ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ತರುಕಾಶಿ

Published 28 ಏಪ್ರಿಲ್ 2024, 0:29 IST
Last Updated 28 ಏಪ್ರಿಲ್ 2024, 0:29 IST
ಅಕ್ಷರ ಗಾತ್ರ

ತರುಕಾಶಿ

ಕುವೆಂಪು ಅವರು ‘ಪಕ್ಷಿಕಾಶಿ’ ಕವನ ಸಂಕಲನದ ‘ಕೆಂದಳಿರು’ ಕವನದಲ್ಲಿ ‘ತರುಕಾಶಿ’ ಪದ ಪ್ರಯೋಗಿಸಿದ್ದಾರೆ. ಅವರಿಗೆ ಒಂದು ಕೆಂದಳಿರಿನಿಂದ ಕೂಡಿದ ಮರ ಮನಮೋಹಿಸಿದೆ. ಅವರಿಗೆ ಆ ಮರದ ಸಂಪತ್ತಿನಲ್ಲಿ ಸ್ವರ್ಗ ಅರಳಿದಂತಿದೆ. ಆ ಕೆಂದಳಿರಿನ ಇಂದ್ರನಾಸ್ಥಾನದಲ್ಲಿ ಊರ್ವಶಿ ತಿಲೋತ್ತಮೆಯರೆಲ್ಲ ನರ್ತಿಸುತ್ತಿದ್ದಾರೆ. ಇದು ಅವರು ಪ್ರಕೃತಿಯಲ್ಲಿ ಕಾಣುತ್ತಿರುವ ಐಂದ್ರಯಿಕ ಕೆಂದಳಿರಿನ ಸೌಂದರ್ಯ. ಅದು ಅವರ ಕಲ್ಪನಾ ಸೌಂದರ್ಯದಲ್ಲಿ ಸ್ವರ್ಗವಾಗಿ ಶೋಭಿಸುತ್ತಿದೆ.

ಆ ಕೆಂದಳಿರಿಗೆ ಅವರ ವ್ಯಕ್ತಿತ್ವವೇ ಜ್ವಾಲೆಯಾಗಿ ಉರಿದು, ಬುದ್ಧಿ ಅರಿಯದ ಸಿದ್ಧಿಯನ್ನು ತಮ್ಮ ಭಾವದಲ್ಲಿ ಕಾಣುತ್ತಿದ್ದಾರೆ. ಹಾಗಾಗಿ ಅವರು ಆ ಮರವನ್ನು ‘ತರುಕಾಶಿ’ ಎಂದು ಕರೆದು ಹೀಗೆ ತಮ್ಮ ಕಾಶಿ ದರ್ಶನಾನಂದವನ್ನು ವ್ಯಕ್ತಪಡಿಸಿದ್ದಾರೆ.

ಕೋಟಿ ಮೈಲಿಗಳಾಚೆ ಕಾಶಿಯಾತ್ರೆಗಳೇಕೆ?

ಇಲ್ಲಿ ಗೈತರು, ಯಾತ್ರಿಕನೆ, ಇದುವೆ ತರುಕಾಶಿ!

(ಕೆಂದಳಿರು - ಪಕ್ಷಿಕಾಶಿ)

ಶ್ರೀದಿನ

ಕುವೆಂಪು ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ 1947 ಆಗಸ್ಟ್ 15 ರ ದಿನವನ್ನು ‘ಶ್ರೀದಿನಂ’ ಎಂಬ ಪದ ಸೃಷ್ಟಿಸಿ ಬಣ್ಣಿಸಿದ್ದಾರೆ. ಅವರಿಗೆ ಆಗಸ್ಟ್ 15 ಗುರುದೇವ ರಾಮಕೃಷ್ಣ ಪರಮಹಂಸರು ಮಹಾಸಮಾಧಿ ಹೊಂದಿದ ದಿನ, ಯೋಗಿ ಅರವಿಂದರು ಹುಟ್ಟಿದ ದಿನ, ಬ್ರಿಟೀಷರು ಮೈತ್ರಿಯಿಂದ ಸಾಮ್ರಾಜ್ಯ ತ್ಯಜಿಸಿ ಭಾರತಕ್ಕೆ ಸ್ವಾತಂತ್ರ್ಯ ನೀಡಿದ ದಿನ. ಅದು ‘ಭಾರತ ಸ್ವಾತಂತ್ರ್ಯ ಪುಣ್ಯೋದಯದ ದಿನ.’

‘ಶ್ರೀ’ಯು ಮಂಗಳ. ಕಾಂತಿ, ಶೋಭೆ, ಸಿರಿ ಸಂಪತ್ತನ್ನು ಸೂಚಿಸುವ ಪದ. ಸ್ವಾತಂತ್ರ್ಯ ಪಡೆದ ಕಾರಣದಿಂದ ದೇಶವು ಮೇಲಿನ ಲಕ್ಷಣಗಳೊಂದಿಗೆ ಇತರ ದೇಶಗಳೊಂದಿಗೆ ಸಮಾನ ಘನತೆಗೆ ಪಾತ್ರವಾಗಿದೆ ಎಂಬುದನ್ನು ಸೂಚಿಸುತ್ತದೆ. ಆದ ಕಾರಣದಿಂದ ಕವಿಯು ಆ ‘ಶ್ರೀದಿನ’ವನ್ನು ಹೀಗೆ ಅನನ್ಯವಾಗಿ ನೆನೆದಿದ್ದಾರೆ:

‘ಶ್ರೀದಿನಂ, ದಿಟವಿದು ಮಹಾದಿನಂ, ವಿರಾಡ್‍ದಿನಂ;

ಗುರುದೇವ ಪರಮಹಂಸ ಮಹಾಸಮಾಧಿಯ ದಿನಂ!

ಅರವಿಂದ ಯೋಗೀಂದ್ರ ಜನ್ಮೋತ್ಸವದ ದಿನಂ!

ಸಾಮಾಜ್ಯಮಂ ತ್ಯಜಿಪ ಮೈತ್ರಿಯ ಮಹದ್ ದಿನಂ!’

(ಶ್ರೀ ಸ್ವಾತಂತ್ರ್ಯೋದಯ ಮಹಾಪ್ರಗಾಥಾ)

ದೃಷ್ಟಿ ಜಿಹ್ವೆ

ಕುವೆಂಪು ಅವರು ಮಾಗಿಯ ಪ್ರಾತಃಕಾಲದಲ್ಲಿ ಜಿನಿಯಾ ಹೂವಿನ ತುದಿಯಲ್ಲಿ ‘ಕರಿಮೈ ಬಿಳಿರೆಕ್ಕೆಯ ಕೆಂಬೊಟ್ಟಿನ ಚೆಲ್ವಿನ ಚಿಟ್ಟೆ’ಯನ್ನು ಕಾಣುತ್ತಾರೆ. ನೋಡುತ್ತ ತಲ್ಲೀನರಾಗಿ ಚಲಿಸದೆ ನಿಂತುಬಿಡುತ್ತಾರೆ. ಆ ಅವಲೋಕನ ನಾಲಗೆಯಂತೆ ಸವಿದ ಮಧುರ ರುಚಿಯನ್ನು ‘ದೃಷ್ಟಿ ಜಿಹ್ವೆ’ ಪದ ರಚಿಸಿ ಅಭಿವ್ಯಕ್ತಿಸಿದ್ದಾರೆ. ಆ ದೃಶ್ಯದ ಮಧುರ ರಸವನ್ನು ಕಣ್ಣೀರಿನಿಂದ ಹೀರಿ ಹರ್ಷಿತರಾಗಿದ್ದಾರೆ.

‘ಅಹಹಾ ನಿಂತಿರೆ ದೃಷ್ಟಿ ಜಿಹ್ವೆಯೊಳೆ

ದೃಶ್ಯದ ಮಧುರಸವನು ಹೀರಿ.’

(ಹೂವು-ಚಿಟ್ಟೆ-ಪಕ್ಷಿಕಾಶಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT