ಇದೇ ನಾಡು, ಇದೇ ಭಾಷೆ
ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ, ಹೇಗೇ ಇರಲಿ
ಕನ್ನಡವೇ ನಮ್ಮ ಉಸಿರಲ್ಲಿ...

ಪುಣೆಯ ಪ್ರತಿಷ್ಠಿತ ಬಡಾವಣೆಯ ಅಪಾರ್ಟ್ಮೆಂಟ್ವೊಂದರಿಂದ ಕನ್ನಡ ಸಿನಿಮಾದ ಈ ಹಾಡು ತಂಗಾಳಿಯೊಂದಿಗೆ ತೇಲಿ ಬಂದು ಕಿವಿಗೆ ಸೋಕಿತು. ‘ಅಪ್ಪಟ ಮರಾಠಿ ನೆಲದಲ್ಲಿ ಕನ್ನಡ ಹಾಡೇ’ ಎಂದು ಸಂದೇಹದಿಂದ ಹಾಡು ತೇಲಿ ಬಂದ ಅಪಾರ್ಟ್ಮೆಂಟ್ನತ್ತ ಹೆಜ್ಜೆ ಹಾಕಿದೆ. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಅಲ್ಲಿ ಸಂಪೂರ್ಣ ಕನ್ನಡದ ಕಂಪಿತ್ತು. ಅಲ್ಲಿದ್ದ ಕನ್ನಡದ ಮಕ್ಕಳೆಲ್ಲ ಒಂದಾಗಿ, ಒಂದಾದ ಮೇಲೊಂದರಂತೆ ಹಾಡುತ್ತಿದ್ದ ಕನ್ನಡದ ಹಾಡು ಕೇಳುತ್ತ ಮೈಮರೆತೆ. ಪುಣೆಯಲ್ಲಿ ಕನ್ನಡಿಗರ ಪರಿಚಯ, ಮಾತು ಮುದ ನೀಡಿತು.

‘ಜಗತ್ತಿನ ಎಲ್ಲೆಯೇ ನೆಲೆ ನಿಲ್ಲಲಿ ತಾಯ್ನಾಡು ಮತ್ತು ತಾಯ್ನುಡಿ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಲ್ಲ. ಈ ಮೋಹಕ್ಕೆ ಯಾರೂ ಹೊರತಲ್ಲ’ ಎನ್ನುತ್ತ ನನ್ನೊಂದಿಗೆ ಮಾತಿಗಿಳಿದವರು ಹುಬ್ಬಳ್ಳಿಯ ಮನೋಜಕುಮಾರ ಅಣ್ಣಿಗೇರಿ.

‘ವೃತ್ತಿಯಿಂದ ಐ.ಟಿ ಉದ್ಯೋಗಿ. ಪ್ರವೃತ್ತಿಯಿಂದ ಕನ್ನಡದ ಸೇವಕ’ ಎಂದು ತಮ್ಮನ್ನು ಪರಿಚಯ ಮಾಡಿಕೊಂಡರು. ಹಲವು ವರ್ಷಗಳು ಫ್ರಾನ್ಸ್ನಲ್ಲಿ ಅಣು ಸಂಧಾನ (ನ್ಯೂಕ್ಲಿಯರ್ ಫಿಷನ್) ಕ್ಷೇತ್ರದಲ್ಲಿ ಕೆಲಸ ಮಾಡಿದವರು. ದಶಕದ ಹಿಂದೆ ಕುಟುಂಬದೊಂದಿಗೆ ಪುಣೆಗೆ ಬಂದು ನೆಲೆಸಿದ್ದಾರೆ. ಮಾತುಕತೆಗೆ ಮನೋಜ ಅವರ ಪತ್ನಿ ಅನಿತಾ ಹಾಗೂ ಅವರ ಗೆಳೆಯರ ಬಳಗವೂ ಸೇರಿಕೊಂಡಿತು.

ಕರ್ನಾಟಕದಿಂದ ಅನೇಕ ವರ್ಷಗಳಿಂದ ದೂರವಿದ್ದರೂ ಇಲ್ಲಿಯ ಕನ್ನಡಿಗರಿಗೆ ಕನ್ನಡದ ಮೇಲಿನ ವ್ಯಾಮೋಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಬದಲಾಗಿ ಅದು ಹೆಮ್ಮರವಾಗಿ ಬೆಳೆದಿದೆ.

‘ನಮ್ಮ ನಾಡು, ನುಡಿ, ಸಂಸ್ಕೃತಿ, ಆಹಾರದಿಂದ ದೂರವಾದಾಗಲೇ ಅದರ ಮಹತ್ವ ಅರಿವಾಗೋದು. ವಿದೇಶಿ ನೆಲದಲ್ಲಿದ್ದಾಗಲೇ ನಾವು ಹೆಚ್ಚು ಕನ್ನಡಿಗರಾಗಿದ್ದು. ಕನ್ನಡತನವನ್ನು ಮೈಗೂಡಿಸಿಕೊಂಡಿದ್ದು’ ಎನ್ನುವ ದಂಪತಿ ಮರಾಠಿ ನೆಲದಲ್ಲಿ ಕನ್ನಡ ಕಸ್ತೂರಿಯ ಕಂಪು ಹರಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಳೆದ ವರ್ಷದಿಂದ ‘ಕಂಪು’ ಎಂಬ ಅಪ್ಪಟ ಕನ್ನಡದ ಆನ್ಲೈನ್ ಮಾಸಪತ್ರಿಕೆಯನ್ನು ನಿಯಮಿತವಾಗಿ ಹೊರ ತರುತ್ತಿದ್ದಾರೆ. ಹೆಸರೇ ಸೂಚಿಸುವಂತೆ ‘ಕಂಪು’ ಅಪ್ಪಟ ಕನ್ನಡ ಪತ್ರಿಕೆ. ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದಂತಹ ಸದಭಿರುಚಿಗೆ ಮೀಸಲಾದ ಪತ್ರಿಕೆ. ಈ ದಂಪತಿ ವ್ರತದಂತೆ ಈ ಪತ್ರಿಕೆಯನ್ನು ಅಚ್ಚುಕಟ್ಟಾಗಿ ರೂಪಿಸುತ್ತಿದ್ದಾರೆ.

ತಾಯ್ನುಡಿ ಮೇಲಿನ ಪ್ರೀತಿಯೇ ‘ಕಂಪು’ ಹುಟ್ಟಿಗೆ ಪ್ರೇರಣೆ. ಹೊರನಾಡ ಕನ್ನಡಿಗರು ಮತ್ತು ಅವರ ಮಕ್ಕಳಿಗೆ ಕನ್ನಡ ಭಾಷೆಯ ನಂಟು ಕಡಿದು ಹೋಗಬಾರದು ಎನ್ನುವ ತುಡಿತದ ಫಲವೇ ಈ ಪತ್ರಿಕೆ ಎನ್ನುತ್ತಾರೆ ಮನೋಜ ಮತ್ತು ಅನಿತಾ ದಂಪತಿ. ಸಂಬಳದ ಒಂದು ಭಾಗವನ್ನು ಅವರು ‘ಕಂಪು’ ಪತ್ರಿಕೆಗಾಗಿ ಮೀಸಲಿ
ಟ್ಟಿದ್ದಾರೆ.

ಪುಣೆಯಲ್ಲಿ ಅನೇಕ ತಲೆಮಾರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ವಾಸವಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿರುವ ಕನ್ನಡಿಗರು ಕನ್ನಡದ ನಂಟನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ. ಅವರ ಮುಂದಿನ ಪೀಳಿಗೆ ಕನ್ನಡದಿಂದ ಕ್ರಮೇಣ ದೂರವಾಗುತ್ತಿದೆ ಎಂಬ ಕೊರಗು ಇವರನ್ನು ಸದಾ ಕಾಡುತ್ತಿತ್ತು. ಅದಕ್ಕೆ ಮಕ್ಕಳ ಸುತ್ತಮುತ್ತ ಕನ್ನಡದ ವಾತಾವರಣ ಇಲ್ಲ ಎಂಬುವುದೂ ಪ್ರಮುಖವಾಗಿತ್ತು. ಇದನ್ನು ಮನಗಂಡ ದಂಪತಿ ಪುಣೆಯಲ್ಲಿ ಕನ್ನಡಿಗರನ್ನು ಒಂದೆಡೆ ಸೇರಿಸುವ ಪ್ರಯತ್ನ ಶುರುವಿಟ್ಟುಕೊಂಡರು.

ಮೊದಲ ಹಂತವಾಗಿ ಕನ್ನಡ ಸಂಘ ಕಟ್ಟಿ ಕನ್ನಡಿಗರನ್ನು ಬೆಸೆಯಲು ಶುರು ಮಾಡಿದರು. ಕನ್ನಡ ಗಾಯಕರ ಗುಂಪು ರಚಿಸಿಕೊಂಡರು. ವಾರಕ್ಕೊಮ್ಮೆ, ರಜೆ ಇದ್ದಾಗ ಕನ್ನಡಿಗರನ್ನು ಸೇರಿಸಿ ಕನ್ನಡ ಹಾಡು, ಜನಪದ ಗೀತೆ, ಚಲನಚಿತ್ರ ಗೀತೆ ಹಾಡುವ ಕಾರ್ಯಕ್ರಮ ರೂಪಿಸಿದರು. ಈ ಗುಂಪು ಈಗಾಗಲೇ ಪುಣೆಯ ವಿವಿಧ ವೇದಿಕೆಗಳಲ್ಲಿ ಯಶಸ್ವಿಯಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದೆ.

ಎಲ್ಲರಿಗೂ ಕನ್ನಡ ಚಟುವಟಿಕೆಗಳ ಬಗ್ಗೆ ತಿಳಿಸುವ ಮತ್ತು ಪರಸ್ಪರ ವಿಚಾರ ವಿಮರ್ಶೆಗಾಗಿ ವೇದಿಕೆಯೊಂದು ಅಗತ್ಯವಿದೆ ಎಂದು ಅನಿಸತೊಡಗಿತು. ಆಗ ಅವರ ಮನಸ್ಸಿನಲ್ಲಿ ಚಿಗುರೊಡೆದದ್ದೇ ‘ಕಂಪು’ ಮಾಸಪತ್ರಿಕೆ ಶುರು ಮಾಡುವ ಕನಸು.

ಪುಣೆ ಹಾಗೂ ಸುತ್ತಮುತ್ತ ಇರುವ ಕನ್ನಡಿಗರಿಂದ ಕತೆ, ಕವನ, ಪ್ರಬಂಧ, ಸಂಸ್ಕೃತಿ, ಆಚಾರ, ವಿಚಾರಗಳ ಲೇಖನಗಳನ್ನು ಬರೆಸಿ ಪ್ರಕಟಿಸಲು ತೊಡಗಿದರು. ಜಾಲತಾಣಗಳ ಮೂಲಕ ‘ಕಂಪು’ ದೇಶದ ಗಡಿದಾಟಿ ವಿದೇಶಗಳಲ್ಲೂ ಪಸರಿಸಿದೆ. ಹೊರದೇಶದ ಕನ್ನಡಿಗರ ಮನಸ್ಸನ್ನೂ ತಟ್ಟಿದೆ.

ಅನೇಕ ವರ್ಷ ವಿದೇಶದಲ್ಲಿದ್ದ ಈ ದಂಪತಿ ಅಲ್ಲಿರುವ ಕನ್ನಡಿಗ ಸ್ನೇಹಿತರಿಂದಲೂ ಲೇಖನ ಬರೆಸುತ್ತಾರೆ. ಮನೋಜ್ ತಮ್ಮ ಕೆಲಸದಿಂದ ಮನೆಗೆ ಮರಳಿದ ಬಳಿಕ ಪತ್ರಿಕೆ ರೂಪಿಸುವ ಕಾಯಕದಲ್ಲಿ ತೊಡಗುತ್ತಾರೆ. ಸ್ವಂತ ಪತ್ರಿಕೆಯ ವಿನ್ಯಾಸ, ಸಂಪಾದನೆ ಮಾಡುತ್ತಾರೆ. ಸಂಪಾದಕೀಯ ಬರೆಯುತ್ತಾರೆ.

‘ಕಂಪು’ ಮಾಧ್ಯಮದಿಂದ ಹೊಸ ಕಾರ್ಯಕ್ರಮ ‘ಸೊಂಪಾದ ಹರಟೆ’ ರೂಪಿಸಿದ್ದಾರೆ. ಸಾಧಕರು ಮತ್ತು ವಿವಿಧ ತಂಡಗಳ ಜೊತೆ ಲಘು ಹರಟೆಯ ನವಿರಾದ ನಿರೂಪಣೆ ಮಾಡುವ ಪ್ರಯತ್ನ ಇದಾಗಿದೆ.

ಹೊಸ ಕವಿ, ಲೇಖಕ ಮತ್ತು ಕಲಾವಿದರಿಗೆ ವೇದಿಕೆ ನೀಡುತ್ತಿರುವ ಈ ಆನ್ಲೈನ್ ಪತ್ರಿಕೆ ಪತ್ರಿ ತಿಂಗಳು ಕನ್ನಡಿಗರ ಮೊಬೈಲಿಗೆ ಉಚಿತವಾಗಿ ತಲುಪುತ್ತದೆ. ಈಗಾಗಲೇ ಪತ್ರಿಕೆಯ ಹದಿನಾರು ಸಂಚಿಕೆಗಳು ಹೊರ ಬಂದಿವೆ. ಎಲ್ಲಾ ಸಂಚಿಕೆಗಳು ‘ಪುಸ್ತಕದ ಕಪಾಟ’ನಲ್ಲಿ ಉಚಿತವಾಗಿ ಲಭ್ಯ ಇವೆ. ಪತ್ರಿಕೆಯ ಸಂಚಿಕೆಗಳನ್ನು ಧ್ವನಿ-ದೃಶ್ಯ ಮಾಧ್ಯಮವಾಗಿ ಯೂಟ್ಯೂಬ್ನಲ್ಲಿಯೂ ಹೊರತರುತ್ತಾರೆ. ಈ ಪ್ರಯತ್ನ ಕನ್ನಡದ ಯುವಪೀಳಿಗೆಯನ್ನು ಕನ್ನಡದತ್ತ ಸೆಳೆಯಲು ಪರಿಣಾಮಕಾರಿಯಾಗಿದೆ.

‘ಲಾಭದ ಆಸೆ ಅಥವಾ ಹೆಸರು ಮಾಡಲು ಈ ಪತ್ರಿಕೆ ಮಾಡುತ್ತಿಲ್ಲ. ತಾಯಿಭಾಷೆಗೆ ಇದೊಂದು ನನ್ನ ಸಣ್ಣ ನಿಸ್ವಾರ್ಥ ಸೇವೆ. ಕನ್ನಡ ಮಾಧ್ಯಮದಲ್ಲಿ ಕಲಿತ ನಾನು ಮೊದಲಿನಿಂದಲೂ ಕನ್ನಡ ಭಾಷೆಯ ಕಡು ವ್ಯಾಮೋಹಿ. ಕನ್ನಡ ಸಾಹಿತ್ಯದ ದಟ್ಟ ಪ್ರಭಾವ ನನ್ನ ಮೇಲಾಗಿದೆ. ವಿದೇಶದಲ್ಲಿ ವೃತ್ತಿ, ಐ.ಟಿ ಕಂಪನಿಯಲ್ಲಿ ಉದ್ಯೋಗದಿಂದ ಸಂಪೂರ್ಣವಾಗಿ ಕನ್ನಡ ಕಟ್ಟುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಂತ ಕನ್ನಡದ ನಂಟು ಕಡಿದುಕೊಂಡಿರಲಿಲ್ಲ. ನಿರಂತರ ಓದು, ಬರಹ ಸಾಗಿತ್ತು’ ಎಂದು ಮನೋಜ ನೆನಪಿಸಿಕೊಳ್ಳುತ್ತಾರೆ.

‘ಪುಣೆಯಲ್ಲಿ ಕನ್ನಡ ಕೆಲಸಗಳಿಗೆ ಈಗ ಸಂಘಟಿತ ರೂಪ ದೊರೆತಿದೆ. ಎಲ್ಲ ಕನ್ನಡಿಗರೂ ವಾರಕ್ಕೊಮ್ಮೆ, ಬಿಡುವಾದಾಗ, ರಜಾ ದಿನಗಳಲ್ಲಿ ಒಟ್ಟಿಗೆ ಸೇರುತ್ತೇವೆ. ಕನ್ನಡದ ಹಾಡು, ಸಾಹಿತ್ಯ ಚರ್ಚೆ, ಸಂವಾದ, ಹರಟೆ ಮುಂತಾದ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗುತ್ತೇವೆ. ಎಲ್ಲರೂ ತಮ್ಮ ಮಕ್ಕಳನ್ನು ಕರೆ ತರುವುದು ಕಡ್ಡಾಯ. ಹೀಗೆ ಅವರಿಗೂ ಕನ್ನಡ ನಂಟು ಗಾಢವಾಗುತ್ತದೆ. ಹಿರಿಮೆ, ಗರಿಮೆ ಅರಿವಾಗುತ್ತದೆ’ ಎನ್ನುತ್ತಾರೆ ಮನೋಜ.

ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ಕನ್ನಡವಾಗಿರು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.