಾಟಕಗಳು ಜನಾಕರ್ಷಣೀಯವಾಗಿವೆ.1963 ಸೆಪ್ಟೆಂಬರ್ 6ರಂದು ಇವರು ಮಂಗಳೂರಿನಲ್ಲಿ ದೇಹತ್ಯಾಗ ಮಾಡಿದರು. ಗೋವಿಂದ ಪೈಯವರ ಮಡತಿ ಇವರಿಗಿಂತ ಮೊದಲೇ ದೈವಾದೀನರಾಗಿದ್ದರಿಂದ ಮಂಜೇಶ್ವರದಲ್ಲಿದ್ದ ಅವರ ಮನೆಯ ಪರಿಸ್ಥಿತಿ ಶೋಚನೀಯವಾಗಿತ್ತು. ಕಾಲಾಂತರದಲ್ಲಿ ಪೈ ಅವರ ಮನೆ ಸರ್ಕಾರದ ಅಧೀನಕ್ಕೊಳಗಾಗಿ ಅದಾದ ಸುಮಾರು ವರ್ಷಗಳ ನಂತರ 2004ರಂದು ಅಲ್ಲೇ ಗೋವಿಂದ ಪೈ ಟ್ರಸ್ಟ್ ಆರಂಭವಾಯಿತು. ಪ್ರಖ್ಯಾತ ಕವಿಯ ಮನೆಯೂ ಈಗಲೂ ಇರುವುದು ಆ ನಾಡಿಗೆ ಹೆಮ್ಮೆಯ ವಿಷಯ. ಮಲಯಾಳಂ, ಇಂಗ್ಲಿಷ್‌, ಕನ್ನಡ ಮಾತ್ರವಲ್ಲದೆ ಇತ್ಯಾದಿ ಭಾಷೆಗಳಲ್ಲಿ ಅತಿಧಾರಾಳವಾಗಿರುವಂತಹ ಇವರ ಪುಸ್ತಕಗಳು ಈಗಲೂ ಇವರ ನಿವಾಸದ ಗ್ರಂಥಾಲಯದಲ್ಲಿ ಸಂಗ್ರಹಗೊಂಡಿರುವುದನ್ನು ಕಾಣಬಹುದು. ಪುಸ್ತಕ ಭಂಡಾರಗಳೇ ಇವರ ಸಾಧನೆಗಳಿಗೆ ಜ್ವಲಂತ ಸಾಕ್ಷಿಯಾಗಿ ನಿಂತಿವೆ.

ಗೋವಿಂದ ಪೈ ಅವರು ಇಂಡೋ ಆರ್ಯನ್, ದ್ರಾವಿಡ, ಐರೋಪ್ಯ, ಜಪಾನೀಸ್ ಮುಂತಾದ ಭಾಷೆಗಳನ್ನು ಬಲ್ಲ ಬಹುಭಾಷಾ ಪಂಡಿತರು. ಅಪಾರ ಪಾಂಡಿತ್ಯದ ಪೈ ಅವರನ್ನು ‘ಪಂಡಿತವಕ್ಕಿ’ ಎಂಬ ಹೆಸರಿನಿಂದಲೂ ಗುರುತಿಸುವವರಿದ್ದರು. ಅವರ ಖಾಸಗಿ ಗ್ರಂಥಾಲಯದಲ್ಲಿ ಸುಮಾರು 4734 ಪುಸ್ತಕಗಳು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿವೆ. 1949ರಲ್ಲಿ ಆಗಿನ ಮದರಾಸು ಸರ್ಕಾರವು ಪೈ ಅವರ ಸಾಹಿತ್ಯಿಕ ಪ್ರತಿಭೆಯನ್ನು ಗುರುತಿಸಿ, ಅವರಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರ ಪ್ರಖ್ಯಾತ ಕೃತಿಗಳಾದ ‘ಗಿಳಿವಿಂಡು’, ‘ಗೋಲ್ಗೋಥಾ’, ‘ಹೆಬ್ಬೆರಳು’, ‘ವೈಶಾಖ’, ‘ಚಿತ್ರಭಾನು’, ‘ನಂದಾದೀಪ’, ‘ಹೃದಯರಂಗ’ ಹಾಗೂ ಮತ್ತಿತರ. ಇವರು ಸಂಶೋಧನಾ ಬರಹಗಳಲ್ಲೂ ಸಿದ್ಧಹಸ್ತರಾಗಿದ್ದರು.

ಪೈ ಅವರು ಕಥೆ ಕಾದಂಬರಿಗಳನ್ನು ರಚಿಸುವುದಲ್ಲದೆ ಹೊಸ ಹೊಸ ಪದಗಳ ಸೃಷ್ಟಿಗೂ ಆದ್ಯತೆ ನೀಡಿದ್ದರು. ತಮ್ಮ ಭಾಷೆ ಬೆಳೆಯಬೇಕಾದರೆ ಶಬ್ದಭಂಡಾರವನ್ನು ಹೆಚ್ಚಿಸಬೇಕು ಎಂಬುದು ಇವರ ನಂಬಿಕೆಯಾಗಿತ್ತು. ಪ್ರಾಚೀನ ಗ್ರೀಕ್ ಪ್ರಹಸನದಲ್ಲಿ ಕೆಲವು ಕನ್ನಡ ಪದಗಳು ಇರುವುದನ್ನು ಗುರುತಿಸಿದ ವಿದ್ವಾಂಸರು.

ಗೋವಿಂದ ಪೈ ಅವರ ನಾಡಭಕ್ತಿಗಳ ಬಗ್ಗೆ ಹೇಳಬೇಕೆಂದರೆ ತವರು ನಾಡಾದ ತುಳು ನಾಡಿನಿಂದ ಹಿಡಿದು ಭಾರತಾಂಬೆಯ ಮಡಿಲಿನವರೆಗೂ ಹಬ್ಬಿದೆ. ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿಚ್ಛಾಯೇ ಎಂಬುದು ಇವರು ತುಳುನಾಡಿನ ಕುರಿತಾಗಿ ಬರೆದ ಆರಂಭದ ಸಾಲುಗಳು. ತಾಯೆ ಬಾರ, ಮೊಗವ ತೋರ ಕನ್ನಡಿಗರ ಮಾತೆಯೆ, ಹರಸು ತಾಯೇ, ಸುತರ ಕಾಯೆ, ನಮ್ಮ ಜನ್ಮದಾತೆಯೇ ಇದು ಈಗಲು ಕನ್ನಡಿಗರ ತನಮನದಲ್ಲಿ ಮಾರ್ಧನಿಸುತ್ತಿರುವ ಹಾಡು. ಭಾರತ ಯಶೋಗಾನವನ್ನೆದೆಯ ತಾನ (ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ) ಎಂದು ತಾಯಿ ಭಾರತಾಂಬೆಯ ಮೇಲಿರುವ ತನ್ನ ದೇಶಭಕ್ತಿಯನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಇವರು ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬುದು ಗಮನಾರ್ಹವಾದ ವಿಷಯವಾಗಿದೆ.

ಪೈ ಅವರು ಕಡಲ ಸೌಂದರ್ಯವನ್ನು ಕಾಣುತ್ತಾ ಬರೆದ ಕಥೆ, ಕವನಗಳಿಗೆ ಲೆಕ್ಕವಿಲ್ಲ. ಸಾಮಾನ್ಯವಾಗಿ ಜನರು ಇವರನ್ನು ಮಂಗಳೂರಿನವರೆಂದೇ ಗುರುತಿಸುತ್ತಾರೆ. ಇವರ ತಂದೆ ಮಂಗಳೂರಿನವರು. ತಾಯಿ ಮಂಜೇಶ್ವರದವರು. ಆದರೆ, ಪೈಯವರು ಬೆಳೆದದ್ದು, ಹೆಚ್ಚೇಕೆ 50 ವರ್ಷಗಳ ಕಾಲ ಬಾಳಿದ್ದು, ಮಂಜೇಶ್ವರದಲ್ಲೇ. ಇವರ ಸ್ಮರಣಾರ್ಥವಾಗಿ ಗೋವಿಂದ ಪೈ ಮೆಮೊರಿಯಲ್‌ ಸರ್ಕಾರಿ ಕಾಲೇಜು 1980ರಲ್ಲಿ ಸ್ಥಾಪನೆಯಾಯಿತು. ಇದೀಗ ನೂರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ವಿದ್ಯಾ ಸಂಸ್ಥೆಯಾಗಿ ಪ್ರಖ್ಯಾತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT