ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಿರುವೆ ಚಟ್ನಿ ಸಿದ್ಧಿಗಳಿಗೆ ಬಲು ಇಷ್ಟ

Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ತಿಳಿದು ತಿಳಿದೂ ಸಮಸ್ಯೆ ಸೃಷ್ಟಿಸಿಕೊಂಡವರಿಗೆ ‘ಸುಮ್ಮನೆ ಇರಲಾರದೆ ಮೈ ಮೇಲೆ ಇರುವೆ ಬಿಟ್ಟುಕೊಂಡ’ ಎಂಬ ನಾಣ್ಣುಡಿಯೊಂದಿಗೆ ಛೇಡಿಸುವ ರೂಢಿ ಇದೆ. ಆದರೆ ಕೆಂಪಿರುವೆ ಕಂಡರೆ ಖುಷಿ ಪಟ್ಟು ಅದನ್ನು ಹಿಡಿದು ತಂದು ಚಟ್ನಿ ಮಾಡಿ ಸೇವಿಸುವ ಸಿದ್ದಿಗಳು ಅದೇ ನಾಣ್ಣುಡಿಗೆ ಸವಾಲು ಹಾಕುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಶಿರಸಿ, ಹಳಿಯಾಳ ಭಾಗದಲ್ಲಿ ನೆಲೆಸಿರುವ ನೂರಾರು ಸಿದ್ದಿ ಕುಟುಂಬಗಳಿಗೆ ‘ಕೆಂಪಿರುವೆ ಚಟ್ನಿ’ ಬ್ರ್ಯಾಂಡ್ ಖಾದ್ಯವಾಗಿದೆ. ಮಲೆನಾಡಿನ ಕಾಡು, ಬೆಟ್ಟಗಳಲ್ಲಿನ ಮರಗಳಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ, ಗೂಡುಕಟ್ಟಿ ಗುಂಪಾಗಿರುವ ಕೆಂಪಿರುವೆಗಳನ್ನು ಕಂಡರೆ ಉಳಿದ ಜನರು ದೂರ ಸರಿದರೆ, ಸಿದ್ದಿಗಳಿಗೆ ಮಾತ್ರ ಖುಷಿಯೋ ಖುಷಿ.

ಕೆಂಪಿರುವೆ ಕಚ್ಚಿದರೆ ಆಗುವ ಉರಿ, ಕಿರಿಕಿರಿ ನೆನೆಸಿಕೊಂಡು ಜನರು ಹೆದರಿದರೆ, ಸಿದ್ದಿಗಳು ಚಟ್ನಿಯ ರುಚಿ ನೆನೆಸಿಕೊಂಡು ಬಾಯಲ್ಲಿ ನೀರೂರಿಸುತ್ತಾರೆ. ಅಷ್ಟರಮಟ್ಟಿಗೆ ಅವರ ಪಾಲಿಗೆ ಕೆಂಪಿರುವೆ ರುಚಿಕಟ್ಟಾದ ಖಾದ್ಯವಾಗಿದೆ.

ಸಿದ್ದಿ ಬುಡಕಟ್ಟು ಸಮುದಾಯ ಕಾಡನ್ನು ಅವಲಂಬಿಸಿ ಜೀವನ ನಡೆಸುತ್ತದೆ. ಈ ಸಮುದಾಯದ ಸಾಂಪ್ರದಾಯಿಕ ಆಹಾರ ಪದ್ಧತಿ ವಿಭಿನ್ನ. ಅದರಲ್ಲಿಯೂ ಕಾಡಿನಲ್ಲಿ ಸಿಗುವ ಕೆಂಪಿರುವೆ ಚಟ್ನಿ ಸಿದ್ದಿಗಳ ವಿಶೇಷ ಖಾದ್ಯ.

ಕಾಡಂಚಿನಲ್ಲೇ ನೆಲೆಸಿರುವ ಸಿದ್ದಿಗಳ ಮನೆಯಲ್ಲಿ ವಾರಕ್ಕೆ ಕನಿಷ್ಠ ಮೂರು ಅಥವಾ ನಾಲ್ಕು ದಿನವಾದರೂ ಕೆಂಪಿರುವೆ ಚಟ್ನಿ ಮಾಡಲಾಗುತ್ತದೆ. ಚಟ್ನಿಯನ್ನು ಊಟದೊಟ್ಟಿಗೆ ಚಪ್ಪರಿಸುತ್ತ ಸೇವಿಸುತ್ತಾರೆ.

‘ಹಿಂದಿನಿಂದಲೂ ಕೆಂಪಿರುವೆಯನ್ನು ಖಾದ್ಯಕ್ಕೆ ಬಳಸುವ ರೂಢಿ ಬೆಳೆದುಕೊಂಡು ಬಂದಿದೆ. ಮನೆಗಳ ಸಮೀಪದ ಕಾಡಿಗೆ ಹೋಗಿ ಹುಡುಕಾಡಿದರೆ ಒಂದಲ್ಲ ಒಂದು ಮರದಲ್ಲಿ ಇರುವೆಯ ಗೂಡು ಕಾಣಸಿಗುತ್ತದೆ. ಮೊಟ್ಟೆಗಳು ಹೆಚ್ಚಿರುವ ಗೂಡನ್ನು ಹುಡುಕಾಡಿ ಅದನ್ನೇ ಹೊತ್ತು ತರುತ್ತೇವೆ. ಹೀಗೆ ತರುವ ಮುನ್ನ ಬಿದಿರಿನ ಮೊರದಲ್ಲಿ ಉಪ್ಪು ಒಯ್ಯುತ್ತೇವೆ. ಗೂಡನ್ನು ಮೊರದಲ್ಲಿ ಹಾಕಿದರೆ ಉಪ್ಪಿನ ಅಂಶಕ್ಕೆ ಇರುವೆಗಳು ಮೂರ್ಛೆ ಹೋಗುತ್ತವೆ. ಅಲ್ಲದೆ ಅವುಗಳಿಗೆ ಕಚ್ಚಲು ಆಗದು’ ಎನ್ನುತ್ತಾರೆ ಯಲ್ಲಾಪುರ ಲಿಂಗದಬೈಲ್ ಗ್ರಾಮದ ಮಂಜುನಾಥ ಸಿದ್ದಿ.

ಕೆಂಪಿರುವೆ ಮತ್ತು ಅದರ ಮೊಟ್ಟೆಯನ್ನು ಮೊರದಲ್ಲಿ ತಂದ ಸಿದ್ದಿ ಮಹಿಳೆ

ಕೆಂಪಿರುವೆ ಮತ್ತು ಅದರ ಮೊಟ್ಟೆಯನ್ನು ಮೊರದಲ್ಲಿ ತಂದ ಸಿದ್ದಿ ಮಹಿಳೆ

ನಸುಕಿನ ಜಾವದಲ್ಲಿ ಇರುವೆಗೂಡು ಹೊತ್ತು ತಂದರೆ ಆ ಸಮಯದಲ್ಲಿ ಅವು ಕಚ್ಚುವ ಪ್ರಮಾಣ ಕಡಿಮೆ. ಅದೇ ಬಿಸಿಲಿನ ವೇಳೆಯಲ್ಲಿ ಗೂಡಿಗೆ ಕೈಹಾಕಿದರೆ ಅವು ತೀಕ್ಷಣವಾಗಿ ದಾಳಿ ಮಾಡುತ್ತವೆ ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತಿದೆ.

‘ಕೆಂಪಿರುವೆ ಚಟ್ನಿ ರುಚಿಕಟ್ಟಾದ ಖಾದ್ಯವಾಗಿರುವ ಜತೆಗೆ ಆರೋಗ್ಯವನ್ನೂ ಉತ್ತಮವಾಗಿಡುತ್ತದೆ ಎಂಬ ನಂಬಿಕೆ ಇದೆ. ಮೈಕೈ ನೋವು ನಿವಾರಣೆ, ನೆಗಡಿಯಂತಹ ಸಮಸ್ಯೆಗೂ ಇದು ಮನೆ ಔಷಧವಾಗಿದೆ’ ಎಂದು ಲಲಿತಾ ಸಿದ್ಧಿ ಹೇಳುತ್ತಾರೆ.

ಕೆಂಪಿರುವೆಯಲ್ಲಿ ಫಾರ್ಮಿಕ್ ಆಮ್ಲದ ಅಂಶ ಹೆಚ್ಚಿರುತ್ತದೆ. ಇದು ವಿಟಮಿನ್ ‘ಸಿ’ಯನ್ನು ದೇಹಕ್ಕೆ ಒದಗಿಸುತ್ತದೆ. ಇದೂ ಅಲ್ಲದೆ ಹಲವು ಪೋಷಕಾಂಶಗಳನ್ನು ಕೆಂಪಿರುವೆ ಒಳಗೊಂಡಿರುವುದರಿಂದ ಸಹಜವಾಗಿ ಅದು ದೇಹಕ್ಕೆ ಉತ್ತಮವೂ ಹೌದು ಎನ್ನುವುದು ಆಯುರ್ವೇದ ತಜ್ಞರ ಅಭಿಪ್ರಾಯ.

ಅಂದಹಾಗೆ ಒಡಿಸ್ಸಾದ ಮಯೂರಭಂಜ್ ಜಿಲ್ಲೆಯಲ್ಲಿರುವ ಕೆಲ ಬುಡಕಟ್ಟು ಸಮುದಾಯಗಳು ಕೆಂಪಿರುವೆ ಚಟ್ನಿ ಸಿದ್ಧಪಡಿಸಲು ಹೆಸರುವಾಸಿಯಾಗಿವೆ. ಅಲ್ಲಿ ತಯಾರಿಸುವ ಕೆಂಪಿರುವೆ ಚಟ್ನಿಗೆ ಭೌಗೋಳಿಕ ಸೂಚಿ (ಜಿ.ಐ ಟ್ಯಾಗ್) ಲಭಿಸಿದೆ.

ಚಟ್ನಿ ಮಾಡೋದು ಹೀಗೆ...

ಕಾಡಿನಿಂದ ಹಿಡಿದು ತಂದ ಕೆಂಪು ಇರುವೆ, ಮೊಟ್ಟೆ ರಾಶಿಯನ್ನು ನೀರಿನಿಂದ ತೊಳೆದು ಅದರೊಟ್ಟಿಗಿರುವ ಇತರ ಕೀಟಗಳನ್ನು ತೆಗೆಯಬೇಕು. ಬಳಿಕ ಕಾಳುಮೆಣಸು, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ತೆಂಗಿನಕಾಯಿ ತುರಿಯೊಂದಿಗೆ ರುಬ್ಬು ಕಲ್ಲಿನಲ್ಲಿ ಅರೆದರೆ ಚಟ್ನಿ ರೆಡಿ. ಚಟ್ನಿಯನ್ನು ಗಾಜಿನಬಾಟಲಿಯಲ್ಲಿ ಶೇಖರಿಸಿಟ್ಟರೆ ಆರು ತಿಂಗಳು ಕೆಡದೇ ಉಳಿಯುತ್ತದೆ.

ಕೆಂಪಿರುವೆ ಚಟ್ನಿ

ಕೆಂಪಿರುವೆ ಚಟ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT