ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ: ಪಕ್ಷಿ ಗಾಂಧಿ

ಜಿ. ಕೃಷ್ಣಪ್ಪ
Published 17 ಆಗಸ್ಟ್ 2024, 23:30 IST
Last Updated 17 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಪಕ್ಷಿ ಗಾಂಧಿ

ಕುವೆಂಪು ಅವರು ತಾ.10.4.1942ರಂದು ‘ಎರಡನೆಯ ಮಹಾಯುದ್ಧದ ಮಧ್ಯಘಟ್ಟದಲ್ಲಿ ಜಪಾನೂ ಯುದ್ಧಕ್ಕಿಳಿದು. ಯುದ್ಧದ ಬಿಸಿ ಭಾರತಕ್ಕೂ ತಟ್ಟಿದ ಸಮಯದಲ್ಲಿ’ ಜಗನ್ಮಾತೆಯನ್ನು ಕುರಿತು ರಚಿಸಿದ ಕವನ ‘ಏನೆಂದು ಪ್ರಾರ್ಥಿಸಲಿ?’.

ಕವಿಯು ಕಲೆಯ ಸೃಷ್ಟಿಯ ನಾಶವನ್ನು ಸಹಿಸುವುದಿಲ್ಲ. ಅವನಿಗೆ ಜಗತ್ತಿನ ಯುದ್ಧಕ್ಕಿಂತ ಹಿರಿದಾದುದು ಕವಿಯನ್ನು ನಿರ್ಮಾಣ ಮಾಡುತ್ತಿರುವ ರಾಮಾಯಣ; ಗಿಡದಲ್ಲಿ ಹೊಮ್ಮಿ ಬರುವ ಕೆಂಪು ಹೂ, ‘ಶಾಂತಿ ಸುಗ್ಗಿಗೆ ಸುವ್ವಿ ಸುವ್ವಿ!’ ಎಂದುಹಾಡುವ ಟುವ್ವಿ ಹಕ್ಕಿಯ ಆಲಾಪನೆ.

ಕುವೆಂಪು ಅವರು ಆ ಪಕ್ಷಿ ಸದಾ ಶಾಂತಿಯ ಮಂತ್ರವನ್ನು ಗಾಂಧಿಯಂತೆ ಸಾರುತ್ತಿದೆ ಎಂಬ ಆದರ್ಶ ಸೌಂದರ್ಯದಲ್ಲಿ ‘ಪಕ್ಷಿಗಾಂಧಿ’ರೂಪಕದಲ್ಲಿ ಚಿತ್ರಿಸಿದ್ದಾರೆ. ಗಾಂಧೀಜಿಯು ತಮ್ಮ ನಡೆ ನುಡಿಯಿಂದ ಶಾಂತಿಯ ಅನುಭಾವಿಗಳಾಗಿ ಶಾಂತಿಗೀತ ಹಾಡುತ್ತಿರುತ್ತಾರೆ. ಎಂಬ ಅರಿವಿನ ಕವಿ ಭಾವ ‘ಪಕ್ಷಿಗಾಂಧಿ’ ರೂಪಕದಲ್ಲಿ ಪಡಿಮೂಡಿದೆ. ಶಾಂತಿಯ ಬೆರಗು, ಸೌಂದರ್ಯ, ಮೌನ, ಆಲಾಪನೆ ಗರಿಗಟ್ಟಿ ನಲಿದು ಹಾರಾಡಿದೆ!

ಈ ಜಗದ್‍ಯುದ್ಧಕಿಂ ಪಿರಿಯ ವೈಸಲೆ ಕವಿಯ

ರಚಿಸುತಿಹ ರಾಮಾಯಣಂ ಮೇಣ್ ಕೆಂಪುವೂ ಗಿಡದಿ,

ಪಕ್ಷಿಗಾಂಧಿಯ ತೆರದಿ, ‘ಶಾಂತಿ ಸುಗ್ಗಿಗೆ ಸುವ್ವಿ,

ಸುವ್ವಿ!’ ಎನುವೀ ಟುವ್ವಿ ಹಕ್ಕಿಯಾಲಾಪನಂ?’

(ಏನೆಂದು ಪ್ರಾರ್ಥಿಸಲಿ - ಇಕ್ಷುಗಂಗೋತ್ರಿ)

ಮಲೆಪೊಡವಿ

(ನಾ). ಮಲೆನಾಡು

[ಮಲೆ + ಪೊಡವಿ(>ಪೃಥುವಿ)]

ಭರದ್ವಾಜ ಮುನಿಗಳು ರಾಮಸೀತೆ ಲಕ್ಷ್ಮಣರಿಗೆ ಚಿತ್ರಕೂಟಕ್ಕೆ ಹೋಗಿ ನೆಲಸಲು ತಿಳಿಸುವರು. ಅವರ ಆರು ಕಣ್ಣುಗಳು ಒಂದಾಗಿ, ಅಗೋಚರವಾದಂತಹ ಆತ್ಮಾನಂದ ರಸವಾಗಿ ಚಿತ್ರಕೂಟದ ದೃಶ್ಯ ದೇವೇಂದ್ರನನ್ನು ಮೈಮರೆತು ಕಂಡರು; ಮೈಯೆಲ್ಲ ಕಣ್ಣಾಗಿ ನೋಡಿದರು. ಆ ದಿಟ್ಟ ಮಲೆಕಾಡು-ವಿಸ್ತಾರವಾಗಿ ಹರಡಿದ ಹಸುರು ರೋಮ ಸಮೂಹದ ಭೀಷಣ ಚರ್ಮ ಹೊದ್ದಂತಿದ್ದ ಅಪೂರ್ವ ಭೂ ಬೃಹತ್ ಪ್ರಾಣಿಯಂತಿತ್ತು. ಎಂದು ಕವಿ ಬಣ್ಣಿಸಿದ್ದಾರೆ. ಆ ಮಲೆನಾಡನ್ನು ‘ಮಲೆಪೊಡವಿ’ ಎಂದು ಕರೆದಿದ್ದಾರೆ.

ಸಾಂದ್ರರೋಮರಾಜಿಯರುಂದ್ರ

ಚರ್ಮದೊಂದತಿಪೂರ್ವ ಭೂ ಬೃಹಜ್ಜಂತುವೆನೆ

ಹಬ್ಬಿ ಹಸಿರಿಸಿತುಬ್ಬಿತಡವಿ ದಟ್ಟಯ್ಸಿದಾ

ದಿಟ್ಟ ಮಲೆಪೊಡವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT