ಕುವೆಂಪು ಹುಟ್ಟಿ ಬೆಳೆದು, ಓಡಾಡಿದ ಜಾಗಗಳೊಂದಿಗೆ ಅವರ ಬರಹಗಳನ್ನು ಮೆಲುಕು ಹಾಕುವ ವಿಶಿಷ್ಟ ಯತ್ನವನ್ನು ಕುವೆಂಪು ವಿಶ್ವವಿದ್ಯಾಲಯದ ಪದವಿ ಕಾಲೇಜು ಅಧ್ಯಾಪಕರ ವೇದಿಕೆ ಇತ್ತೀಚೆಗಷ್ಟೇ ಮಾಡಿದೆ. ಅವರ ಕೃತಿಗಳ ವಾಚನ, ಹಾಡು, ಚಾರಣದೊಂದಿಗಿನ ಈ ನಾಯಿಗುತ್ತಿ ಪಯಣ ಕುರಿತು ಲೇಖಕರು ಬರೆದಿದ್ದಾರೆ...

ಭಾರತದ ಬಹುಮುಖಿ ವ್ಯಕ್ತಿತ್ವದ ಲೇಖಕರಾದ ಕುವೆಂಪು ತಮ್ಮ ಕಾಲದ ಸಾಮಾಜಿಕ-ಚಾರಿತ್ರಿಕ ಒತ್ತಡಗಳ ನಡುವೆ ನಿಂತು ಸಾಹಿತ್ಯ ರಚಿಸಿದವರು. ಜಮೀನ್ದದಾರಿ ಕುಟುಂಬದಿಂದ ಬಂದರೂ ಕುವೆಂಪು ದಮನಿತ-ಅಲಕ್ಷಿತರ ಪರವಾಗಿ ತುಡಿತದ ಬರಹ ನೀಡಿದ ದಾರ್ಶನಿಕ ಕವಿ ಮಾತ್ರವಲ್ಲ, ವೈಚಾರಿಕ ಮಾನವತಾವಾದಿಯಾಗಿ, ವಿಶ್ವಪ್ರಜ್ಞೆಯನ್ನು ಯುವಕರಿಗೆ ತುಂಬಲು ನಿರಂಕುಶಮತಿತ್ವಕ್ಕೆ ಕರೆಕೊಟ್ಟವರು.

ಇಂತಹ ಕವಿಯ ಮನೆ-ಕಾನು, ನೆನಪುಗಳನ್ನು ಸಜೀವಗೊಳಿಸುವಂತಹ ವಿಭಿನ್ನ ಪ್ರಯೋಗ ಮಾಡಲು ಕುವೆಂಪು ವಿಶ್ವವಿದ್ಯಾಲಯದ ಪದವಿ ಕಾಲೇಜು ಅಧ್ಯಾಪಕರ ವೇದಿಕೆ ಬಹುದಿನಗಳಿಂದ ಕನಸು ಕಾಣುತ್ತಿತ್ತು.

ಈ ಸಲುವಾಗಿ ಕುವೆಂಪು ಬರಹದ ಅಜರಾಮರ ಪಾತ್ರಗಳಾದ ಹಸಿರು, ಇಬ್ಬನಿ, ಸರ್ಯೋದಯ, ಜೇಡ, ಮಳೆ-ಮೋಡ, ನವಿಲು, ಗದ್ದೆಕೋಗು, ದೇವರಬನ, ನಿರ್ಜನ ತೋಟ ಕಾಡಿನ ಮೂಲೆಯಿಂದ ಹೊಮ್ಮುವ ಕಾಜಾಣ, ಕಾಮಳ್ಳಿ, ಕುಟ್ರಹಕ್ಕಿ, ಪಿಕ್ಕ, ಬೆಳವೆ, ಗೋರ್ಲುಹಕ್ಕಿ, ನವಿಲು, ಪೊಂಗುಳಿ, ಸಿಬ್ಬಲುಗುಡ್ಡದ ನೀರವತೆ, ನವಿಲುಕಲ್ಲು ಗುಡ್ಡದ ಚಾರಣ, ನಾಯಿಗುತ್ತಿ-ತಿಮ್ಮಿ, ಬಾಡುಗಳ್ಳ ಸೋಮ, ಜೀವರತ್ನಯ್ಯ, ಬೈಸಿಕಲ್ಲು ಬಯಲು, ಕೆಳಕಾನೂರು, ಸಿಂಬಾವಿ, ಇಂಗ್ಲಾದಿ, ಹಿರೇಕೂಡಿಗೆ, ಕವಿಶೈಲ ಮುಂತಾದ ಓದಿದ ಅನುಭವಕ್ಕಿಂತ ಕಾಣುವ-ಕೇಳುವ ಲೋಕಾನುಭವಕ್ಕೆ ಕರೆದೊಯ್ಯುವ ನೀಲನಕ್ಷೆಯನ್ನು ಸಿದ್ಧಪಡಿಸಿಕೊಳ್ಳಲಾಯಿತು.

ಸಾಮಾಜಿಕ ಸವಾಲುಗಳೊಂದಿಗೆ, ಸೃಜನಶೀಲ ಒಡನಾಟದಿಂದ ಒಂಟಿಕೊಪ್ಪಲಿನಲ್ಲಿ ಕೂತು, ‘ಹೋಗುವೆನು ನಾ... ನನ್ನ ಮಲೆಯ ನಾಡಿಗೆ.....’ ಎಂದು ತಮ್ಮ ಬರಹದಲ್ಲಿ ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರತಿಪಾದಿಸಿದ ಕುವೆಂಪು ಅವರಿಂದ ಲೋಕಮಾನ್ಯವಾದ ‘ನಾಯಿಗುತ್ತಿ’ ಪಯಣವನ್ನು ರೂಪಿಸಿಕೊಂಡು ಮೂವತ್ತೇಳು ಅಧ್ಯಾಪಕರು, ನಿವೃತ್ತ ಅಧ್ಯಾಪಕರಿಬ್ಬರು, ‘ನೇಟಿವ್ ಥಿಯೇಟಿಕ್’ ನ ನಟರು ಪಯಣ ಆರಂಭಿಸಿದೆವು.

ಆಧುನಿಕ ವಿದ್ಯಮಾನಗಳೊಂದಿಗೆ, ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮಕ್ಕೆ ಚಿಂತಕರಾದ ರಹಮತ್ ತರೀಕೆರೆ ಹಾಗೂ ರಾಜಕಾರಣಿ ವೈ.ಎಸ್.ವಿ. ದತ್ತರವರನ್ನು ಆಹ್ವಾನಿಸಿ ಮೊದಲ ದಿನ ಚಾರಣ-ಕುವೆಂಪು ಓದು-ದರ್ಶನ, ಪುಸ್ತಕ ಮಾರಾಟದ ಅನುಭವಗಳೊಂದಿಗೆ ನಮ್ಮ ಸಂವಾದ ನಡೆಯಿತು.

ಸಂಜೆ ಕವಿಶೈಲ-ತೇಜಸ್ವಿ ಮಲಗಿದ ಜಾಗದಲ್ಲಿ ಕೂತು ಹಾಡು-ಮಾತು, ಓದು, ಪ್ರಸಂಗಗಳನ್ನು ಹಂಚಿಕೊಂಡ ಗೆಳೆಯರು, ಕುವೆಂಪು ಗುಂಗಿನಲ್ಲೇ ‘ಬಾ ಇಲ್ಲಿ ಸಂಭವಿಸು’ ಎಂಬ ವಾಚನಾಭಿನಯವನ್ನು ಅನುಭವಿಸಿದರು. ಅದಾದ ಬಳಿಕ, ಬೆಳಗಿನ ಸೂರ್ಯೋದಯಕ್ಕೆ ನವಿಲುಕಲ್ಲಿಗೆ ಚಾರಣ ಹೊರಡುವ ಕನವರಿಕೆಯಲ್ಲೇ ಮಲಗಿದೆವು.

ಬೆಳಿಗ್ಗೆ ನವಿಲುಕಲ್ಲು ಗುಡ್ಡದ ಸೂರ್ಯೋದಯದ ಸಂಭ್ರಮವನ್ನು ಹಕ್ಕಿಗಳಿಂಚರದ ಸವಿಯೊಳಗೆ ತೇಲಿಸುತ್ತಾ ಹೊರಡಲು ಅವಸರಿಸಿದೆವು. ಅಲ್ಲಿಂದ ಬಸ್ಸೇರಿ ಮುಖ್ಯರಸ್ತೆ ತಲುಪಿ; ಕೈಯಲ್ಲಿನ ಕೋಲೂರಿ ಗುಡ್ಡವೇರತೊಡಗಿದವರಿಗೆ ಕೊರಕಲು, ಕಡಜ, ಕಾಡುಜೇಡದ ಬಲೆ, ಇಂಬ್ಲಗಳ ಪರಿಚಯಿಸುತ್ತಾ ಸುತ್ತಮುತ್ತಲ ಮುಳ್ಳುಕಂಟಿ-ಮರದಿಂದ ಇಳಿಬಿದ್ದ ಬಿಳಲು, ದೊಡ್ಡ ದೊಡ್ಡ ಮರಗಳನ್ನು ತೋರಿಸುತ್ತಾ ಸಹ್ಯಾದ್ರಿ ಶ್ರೇಣಿಯ ಪರಿಚಯ ಮಾಡಿಸಿದೆವು. ಹಾಡು-ಕುವೆಂಪು ಗೀತೆ ಹಾಡುತ್ತಾ, ರಾಮೋಜಿಯೊಡನೆ ಗುಂಪು-ಗುಂಪಾಗಿ ಹೆಜ್ಜೆ ಹಾಕಿ ಹಾಸುಬಂಡೆಯ ಮೇಲೇರಿ, ಸೂರ್ಯೋದಯದ ಆಗಮನಕ್ಕೆ ಕಾದೆವು. ಹಕ್ಕಿಗಳಿಂಚರವು ಕೇಳುವ ಮೊದಲೇ ಮಾತಿಲ್ಲಿ ಮೌನದ ಬೆನ್ನೇರಿದಂತೆ ಮಕಾಡೆ ಮಲಗಿ ಕಿವಿ ತೆರೆದೆವು.

ಒಂದೊಂದೆ ಹಕ್ಕಿಯ ಇಂಚರ ಕಿವಿಗಿಂಪು ನೀಡುತ್ತಿದ್ದರೆ ಪೊಂಗುಳಿ, ಕಾಜಾಣದ-ಕಾಡುಕೋಳಿಯ ಝೇಂಕಾರಕ್ಕೆ ಮಾರ್ದನಿಯಿಡುವಂತೆ ನವಿಲುಗಳ ಕೇಕೆ, ಪುರ್ಲೆ, ಮಿಟ್ಟೆ, ಹೊಂಬಂಡ, ಕುಟ್ರ, ಪಿಕ್ಕ ಮೊದಲಾದ ಪಕ್ಷಿಗಳ ಕಲರವ ಕೇಳಿಸಿಕೊಂಡು ಪುಲಕಿತರಾದೆವು. ಎಲ್ಲರ ನಿರೀಕ್ಷೆ ಸೂರ್ಯನ ಉದಯಕ್ಕೆ ‘ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ....’ ಗೀತೆಗೆ ಸಜ್ಜಾದ ನಮ್ಮ ತಂಡದ ರಾಜೇಂದ್ರ, ಭಾರತಿದೇವಿಯರಿಗೆ ನಿರಾಸೆ ಉಂಟು ಮಾಡಲೇಬೇಕೆಂದು ಹಟತೊಟ್ಟ ಇಬ್ಬನಿ ಮೋಡ ಸೂರ್ಯನನ್ನು ತನ್ನ ಸೆರಗ ಮರೆಯಲ್ಲಿ ಅಡಗಿಸಿಕೊಂಡಿತ್ತು. ಎಷ್ಟು ಹೊತ್ತಾದರೂ ಸೂರ್ಯೋದಯ ತನ್ನ ಮೋಹಕ ದರ್ಶನ ನೀಡದಿದ್ದರೂ ನಮ್ಮ ಚಾರಣವು ನಾಯಿಗುತ್ತಿ ತಿಮ್ಮಿಯರ ನೆನೆದುಕೊಂಡು ಒಂದಿಷ್ಟು ಹಾಡು-ಕುಣಿತವಾಡಿ ಬಂದ ದಾರಿಯಲ್ಲೆ ವಾಪಾಸಾದೆವು.

ಮುಂದೆ ನಮ್ಮ ಪಯಣ ಇಂಗ್ಲಾದಿಯ ಕುವೆಂಪು ಅವರ ಪತ್ನಿ ಹೇಮಾವತಿಯವರ ಮನೆಯಾಗಿತ್ತು. ಕುವೆಂಪು ಕೈ ಹಿಡಿದ ಆ ತಾಯಿಯ ಮನೆ ಒಂದು ಎಕರೆಗಿಂತಲೂ ಮಿಗಿಲಾಗಿತ್ತು. ಕುವೆಂಪು-ಹೇಮಾವತಿಯವರು ಮದುವೆಯಾದ ಮಂಟಪ ಅಲ್ಲಿನ ಪಡಸಾಲೆಯಲ್ಲಿ ಗತವೈಭವವ ಸಾರುತ್ತಿತ್ತು. ಆ ಮನೆಯ ಹಿರೀಕರು ಹೇಳಿದಂತೆ ‘ಈ ಮನೀನ ಗುಡ್ಸಿ ತೊಳ್ದು ಹಮಾ ಮಾಡಾದು ಹೌದೇನ್ರಿ’ ಅದಿಕ್ಕೆ ನಮಗೆ ಬೇಕಾದಷ್ಟು ಇಟ್ಕಂಡು ಎಲ್ಲನೂ ಬೀಗ ಹಾಕಿಟ್ಟೀವಿ’ ಎಂದರು.

ಅಪಾರ ಮರಳರಾಶಿಯ ಮಧ್ಯೆ ಜುಳುಜುಳು ಹರಿಯುವ ತುಂಗೆ, ಎಡ-ಬಲ ದಂಡೆಯ ಮೇಲೆ ಹಬ್ಬಿದ ಮಳೆಕಾಡು. ಬಯಲುಸೀಮೆಯಿಂದ ನಮ್ಮ ವಿ.ವಿ. ವ್ಯಾಪ್ತಿಗೆ ವರ್ಗವಾಗಿ ಬಂದ ಅಧ್ಯಾಪಕರು ನದಿ-ಕಾಡು-ತೀಡುವ ತಂಗಾಳಿ-ಹರಿವ ನದಿಯ ಕಲರವಕೆ ಮನಸೋತು ಆಸ್ವಾದಿಸಿದರು. ನಮ್ಮ ತಂಡದ ಹಾಡುಗಾರರು ಕುವೆಂಪು ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿದರು. ‘ಸೃಷ್ಟಿಯ ರಚನೆಯ ಕುಶಲಕೆ ಚಂದಕೆ ಜಗದಚ್ಚರಿಯ ಅಂದದ ಒಪ್ಪಂದಕ್ಕೆ ಚಿರಚೇತನ ತಾನಿಹೆನೆಂಬಂದದಿ ಬೆಳ್ಳಕ್ಕಿಯ ಹಂತಿಯ ಆ ನೆವದಿ ದೇವರು ರುಜು ಮಾಡಿದನು.... ಗೀತೆ ಎಷ್ಟು ಅರ್ಥಪೂರ್ಣವೆಂದು ಆ ಸ್ಥಳದಲ್ಲಿ ನಿಂತವರಿಗನಿಸಿದ್ದು ಸೋಜಿಗವಲ್ಲ.

ಈ ನಾಯಿಗುತ್ತಿ ಪಯಣದಲ್ಲಿ ಹೇಮಾಂಗಣಕ್ಕೆ ವಾಪಾಸು ಬಂದು ಕುವೆಂಪು ಹುಟ್ಟಿದ ಮನೆ ‘ಹಿರೇಕೂಡಿಗೆ’ಗೆ ತೆರಳಲು ಅನುವಾಗಿ, ಒಂದ್ಹತ್ತು ಮೈಲಿ ಪ್ರಯಾಣಿಸಿ ಹಿರೇಕೂಡಿಗೆಗೆ ಬಂದಾಗ, ಮಧ್ಯಾಹ್ನದ ಬಿಸಿಲು ಪ್ರಖರವಾಗುತ್ತಿತ್ತು. ಅದಾಗ್ಯೂ ಹಿರೇಕೂಡಿಗೆ ಮನೆಯನ್ನು ಕುಪ್ಪಳಿಯ ಕವಿಮನೆಯಂತೆ ಕಲ್ಪಿಸಿಕೊಂಡು ಹೋದವರಿಗೆ ತೀವ್ರ ನಿರಾಸೆ ಕಾದಿತ್ತು.

ಯಾವುದೋ ದೇವಾಲಯದ ಗರ್ಭಗುಡಿಯಲ್ಲಿ ಕೂರಿಸಿದ ದೇವರಂತೆ, ಕುರ್ಚಿಯಲ್ಲಿ ವಿರಾಜಮಾನರಾದ ಕುವೆಂಪು ಚಿತ್ರವನ್ನು ಬಿಟ್ಟರೆ ಅಲ್ಲಿ ಇನ್ನಾವುದೇ ಮಲೆನಾಡ ಮನೆಯ ವಾತಾವರಣವಿರಲಿಲ್ಲ. ಪಕ್ಕದ ಮನೆಯವರನ್ನು ಮಾತನಾಡಿಸಿದರೆ, ಅವರು ಆ ಮನೆಯಲ್ಲಿ ಬಾಳಿ-ಬದುಕಿದರ್ಯಾರು ಈಗಿಲ್ಲ, ಈಗಿನ ಪೀಳಿಗೆಯವರು ಪ್ಯಾಟೆ ಸೇರಿದ್ದಾರೆ ಎಂದು ಹೇಳಿದರು.

ನಾವು ಅಲ್ಲಿಂದ ರಸ್ತೆ ಮಧ್ಯೆ ಸಿಗುವ ತೂಗು ಸೇತುವೆಯನ್ನು ನೋಡಿ ತುಂಗಾ ನದಿಯ ನಾದವ ಕಿವಿಗೆ ತುಂಬಿಕೊಂಡು ಗಡಿಕಲ್ಲ ಬಳಿ ಇರುವ ಹಂಪಿ ವಿ.ವಿ.ಯ ಕುವೆಂಪು ಸಂಶೋಧನಾ ಕೇಂದ್ರದ ಮ್ಯೂಸಿಯಂನ್ನು ನಮ್ಮ ಬಯಲುನಾಡ ಗೆಳೆಯರಿಗೆ ಪರಿಚಯಿಸಿಕೊಂಡು ಬಂದೆವು. ನಮಗಾಗಿ ಕುರಿ ಮಾಂಸದ ಸಾರು, ಮಲೆನಾಡ ಕಡುಬು ಕಾಯುತ್ತಿದ್ದವು. ಹಳ್ಳದ ತಿಳಿನೀರಲ್ಲಿ ಕಾಲಾಡಿಸಿದ ಗೆಳೆಯರು ಮಾಂಸದ ಘಮಲಿಗೆ ಮನಸೋತು ಹೊಟ್ಟೆ ತುಂಬಾ ಊಟ ಮಾಡಿ ಕವಳಮೆದ್ದು ಕುಪ್ಪಳಿಗೆ ನಾಯಿಗುತ್ತಿ ಪಯಣಕ್ಕೆ ವಿದಾಯ ಹೇಳಿ ಹೊರಟೆವು.

ನಿಜಕ್ಕೂ ತುಂಬಿದ ತುಂಗೆಯಲ್ಲಿ ನಾಯಿಗುತ್ತಿಯ ‘ಗುತ್ತಿ ನಾಯಿ’ಯು ಬಡಿದಾಡಿ ತೇಲಿಹೋದಂತೆ ಭಾವುಕ ಮನಸ್ಸಿನಿಂದ ಊರಕಡೆ ಪಯಣಿಸಿದೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.