ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನೆತ್ತರಿನ ನಂಜೂ... ಮರ್ಯಾದೆಗೇಡು ಹತ್ಯೆಯೂ

Published 23 ಜುಲೈ 2023, 1:30 IST
Last Updated 23 ಜುಲೈ 2023, 1:30 IST
ಅಕ್ಷರ ಗಾತ್ರ

ಮಗಳೆಂದರೆ ಆ ತಂದೆಗೆ ಪ್ರಾಣ. ಮಗಳಿಗೂ ಅಷ್ಟೇ, ಅಪ್ಪ ಅಂದರೆ ಆಕಾಶದಷ್ಟು ಪ್ರೀತಿ. ಅಪ್ಪ ಹಾಕಿದ್ದ ಗೆರೆ ಎಂದಿಗೂ ದಾಟದ ಅವಳು, ಎದುರು ಮನೆಯಾತನ ಪ್ರೀತಿಯ ಸೆಳೆತಕ್ಕೆ ಸಿಲುಕಿದ್ದಳು. ಹೇಗೋ ವಿಷಯ ಅವಳ ಅಪ್ಪನ ಕಿವಿಗೆ ಮುಟ್ಟಿದ್ದೇ ತಡ ಅದುವರೆಗೆ ಪ್ರೀತಿಯ ಸಾಹುಕಾರನಾಗಿದ್ದ ಆತನೇ ಮಗಳ ಪಾಲಿಗೆ ಖಳನಾಗಿಬಿಟ್ಟಿದ್ದ. ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳ ಹಟಕ್ಕೆ ಮಣಿಯದ ತಂದೆ ಕುಟುಂಬದ ಮರ್ಯಾದೆಯ ಹೆಸರಿನಲ್ಲಿ ಅದೊಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳ ಉಸಿರನ್ನು ಸದ್ದಿಲ್ಲದೇ ನಿಲ್ಲಿಸಿಬಿಟ್ಟಿದ್ದ! ಇತ್ತ ವಿಷಯ ತಿಳಿದ ಅವಳ ಗೆಳೆಯ ರೈಲಿಗೆ ಹಾರಿ ಪ್ರಾಣ ಬಿಟ್ಟಿದ್ದ.

– ಇದು ಯಾವುದೋ ಸಿನಿಮಾದ ದೃಶ್ಯವಾಗಲಿ, ಕಥೆ ಅಥವಾ ಕಾದಂಬರಿಯಾಗಲಿ ಅಲ್ಲ. ರಾಜ್ಯದ ಕೋಲಾರ ಜಿಲ್ಲೆಯಲ್ಲಿ ಈಚೆಗಷ್ಟೇ ನಡೆದ ಮರ್ಯಾದೆಗೇಡು ಹತ್ಯೆಯ ಘಟನೆ. ಕುಟುಂಬದ ಮರ್ಯಾದೆ, ಜಾತಿ ನೆತ್ತರಿನ ನಂಜು ಸದ್ದಿಲ್ಲದೇ ಇಬ್ಬರು ಮುಗ್ಧಪ್ರೇಮಿಗಳನ್ನು ಬಲಿಪಡೆದ ಘಟನೆಯಿದು.‌

ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳ ಹಕ್ಕಿಗೆ ಪೋಷಕರ ಮಾನ್ಯತೆ ದೊರೆಯದಿದ್ದಾಗ ಆ ಮಕ್ಕಳ ಪಾಲಿಗೆ ಹೆತ್ತವರೇ ಕಟುಕರಾಗಿಬಿಡುವ ಪೀಡೆಯೇ ಮರ್ಯಾದೆಗೇಡು ಹತ್ಯೆ. ಜಾತಿ ಮತ್ತು ಧರ್ಮ ಶ್ರೇಷ್ಠತೆಯ ವ್ಯಸನ, ಶುದ್ಧ ರಕ್ತದ ಭ್ರಮೆ, ಕುಟುಂಬ–ಸಮಾಜದಲ್ಲಿ ಮರ್ಯಾದೆ ಕೆಡುವ ಭಯದ ಹೆಸರಿನಲ್ಲಿ ಪ್ರತಿ ವರ್ಷ ವಿಶ್ವದಾದ್ಯಂತ ಮರ್ಯಾದೆಗೇಡು ಹತ್ಯೆಗೀಡಾಗುವವರ ಸಂಖ್ಯೆ ಸುಮಾರು ಐದು ಸಾವಿರದಷ್ಟಿದ್ದರೆ, ಭಾರತದಲ್ಲಿ ಈ ಸಂಖ್ಯೆ ಸಾವಿರದಷ್ಟಿದೆ ಅನ್ನುವುದು ಆತಂಕಕಾರಿ. ‘ಆನರ್‌ಬೇಸ್ಡ್ ವಯಲೆನ್ಸ್ ಅವೇರ್‌ನೆಸ್ ನೆಟ್‌ವರ್ಕ್’ ಸಂಘಟನೆ ನೀಡುವ ಅಂಕಿ–ಅಂಶಗಳು, ಮಾಹಿತಿಗಳು ಮನುಷ್ಯರಾದವರ ಎದೆ ನಡುಗಿಸುವಂತಿವೆ. ಭಾರತವೂ ಸೇರಿದಂತೆ ಮರ್ಯಾದೆಗೇಡು ಹತ್ಯೆಗಳ ಕುರಿತು ವರದಿಯಾಗುವ ಸಂಖ್ಯೆಗಳು ಬೆರಳೆಣಿಕೆಯಷ್ಟಾದರೆ, ವರದಿಯಾಗದ ಪ್ರಕರಣಗಳು ಅಸಂಖ್ಯ.

ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶ, ಹರಿಯಾಣದಂಥ ಉತ್ತರಭಾರತದ ರಾಜ್ಯಗಳಲ್ಲಷ್ಟೇ ಕೇಳಿಬರುತ್ತಿದ್ದ, ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದ ಮರ್ಯಾದೆಗೇಡು ಹತ್ಯೆಗಳು ಸದ್ದಿಲ್ಲದೇ ದಕ್ಷಿಣ ಭಾರತಕ್ಕೂ ಕಾಲಿಟ್ಟಿರುವುದು ಆತಂಕಕಾರಿ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕದ ಬೇರೆಬೇರೆ ಜಿಲ್ಲೆಗಳಲ್ಲಿ 10 ಮರ್ಯಾದೆಗೇಡು ಹತ್ಯೆಗಳಾಗಿರುವುದು
ಕಳವಳಕಾರಿ ಸಂಗತಿ. ಕಳೆದ ವರ್ಷದ ಕೊನೆಯಲ್ಲಿ ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಎರಡು ಮರ್ಯಾದೆಗೇಡು ಹತ್ಯೆಗಳು ವರದಿಯಾಗಿವೆ. ಇಂಥ ಹತ್ಯೆಗಳ ಹಿಂದಿನ ಜಾಡು ಹಿಡಿದು ಹೊರಟರೆ ವರ್ಣಸಂಕರದ ಭೀತಿಯ ಕಥನಗಳು ತೆರೆದುಕೊಳ್ಳುತ್ತವೆ.

ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿನ ಖಾಪ್ ಪಂಚಾಯಿತಿಗಳಲ್ಲಿ ಹೊರಡುತ್ತಿದ್ದ ಆದೇಶಗಳು ಮರ್ಯಾದೆಗೇಡು ಹತ್ಯೆಗಳಲ್ಲಿ ಪರ್ಯವಸಾನಗೊಳ್ಳುತ್ತಿದ್ದವು. ಒಂದು ಜಾತಿಗಿಂತ ಮತ್ತೊಂದು ಜಾತಿ ಶ್ರೇಷ್ಠ ಎಂಬ ಅಹಂ ಮತ್ತು ಕುಟುಂಬದ ಹಿರಿಯರ ಕಟ್ಟಾಜ್ಞೆ ಮೀರಿ ಸ್ವತಂತ್ರವಾಗಿ ಸಂಗಾತಿಗಳ ಆಯ್ಕೆಯ ನಿರ್ಧಾರ ಖಾಪ್ ಪಂಚರ ಕಣ್ಣುಗಳನ್ನು ಕೆಂಪಗೆ ಮಾಡುತ್ತಿತ್ತು. ಉತ್ತರಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಖಾಪ್ ಪಂಚಾಯ್ತಿಗಳ ಮಾದರಿ ಇಲ್ಲವಾದರೂ, ಮರ್ಯಾದೆಗೇಡು ಹತ್ಯೆಗಳ ಹಿಂದಿರುವ ಕಾರಣಗಳೇ ಇಲ್ಲೂ ಪ್ರತಿಫಲಿಸುತ್ತಿವೆ.

ಜಾತಿಪ್ರಾಬಲ್ಯದ ಪ್ರಬಲ ಮುದ್ರೆಯಾಗಿರುವ ಇಂಥ ಹತ್ಯೆಗಳಲ್ಲಿ ಹೆಣ್ಣೇ ಮುಖ್ಯವಾದ ಬಲಿಪಶು. ಕೆಳಜಾತಿಯ ಗಂಡುಗಳಾದರೆ ಆತನಿಗೂ ಬಲಿಪಶುವಿನ ಸ್ಥಾನ ಕಾಯಂ. ಸಂಸ್ಕೃತಿ, ಕುಟುಂಬದ ಗೌರವವನ್ನು ಹೆಣ್ಣಿನ ಉಡಿಯೊಳಗೆ ಕಟ್ಟಿರುವ ಪಿತೃಪ್ರಧಾನ ಸಮಾಜ ನಮ್ಮದು. ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ಹೆಣ್ಣಿನ ಲೈಂಗಿಕ ನಿಯಂತ್ರಣದ ಮೂಲಕ ಜಾತಿ ವ್ಯವಸ್ಥೆಯನ್ನು ಸದಾ ಜೀವಂತವಾಗಿಡುವ ಪ್ರಯತ್ನಗಳು ಅನಾದಿಕಾಲದಿಂದಲೂ ನಡೆಯುತ್ತಲೇ ಇರುವ ಸಮಾಜದಲ್ಲಿ ಹೆಣ್ಣಾಗಲೀ ಗಂಡಾಗಲೀ ಮುಕ್ತವಾಗಿ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಲ್ಲ. ಮರ್ಯಾದೆಗೇಡು ಹತ್ಯೆಗಳಾಗುವ ಬಹುತೇಕ ಪ್ರಕರಣಗಳಲ್ಲಿ ಪರಿಶಿಷ್ಟರ ಸಂಖ್ಯೆಯೇ ಹೆಚ್ಚು. ಮೇಲ್ಜಾತಿ, ಅಂತರಧರ್ಮೀಯ ಕೆಲ ಪ್ರಕರಣಗಳೂ ಇದಕ್ಕೆ ಹೊರತಲ್ಲ.

ಕರ್ನಾಟಕದಲ್ಲಿ ಮರ್ಯಾದೆಗೇಡು ಹತ್ಯೆಯ ಹಿಂದಿನ ಇತಿಹಾಸವನ್ನು ಕೆದಕಿದರೆ, ಇತಿಹಾಸದ ಪುಟಗಳು 12ನೇ ಶತಮಾನಕ್ಕೆ ನಮ್ಮನ್ನು ನಿಲ್ಲಿಸುತ್ತವೆ. ಆಗಲೇ ಜಾತಿ ವಿನಾಶಕಾರಿ ಚಳವಳಿಗೆ ಮುನ್ನುಡಿ ಬರೆದಿದ್ದ ಬಸವಣ್ಣನವರು, ಸಮಗಾರ ಹರಳಯ್ಯ ಅವರ ಮಗ ಶೀಲವಂತನ ಜೊತೆಗೆ ಬ್ರಾಹ್ಮಣ ಮಧುವರಸ ಅವರ ಮಗಳು ಲಾವಣ್ಯಳ ಮದುವೆ ಮಾಡಿಸಿದ್ದರು. ಈ ವರ್ಣಸಂಕರವನ್ನು ಸಹಿಸಲಾಗದೇ ಕುಪಿತರಾದ ಮನುವಾದಿಗಳು ಚಪ್ಪಲಿ ಹೊಲೆಯುವ ಜಾತಿಯ ವರನಿಗೆ ಬ್ರಾಹ್ಮಣ ಹೆಣ್ಣನ್ನು ಕೊಡುವುದು ಧರ್ಮಬಾಹಿರ, ವಿಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದ್ದರು. ಹರಳಯ್ಯ, ಶೀಲವಂತ ಮತ್ತು ಮಧುವರಸರ ಕಣ್ಣುಗಳನ್ನು ಕಿತ್ತು, ಆನೆಯ ಕಾಲಿಗೆ ಕಟ್ಟಿ ಎಳಹೂಟಿಯ ಶಿಕ್ಷೆ ವಿಧಿಸಿ ಹತ್ಯೆ ಮಾಡಲಾಗಿತ್ತು.

21ನೇ ಶತಮಾನದಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವಾಗಲೂ 12ನೇ ಶತಮಾನದ ಇಂಥ ಹತ್ಯೆಯ ಪಳೆಯುಳಿಕೆಯಂತೂ ಉಳಿದಿದೆ. ರಾಜ್ಯದ ಮಂಡ್ಯ, ಮೈಸೂರು, ಕೋಲಾರ ಭಾಗಗಳಲ್ಲಿನ ಪದೇಪದೇ ವರದಿಯಾಗುವ ಮರ್ಯಾದೆಗೇಡು ಹತ್ಯೆಗಳ ಹಿಂದೆ ಊಳಿಗಮಾನ್ಯ ಪದ್ಧತಿ, ಭೂಮಾಲೀಕತ್ವದ ಧೋರಣೆ, ಜಾತಿ ಶ್ರೇಷ್ಠತೆಯ ವ್ಯಸನವನ್ನು ಗುರುತಿಸುತ್ತಾರೆ ಮಹಿಳಾ ಹೋರಾಟಗಾರ್ತಿಯರು. ಪರಿಶಿಷ್ಟರ ಹುಡುಗ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದರೆ ಒಪ್ಪಿಕೊಳ್ಳುವ ಪರಿಶಿಷ್ಟರ ಕುಟುಂಬಗಳು, ತಮ್ಮಲ್ಲೇ ಇರುವ ಕೆಳಜಾತಿಗಳ ಇಲ್ಲವೇ ಉಪಜಾತಿಗಳ ಹೆಣ್ಣನ್ನು ಒಪ್ಪಿಕೊಳ್ಳುವುದರಲ್ಲಿ ಹಿಂದೇಟು ಹಾಕುತ್ತವೆ. ಪರಿಶಿಷ್ಟರಲ್ಲಿ ಹೊಲೆಯ–ಮಾದಿಗರ ನಡುವೆ ಹೆಣ್ಣು–ಗಂಡಿನ ಕೊಡುಕೊಳ್ಳುವಿಕೆಯೇ ಇಲ್ಲ. ಇಂಥದೊಂದು ವಿವಾಹ ಮಾಡಿಸುವಾಗ ಕನ್ನಡದ ಪ್ರಸಿದ್ಧ ಲೇಖಕರೊಬ್ಬರು ಪರಿಶಿಷ್ಟ ಸಮುದಾಯದ ಆಕ್ರೋಶಕ್ಕೆ ಕಾರಣರಾಗಬೇಕಾಯಿತು. ಪರಿಶಿಷ್ಟ ಜಾತಿಯ ಯುವಕ, ಪರಿಶಿಷ್ಟ ಪಂಗಡದ ವಿವಾಹ ಪ್ರಕರಣದಲ್ಲಿ ವರನ ಸ್ನೇಹಿತನನ್ನು ಸ್ವಜಾತಿಯವರೇ ಕೈಗೆ ಸಿಕ್ಕಂತೆ ಹೊಡೆದಿದ್ದರು. ಅಂದು ಆತ ಉಳಿದದ್ದೇ ಹೆಚ್ಚು ಎನ್ನುವಂಥ ಸ್ಥಿತಿಯಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ದಲಿತ ಸಂಘರ್ಷ ಸಮಿತಿಯ ಮುಖಂಡರೊಬ್ಬರು.

ಸಾಮಾಜಿಕ ಜಾತಿ ಶ್ರೇಣೀಕರಣದಲ್ಲಿ ಕೆಳಗಿರುವ ಜಾತಿಗಳಲ್ಲೇ ತಾರತಮ್ಯಗಳಿರುವುದನ್ನು ಗುರುತಿಸುವ ದಲಿತ ಸಂಘಟನೆಗಳು ಮತ್ತು ಜನವಾದಿ, ಗಮನ ಅನೇಕ ಸಂಘಟನೆಗಳು ಈ ನಿಟ್ಟಿನಲ್ಲಿ ಹೋರಾಟ, ಬೀದಿನಾಟಕ, ಜಾಗೃತಿಯ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಆದರೆ, ಜಾತಿವ್ಯಸನ ಮಾನಸಿಕವಾಗಿ ಸ್ಥಿರೀಕರಣಗೊಂಡಿರುವ ಸಮುದಾಯಗಳಲ್ಲಿ ಬದಲಾವಣೆ ತರುವುದು ಅಷ್ಟು ಸುಲಭವಲ್ಲ ಎಂಬುದು ಈ ಸಂಘಟನೆಗಳು ಕಂಡುಕೊಂಡಿರುವ ಸತ್ಯ.

ಮೇಲ್ಜಾತಿಯ ಸಂಪ್ರದಾಯ, ಆಚಾರ–ವಿಚಾರಗಳನ್ನು ಅನುಸರಿಸುವ ಕೆಳಜಾತಿಗಳು, ಅದೇ ಮೇಲ್ಜಾತಿಯ ಕೆಲ ಸಮುದಾಯಗಳಲ್ಲಿ ನಡೆಯುತ್ತಿರುವ ಅಂತರ್ಜಾತಿ ವಿವಾಹಗಳನ್ನು ಅನುಕರಿಸುವಲ್ಲಿ ವಿಫಲವಾಗಿವೆ. ಆಧುನಿಕತೆ, ತಂತ್ರಜ್ಞಾನವನ್ನು ಶರವೇಗದಲ್ಲಿ ಒಗ್ಗಿಸಿಕೊಳ್ಳುತ್ತಿರುವ ಮೇಲ್ಜಾತಿ– ಕೆಳಜಾತಿಗಳು ಪ್ರೀತಿ, ವಿವಾಹದಂಥ ಸಮಯದಲ್ಲಿ ಇನ್ನೂ ಜಾತಿಶ್ರೇಷ್ಠತೆಯ ವ್ಯಸನವನ್ನೇ ಉಳಿಸಿಕೊಂಡಿವೆ. ಇದಕ್ಕೆ ಜಾತಿಗೊಂದು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳು, ಜಾತಿಗೊಂದು ವಸತಿ ಸಮುಚ್ಚಯಗಳು, ಬಡಾವಣೆಗಳೂ ಇಂಬುಗೊಡುತ್ತಿವೆ.

‌‌ಇತ್ತೀಚಿನ ದಶಕಗಳಲ್ಲಿ ಅಲ್ಪಮಟ್ಟಿಗೆ ಸಂಘಟಿತವಾಗುತ್ತಿರುವ ಕೆಳಜಾತಿ– ಸಮುದಾಯಗಳು ಆಧುನೀಕರಣಕ್ಕೆ ತಮ್ಮನ್ನು ಒಗ್ಗಿಸಿಕೊಂಡರೂ ಆಂತರ್ಯದಲ್ಲಿ ಮಾತ್ರ ತಮ್ಮಲ್ಲೇ ದ್ವೀಪಗಳಾಗಿಬಿಟ್ಟಿವೆ. ಅಂತರಜಾತಿಯ ವಿವಾಹದ ಸಂದರ್ಭದಲ್ಲಿ ವಿರೋಧಾತ್ಮಕ ನೀತಿಯ ಮೊರೆಹೋಗುತ್ತವೆ. ಈ ವಿರೋಧದ ನೆಲೆಯೇ ಮರ್ಯಾದೆಗೇಡು ಹತ್ಯೆಗೆ ಪ್ರಚೋದನೆ ನೀಡುತ್ತಿದೆ.

ಅಂತರಜಾತಿಯ ವಿವಾಹವಾದರೆ ಊರೊಳಗೆ ತಮ್ಮ ಕುಟುಂಬದ ಮರ್ಯಾದೆಗೆ ಧಕ್ಕೆಯಾಗುವ ಭೀತಿಯ ಜತೆಗೆ ಗ್ರಾಮದೊಳಗಿನ ಆರ್ಥಿಕ ಚಟುವಟಿಕೆಗಳಲ್ಲಿನ ತಮ್ಮ ಪಾಲು ತಪ್ಪಿಹೋಗುವ ಭೀತಿಯೂ ಮತ್ತೊಂದೆಡೆ ಆವರಿಸಿಕೊಂಡಿದೆ. ಈಗಲೂ ದಲಿತರು ಎಲ್ಲಿ ಕೂರಬೇಕು, ಎಲ್ಲಿ ನೀರು ಕುಡಿಯಬೇಕು, ಎಲ್ಲಿ ಕ್ಷೌರ ಮಾಡಿಸಿಕೊಳ್ಳಬೇಕು ಎಂಬ ಸಾಮಾಜಿಕ ಬಹಿಷ್ಕಾರಗಳು ಸಕ್ರಿಯವಾಗಿರುವ ಕಾರಣ ಜಾತಿಯ ವ್ಯಸನ ಮತ್ತಷ್ಟು ಹೆಚ್ಚುತ್ತಿದೆ. ಹಿಂದೆ ಆಯಾ ಕುಟುಂಬಗಳಿಗಷ್ಟೇ ಸೀಮಿತವಾಗಿದ್ದ ವಿವಾಹ ಪ್ರಕರಣಗಳಲ್ಲಿ ಈಗ ಆಯಾ ಜಾತಿಯ ಸಮುದಾಯವೇ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಹಾಗೆಂದು ಸ್ವಜಾತಿಯಲ್ಲೇ ಆಗುವ ವಿವಾಹಗಳಲ್ಲಿ ವರ್ಗ, ಅಂತಸ್ತಿನ ಪ್ರಶ್ನೆಗಳು ನೀಗಿವೆ ಎಂದರ್ಥವಲ್ಲ. ದಲಿತ ರಾಜಕಾರಣಿಯ ಮಗ ತನ್ನ ಅಂತಸ್ತು, ವರ್ಗಕ್ಕೆ ಹೊಂದುವ ಸ್ವಜಾತಿಯ ವಧುವನ್ನೇ ವರಿಸುತ್ತಾನೆ ಹೊರತು ತನಗಿಂತ ಕೆಳಗಿರುವ ಅಂತಸ್ತಿನ ಹುಡುಗಿಯನ್ನಲ್ಲ. ಕೆಳವರ್ಗದ ಶ್ರೀಮಂತರೂ ಮೇಲ್ವರ್ಗದವರೊಂದಿಗೆ ಗುರುತಿಸಿಕೊಳ್ಳುವ ಹವಣಿಕೆಯಲ್ಲಿರುವಾಗ ಇವರ ನಡುವೆ ಪರಸ್ಪರ ಸಂಬಂಧಗಳು ಸುಲಭವಾಗಿ ಬೆಸೆದುಕೊಂಡುಬಿಡುತ್ತವೆ. ಇಲ್ಲಿ ಅಂತಸ್ತು, ವರ್ಗವಷ್ಟೇ ಮುಖ್ಯವಾಗಿ ಕೆಲವೊಮ್ಮೆ ಜಾತಿ ನಗಣ್ಯವಾಗುತ್ತದೆ. ಇದಕ್ಕೆ ಸಿನಿಮಾ ಕ್ಷೇತ್ರ ಮತ್ತು ರಾಜಕಾರಣ ಕ್ಷೇತ್ರದಲ್ಲಿನ ಗಣ್ಯರ ವಿವಾಹಗಳೇ ಉದಾಹರಣೆ.

ಜಾತಿ–ಧರ್ಮದ ಶ್ರೇಷ್ಠತೆಯ ಅಮಲು, ಕುಟುಂಬದ ಪ್ರತಿಷ್ಠೆ, ಸಾಮಾಜಿಕ ಅಂತಸ್ತಿನ ಭ್ರಮೆಯಲ್ಲಿ ಜರುಗುತ್ತಿರುವ ಮರ್ಯಾದೆಗೇಡು ಹತ್ಯೆಗಳು ಭಾರತವಷ್ಟೇ ಅಲ್ಲ, ನೆರೆಯ ಪಾಕಿಸ್ತಾನ, ಅಭಿವೃದ್ಧಿ ರಾಷ್ಟ್ರಗಳೆಂದು ಮುಂಚೂಣಿಯಲ್ಲಿರುವ ಬ್ರಿಟನ್, ನೆದರ್‌ಲೆಂಡ್, ಜರ್ಮನಿ, ಸ್ವೀಡನ್‌ನಲ್ಲೂ ಆಗುತ್ತಿವೆ.

ಜಾಗತಿಕವಾಗಿ ಹಬ್ಬಿರುವ ಮರ್ಯಾದೆಗೇಡು ಹತ್ಯೆ ಎಂಬ ವೈರಸ್ ಅನ್ನು ತಡೆಯುವಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ವದ್ದು. ಮರಾಠಿಯಲ್ಲಿ ಕೆಲ ವರ್ಷಗಳ ಹಿಂದೆ ಬಂದಿದ್ದ ನಾಗರಾಜ್ ಮಂಜುಳೆ ನಿರ್ದೇಶನದ ‘ಸೈರಾಟ್‌’ ಸಿನಿಮಾ ಮರ್ಯಾದೆಗೇಡು ಹತ್ಯೆಯ ಭೀಕರತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿತ್ತು.

ಹೆತ್ತ ಮಕ್ಕಳನ್ನೇ ಹತ್ಯೆ ಮಾಡುವವರ ಮಾನಸಿಕ ಸ್ಥಿತಿ ಎಂಥದ್ದಿರಬಹುದು ಎಂದು ಪ್ರಶ್ನಿಸಿದರೆ, ‘ಯಾರಿಗೇ ಆಗಲಿ ಕೊಲ್ಲುವ ಮನಃಸ್ಥಿತಿ ತಕ್ಷಣಕ್ಕೆ ಉದ್ಭವವಾಗದು. ಒಬ್ಬ ವ್ಯಕ್ತಿ ಬೆಳೆದು ಬಂದಿರುವ ರೀತಿ, ನಂಬಿಕೆಗಳ ಮೇಲೆ ಕೊಲ್ಲುವ ಸ್ಥಿತಿಯು ಅವಲಂಬಿತವಾಗಿರುತ್ತದೆ. ಹೆಣ್ಣನ್ನು ಸ್ವತ್ತು ಎಂಬುದನ್ನು ಪಿತೃಪ್ರಧಾನ ಸಮಾಜ ಭಾವಿಸುತ್ತದೆ. ಗಂಡಸುತನ ಅಥವಾ ಮರ್ಯಾದೆ ಎನ್ನುವುದು ಸ್ವತ್ತಿನ ಸಂರಕ್ಷಣೆಯ ಮೇಲೆಯೇ ಅವಲಂಬಿತವಾಗಿದೆ. ಹೀಗಾಗಿ ಸ್ವತ್ತಿನ ರಕ್ಷಣೆಗೆ ಯಾವ ಮಟ್ಟಕ್ಕಾದರೂ ಇಳಿಯಲು ಮುಂದಾಗುವ ಪಿತೃಪ್ರಧಾನ ಸಮಾಜವು ಮರ್ಯಾದೆಗೇಡು ಹತ್ಯೆ ಮಾಡುವಂಥ ಸ್ಥಿತಿಗೆ ತಲು‍ಪುತ್ತದೆ’ ಎಂದು ವಿಶ್ಲೇಷಿಸುತ್ತಾರೆ ಬೆಂಗಳೂರಿನ ನಿಮ್ಹಾನ್ಸ್‌ನ ಮನೋವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಚೇತನ್ ಬಿ. 

ಇಂಥ ಹತ್ಯೆಗಳನ್ನು ತಡೆಯುವಲ್ಲಿ ಕಾನೂನು ಪ್ರಬಲ ಪಾತ್ರ ವಹಿಸಬಲ್ಲದು, ಮನಗಂಡ ಭಾರತದ ಸುಪ್ರೀಂ ಕೋರ್ಟ್, ವಿಕಾಸ್ ಯಾದವ್ ಪ್ರಕರಣದಲ್ಲಿ ಮರ್ಯಾದೆಗೇಡು ಹತ್ಯೆಗಳನ್ನು ಅತ್ಯಂತ ಕಟುವಾದ ಮಾತುಗಳಿಂದ ಖಂಡಿಸಿದೆ. ಈ ಬಗೆಯ ಅಪರಾಧಗಳು ವಿರಳಾತಿವಿರಳ ಪ್ರಕರಣಗಳ ವ್ಯಾಪ್ತಿಗೆ ಬರುತ್ತವೆಂದೂ ಇಂಥ ಕೃತ್ಯಗಳಿಗೆ ಮರಣದಂಡನೆಯೇ ಸೂಕ್ತವಾದ ಶಿಕ್ಷೆಯೆಂದೂ ಅಭಿಪ್ರಾಯಪಟ್ಟಿದೆ. ಅಂತೆಯೇ ಶಕ್ತಿವಾಹಿನಿ ಪ್ರಕರಣದಲ್ಲಿ ಸಂಗಾತಿಯ ಆಯ್ಕೆಯ ಹಕ್ಕನ್ನು’ ಸಂವಿಧಾನದ ವಿಧಿ 21 ಮತ್ತು 19 (1) (ಎ) ಅಡಿಯಲ್ಲಿ ಗುರುತಿಸಿದ್ದು, ವಯಸ್ಕರ ಬಾಳ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮೂರನೇ ವ್ಯಕ್ತಿಗೆ ಯಾವುದೇ ಅಧಿಕಾರ ಇಲ್ಲ. ವಯಸ್ಕರ ವಿವಾಹದ ಕುರಿತಾದ ಹಕ್ಕುಗಳಿಗೆ ಚ್ಯುತಿಯನ್ನು ಉಂಟು ಮಾಡುವವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮತ್ತೊಂದು ಪ್ರಕರಣದಲ್ಲಿ ‘ಜಾತಿ ವ್ಯವಸ್ಥೆ ಈ ದೇಶಕ್ಕೆ ಅಂಟಿದ ಶಾಪ. ಎಷ್ಟು ಬೇಗ ಅದನ್ನು ನಾಶಪಡಿಸಲಾಗುತ್ತದೆಯೋ ಅಷ್ಟು ಒಳ್ಳೆಯದು. ದೇಶವು ಒಗ್ಗಟ್ಟಾಗಿ ತನ್ನ ಮುಂದಿರುವ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ಜಾತಿ, ದೇಶವನ್ನು ಒಡೆಯುತ್ತಿದೆ. ಹಾಗಾಗಿ, ಅಂತರಜಾತಿ ಮದುವೆಗಳು ‘ಜಾತಿ ವ್ಯವಸ್ಥೆ’ಯನ್ನು ನಾಶಪಡಿಸುವ ಕಾರಣಕ್ಕೆ ಅವು ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿವೆ. ಆದರೆ, ದೇಶದ ಹಲವು ಭಾಗಗಳಲ್ಲಿ ಅಂತರಜಾತಿ ಮದುವೆ ಮಾಡಿಕೊಳ್ಳುತ್ತಿರುವ ಯುವಜೋಡಿಗಳಿಗೆ ಹಿಂಸೆ ಮಾಡುವುದಾಗಿ ಬೆದರಿಸುವುದು ಅಥವಾ ಹಿಂಸೆ ನೀಡುವಂಥ ಸುದ್ದಿಗಳು ವರದಿಯಾಗುತ್ತಿರುವುದು ಆಘಾತಕಾರಿ. ನಮ್ಮ ಅಭಿಪ್ರಾಯದಲ್ಲಿ ಅಂತಹ ಹಿಂಸೆಯ ಘಟನೆಗಳು, ಬೆದರಿಕೆಗಳು, ಕಿರುಕುಳಗಳು ಸಂಪೂರ್ಣ ಕಾನೂನುಬಾಹಿರ ಮತ್ತು ಅವುಗಳನ್ನು ಮಾಡುವವರನ್ನು ಕಠಿಣವಾಗಿ ಶಿಕ್ಷಿಸಬೇಕು. ಇದು ಮುಕ್ತ ಮತ್ತು ಪ್ರಜಾತಂತ್ರ ದೇಶವಾಗಿದೆ. ಮದುವೆಗೆ ಅರ್ಹ ವಯಸ್ಸಾದ ಆತ ಅಥವಾ ಆಕೆ ತಮಗಿಷ್ಟವಾದ ಯಾರನ್ನಾದರೂ ವಿವಾಹವಾಗಬಹುದು’ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಈ ನಿಟ್ಟಿನಲ್ಲಿ ನ್ಯಾಯಾಂಗ ಮಾತ್ರವಲ್ಲ, ಪ್ರಭುತ್ವವೂ ಸಾಮಾಜಿಕ ಬದಲಾವಣೆಯತ್ತ ಗಮನಹರಿಸುವ ತುರ್ತಿದೆ. ಶಿಕ್ಷಣ, ಉದ್ಯೋಗದಲ್ಲಿ ಅಂತರಜಾತಿ ವಿವಾಹಿತರಿಗೆ ಆದ್ಯತೆ ತಂದಿದ್ದೇ ಆದರೆ, ದೀರ್ಘಕಾಲದಲ್ಲಾದರೂ ಇಂಥ ಹತ್ಯೆಗಳನ್ನು ತಡೆಯಬಹುದು. ‘ಶುದ್ಧರಕ್ತ’ ಎಂಬುದು ಎಲ್ಲೂ ಯಾವ ಜನಾಂಗದಲ್ಲೂ ಇಲ್ಲ. ಎಲ್ಲೆಲ್ಲೂ ಸಂಕರಕ್ಕೊಳಗಾದ ಜನಾಂಗವೇ ಜೀವಿಸುತ್ತಿದೆ ಎಂಬುದನ್ನು ವಿಜ್ಞಾನಿಗಳೂ ಕಂಡುಕೊಂಡಿರುವಾಗ ಕುಟುಂಬ, ಜಾತಿ ಪ್ರತಿಷ್ಠೆಯ ಹೆಸರಿನಲ್ಲಿ ಆಗುತ್ತಿರುವ ಮರ್ಯಾದೆಗೇಡು ಹತ್ಯೆಗಳು ನಿರರ್ಥಕ. ಈ ನಿಟ್ಟಿನಲ್ಲಿ ಪ್ರಬಲವಾದ ಕಾನೂನು ಜಾರಿಗೆ ಬಂದಲ್ಲಿ ಮಾತ್ರ ಪ್ರೀತಿಯ ಗಾಳಿ ಹಟ್ಟಿ–ಮೊಹಲ್ಲಾಗಳ ನಡುವೆ ಬೀಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT