‘ಮದುವೆಗಳು ಸ್ವರ್ಗದಲ್ಲಿ ನಿಗದಿಯಾಗುತ್ತವೆ’ ಎಂದು ನಾಟಕಕಾರ ಜಾನ್ ಲೈಲಿ ಹೇಳಿದ್ದು 15ನೇ ಶತಮಾನದಲ್ಲಿ. ಆತ ಕಾದಂಬರಿಕಾರನೂ ಲಂಡನ್ನಿನಲ್ಲಿ ಸಂಸತ್ ಸದಸ್ಯನೂ ಆಗಿದ್ದವನು. ಆದರೆ, ಆತ ಹೇಳಿದ ವಾಕ್ಯದ ಉತ್ತರಾರ್ಧ ಬಹಳ ಜನರಿಗೆ ನೆನಪಿಲ್ಲ. ‘ಮದುವೆಗಳು ಸ್ವರ್ಗದಲ್ಲಿ ನಿಗದಿಯಾಗುತ್ತವೆ, ಭೂಮಿಯಲ್ಲಿ ಪೂರ್ಣಗೊಳ್ಳುತ್ತವೆ’ ಎನ್ನುವುದು ಆತ ಹೇಳಿದ ಮಾತು. ಈಗ ಈ ಮಾತಿನ ಉತ್ತರಾರ್ಧ ಪೂರ್ತಿ ಕಣ್ಮರೆಯಾಗುವ ಪರಿಸ್ಥಿತಿ ಬಂದಿದೆ. ಅದ್ಧೂರಿ ಮದುವೆಯೇ ಬೇಡ ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಒಂದು ಕಾರಣ ಕೋವಿಡ್; ಇನ್ನೊಂದು ಕಾರಣ ತೀವ್ರವಾಗಿ ಬದಲಾಗುತ್ತಿರುವ ಜನರ ಜೀವನಶೈಲಿ.

ಕೊರೊನಾ ಕಾಲವು ಒಟ್ಟು ಮೂರು ಮದುವೆ ಸೀಸನ್‌ಗಳನ್ನು ನುಂಗಿ ನೀರು ಕುಡಿದಿದೆ. ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ತುಳಸಿ ವಿವಾಹದ ಬಳಿಕ ಮದುವೆಯ ಸೀಸನ್ ಶುರು. ನವೆಂಬರ್ ಹೊತ್ತಿಗೆ ಮದುವೆ ಹಾಲ್‌ಗಳೆಲ್ಲ ಮತ್ತೆ ಮೈತುಂಬಿ ಎದ್ದು ನಿಲ್ಲಬಹುದೇ? ಕಲ್ಯಾಣ ಮಂಟಪಗಳೆಲ್ಲ ಬೆಳಕಿನಿಂದ ಜಗಮಗಿಸಬಹುದೇ? ಬರುತ್ತಿರುವ ಸೀಸನ್ ಆದರೂ ‘ಮದುವೆ ಉದ್ಯಮ’ದ ಕೈ ಹಿಡಿಯಬಹುದೇ? ಹೂವು- ಹಣ್ಣು ಮಾರುವವರು, ಪ್ರಿಂಟಿಂಗ್ ಪ್ರೆಸ್‌ನವರು, ಫ್ಲೆಕ್ಸ್ ಮಾಡುವವರು, ಮದುವೆ ಕಾರ್ಡ್ ಮುದ್ರಿಸುವವರು, ವಾಲಗದವರು, ಬ್ಯಾಂಡ್‌ಸೆಟ್‌ನವರು, ಸೀರೆ ಅಂಗಡಿಯವರು, ಆಭರಣದ ಮಳಿಗೆಯವರು, ಕೇಟರಿಂಗ್‌ನವರು, ಬಾಡಿಗೆ ಕಾರಿನವರು, ಹೋಟೆಲ್‌ನವರು- ಎಲ್ಲರೂ ಕೇಳುತ್ತಿರುವ ಪ್ರಶ್ನೆಯಿದು.

ಭಾರತದಲ್ಲಿ ಮದುವೆ ಎಂದರೆ ಗಂಡು-ಹೆಣ್ಣು ಅಥವಾ ಎರಡು ಕುಟುಂಬಗಳ ನಡುವಣ ವೈಯಕ್ತಿಕ ವಿಷಯ ಮಾತ್ರವಲ್ಲ; ಅದು ಇಡೀ ಸಮಾಜದ ಆರ್ಥಿಕತೆಯನ್ನು ಎತ್ತಿ ಹಿಡಿಯುವ ಒಂದು ಸಂಭ್ರಮದ ವಿದ್ಯಮಾನ. ಅರಮನೆಗಳಲ್ಲಿ, ರೆಸಾರ್ಟ್‌ಗಳಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ ನಡೆಯುವ ಮದುವೆಗಳು ಮಾತ್ರವಲ್ಲ, ಹಳ್ಳಿ-ಪಟ್ಟಣ-ನಗರ- ಮಹಾನಗರಗಳಲ್ಲಿ ನಡೆಯುವ ಪ್ರತಿಯೊಂದು ಸಣ್ಣ ಪುಟ್ಟ ಮದುವೆಯೂ ಜನರ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಮದುವೆ ಎನ್ನುವುದೇ ನಮ್ಮಲ್ಲಿ ಒಂದು ಬಲುದೊಡ್ಡ ಉದ್ಯಮ. ಪ್ರತಿವರ್ಷವೂ ಕೋಟ್ಯಂತರ ರೂಪಾಯಿ ಕೈಬದಲಾಯಿಸುವ ವಹಿವಾಟು.

ಕೋವಿಡ್ ಮಹಾಮಾರಿ ಮೊದಲ ಅಲೆಯ ರೂಪದಲ್ಲಿ ಕೊಟ್ಟ ಹೊಡೆತಕ್ಕೆ ಲಾಕ್‌ಡೌನ್ ಬಿಟ್ಟು ಬೇರೆ ದಾರಿ ಕಾಣಲೇ ಇಲ್ಲ. ಜನರು ದಿನನಿತ್ಯದ ವ್ಯಾಪಾರ ವಹಿವಾಟುಗಳನ್ನು ನಡೆಸುವುದೇ ದುಸ್ತರ ಎನ್ನುವ ಪರಿಸ್ಥಿತಿ ಉಂಟಾಯಿತು. ಇನ್ನು ಮದುವೆ-ಮುಂಜಿಗಳನ್ನು ನಡೆಸುವುದಾದರೂ ಹೇಗೆ? ಮದುವೆಗಳನ್ನು ಮುಂದೂಡುವುದು ಅನಿವಾರ್ಯವಾಯಿತು. ಆರಂಭದಲ್ಲಿ ಜನರು ‘ಇದು ಒಂದಾರು ತಿಂಗಳು ಇರಬಹುದು’ ಎಂದುಕೊಂಡಿದ್ದು ಸುಳ್ಳಲ್ಲ. ಆದರೆ ಮೊದಲ ಅಲೆ ಸ್ವಲ್ಪ ಕುಗ್ಗಿ ಜನರೆಲ್ಲ ಖುಷಿಯಿಂದ ಹೊರಬಂದರು ಎನ್ನುವುದರೊಳಗೆ ಎರಡನೇ ಅಲೆ ಬಂದು ಸಾಲು ಸಾಲು ಜನ ಮಸಣದ ಹಾದಿ ಹಿಡಿದಾಗ, ಜನ ಮದುವೆಗಳನ್ನು ಮರೆತೇ ಹೋಗುವಂತಹ ಪರಿಸ್ಥಿತಿ ಬಂತು. ಲಾಕ್‌ಡೌನ್, ವ್ಯಾಕ್ಸಿನ್, ಮಾಸ್ಕ್ ಮುಂತಾಗಿ ಮುನ್ನೆಚ್ಚರಿಕೆಯ ಕ್ರಮಗಳು ದಿನನಿತ್ಯದ ಕರ್ಮಗಳಾದವು. ಮದುವೆಯ ಮೂರು ಸೀಸನ್‌ಗಳು ಕೋವಿಡ್ ಮಹಾಪೂರದಲ್ಲಿ ಕೊಚ್ಚಿ ಹೋದವು.

ಮೊದಲ ಹೊಡೆತ ಬಿದ್ದದ್ದು ಕಲ್ಯಾಣ ಮಂಟಪಗಳ ಮೇಲೆ. ‘ರಾಜ್ಯದಾದ್ಯಂತ ಸುಮಾರು 2,200 ಕಲ್ಯಾಣ ಮಂಟಪಗಳಿವೆ. ಒಂದು ಕಲ್ಯಾಣ ಮಂಟಪದಲ್ಲಿ ಏನಿಲ್ಲವೆಂದರೂ 150 ಜನರಿಗೆ ಕಾಯಂ ಉದ್ಯೋಗವಿತ್ತು. ಮೂರು ಸೀಸನ್‌ಗಳಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಯಿತು. ಕಲ್ಯಾಣ ಮಂಟಪಗಳು ಬಂದ್ ಆಗಿವೆ ಎಂದು ಕೆಲಸ ಬಿಟ್ಟು ಹೋದ ಅಡುಗೆಯವರು ಮರಳಿ ಬರಲೇ ಇಲ್ಲ. ಕೆಲವು ಕಲ್ಯಾಣ ಮಂಟಪಗಳನ್ನು ಮತ್ತೆ ತೆರೆಯುವುದೂ ಕಷ್ಟ’ ಎನ್ನುತ್ತಾರೆ ರಾಜ್ಯ ಕಲ್ಯಾಣ ಮಂಟಪಗಳ ಅಸೋಸಿಯೇಷನ್ನಿನ ಅಧ್ಯಕ್ಷ ರಮೇಶ್ ರೆಡ್ಡಿ.

ಹೋಟೆಲ್‌ಗಳವರದ್ದಂತೂ ಗೋಳು ಕೇಳುವವರಿಲ್ಲ. ‘ಕೋವಿಡ್ ಹೊಡೆತ ಅಂದರೆ ಅಂತಿಂತಹದ್ದಲ್ಲ ಮಾರಾಯ್ರೆ. ಸ್ಟಾರ್ ಹೋಟೆಲ್‌ಗಳ ಸಹಿತ ಎಲ್ಲೆಡೆ ಶೇಕಡ 90ರಷ್ಟು ವಹಿವಾಟು ಬಿದ್ದುಹೋಯಿತು. ಹೋಟೆಲ್‌ಗಳದ್ದು ವರ್ಷಕ್ಕೆ ಅಂದಾಜು ಸಾವಿರ ಕೋಟಿ ರೂಪಾಯಿ ವಹಿವಾಟು. ಬೆಂಗಳೂರು ಅರಮನೆಯಲ್ಲಿ ಮದುವೆಯಾಗುವವರದ್ದೇ ಒಂದು ಮದುವೆಗೆ ಸುಮಾರು 50 ಲಕ್ಷ ರೂಪಾಯಿ ವಹಿವಾಟು ಆಗುತ್ತಿತ್ತು. ಮಾರ್ಚಿ-ಮೇ ತಿಂಗಳಲ್ಲಿ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳಿಂದೆಲ್ಲ ಮದುವೆಗೆಂದು ಬರುವವರು! ಎರಡು ವರ್ಷಗಳಿಂದ ಅವರ ಪತ್ತೆಯೇ ಇಲ್ಲ’ ಎನ್ನುತ್ತಾರೆ ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್.

ಇದು ಬರೀ ಬೆಂಗಳೂರು ಒಂದರ ಕಥೆಯಲ್ಲ. ಕರಾವಳಿ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಎಲ್ಲೆಡೆಯೂ ಮದುವೆ ಉದ್ಯಮ ಮಕಾಡೆ ಮಲಗಿದೆ. ಏಪ್ರಿಲ್-ಮೇ ತಿಂಗಳಲ್ಲಿ ಹೂವು-ಹಣ್ಣು-ತರಕಾರಿಗಳೆಲ್ಲದರ ಬೆಲೆ ಕುಸಿದು ಹುಲುಸಾಗಿ ಬೆಳೆದ ರೈತರು ತಲೆ ಮೇಲೆ ಕೈಹೊತ್ತರು. ಹೊಲಗಳಲ್ಲೇ ಬೆಳೆಯನ್ನು ನಾಶ ಮಾಡಿದವರು ಸಾವಿರಾರು ಜನ. ಮೊದಲ ಅಲೆಯ ಹೊಡೆತಕ್ಕೆ ಸರ್ಕಾರ ಪುಷ್ಪೋದ್ಯಮಕ್ಕೆ ಹೆಕ್ಟೇರ್‌ಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿತ್ತು. ಎರಡನೇ ಅಲೆಯಲ್ಲಿ ಈ ಪರಿಹಾರವೂ ಹತ್ತು ಸಾವಿರ ರೂಪಾಯಿಗೆ ಇಳಿಯಿತು.

ಮದುವೆಯೆಂದರೆ ನೂರಾರು ಉದ್ಯೋಗಗಳ ಸೃಷ್ಟಿ. ‘ವಿಜಯಪುರ ಸಿಟಿಯಲ್ಲೇ ಸುಮಾರು 50 ಜನ ಫೋಟೊಗ್ರಾಫರ್‌ಗಳಿದ್ದರು ಸರಾ. ಇದು ಬಾರ್ಡರ್ ಆದ್ದರಿಂದ ದೂರದ ಸೊಲ್ಲಾಪುರ, ಜತ್ತ, ಕೊಲ್ಹಾಪುರ ಅಂತೆಲ್ಲ ಮದುವೆ ಫೋಟೊ ತೆಗೆಯಾಕ್ ಹೋಕ್ತಿದ್ವಿ. ಬಹಳಷ್ಟು ಫೋಟೊಗ್ರಾಫರ‍್ಸ್ ಈಗ ವಾಷೌಟ್ ಆಗ್ಯಾರೆ’ ಎನ್ನುವುದು ಛಾಯಾಗ್ರಾಹಕ ಸಂಜು ಅಕ್ಕಿ ಅಳಲು.

ಮದುವೆ ದಲ್ಲಾಳಿಗಳದ್ದೇ ಒಂದು ದೊಡ್ಡ ಉದ್ಯೋಗವರ್ಗವಿದೆ. ಅವರೂ ಈಗ ಕಣ್ಮರೆಯಾಗಿದ್ದಾರೆ. ಆನ್‌ಲೈನ್‌ನಲ್ಲಿ ವಧೂವರರ ಹುಡುಕಾಟ ಹೆಚ್ಚಾಗಿದೆ. ಕೋವಿಡ್ ಬರುವ ಮುಂಚೆಯೂ ಆನ್‌ಲೈನ್ ಮೂಲಕ ವಧೂವರರ ಫಿಕ್ಸಿಂಗ್ ನಡೆದಿತ್ತು. ಆದರೆ ಕೋವಿಡ್ ಬಳಿಕ ಈ ವಹಿವಾಟು ಒಮ್ಮಿಂದೊಮ್ಮೆಲೆ ಏರಿಕೆ ಕಂಡಿದೆ. ಜಗತ್ತಿನಾದ್ಯಂತ ಗ್ರಾಹಕ ಸಂಪರ್ಕ ಹೊಂದಿರುವ ಕನ್ನಡ ಮ್ಯಾಟ್ರಿಮೊನಿ ಡಾಟ್ ಕಾಮ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅರ್ಜುನ್ ಭಾಟಿಯಾ ಅವರ ಪ್ರಕಾರ, ವಧೂವರರ ನೋಂದಣಿ ಈ ವರ್ಷ ಶೇಕಡ 30ರಷ್ಟು ಏರಿಕೆ ಕಂಡಿದೆ.

ಸರಿಸುಮಾರು ಎರಡು ವರ್ಷ! ಮದುವೆಯ ಕುರಿತು ಜನರ ಆಲೋಚನಾ ಕ್ರಮವೇ ಬದಲಾಗಿದೆ. ಊರು ತುಂಬಾ ಜನ ಸೇರಿಸಿ ಮದುವೆಯಾಗುವುದು ಶ್ರೇಯಸ್ಕರವಲ್ಲ ಎನ್ನುವುದು ಎಲ್ಲರಿಗೂ ಮನದಟ್ಟಾಗಿದೆ. ಇದುವರೆಗೆ ಕೆಲವೇ ಕುಟುಂಬಗಳಲ್ಲಿ ಆದರ್ಶವಾಗಿ ನಡೆಯಲ್ಪಡುತ್ತಿದ್ದ ‘ಸರಳ ಮದುವೆ’ಗಳು, ಈಗ ಬಹುತೇಕರಿಗೆ ಅನಿವಾರ್ಯವೇ ಆಗಿವೆ. ಸರ್ಕಾರಿ ಆದೇಶದಂತೆಯೇ 50 ಜನ ಅಥವಾ ನೂರು ಜನ ಸೇರಿ ಮದುವೆ ‘ಮುಗಿಸುವುದು’! 50 ಜನರಿಗೆ ಕಲ್ಯಾಣ ಮಂಟಪಗಳೇಕೆ ಬೇಕು? ಮನೆಯಲ್ಲೇ ಮಾಡಿದರಾಯ್ತು ಎನ್ನುವುದು ಬಹುತೇಕರ ಅಂಬೋಣ. ಭೂರಿ ಭೋಜನಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮನೋಭಾವವೂ ದೂರವಾಯಿತು. ಏನಿದ್ದರೂ ಚಿಕ್ಕ ಚೊಕ್ಕ ಊಟ. ಮದುವೆಗೆ ಕರೆಯಲು ಮೊಬೈಲ್ ಇದೆ, ಇನ್ವಿಟೇಷನ್ನು ವಾಟ್ಸ್‌ಆ್ಯಪ್‌ನಲ್ಲಿ ಹಾಕಿದ್ದೇವೆ ನೋಡಿ! ಕೆಲವು ವಾಟ್ಸ್‌ಆ್ಯಪ್ ಆಹ್ವಾನ ಪತ್ರಿಕೆಗಳಂತೂ ಬಹಳ ಸ್ಪಷ್ಟವಾಗಿಯೇ ಸಾರಿದವು- ‘ಕೋವಿಡ್ ಪ್ರಯುಕ್ತ ಸರಳವಾಗಿ ಮದುವೆ ಇಟ್ಟುಕೊಂಡಿದ್ದೇವೆ. ವಧೂವರರಿಗೆ ನಿಮ್ಮ ಆಶೀರ್ವಾದ ಅಲ್ಲಿಂದಲೇ ಬೇಕು’. ಸರಿ, ವಾಟ್ಸ್ ಆ್ಯಪ್‌ನಲ್ಲೇ ಆಶೀರ್ವಾದ!

ಈ ಬದಲಾವಣೆಗಳು ಎಲ್ಲ ಧರ್ಮ, ಜಾತಿಗಳಲ್ಲೂ ನಡೆದಿವೆ. ವಿಜಯಪುರದ ಹಿರಿಯ ಪತ್ರಕರ್ತ ರಫಿ ಭಂಡಾರಿ ಇದನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ‘ಕಳೆದ ವರ್ಷ ಕೋವಿಡ್‌ನ ಮೊದಲ ಹೊಡೆತದಲ್ಲಿ ಸಾವಿರಾರು ಮುಸ್ಲಿಮರು ಮದುವೆಗಳನ್ನು ಮುಂದೂಡಿದ್ದಾರೆ. ಆದರೆ ಎರಡನೆಯ ಅಲೆಯ ಬಳಿಕ ನಿರ್ಬಂಧದ ಮಧ್ಯೆಯೂ ಸರಳ ಮದುವೆಗಳು ಹೆಚ್ಚಾಗಿವೆ. ಮಸೀದಿಯಲ್ಲಿ 20-30 ಜನರು ಸೇರಿ ನಿಖಾಹ್ ಮಾಡುವುದು, ಮನೆಯ ಹೊರಗೆ ಸಣ್ಣದೊಂದು ಶಾಮಿಯಾನ ಹಾಕಿ ಊಟ ಮುಗಿಸುವುದು ಈಗ ಮಾಮೂಲಾಗಿದೆ’ ಎನ್ನುತ್ತಾರೆ ಅವರು.

ದಾವಣಗೆರೆಯ ಎಂ.ಟಿ.ಸುಭಾಷ್‌ಚಂದ್ರ -ವಸಂತಾ ದಂಪತಿ ತಮ್ಮ ಮಗನ ನಿಶ್ಚಿತಾರ್ಥಕ್ಕೂ ಹೋಗಲಾಗಲಿಲ್ಲ. ಏಕೆಂದರೆ ಮಗ ಋತ್ವಿಕ್ ಚಂದ್ರ ಇರುವುದು ದೂರದ ಅಮೆರಿಕದ ಡಲ್ಲಾಸ್‌ನಲ್ಲಿ. ಎಂಎಸ್ ಮುಗಿಸಿ ಅಲ್ಲೇ ಕೆಲಸ ಹಿಡಿದಿದ್ದನಾತ. ಹುಡುಗಿ ಮತ್ತು ಆಕೆಯ ಕುಟುಂಬ ಅಲ್ಲೇ ಇತ್ತು. ‘ಬೇರೆ ದಾರಿಯಿಲ್ಲ ಸಾರ್. ಅವರು ಅಲ್ಲಿ ನಿಶ್ಚಿತಾರ್ಥದ ಸಮಾರಂಭ ಮಾಡಿದರು. ನಾವು ಇಲ್ಲಿ ಕುಳಿತುಕೊಂಡು ಟೀವಿಯಲ್ಲಿ ಸಿನಿಮಾ ನೋಡಿದಂತೆ, ಲೈವ್ ವಿಡಿಯೊ ನೋಡಿದೆವು. ಇಲ್ಲಿಂದಲೇ ಆಶೀರ್ವಾದ ಮಾಡಿದೆವು. ಈಗ ನವೆಂಬರ್ 21ಕ್ಕೆ ಮದುವೆ ನಿಶ್ಚಯವಾಗಿದೆ. ಕೊರೊನಾ ನಿಯಮಗಳು ಬಹುತೇಕ ಸಡಿಲವಾಗಿಲ್ಲವಾದ್ದರಿಂದ ವೀಸಾ ಸಿಗುತ್ತಿಲ್ಲ. ಅಮೆರಿಕನ್ ರಾಯಭಾರ ಕಚೇರಿ ಇನ್ನೂ ಓಪನ್ ಆಗಿಲ್ಲ. ಇಲ್ಲಿಂದಲೇ ಟೀವಿ ಮುಂದೆ ಕುಳಿತು ಮದುವೆಗೂ ಆಶೀರ್ವಾದ ಮಾಡಬೇಕಾಗಿ ಬಂದಿದೆ’ ಎನ್ನುತ್ತಾರೆ ಸುಭಾಷ್‌ಚಂದ್ರ.

ಮಂಗಳೂರಿನಲ್ಲಿ ನಡೆದ ಇನ್ನೊಂದು ಮುಸ್ಲಿಂ ಮದುವೆ ಇನ್ನೂ ಕುತೂಹಲಕರ. ವಿಟ್ಲದ ಹುಡುಗ. ಉದ್ಯೋಗದಲ್ಲಿರುವುದು ಸೌದಿ ಅರೇಬಿಯಾದಲ್ಲಿ. ಹುಡುಗಿ ಮಂಗಳೂರಿನವಳು. ಎರಡು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಆಗಿತ್ತು. ಕೊರೊನಾದಿಂದಾಗಿ ಮದುವೆ ಮುಂದಕ್ಕೆ ಹೋಗುತ್ತಲೇ ಇತ್ತು. ಹುಡುಗನಿಗೆ ಇಲ್ಲಿಗೆ ಬರಲು ರಜೆ ಸಿಗಲಿಲ್ಲ. ತಿಂಗಳ ಹಿಂದೆ ಎರಡೂ ಕಡೆಯವರು ಮದುವೆ ಮಾಡಿಯೇ ಬಿಡೋಣ ಎಂದು ನಿರ್ಧರಿಸಿದರು. ಹುಡುಗಿಯ ಮನೆಯವರು ವಧುವಿನ ಸಮೇತ ವಿಟ್ಲದ ವರನ ಮನೆಗೆ ಹೋದರು. ಸೌದಿ ಅರೇಬಿಯಾದಲ್ಲಿ ಗೆಳೆಯರ ಜೊತೆಗೆ ಕುಳಿತ ವರ; ಇಲ್ಲಿ ವಿಟ್ಲದ ಮನೆಯಲ್ಲಿ ಕುಳಿತ ವಧುವಿನ ತಂದೆ. ಜೊತೆಗಿದ್ದ ಧರ್ಮಗುರು ವಿಡಿಯೊ ಕಾಲ್‌ನಲ್ಲಿ ನಿಖಾಹ್ ಮಾಡಿಸಿದರು. ಅಲ್ಲಿಯವರು ಅಲ್ಲೇ ಊಟ ಮಾಡಿದರು. ಇಲ್ಲಿಯವರು ಇಲ್ಲಿ! ಸರಳ ಮದುವೆ ಸಂಭ್ರಮದಿಂದ ನಡೆಯಿತು. ಈಗ ವಧು ಗಂಡನನ್ನು ಕೂಡಿಕೊಳ್ಳಲು ಸೌದಿಗೆ ಹೊರಟು ನಿಂತಿದ್ದಾಳೆ.

ಆನ್‌ಲೈನ್‌ನಲ್ಲಿ ವಧೂವರರ ಹುಡುಕಾಟ ನಡೆಸುತ್ತಿರುವ ಕನ್ನಡಿಗರಲ್ಲಿ ಇತ್ತೀಚೆಗೆ ಅಂತರ್ ಜಾತಿಯ ಮದುವೆಗಳೂ ಹೆಚ್ಚಾಗುತ್ತಿವೆ! ‘ಅಕ್ಷರಸ್ಥರು, ಅನಕ್ಷರಸ್ಥರು, ಹಳ್ಳಿಯವರು, ನಗರದವರು ಎನ್ನದೆ ಎಲ್ಲರೂ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ನಮ್ಮಲ್ಲಿ ನೋಂದಣಿಯಾದಅಂಕಿ ಅಂಶಗಳ ಪ್ರಕಾರ, ಶೇ 20ರಷ್ಟು ಹೆಣ್ಣಿನ ಕಡೆಯವರು ಮತ್ತು ಶೇ25ರಷ್ಟು ಗಂಡಿನ ಕಡೆಯವರು ತಮ್ಮ ಜಾತಿಯಿಂದ ಹೊರತಾಗಿ ಸಂಬಂಧಗಳನ್ನು ಹುಡುಕುತ್ತಿದ್ದಾರೆ’ ಎನ್ನುತ್ತಾರೆ ಕನ್ನಡ ಮ್ಯಾಟ್ರಿಮೊನಿ ಡಾಟ್‌ಕಾಮ್‌ನ ಭಾಟಿಯಾ.

ಕೆಲವು ಸಮುದಾಯಗಳಲ್ಲಿ ಹಿಂದೆ ಬ್ರಾಸ್ ಬ್ಯಾಂಡ್ ಸೆಟ್ ಇಲ್ಲದೆ ಮದುವೆಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿತ್ತು. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಮುಂತಾದೆಡೆ ಬ್ರಾಸ್ ಬ್ಯಾಂಡ್ ಸೆಟ್‌ನವರೂ ಕೆಲಸವಿಲ್ಲದೆ ಬೇರೆ ಉದ್ಯೋಗಗಳನ್ನು ಹುಡುಕಿಕೊಂಡಿದ್ದಾರೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಬಳಿ ಇದ್ದ ‘ನ್ಯೂ ಭಾರತ್ ಬ್ರಾಸ್ ಬ್ಯಾಂಡ್’ ಒಂದು ಕಾಲದಲ್ಲಿ ಪ್ಯಾರಿಸ್‌ನಿಂದ ಕ್ಲಾರಿಯೊನೆಟ್, ಟ್ರಂಫೆಟ್, ಯುಫೀನಿಯಾಂ, ಸ್ಯಾಕ್ಸೊಫೋನ್‌ಗಳನ್ನು ತರಿಸಿಕೊಂಡು ಸುದ್ದಿ ಮಾಡಿತ್ತು. ಮೊನ್ನೆ ನ್ಯೂ ಭಾರತ್ ಮಳಿಗೆಯನ್ನುಹುಡುಕಿಕೊಂಡು ಹೋದರೆ ಅದೂ ಅಲ್ಲಿಂದ ಕಣ್ಮರೆಯಾಗಿದೆ. ‘ಅವರು ಇಲ್ಲಿದ್ದ ಅಂಗಡಿ ಬಂದ್ ಮಾಡ್ಕೊಂಡು ಹೋಗಿ ವರ್ಷಗಳೇಆದವು ಸಾರ್’ ಎಂದು ಪಕ್ಕದಲ್ಲೇ ಅಂಗಿ-ಚಡ್ಡಿ ಮಾರುತ್ತಿದ್ದ ಪುಟ್ಟ ಮಳಿಗೆಯವನೊಬ್ಬ ಹೇಳಿದ!

ಮತ್ತೆ ಮದುವೆ ಉದ್ಯಮ ಮೊದಲಿನಂತೆ ಮೇಲೇಳಬಹುದೆ? ‘ಈಗ ಹೋಟೆಲ್ ಬ್ಯಾಂಕ್ವೆಟ್ ಹಾಲ್‌ಗಳಲ್ಲಿ ಮತ್ತು ಕಲ್ಯಾಣ ಮಂಟಪಗಳಲ್ಲಿನವೆಂಬರ್ ತಿಂಗಳಿಗೆ ಸ್ವಲ್ಪ ಬುಕಿಂಗ್ ಆಗಿದೆ. ಡಿಸೆಂಬರ್ 15ರಿಂದ ಜನವರಿ 15ರವರೆಗೆ ಒಳ್ಳೆಯ ದಿನಗಳಿಲ್ಲವಂತೆ. ಫೆಬ್ರುವರಿಗೂಬುಕಿಂಗ್ ನಡೆದಿದೆ. ಆದರೆ ಮೊದಲಿನಷ್ಟು ರಶ್ ಇಲ್ಲ’ ಎನ್ನುತ್ತಾರೆ ಪಿ.ಸಿ.ರಾವ್ ಮತ್ತು ರಮೇಶ್ ರೆಡ್ಡಿ. ಕೋವಿಡ್ ಭಯ ಇನ್ನೂ ಜನರನ್ನುಬಿಟ್ಟುಹೋಗಿಲ್ಲ ಎನ್ನುವುದು ಸ್ಪಷ್ಟ. ಒಂದಂತೂ ಒಳ್ಳೆಯದೇ ಆಗಿದೆ. ‘ಮದುವೆ ಎಂದರೆ ಅಂತಸ್ತು, ವೈಭವ ಎಂದು ನಂಬಿಕೊಂಡಿದ್ದ ಶ್ರೀಮಂತ ವರ್ಗ ಸರಳ ಮದುವೆಗೆ ಒಲಿದಿದೆ. ಶ್ರೀಮಂತರನ್ನು ನೋಡಿಕೊಂಡು ಸಾಲ ಶೂಲದಲ್ಲಿ ಮದುವೆ ಡೌಲು ಮಾಡುತ್ತಿದ್ದ ಮಧ್ಯಮ ವರ್ಗಕ್ಕೂ ಈಗ ‘ಸರಳಮದುವೆಯೆಂದರೆ ಮರ್ಯಾದೆಗೆ ಕುಂದಲ್ಲ’ ಎನ್ನುವುದು ಅರಿವಾಗಿದೆ.

ಬಡವರು ಕೂಡಾ ಮದುವೆ ವಿರಯದಲ್ಲಿ ‘ದೊಡ್ಡವರೂ ನಮ್ಮ ಲೆವೆಲ್ಲಿಗೆ ಬಂದಿದ್ದಾರೆ’ ಎಂದು ಒಳಗೊಳಗೇ ಖುಷಿಪಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.