ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಅಕ್ಷರವೇ ಬಿಡುಗಡೆಯ ಮಂತ್ರ: ಕವಿ ಎಲ್.ಹನುಮಂತಯ್ಯ

Published 15 ಜೂನ್ 2024, 23:30 IST
Last Updated 15 ಜೂನ್ 2024, 23:30 IST
ಅಕ್ಷರ ಗಾತ್ರ

ಸಾಮಾನ್ಯ ದಲಿತ ಕುಟುಂಬದಲ್ಲಿ ಹುಟ್ಟಿದ ನೀವು, ಮೇಲ್ಮನೆ ಪ್ಯಾನಲ್ ಉಪಸಭಾಪತಿ ಸ್ಥಾನದವರೆಗೆ ಬೆಳೆದು ಬಂದ ಬಗೆ....

ದಲಿತರಾಗಲಿ, ದಲಿತೇತರರಾಗಲಿ ಜೀವನದಲ್ಲಿ ಏನನ್ನಾದರೂ ಸಾಧಿಸುವಾಗ ಅವರ ಪ್ರಯತ್ನವಿಲ್ಲದೆ, ಶ್ರಮವಿಲ್ಲದೆ ಆಕಸ್ಮಿಕವಾಗಿ ಘಟಿಸುತ್ತದೆ ಎಂಬುದು ಸುಳ್ಳು. ಈ ಮಾತನ್ನು ಪೂರ್ಣವಿಶ್ವಾಸದಿಂದಲೇ ಹೇಳುತ್ತಿದ್ದೇನೆ. ಆರಂಭದಿಂದ ಈ ಹೊತ್ತಿನವರೆಗೂ ಯಾವ ದಾರಿಯಲ್ಲಿ ನಮ್ಮ ಚಿಂತನೆಗಳು ಇತ್ತೋ ಬಹುಶಃ ಅವು ನಮ್ಮನ್ನು ಈವರೆಗೂ ಕರೆದು ತಂದಿವೆ. ಸಮಾಜದ ಬಗೆಗಿನ ನಮ್ಮ ಚಿಂತನೆ ಮತ್ತು ಸಮಾಜದ ಒಳಿತಿನ ಪರವಾದ ನಿಲುವುಗಳಿಂದ ಈ ಹಂತ ಮುಟ್ಟಲಿಕ್ಕೆ ಸಾಧ್ಯವಾಗಿದೆ. 70-80ರ ದಶಕದಲ್ಲಿ ಸಮಾಜದಲ್ಲಿದ್ದ ಬಡತನ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯಗಳು ನಮ್ಮನ್ನು ಮಾನಸಿಕವಾಗಿ ತುಂಬಾ ಘಾಸಿಗೊಳಿಸಿದವು. ಇದರ ವಿಮೋಚನೆಯ ದಾರಿಯನ್ನು ಅಂಬೇಡ್ಕರ್, ಲೋಹಿಯಾ, ಬಸವಣ್ಣ, ಮಾರ್ಕ್ಸ್ ಅವರ ಚಿಂತನೆಗಳು ತೋರಿದವು. ಅವುಗಳ ವಿವೇಕದಿಂದ ಸಾಮಾಜಿಕ ಅನಿಷ್ಟಗಳ ವಿರುದ್ಧ ಪ್ರತಿಭಟಿಸುವುದೇ ನಮ್ಮ ಜೀವನದ ಗುರಿಯಾಯಿತು. ಯಥಾಸ್ಥಿತಿ ವಾದವನ್ನು ಮೀರಿದ ಇಂತಹ ಭಿನ್ನ ಆಲೋಚನೆಗಳ ಫಲವಾಗಿ ವಿಧಾನ ಪರಿಷತ್ತಿಗೆ, ರಾಜ್ಯಸಭೆಗೆ ಅವಕಾಶ ದೊರಕಿತು.

ಸಮಾಜದಲ್ಲಿ ಅಸ್ಪೃಶ್ಯತೆ ಇಲ್ಲದ ಊರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯದ ದಿನ, ಕನಸಾಗೇ ಉಳಿಯುತ್ತಿದೆಯಲ್ಲ..

ನಮ್ಮ ದೇಶಕ್ಕೆ ಬಹುದೊಡ್ಡ ಪರಂಪರೆ ಇದೆ. ಅದರ ಮುಂದೆ 75 ವರ್ಷ ಬಹಳ ಕಡಿಮೆ ಅವಧಿ. 2 ಸಾವಿರ ವರ್ಷದ ಪರಂಪರೆಯನ್ನ 75 ವರ್ಷಗಳಲ್ಲಿ ಬದಲಾವಣೆ ಮಾಡುತ್ತೀವೆಂಬುದು ಬರಿಯ ಆಶಾವಾದ. ಆದರೆ ಈ 75 ವರ್ಷಗಳಲ್ಲಿ ಚಾಲ್ತಿಗೆ ಬಂದ ತಿಳಿವಳಿಕೆ ಏನೆಂದರೆ ; ದಲಿತರ ಮೇಲಿನ, ಮಹಿಳೆಯರ ಮೇಲಿನ ದೌರ್ಜನ್ಯಗಳು ಅಪರಾಧ, ಕಾನೂನಿನ ಪ್ರಕಾರ ಶಿಕ್ಷಾರ್ಹ ಎಂಬ ಪ್ರಜ್ಞೆ ಬಹುಸಂಖ್ಯಾತರಲ್ಲಿ ಮೂಡಿದೆ. ಆದರೆ ಈ ಪರಂಪರೆಯ ಯಜಮಾನಿಕೆ ಇದೆಯಲ್ಲ, ಅವುಗಳ ಪ್ರಾಬಲ್ಯದಿಂದ ದೌರ್ಜನ್ಯವನ್ನು ಸಂಪೂರ್ಣ ನಿಲ್ಲಿಸೋಕೆ ಸಾಧ್ಯವಾಗುತ್ತಿಲ್ಲ. ಅವಿನ್ನೂ ಪ್ರಬಲವಾಗಿ ಕೆಲಸ ಮಾಡುತ್ತಿವೆ. ಯಾಕೆಂದರೆ; ಅವರ ಕೈಯಲ್ಲಿ ಅಧಿಕಾರವೂ ಇದೆ, 75 ವರ್ಷಗಳ ಸ್ವಾತಂತ್ರ‍್ಯವೂ ಇದೆ. ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಕೈಯಲ್ಲಿ ಅಧಿಕಾರವೂ ಇಲ್ಲ, ಅಧಿಕಾರದತ್ತ ಹೆಜ್ಜೆ ಹಾಕುವ ಇಚ್ಛಾಶಕ್ತಿಯೂ ಇಲ್ಲ. ಇನ್ನೂ ಈ ಫ್ಯೂಡಲ್ ವ್ಯವಸ್ಥೆಗೆ ದೌರ್ಜನ್ಯವು ಮನುಷ್ಯ ವಿರೋಧಿಯಾದದ್ದೆಂದೂ ಅನಿಸುತ್ತಿಲ್ಲ. ಅದಿನ್ನೂ ದೌರ್ಜನ್ಯವನ್ನು ಎಸಗಿ ಅಸ್ತಿತ್ವವನ್ನು ಕಂಡುಕೊಳ್ಳಬಲ್ಲೆ ಎಂಬ ವಿಕೃತ ಮನಸ್ಥಿತಿಯಲ್ಲಿದೆ. ಇಂತಹ ದೌರ್ಜನ್ಯಗಳಿಂದ ಮುಕ್ತರಾಗಲಿಕ್ಕಿರುವ ಏಕೈಕ ದಾರಿಯೇ, ದಲಿತರ ಅಧಿಕಾರ ಕೇಂದ್ರಿತ ರಾಜಕಾರಣ.ದಲಿತರ ಮೇಲಿನ ದೌರ್ಜನ್ಯದ ವಿರುದ್ದ ಕೇಸು ದಾಖಲು ಮಾಡಿದವರನ್ನು ಸುಟ್ಟು ಹಾಕುತ್ತಿರುವ ಪ್ರಕರಣಗಳು ನಮ್ಮ ಕಣ್ಮುಂದೆ ನಡೆಯುತ್ತಲೇ ಇವೆ. ಇಂತವರಿಗೆ ರಕ್ಷಣೆ ಸಿಗುವುದು ಹೇಗೆ? ನಾವು ಅಧಿಕಾರ ಪಡೆಯುವಲ್ಲಿ ಯಶಸ್ಸಾದರೆ ಮಾತ್ರ ಇಂತಹ ದೌರ್ಜನ್ಯಗಳಿಗೆ ಕಡಿವಾಣ ಹಾಕಲಿಕ್ಕೆ ಸಾಧ್ಯ.

70 - 80ರ ದಶಕದಲ್ಲಿ ‘ಬೂಸಾ ಸಾಹಿತ್ಯ’ ಪ್ರಕರಣದಿಂದ ದಲಿತ ಚಳವಳಿ, ಸಾಹಿತ್ಯ ಹುಟ್ಟಿ, ಹೊಸ ಸಂಚಲನಕ್ಕೆ ನಾಂದಿ ಹಾಡಿತು. ಈ 50 ವರ್ಷಗಳ ನಂತರ ಒಂದು ಬಗೆಯ ಸ್ತಬ್ಧತೆಯನ್ನು ಕಾಣುತ್ತಿದ್ದೀವಾ?

ಬೂಸಾ ಸಾಹಿತ್ಯ ಪ್ರಕರಣಕ್ಕೆ ಮತ್ತು ದಲಿತ ಚಳವಳಿಗೆ 50 ವರ್ಷ ಆಗಿದೆ. ಆದರೆ ನಮ್ಮ ಅಸ್ಪೃಶ್ಯತೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ದಲಿತ ಜನಾಂಗ ಎಚ್ಚರಗೊಂಡದ್ದು ಕಳೆದ 50 ವರ್ಷಗಳಲ್ಲಿ. ಎಚ್ಚರಕ್ಕೆ ಮುಖ್ಯ ಕಾರಣ, ನಮ್ಮಗಳಿಗೆ ಬಂದ ಅಕ್ಷರ ಜ್ಞಾನ, ಪ್ರಜಾಪ್ರಭುತ್ವದ ಕಲ್ಪನೆ - ಇದಕ್ಕೆ ಮೂಲ ಕಾರಣ ಅಂಬೇಡ್ಕರ್.

ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದ ಮೇಲೆ, ಶಿಕ್ಷಣ ಸಾರ್ವತ್ರೀಕರಣ ಆದಮೇಲೆ ದಲಿತ ಜನಾಂಗದ ಯುವಕರಲ್ಲಿ ಹೊಸ ಚಿಂತನೆ ಪ್ರಾಪ್ತಿಯಾಯಿತು. ಆ ಹೊಸ ಚಿಂತನೆಯ ಮೂಲಕ, ಈ ಸಮಾಜ ನನ್ನ ಮೇಲೆ ಏಕಿಷ್ಟು ದೌರ್ಜನ್ಯ ನಡೆಸುತ್ತಿದೆ? ನಾನೇನು ಅಪರಾಧ ಮಾಡಿದ್ದೇನೆ? ಯಾಕೆ ನನಗೆ ಅಸ್ಪೃಶ್ಯತೆಯ ಬಹಿಷ್ಕಾರ? ಅಂಥ ಅಕ್ಷರಸ್ಥ ಸಮುದಾಯ ಆಲೋಚಿಸಲಿಕ್ಕೆ ಆರಂಭಿಸಿತು. ಇದರ ಫಲವಾಗಿ ಕರ್ನಾಟಕದಲ್ಲಿ ಸಂಘಟಿತ ದಲಿತ ಚಳವಳಿ ಆರಂಭವಾಯಿತು. ಬಸವಲಿಂಗಪ್ಪನವರ ಬೂಸಾ ಸಾಹಿತ್ಯ ಹೇಳಿಕೆ ಆ ಕಾಲಕ್ಕೆ ಒಂದು ನೆಪವಷ್ಟೇ. ಆ ಹೊತ್ತಿಗೆ ತನಗೆ ಅನ್ನಿಸಿದ್ದನ್ನು ಧೈರ್ಯವಾಗಿ ಹೇಳುತ್ತಿದ್ದ ರಾಜಕಾರಣಿ ಇವರಾದ್ದರಿಂದ, ಅವರ ಮೇಲೆ ಸಮಾಜದ ಗಮನ ಹೆಚ್ಚಾಯಿತು. ಅಧಿಕಾರ ಕಳೆದುಕೊಂಡರು. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದು ಕಡೆ; ಅವರ ಹೇಳಿಕೆಯಿಂದ ಸೂಕ್ಷ್ಮಗೊಂಡ ಸಮಾಜ ಎರಡು ನೆಲೆಯಲ್ಲಿ ಚಿಂತಿಸಲಿಕ್ಕೆ ಆರಂಭಿಸಿತು. ಒಂದು; ದಲಿತ ಸಮಾಜ ಬಸವಲಿಂಗಪ್ಪನವರ ಪರವಾಗಿ ನಿಂತದ್ದು ಮತ್ತು ಆಲೋಚಿಸಿದ್ದು. ಎರಡು; ದಲಿತೇತರ ಸಮಾಜ ಬಸವಲಿಂಗಪ್ಪನವರ ವಿರುದ್ದವಾಗಿ ನಿಂತದ್ದು ಮತ್ತು ಆಲೋಚಿಸಿದ್ದು.


‘ಅಕ್ಷಾರ ಅಕ್ಷಾರವೇ’ ಎನ್ನುವುದು ಕನ್ನಡ ಕಾವ್ಯದ ಅರಿವನ್ನು ಮತ್ತು ದಲಿತರ ಬದುಕಿನ ವಿಮೋಚನೆಯನ್ನು ಒಟ್ಟೊಟ್ಟಾಗಿ ಹೇಳುವಾಗ, ಅದು ನಿಮಗೆಷ್ಟು ಯಶಸ್ವಿಯಾಗಿ ಕಂಡಿದೆ?

ಅಕ್ಷರ ದಲಿತ ಸಮುದಾಯದ ನಿಜವಾದ ದೇವರು. ನಾನು ಅದನ್ನ ‘ಅಕ್ಷರ ದೇವ’ ಅಂತಲೇ ಕರೆಯುತ್ತೇನೆ. ದಲಿತರನ್ನ ಸಾಂಸ್ಕೃತಿಕ ದಾಸ್ಯದಿಂದ ಬಿಡುಗಡೆಗೊಳಿಸುವ ಶಕ್ತಿ ಅದಕ್ಕಿದೆ. ಹಾಗಾಗಿ ನಾನು ಅದನ್ನ ದಲಿತರ ದೈವ ಅಂತ ಕರೆದೆ. ದಲಿತ ಬಂಡಾಯ ಚಳವಳಿಯ ಆರಂಭದಿಂದಲೂ ಇದರ ಮಹತ್ವವನ್ನು ಹೇಳುತ್ತಲೇ ಬಂದಿದ್ದೀನಿ. ನಾನು ಇಂದಿಗೂ ಪೂಜಿಸುತ್ತಿರುವ ಏಕೈಕ ದೈವವಿದು. ಈ ದೈವಕ್ಕೆ ಕತ್ತಲನ್ನು ಓಡಿಸಿ ಬೆಳದಿಂಗಳನು ಎರೆವ ಶಕ್ತಿ ಇದೆ. ಹಾಗಾಗಿ ಅಕ್ಷರ ಎಂಬ ತಿಳವಳಿಕೆಯಿಂದ ಬಿಡುಗಡೆ ಸಾಧ್ಯವೇ ಹೊರತು, ಮತ್ತಾವುದರಿಂದಲೂ ಅಲ್ಲ. ತಿಳವಳಿಕೆ ಬರದೇ ಹೋದರೆ ಕಾನೂನು ಕೂಡ ನಮ್ಮನ್ನು ಬಿಡುಗಡೆ ಮಾಡಲಿಕ್ಕೆ ಸಾಧ್ಯವಿಲ್ಲ. ಅಂಬೇಡ್ಕರ್ ಹೇಳಿದ ಮಾತು ಎಷ್ಟು ಸತ್ಯವೆಂದರೆ ಗುಲಾಮನನ್ನು ಗುಲಾಮ ಎಂದು ಕರಿ, ಅವನಲ್ಲಿ ಎಚ್ಚರ ಉಂಟಾಗುತ್ತದೆ’ ಅಂದರು. ಅವರ ತಿಳವಳಿಕೆ ಈಗಲೂ ಎಷ್ಟು ಪ್ರಸ್ತುತ! ಇನ್ನೂ ದಲಿತರ ವಿಮೋಚನೆ ಅನ್ನೋದು ನಿರಂತರವಾಗಿ ಭಾರತದಂತಹ ದೇಶಗಳಲ್ಲಿ ನಡೆಯಬೇಕಾದ ಪ್ರಕ್ರಿಯೆ. ಅದಕ್ಕೆ ಅಂಬೇಡ್ಕರ್ ಅಂತಹ, ಗಾಂಧಿ ಅಂತಹ, ವಿವೇಕಾನಂದರಂತಹ ಅನೇಕ ದಾರ್ಶನಿಕರು ಬಂದರೂ ಅದರ ಕವಚ ಚೂರೂ ಮುಕ್ಕಾಗಿಲ್ಲ. ಈ ಕವಚಗಳನ್ನು ಕಳಚುವ ಶಕ್ತಿ ಅಕ್ಷರಕ್ಕಿದೆ. ಆದ್ದರಿಂದ ಇದು ಕನ್ನಡದ ವಿಮೋಚನೆಯೂ ಹೌದು! ಭಾರತದ ವಿಮೋಚನೆಯೂ ಹೌದು! ದಲಿತ ಶಕ್ತಿಯ ವಿಮೋಚನೆಯೂ ಹೌದು! ಎಲ್ಲ ಬಡವರ ವಿಮೋಚನೆಯೂ ಹೌದು! ಮತ್ತೇ ಅಕ್ಷರದ ತಿಳಿವಳಿಕೆ ಅನ್ನೋದು ಕೇವಲ ಓದಲ್ಲ, ಬರಿಯ ಪದವಿಗಳಲ್ಲ, ಅದು ಬಿಡುಗಡೆಯ ಮಂತ್ರ. ವಿಮೋಚನೆ ಅನ್ನೋದು ಸರ್ವರ ವಿಮೋಚನೆ. ಸರ್ವರ ವಿಮೋಚನೆಯಲ್ಲಿ ದೇಶದ, ಅಂತಿಮವಾಗಿ ವಿಶ್ವದ ವಿಮೋಚನೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT