ರಾತ್ರಿ ದೀಪಗಳು ಆರಿದ ನಂತರ ಹಟ್ಟಿಯ ಜ್ಯೋತಿಗಳು ಒಂದೊಂದಾಗಿ ನೀರವ ರಾತ್ರಿಯಲ್ಲಿ ಊರಾಚೆಯ ಕೊಳದ ಬಳಿ ಸೇರುತ್ತವೆ. ಸಭಾಂಗಣವೇ ಕೊಳವಾಗಿ, ಮೃದುವಾದ ಅಲೆಗಳ ನಡುವೆ ಮಿನುಗುವ ಜ್ಯೋತಿಗಳು ಪಾತ್ರಗಳಾಗಿ ರಂಗಮಂಚವನ್ನು ಏರುತ್ತವೆ. ಈ ದೃಶ್ಯಕಲ್ಪನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಹೊನ್ನಾರು ನಾಟಕೋತ್ಸವ’ದಲ್ಲಿ ‘ನಟರಂಗ’ ಅಭಿನಯಿಸಿದ ಕೆ.ವೈ.ನಾರಾಯಣಸ್ವಾಮಿ ಅವರ ‘ನೀರಗನ್ನಡಿ’ ನಾಟಕದಲ್ಲಿ ಜೀವಪಡೆಯಿತು.

ಜನಪದ ಕಥೆಯಿಂದ ಪ್ರೇರಿತವಾದ ಈ ನಾಟಕ ಹೆಣ್ಣಿನ ಜೀವನದಲ್ಲಿ ‘ಅನುಮಾನ’ ಎಂಬ ವಿಷಬೀಜ ಹೇಗೆ ಬೆಳೆದು ಕುಟುಂಬವನ್ನೇ ನಾಶಮಾಡಬಲ್ಲದು ಎಂಬುದನ್ನು ರೂಪಕಾತ್ಮಕವಾಗಿ ಹೇಳುತ್ತದೆ. ಹಟ್ಟಿಯ ಜ್ಯೋತಮ್ಮಗಳೇ ಕಥೆಯನ್ನು ಹೇಳುವ ತಂತ್ರದಲ್ಲಿ ಕಥಾವಸ್ತು ಹರಿಯುತ್ತದೆ. ಮದುವೆಯ ಸಂಭ್ರಮದ ಮಧ್ಯೆ ಯುದ್ಧದ ಕಾರ್ಮೋಡ ಕವಿದು ಮಧುಮಗ ವೀರಕುಮಾರನನ್ನು ರಣಾಂಗಣಕ್ಕೆ ಕರೆದೊಯ್ಯುತ್ತದೆ. ಮದುವೆ ಮುರಿಯುತ್ತದೆ; ಮದುಮಗಳನ್ನು ತವರುಮನೆಯವರು ಕಾಡಿನಲ್ಲಿ ಬಿಟ್ಟುಹೋಗುತ್ತಾರೆ. ಆತ್ಮಹತ್ಯೆಗೆ ಮುಂದಾಗುವ ಅವಳನ್ನು ಜ್ಯೋತಮ್ಮದಿರು ತಡೆದು ಗಂಡನ ಮನೆಗೆ ಕಳುಹಿಸುತ್ತಾರೆ.

ಆದರೆ ಗಂಡನ ಮನೆಯಲ್ಲಿ ಅವಳಿಗೆ ಸ್ವಾಗತವಲ್ಲ, ಅನುಮಾನ ಕಾದಿರುತ್ತದೆ. ಅತ್ತೆಯ ಕಾಟ, ಬಡತನ, ನಿರ್ಲಕ್ಷ್ಯ–ಇವೆಲ್ಲದರ ನಡುವೆ ಸಣ್ಣ ಘಟನೆಯೊಂದು ದೊಡ್ಡ ದುರಂತಕ್ಕೆ ಬೀಜವಾಗುತ್ತದೆ. ಇಲಿಗಳ ಕುತಂತ್ರದಿಂದ ಹುಟ್ಟಿದ ಅನುಮಾನ ಯುದ್ಧದಿಂದ ಮರಳಿದ ವೀರಕುಮಾರನ ಮನಸ್ಸನ್ನು ವಿಷ ಮಾಡುತ್ತದೆ. ಮೊದಲ ರಾತ್ರಿಯ ಪಲ್ಲಂಗದ ಕೆಳಗೆ ಅಡಗಿದ ಕತ್ತಿ ಕೇವಲ ಆಯುಧವಲ್ಲ–ಅದು ಸಂಶಯದ ರೂಪಕ.

‘ಹೆಣ್ಣಿನ ಜೀವನವೂ ಅಷ್ಟೇ. ಯಾರೋ ಎಸೆದ ಹುಲ್ಲಿನ ಕಡ್ಡಿಯೂ ಅನುಮಾನದ ಕತ್ತಿಯಾಗಬಹುದು’ ಎಂಬ ಅರ್ಥಪೂರ್ಣ ಮಾತು ನಾಟಕದ ಕೇಂದ್ರಬಿಂದು. ಒಂದು ಇಲಿ ಕೂಡ ಪ್ರೇಮಸೌಧವನ್ನು ಕೆಡವಬಲ್ಲದೆ? ಎಂಬ ಪ್ರಶ್ನೆ ಪ್ರೇಕ್ಷಕರ ಮನಸ್ಸಿನಲ್ಲಿ ಅಲೆಗಳಂತೆ ತೇಲುತ್ತದೆ. ವೀರಕುಮಾರ ಸಂಶಯದ ದಡದಲ್ಲಿ ನಿಂತಾಗ, ಸೊಸೆ ಜೀವನದಿಯಾಗಿ ಹರಿಯುವ ರೂಪಕದೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ.

ಶಕ್ತಿಯುತ ಬರವಣಿಗೆ, ತಾಂತ್ರಿಕ ಪ್ರಯೋಗ

ಕೆ.ವೈ.ನಾರಾಯಣಸ್ವಾಮಿ ಅವರ ಸಂಭಾಷಣೆಗಳು ಸ್ಪಷ್ಟ, ಸಶಕ್ತ ಮತ್ತು ಧ್ವನಿಪೂರ್ಣ. ನಾಟಕ ವಾಚ್ಯವಾಗದೆ ದೃಶ್ಯ–ರೂಪಕಗಳ ಮೂಲಕ ಹೆಣ್ಣಿನ ಬದುಕಿನ ಸವಾಲುಗಳನ್ನು ಎತ್ತಿ ಹಿಡಿಯುತ್ತದೆ. ಜನಪದ ನೆಲೆಯಿದ್ದರೂ ವಿಷಯ ಸಮಕಾಲೀನವಾಗಿ ತಟ್ಟುತ್ತದೆ.

ನಿರ್ದೇಶಕ ಬಿ.ಸುರೇಶ ಸಭಾಂಗಣವನ್ನೇ ಕೊಳವಾಗಿ ರೂಪಿಸಿದ್ದಾರೆ. ನೀರಿನ ಅಲೆಗಳ ಭಾವ ಮೂಡಿಸಲು ಕನ್ನಡಿಗಳ ಬಳಕೆ, ಪರದೆಯ ಅಂಚುಗಳ ಚಲನೆ, ಕನ್ನಡಿ ಮತ್ತು ಕತ್ತಿಯ ರೂಪಕಾತ್ಮಕ ಉಪಯೋಗ–ಇವು ನಾಟಕಕ್ಕೆ ದೃಶ್ಯಗಾಢತೆ ನೀಡಿವೆ. ತಾಂತ್ರಿಕವಾಗಿ ಆಲೋಚಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಬೆಂಗಳೂರಿನ ಸುರಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಶ್ರಮವಹಿಸಿ ನಾಟಕ ಕಲಿಸಿರುವುದು ಪ್ರಶಂಸನೀಯ. ಆದರೆ ನಾಟಕದ ವಸ್ತುವಿನ ಸೂಕ್ಷ್ಮತೆ ಹಾಗೂ ನಿರ್ದೇಶಕರ ದೃಷ್ಟಿಯನ್ನು ಸಂಪೂರ್ಣವಾಗಿ ಹಿಡಿಯುವಲ್ಲಿ ಕೆಲವಡೆ ನಟರು ಎಡವಿದ್ದಾರೆ. ಮೊದಲ ಪ್ರದರ್ಶನವಾಗಿರುವುದರಿಂದ ಈ ಅಸ್ಪಷ್ಟತೆ ಮುಂದಿನ ಪ್ರದರ್ಶನಗಳಲ್ಲಿ ಸರಿಯಾಗುವ ನಿರೀಕ್ಷೆ ಇದೆ.

ವೀರಕುಮಾರನಾಗಿ ದರ್ಶನ್, ಸೊಸೆಯಾಗಿ ದೇವಿಕಾ, ಅತ್ತೆಯಾಗಿ ಚಂದನಾ ಹರ್ಷ ಅಭಿನಯ ಗಮನಸೆಳೆಯಿತು. ಎಂ.ಡಿ. ಪಲ್ಲವಿ ಅವರ ಸಂಗೀತ ನಾಟಕಕ್ಕೆ ಭಾವಸಹಕಾರ ನೀಡಿದರೂ, ಮುದ್ರಿತ ಧ್ವನಿಸುರುಳಿಯಲ್ಲಿ ಕೆಲವೊಮ್ಮೆ ತಾಂತ್ರಿಕ ಅಡಚಣೆ ಕಂಡುಬಂತು. ರವಿಕುಮಾರ್ ಅವರ ಪರಿಕರ ನಿರ್ವಹಣೆ, ಶಶಿಧರ ಅಡಪ ಅವರ ರಂಗವಿನ್ಯಾಸ, ರಾಮಕೃಷ್ಣ ಎನ್.ಕೆ. ಅವರ ಪ್ರಸಾಧನ, ಅಕ್ಷರ ವೇಣುಗೋಪಾಲ್ ಅವರ ಬೆಳಕಿನ ವಿನ್ಯಾಸ ಸಮರ್ಪಕವಾಗಿತ್ತು.

1972 ರಲ್ಲಿ ಪ್ರಾರಂಭವಾದ ‘ನಟರಂಗ’ ಕನ್ನಡ ರಂಗಭೂಮಿಗೆ ಗಣನೀಯ ಕೊಡುಗೆ ನೀಡಿದೆ. ಹಳೆಯ ಬೇರು–ಹೊಸ ಚಿಗುರಿನ ಸಮನ್ವಯದೊಂದಿಗೆ ಮುಂದುವರಿಯುತ್ತಿದೆ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.