ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಿಷ್ಟು ಕೊಳಕುತನ ಮಕ್ಕಳಿಗೆ ವರದಾನವೇ?

Last Updated 12 ಏಪ್ರಿಲ್ 2020, 5:01 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಶುಚಿತ್ವದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಕೊರೊನಾ ವೈರಾಣು ಜಗತ್ತಿನೆಲ್ಲೆಡೆ ಅವಾಂತರ ಸೃಷ್ಟಿಸಿರುವ ಈ ಕಾಲಘಟ್ಟದಲ್ಲಿ ಶುಚಿತ್ವ ಅದರಲ್ಲೂ ಕೈಗಳ ಶುಚಿತ್ವ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರೂ ಏನನ್ನೇ ಮುಟ್ಟಿದರೂ ಕೈ ತೊಳೆಯುವುದನ್ನು ಒಂದು ವ್ರತದಂತೆ ಪಾಲಿಸುತ್ತಿದ್ದಾರೆ.‌ ಕೊರೊನಾದಿಂದ ಪಾರಾಗುವ ದೃಷ್ಟಿಯಿಂದ ಇದು ಅಪೇಕ್ಷಣೀಯವೂ ಅನಿವಾರ್ಯವೂ ಹೌದು. ಏಕೆಂದರೆ ಉಸಿರಿನಿಂದ ಹೊರಬಂದ ಕೊರೊನಾ ವೈರಾಣು ಬಹುಕಾಲ ವಸ್ತುಗಳ ಮೇಲೆ ಬದುಕಿರುವುದರಿಂದ ಮತ್ತು ಆ ವಸ್ತುಗಳನ್ನು ಮುಟ್ಟಿ, ನಮ್ಮ ಕಣ್ಣು- ಬಾಯಿ- ಮೂಗುಗಳನ್ನು ಸ್ಪರ್ಶಿಸಿಕೊಂಡರೆ ಅತ್ಯಂತ ಸರಾಗವಾಗಿ ಆ ವೈರಾಣು ನಮ್ಮ ಶರೀರದೊಳಕ್ಕೆ ಪ್ರವೇಶಿಸಬಲ್ಲದು ಎಂದು ಸಾಬೀತಾಗಿರುವುದರಿಂದ ಕೈಗಳ ಶುಚಿತ್ವ ಪಾಲಿಸುವುದರಲ್ಲಿ ಅರ್ಥವಿದೆ. ಆದರೆ ಇದೇ ಶುಚಿತ್ವ ಎಲ್ಲಾ ಸಮಯ ಸಂದರ್ಭಗಳಿಗೂ ಅನ್ವಯವಾಗುವುದೇ? ಎಂಬ ಪ್ರಶ್ನೆ ಬಂದಾಗ ಕೊಂಚ ಯೋಚಿಸಬೇಕಾಗುತ್ತದೆ.

ಮಧ್ಯ ವಯಸ್ಕರೆಲ್ಲರೂ ನಮ್ಮ ನಮ್ಮ ಬಾಲ್ಯದೆಡೆಗೆ ಹೊಮ್ಮಿ ಹೊರಳುನೋಟ ಹರಿಸೋಣ. ಉಗುಳು- ಉಚ್ಚೆ ಏನನ್ನೂ ಲೆಕ್ಕಿಸದೆ ಗೋಲಿ, ಬುಗುರಿ ಎಂದು ದಿನವಿಡೀ ಮಣ್ಣಿನಲ್ಲೇ ಕಾಲಕಳೆಯುತ್ತಿದ್ದೆವು. ಮನೆಗೆ ಬಂದು ಊಟಕ್ಕೆ ಕೂರುವ ಮೊದಲು ಕಾಟಾಚಾರಕ್ಕೆಂಬಂತೆ ಕೈಗಳ ಮೇಲೆ ಒಂದಿಷ್ಟು ನೀರು ಸುರಿದು ಸ್ವಚ್ಛಗೊಳಿಸುವ ಶಾಸ್ತ್ರವನ್ನು ಮುಗಿಸುತ್ತಿದ್ದೆವು. ಈಗಿನಂತೆ ಲಿಕ್ವಿಡ್ ಸೋಪು ಬಳಸುವುದಿರಲಿ ಮಾಮೂಲಿ ಸೋಪನ್ನೂ ಬಳಸುತ್ತಿರಲಿಲ್ಲ. ಅದೆಷ್ಟು ಬ್ಯಾಕ್ಟೀರಿಯಾಗಳು, ವೈರಾಣುಗಳು ಮತ್ತು ಹುಳುಗಳ ಮೊಟ್ಟೆಗಳು ನಮ್ಮ ಹೊಟ್ಟೆ ಸೇರಿರುತ್ತಿದ್ದವೋ....ನಾವ್ಯಾರೂ ಅದರ ಬಗ್ಗೆ ತಲೆಕೆಡಿಸಿಕೊಂಡವರೇ ಅಲ್ಲ.

ಇನ್ನು ತಿನ್ನುವ ವಿಷಯಕ್ಕೆ ಬಂದರೆ ಈ ನೊಣಗಳಿಗೂ ನಮ್ಮನ್ನು ಕಂಡರೆ ಅದೇನು ಪ್ರೀತಿಯೋ! ಊಟಕ್ಕೆ ಕುಳಿತುಕೊಳ್ಳುವ ಸಮಯಕ್ಕೆ ಸರಿಯಾಗಿ ನಮ್ಮ ಸುತ್ತಲೇ ಗಿರಕಿಹೊಡೆಯುತ್ತಿದ್ದವು. ನಾವು ತಿನ್ನುವ ಆಹಾರದ ಮೇಲೆ ಬಂದು ಕುಳಿತ ಆ ನೊಣಗಳನ್ನು ಎಡಗೈಯಿಂದ ಓಡಿಸಿದಂತೆ ಮಾಡಿ ನಮ್ಮ ಹಸಿದ ಹೊಟ್ಟೆಯನ್ನು ತುಂಬಿಸುವ ಕಾರ್ಯವನ್ನು ಮುಂದುವರಿಸುತ್ತಿದ್ದೆವು. ಅವು ಎಲ್ಲೆಲ್ಲಿ ಕುಳಿತು ಬಂದಿರಬಹುದು ಎಂದು ಯೋಚಿಸುವಷ್ಟು ಜ್ಞಾನವಾಗಲೀ ವ್ಯವಧಾನವಾಗಲೀ ಇರುತ್ತಿರಲಿಲ್ಲ. ಇನ್ನು ಸಂತೆ- ಜಾತ್ರೆಗಳಿಗೆ ಹೋದರಂತೂ ಜಿಲೇಬಿ, ಬೆಂಡು- ಬತ್ತಾಸು, ಕಲ್ಲಂಗಡಿ ಹೋಳು ಮುಂತಾದ ತಿನಿಸುಗಳ ಮೇಲೆ ಸೂಜಿ ತೂರಿಸಲೂ ಜಾಗವಿಲ್ಲದಂತೆ ಮುತ್ತಿಕೊಂಡಿರುತ್ತಿದ್ದ ನೊಣಗಳನ್ನು ಕಣ್ಣಾರೆ ಕಂಡರೂ ಅವಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಕೊಂಡುಕೊಂಡು ಚಪ್ಪರಿಸಿಕೊಂಡು ತಿನ್ನುತ್ತಿದ್ದೆವು.

ಇನ್ನು ಕುಡಿಯುವ ನೀರಿನ ವಿಷಯಕ್ಕೆ ಬಂದರೆ ‘ಹರಿಯುವ ನೀರು ಪರಿಶುದ್ಧವಾದುದು’ ಎಂಬ ಹಿರಿಯರ ಮಾತನ್ನು ವೇದವಾಕ್ಯದಂತೆ ಪಾಲಿಸುತ್ತಾ ನದಿ, ತೊರೆ, ಕಾಲುವೆ ಮುಂತಾದ ಯಾವುದೇ ಹರಿಯುವ ನೀರು ಕಂಡರೂ ಮನದಲ್ಲಿ ಒಂಚೂರೂ ಅಳುಕಿಲ್ಲದೆ ನಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿದ್ದೆವು. ಮಳೆಗಾಲದಲ್ಲಂತೂ ಕೆಂಬಣ್ಣದ ನದಿನೀರನ್ನು ಒಂದು ಬಿಳಿ ಬಟ್ಟೆಯಲ್ಲಿ ಶೋಧಿಸಿ ಕಣ್ಣಿಗೆ ಕಾಣುವ ಬಗ್ಗಡಗಳನ್ನು ಹೆಕ್ಕಿ ತೆಗೆದರೆ ಆ ಕಾಲಕ್ಕೆ ನಮಗದುವೇ ಬಿಸ್ಲೇರಿ ವಾಟರ್.

ಇನ್ನು ಪರಿಸರದ ವಿಷಯಕ್ಕೆ ಬಂದರೆ ಬಹಳಷ್ಟು ಜನ ನಾಯಿ -ಬೆಕ್ಕು- ದನಕರುಗಳ ಜೊತೆ ಜೊತೆಯಲ್ಲೇ ಬೆಳೆದಿರುವವರು ಮತ್ತು ಗಂಜಳ, ಸಗಣಿ, ಪ್ರಾಣಿಗಳ ತುಪ್ಪಟ ಮುಂತಾದವುಗಳನ್ನೆಲ್ಲಾ ತಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ಭಾವಿಸಿದವರು. ಹಾಗೆಯೇ ಸುತ್ತಮುತ್ತಲೂ ಸದಾಕಾಲ ಗುಂಯ್ಗುಡುತ್ತಿದ್ದ ನೊಣಗಳನ್ನು ತಮ್ಮ ಸಂಗಾತಿಗಳೆಂತಲೇ ಭಾವಿಸಿದವರು.

ಇಷ್ಟೆಲ್ಲಾ ಕೊಳಕು, ಗಲೀಜುಗಳನ್ನೇ ಮೈಗೂಡಿಸಿಕೊಂಡು ಬೆಳೆದಿದ್ದರೂ ನಾವು ಕಾಯಿಲೆ ಕಸಾಲೆ ಎಂದು ಆಸ್ಪತ್ರೆಯ ಮೆಟ್ಟಿಲು ತುಳಿಯುತ್ತಿದ್ದುದೇ ಕಡಿಮೆ. ನನ್ನ ಮಟ್ಟಿಗೆ ಹೇಳುವುದಾದರೆ ಆರನೇ ತರಗತಿಯಲ್ಲಿ ಓದುತ್ತಿರುವಾಗ ಒಮ್ಮೆ ಟೈಫಾಯಿಡ್ ಆಗಿದೆಯೆಂದು ಇಂಜಕ್ಷನ್ ಚುಚ್ಚಿಸಿಕೊಳ್ಳುವ ಸಲುವಾಗಿ ಗೌರ್ನಮೆಂಟ್ ಆಸ್ಪತ್ರೆಗೆ ಎಡತಾಕಿದ್ದನ್ನು ಬಿಟ್ಟರೆ ಮಿಕ್ಕಂತೆ ವೈದ್ಯಕೀಯ ವ್ಯಾಸಂಗಕ್ಕೆಂದು ಬೆಂಗಳೂರು ಸೇರಿಕೊಳ್ಳುವವರೆಗೆ ಆರೋಗ್ಯ ಹದಗೆಟ್ಟು ವೈದ್ಯರ ಬಳಿಗೆ ಹೋದ ನೆನಪಿಲ್ಲ. ಯಾವಾಗಲಾದರೊಮ್ಮೆ ಜ್ವರ ಬಂದಾಗ ಸನಿಹದ ಅಂಗಡಿಯಲ್ಲಿ ಸಿಗುತ್ತಿದ್ದ ಆ್ಯಸ್ಪ್ರೋ ಅಥವಾ ಸಾರಿಡಾನ್ ಮಾತ್ರೆ ತಂದು ನುಂಗಿದರೆ ಮರುದಿನಕ್ಕೆ ಜಳಜಳವಾಗಿಬಿಡುತ್ತಿತ್ತು.

ಇನ್ನು ಶೀತ, ಕೆಮ್ಮು, ಗಂಟಲುನೋವುಗಳೋ ನಶ್ಯ, ತುಂಬೆರಸ, ಶುಂಠಿ- ಮೆಣಸಿನ ಕಷಾಯಗಳಿಗೆ ಹೆದರಿ ಹೇಳಹೆಸರಿಲ್ಲದಂತೆ ಓಡಿಹೋಗಿರುತ್ತಿದ್ದವು. ಮೈಮೇಲೆ ಚಿಕ್ಕ ಪುಟ್ಟ ಗಾಯಗಳಾದರೆ ಅದೇ ಅಂಗಡಿಯಲ್ಲಿ ಸಿಗುತ್ತಿದ್ದ ಪೆನ್ಸಿಲ್ (ಪೆನಿಸಿಲ್ಲಿನ್) ಆಯಿಂಟ್ಮೆಂಟೇ ರಾಮಬಾಣ.

ಇದೆಲ್ಲವನ್ನೂ ನಾನಿಲ್ಲಿ ಪ್ರಸ್ತಾಪಿಸಿದ ಕಾರಣವೆಂದರೆ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಅದರಲ್ಲೂ ಹೈ ಫೈ ಜೀವನಶೈಲಿಯವರಲ್ಲಿ ಶುಚಿತ್ವ ಎಂಬುದೊಂದು ವ್ಯಸನವಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು. ನಿಜ; ನಾನು ಪ್ರಸ್ತಾಪಿಸಿದ್ದೆಲ್ಲವೂ ಅಂದ ಕಾಲತ್ತಿಲೆ. ಈಗಲೂ ಆಗಿನಂತೆಯೇ ಇರಬೇಕು ಎಂದರೆ ತಪ್ಪಾಗುತ್ತದೆ. ನಾವು ದೈಹಿಕ ಮತ್ತು ಪರಿಸರದ ಶುಚಿತ್ವವನ್ನು ಕಾಪಾಡಿಕೊಳ್ಳದೇ ಇದ್ದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆಯೇ ಸರಿ. ಅವೆರಡರ ಜೊತೆಗೆ ಮಾನಸಿಕ ಶುಚಿತ್ವವೂ ಅಷ್ಟೇ ಮುಖ್ಯ.

ಶುಚಿತ್ವವನ್ನೂ ಒಳಗೊಂಡು ಯಾವುದೇ ಸಂಗತಿ ಆಗಲಿ ಇತಿಮಿತಿಯಲ್ಲಿದ್ದರೆ ಚೆಂದ. ಅತಿಯಾದರೆ ಎಲ್ಲವೂ ಅಪಥ್ಯ.‌ ಪಾಶ್ಚಾತ್ತೀಕರಣದ ಪ್ರಭಾವಕ್ಕೊಳಗಾದ ಇಂದಿನ ತಲೆಮಾರಿನವರು ಶುಚಿತ್ವವನ್ನು ಅದರಲ್ಲೂ ತಮ್ಮ ಮಕ್ಕಳ ವಿಷಯದಲ್ಲಿ ತುಸು ಹೆಚ್ಚೇ ಎನ್ನುವಂತೆ ಪಾಲಿಸುತ್ತಿದ್ದಾರೆ ಎನ್ನಬಹುದು. ಆ ಮಕ್ಕಳು ಮಣ್ಣನ್ನು ಮುಟ್ಟುವಂತೆಯೇ ಇಲ್ಲ. ಕುಡಿಯಲು ಆರ್‌ಒ ನೀರೇ ಬೇಕು. ಇನ್ನು ತೆರೆದಿಟ್ಟ ಆಹಾರವನ್ನಂತೂ ಕಿರುಗಣ್ಣಿನಲ್ಲಿಯೂ ನೋಡುವಂತಿಲ್ಲ. ಇಂಥ ಮನಃಸ್ಥಿತಿಗೆ ಇಂಬುಕೊಟ್ಟಂತೆ 'ತೊಳೀತಾನೇ ಇರಿ ತೊಳಿತಾನೇ ಇರಿ' ಎಂಬ ಟೀವಿ ಜಾಹೀರಾತುಗಳು ಬೇರೆ. ಹಾಗಾಗಿ ಈಗಿನ ಬಹುತೇಕ ಮಕ್ಕಳು ಅತಿಯಾದ ಶುಚಿತ್ವಕ್ಕೆ ಒಗ್ಗಿಕೊಂಡುಬಿಟ್ಟಿದ್ದಾರೆ ಮತ್ತು ಇದೇ ಕಾರಣದಿಂದ ಅತ್ಯಂತ ಸೂಕ್ಷ್ಮ ದೇಹ ಪ್ರಕೃತಿಯವರಾಗಿಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಅದರ ಜೊತೆಯಲ್ಲಿ ಸೀನಿದ್ದಕ್ಕೊಂದು ಕೆಮ್ಮಿದ್ದಕ್ಕೊಂದು ಆ್ಯಂಟಿಬಯೋಟಿಕ್‌ಗಳನ್ನು ನುಂಗಿಸುತ್ತಾ ತಮ್ಮ ಮಕ್ಕಳ ದೇಹದಲ್ಲಿರುವ ಉಪದ್ರವಿ ಮತ್ತು ನಿರುಪದ್ರವಿ ಬ್ಯಾಕ್ಟೀರಿಯಾಗಳನ್ನು ನಿರ್ನಾಮಗೊಳಿಸುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ ಪೋಷಕರು. ಹಾಗೆಯೇ ‌ಮಗುವಿಗೆ ಯಾವುದೇ ಕಾರಣದಿಂದ ಜ್ವರ ಬಂದರೂ‌ ಆ್ಯಂಟಿಬಯೋಟಿಕ್‌ಗಳನ್ನು ಜ್ವರ ನಿವಾರಕಗಳಂತೆ ಬಳಸುವ ಸ್ವಯಂವೈದ್ಯರು ಇನ್ನೂ ಅಪಾಯಕಾರಿ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದಂತೂ ಕಟುಸತ್ಯ. ಮೊದಲನೆಯದಾಗಿ ಉಪದ್ರವಿ ಬ್ಯಾಕ್ಟೀರಿಯಾಗಳು ಆ ಆ್ಯಂಟಿಬಯೋಟಿಕ್‌ಗಳ ವಿರುದ್ಧ ಪ್ರತಿರೋಧ ಒಡ್ಡಿ ಅವುಗಳನ್ನು ನಿಷ್ಪ್ರಯೋಜಕವಾಗಿಸುತ್ತವೆ. ಎರಡನೆಯದಾಗಿ ಮಕ್ಕಳು ನೈಸರ್ಗಿಕ ರೋಗನಿರೋಧಕ ಶಕ್ತಿಯಿಂದ ವಂಚಿತರಾಗುತ್ತಾರೆ. ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಕೊರೊನಾ ಭಯದಿಂದ ಜಗತ್ತಿನ ‌ಬಹಳಷ್ಟು ಜನರಿಗೆ ಕೈ ತೊಳೆಯುವುದೊಂದು ಗೀಳಾಗಿ ಪರಿಣಮಿಸಿದರೆ ಅಚ್ಚರಿಯೇನಿಲ್ಲ.

ಯಾವ ಮಕ್ಕಳು ತಮ್ಮ ಬಾಲ್ಯದಲ್ಲಿ ಒಂದಿಷ್ಟು ಕೊಳಕನ್ನು ಮೈಗೂಡಿಸಿಕೊಂಡು ಬೆಳೆದಿರುತ್ತಾರೋ ಅಂಥ ಮಕ್ಕಳ ದೇಹದಲ್ಲಿ ಹಲವಾರು ಕಾಯಿಲೆಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ನೈಸರ್ಗಿಕವಾಗಿ ಬಂದಿರುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಕಾಮಾಲೆಗೆ ಕಾರಣವಾಗುವ ಹೆಪಟೈಟಿಸ್ 'ಎ' ವೈರಾಣು. ಲಸಿಕೆ ಪಡೆಯದಿದ್ದ ಮಕ್ಕಳೂ ಸಹ ಸರಿಸುಮಾರು ಹತ್ತು ವರ್ಷಗಳು ತುಂಬುವಷ್ಟರಲ್ಲಿ ಈ ವೈರಾಣುವಿನ ವಿರುದ್ಧದ ಪ್ರತಿಕಾಯ (Antibody) ಗಳನ್ನು ನೈಸರ್ಗಿಕವಾಗಿ ಪಡೆದಿರುತ್ತಾರೆ ಮತ್ತು ಅವು ಜೀವನಪೂರ್ತಿ ಆ ಕಾಯಿಲೆಯ ವಿರುದ್ಧ ರಕ್ಷಣೆ ನೀಡಬಲ್ಲವು. ಸ್ವಲ್ಪಮಟ್ಟಿನ ಕೊಳಕುತನ ಉಪಕಾರಿಯೆಂಬುದನ್ನು ಪ್ರತಿಪಾದಿಸುವಂತೆ ಇಂದಿಗೂ ಒರೊಟೊರಟಾಗಿ ಬೆಳೆಯುವ ಮಕ್ಕಳು ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಜುಪ್ಪೆನ್ನದೆ ಗಟ್ಟಿಮುಟ್ಟಾಗಿರುವುದನ್ನು ಕಾಣಬಹುದು.

ಅತಿಯಾದ ಶುಚಿತ್ವದ ಕಾರಣದಿಂದ ತಮ್ಮ ಚಿಕ್ಕ ವಯಸ್ಸಿನಲ್ಲಿ ಸೋಂಕುಗಳಿಂದ ವಿಮುಖರಾದ ಮಕ್ಕಳಲ್ಲಿ ಅಲರ್ಜಿ, ಆಸ್ತಮಾದಂಥ ಸಮಸ್ಯೆಗಳು ಹೆಚ್ಚು ಎಂದು ಪ್ರತಿಪಾದಿಸಲಾಗಿದೆ. ಇದನ್ನು ಕೆಲವರು 'ಶುಚಿತ್ವದ ಪ್ರತಿಪಾದನೆ' (Hygiene hypothesis) ಎಂತಲೂ ಇನ್ನೂ ಕೆಲವರು 'ಸೋಂಕು ಹತ್ತಿಕ್ಕುವ ಸಿದ್ಧಾಂತ' ( Infection suppression theory) ವೆಂತಲೂ ಕರೆಯುತ್ತಾರೆ. ಅತಿಯಾದ ಶುಚಿತ್ವವನ್ನು ಪಾಲಿಸುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಮಕ್ಕಳನ್ನು ಕಾಡುತ್ತಿದ್ದ ಆಸ್ತಮಾ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಮಕ್ಕಳಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಇದೂ ಒಂದು ಕಾರಣವೆಂದು ಹೇಳಲಾಗುತ್ತದೆ.

ಹಾಗೆಯೇ ನಮ್ಮ ದೇಶದಲ್ಲಿ ಕೊರೊನಾದಂಥ ಅಪಾಯಕಾರಿ ವೈರಾಣು ತನ್ನ ಕರಾಳ ಮುಖ ತೋರಿಸದಂತೆ ನಿಯಂತ್ರಿಸುವುದರಲ್ಲಿ ಇಲ್ಲಿನ ಜನರ ಸ್ವಲ್ಪಮಟ್ಟಿನ ಕೊಳಕುತನದ ಪಾತ್ರವೂ ಇದೆ ಎಂತಲೂ ಕೆಲವರು ಪ್ರತಿಪಾದಿಸುತ್ತಿದ್ದಾರೆ. ಹಾಗಂತ ಎಲ್ಲೆಂದರಲ್ಲಿ ಪಿಚಕ್ ಪಿಚಕ್ ಎಂದು ಉಗುಳುವುದು, ಮಲಮೂತ್ರ ವಿಸರ್ಜಿಸುವುದು, ಎದುರಿನವರ ಮುಖದ ಮೇಲೆಯೇ ಗುರಿಯಿಟ್ಟು ಕೆಮ್ಮುವುದು, ಸೀನುವುದು ಮುಂತಾದ ವರ್ತನೆಗಳು ಖಂಡಿತವಾಗಿಯೂ ಅಸಹ್ಯಕರ ಮತ್ತು ಅನಾರೋಗ್ಯಕರ.

ನಾನು ವಿದ್ಯಾರ್ಥಿಯಾಗಿದ್ದಾಗ 'ಕೊಳೆ, ಕಸ, ಗಲೀಜು, ಅಮೇಧ್ಯ ಎಂದರೆ ಬಲು ಇಷ್ಟ ಮಕ್ಕಳಿಗೆ' ಎಂಬ ಗೋಪಾಲಕೃಷ್ಣ ಅಡಿಗರ ಪದ್ಯವನ್ನು ಕಂಠಪಾಠ ಸ್ಪರ್ಧೆಯಲ್ಲಿ ವಾಚಿಸಿದ್ದ ನೆನಪು. ಆ ಸಾಲುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಹಾಗಾಗಿ ತಮ್ಮ ಮಕ್ಕಳು ಹಲವಾರು ಕಾಯಿಲೆಗಳ ವಿರುದ್ಧ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಪಡೆದು ಸದೃಢರಾಗಬೇಕೆಂದರೆ ಪೋಷಕರು ಅತಿಯಾದ ಶುಚಿತ್ವದ ವ್ಯಸನದಿಂದ ಹೊರಬಂದು ಅವರನ್ನು ಮಕ್ಕಳಂತೆಯೇ ಬೆಳೆಯಲು ಬಿಡುವುದು ಜಾಣತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT