ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಓದಲ್ವೇ? ಕೇಳಿ ಕಥೆಯ...

Last Updated 12 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಕಥೆ ಹೇಳುವ ಮತ್ತು ಕೇಳುವ ಹಾಗೂ ಅದನ್ನು ಮುಂದಿನ ಜನಾಂಗಕ್ಕೆ ದಾಟಿಸುವ ದೀರ್ಘ ಪರಂಪರೆಯನ್ನು ಭಾರತ ಹೊಂದಿದೆ. ಶತಶತಮಾನಗಳಷ್ಟು ಹಳೆಯ ಈ ಶ್ರೀಮಂತ ಜನಪದ ಪರಂಪರೆಯ ಕೊಂಡಿ ಸವೆಯುತ್ತಾ ತುಂಡಾಗುವ ಸ್ಥಿತಿಗೆ ತಲುಪಿದ್ದು 20ನೇ ಶತಮಾನದ ಉತ್ತರಾರ್ಧದಲ್ಲಿ. ಹೆಚ್ಚಿದ ಅಕ್ಷರಸ್ಥರ ಸಂಖ್ಯೆ, ಪುಸ್ತಕಗಳ ಸುಲಭ ಲಭ್ಯತೆ, ಅಜ್ಜ ಅಜ್ಜಿಯರಿಲ್ಲದ ವಿಭಕ್ತ ಕುಟುಂಬಗಳು ಇದಕ್ಕೆ ಕಾರಣ. ಹಾಗಂತ ಕಥೆ ಕೇಳುವುದರಲ್ಲಿರುವ ಆನಂದವನ್ನು ಮರೆಯಲು ಸಾಧ್ಯವಾದೀತೇ? ಹೀಗಾಗಿಯೇ, ಪುಸ್ತಕಗಳು ಆಡಿಯೊ ಬುಕ್‌ಗಳ ರೂಪ ಪಡೆಯತೊಡಗಿದವು.

ಆರು ವರ್ಷಗಳ ಹಿಂದೆ ‘ಕೇಳಿ ಕಥೆಯ’ ಎಂಬ ಹೊಸ ಪ್ರಯೋಗಕ್ಕೆ ಕೆಲವು ಉತ್ಸಾಹಿ ಯುವಕರು ಮುಂದಾದಾಗ ಭಾರತೀಯರ ಮಟ್ಟಿಗೆ ಆಡಿಯೊ ಬುಕ್ ಎಂಬ ಕಲ್ಪನೆ ಬಹುತೇಕ ಅಪರಿಚಿತವಾಗಿತ್ತು. ‘ಕೇಳುವ ಕಥೆಗಳು’ ಬಹುತೇಕ ರೇಡಿಯೊಗಳಿಗೆ ಸೀಮಿತವಾಗಿದ್ದವು. ಅದನ್ನು ಬಿಟ್ಟರೆ ‘ಕರಡಿ ಟೇಲ್ಸ್’ ಕೆಲವು ವರ್ಗಗಳ ಮಕ್ಕಳನ್ನು ತಲುಪಿತ್ತು ಮತ್ತು ರೀಡೊ ಆಗಷ್ಟೇ ಮಾರುಕಟ್ಟೆ ಪ್ರವೇಶಿಸಿತ್ತು. ಹೀಗಿರುವಾಗ ಕನ್ನಡದಲ್ಲಿ ಆಡಿಯೊ ಪುಸ್ತಕ ಮಾಡುವುದು ನಿಜಕ್ಕೂ ಸಾಹಸದ ಕೆಲಸವೇ ಆಗಿತ್ತು. ಏಕೆಂದರೆ, ‘ಕೇಳಿ ಕಥೆಯ’ ಯೋಜನೆಯ ಹಿಂದೆ ಇದ್ದದ್ದು, ದೊಡ್ಡ ಬಂಡವಾಳ ಹೂಡಿ, ಹೊಸ ಮಾರುಕಟ್ಟೆಯೊಂದನ್ನು ಆಕ್ರಮಿಸಿಕೊಂಡು ಲಾಭಗಳಿಸುವ ಉದ್ದೇಶವಲ್ಲ. ಬದಲಾಗಿ, ಆಡಿಯೊ ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಜನರಿಗೆ ತಲುಪಿಸುವ ಮತ್ತು ಆದರಿಂದ ಬರುವ ಲಾಭವನ್ನ ಗಡಿನಾಡ ಮಕ್ಕಳ ಶಿಕ್ಷಣಕ್ಕಾಗಿ ಬಳಸುವ ಉದ್ದೇಶ.

ವ್ಯಾಪಕವಾಗಿ ಹರಡಿದ್ದ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಿಂದಾಗಿ ಕನ್ನಡ ಚೆನ್ನಾಗಿ ಮಾತನಾಡಬಲ್ಲ ಆದರೆ, ಕನ್ನಡವನ್ನು ಓದಲು, ಬರೆಯಲು ಚೆನ್ನಾಗಿ ಬಾರದ ಕನ್ನಡಿಗರ ಒಂದು ಜನಾಂಗ ಆಗಲೇ ಸೃಷ್ಟಿಯಾಗಿತ್ತು. ‘ಕೇಳಿ ಕಥೆಯ’ ಯೋಜನೆಗೆ ಬೀಜಾಂಕುರವಾಗಿದ್ದೇ ಈ ಗುಂಪಿಗೆ ಕನ್ನಡದ ಶ್ರೀಮಂತ ಸಾಹಿತ್ಯದ ರುಚಿ ತೋರಿಸಬೇಕು ಮತ್ತು ಕನ್ನಡದ ಮಕ್ಕಳಿಗೆ ಕನ್ನಡದ ಮಕ್ಕಳ ಕಥೆಗಳು ಕೇಳಲು ದೊರಕಬೇಕು ಎಂಬ ಉದ್ದೇಶದಿಂದ.

‘ಕನ್ನಡದ ಆಡಿಯೊ ಪುಸಕ್ತ ತರುವ ಬಗ್ಗೆ ನಮ್ಮ ತಂಡದ ಜೊತೆ ಚರ್ಚಿಸುತ್ತಿರುವಾಗ ರಾಜ್‌ಕುಮಾರ್ ಇದ್ದಿದ್ದರೆ ಅವರ ಹತ್ತಿರವೇ ಕಥೆ ಓದಿಸಬಹುದಿತ್ತು ಎಂಬ ಕನಸನ್ನು ಹಂಚಿಕೊಂಡೆ. ಆಗ ಚಿತ್ರರಂಗದ ತಾರೆಯರನ್ನು ಇದರೊಳಗೆ ಸೇರಿಸಿಕೊಳ್ಳುವ ಯೋಚನೆ ಹೊಳೆದದ್ದು. ಸಾಹಿತ್ಯದಿಂದ ದೂರವಿರುವವರಿಗೆ, ತಾರೆಯರ ಜನಪ್ರಿಯತೆಯನ್ನು ಬಳಸಿಕೊಂಡು, ಅದರ ರುಚಿ ತೋರಿಸುವುದು ನಮ್ಮ ಉದ್ದೇಶವಾಗಿತ್ತು’ ಎನ್ನುತ್ತಾರೆ ‘ಕೇಳಿ ಕಥೆಯ’ ಹಿಂದಿನ ಮುಖ್ಯ ರೂವಾರಿ ಮುಕುಂದ್ ಸೆತ್ಲೂರ್.

ಕಥೆಗಳನ್ನು ಆಯ್ದುಕೊಳ್ಳುವಾಗ ತಂಡ ಸಾಕಷ್ಟು ಎಚ್ಚರವಹಿಸಿತ್ತು. ಹಲವು ಕಾಲಘಟ್ಟ, ವಿವಿಧ ಭೌಗೋಳಿಕ ಪ್ರದೇಶ, ನಾನಾ ಸಾಮಾಜಿಕ ಸ್ತರಗಳನ್ನು ಒಳಗೊಂಡ ಕಥೆಗಳು ಹಾಗೂ ಹಳೆಯ ಮತ್ತು ಹೊಸ ಕಥೆಗಾರರ ಅತ್ಯುತ್ತಮ ಕಥೆಗಳನ್ನು ಸೇರಿಸಿ ಕನ್ನಡ ಕಥಾಲೋಕಕ್ಕೆ ಪರಿಚಯಾತ್ಮಕವಾಗಿರುವ ಆಡಿಯೊ ಪುಸ್ತಕ ಹೊರತರಲು ನಿರ್ಧರಿಸಲಾಯಿತು. ಮೊದಲ ಭಾಗದಲ್ಲಿ ಪೂರ್ಣಚಂದ್ರ ತೇಜಸ್ವಿ, ಜಯಂತ ಕಾಯ್ಕಿಣಿ, ವಸುಧೇಂದ್ರ, ರವಿ ಬೆಳೆಗೆರೆ, ನಾ.ಡಿಸೋಜ, ವಿಕ್ರಂ ಹತ್ವಾರ್ ತಮ್ಮ ಕಥೆಗಳನ್ನು ಸಂತೋಷದಿಂದ ನೀಡಿದರು. ಪ್ರಕಾಶ್ ರೈ, ರಕ್ಷಿತ್ ಶೆಟ್ಟಿ, ಕಿಶೋರ್, ನಾಗಾಭರಣ, ಎಂ.ಡಿ.ಪಲ್ಲವಿ, ಸುಚೇಂದ್ರ ಪ್ರಸಾದ್ ಈ ಕಥೆಗಳಿಗೆ ದನಿಯಾದರು. ಹೆಸರಾಂತ ಸಂಗೀತ ಸಂಯೋಜಕರು ಈ ಕಥೆಗಳಿಗೆ ತಮ್ಮ ಸಂಗೀತ ನೀಡಿದ್ದೂ ವಿಶೇಷ.

‘ಕೇಳಿ ಕಥೆಯ’ ಮೊದಲ ಸಿ.ಡಿ ಅದ್ಭುತ ಯಶಸ್ಸು ಕಂಡಿತು. ಕನ್ನಡ ಓದಲು ಬಾರದವರನ್ನು ಮುಖ್ಯವಾಗಿ ಗುರಿಯಾಗಿಸಿ ಈ ಆಡಿಯೊ ಪುಸ್ತಕ ತಂದಿದ್ದರೂ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇರುವವರೆಲ್ಲರ ಕುತೂಹಲವನ್ನು ಕೆರಳಿಸಿತ್ತು. ಕಥೆಗಳನ್ನು ಪುಸ್ತಕಗಳಲ್ಲಿ ಓದಿದ್ದವರೂ ಸಿ.ಡಿ ಕೊಂಡು ಕಥೆಗಳನ್ನು ಮತ್ತೆ ಮತ್ತೆ ಕೇಳಿ ಆನಂದಿಸಿದರು. ಹೊರದೇಶಗಳ ಕನ್ನಡಿಗರಲ್ಲಿ ‘ಕೇಳಿ ಕಥೆಯ’ ಸಾಕಷ್ಟು ಜನಪ್ರಿಯತೆ ಗಳಿಸಿತು. ಸಿ.ಡಿಗಳನ್ನು ದೂರದೂರಿನ, ಸಾಗರದಾಚೆಯ ಗ್ರಾಹಕರಿಗೆ ತಲುಪಿಸುವ ದೊಡ್ಡ ಸವಾಲನ್ನೂ ಮೀರಿ ಎರಡೂವರೆ ಸಾವಿರದಷ್ಟು ಸಿ.ಡಿಗಳು ಮಾರಾಟವಾದವು. ಇದರಲ್ಲಿ ಬಂದ ಲಾಭದ ಹಣವನ್ನು ಅವಿರತ ಫೌಂಡೇಶನ್ ಸಹಾಯದೊಂದಿಗೆ ಅಥಣಿಯ ವಿವಿಧ ಸರ್ಕಾರಿ ಶಾಲೆಗಳ ಒಂಬತ್ತು ಹೆಣ್ಣು ಮಕ್ಕಳ ಶೈಕ್ಷಣಿಕ ನೆರವಿಗೆ ನೀಡಲಾಯಿತು.

ಈಗ ಆರು ವರ್ಷಗಳ ನಂತರ ‘ಕೇಳಿ ಕಥೆಯ’ ಎರಡನೇ ಭಾಗದೊಂದಿಗೆ ಮತ್ತೆ ಮಾರುಕಟ್ಟೆಗೆ ಬಂದಿದೆ. ‘ನಾವೆಲ್ಲಾ ವಿವಿಧ ಕ್ಷೇತ್ರಗಳ ಉದ್ಯೋಗಿಗಳು. ನಮ್ಮ ಕೆಲಸದ ಜೊತೆಗೆ ಇನ್ನೂ ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು. ಜೊತೆಗೆ ಸಿ.ಡಿಗಳು ಮಾರಾಟವಾಗಿ ಹಣ ಬಂದು, ಸರಿಯಾದ ಫಲಾನುಭವಿಗಳನ್ನು ಹುಡುಕಿ, ಅವರಿಗೆ ಲಾಭದ ಹಣವನ್ನು ಹಂಚಿದ ನಂತರವೇ ನಾವು ಎರಡನೇ ಭಾಗದ ಕೆಲಸ ಕೈಗೆತ್ತಿಕೊಂಡೆವು’ ಎನ್ನುತ್ತಾರೆ ‘ಕೇಳಿ ಕಥೆಯ’ ತಂಡದ ಶರತ್ ಪಡರು.

‘ಕಥೆಗಳನ್ನು ಎಚ್ಚರಿಕೆಯಿಂದ ಆರಿಸಿ ಸಂಬಂಧಪಟ್ಟವರಿಂದ ಅನುಮತಿ ಪಡೆದು, ಅದಕ್ಕೆ ಹೊಂದುವ ಸ್ಟಾರ್‌ಗಳನ್ನು ಹುಡುಕಿ, ಸೂಕ್ತ ಸಂಗೀತ ನೀಡಿ, ಮಾರುಕಟ್ಟೆಗೆ ಅಗತ್ಯವಿರುವ ಕೆಲಸಗಳನ್ನೆಲ್ಲಾ ಮುಗಿಸಲು ಸಮಯ ಹಿಡಿಯಿತು. ಜೊತೆಗೆ, ನಮ್ಮ ಈ ಯೋಜನೆಗೆ ಕೈ ಜೋಡಿಸಿರುವ ಎಲ್ಲಾ ಪ್ರಸಿದ್ಧ ಸಾಹಿತಿಗಳು, ತಾರೆಯರು, ಸಂಗೀತಗಾರರು ಸಂಪೂರ್ಣ ಉಚಿತವಾಗಿ ತಮ್ಮ ಪಾತ್ರ ನಿಭಾಯಿಸಿದ್ದಾರೆ. ಎಲ್ಲವನ್ನೂ ಹೊಂದಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿತು. ತಡವಾದರೂ ಚಿಂತೆಯಿಲ್ಲ; ಅತ್ಯುತ್ತಮ ಗುಣಮಟ್ಟವನ್ನೇ ನೀಡಬೇಕೆಂಬ ನಮ್ಮ ಹಂಬಲ ಈಡೇರಿದೆ’ ಎಂದು ಅವರು ವಿವರಿಸುತ್ತಾರೆ.

ಕನ್ನಡ ಆಡಿಯೊ ಪುಸ್ತಕಗಳ ಜಗತ್ತು ಈಗ ಸಾಕಷ್ಚು ಬದಲಾಗಿದೆ. ಹಲವಾರು ವೆಬ್‌ಸೈಟ್‌ಗಳು ಕನ್ನಡ ಕಥೆ ಕಾದಂಬರಿಗಳನ್ನು ಆಡಿಯೊ ರೂಪದಲ್ಲಿ ನೀಡುತ್ತಿವೆ. ಮಾರುಕಟ್ಟೆಯೂ ವಿಸ್ತರಿಸಿದೆ. ಜೊತೆಗೆ ಸ್ಪರ್ಧೆ ಸಹ ಹೆಚ್ಚಿದೆ. ಈ ಸನ್ನಿವೇಶ ಕೇಳಿ ಕಥೆಯಂತಹ ಲಾಭೇತರ ಯೋಜನೆಯ ಮೇಲೆ ಹೇಗೆ ಪರಿಣಾಮ ಬೀರಬಲ್ಲದು? ‘ಕೇಳಿ ಕಥೆಯ’ ಮಾರುಕಟ್ಟೆಯಲ್ಲಿರುವ ಇತರ ಆಡಿಯೊ ಪುಸ್ತಕಗಳಿಗಿಂತ ಭಿನ್ನ. ವಿವಿಧ ಸಾಹಿತಿಗಳ ವಿಭಿನ್ನ ಕಥೆಗಳು ಇಲ್ಲಿವೆ. ಪರಿಚಿತ ದನಿಗಳಲ್ಲಿ, ಉತ್ತಮ ಹಿನ್ನೆಲೆ ಸಂಗೀತದೊಂದಿಗೆ ಅವುಗಳನ್ನು ನೀಡಿದ್ದೇವೆ. ನಮ್ಮದು ವಾಣಿಜ್ಯ ಉದ್ದೇಶವಲ್ಲದ ಕಾರಣ ಇಷ್ಟೆಲ್ಲಾ ಪ್ರಸಿದ್ಧರನ್ನು ಒಂದೆಡೆ ಸೇರಿಸಿ, ಅತ್ಯುತ್ತಮ ಗುಣಮಟ್ಟದ ಆಡಿಯೊ ಪುಸ್ತಕವನ್ನು ಇಷ್ಟು ಕಡಿಮೆ ಬೆಲೆಗೆ ನೀಡಲು ಸಾಧ್ಯವಾಗಿದೆ. ಹೀಗಾಗಿ, ಇತರ ಕಮರ್ಷಿಯಲ್ ಪ್ರಯತ್ನಗಳು ನಮಗೆ ಸವಾಲೊಡ್ಡಲು ಸಾಧ್ಯವಿಲ್ಲ. ಬದಲಾಗಿ ಅವು ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ನಮಗೆ ಸಹಾಯವನ್ನೇ ಮಾಡಿವೆ. ಇದು ಕನ್ನಡ ಭಾಷೆಯ ಬೆಳವಣಿಗೆ ದೃಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆ’ ಎನ್ನುತ್ತಾರೆ ತಂಡದ ಮತ್ತೋರ್ವ ಸದಸ್ಯ ನಿತೇಶ್ ಕುಂಟಾಡಿ.

ಎರಡನೇ ಸಂಚಿಕೆಯಲ್ಲಿ ಕುವೆಂಪು, ದೇವನೂರ ಮಹಾದೇವ, ವೈದೇಹಿ, ಯಶವಂತ ಚಿತ್ತಾಲ, ವಿವೇಕ ಶಾನಭಾಗ, ಬೋಳುವಾರು ಮಹಮದ್ ಕುಂಞ್, ಕೆ.ವಿ. ತಿರುಮಲೇಶ ಅವರ ಕಥೆಗಳಿವೆ. ಧನಂಜಯ್, ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಾಜ್ ಬಿ. ಶೆಟ್ಟಿ, ಗಿರಿಜಾ ಲೋಕೇಶ್ ಈ ಕಥೆಗಳನ್ನು ಓದಿದ್ದಾರೆ. ಎರಡೂ ಸಂಚಿಕೆಗಳಲ್ಲೂ ಮಕ್ಕಳಿಗಾಗಿಯೇ ವಿಶೇಷ ಕಥೆಗಳಿವೆ. ಬದಲಾದ ತಂತ್ರಜ್ಞಾನಕ್ಕೆ ಹೊಂದುವಂತೆ ಈ ಬಾರಿ ಸಿ.ಡಿಗಳ ಬದಲು ಬೇಕಾದ ಕಥೆಗಳನ್ನು ಆನ್ಲೈನ್‌ನಲ್ಲೇ ಖರೀದಿಸಿ, ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲೇ ಕೇಳುವ ಅವಕಾಶ ಮಾಡಿಕೊಡಲಾಗಿದೆ. ಎರಡೂ ಸಂಚಿಕೆಗಳನ್ನು https://kelikatheya.com/kn/ ವೈಬ್‌ಸೈಟ್‌ನಲ್ಲಿ ಖರೀದಿಸಬಹುದು.

ಹೊಸ ಸಾಹಸ
ಕೇಳುವ ಕಥೆಗಳು ರೇಡಿಯೋಕ್ಕಷ್ಟೇ ಸೀಮಿತ ಆಗಿದ್ದ ಕಾಲಘಟ್ಟದಲ್ಲಿ ಕನ್ನಡದಲ್ಲಿ ಆಡಿಯೊ ಪುಸ್ತಕ ಮಾಡುವುದು ನಿಜಕ್ಕೂ ಅನನ್ಯ ಉದ್ದೇಶ. ಏಕೆಂದರೆ,ಈ ಯೋಜನೆಯ ಹಿಂದೆ ದೊಡ್ಡ ಬಂಡವಾಳ ಹೂಡಿ ಲಾಭಗಳಿಸುವ ಉದ್ದೇಶ ಇರಲಿಲ್ಲ. ಬದಲಾಗಿ, ಆಡಿಯೊ ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಜನರಿಗೆ ತಲುಪಿಸುವ ಮತ್ತು ಆದರಿಂದ ಬರುವ ಲಾಭವನ್ನು ಗಡಿನಾಡ ಮಕ್ಕಳ ಶಿಕ್ಷಣಕ್ಕಾಗಿ ಬಳಸುವ ಉದ್ದೇಶ ಇತ್ತು. ಕನ್ನಡದ ಮಕ್ಕಳಿಗೆ ಕನ್ನಡದ ಮಕ್ಕಳ ಕಥೆಗಳು ಕೇಳಲು ದೊರಕಬೇಕು ಎಂಬ ಆಶಯವೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT