ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಹೊಸ ಚಿಗುರಿನ ಪಾರಿಜಾತ

Published 8 ಅಕ್ಟೋಬರ್ 2023, 0:25 IST
Last Updated 8 ಅಕ್ಟೋಬರ್ 2023, 0:25 IST
ಅಕ್ಷರ ಗಾತ್ರ

ಸಣ್ಣಾಟಗಳ ಮೂಲಕ ಶ್ರೀಕೃಷ್ಣ ಪಾರಿಜಾತ ಕಥೆ ಜನರಿಗೆ ಚಿರಪರಿಚಿತ. ನಿಮ್ಮ ಈ ‘ಪಾರಿಜಾತ’ ಇದಕ್ಕಿಂತ ಹೇಗೆ ಭಿನ್ನ?

ಉತ್ತರಕರ್ನಾಟಕದಲ್ಲಿ ಸಾಕಷ್ಟು ಜನಪದ ತಂಡಗಳು ‘ಶ್ರೀಕೃಷ್ಣ ಪಾರಿಜಾತ’ವನ್ನು ಸಣ್ಣಾಟದ ಮೂಲಕ ಪ್ರಸ್ತುತಪಡಿಸಿವೆ. ಅಷ್ಟೆ ಅಲ್ಲ, ಕರ್ನಾಟಕದಲ್ಲಿ ‘ಕೃಷ್ಣ ಪಾರಿಜಾತ’ ಇರುವಂತೆ , ಅಸ್ಸಾಂನಲ್ಲಿ ‘ಪಾರಿಜಾತ ಹರಣ್‌’, ಆಂಧ್ರದಲ್ಲಿ ‘ಭಾಮಾ ಕಲಾಪ’ ಪ್ರಸಿದ್ಧಿ ಪಡೆದಿವೆ. ಎಲ್ಲವೂ ಜನಪದದ ಶೈಲಿಯಲ್ಲಿಯೇ ಇವೆ. ಈ ಕಥೆಯನ್ನೇ ರಂಗಕ್ಕೆ ಅಳವಡಿಸಿದ್ದೇವೆ. ಆದರೆ, ನಮ್ಮ ಈ ನಾಟಕದ ಚಿತ್ತ ಸಂಪೂರ್ಣ ‘ಪಾರಿಜಾತ’ ಎನ್ನುವ ಹೂವನ್ನು ಕೇಂದ್ರೀಕರಿಸಿದೆ. 

ಪ್ರ

ಕಥೆ ನಿಮ್ಮನ್ನು ಕಾಡಿದ್ದು ಯಾವಾಗಿನಿಂದ?

ನಾನು ಸಣ್ಣಾಟದ ರೂಪದಲ್ಲಿಯೇ ಈ ಕಥೆಯನ್ನು ನೋಡಿ ಬೆಳೆದಿದ್ದೇನೆ. ಪುರಾಣದಲ್ಲಿ ಶ್ರೀಕೃಷ್ಣ ಪರಮಾತ್ಮ ಅಮೃತ ನೀಡಿ ದೇವತೆಗಳಿಗೆ ಅಮರತ್ವ ಕೊಟ್ಟ. ಅಂಥ ಕೃಷ್ಣ ಪರಮಾತ್ಮನಿಗೆ ಪಾರಿಜಾತ ಕೊಡುವುದಕ್ಕೆ ಏಕೆ ಆಗಲಿಲ್ಲ ಅಂಥ ಇಂದ್ರ ಯಾಕೆ ಯುದ್ಧ ಮಾಡಿದ ಎನ್ನುವುದು ಯಾವಾಗಲೂ ಕಾಡುವ ಪ್ರಶ್ನೆ. ಈ ಪ್ರಶ್ನೆಯನ್ನು ಕೆ.ವೈ.ನಾರಾಯಣಸ್ವಾಮಿ ಅವರ ಮುಂದೆಯೂ ಇಟ್ಟೆ. ಹೀಗೆ ಕಾಡಿದ ಹಲವು ವಿಚಾರಗಳು  ರಂಗರೂಪು ಪಡೆದಿವೆ. ಯಾವುದನ್ನಾದರೂ ಯಥಾವತ್ತಾಗಿ ತಂದರೆ ಅರ್ಥ ಇರುವುದಿಲ್ಲ ಅಲ್ಲವೇ? ಹೊಸತನ ಇರಲೇಬೇಕು. ಇಲ್ಲಿಯ ಪ್ರತಿ ದೃಶ್ಯವನ್ನು ನನ್ನ ಕಲ್ಪನೆಯಲ್ಲಿಯೇ ಅರಳಿಸಿದ್ದೇನೆ.  ಕೆವೈಎನ್‌ ಅವರು ಬರೆದು ಮುಗಿಸಿದ ಮೇಲೆ ಆರರಿಂದ ಏಳು ಬಾರಿ ಈ ನಾಟಕದ ಕರಡು ಬದಲಾಯಿತು. ಅದಾದ ಮೇಲೆ ಸುಮಾರು ಹದಿನೈದು ಬಾರಿ ಓದಿದ್ದೀನಿ. ಸಂಭಾಷಣೆ ಕಡಿಮೆಯಾಯಿತು ಎನಿಸಿದ ಕಡೆಯೆಲ್ಲ ರಚನೆಕಾರರ ಅನುಮತಿ ಪಡೆದು ಸೇರಿಸಿದ್ದೀನಿ. 

ಪ್ರ

ಯಾವ ಬಗೆಯ ಪ್ರಯೋಗಶೀಲತೆಗಳಿಗೆ ಈ ನಾಟಕ ತೆರೆದುಕೊಂಡಿದೆ?

ಆರಂಭದಲ್ಲಿ ಈ ನಾಟಕಕ್ಕೆ ‘ದೇವತರು’ ಎನ್ನುವ ಹೆಸರಿಡಲಾಗಿತ್ತು. ಆದರೆ ಇದು ಸುಲಭಕ್ಕೆ ಅರ್ಥವಾಗದು ಎನ್ನುವ ಕಾರಣಕ್ಕೆ ‘ಪಾರಿಜಾತ’ ಎಂದು ಕರೆಯಲಾಯಿತು. ಈ ನಾಟಕವು ರಂಗದ ಮೇಲೆ ಸಣ್ಣಾಟದ ರೂಪದಲ್ಲಿಯೇ ಇರುತ್ತದೆ. ಸಾಮಾನ್ಯವಾಗಿ  ‘ಶ್ರೀ ಕೃಷ್ಣ ಪಾರಿಜಾತ’  ಎನ್ನುವ ಸಣ್ಣಾಟವು 12‌‌‌\12 ಚೌಕಟ್ಟಿನಲ್ಲಿರುತ್ತದೆ. ಅಲ್ಲಿ  ಇಬ್ಬರು ಅಥವಾ ಮೂರು ಜನ ನಿರಂತರವಾಗಿ ಇರುತ್ತಾರೆ. ಯಾವುದೇ ರೀತಿಯ ಸೆಟ್‌ ಹಾಗೂ ಪ್ರಾಪರ್ಟೀಸ್‌ ಇರುವುದಿಲ್ಲ. ಇಂಥದ್ದೆ ಚೌಕಟ್ಟಿನಲ್ಲಿ ರಂಗಪ್ರಯೋಗ ನಡೆಯಲಿದೆ. ಸಂಗೀತದ ವಿಷಯಕ್ಕೆ ಬಂದಾಗ, ಕರ್ನಾಟಕ ಹಾಗೂ ಉತ್ತರ ಭಾರತದ ಎರಡೂ ಶೈಲಿಗಳನ್ನು ಬಳಸಲಾಗಿದೆ. ಇಲ್ಲಿ ಕಂಪನಿ ನಾಟಕಗಳ ಚಹರೆಯೂ ಕಾಣುತ್ತದೆ. ಅಸ್ಸಾಂನ ‘ಪಾರಿಜಾತ ಹರಣ್‌’ ಪಕ್ಕಾ ಶಾಸ್ತ್ರೀಯ ನೃತ್ಯರೂಪ ‘ಸತ್ರಿಯಾ’ವನ್ನು ಆಧರಿಸಿದೆ. ಆದರೆ ನನಗೆ ಇಲ್ಲಿ ‘ಸತ್ರಿಯಾ’ ತಂಡ ಸಿಗದೇಹೋಗಿದ್ದರಿಂದ ಕಳರಿಯನ್ನೂ ಬಳಸಿದ್ದೇನೆ. ವಸ್ತ್ರವಿನ್ಯಾಸ ಜನಪದ ಶೈಲಿಯಲ್ಲಿಯೇ ಇದ್ದರೂ ಒಂದಷ್ಟು ಮಾರ್ಪಾಟು ಮಾಡಿಕೊಂಡು ನನ್ನ ಶೈಲಿಯನ್ನು ಸೇರಿಸಿದ್ದೇನೆ. 

ಪ್ರ

ನಾಟಕ ನಿರ್ದೇಶಿಸುವಾಗ ಎದುರಾದ ಸವಾಲುಗಳೇನು?

ಸಣ್ಣಾಟದ ರೂಪದಲ್ಲಿ ಪ್ರಸ್ತುತಪಡಿಸುವುದೇ ದೊಡ್ಡ ಸವಾಲು. ಇಷ್ಟೇ ಚೌಕಟ್ಟಿನಲ್ಲಿ ನಾಟಕವನ್ನು ಸುಂದರವಾಗಿ ಕಟ್ಟುವುದು, ನೋಡುಗರನ್ನು ಹಿಡಿದಿಟ್ಟುಕೊಳ್ಳುವುದು, ಅದರಲ್ಲಿಯೇ ಹಲವು ಪ್ರಯೋಗಗಳನ್ನು ನಡೆಸುವುದು ಎಲ್ಲವೂ ಸವಾಲೇ. ಇಲ್ಲಿ ವಿಶೇಷವಾಗಿ ಭರತನಾಟ್ಯ ಹಾಗೂ ಕಥಕ್‌ ಶೈಲಿಯನ್ನು ಬಳಸಿಕೊಳ್ಳಲಾಗಿದೆ. ಸಣ್ಣಾಟದಲ್ಲಿರುವಂತೆ ಬರೀ ಸಂಗೀತವಷ್ಟೆ ಅಲ್ಲದೆ ಸಂಭಾಷಣೆಗೂ ಮಹತ್ವ ನೀಡಲಾಗಿದೆ. 

ಪ್ರ

ಪಾರಿಜಾತದಲ್ಲಿ ಸಮಕಾಲೀನತೆಯ ಸಮನ್ವಯ ಹೇಗೆ? 

ರುಕ್ಮಿಣಿ–ಸತ್ಯಭಾಮಾರ ಕಲಹ ಪ್ರಸಂಗವನ್ನು ತುಸು ತಮಾಷೆಯ ಧಾಟಿಯಲ್ಲಿಯೇ ನಿರೂಪಿಸಲಾಗಿದೆ. ಇಲ್ಲಿ ರುಕ್ಮಿಣಿ, ಸತ್ಯಭಾಮಾ ಇಬ್ಬರೂ ಕೃಷ್ಣನನ್ನು ಪ್ರಶ್ನಿಸುವ ಪ್ರಸಂಗವೂ ಇದೆ. ಹಾಗೆಯೇ ನಾರದ–ಕೃಷ್ಣ ಮತ್ತು ಕೃಷ್ಣ–ರುಕ್ಮಿಣಿ–ಸತ್ಯಭಾಮಾರ ಸಂಭಾಷಣೆಗಳಲ್ಲಿ ಸರಳ ಸ್ನೇಹವಿದೆ. ಎಂಥದ್ದೇ ಕಥೆಯಾದರೂ ಮೊದಲು ಅದು ಅದನ್ನು ನಿರ್ದೇಶಿಸುವ ನಿರ್ದೇಶಕರನ್ನು ತಟ್ಟಬೇಕು. ನಿರ್ದೇಶಕರ ಮನಸ್ಸನ್ನು ತಟ್ಟಿದರೆ ಅದು ಪ್ರೇಕ್ಷಕ ಪ್ರಭುವನ್ನು ಮುಟ್ಟುತ್ತದೆ ಎನ್ನುವುದರಲ್ಲಿ ನಂಬಿಕೆ ಇಟ್ಟವಳು. ಇಲ್ಲಿ ಕಲಾವಿದರೆ ಪಾತ್ರದಿಂದ ಹೊರಗೆ ನಿಂತು ಪಾತ್ರವನ್ನು ವಿಮರ್ಶೆ ಮಾಡುವ ಜನಪದರ ಶೈಲಿಯ ಪ್ರಭಾವ ಗಾಢವಾಗಿದೆ. 

ಬಿ. ಜಯಶ್ರೀ
ಬಿ. ಜಯಶ್ರೀ
ಪ್ರ

ಈಗಿನ ನಟ–ನಟಿಯರ ಬಗ್ಗೆ ಏನನ್ನಿಸುತ್ತದೆ?

ಈ ನಾಟಕದಲ್ಲಿ ನೃತ್ಯಪಟುಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇಬ್ಬಿಬ್ಬರೇ ರಂಗದ ಮೇಲೆ ಇರುವುದರಿಂದ ಕಲಾವಿದರು ಬಹು ಎಚ್ಚರದಿಂದ ಇರಬೇಕಾಗುತ್ತದೆ. ನಮ್ಮ ಸ್ಪಂದನ ತಂಡದಲ್ಲಿ ಎಂದಿನಂತೆ ಹೊಸ ಕಲಾವಿದರು ಇದ್ದಾರೆ. ಎಲ್ಲವನ್ನೂ ಹೇಳಿಕೊಟ್ಟು ಮಾಡಿಸುವುದಕ್ಕೆ ಅಷ್ಟು ಇಷ್ಟವಿಲ್ಲ. ಸ್ವಲ್ಪ ತೀಡುವುದು, ತಿದ್ದುವುದು ಇದ್ದೇ ಇರುತ್ತದೆ. ಹೊಸ ಚಿಗುರು ಬರಲೇಬೇಕು.

ಪಾರಿಜಾತ ನಾಟಕದ ಮಾಹಿತಿ

ರಚನೆ: ಕೆ.ವೈ.ನಾರಾಯಣಸ್ವಾಮಿ

ನಿರ್ದೇಶನ: ಬಿ. ಜಯಶ್ರೀ

ಸಂಗೀತ: ಪ್ರವೀಣ್‌ ಡಿ.ರಾವ್‌ ಮತ್ತು ಸುಶೀಲ್‌ ಶರ್ಮಾ

ರಂಗಸಜ್ಜಿಕೆ: ಶಶಿಧರ್‌ ಅಡಪ ಮತ್ತು ಅರುಣ್‌ ಸಾಗರ್‌

ಬೆಳಕು ವಿನ್ಯಾಸ: ಅರುಣ್‌ ಡಿ.ಟಿ. 

ಅ. 11 ಮತ್ತು 12– ರಂಗಶಂಕರ, ಬೆಂಗಳೂರು; ಸಂಜೆ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT