ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸ: ನೋಟು, ನಾಣ್ಯ ಸಂಗ್ರಹದ ಮೂರನೇ ತಲೆಮಾರು

Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಪತ್ರಿಕಾ ವಿತರಕ. ಪ್ರವೃತ್ತಿಯಲ್ಲಿ ವಿದೇಶಿ ನೋಟು ಸಂಗ್ರಾಹಕ. ಈಚೆಗೆ ಮಡಿಕೇರಿಯ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ನಡೆದ ಪ್ರಾಚೀನ ನಾಣ್ಯಗಳು, ವಿದೇಶಿ ನೋಟುಗಳ ಮತ್ತು ಅಂಚೆ ಚೀಟಿಗಳ ಪ್ರದರ್ಶನವು ಇವರ ಅಪರೂಪದ ಪ್ರತಿಭೆಯನ್ನು ಅನಾವರಣಗೊಳಿಸಿತು.

ಮಡಿಕೇರಿಯ ಹಿಲ್‌ರೋಡ್‌ ನಿವಾಸಿಯಾಗಿರುವ ಕೆ.ಎನ್.ಶಿವಪ್ರಸಾದ್ ಭಟ್ ಅವರು ಪತ್ರಿಕಾ ವಿತರಕರಾಗಿ ಹಾಗೂ ತಮ್ಮ ಪತ್ನಿಯೊಡಗೂಡಿ ನಡೆಸುವ ‍ಪುಟ್ಟದಾದ ‘ಗೌರಿಕೃಪ’ ಮೆಸ್‌ನಿಂದ ಮಾತ್ರವೇ ಚಿರಪರಿಚಿತರಾಗಿದ್ದರು. ಆದರೆ, ಈ ಪ್ರದರ್ಶನಕ್ಕೆ ಬಂದ ಸಾರ್ವಜನಿಕರು, ಇವರ ಸ್ನೇಹಿತರು, ಪತ್ರಕರ್ತರು ಮಾತ್ರವಲ್ಲ; ವಿದೇಶಿ ಪ್ರವಾಸಿಗರೂ ಇವರ ಬಳಿ ಇದ್ದ ನೋಟುಗಳನ್ನು ಕಂಡು ಒಂದರೆಕ್ಷಣ ಅವಾಕ್ಕಾದರು. ಏಕೆಂದರೆ, ಇವರ ಬಳಿ ಇದ್ದುದು ಕೇವಲ ಹತ್ತಾರು ದೇಶಗಳ ನೋಟುಗಳಲ್ಲ, ಬರೋಬರಿ 185 ದೇಶಗಳ ನೋಟುಗಳು ಹಾಗೂ 60 ದೇಶಗಳ ನಾಣ್ಯಗಳು; ಅದೂ ಮೂರು ತಲೆಮಾರಿನವು!

ನೋಟು ಹಾಗೂ ನಾಣ್ಯ ಸಂಗ್ರಹದಲ್ಲಿ ಇವರದು ಮೂರನೇ ತಲೆಮಾರು. ಇವರ ತಾತ ಈಶ್ವರ ಭಟ್‌ ಹಾಗೂ ತಂದೆ ಕೆ.ನಾರಾಯಣ ಭಟ್‌ ಅವರೂ ನಾಣ್ಯ ಹಾಗೂ ಹಳೆಯ ನೋಟುಗಳನ್ನು ಸಂಗ್ರಹ ಮಾಡುತ್ತಿದ್ದರು. ಅವರ ಹವ್ಯಾಸವನ್ನು ಮುಂದುವರಿಸಿದ ಶಿವಪ್ರಸಾದ್ ಭಟ್ ಒಂದೊಂದೇ ದೇಶಗಳ ನೋಟುಗಳನ್ನು ತಮ್ಮ ಸಂಗ್ರಹದ ಭಂಡಾರಕ್ಕೆ ಸೇರ್ಪಡೆಗೊಳಿಸುತ್ತಿದ್ದಾರೆ. ಮೆಸ್‌ನಲ್ಲಿ ಊಟಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ತಮ್ಮ ಸಂಗ್ರಹ ತೋರಿಸಿದರೆ ಸಾಕು, ಅವರು ತಮ್ಮ ದೇಶದ ನೋಟುಗಳನ್ನು ನೀಡಿ ಪ್ರೋತ್ಸಾಹಿಸುವುದೂ ಉಂಟು.

ತಮ್ಮ ಪಾಡಿಗೆ ತಾವು ವಿದೇಶಿ ನೋಟುಗಳನ್ನು ಹಾಗೂ ನಾಣ್ಯಗಳನ್ನು ಸಂಗ್ರಹಿಸಿಕೊಂಡು ಇರುತ್ತಿದ್ದ ಶಿವಪ್ರಸಾದ್ ಭಟ್ ಅವರು ಸಾರ್ವಜನಿಕವಾಗಿ ಪ್ರದರ್ಶನ ಏರ್ಪಡಿಸಿದ್ದು ತೀರಾ ಕಡಿಮೆ. ಮೂರು ವರ್ಷಗಳ ಹಿಂದೆ ಬ್ರಾಹ್ಮಣರ ಸಂಘದ ವತಿಯಿಂದ ಲಕ್ಷ್ಮೀನರಸಿಂಹ ಕಲ್ಯಾಣಮಂಟಪದಲ್ಲಿ ನಡೆದ ಸಭೆಯೊಂದರಲ್ಲಿ ಪ್ರದರ್ಶನ ಏರ್ಪಡಿಸಿದ್ದರು. ಕೆಲಕಾಲದ ಹಿಂದೆ ಬಾಲಭವನದಲ್ಲಿ ಮಕ್ಕಳಿಗೆ ತಮ್ಮಲ್ಲಿರುವ ಸಂಗ್ರಹದ ಆಲ್ಬಂ ತೋರಿಸಿದ್ದು ಬಿಟ್ಟರೆ ಹೆಚ್ಚಿನ ಪ್ರದರ್ಶನ ನೀಡಿಲ್ಲ.

ಇವರ ತಂದೆ ಕೆ. ನಾರಾಯಣ ಭಟ್‌ ಅವರು ಹಿಲ್‌ರೋಡ್‌ನಲ್ಲಿ ‘ಗೌರಿಕೃಪ’ ಮೆಸ್‌ ನಡೆಸುತ್ತಿದ್ದರು. 23 ವರ್ಷಗಳ ಹಿಂದೆ ಅವರು ನಿಧನರಾದರು. ಬಳಿಕ ಅವರ ಪತ್ನಿ ಕೆ.ಎಸ್. ವಿದ್ಯಾಸರಸ್ವತಿ ಅವರು ಮೆಸ್‌ನ ಉಸ್ತುವಾರಿ ವಹಿಸಿಕೊಂಡರು. ಶಿವಪ್ರಸಾದ್ ಭಟ್ ಅವರು ಬೆಳಿಗ್ಗೆ ಪತ್ರಿಕಾ ವಿತರಣಾ ಕಾರ್ಯ ಮುಗಿದ ಬಳಿಕ ಮೆಸ್‌ನ ಕಾರ್ಯಚಟುವಟಕೆಗಳಲ್ಲಿ ಭಾಗಿಯಾಗುತ್ತಾರೆ. ನೋಡುವುದಕ್ಕೆ ಈ ಮೆಸ್ ಚಿಕ್ಕದಾಗಿದ್ದರೂ ಮಜ್ಜಿಗೆಹುಳಿಗೆ ಮಡಿಕೇರಿಯಲ್ಲಿ ಜನಪ್ರಿಯ.

ಇವರ ಬಳಿ ಪಾಕಿಸ್ತಾನ, ಶ್ರೀಲಂಕಾ, ಇರಾನ್, ಇರಾಕ್, ಬಾಂಗ್ಲಾದೇಶ, ನೇಪಾಳ, ಬರ್ಮಾ, ಬ್ರೆಜಿಲ್, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್, ನಿಕರ ಗುವಾ, ತಾಂಜಾನಿಯಾ, ಕೆನಡಾ, ಗಯಾನ ಸೇರಿದಂತೆ ವಿವಿಧ ದೇಶಗಳ ನೋಟುಗಳಿವೆ. ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಏರ್ಪಡಿಸಿದ್ದ ಪ್ರದರ್ಶನದ ವೇಳೆ ಭೇಟಿ ನೀಡಿದ ವಿದೇಶ ಪ್ರವಾಸಿಗರೂ ಇವರ ಸಂಗ್ರಹ ಕಂಡು ಚಕಿತಗೊಂಡರು. ತಮ್ಮ ದೇಶದಲ್ಲಿ ಹತ್ತಾರು ದಶಕಗಳ ಹಿಂದೆ ಇಂತಹ ನೋಟುಗಳಿದ್ದವೇ ಎಂದು ವಿಸ್ಮಿತರಾದರು.

‘ಈ ಹವ್ಯಾಸ ನನಗೆ ಪರಂಪರೆಯಿಂದ ಬಂದಿದ್ದು. ನಮ್ಮ ತಾತ ಈಶ್ವರ ಭಟ್‌ ಹಾಗೂ ತಂದೆ ಕೆ. ನಾರಾಯಣ ಭಟ್‌ ಅವರ ನಾಣ್ಯ ಹಾಗೂ ಹಳೆಯ ನೋಟುಗಳ ಸಂಗ್ರಹ ಕಾರ್ಯ ಮುಂದುವರಿಸಿರುವೆ. ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಏರ್ಪಡಿಸಿ ಮಕ್ಕಳು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಲು ತಿಳಿಹೇಳುವ ಉದ್ದೇಶ ಹೊಂದಿದ್ದೇನೆ’ ಎನ್ನುತ್ತಾ ಶಿವಪ್ರಸಾದ್ ಭಟ್ ತಮ್ಮ ಎಂದಿನ ಕೆಲಸದಲ್ಲಿ ನಿರತರಾದರು.

ಕೆ.ಎನ್.ಶಿವಪ್ರಸಾದ್ ಭಟ್ ಅವರ ಬಳಿ ವಿದೇಶಿ ನೋಟುಗಳ ಅತ್ಯುತ್ತಮ ಸಂಗ್ರಹ ಇದೆ. ನಮ್ಮ ವಸ್ತು ಸಂಗ್ರಹಾಲಯದಲ್ಲಿ ಅದರ ಪ್ರದರ್ಶನ ಇರಿಸಿದ್ದೆವು. ಇಂತಹ ಉತ್ತಮ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.
-ಬಿ.ಪಿ.ರೇಖಾ, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್.
ವಿದೇಶಿ ನೋಟುಗಳ ಸಂಗ್ರಹದ ಪ್ರದರ್ಶನದ ಸಂದರ್ಭದಲ್ಲಿ ಮಡಿಕೇರಿಯ ಕೆ.ಎನ್. ಶಿವಪ್ರಸಾದ್ ಭಟ್ 
ವಿದೇಶಿ ನೋಟುಗಳ ಸಂಗ್ರಹದ ಪ್ರದರ್ಶನದ ಸಂದರ್ಭದಲ್ಲಿ ಮಡಿಕೇರಿಯ ಕೆ.ಎನ್. ಶಿವಪ್ರಸಾದ್ ಭಟ್ 
ಮಡಿಕೇರಿಯ ಕೆ.ಎನ್.ಶಿವಪ್ರಸಾದ್ ಭಟ್ ಅವರ ಬಳಿ ಇರುವ ವಿದೇಶಿ ನೋಟುಗಳ ಸಂಗ್ರಹ
ಮಡಿಕೇರಿಯ ಕೆ.ಎನ್.ಶಿವಪ್ರಸಾದ್ ಭಟ್ ಅವರ ಬಳಿ ಇರುವ ವಿದೇಶಿ ನೋಟುಗಳ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT